ಯಶೋ ಬೆಳಗು
yashomathy@gmail.com
ಸಂತೋಷ ಅನ್ನುವುದು ಒಂದು ಸ್ಥಿತಿ!
ಅದನ್ನು ಅನುಭವಿಸುವುದನ್ನು ರೂಢಿಸಿಕೊಳ್ಳದಿದ್ದರೆ ಬದುಕು ಬೋರೆದ್ದು ಹೋಗುತ್ತದೆ. ಅದು ಮಗುವಿನ ಮುಗ್ಧ ನಗೆಯಿರ ಬಹುದು, ಆಗ ತಾನೇ ಅರಳಿದ ಹೂವಿನ ಚೆಲುವಿರಬಹುದು, ಬಿಸಿಲಿನ ಝಳಕ್ಕೆ ತತ್ತರಿಸಿ ಹೋದ ವಸುಂಧರೆಗೆ ಬಿದ್ದ ಮೊದಲ ಮಳೆಹನಿಯಿರಬಹುದು, ಕೋಗಿಲೆಯ ಕುಹೂ, ಹುಲಿಯ ಘರ್ಜನೆ, ಮಂಗಗಳ ಕೀಟಲೆ, ದುಂಬಿಯ ಝೇಂಕಾರ, ಮುಂಜಾನೆಯ ಶುಭ್ರ ತಂಗಾಳಿ, ಮೂಡಣದ ಬಾಲಸೂರ್ಯ, ಹರಿವ ನದಿ, ಭೋರ್ಗರೆಯುವ ಸಮುದ್ರ, ಬಿಡಿಸುವ ರಂಗೋಲಿ, ಮಾಡುವ ಅಡುಗೆ, ಮಾಡಿಕೊಳ್ಳುವ ಅಲಂಕಾರ, ಆಡುವ ಆಟ, ಮಾಡುವ ಕೆಲಸ, ತಿಳಿಯುವ ಹಂಬಲ, ನುಡಿ ಯುವ ಮಾತು…. ಪ್ರತಿ ಯೊಂದರಲ್ಲೂ ಸಂತೋಷವಿದೆ.
ಅದನ್ನು ಕಂಡುಕೊಳ್ಳುವುದು, ಬಿಡುವುದು ನಮ್ಮ ಕೈಯ ಇದೆ. ಆದರೆ ಇದಕ್ಕೆ ತದ್ವರುದ್ಧ ವಾಗಿ ಬಹಳ ಜನ ನೋವನ್ನು enjoy ಮಾಡುವುದನ್ನು ಗಮನಿಸಿದ್ದೇನೆ. ಅವರಿಗೆ ಚಿನ್ನದ ಆಭರಣ ಮಾಡಿಸಿಕೊಡಿ, ರೇಷಿಮೆ ಸೀರೆ ತೆಗೆದು ಕೊಡಿ, ಅವರು ಸಂತೋಷದಿಂದಿರಲು ನೀವೇನೇ ಪರಿಪಾಟಲು ಪಟ್ಟರೂ ಅವರನ್ನು ತಮ್ಮ ನೋವಿನಿಂದ ಹೊರಗೆಳೆದು ತರು ವುದು ಸಾಧ್ಯವೇ ಇಲ್ಲ.
ತಮ್ಮ ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು, ನೋವಿನ ಆಘಾತಗಳು, ಯೌವನದಲ್ಲಿ ಉಳಿದು ಹೋದ ತೀರದ ಬಯಕೆಗಳು, ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ದುಡಿದೂ ದುಡಿದೂ ಹೈರಾಣಾಗಿ ಹೋದ ಕತೆಗಳನ್ನು ಮರೆಯಲು ಬಿಡದಂತೆ ಪ್ರತಿನಿತ್ಯ ಮೆಲುಕು ಹಾಕುತ್ತಾ, ಅವರು ತಮ್ಮನ್ನಷ್ಟೇ ಅಲ್ಲದೆ ತಮ್ಮ ಸುತ್ತಲಿನ ಪರಿಸರವನ್ನೂ ನೋವಿನ ಕೂಪ ಗಳನ್ನಾಗಿ ಮಾರ್ಪಡಿಸಿ ಬಿಟ್ಟಿರುತ್ತಾರೆ.
