Sunday, 24th November 2024

ಕಲಾದೇವತೆ ತನಗಾಗಿಯೇ ಅವರನ್ನು ಕಲಾವಿದನನ್ನಾಗಿ ರೂಪಿಸಿದ್ದಳೇನೋ !

ಇದೇ ಅಂತರಂಗ ಸುದ್ದಿ

vbhat@me.com

ನಾನು ಹೊಸ ಮನೆ ಕಟ್ಟುವಾಗ, ಬುಕ್ಕಸಾಗರ ಕೃಷ್ಣಮಾಚಾರ್ಯ ಶ್ರೀನಿವಾಸ ವರ್ಮ (ಸಂಕ್ಷಿಪ್ತ ವಾಗಿ ಬಿ.ಕೆ.ಎಸ್.ವರ್ಮ) ಅವರ ಒಂದು
ಪೇಂಟಿಂಗ್‌ನ್ನು ಗೋಡೆಗೆ ನೇತು ಹಾಕಲೇಬೇಕು ಎಂದು ನಿರ್ಧರಿಸಿದ್ದೆ. ನನ್ನ ಮನದ ಇಂಗಿತವನ್ನು ವರ್ಮ ಅವರ ಮುಂದೆ ಹೇಳಿದಾಗ, ‘ಯಾವುದಕ್ಕೂ ಮನೆ ನಿರ್ಮಾಣ ಪೂರ್ತಿಯಾಗಲಿ. ನಾನೇ ಖುದ್ದಾಗಿ ಬರುತ್ತೇನೆ. ಮನೆಯಂದು ಸುತ್ತು ಹಾಕುತ್ತೇನೆ. ಆಗ ನನ್ನ ಮನಸ್ಸಿನಲ್ಲಿ ಯಾವ ಭಾವನೆ ಬರುವುದೋ, ಆ ಸಂಕಲ್ಪ ಪಡೆದು ಚಿತ್ರ ರಚಿಸುತ್ತೇನೆ’ ಎಂದು ಹೇಳಿದರು. ನಾನೂ ಸಮ್ಮತಿಸಿದೆ.

ಕಲಾವಿದರಿಗೆ ಮೂಡು, ಪ್ರೇರಣೆ, ಸ್ಥಳ ಭಾವ ಬಹಳ ಮುಖ್ಯ. ಸ್ಥಳದಿಂದ ಸ್ಥಳಕ್ಕೆ ಇವು ಬದಲಾಗು ವುದುಂಟು. ಅದಾಗಿ ಸುಮಾರು ಒಂದು ವರ್ಷದ ಬಳಿಕ ಮನೆ ನಿರ್ಮಾಣ ಪೂರ್ಣಗೊಂಡಿತು. ನಾನು ನನ್ನ ಕೆಲಸ- ಕಾರ್ಯಗಳ ಮಧ್ಯೆ ಬ್ಯುಸಿ ಆಗಿದ್ದೆ. ಆದರೆ ಪ್ರತಿದಿನ ಮನೆಯೊಳಗೆ ಕಾಲಿಡು
ತ್ತಿದ್ದಂತೆ, ಜಗುಲಿಯ ಗೋಡೆ ಖಾಲಿಖಾಲಿಯಾಗಿರುವುದು ಮುಖಕ್ಕೆ ಹೊಡೆಯುವಷ್ಟು ರಾ೦ಚು ತ್ತಿತ್ತು. ಒಂದು ದಿನ ವರ್ಮ ಅವರಿಗೆ ಫೋನ್ ಮಾಡಿ, ‘ಮನೆ ಪೂರ್ಣಗೊಂಡ ಬಳಿಕ ಬರ್ತೇನೆ ಅಂತ ಹೇಳಿದ್ದಿರಿ, ಯಾವಾಗ ಬರ್ತೀರಿ?’ ಅಂತ ಕೇಳಿದೆ.

ಕೆಲ ದಿನಗಳ ನಂತರ, ವರ್ಮ ಮನೆಗೆ ಬಂದರು. ಇಡೀ ಮನೆಯಲ್ಲಿ ಓಡಾಡಿದರು. ಕೆಲ ಹೊತ್ತು ಒಬ್ಬರೇ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸಿ ದರು. ‘ಆಯ್ತು, ಒಂದು ಒಳ್ಳೆಯ ಪೇಂಟಿಂಗ್ ಮಾಡೋಣ, ಆದರೆ ನನಗೆ ಸ್ವಲ್ಪ ದಿನ ಬೇಕು. ಒಂದು ವಿಶೇಷವಾದ ಕೃತಿ ರಚಿಸಬೇಕು ಎಂಬ ಪ್ರೇರಣೆ ಸಿಕ್ಕಿದೆ. ಯಾವ ಕಾರಣಕ್ಕೂ ಅವಸರ ಮಾಡಬೇಡಿ. ಎಲ್ಲಾ ದೈವ ಸಂಕಲ್ಪ. ನನಗೂ ಒಂದು ಒಳ್ಳೆಯ ಪ್ರೇರಣೆ ಸಿಕ್ಕಿದೆ. ಶುಭ ದಿನ ನೋಡಿ ಕೆಲಸ ಆರಂಭಿಸುತ್ತೇನೆ’ ಎಂದರು. ನಾನು ಸಮ್ಮತಿಸಿದೆ.

