Sunday, 24th November 2024

ಕೆಲವರಿಗೆ ಅವರ ಜಾಗ ಯಾವುದೆಂಬುದನ್ನು ತೋರಿಸುವುದು ಹೇಗೆ ?

ನೂರೆಂಟು ವಿಶ್ವ

vbhat@me.com

ಸದ್ದಾಂ ಹತ್ತು ಸಾವಿರಕ್ಕೂ ಹೆಚ್ಚು ಶಿಯಾ ಇರಾಕಿಗಳ ನರಮೇಧಕ್ಕೆ ಕಾರಣನಾಗಿದ್ದ. ತನಗೆ ನಿಷ್ಠ ರಾಗಿಲ್ಲದ ಹಲವು ಜನರಲ್‌ಗಳನ್ನೇ ಆತ ಗಲ್ಲಿಗೆ ಹಾಕಿದ್ದ. ಕೆಲವು ಜನರಲ್‌ಗಳ ಹಣೆಗೆ ಖುದ್ದಾಗಿ ಗುಂಡು ಹೊಡೆದು ಸಾಯಿಸಿದ್ದ. ದಶಕಗಳ ಕಾಲ ಆತ ಇಡೀ ಇರಾಕಿನಲ್ಲಿ ಭಯವನ್ನು ಮೂಡಿಸಿದ್ದ. ಆತನ ಹೆಸರು ಕೇಳಿದರೆ, ಜನ ನಡುಗುತ್ತಿದ್ದರು. ಆತ ತನ್ನನ್ನು ‘ಬುಚರ್ ಆಫ್ ಬಾಗ್ದಾದ್’ ಎಂದು ಕರೆದುಕೊಳ್ಳುತ್ತಿದ್ದ.

ಯಾವುದೇ ಆಫೀಸು ಇರಬಹುದು, ಕಾರ್ಪೊರೇಟ್ ಸಂಸ್ಥೆಯಿರಬಹುದು, ಸರಕಾರವಿರಬಹುದು, ಅಲ್ಲಿ ಮಹತ್ವದ ಹುದ್ದೆಯಲ್ಲಿರುವವವರನ್ನು ಅಧಿಕಾರ ದಿಂದ ಕೆಳಗಿಳಿಸುವುದು ಅಥವಾ ಅಧಿಕಾರವನ್ನು ಮೊಟಕು ಗೊಳಿಸುವುದು ಒಂದು ಸುಂದರ ಕಲೆ. ಅದನ್ನು ಅತ್ಯಂತ ವ್ಯವಸ್ಥಿತವಾಗಿ ಜಾರಿಗೊಳಿಸ ಲಾಗುತ್ತದೆ. ಒಮ್ಮೆ ಸಂಸ್ಥೆಯ ಮುಖ್ಯಸ್ಥರ ಕೆಂಗಣ್ಣಿಗೆ ಗುರಿಯಾದ ನಂತರ, ಆಗುವ ಬದಲಾವಣೆಗಳು ಯಾರಿಗೂ ಗೊತ್ತಾ ಗುವುದಿಲ್ಲ. ಸಂಸ್ಥೆಯ ಉನ್ನತ ಹುದ್ದೆಯಲ್ಲಿರುವವರನ್ನು ಹಠಾತ್ತನೆ ಕೆಲಸದಿಂದ ತೆಗೆದು ಹಾಕುವುದು ಅಷ್ಟು ಸುಲಭವಲ್ಲ. ಕಾರಣ ಅವರಿಗೆ ಸಂಸ್ಥೆಯ ಎಲ್ಲ ಸಂಗತಿ, ವಿದ್ಯಮಾನ, ರಹಸ್ಯ, ಒಳಗುಟ್ಟು, ತಂತ್ರಗಾರಿಕೆ ಗೊತ್ತಿರುತ್ತದೆ. ಅವನ್ನು ಸಂಸ್ಥೆಯ ವಿರುದ್ಧ ಗುರಾಣಿಯಾಗಿ ಬಳಸುವ ಅಪಾಯವಿರುತ್ತದೆ.