ಅವರೆದುರಿಗೆ ನೀವು ಜೋರಾಗಿ ನಗುವಂತಿಲ್ಲ, ಮಾತನಾಡುವಂತಿಲ್ಲ, ಸಂತೋಷ ವ್ಯಕ್ತಪಡಿಸುವಂತಿಲ್ಲ. ಅವರಿರುವಲ್ಲಿ ಒಂದು ರೀತಿಯ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿ ಹೋಗಿರುತ್ತದೆ. ಅವರು ಸ್ವಲ್ಪ ಪ್ರಯತ್ನ ಪಟ್ಟು ತಮ್ಮ ಆಲೋಚನಾ ಧಾಟಿಯನ್ನು ಬದಲಿಸಿಕೊಂಡರೂ ಸಾಕು, ಅವರೊಳಗಿರುವ ನೋವೆಲ್ಲ ಬದಿಗೆ ಸರಿಸಿ ನಲಿವ ಮನ ರೂಢಿಸಿಕೊಳ್ಳಬಹುದು. ಆದರೆ ಅವರಿಂದ ಅದು ಸಾಧ್ಯವಾಗುವುದಿಲ್ಲ.
ಇದೆಲ್ಲದರ ನಡುವೆ ನಾವೆಲ್ಲರೂ ಒಂದು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಕಷ್ಟಗಳನ್ನಾಗಲೀ, ನೋವು ಗಳನ್ನಾಗಲೀ ಅನುಭವಿಸುತ್ತಿರುವವರು ಕೇವಲ ನಾವು ಮಾತ್ರ ಅಲ್ಲ. ಹುಟ್ಟಿದ ಪ್ರತಿಯೊಂದು ಜೀವಿಯದ್ದೂ ಹೋರಾಟದ ಬದುಕೇ. ಆದರೆ ಅದು ನಮ್ಮ ಅರಿವಿಗೆ ಬರುವುದಿಲ್ಲ ಅಷ್ಟೆ. ಅದನ್ನೇ ಬೃಹದಾಕಾರವಾಗಿ ಬೆಳೆಸಿಕೊಂಡು ಅದನ್ನೇ ನೋಡುತ್ತಾ, ಕೇಳುತ್ತಾ, ಅನುಭವಿಸುತ್ತಾ ಅದರ ಕಳೆದುಹೋಗುವುದು ಮನಸ್ಸಿನ ಬಲಹೀನತೆಯಷ್ಟೆ. ಇತ್ತೀಚೆಗೊಮ್ಮೆ ನನ್ನ ಪರಿಚಯ ದವರೊಬ್ಬರು ಅನೇಕ ವರ್ಷಗಳ ನಂತರ ಫೋನು ಮಾಡಿದ್ದರು.
