ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅಭಿಮತ
ದೆಹಲಿ: ಎಲ್ಲರಿಗೂ ಸೇರಿದ ಶಿಕ್ಷಣ ನೀತಿಯಲ್ಲಿ ಸರಕಾರದ ಹಸ್ತಕ್ಷೇಪ ಕಡಿಮೆ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ರಾಜ್ಯಪಾಲರ ಸಮ್ಮೇಳನಕ್ಕೆ ವಿಡಿಯೊ ಕಾನ್ಫರೆನ್‌ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆಯು ದೇಶದ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಮುಖ ಸಾಧನಗಳಾಗಿವೆ. ಕೇಂದ್ರ, ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆೆಗಳು ಎಲ್ಲವೂ ಶಿಕ್ಷಣ ವ್ಯವಸ್ಥೆೆಯ ಜವಾಬ್ದಾರಿಯೊಂದಿಗೆ ಮನ್ನಡೆಯಬೇಕಾಗಿದೆ ಎಂದು ಹೇಳಿದರು.
ವಿದೇಶಾಂಗ ನೀತಿ, ರಕ್ಷಣಾ ನೀತಿಯಂತೆ ಶಿಕ್ಷಣ ನೀತಿಯು ದೇಶದ ಆಸ್ತಿಯೇ ಹೊರತು ಸರಕಾರದ್ದಲ್ಲ. ಆದ್ದರಿಂದ ಈ ಶಿಕ್ಷಣ ನೀತಿಯಲ್ಲಿ ಸರಕಾರದ ಹಸ್ತಕ್ಷೇಪ ಹಾಗೂ ಅದರ ಪ್ರಭಾವವು ಕನಿಷ್ಠವಾಗಿರಬೇಕು ಎಂದು ಹೇಳಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯು ಅಧ್ಯಯನ ಮಾಡುವ ಬದಲು ಕಲಿಕೆಯ ಮೇಲೆ ಕೇಂದ್ರೀಕರಿಸುತ್ತದೆ. ವಿಮರ್ಶಾತ್ಮಕ ಚಿಂತನೆಯತ್ತ ಗಮನಹರಿಸಲು ಪಠ್ಯಕ್ರಮವನ್ನೂ ಮೀರಿದೆ ಎಂದರು. ಎನ್‌ಇಪಿಯಲ್ಲಿ, 1986ಕ್ಕೂ ಮೊದಲಿದ್ದ ನಿರ್ದಿಷ್ಟ ಕೋರ್ಸ್‌ಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ತೆಗೆದುಹಾಕಲಾಗಿದೆ. ನಮ್ಮ ಯುವಕರು ಈಗ ಅವರ ಆಸಕ್ತಿಗೆ ಅನುಗುಣವಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಭಾರತವು ಪ್ರಾಚೀನ ಕಲಿಕೆಯ ಕೇಂದ್ರವಾಗಿದ್ದು, 21ನೇ ಶತಮಾನದಲ್ಲಿ ಇದನ್ನು ಜ್ಞಾನ ಆರ್ಥಿಕತೆಯ ಕೇಂದ್ರವನ್ನಾಗಿ ಮಾಡಲು ಸರಕಾರ ಕೆಲಸ ಮಾಡುತ್ತಿದೆ. ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಾಯಕಾರಿಯಾಗಲಿದ್ದು, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಪ್ರಮುಖಾಂಶಗಳು
* ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನಕ್ಕಿಂತ ಹೆಚ್ಚು ಕಲಿಕೆಗೆ ಮಹತ್ವ ನೀಡುತ್ತದೆ.
* ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕ ಜ್ಞಾನ ಮಾತ್ರವಲ್ಲದೇ ಕೌಶಲ ಜ್ಞಾನವನ್ನೂ ಒದಗಿಸುತ್ತದೆ.
* ಸಶಕ್ತ ಭಾರತ ನಿರ್ಮಾಣ ಮಾಡುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಂತ ಪ್ರಯೋಜನಕಾರಿ.
* ನೀತಿಯನ್ನು ಉತ್ಸಾಹದಿಂದ ಜಾರಿಗೊಳಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ.
* ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಶಿಕ್ಷಣ ನೀತಿಯೊಂದಿಗೆ ಸಂಬಂಧ ಹೊಂದಿದ್ದಾರೆ.
ಎನ್‌ಇಪಿ ಪ್ರಬಲ ಅಸ್ತ್ರ: ಕೋವಿಂದ್
ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಭಾರತದ ಸಂವಿಧಾನದೊಳಗೆ ಒಂದು ಪ್ರಬಲವಾದ ಅಸ್ತ್ರವಾಗಿದೆ. ಹೀಗಾಗಿ, ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಒಟ್ಟಾಗಿ ಇದನ್ನು ಯಶಸ್ವಿಯಾಗಿ ಜಾರಿಗೆ ತರಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ರಾಜ್ಯಪಾಲರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಅನ್ನು ಸ್ಥಾಪಿಸಲಾಗುವುದು. ಉನ್ನತ ಶಿಕ್ಷಣ ಸಂಸ್ಥೆೆಗಳು ಮತ್ತು ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಸಂಶೋಧನಾ ಕೇಂದ್ರದ ಮೂಲಕ ಕೆಲಸ ಮಾಡಬೇಕು ಎಂದರು. ನೂತನ ಶಿಕ್ಷಣ ನೀತಿಯಲ್ಲಿ ಭಾರತದ ಭಾಷೆಗಳು, ಕಲೆ, ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಭಾರತದ ಭಾಷೆಗಳು ಮತ್ತು ಸಮಗ್ರತೆ, ಐಕ್ಯತೆಯನ್ನು ಬಲಪಡಿಸುತ್ತದೆ. ತಂತ್ರಜ್ಞಾನ ಗಳೊಂದಿಗೆ ಕಲಿಕೆಯ ಪ್ರಕ್ರಿಯೆ ಉತ್ತಮವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.