ಪ್ರತಿಸ್ಪರ್ಧಿ ಸಂಸ್ಥೆಗಳು ಇಂಥ ಪ್ರಮುಖ ಹುzಯಲ್ಲಿರುವವರನ್ನು ಸೆಳೆದು, ಆ ಪಟ್ಟುಗಳನ್ನು ಕರಗತ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಪ್ರತಿಸ್ಪರ್ಧಿ ಸಂಸ್ಥೆಗೆ ಹೋಗಿ, ತಮ್ಮ ಸಂಸ್ಥೆಯ ಎಲ್ಲಾ ವಿವರಗಳನ್ನು ಬಾಯಿಬಿಡಬಹುದು ಎಂಬ ಭಯ ಕೂಡ ಎಲ್ಲ ಸಂಸ್ಥೆಗಳಿಗೂ ಇದ್ದೇ ಇರುತ್ತದೆ. ಹೀಗಾಗಿ ಉನ್ನತ ಹುzಯಲ್ಲಿರುವವರನ್ನು ಕೆಲಸದಿಂದ ತೆಗೆದು ಹಾಕುವುದು ಅಥವಾ ನಿಷ್ಕ್ರಿಯರನ್ನಾಗಿಸುವುದು, ಕಾರ್ಪೊರೇಟ್ ವಲಯದಲ್ಲಿ ಒಂದು ಮಹಾ ಕಲೆ ಎಂದೇ ಪರಿಗಣಿತವಾಗಿದೆ. ಈ ಮಾತನ್ನು ಹೇಳುವಾಗ, ನನಗೆ ‘ಪ್ರಜಾವಾಣಿ’ ಸಂಪಾದಕರಾಗಿದ್ದ ವೈಎನ್ಕೆ ಹೇಳುತ್ತಿದ್ದ ಮಾತು ನೆನಪಾಗುತ್ತದೆ.

ಒಂದು ದಿನ ಇದ್ದಕ್ಕಿದ್ದಂತೆ, ಆಡಳಿತ ಮಂಡಳಿ ಪ್ರಮುಖರೊಬ್ಬರು ಬಂದು, ‘ವೈಎನ್ಕೆ ಅವರೇ, ನಿಮ್ಮನ್ನು ಸಂಪಾದಕೀಯ ಸಲಹೆಗಾರರನ್ನಾಗಿ ನೇಮಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರಂತೆ. ಆಗಲೇ ವೈಎನ್ಕೆ ಅವರಿಗೆ ಗೊತ್ತಾಗಿದ್ದು, ತಾವು ಇನ್ನೇನು ಕೆಲ ದಿನಗಳಲ್ಲಿ ನಿವೃತ್ತನಾಗು
ತ್ತಿದ್ದೇನೆಂದು. ಇದರಲ್ಲಿ ಸಂಪಾದಕರನ್ನು ಕಟ್ಟಿ ಹಾಕುವ ಮತ್ತು ಇದ್ದ ಸಂಸ್ಥೆಯಲ್ಲಿ ನಿಷ್ಕ್ರಿಯರನ್ನಾಗಿ ಮಾಡುವ ತಂತ್ರ ಇತ್ತು. ಸಾಮಾನ್ಯವಾಗಿ ನಿವೃತ್ತಿಯ ಅಂಚಿನಲ್ಲಿರುವವರು ತಮ್ಮ ಮುಂದಿನ ನಿಲ್ದಾಣವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ.

ಅಂಥವರಿಗೆ ಈ ರೀತಿಯ ಸಲಹೆಗಾರ ಹುದ್ದೆಯ ತುಪ್ಪವನ್ನು ಮೂಗಿಗೆ ಸವರಿ, ಅವರು ಅಲ್ಲಿಯೇ ಉಳಿಯುವಂತೆ ಮಾಡಲಾಗುತ್ತದೆ. ಅವರನ್ನು ಅಷ್ಟೇನೂ ಮಹತ್ವವಲ್ಲದ (ಸಲಹೆಗಾರ) ಹುದ್ದೆಯಲ್ಲಿ ಒಂದೆರಡು ವರ್ಷ ಕುಳ್ಳಿರಿಸಿ, ಡಮ್ಮಿಯಾಗಿ ಮಾಡಲಾಗುತ್ತದೆ. ಇದರಿಂದ ಅವರ ಮಾರ್ಕೆಟ್ ವ್ಯಾಲ್ಯೂ ತನ್ನಷ್ಟಕ್ಕೆ ಕಮ್ಮಿಯಾಗಿ ಅವರು ಯಾರಿಗೂ ಬೇಡದವರಾಗುತ್ತಾರೆ. ನಂತರ ಅವರನ್ನು ಸಂಸ್ಥೆಯಿಂದ (ಗೌರವಯುತವಾಗಿ?) ಹೊರ ಹಾಕಲಾಗುತ್ತದೆ. ಈ ತಂತ್ರವನ್ನು ಎಲ್ಲ ಸಂಸ್ಥೆಗಳೂ ಅನುಸರಿಸುತ್ತವೆ.