ಅದಾಗಿ ಆರು ತಿಂಗಳುಗಳು ಗತಿಸಿದವು. ನಾನು ವರ್ಮರನ್ನು ಸಂಪರ್ಕಿಸಲು ಹೋಗಲಿಲ್ಲ. ಒಂದು ವರ್ಷವಾದರೂ ಅವರಿಂದ ಯಾವ ಪ್ರತಿಕ್ರಿಯೆ ಯೂ ಬರದಿದ್ದಾಗ, ನಂತ್ರ ಒಂದು ದಿನ ಅವರನ್ನು ಸಂಪರ್ಕಿಸಿದೆ. ‘ಅವಸರ ಮಾಡಬೇಡಿ, ಏನೋ ಒಂದಷ್ಟು ಕೆಲಸ ಆಗಿದೆ. ಕೆಲ ದಿನಗಳಲ್ಲಿ ನಾನೇ ನಿಮ್ಮ ಮನೆಗೆ ಬರುತ್ತೇನೆ’ ಎಂದರು. ನಾನು ವರ್ಮ ಅವರ ಪೇಂಟಿಂಗ್‌ಗಾಗಿ ಬಿಟ್ಟ ಗೋಡೆ ಬೋಳು ಬೋಳಾಗಿ ಕಾಣುತ್ತಿತ್ತು. ಮನೆಗೆ ಬಂದವರೆಲ್ಲ ‘ಇಂದು ಪೇಂಟಿಂಗ್ ಇದ್ದಿದ್ದರೆ ಚೆನ್ನಾಗಿತ್ತು, ಈ ಗೋಡೆಗೊಂದು ಫೋಟೋ ನೇತು ಹಾಕಬಾರದೇ?, ಇಂದು ಚಿತ್ರ ಇದ್ದರೆ ಚೆನ್ನಾಗಿ ರೋದು’ ಎಂದು ಹೇಳುತ್ತಿದ್ದರು.

ಆಗ ನಾನು, ‘ಅಂದು ಅಪೂರ್ವ ಕಲಾಕೃತಿ ಬರಲಿದೆ, ನೋಡ್ತಾ ಇರಿ. ನಾನೂ ಒಂದೂವರೆ ವರ್ಷದಿಂದ ಕಾಯುತ್ತಿದ್ದೇನೆ’ ಎಂದು ಹೇಳುತ್ತಿದ್ದೆ. ಅಲ್ಲಿ ತನಕ ನಾನು ವರ್ಮ ಅವರ ಕಲಾಕೃತಿಗಾಗಿ ಒಂದೂ ಮುಕ್ಕಾಲು ವರ್ಷಕ್ಕಿಂತ ಹೆಚ್ಚು ಕಾಲ ಕಾದಂತಾಗಿತ್ತು. ನಾನು ಅಂದು ಪೇಂಟಿಂಗ್ ಹಾಕಲೇ ಬೇಕಿತ್ತು. ಹಾಗಂತ ಬೇರೆ ಯಾವ ಕಲಾಕೃತಿ ಹಾಕಲು ಇಷ್ಟವಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ವರ್ಮ ಮಿನಿ ಲಾರಿಯಲ್ಲಿ ನಮ್ಮ ಮನೆ ಮುಂದೆ ಬಂದಿಳಿದರು. ಐದು ಅಡಿ ಅಗಲ ಹತ್ತು ಅಡಿ ಎತ್ತರದ ಪೇಂಟಿಂಗ್ ಗೆ ಫ್ರೇಮ್ ತೊಡಿಸಿ ತಂದಿದ್ದರು. ಬಿಳಿ ಬಟ್ಟೆಯಿಂದ ಪೇಂಟಿಂಗ್ ಮುಚ್ಚಿತ್ತು. ಸ್ವತಃ ವರ್ಮ ಅವರೇ ಅದನ್ನು ಬಿಚ್ಚಿ, ‘ಈಗ ಕಣ್ಣುಬಿಡಿ’ ಎಂದರು.

ನೋಡಿದರೆ, ‘ವಿಶ್ವಂಬರ’! ವರ್ಮ ಅವರೇ ಹಾಗಂತ ನಾಮಕಾರಣ ಮಾಡಿದ್ದು. ಒಂದು ಕ್ಷಣ ರೋಮಾಂಚನ. ಮೈಮೇಲೆ ಚಳಿಗುಳ್ಳೆಗಳು
ಮೂಡಿದ್ದವು. ನಾನು ಏಳೆಂಟು ನಿಮಿಷ ತದೇಕಚಿತ್ತದಿಂದ ಮಾತು ಮರೆತವನಂತೆ ಆ ಪೇಂಟಿಂಗ್‌ನ್ನು ದಿಟ್ಟಿಸುತ್ತಲೇ ಇದ್ದೆ. ಕಣ್ಣ ಮುಂದೆ ಬ್ರಹ್ಮಾಂಡ ದರ್ಶನವಾಗುವ ಕಲಾಕೃತಿ! ಒಂದೇ ಕೃತಿಯಲ್ಲಿ ದೇವ-ದೇವತೆಗಳು, ಋಷಿ-ಮುನಿಗಳ ದರ್ಶನ!

ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನಿಸುವ, ಮತ್ತು ಭರಿಸುವ, ಸಮ್ಮೋಹನಗೊಳಿಸುವ ಕಲಾಕೃತಿ. ನಾನು ಪ್ರತಿದಿನ ಬೆಳಗ್ಗೆ ಜಗುಲಿಯಲ್ಲಿ
ಬಂದು ಕುಳಿತರೆ ಕಣ್ಣಿಗೆ ಬೀಳುವುದೇ ವಿಶ್ವಂಬರ. ನೋಡುತ್ತಾ ಕುಳಿತರೆ ಆ ಕಲಾಕೃತಿಯಲ್ಲಿ ಇಳಿದುಹೋದ ಅನುಭವ. ಕಳೆದ ಹತ್ತು ವರ್ಷಗಳಿಂದ
ನಾನು ಆ ಕಲಾಕೃತಿಯನ್ನು ನೋಡುತ್ತಿದ್ದೇನೆ. ಅದರೊಂದಿಗೆ ಬಾಳುತ್ತಿದ್ದೇನೆ, ಬೆಳೆಯುತ್ತಿದ್ದೇನೆ. ತಮ್ಮ ಕುಂಚದಿಂದ ದೇವರನ್ನು ಧರೆಗಿಳಿಸಿದ ಮೋಡಿಗಾರ ಕಲಾವಿದ ವರ್ಮ ನನ್ನ ಕಣ್ಣಲ್ಲಿ ನಿತ್ಯನೂತನರಾಗಿ, ವಿಸ್ಮಯಕಾರನಾಗಿ ಕಾಣುತ್ತಾರೆ. ನನ್ನ ಮನೆಗೆ ಬಂದವರ ಕಣ್ಣಿಗೆ ಮೊದಲು ಕಾಣುವುದೇ ಆ ಪೇಂಟಿಂಗ್. ಅದರ ಬಗ್ಗೆ ಚರ್ಚಿಸದೇ ಯಾರೂ ಮಾತುಕತೆ ಆರಂಭಿಸುವುದಿಲ್ಲ.

ಸುಮಾರು ಆರೇಳು ವರ್ಷಗಳ ಹಿಂದೆ, ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸೀ ಅವರ ಮಗ ಸುನಿಲ್ ಶಾಸ್ತ್ರಿ ತಮ್ಮ ಪತ್ನಿಯೊಂದಿಗೆ ಅವರು ನನ್ನ ಮನೆಗೆ ಬಂದಿದ್ದರು. ಬಂದವರೇ ವರ್ಮ ಅವರ ಪೇಂಟಿಂಗ್ ನೋಡಿ, ಸುಮಾರು ಕಾಲು ಗಂಟೆ ತದೇಕಚಿತ್ತದಿಂದ ನೋಡುತ್ತಾ ಕುಳಿತಿದ್ದನ್ನು ಮರೆಯುವಂತೆಯೇ ಇಲ್ಲ. ಪುಣೆಯ ಉದ್ಯಮಿ ಸ್ನೇಹಿತರೊಬ್ಬರು ಇದನ್ನು ನೋಡಿ, ‘ನನಗೆ ಗೊತ್ತು, ಈ ಕಲಾಕೃತಿಯನ್ನು ನೀವು ಮಾರುವುದಿಲ್ಲ ವೆಂದು. ಒಂದು ವೇಳೆ ನೀವು ಮನಸ್ಸು ಬದಲಿಸಿದರೆ, ಇದನ್ನು ನನಗೇ ಕೊಡಿ. ನೀವು ಕೇಳಿದ ಬೆಲೆಗೆ ಖರೀದಿಸುತ್ತೇನೆ’ ಎಂದು ಹೇಳಿದ್ದರು. ‘ಬಿ.ಕೆ.ಎಸ್. ವರ್ಮ ಅವರು ತೀರಿಕೊಂಡರು ಅಂದ ತಕ್ಷಣ ಮೊದಲು ನೆನಪಾಗಿದ್ದೇ ನಿಮ್ಮ ಮನೆಯಲ್ಲಿನ ಈ ಚಿತ್ರ ಸರ್…’ ಎಂದು ಸುವರ್ಣ ನ್ಯೂಸ್ ಚಾನೆಲ್ ಸಂಪಾದಕ ಅಜಿತ್ ಹನುಮಕ್ಕನವರ ಪ್ರತಿಕ್ರಿಯಿಸಿದ್ದರು.

‘ಸರ್, ನೀವು ಭಾಗ್ಯವಂತರು. ವರ್ಮ ಅವರು ನಿಮ್ಮ ಮನೆಯಲ್ಲಿ ಆ ಕಲಾಕೃತಿಯೊಂದಿಗೆ ಜೀವಂತವಾಗಿದ್ದಾರೆ’ ಎಂದು ಹೊರನಾಡಿನ ರಾಮ ನಾರಾಯಣ ಜೋಯಿಸರು ಫೋನ್ ಮಾಡಿ ಹೇಳಿದರು. ಅಂಥ ಅದ್ಭುತ ಕಲಾಕೃತಿ! ಕಲಾವಿದನಿಗಿರಬೇಕಾದ ವಿನಯ, ಸಜ್ಜನಿಕೆಯ ಪ್ರತಿ
ರೂಪದಂತಿದ್ದ ವರ್ಮ , ಅವರ ಚಿತ್ರಗಳಂತೆ ಆಪ್ತ, ಸೌಮ್ಯ ವ್ಯಕ್ತಿತ್ವದ ಪ್ರತೀಕವಾಗಿದ್ದರು. ಕಲಾದೇವತೆ ಅವರೊಳಗೆ ನೆಲೆಸಿದ್ದಳು. ಕಲೆಯೇ ಅವರನ್ನು ತನಗಾಗಿ ಕಲಾವಿದನನ್ನಾಗಿ ಮಾಡಿಕೊಂಡಿತ್ತು. ಅವರು ಅಂಥ ಅಪರೂಪದ ಕಲಾವಿದರಾಗಿದ್ದರು. ವರ್ಮ ನಿಧನರಾಗಿರಬಹುದು, ಆದರೆ ಇಂಥ ಅಪರೂಪದ, ಅದ್ಭುತವೆನಿಸುವ ಅವೆಷ್ಟೋ ಕೃತಿಗಳಲ್ಲಿ ವರ್ಮ ಅವರು ನೆಲೆಸಿದ್ದಾರೆ. ಅವರ ಕೃತಿಗಳಿಗೆ ಸಾವಿಲ್ಲ. ಆ ಮೂಲಕ ಅವರೂ
ಜೀವಂತ.