ಎಲ್ಲ ಕುಶಲೋಪಚಾರದ ನಡುವೆ ಆಕೆ ಹೇಳಿದ ವಿಷಯ ಕೇಳಿ ಒಂದು ಕ್ಷಣ ಮನಸ್ಸು ಹಿಂಡಿದಂತಾಯಿತು. ಎಲ್ಲ ರೀತಿಯ ಹರಕೆ, ಜಪ, ತಪ, ಹೋಮಗಳ ಮೂಲಕ ನಿರಂತರ ಪ್ರಾರ್ಥನೆಯ ಫಲವಾಗಿ ಮದುವೆಯಾಗಿ ಹತ್ತು-ಹನ್ನೆರಡು ವರುಷಗಳಾದ ಬಳಿಕ ಹುಟ್ಟಿದ ಮಗುವಿಗೆ ಗುದದ್ವಾರವೇ ಇಲ್ಲ. ನುರಿತ ವೈದ್ಯರ ತಂಡವೊಂದು ತಾತ್ಕಾಲಿಕವಾಗಿ ಕಿಬ್ಬೊಟ್ಟೆಯ ಬಳಿ ರಂಧ್ರ
ಮಾಡಿ ಅಲ್ಲಿಂದ ವಿಸರ್ಜನೆಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಸಾಕಷ್ಟು ಪರೀಕ್ಷೆಗಳ ನಂತರ ಈಗ ಪರಿಹಾರದ ಮಾರ್ಗವೊಂದು ಕಂಡಿದೆ. ಅದರ ಸರ್ಜರಿಗೆ ಲಕ್ಷಾಂತರ ರುಪಾಯಿಗಳ ಅಗತ್ಯ ವಿದೆ. ಅಷ್ಟೆಲ್ಲ ಖರ್ಚು ಮಾಡಿದರೂ ೧೦೦ರಷ್ಟು ಗೆಲುವು ದೊರೆಯುವ ಸಂಭವವಿಲ್ಲ. ಆದರೂ ಮಗುವಿನ ಭವಿಷ್ಯದ ದೃಷ್ಟಿ ಯಿಂದ ಅಷ್ಟರ ಮಟ್ಟಿಗಿನ ರಿಸ್ಕು ತೆಗೆದುಕೊಳ್ಳಲು ಸಿದ್ಧರಾಗಿ ಹುಟ್ಟಿಸಿದ ತಂದೆ- ತಾಯಿಯರು ಸಾಧ್ಯವಿರುವ ಕಡೆಯೆಲ್ಲ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆಪರೇಷನ್ನಿಗೆ ಅಗತ್ಯವಾಗಿ ಬೇಕಾಗಿರುವ ಹಣದ ವ್ಯವಸ್ಥೆಯಾಗಿ ಮಗುವಿಗೊಂದು
ಶಾಶ್ವತ ಪರಿಹಾರ ಸಿಕ್ಕು ಬದುಕು ಸಹಜವಾಗಲಿ.
ಬದುಕು ನಿತ್ಯ ಇಂಥ ಸಾವಿರಾರು ಸವಾಲುಗಳನ್ನು ತಂದು ಗುಡ್ಡೆ ಹಾಕುತ್ತಲೇ ಇರುತ್ತದೆ. ಕೆಲವರು ಬುದ್ಧಿವಂತಿಕೆಯಿಂದ ಅದೆಲ್ಲವನ್ನೂ ಧೂಳಿನಂತೆ ಕೊಡವಿ ಎದ್ದು ನಿಲ್ಲುತ್ತಾರೆ. ಮತ್ತೆ ಕೆಲವರು ಅದರ ಸಂಪೂರ್ಣವಾಗಿ ಕಳೆದುಹೋಗುತ್ತಾರೆ. ಆಯ್ಕೆ ನಮ್ಮ ಕೈಯ ಇದೆ. ಬದುಕನ್ನು ಇಂದಿಗಿಂತ ತುಂಬ ಚೆಂದಗೆ ಬದುಕಲು ನಿರ್ಧರಿಸಬೇಕಾದವರು ನಾವೇ… ಯಾಕಂದ್ರೆ ಈ
ಬದುಕು ನಮ್ಮದು! ನಿಮ್ಮ ಸುತ್ತಮುತ್ತಲಿನ ನಿಮ್ಮ ಕೈಗೆಟಕುವ ನಿಮಗಿಷ್ಟವಾದ ಹವ್ಯಾಸವನ್ನು ರೂಢಿಸಿಕೊಳ್ಳಿ. ಓದುವುದೋ, ಬರೆಯುವುದೋ, ಭಾಷಣವೋ, ಚಿತ್ರಕಲೆಯೋ, ರಂಗ ಕಲೆಯೋ, ಸಿನೆಮಾನೋ, ಸಾಹಿತ್ಯವೋ, ಸಂಗೀತವೋ, ನೃತ್ಯವೋ, ಅಡುಗೆಯೋ, ಫ್ಯಾಷನ್ನೋ, ಸಮಾಜಸೇವೆಯೋ…. ಯಾವುದಾದರೂ ಒಂದನ್ನು ನಿಮ್ಮ ವೃತ್ತಿ ಬದುಕಿನಿಂದಾಚೆಗೊಂದು ನಿರಂತರವಾದ ಕಲಿಕೆಯನ್ನು ರೂಢಿಯಲ್ಲಿಟ್ಟುಕೊಳ್ಳಿ. ಹೊಸ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಿ.