ತಮ್ಮ ಆ ಸ್ವಾನುಭವವನ್ನು ವೈಎನ್ಕೆಯವರು ಸುಮಾರು ಮೂವತ್ತೈದು ವರ್ಷಗಳ ಹಿಂದೆಯೇ ಹೇಳುತ್ತಿದ್ದರು. ಈಗಂತೂ ಅದನ್ನು ಒಂದು Fine art ಎಂಬ ರೀತಿಯಲ್ಲಿ ನುಣುಪುಗೊಳಿಸಿ, ಹೊಳಪು ನೀಡಲಾಗಿದೆ. ‘ಟೈಮ್ಸ ಆಫ್ ಇಂಡಿಯಾ’ ಪತ್ರಿಕೆಯನ್ನು ಪ್ರಕಟಿಸುವ ಬೆನೆಟ್ ಕೋಲ್ಮನ್ ಅಂಡ್ ಕಂಪನಿ ಲಿಮಿಟೆಡ್ ಸಂಸ್ಥೆಯೂ ಇದೇ ತಂತ್ರವನ್ನು ಬಳಸುತ್ತದೆ. ಹೊಸ ಸಂಪಾದಕನನ್ನು ನೇಮಿಸುವಾಗ, ಹಿಂದೆ ಇದ್ದ ಸಂಪಾದಕನನ್ನು ಏಕಾಏಕಿ ಮನೆಗೆ ಕಳಿಸುವುದಿಲ್ಲ. ಹೊಸ ಸಂಪಾದಕನನ್ನು ಎರಡು-ಮೂರು ತಿಂಗಳು ಮೊದಲೇ ನೇಮಿಸಿಕೊಂಡು, ಆತನನ್ನು ಹಳೆಯ ಸಂಪಾದಕನ ಗರಡಿಯಲ್ಲಿ ಇಟ್ಟುಕೊಂಡು, ನಂತರ ಹಳಬನನ್ನು ಮನೆಗೆ ಕಳಿಸಲಾಗುತ್ತದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಏನಾಗುತ್ತದೆ ಅಂದ್ರೆ, ಹೊಸ ಸಂಪಾದಕ ಬರುತ್ತಾನೆ ಎಂದ ಕೂಡಲೇ, ಹಳಬನಾದವನು ತಕ್ಷಣ ರಜೆ ಹಾಕಿ ಹೋಗಿಬಿಡುತ್ತಾನೆ ಅಥವಾ ಬೇರೆ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನಿಸು ತ್ತಾನೆ.

ಉನ್ನತ ಹುದ್ದೆಯಲ್ಲಿರುವವರನ್ನು ಪಳಗಿಸುವುದು ಯಾವತ್ತೂ ಒಂದು ವಿಶೇಷ ಪರಿಣತಿಯಾಗಿ ಪರಿಗಣಿಸಿರುವ ಕಾರ್ಪೊರೇಟ್ ಜಗತ್ತಿನಲ್ಲಿ, ಮನೆಗೆ ಕಳಿಸುವಾಗಲೂ, ಒಂದು exit interview ಮಾಡಿ, ಬಿಟ್ಟು ಹೋಗುವ ಮನಸ್ಥಿತಿಯನ್ನೂ ಅವರ ಬಾಯಿಂದಲೇ ಹೊರಹಾಕಿಸಿ, ಬೈಬೈ ಎನ್ನುತ್ತಾರೆ. ನನಗೆ ನಿಜಕ್ಕೂ ಬೋಲ್ಡ್ ಎಂದು ಅನಿಸಿದ್ದು ‘ಕನ್ನಡಪ್ರಭ’  ಒಡೆತನದ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆಯ ನಿರ್ಧಾರ. ಕೆಲ ವರ್ಷಗಳ ಹಿಂದೆ,  ಸಂಪಾದಕರೊಬ್ಬರು ಇರುವಾಗಲೇ, ‘ಸಂಪಾದಕರು ಬೇಕಾಗಿದ್ದಾರೆ’ ಎಂಬ ಜಾಹೀರಾತನ್ನು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ನೀಡಿ ‘ದಿಟ್ಟತನ’ ಮೆರೆದಿತ್ತು. ಆ ಜಾಹೀರಾತನ್ನು ನೋಡುತ್ತಿದ್ದಂತೆ, ಯಾವ ಸಂಪಾದಕನೂ ಒಂದು ಕ್ಷಣ ಕೂಡ ತನ್ನ ಕುರ್ಚಿಯಲ್ಲಿ ಕುಳಿತಿರಲಾರ. ರಾಜೀನಾಮೆ ಪತ್ರವನ್ನು ಮುಖಕ್ಕೆ ಎಸೆದು ಮನೆಗೆ ಬಂದುಬಿಡುತ್ತಾನೆ. ಆದರೆ ಆ ಸಂಪಾದಕರು ಇನ್ನೂ ಮೂರೂವರೆ ತಿಂಗಳು ಅಲ್ಲಿಯೇ ಇದ್ದು, ತಮ್ಮ ಕಾಂಟ್ರಾಕ್ಟ್ ಅವಧಿ ಮುಗಿಸಿಯೇ ಮನೆಗೆ ಹೋಗಿದ್ದರು. ಆಡಳಿತ ಮಂಡಳಿಗೆ ಈ ವಿಷಯ ಗೊತ್ತಿದ್ದುದರಿಂದಲೇ, ಬೇರೆ ಪತ್ರಿಕೆಯಲ್ಲಿ ‘ಸಂಪಾದಕರು ಬೇಕಾಗಿದ್ದಾರೆ’ ಜಾಹೀರಾತನ್ನು ನೀಡಿರಬೇಕು.