ಎಡಿಸನ್‌ನ ವಿಚಿತ್ರ ಸ್ವಭಾವ

ಥಾಮಸ್ ಅಲ್ವಾ ಎಡಿಸನ್ ಹೆಸರನ್ನು ಕೇಳದವರು ಯಾರಿದ್ದಾರೆ? ಲೈಟ್ ಬಲ್ಬನ್ನು ನೋಡಿದಾಗ ಆತನ ಹೆಸರು ಕಣ್ಮುಂದೆ ಹಾದುಹೋಗುತ್ತದೆ. ಫೋನೋಗ್ರಾಫ್  ಮತ್ತು ಮೋಶನ್ ಪಿಕ್ಚರ್ ಕೆಮರಾವನ್ನು ಕಂಡು ಹಿಡಿದವನೂ ಅವನೇ. ಟೆಲಿಗ್ರಾಫ್ ಮತ್ತು ಟೆಲಿಫೋನ್‌ನ್ನು ಸುಧಾರಿಸಿದವನೂ ಅವನೇ. ನಾನು ಇತ್ತೀಚೆಗೆ ಥಾಮಸ್ ಎಡಿಸನ್ ಕುರಿತ ಪುಸ್ತಕವೊಂದನ್ನು ಓದುತ್ತಿದ್ದೆ. ಎಡಿಸನ್‌ನ ವಿಚಿತ್ರ ಸ್ವಭಾವ ನೋಡಿ ಆಶ್ಚರ್ಯವಾಯಿತು. ಆತ ಮಹಾ ಸೋಂಭೇರಿ. ಒಮ್ಮೊಮ್ಮೆ ಸತತ ಎರಡು ದಿನ ನಿದ್ದೆ ಮಾಡುತ್ತಿದ್ದ. ಕೋಣೆಯಿಂದ ಹೊರಗೇ ಬರುತ್ತಿರಲಿಲ್ಲ.

ವಾರಗಟ್ಟಲೆ ಸ್ನಾನ ಮಾಡುತ್ತಿರಲಿಲ್ಲ. ಬಟ್ಟೆಯನ್ನೂ ಬದಲಿಸುತ್ತಿರಲಿಲ್ಲ. ಆತನ ಪತ್ನಿ ಆತನ ಕೋಣೆಗೆ ಆಹಾರಗಳನ್ನು ಕಳಿಸುತ್ತಿದ್ದಳು. ಒಮ್ಮೊಮ್ಮೆ ಅವನ್ನು ತಿನ್ನದೇ ಅಲ್ಲಿಯೇ ಬಿಟ್ಟುಬಿಡುತ್ತಿದ್ದ. ಆಗಾಗ ಆಹಾರ ಪದಾರ್ಥಗಳೆ ನೆಲದ ಮೇಲೆ ಬಿದ್ದಿರುತ್ತಿದ್ದವು. ಅವನ್ನು ಗುಡಿಸಿ ಸ್ವಚ್ಛಗೊಳಿಸುವ
ಗೋಜಿಗೂ ಹೋಗುತ್ತಿರಲಿಲ್ಲ. ಒಂದು ದಿನ ಎಡಿಸನ್ ಸರತಿ ಸಾಲಿನಲ್ಲಿ (ಕ್ಯೂ) ನಿಂತಿದ್ದ.

ಯಾರೋ ಅವನನ್ನು ಗುರುತಿಸಿದರು. ‘ನೀವು ಥಾಮಸ್ ಎಡಿಸನ್ ಅಲ್ಲವೇ? ಇಲ್ಲಿ ಯಾಕೆ ನಿಂತಿದ್ದೀರಿ?’ ಎಂದು ಕೇಳಿದರು. ಅದಕ್ಕೆ ಎಡಿಸನ್, ‘ನಿಜ, ನೀವು ಹೇಳಿದ್ದು ಸರಿ. ನಾನು ಥಾಮಸ್ ಎಡಿಸನ್. ನಾನು ಯಾರೆಂಬುದನ್ನು ಮರೆತೇ ಬಿಟ್ಟಿದ್ದೆ. ನಾನ್ಯಾರು ಎಂಬುದನ್ನು ನೆನಪಿಸಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಹೇಳಿದ. ಆತ ಅಂಥ ಮರೆಗುಳಿ ಮತ್ತು ವಿಕ್ಷಿಪ್ತ ಸ್ವಭಾವದವನು. ಎಡಿಸನ್‌ನ ಕೋಣೆಯನ್ನು ಆತನ ಹೆಂಡತಿ ಕಾಲಕಾಲಕ್ಕೆ
ಸರಿಯಾಗಿ ಜೋಡಿಸಿಡುತ್ತಿದ್ದಳು. ಇಲ್ಲದಿದ್ದರೆ ಅಲ್ಲಿ ಕಾಲಿಡಲು ಆಗುತ್ತಿರಲಿಲ್ಲ. ಇಡೀ ಕೋಣೆ ತುಂಬೆ ಕಾಗದಗಳು, ಪುಸ್ತಕಗಳು, ಟಿಪ್ಪಣಿಗಳು ಚೆಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹತ್ತಾರು ಪುಟಗಳನ್ನು ಬರೆದ ಬಳಿಕ ಅದನ್ನು ಆತ ಪಕ್ಕದಲ್ಲಿ ಇಡುತ್ತಿರಲಿಲ್ಲ.