ನಿಮಗೇ ತಿಳಿಯದಂತೆ ನೀವು ಎಲ್ಲರಿಗಿಂತ ವಿಶೇಷವಾಗಿ ಕಾಣಲಾರಂಭಿಸುತ್ತೀರಿ. ರವೀಂದ್ರನಾಥ ಟ್ಯಾಗೋರರು ಬರೆದ ‘ಗೀತಾಂಜಲಿ’ ಯನ್ನು ಅದರ ಮೂಲದ ಓದಬೇಕೆಂಬ ಮಹದಾಸೆಯಿಂದ ಪಾ.ವೆಂ. ಆಚಾರ್ಯರು ಬಂಗಾಳಿ ಭಾಷೆಯನ್ನು ಕಲಿತರಂತೆ. ಕಲಿಯಲೇ ಬೇಕು ಅಂತ ತೀರ್ಮಾನಿಸಿದರೆ, ಕಲಿಯಲಿಕ್ಕೆ ಸಾವಿರ ವಿದ್ಯೆಗಳಿವೆ. ನಂಗೆ ಹೇಳಿಕೊಡೋರೇ ಇಲ್ಲ, ಅದನ್ನೆಲ್ಲ ಕಲಿಯೋಷ್ಟು ದುಡ್ಡಿಲ್ಲ, ಮನೇಲಿ ಎಂಕರೇಜ್ಮೆಂಟಿಲ್ಲ ಅನ್ನೋ ಕುಂಟು ನೆಪಗಳನ್ನೆಲ್ಲ ಮಡಚಿ ಎತ್ತಿಟ್ಟುಬಿಡಬೇಕು.
ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಎಂದೋ ಕಲಿತ ಫೋಟೋಗ್ರಫಿ ಇಂದು ಸಾಕಷ್ಟು ಉಪಯೋಗಕ್ಕೆ ಬರುತ್ತಿದೆ. ಒಂದು ಫೋಟೋ ಚೆನ್ನಾಗಿ ಕಾಣಬೇಕೆಂದರೆ ಅದರ -ಮಿಂಗ್ ಹೇಗಿರಬೇಕೆಂಬ ಸಾಮಾನ್ಯ ಅರಿವಿದೆ. ಹೀಗಾಗಿ ಈಗ ಯಾವುದೇ ಸಭೆ ಸಮಾರಂಭಗಳಿಗೆ ಹೋದರೂ ಕೈಯಲ್ಲಿರುವ ಪುಟ್ಟ ಮೊಬೈಲಿನಿಂದಲೇ ಚೆಂದದ ಫೋಟೋಗಳ ಶೇಖರಣೆಯಾಗುತ್ತಿದೆ.