ಯಾವುದೇ ಹುದ್ದೆಯಲ್ಲಿರುವವರಿಗೆ ನೋಟೀಸ್ ನೀಡದೇ, ಗದರದೇ, ಜಗಳವಾಡದೇ, ಸುಲಭವಾಗಿ ಮನೆಗೆ ಕಳಿಸುವ ವಿಧಾನವಿದು. ಪತ್ರಿಕೆಗಳು ಸೇರಿದಂತೆ, ಅನೇಕ ಸಂಸ್ಥೆಗಳಲ್ಲಿ ಈಗಲೂ ಜಾರಿಯಲ್ಲಿರುವ ವಿಧಾನವಿದು. ಕಚೇರಿಯಲ್ಲಿರುವ ಒಬ್ಬ ಜನರಲ್ ಮ್ಯಾನೇಜರ್‌ನನ್ನು ಕೆಲಸದಿಂದ ತೆಗೆದು ಹಾಕಬೇಕೆಂದರೆ, ‘ಜನರಲ್ ಮ್ಯಾನೇಜರ್ ಬೇಕಾಗಿದ್ದಾನೆ’ ಎಂದು ಜಾಹೀರಾತನ್ನು ನೀಡಿದರಾಯಿತು. ಸ್ವಾಭಿಮಾನ ಇರುವ ಯಾವ ಜನರಲ್ ಮ್ಯಾನೇಜರ್ ಕೂಡ ಮರುದಿನ ಆಫೀಸಿಗೆ ಬರಲಾರ. ಪತ್ರಿಕಾ ಸಂಸ್ಥೆಯಲ್ಲಿ ಈ ‘ಅಸ್ತ್ರ’ವನ್ನು ಜಿಲ್ಲಾ ವರದಿಗಾರರ ಮೇಲೆ ಪ್ರಯೋಗಿಸಲಾಗುತ್ತದೆ. ಈ ಜಾಹೀರಾತನ್ನು ಓದಿದ ಜಿಲ್ಲಾ ವರದಿಗಾರ ತಕ್ಷಣ ಬೆಂಗಳೂರಿಗೆ ಕಚೇರಿಗೆ ಓಡಿ ಬರುತ್ತಾನೆ. ಹಾಗೆ ಬಂದಾಗ, ಸಂಪಾದಕರು ಅವನನ್ನು ಭೇಟಿ ಮಾಡದೇ, ಎಚ್ ಆರ್ ಅವರನ್ನು ಭೇಟಿ ಮಾಡಿ ಅಂದರೆ, ಸಂದೇಶ ಗೋಡೆ ಮೇಲೆ ಬರೆದಷ್ಟು ಢಾಳ! ಇದು ಉಢಾಳ ಪತ್ರಕರ್ತರನ್ನು ಹ್ಯಾಂಡಲ್ ಮಾಡುವ ರೀತಿಗಳಂದು.

‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕಾ ಸಮೂಹದ ಮಾಲೀಕರಾದ ರಾಮನಾಥ ಗೋಯೆಂಕಾ ಅವರು, ಟೆಲಿಪ್ರಿಂಟರ್ ಸಂದೇಶದ ಮೂಲಕ ಸಂಪಾದಕ ಅರುಣ್ ಶೌರಿಯವರನ್ನು ವಜಾಗೊಳಿಸಿದ್ದರು! ಶೌರಿಯವರಿಗೆ ವಜಾ ಆದೇಶವನ್ನು ತಲುಪಿಸುವ ಮುನ್ನ, ಟೆಲಿಪ್ರಿಂಟರ್ ಆಪರೇಟರ್ ಆಫೀಸಿ
ನಲ್ಲಿರುವ ಎಲ್ಲರಿಗೂ ಆ ಸಂದೇಶವನ್ನು ತಲುಪಿಸಿದ್ದ. ‘ಡೆಕ್ಕನ್ ಕ್ರಾನಿಕಲ್’ ಸಂಸ್ಥೆಯ ಮಾಲೀಕ ವೆಂಕಟ್ರಾಮ್ ರೆಡ್ಡಿ, ಸಂಪಾದಕ ಎಂ.ಜೆ.ಅಕ್ಬರ್ ಅವರನ್ನು ನೋಟೀಸ್ ಕೊಡದೇ, ಸುಲಭವಾಗಿ ವಜಾಗೊಳಿಸಿದ್ದರು. ಹಿಂದಿನ ರಾತ್ರಿ ಅಕ್ಬರ್ ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದ್ದರು.