ಅವೆಲ್ಲ ಚೆಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಒಂದೆರಡು ದಿನಗಳ ಬಳಿಕ, ಬರೆದ ಹಾಳೆಗಳಿಗೆ ಹುಡುಕುತ್ತಿದ್ದ. ಅವು ತಕ್ಷಣ ಸಿಗದಿದ್ದರೆ, ಎರಡು ದಿನಗಳ ಹಿಂದೆ ಬರೆದಿದ್ದನ್ನೇ ಮತ್ತೊಮ್ಮೆ ಬರೆಯುತ್ತಿದ್ದ. ‘ನೀವು ಇವನ್ನೆ ಈ ಮೊದಲು ಬರೆದಿದ್ದೀರಿ. ಈಗ ಮತ್ಯಾಕೆ ಬರೆಯುತ್ತೀರಿ?’ ಎಂದು ಹೆಂಡತಿ ಕೇಳಿದರೆ, ‘ಹೌದಾ? ನಾನು ಬರೆದಿದ್ದಾನಾ?’ ಎಂದು ಕೇಳಿ ಅವಳನ್ನೇ ಬೇಸ್ತು ಬೀಳಿಸುತ್ತಿದ್ದ. ಮನಸ್ಸಿಗೆ ಯಾವುದೇ ಹೊಸ ವಿಚಾರ ಹೊಳೆದರೆ ಸಾಕು, ಎಡಿಸನ್ ತಕ್ಷಣ ಬಿಡಿ ಹಾಳೆಯಲ್ಲಿ ಬರೆದಿಡುತ್ತಿದ್ದ. ಆದರೆ ಆ ಬಿಡಿ ಹಾಳೆಗಳು ಎಲ್ಲಾ ಕಳೆದು ಹೋಗುತ್ತಿದ್ದವು. ಅವು ಸಿಗದೇ ಪೇಚಾಡುತ್ತಿದ್ದ. ಒಮ್ಮೆ ನೂರಕ್ಕೂ ಹೆಚ್ಚು ಪುಟಗಳನ್ನು ಗೊತ್ತಾಗದೇ ಕಸದಬುಟ್ಟಿಗೆ ಹಾಕಿಬಿಟ್ಟಿದ್ದ!

ಗಂಡನ ಈ ಯಡವಟ್ಟುಗಳನ್ನು ಹೆಂಡತಿ ಚೆನ್ನಾಗಿ ಅರಿತಿದ್ದಳು. ಆತನ ಕೆಲಸಗಳ ಮೇಲೆ ಒಂದು ನಿಗಾ ಇಟ್ಟಿರುತ್ತಿದ್ದಳು. ಬಿಡಿ ಹಾಳೆಗಳ ಮೇಲೆ ಬರೆಯುವ ಗಂಡನ ಅಭ್ಯಾಸವನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು, ಒಂದು ದಿನ ಅಂಗಡಿಗೆ ಖುದ್ದಾಗಿ ಹೋಗಿ ನೋಟ್ ಬುಕ್ ಖರೀದಿಸಿ ತಂದಳು. ‘ಇನ್ನು ಮುಂದೆ ನೀವು ಈ ನೋಟ್‌ಬುಕ್‌ನಲ್ಲಿಯೇ ಬರೆಯಿರಿ. ಬರೆದಿದ್ದೆಲ್ಲ ಒಂದೆಡೆ ಇರುತ್ತದೆ. ಯಾವಾಗ ಬೇಕಾದರೂ ತಕ್ಷಣ ಸಿಗುತ್ತದೆ’
ಎಂದು ಹೇಳಿದಳು. ಅದಕ್ಕೆ ಎಡಿಸನ್, ‘ಹೌದಲ್ವಾ? ಒಳ್ಳೆಯ ಯೋಚನೆ. ಇದೇಕೆ ನನಗೆ ಈ ಮೊದಲು ಹೊಳೆಯಲಿಲ್ಲ?’ ಎಂದು ಹೇಳಿದ. ಅದಾಗಿ ಕೆಲ ದಿನಗಳಲ್ಲಿ ಆತ ಮೂರು ನೋಟ್‌ಬುಕ್‌ಗಳನ್ನು ಬರೆದು ತುಂಬಿಸಿದ.

ಒಂದು ದಿನ ಏನಾಯಿತೆಂದರೆ, ಆತ ಟಿಪ್ಪಣಿ ಮಾಡಿಕೊಂಡ ಮೂರೂ ನೋಟ್‌ಬುಕ್‌ಗಳು ಕಾಣೆಯಾದವು. ಎಷ್ಟೇ ಹುಡುಕಿದರೂ ಸಿಗಲಿಲ್ಲ. ‘ನೋಡಿದೆಯಾ, ನಾನು ನಿನ್ನ ಸಲಹೆಯನ್ನು ಪಾಲಿಸಿದೆ. ಬರೆದಿದ್ದೆಲ್ಲವನ್ನೂ ಕಳೆದುಕೊಂಡೆ. ಬಿಡಿ ಹಾಳೆಗಳಲ್ಲಿ ಬರೆಯುವುದೇ ವಾಸಿ. ಆಗೊಮ್ಮೆ-ಈಗೊಮ್ಮೆ ಕೆಲವು ಪುಟಗಳು ಮಾತ್ರ ಕಳೆದು ಹೋಗುತ್ತಿದ್ದವು, ಆದರೆ ಬರೆದಿzಲ್ಲವೂ ಕಳೆದು ಹೋಗುತ್ತಿರಲಿಲ್ಲ. ಈಗ ನೋಡು, ಎಲ್ಲವೂ ಹೋದವು. ಇನ್ನು ಮುಂದೆ ಬಿಡಿ ಹಾಳೆಗಳ ಬರೆಯುತ್ತೇನೆ’ ಎಂದ ಎಡಿಸನ್, ಸ್ವಲ್ಪವೂ ಬೇಸರಿಸಿಕೊಳ್ಳದೇ, ಬರೆದಿದ್ದನ್ನೇ ಮತ್ತೆ ಬರೆಯಲಾರಂಭಿಸಿದ.