ಸಮಯ ಸಿಕ್ಕಾಗ ಅವೆಲ್ಲವನ್ನೂ ನೋಡುವುದೇ ಒಂದು ಖುಷಿ. ಹಾಗೆಯೇ ಕಚೇರಿಯಲ್ಲಿ ಅಕ್ಷರ ವಿನ್ಯಾಸ, ಪುಟವಿನ್ಯಾಸ ಮಾಡುತ್ತಲೇ ಅವುಗಳೊಳಗಿರುವ ವಿಷಯದ ಸತ್ವ-ಸ್ವಾರಸ್ಯವನ್ನು ಹಾಗೂ ಇರಲೇಬೇಕಾದ ಅಂಶಗಳ್ಯಾವುವು ಎಂಬುದನ್ನು
ಶ್ರದ್ಧೆಯಿಂದ ಗಮನಿಸುತ್ತಿದ್ದುದೇ ಇಂದು ಅಂಕಣಕಾರಳಾಗಿ ಇಷ್ಟು ವಾರಗಳ ಕಾಲ ಮುಂದುವರಿಯುವ ಶಕ್ತಿ ನೀಡಿದೆ ಅಂದರೆ ತಪ್ಪಾಗಲಾರದು. ಹೀಗೆ ಅಂಕಣವನ್ನು ಬರೆಯುತ್ತ ಬರೆಯುತ್ತಲೇ ಸಂಗ್ರಹವಾದ ಬರಹಗಳೆಲ್ಲ ಪುಸ್ತಕವಾಗಿ ರೂಪಾಂತರ ಗೊಳ್ಳುತ್ತಿದೆ.
ಅದನ್ನು ಪ್ರಕಟಿಸುವ ಮೂಲಕ ಪ್ರಕಾಶಕಿಯಾಗಿ ಪರಿವರ್ತನೆಯಾಗುತ್ತಿದ್ದೇನೆ. ಒಂದು ಪತ್ರಿಕೆಯಲ್ಲಿ ನಿರಂತರವಾಗಿ ದುಡಿದ ಅನುಭವದ ಆಧಾರದ ಮೇಲೆ ಒಂದು ಹೊಸ ಪತ್ರಿಕೆಯನ್ನು ರೂಪಿಸುವ ಗುರುತರವಾದ ಯೋಜನೆಯನ್ನೂ ಹಾಕಿ ಕೊಂಡಿದ್ದೇನೆ. ಸಂತೋಷ ಪಡಲು ಇದಕ್ಕಿಂತ ವಿಷಯ ಬೇಕೆ? ನಿತ್ಯಬದುಕಿನಲ್ಲಿ ನಿರ್ಲಕ್ಷ್ಯಕ್ಕೊಳಗಾಗುವ ಸಾಕಷ್ಟು ಅಂಶಗಳೇ ಬೆಳವಣಿಗೆಯ ಮಹತ್ವದ ಘಟ್ಟಗಳಾಗಿ ಬದಲಾಗುತ್ತವೆ ಅನ್ನುವುದಕ್ಕೆ ಇದೆಲ್ಲ ಅಂಶಗಳೂ ಸಾಕ್ಷಿಯಾಗಿ ನಿಲ್ಲುತ್ತವೆ. ಮನಸಿನ ತುಂಬ ಮುರಿದ ಕನಸುಗಳನ್ನೇ ಇಟ್ಟುಕೊಂಡು, ಮೈತುಂಬ ಚಲಂ ಸಾಹಿತ್ಯವನ್ನು ಹರಡಿಕೊಂಡು ನನ್ನಿಂದ ಏನಾದರೂ ಬರೆಯಲು ಸಾಧ್ಯವಾದೀತೇ? ಎಂದು ಪ್ರಶ್ನಿಸಿಕೊಳ್ಳುತ್ತಿದ್ದ ದಿನಗಳಲ್ಲಿ, ಗುಡಿಸಲ ಮುಂದೆ ಪ್ರಶಾಂತವಾಗಿ ನಿದ್ರಿಸಿದ ಹೆಣವನ್ನು ನೋಡಿದ್ದೀಯಾ? ಎಂಬ ಕವಿ ನಿಖಿಲೇಶ್ವರರ ಕವಿತೆಯ ಸಾಲುಗಳನ್ನು ಓದಿದ ದಿನ, ನಾನು ನಾನಾಗಿ ಉಳಿದಿರಲಿಲ್ಲ.