ಮರುದಿನ ಬೆಳಗ್ಗೆ ಆಫೀಸಿಗೆ ಹೋಗುತ್ತಿರುವಾಗ, ಅವರ ಸ್ನೇಹಿತನೊಬ್ಬ ಫೋನ್ ಮಾಡಿ, ‘ಇಂಪ್ರಿಂಟ್ (ಪ್ರಿಂಟರ್, ಪಬ್ಲಿಷರ್, ಸಂಪಾದಕರ ಹೆಸರು ನಮೂದಿಸಿರುವ ಜಾಗ) ನಲ್ಲಿ ನಿಮ್ಮ ಹೆಸರೇ ಇಲ್ಲವಲ್ಲ?’ ಎಂದು ಹೇಳಿದನಂತೆ. ಆಗಲೇ ಅಕ್ಬರ್‌ಗೆ ತಮ್ಮನ್ನು ಸಂಪಾದಕ ಹುದ್ದೆಯಿಂದ ವಜಾ ಗೊಳಿಸಿರುವುದು ಗೊತ್ತಾಗಿದ್ದು!

ತಮ್ಮನ್ನು ‘ಟೈಮ್ಸ್ ಆಫ್ ಇಂಡಿಯಾ’ ಮಾಲೀಕರು ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಸಂಪಾದಕತ್ವದಿಂದ ಹೇಗೆ ಕೆಳಗಿಳಿಸಿದರು ಎಂಬುದನ್ನು ಖುಷವಂತ್ ಸಿಂಗ್ ತಮ್ಮ ಆತ್ಮಕಥೆಯಲ್ಲಿ ಬಣ್ಣಿಸಿದ್ದಾರೆ. ಸಾಮಾನ್ಯವಾಗಿ ಸಂಪಾದಕರ ಟೇಬಲ್ ಮೇಲೆ ಆಯಾ ದಿನದ ಎಲ್ಲಾ ಪತ್ರಿಕೆಗಳ ಒಂದು ಸೆಟ್ ಇರುತ್ತದೆ. ಉಳಿದ ಸಿಬ್ಬಂದಿಗೆ ಇನ್ನೊಂದು ಸೆಟ್. ಆ ದಿನ ಸಿಂಗ್ ತಮ್ಮ ಕ್ಯಾಬಿನ್‌ಗೆ ಬಂದಾಗ ಪೇಪರ್ ಸೆಟ್ ಇರಲಿಲ್ಲ. ಆ ಬಗ್ಗೆ ಅಟೆಂಡರ್‌ನನ್ನು ಕೇಳಿದರೆ, ‘ಇಂದಿನಿಂದ ಇಡೀ ಆಫೀಸಿಗೆ ಒಂದೇ ಸೆಟ್ ನೀಡುವಂತೆ ಸೂಚಿಸಲಾಗಿದೆ’ ಎಂದು ಹೇಳಿದ.

ಆಗಲೇ ಖುಷವಂತ್ ಸಿಂಗ್‌ಗೆ ಮುಂದೆ ಬರಲಿರುವ ಸಂದೇಶದ ಸುಳಿವು ಸಿಕ್ಕಿತ್ತು. ಅದಾಗಿ ಹದಿನೈದು ದಿನಗಳ ಬಳಿಕ, ಅವರ ಡ್ರೈವರ್ ಬಂದು, ‘ಸರ್, ಇಂದೇ ನನ್ನ ಕೊನೆಯ ಡ್ಯೂಟಿ. ನಾಳೆಯಿಂದ ನಾನು ಬರೊಲ್ಲ’ ಎಂದ. ಇದು ಒಬ್ಬರನ್ನು ಸಂಸ್ಥೆಯಿಂದ ಹೊರ ಹಾಕುವ ಅತ್ಯಂತ ಸರಳ, ಸುಲಭ ಮತ್ತು ಪರಿಣಾಮಕಾರಿ ವಿಧಾನ!

ಚುನಾವಣೆ ಸಮೀಪಿಸುತ್ತಿರುವಾಗ ಯಾವುದಾದರೂ ಪತ್ರಿಕಾ ಸಂಸ್ಥೆ ತನ್ನ ಸಂಪಾದಕನಿಗೆ ‘ರಜಾ ಬೇಕೆಂದು ನೀವು ಬಹಳ ದಿನಗಳಿಂದ ಹೇಳುತ್ತಿದ್ದೀರಿ. ಈಗ ನೀವು ಬಯಸಿದರೆ ರಜೆ ತೆಗೆದುಕೊಳ್ಳಬಹುದು’ ಎಂದು ಹೇಳಿದರೆ, ಸಂಪಾದಕ ಶಾಶ್ವತ ರಜಾ ಹೋಗಬಹುದು ಎಂದರ್ಥ. ಸಂಸ್ಥೆಯ ಮುಖ್ಯಸ್ಥ ರಾಗಿದ್ದವರನ್ನು  ಪಳಗಿಸುವುದು ಒಂದು ದೊಡ್ಡ ಕಲೆ.

