*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
*ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್
*ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್
*ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ
ಬೆಂಗಳೂರು: ನಟಿಯರ ಪರ ವಾದ ಹಾಗೂ ಸಿಸಿಬಿ ಪರ ವಾದದಲ್ಲಿ ಕಡೆಗೂ ಸಿಸಿಬಿ ಗೆಲುವಿನ ನಗೆ ಬೀರಿದೆ. ಮತ್ತೆ ಮೂರು ದಿನಗಳ ನಟಿಯರನ್ನು ಸಿಸಿಬಿ ಕಸ್ಟಡಿಗೆ ನೀಡುವ ಮೂಲಕ ಕೋರ್ಟ್ ಆದೇಶ ಹೊರಡಿಸಿದೆ.
ಈ ಮೂಲಕ ಮುಂದಿನ ಸೋಮವಾರದವರೆಗೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರಿಗೆ ಸಾಂತ್ವನ ಕೇಂದ್ರವೇ ಗತಿಯಾಗಿದೆ. ಐದು ದಿನಗಳ ಕಾಲ ನೀಡುವಂತೆ ಸಿಸಿಬಿ ಮನವಿ ಮಾಡಿತ್ತು.
ಸ್ಯಾಾಂಡಲ್‌ವುಡ್ ಡ್ರಗ್‌ಸ್ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿ ತನಿಖಾ ತಂಡದಿಂದ ಕಳೆದೊಂದು ವಾರ ದಿಂದ ವಿಚಾರಣೆಗೆ ಎದುರಿಸುತ್ತಿರುವ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಯವರಿಗೆ ವಿಡಿಯೋ ಕಾನ್ಫರೆನ್‌ಸ್ ಮೂಲಕ ವಿಚಾರಣೆ ನಡೆಸಲಾಯಿತು. ಸಿಸಿಬಿ ಪರ ವಕೀಲರು ತಮ್ಮ ವಾದವನ್ನು ಮಂಡಿಸುತ್ತ, ಐದು ದಿನವಾದರೂ ರಾಗಿಣಿ ಇನ್ನೂ ವಿಚಾರಣೆಗೆ ಸಹಕರಿಸಿಲ್ಲ.
ಮತ್ತಷ್ಟು ದಿನಗಳ ಕಾಲ ವಿಚಾರಣೆ ಅಗತ್ಯವಿದೆ. ಡ್ರಗ್‌ಸ್ ದಂಧೆ ಬಗ್ಗೆೆ ಅವರಿಬ್ಬರ ಬಳಿ ಸಾಕಷ್ಟು ಮಾಹಿತಿ ಇದೆ. ಹೀಗಾಗಿ ಈ ಬಗ್ಗೆೆ ಹೆಚ್ಚಿನ ತನಿಖೆ ನಡೆಸುವುದು ಅಗತ್ಯವಿದೆ ಎಂದು ಸಂಜನಾ, ರಾಗಿಣಿಯವರನ್ನು ಕಸ್ಟಡಿಗೆ ಸಿಸಿಬಿ ಪರ ಮನವಿ ಮಾಡಿದರು.
ಇದಕ್ಕೆ ಪ್ರತಿಯಾಗಿ ನಟಿಯರ ಪರ ವಾದ ಮಂಡಿಸಿದ ವಕೀಲರು, ಇಬ್ಬರು ನಟಿಯರ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಅವರ ಬಳಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗಿ, ಅವರನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಮ್ಮ ವಾದವನ್ನು ಮುಂದಿಟ್ಟರು. ಆದರೆ, ಸಿಸಿಬಿ ಪರ ವಕೀಲರ ವಾದವನ್ನು ಕೋರ್ಟ್ ಪುರಸ್ಕರಿಸಿತು.