ಅದಾದ ಕೆಲವೇ ದಿನಗಳಲ್ಲಿ ಗುಂತಕಲ್ಲಿಗೆ, ಅನಂತಪುರಕ್ಕೆ ಓಡಿಹೋಗಿ ಈ ಥರದ ಕವಿತೆ ನಿಮ್ಮಲ್ಲಿ ಸಿಗುತ್ತಾ? ಅಂತ ಪುಸ್ತಕ ದಂಗಡಿಗಳಲ್ಲ ವಿಚಾರಿಸ ತೊಡಗಿದೆ. ಶ್ರೀಶ್ರೀ, ಗದ್ದರ್, ನಗ್ನಮುನಿ ಮತ್ತು ಚೆರಬಂಡರಾಜು ಅವರ ಕವಿತೆಗಳು ನನ್ನಲ್ಲಿ ಬದಲಾವಣೆಯನ್ನು ಬಿತ್ತತೊಡಗಿದವು. ಸತ್ಯವೆಂಬುದು ದೇವರಲ್ಲಿಲ್ಲ. ಬೈರಾಗಿಗಳಲ್ಲಿಲ್ಲ. ಬದುಕು ಮರೆತ ಫಕೀರರಲ್ಲಿ ಇಲ್ಲ.
ಸರಿಯಾಗಿ ಹುಡುಕಿಕೊಂಡರೆ, ಅವು ನನ್ನ ಇವೆ. ಅವು ಹೆಂಗಸಿನ ಪ್ರಸೂತಿ ವೇದನೆಯ ಚೀತ್ಕಾರಗಳಂತಿವೆ.
ಶತಶತಮಾನದಿಂದ ಊಟ ಮಾಡದೆ ಉರುಳಿಕೊಂಡ ಕೂಲಿಯಾಳಿನ ಕರುಳಿನಲ್ಲಿವೆ. ಎದೆಯೆತ್ತರ ಬೆಳೆದ ಮಗ ಆತ್ಮಹತ್ಯೆ ಮಾಡಿಕೊಂಡಾಗ ಉದ್ಭವಿಸುವ ವಿಧವೆ ತಾಯಿಯ ಗರ್ಭಶೋಕದಲ್ಲಿವೆ! ಹಾಗಂತ ದಿಗಂಬರರ ಕವಿತೆಗಳು ನನಗೆ ಹೇಳ ತೊಡಗಿದವು. ಮೊಟ್ಟ ಮೊದಲ ಬಾರಿಗೆ, ನನ್ನಿಂದ ಈ ಸಮಾಜಕ್ಕೆ, ನನ್ನ ಸುತ್ತಲಿನವರಿಗೆ, ನನ್ನೂರಿಗೆ ಏನು ಪ್ರಯೋಜನ ಎಂಬ ಪ್ರಶ್ನೆಗಳು ನನ್ನಲ್ಲಿ ಉದ್ಭವವಾಗತೊಡಗಿದವು. ಅದರ ಮೊದಲ ಪ್ರಯತ್ನವಾಗಿ ಬಳ್ಳಾರಿಯ ಸರಕಾರಿ ಆಸ್ಪತ್ರೆಗೆ ಹೋಗಿ ನನ್ನ
ಹೆಸರನ್ನು ಉಚಿತ ರಕ್ತದಾನಿಗಳ ಪಟ್ಟಿಯಲ್ಲಿ ಬರೆಯಿಸಿ ಬಂದೆ.