ಇಲ್ಲಿ ನಿಮಗೆ ಇದಕ್ಕಿಂತ ತುಸು ಭಿನ್ನವಾದ ಬೇರೊಂದು ಪ್ರಸಂಗವನ್ನು ಹೇಳಲು ಬಯಸುತ್ತೇನೆ. ಕೆಲ ದಿನಗಳ ಹಿಂದೆ, ನಾನು ’Make Your Bed : Little things that can change your life…and may be the world’ ಎಂಬ ಪುಸ್ತಕವನ್ನು ಓದಿದ್ದೆ. ಇದನ್ನು ಬರೆದವರು ವಿಲಿಯಮ್ ಮೆಕ್ರೇವನ್. ಅವರು ಅಮೆರಿಕದ ನೌಕಾಪಡೆಯಲ್ಲಿ ನಿವೃತ್ತ ಅಡ್ಮಿರಲ್ ಆಗಿದ್ದವರು. ಅವರು ತಾವು ಹೇಗೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಪಳಗಿಸಿದೆ ಎಂಬು ದನ್ನು ತಮ್ಮ ಕೃತಿಯಲ್ಲಿ ಬರೆದಿದ್ದು ನೆನಪಾಗುತ್ತಿದೆ. ಸದ್ದಾಂ ಅಮೆರಿಕದ ಯುದ್ಧ ಕೈದಿಯಾಗಿ ಒಂದು ವಾರವಾಗಿತ್ತು. ಸದ್ದಾಂ ಅಧ್ಯಕ್ಷನಾಗಿದ್ದಾಗ ಯಾವ ಪೋಷಾಕು ಧರಿಸುತ್ತಿದ್ದನೋ, ಪದಚ್ಯುತನಾದ ಬಳಿಕವೂ ಹಾಗೆ ಇರಬೇಕೆಂದು ಬಯಸುತ್ತಿದ್ದ. ಒಂದು ದಿನ ಆತನನ್ನು ಕೈದಿಯಾಗಿ ಇರಿಸಿದ ಕೋಣೆಗೆ ಇರಾಕಿನ ನೂತನ ಸರಕಾರದ ಅಧಿಕಾರಿಗಳು ಆಗಮಿಸಿದರು.

ಸದ್ದಾಂ ತಾನು ಇನ್ನೂ ಅಧ್ಯಕ್ಷ ಎಂಬಂತೆ ಮಾತಾಡುತ್ತಿದ್ದ. ಅವರನ್ನು ಕಂಡ ಕೂಡಲೇ ವಿಕಟವಾಗಿ ನಗುತ್ತಿದ್ದ. ಕೈಗೆ ಸಿಕ್ಕಿದ ವಸ್ತುವನ್ನು ತಮ್ಮತ್ತ ಎಸೆಯಬಹುದು ಎಂಬ ಭಯದಿಂದ ಅವರು ಆತನಿಂದ ತುಸು ದೂರದಲ್ಲಿಯೇ ಕುಳಿತುಕೊಂಡರು. ಇದು ಆತನಲ್ಲಿ ಮತ್ತಷ್ಟು ಮದವನ್ನು ಹುಟ್ಟಿಸಿತು. ಈಗಲೂ ಅಧಿಕಾರಿಗಳು ತನ್ನನ್ನು ಕಂಡರೆ ಭಯಪಟ್ಟುಕೊಳ್ಳುತ್ತಾರಲ್ಲ ಎಂದು ಅವನಲ್ಲಿ ಮತ್ತಷ್ಟು ಅಹಂ ಮೂಡುವಂತೆ ಮಾಡಿತು. ಸದ್ದಾಂ ಹತ್ತು ಸಾವಿರಕ್ಕೂ ಹೆಚ್ಚು ಶಿಯಾ ಇರಾಕಿಗಳ ನರಮೇಧಕ್ಕೆ ಕಾರಣನಾಗಿದ್ದ. ತನಗೆ ನಿಷ್ಠರಾಗಿಲ್ಲದ ಹಲವು ಜನರಲ್‌ಗಳನ್ನೇ ಆತ ಗಲ್ಲಿಗೆ ಹಾಕಿದ್ದ.