ಆತನ ಈ ಗುಣವೇ ಲೈಟ್ ಬಲ್ಬ ಕಂಡುಹಿಡಿಯಲು ಸಹಾಯಕವಾಯಿತು. ಆತ ಮಾಡಿದ್ದನು ಎಷ್ಟು ಸಲವಾದರೂ ಮತ್ತೊಮ್ಮೆ ಮಾಡಲು ಬೇಸರಿಸಿ ಕೊಳ್ಳುತ್ತಿರಲಿಲ್ಲ. ಪದೇ ಪದೆ ವಿಫಲನಾದರೂ, ಕೈ ಚೆಲ್ಲುತ್ತಿರಲಿಲ್ಲ.

ತಪ್ಪಿತಸ್ಥ ಭಾವ

ಒಮ್ಮೆ ಓಶೋ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಬಳಿ ಬಂದ ಒಬ್ಬ, ‘ಓಶೋ, ಕಳೆದ ಒಂದು ವಾರದಿಂದ ನಾವು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಸಮುದ್ರದ ನೀಲಿ ನೀರು, ನೀಲಿ ಆಗಸದ ಹೊರತಾಗಿ ಮತ್ತೇನೂ ಕಾಣದೇ ಬೋರಾಗುತ್ತಿದೆ. ಏನಾದರೂ ಒಂದು ತಮಾಷೆಯ ಪ್ರಸಂಗ ಹೇಳಿ’ ಎಂದು ವಿನಂತಿಸಿಕೊಂಡ.

ಅದಕ್ಕೆ ಓಶೋ ಒಂದು ಪ್ರಸಂಗವನ್ನು ಹೇಳಿದರು. (ನನಗೆ ಈ ಪ್ರಸಂಗವನ್ನು ಇತ್ತೀಚೆಗೆ ಹೇಳಿದವರು ಯೋಗಿ ದುರ್ಲಭಜೀ) ‘ನಿಮ್ಮ ಯುರೋಪ್ ಪ್ರವಾಸ ಹೇಗಿತ್ತು?’ ಎಂದು ಪೇದ್ರು ತನ್ನ ಸ್ನೇಹಿತ ಪಿರ್ಕಿಯನ್ನು ಕೇಳಿದ. ಅದಕ್ಕೆ ಪಿರ್ಕಿ, ‘ಫೆಂಟಾಸ್ಟಿಕ್! ಮರೆಯುವಂತೆಯೇ ಇಲ್ಲ. ಅಂಥ ಅದ್ಭುತ ಪ್ರವಾಸ, ರೋಚಕ ಅನುಭವ’ ಎಂದ. ಅದಕ್ಕೆ ಪೇದ್ರು, ‘ಅಂಥ ರೋಚಕ ಅನುಭವವನ್ನು ಸ್ವಲ್ಪ ವಿವರಿಸಿ ಹೇಳಬಾರದಾ?’ ಎಂದು ಕೇಳಿಕೊಂಡ.
ಅದಕ್ಕೆ ಪಿರ್ಕಿ ಆಯಿತು ಎಂದ. ‘ಹಡಗಿನಲ್ಲಿ ಮೊದಲ ದಿನ ನಾನೊಬ್ಬಳು ಅತಿ ಸುಂದರಿಯಾದ ಹೆಂಗಸನ್ನು ಭೇಟಿಯಾದೆ.

ಅಂಥ ಸೌಂದರ್ಯವತಿಯನ್ನು ನನ್ನ ಜೀವನದಲ್ಲಿ ಆ ಮೊದಲು ನೋಡಿರಲೇ ಇಲ್ಲ. ನಾವಿಬ್ಬರೂ ಒಂದು ಗಂಟೆ ಹರಟೆ ಹೊಡೆದೆವು. ನಮ್ಮಿಬ್ಬರದು ಮೊದಲ ನೋಟದ ಹುಟ್ಟಿಕೊಂಡ ಪ್ರೇಮ. ಅದಾಗಿ ಕೆಲ ಹೊತ್ತಿನಲ್ಲಿ ನಾವಿಬ್ಬರೂ ಪರಸ್ಪರರ ತೋಳುಗಳಲ್ಲಿ ಬಂಧಿಯಾಗಿದ್ದೆವು. ಆ ರಾತ್ರಿ ಹೇಗೆ ಕಳೆಯಿತು ಗೊತ್ತಾಗಲಿಲ್ಲ. ಮರುದಿನ ಬೆಳಗ್ಗೆ ಒಂದು ಆಘಾತ ಕಾದಿತ್ತು. ಆಕೆ ಮತ್ಯಾರೂ ಅಲ್ಲ, ನನ್ನ ಖಾಸಾ ಸ್ನೇಹಿತನ ಪತ್ನಿ ಎಂಬುದು ಗೊತ್ತಾಯಿತು. ನಮ್ಮಿಬ್ಬರಲ್ಲೂ ಹಠಾತ್ ತಪ್ಪಿತಸ್ಥ ಭಾವ (ಗಿಲ್ಟ) ಕಾಡತೊಡಗಿತು. ನಾವಿಬ್ಬರೂ ಬಹಳ ಹೊತ್ತು ಮಂಕಾಗಿ ಕುಳಿತಿದ್ದೆವು.