ಇದ್ದ ಮನೆಯಲ್ಲಿ ಒಂದು ಕೋಣೆ ಪ್ರತ್ಯೇಕವಾಗಿಟ್ಟು, ಅದರಲ್ಲಿ ಆಂಧ್ರದ ನಕ್ಸಲೀಯರ ಸಾಹಿತ್ಯ ಕಲೆ ಹಾಕುತ್ತಾ ಬಂದೆ. ಗದ್ದರ್ ಹಾಡುಗಳು ಬಾಯಿಪಾಠವಾಗತೊಡಗಿದವು….. ಎಂದು ರವಿಬೆಳಗೆರೆಯವರು ಎಂದೋ ಬರೆದ ಸಾಲುಗಳನ್ನು ಓದುತ್ತ ಓದುತ್ತ ಇಷ್ಟು ವರ್ಷಗಳು ನನ್ನಿಂದ ಅರಗಿಸಿಕೊಳ್ಳಲಾಗದ ವಿಷಯಗಳೆಲ್ಲ ಈಗ ಯಾವುದೇ ಭಾವೋದ್ವೇಗವಿಲ್ಲದೆ ಅವರನ್ನು ಅವರ
ಹಾಗೇ ನೋಡಲು ಸಾಧ್ಯವಾಗುವಂತೆ ಸಹಕರಿಸುತ್ತಿವೆ.
ನೀವು ಗಮನಿಸಿ ನೋಡಿ ಮಹಾನ್ ಗುರುಗಳೆನ್ನಿಸಿಕೊಂಡವರು ನಿಜವಾಗಿಯೂ ಅವರ ಶಿಷ್ಯರಿಗೆ ಏನನ್ನೂ ಬೋಧಿಸಿರುವುದಿಲ್ಲ. ಅವರ ಜೊತೆಗಿದ್ದಾಗಲೇ ಸಾಕಷ್ಟು ವಿಷಯಗಳು ನಮ್ಮ ಅರಿವಿಗೆ ಬರುವಂತೆ ಮನದಟ್ಟು ಮಾಡಿಕೊಟ್ಟಿರುತ್ತಾರೆ. ಕಲಿಯುವ ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕಾದವರು ನಾವೇ. ಓ ಅಷ್ಟೇನಾ ಅದೆಲ್ಲ ನಂಗೊತ್ತು ಅನ್ನುವ ಅಹಂ ಕಲಿಕೆಯೆಂಬ ಹರಿವಿಗೆ
ತಡೆಗೋಡೆಯಾಗಿ ನಿಲ್ಲುತ್ತದೆ. ಇಷ್ಟು ವರ್ಷ ರವಿ ಬೆಳಗೆರೆಯೊಂದಿಗೆ ಅವರ ಬರಹಗಳನ್ನು ಅಕ್ಷರ ರೂಪಕ್ಕಿಳಿಸುತ್ತಾ ಬದುಕಿದ ಬದುಕಿಗೂ ಈಗ ಅವತ್ತು ಮುದ್ರಿತವಾದ ಅದೇ ಅಕ್ಷರಗಳೊಳಗೆ ರವಿ ಬೆಳಗೆರೆಯನ್ನು ಹೊಸದಾಗಿ ಕಂಡುಕೊಳ್ಳುತ್ತಾ ಅವರ
ಪ್ರತೀ ಬರಹದಲ್ಲೂ ಅವರ ವಿಭಿನ್ನ ಆಂತರ್ಯವನ್ನು ಅರಿಯುವಾಗ ಸಾಕಷ್ಟು ವಿಸ್ಮಯಕ್ಕೊಳಗಾಗುತ್ತೇನೆ.
ಅವರ ಸಾಮಿಪ್ಯದಲ್ಲಿ ಕಂಡುಕೊಳ್ಳಲಾಗದ ಅರಿವನ್ನೆಲ್ಲ ಅವರ ಅಗಲಿಕೆಯ ಅಂತರದಿಂದ ಕಂಡುಕೊಳ್ಳುವ ಸಂದರ್ಭ ಎದುರಾಗಿರುವುದು ವಿಪರ್ಯಾಸವಾದರೂ ಇದರ ಮೂಲಕ ಮತ್ತೆ ಹೊಸದಾಗಿ ಅವರನ್ನು ಅರಿಯುವ ಅವಕಾಶವಿತ್ತ ಬದುಕಿಗೆ ಅನಂತ ನಮನಗಳು!
Read E-Paper click here