ಕೆಲವು ಜನರಲ್‌ಗಳ ಹಣೆಗೆ ಖುzಗಿ ಗುಂಡು ಹೊಡೆದು ಸಾಯಿಸಿದ್ದ. ದಶಕಗಳ ಕಾಲ ಆತ ಇಡೀ ಇರಾಕಿನಲ್ಲಿ ಭಯವನ್ನು ಮೂಡಿಸಿದ್ದ. ಆತನ ಹೆಸರು ಕೇಳಿದರೆ, ಜನ ನಡುಗುತ್ತಿದ್ದರು. ಆತ ತನ್ನನ್ನು ‘ಬುಚರ್ ಆ- ಬಾಗ್ದಾದ್’ (ಬಾಗ್ದಾದಿನ ಕಟುಕ) ಎಂದು ಕರೆದುಕೊಳ್ಳುತ್ತಿದ್ದ. ಸದ್ದಾಂನ ಬೆಂಬಲಿಗರು ಜನರಲ್ಲಿ ಅದೆಂಥ ಭಯ, ಆತಂಕವನ್ನು ಹುಟ್ಟಿಸಿದ್ದರೆಂದರೆ, ಸಾವಿರಾರು ಜನ ದೇಶವನ್ನೇ ಬಿಟ್ಟಿದ್ದರು. ಇಡೀ ಇರಾಕಿನಲ್ಲಿ ಸದ್ದಾಂ ವಿರುದ್ಧ
ಸೊತ್ತುವ, ಸವಾಲು ಹಾಕುವ ಒಬ್ಬನೇ ಒಬ್ಬನೂ ಇರಲಿಲ್ಲ.

ಆತನಿಗೆ ತಾನು ಈಗ ಅಧ್ಯಕ್ಷ ಅಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುತ್ತಿರಲಿಲ್ಲ. ಅಂದು ಸದ್ದಾಂನನ್ನು ಭೇಟಿಯಾಗಲು ಬಂದ ನೂತನ ಸರಕಾರದ ಅಽಕಾರಿಗಳು ಕೂಡ ಅವನಿಗೆ ಹೆದರುತ್ತಿದ್ದರು. ಸದ್ದಾಂ ಅಮೆರಿಕ ಸೇನೆಯ ಅಧಿಕಾರಿಗಳ ಮೇಲೂ ಹರಿಹಾಯುತ್ತಿದ್ದ. ಆತನ ಮುಖದಲ್ಲಿ ಪಶ್ಚಾತ್ತಾಪ
ಇರಲಿಲ್ಲ. ತಾನೊಬ್ಬ ನರಹಂತಕ ಎಂಬ ಲವಲೇಶವೂ ಆತನಲ್ಲಿ ಮೂಡಿರಲಿಲ್ಲ. ತಾನು ಮಾಡಿದ್ದೇ ಸರಿ ಎಂದು ಆತ ಭಾವಿಸಿದ್ದ. ಜಗತ್ತಿನ ಮಾಧ್ಯಮ ತನ್ನ ಬಗ್ಗೆ ವರದಿ ಮಾಡುವುದನ್ನು ಆತ ಇಷ್ಟಪಡುತ್ತಿದ್ದ. ಕೈದಿಯಾಗಿಯೂ ತನಗೆ ಇಷ್ಟೆ ಪ್ರಚಾರ ಸಿಗುತ್ತಿದೆಯಲ್ಲ ಎಂದು ಸಂತಸಪಡುತ್ತಿದ್ದ.
ಇಂಥ ಸದ್ದಾಂನನ್ನು ಪಳಗಿಸುವ, ನಿಭಾಯಿಸುವ ಹೊಣೆಯನ್ನು ಮೆಕ್ರೇವನ್‌ಗೆ ವಹಿಸಲಾಯಿತು.

ಆತ ಮಾಡಿದ ಮೊದಲ ಕೆಲಸವೆಂದರೆ, ಸದ್ದಾಂನನ್ನು ಮಾಜಿ ಅಧ್ಯಕ್ಷ ಎಂದು ಭಾವಿಸದೇ, ಒಬ್ಬ ಸಾಮಾನ್ಯ ಕೈದಿಯಾಗಿ ಪರಿಗಣಿಸಿದ್ದು. ಆತನ ಬಗ್ಗೆ ಹೊರ ಜಗತ್ತಿಗೆ ಯಾವ ಮಾಹಿತಿಯನ್ನೂ ಕೊಡದೇ ಇದ್ದಿದ್ದು. ಯಾರೂ ಅವನ ಬಗ್ಗೆ ಚರ್ಚಿಸದಂತೆ ಮಾಡಿದ್ದು. ಅದಕ್ಕೂ ಮೊದಲು, ಸದ್ದಾಂ ನಡೆದು ಹೋಗುತ್ತಿದ್ದರೆ, ಅಮೆರಿಕದ ಸೈನಿಕರು ಸಲಾಮು ಹೊಡೆಯುತ್ತಿದ್ದರು. ಯಾರೂ ಅವನಿಗೆ ಪ್ರಾಮುಖ್ಯ ಕೊಡಕೂಡದು ಎಂದು ಮೆಕ್ರೇವನ್ ಆದೇಶ ನೀಡಿದ.

