Saturday, 23rd November 2024

ವನಿತಾ ಟಿ20 ವಿಶ್ವಕಪ್‌: ಇಂದು ಭಾರತಕ್ಕೆ ಪಾಕಿಸ್ತಾನ ಎದುರಾಳಿ

ಕೇಪ್‌ ಟೌನ್‌: ಹರ್ಮನ್‌ಪ್ರೀತ್‌ ಕೌರ್‌ ಪಡೆ ವನಿತಾ ಟಿ20 ವಿಶ್ವಕಪ್‌ ಕೂಟದ ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ.

ಕಳೆದ ವಿಶ್ವಕಪ್‌ನಲ್ಲೇ ಭಾರತ ಚಾಂಪಿ ಯನ್‌ ಆಗಿ ಹೊರಹೊಮ್ಮಬೇಕಿತ್ತು. ಮೆಲ್ಬರ್ನ್ ಫೈನಲ್‌ನಲ್ಲಿ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿ ಆಸ್ಟ್ರೇಲಿಯಕ್ಕೆ ಶರಣಾಯಿತು.

ವಿಶ್ವಕಪ್‌ ತಯಾರಿಗೆಂದು ನಡೆದ ತ್ರಿಕೋನ ಸರಣಿಯ ಲೀಗ್‌ ಹಂತದಲ್ಲಿ ಅಜೇಯವಾಗಿ ಉಳಿದರೂ ಫೈನಲ್‌ ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಶರಣಾದದ್ದು ತಾಜಾ ಉದಾಹರಣೆ. ಬಳಿಕ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಯಿತು. ಬಾಂಗ್ಲಾದೇಶ ವಿರುದ್ಧ ಕಷ್ಟದಿಂದ ಗೆದ್ದಿತು.

ಆರಂಭಿಕ ಪಂದ್ಯಕ್ಕೂ ಮೊದಲೇ ಭಾರತಕ್ಕೆ ದೊಡ್ಡದೊಂದು ಸಂಕಟ ಎದುರಾಗಿದೆ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಕೈಬೆರಳಿನ ಗಾಯದಿಂದ ಪಾಕ್‌ ವಿರುದ್ಧ ಆಡುವುದು ಅನುಮಾನ ಎಂಬುದಾಗಿ ಕೋಚ್‌ ಹೃಷಿಕೇಶ್‌ ಕಾನಿಟ್ಕರ್‌ ತಿಳಿಸಿದ್ದಾರೆ. ಆದರೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಭುಜದ ನೋವಿನಿಂದ ಚೇತರಿಸಿಕೊಂಡಿದ್ದು, ಆಡಲು ಲಭ್ಯರಿರುವುದು ಸಮಾಧಾನಕರ ಸಂಗತಿ.

ಭಾರತದ ಗುಂಪಿನಲ್ಲಿರುವ ಮತ್ತೊಂದು ಪ್ರಬಲ ತಂಡ ಇಂಗ್ಲೆಂಡ್‌. ನಾಕೌಟ್‌ನ ಒಂದು ಹಂತದಲ್ಲಿ ಪ್ರಬಲ ಆಸ್ಟ್ರೇಲಿಯ ಎದುರಾಗುವುದು ನಿಶ್ವಿ‌ತ. ಆಸ್ಟ್ರೇಲಿಯವನ್ನು ಸೋಲಿಸಿದವರಿಗೆ ವಿಶ್ವಕಪ್‌ ಎಂಬುದು ಎಲ್ಲರ ಲೆಕ್ಕಾಚಾರ.

ಪಾಕಿಸ್ಥಾನವನ್ನು ಮಣಿಸಿ ಶುಭಾರಂಭ ಮಾಡುವುದು ಭಾರತದ ಪಾಲಿನ ಮೊದಲ ಆದ್ಯತೆ. ಶಫಾಲಿ, ರಿಚಾ, ಕೌರ್‌, ದೀಪ್ತಿ, ರೇಣುಕಾ, ಯಾಸ್ತಿಕಾ, ಜೆಮಿಮಾ ಮೊದಲಾದವರ ಸಾಧನೆ ಭಾರತದ ಪಾಲಿಗೆ ನಿರ್ಣಾಯಕವಾಗಿದೆ.

ಪಾಕಿಸ್ಥಾನ ಕೂಡ ಆಭ್ಯಾಸ ಪಂದ್ಯದಲ್ಲಿ 1-1 ಫ‌ಲಿತಾಂಶ ದಾಖಲಿಸಿದೆ. ಬಾಂಗ್ಲಾವನ್ನು ಮಣಿಸಿದ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿತ್ತು. ನಿದಾ ದಾರ್‌, ನಾಯಕಿ ಬಿಸ್ಮಾ ಮರೂಫ್ ಅವರನ್ನು ಪಾಕ್‌ ಹೆಚ್ಚು ಅವಲಂಬಿಸಿದೆ.