ನಂತರ ಇಬ್ಬರೂ ಜೋರಾಗಿ ಅತ್ತೆವು.’ ಪಿರ್ಕಿಯ ಕತೆಯನ್ನು ಕೇಳಿದ ಪೇದ್ರು, ‘ಛೆ.. ಛೇ… ಹೀಗಾಗಬಾರದಿತ್ತು.. ಆದರೆ ಕೆಲವು ಸಂಗತಿಗಳು ನಮ್ಮ
ನಿಯಂತ್ರಣದಲ್ಲಿ ಇರುವುದಿಲ್ಲವಲ್ಲ? ಇರಲಿ.. ಇರಲಿ. ಅದ್ಸರಿ, ಹಡಗಿನಲ್ಲಿ ಉಳಿದ ದಿನಗಳನ್ನು ಹೇಗೆ ಕಳೆದೆ?’ ಎಂದು ಕೇಳಿದ. ಅದಕ್ಕೆ ಪಿರ್ಕಿ ಹೇಳಿದ – ‘ಮುಂದಿನ ಇಪ್ಪತ್ತು ದಿನ, ನಾವಿಬ್ಬರೂ ಭೇಟಿಯಾಗುತ್ತಿದ್ದೆವು, ರಾತ್ರಿಯೆ ಪರಸ್ಪರರ ತೋಳುಗಳಲ್ಲಿ ಬಂದಿಯಾಗುತ್ತಿದ್ದೆವು. ನಂತರ ಕೆಲಹೊತ್ತು ತಪ್ಪಿತಸ್ಥ ಭಾವದಿಂದ ಮಂಕಾಗಿ ಕುಳಿತಿರುತ್ತಿದ್ದೆವು. ಬಳಿಕ ಇಬ್ಬರೂ ಜೋರಾಗಿ ಅಳುತ್ತಿದ್ದೆವು’.

ಎರಡು ಪ್ರಸಂಗ ಮತ್ತು ಪಾಠ

ಇತ್ತೀಚೆಗೆ ಇದನ್ನು ನಾನು ಪತ್ರಿಕೆಯಲ್ಲಿ ಓದಿದ್ದು. ಪಾಟ್ನಾದ ಡಾಕ್ ಬಂಗ್ಲಾ ಸಮೀಪ ಫೈಜರ್ ರಸ್ತೆಯಲ್ಲಿ ಗ್ರಾಂಡ್ ಪ್ಲಾಜಾ ಎಂಬ ಮಾಲ್ ಇದೆ. ಅದರ ಹೊರಭಾಗದಲ್ಲಿ ಒಂದು ಪುಟ್ಟ ಅಂಗಡಿ ಇದೆ. ದಿನನಿತ್ಯದ ಅಗತ್ಯವಸ್ತುಗಳನ್ನು ಮಾರಾಟ ಮಾಡುವ ಈ ಅಂಗಡಿಗೆ ‘ಗುಡ್ಡೂಶಾಪ್’ ಎಂಬ ಹೆಸರಿದೆ.

ಅದು ಅಲ್ಲಿ ಜನಪ್ರಿಯವೂ ಹೌದು. ಇದರ ಮಾಲೀಕ ಗುಡ್ಡು 22 ವರ್ಷದ ಯುವಕ. ತನ್ನ ಬಾಲ್ಯದಿಂದಲೂ ಈ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದಾನೆ. ಹಿರಿಯ ಸಹೋದರರೆಲ್ಲ ಬೇರೆ ಬೇರೆ ವ್ಯಾಪಾರಗಳಲ್ಲಿ ನಿರತರಾಗಿದ್ದರಿಂದ, ಈಗ ಗುಡ್ಡು ಈ ಅಂಗಡಿಯನ್ನು ಪೂರ್ಣಪ್ರಮಾಣದಲ್ಲಿ ತಾನೇ ನಿಭಾಯಿಸುತ್ತಿದ್ದಾನೆ. ಆದರೆ ಕೋವಿಡ್ ಕಾಲದಲ್ಲಿ ಆತನಿಗೆ ಸಂಕಷ್ಟ ಎದುರಾಯಿತು. ಕೆಲವು ಮಂದಿ ಈತನ ಅಂಗಡಿಯಿಂದ ಉದ್ರಿ ಖರೀದಿ ಮಾಡಿ ನಂತರ ಮರೆತೇ ಬಿಡುತ್ತಿದ್ದರು. ಒಮ್ಮೆ ಬಂದು ಸಾಲ ಮಾಡಿ ಹೋದ ಗ್ರಾಹಕ ವಾಪಸು ಬರುತ್ತಲೇ ಇರಲಿಲ್ಲ. ಇದರಿಂದ ಅಂಗಡಿ ಮತ್ತು ಗ್ರಾಹಕರ ನಡುವಿನ ಸಂಬಂಧ ಹದಗೆಟ್ಟಿವು. ಇಂಥ ಸಂದರ್ಭದಲ್ಲಿ ಗುಡ್ಡು ಒಂದು ಉಪಾಯ ಕಂಡುಕೊಂಡ. ತನಗೂ ನಷ್ಟವಾಗಬಾರದು, ಗ್ರಾಹಕರನ್ನೂ ಕಳೆದುಕೊಳ್ಳಬಾರದು, ಅಂಥದ್ದೊಂದು ಯೋಜನೆಯನ್ನು ರೂಪಿಸಿದ.