ಆತನನ್ನು ಅರಮನೆಯಿಂದ ಒಂದು ಸಾಮಾನ್ಯ ಕೋಣೆಗೆ ವರ್ಗಾಯಿಸಿದ. ಆತ ವಿಕಟವಾಗಿ ನಕ್ಕರೂ, ಯಾರೂ ಪ್ರತಿಕ್ರಿಯೆ ನೀಡಕೂಡದು ಎಂದು
ಆದೇಶಿಸಿದ. ಒಂದು ತಿಂಗಳ ಬಳಿಕ, ಸದ್ದಾಂ ಬಗ್ಗೆ ಸುದ್ದಿ ಬರುವುದು ಕ್ರಮೇಣ ನಿಂತಿತು. ಆತನ ಪೌರುಷಗಳ ವರದಿ ಸ್ತಬ್ಧವಾಯಿತು. ಸದ್ದಾಂ ಸದಾ ಮಿಲಿಟರಿ ಸರ್ವಾಧಿಕಾರಿ ಪೋಷಾಕಿನಲ್ಲಿ ಕಂಗೊಳಿಸುತ್ತಿದ್ದ. ಕೈದಿಯಾದರೂ ತನ್ನ ಆ ಪೋಷಕನ್ನು ಬಿಟ್ಟಿರಲಿಲ್ಲ. ಮೂರು ತಿಂಗಳ ಬಳಿಕ, ಮೆಕ್ರೇವನ್ ಸದ್ದಾಂನ ಒಂದು ಫೋಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ.

ಆ ಫೋಟೋದಲ್ಲಿ ಆತನ ಕೂದಲುಗಳು ಕೆದರಿದ್ದವು, ಮಿರಮಿರ ಮಿಂಚುವ ಮುಖದ ತುಂಬೆಲ್ಲ ಬಿಳಿ ಗಡ್ಡ ಆವರಿಸಿತ್ತು. ಆತನ ಅಂಗಿ ಹರಿದು ಹೋಗಿತ್ತು. ನಿದ್ದೆಯಿಲ್ಲದೇ ಕಣ್ಣುಗಳು ನಿಸ್ತೇಜವಾಗಿದ್ದವು. ಸದ್ದಾಂ ಥೇಟ್ ಬಿಕಾರಿಯಂತೆ, ಭಿಕ್ಷುಕನಂತೆ ಕಾಣುತ್ತಿದ್ದ. ಕನ್ನಡಿಯಿಲ್ಲದ ಕೋಣೆಯಲ್ಲಿ
ತಿಂಗಳುಗಟ್ಟಲೆ ಬಂದಿಯಾಗಿದ್ದ ಸದ್ದಾಂ, ಆ ಫೋಟೋವನ್ನು ನೋಡಿ ಕಿಟಾರನೆ ಕಿರುಚಿಬಿಟ್ಟ. ‘ದಯವಿಟ್ಟು ಈ ಫೋಟೋವನ್ನು ಯಾರಿಗೂ ತೋರಿಸಬೇಡಿ’ ಎಂದು ಅಂಗಲಾಚಿದ.

ಅಲ್ಲಿಗೆ ಸದ್ದಾಂನ ಆಟಾಟೋಪಗಳು ನಿಂತು ಹೋದವು . ಜನ ಬಹಿರಂಗವಾಗಿ ಅವನ ವಿರುದ್ಧ ಮಾತಾಡಲಾರಂಭಿಸಿದರು. ಆತನಿಗೆ ತಕ್ಕ ಶಾಸ್ತಿಯಾಯ್ತು ಎಂದು ಜರೆಯಲಾರಂಭಿಸಿದರು. ಅದಾಗಿ ಒಂದು ವರ್ಷದ ನಂತರ, ಇರಾಕಿಗಳು ಆತನನ್ನು ಬಹಿರಂಗವಾಗಿ ನೇಣಿಗೆ ಹಾಕಿ ಸಾಯಿಸಿದರು. ಕೆಲವರಿಗೆ ಅವರ ಜಾಗ ಯಾವುದು ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ಇನ್ನು ಕೆಲವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡಬೇಕಾಗುತ್ತದೆ. ‘ಲೈಫ್
ಬಾಯ್’ ಸೋಪನ್ನು ವಾಷ್ ಬೇಸಿನ್ ಮೇಲಿಟ್ಟ ಹಾಗೆ!

 
Read E-Paper click here