ತನ್ನ ಕ್ಯಾಶ್ ಕೌಂಟರಿನ ಬಳಿ ಸಿಸಿಟಿವಿ ಅಳವಡಿಸಿದ. ಅಲ್ಲಿ ನಡೆಯುತ್ತಿದ್ದ ಸಂಭಾಷಣೆಗಳೂ ಅದರಲ್ಲಿ ದಾಖಲಾಗುವಂತೆ ಮಾಡಿದ. ‘ಆಮೇಲೆ ಹಣ ಕೊಡ್ತೇನೆ’ ಎನ್ನುವ ಗ್ರಾಹಕರ ಮಾತೂ ಅಲ್ಲಿ ದಾಖಲಾಗುತ್ತಿತ್ತು. ಅದೇ ವೇಳೆಗೆ ಗ್ರಾಹಕ ಸಾಲ ಪಡೆದ ದಿನಾಂಕ, ಸಮಯ ಎಲ್ಲವನ್ನೂ ಒಂದು ಕಡೆ ಬರೆದಿಡುವ ಪದ್ಧತಿಯನ್ನೂ ಆತ ಆರಂಭಿಸಿದ. ಈ ರೀತಿಯ ದಾಖಲೆಯನ್ನು ಆತ ಮೂರು ತಿಂಗಳ ಕಾಲ ಇಟ್ಟಿರುತ್ತಿದ್ದ. ಗ್ರಾಹಕ ತಾನು ಸಾಲ ಪಡೆದೇ ಇಲ್ಲ ಎಂದು ಹೇಳಿದರೆ, ಆ ಕೂಡಲೇ ನೋಟ್‌ಬುಕ್ ತೆರೆದು ಅಲ್ಲಿ ದಾಖಲಾದ ಸಮಯ-ದಿನಾಂಕದ ಆಧಾರದ ಮೇಲೆ ಸಿಸಿಟಿವಿ ಫೂಟೇಜನ್ನು ತೋರಿಸುತ್ತಿದ್ದ. ಆಗ ಗ್ರಾಹಕ ತಪ್ಪೊಪ್ಪಿಕೊಂಡು ಸಾಲ ಮರುಪಾವತಿ ಮಾಡುತ್ತಿದ್ದ. ಆನಂತರ ಇಂಥ ಪ್ರಕರಣಗಳು ಕ್ರಮೇಣ ಕಮ್ಮಿಯಾದವು.

ಇನ್ನೊಂದು ಘಟನೆ. ಇತ್ತೀಚೆಗೆ ಮುಂಬೈ ಪೋಲೀಸರು ಸಿನಿಮೀಯ ರೀತಿಯಲ್ಲಿ ಅಪರಾಧವೊಂದನ್ನು ಭೇದಿಸಿದರು. ಮುಂಬೈನ ಉಪನಗರ ಕಲ್ಯಾಣ್‌ನಲ್ಲಿ ಸರಗಳ್ಳರು ಹೊಂಚುಹಾಕುತ್ತಿದ್ದಾರೆಂಬ ಮಾಹಿತಿ ಸಿಕ್ಕ ತಕ್ಷಣ 26 ಪೊಲೀಸರ ತಂಡವೊಂದು ಚುರುಕಾಗಿ ಅಲ್ಲಿಗೆ ತೆರಳಿ ಕಾರ್ಯಾ ಚರಣೆ ನಡೆಸಿತು. ಆಂಬುಲೆ ವಾಹನದಲ್ಲಿ ಮಫ್ತಿಯಲ್ಲಿ ವೈದ್ಯರ ದಿರಿಸಿನಲ್ಲಿ ತೆರಳಿದ್ದ ಪೊಲೀಸರು ಇಬ್ಬರು ಸರಗಳ್ಳರನ್ನು ಹಿಡಿಯುವಲ್ಲಿ ಯಶಸ್ವಿ ಯಾದರು. ಆ ಕಳ್ಳರ ಮೇಲೆ ಗುಜರಾತ, ಉತ್ತರ ಪ್ರದೇಶಗಳಲ್ಲಿ ಸುಮಾರು 27 ಪ್ರಕರಣಗಳು ದಾಖಲಾಗಿರುವುದು ಆಮೇಲೆ ತಿಳಿದುಬಂತು.

ಗುಡ್ಡುವಿನಂಥ ಸಣ್ಣ ಅಂಗಡಿ ಮಾಲೀಕನಿಗೆ ಮತ್ತು ಪೊಲೀಸರಿಗೆ ಈ ರೀತಿಯ ಉಪಕ್ರಮ ಜರುಗಿಸುವುದು ಸಾಧ್ಯವಿದೆ ಎಂದ ಮೇಲೆ ನಮ್ಮ ಸರಕಾರಗಳಿಗೆ ಅಪ್ರಾಪ್ತ ವಯಸ್ಕರ ವಿವಾಹಗಳನ್ನು ತಡೆಯುವುದು ಯಾಕೆ ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ವರ್ಷಂಪ್ರತಿ ಒಂದು ಲಕ್ಷಕ್ಕೂ ಅಧಿಕ ಅಪ್ರಾಪ್ತ ಬಾಲೆಯರು ವಿವಾಹಿತರಾಗಿ ಗರ್ಭವತಿಯರಾಗುತ್ತಿದ್ದಾರೆ. ಅಧಿಕಾರಸ್ಥರ ಮೂಗಿನ ಕೆಳಗಡೆಯೇ ಇವೆಲ್ಲ ನಡೆಯುತ್ತಿದ್ದರೂ ಅದನ್ನು ಅರಿಯುವ, ತಡೆಯುವ ಕ್ರಮಕ್ಕೆ ಸರಕಾರಕ್ಕೆ ಮುಂದಾಗದಿರುವುದು ವಿಷಾದಕರ.

ಇಂದಿನ ಹೈಟೆಕ್ ಯುಗದಲ್ಲಿ ಎಲ್ಲ ಮಾಹಿತಿಗಳನ್ನು ಚಿಟಿಕೆ ಹೊಡೆಯುವಷ್ಟರ ಒಳಗಾಗಿ ಅರಿಯುವುದು ಸಾಧ್ಯವಿದೆ. ನನಗಿದು ಗೊತ್ತೇ ಇರಲಿಲ್ಲ ಎಂದು ಹೇಳುವಂತೆಯೇ ಇಲ್ಲ.