Thursday, 12th December 2024

ರಾತ್ರಿ ಹೊತ್ತು ನಡೆಯುವ ಸೆಟ್ಟೆ ಕುಟ್ಟುವ ಹಬ್ಬ !

ಶಶಾಂಕಣ

shashidhara.halady@gmail.com

ಪ್ರತಿಯೊಬ್ಬರೂ ಕನಿಷ್ಠ ಒಂದು ಸೆಟ್ಟೆಯನ್ನಾದರೂ ಆ ರಾತ್ರಿ ಬೇರೆಯವರ ಮನೆಯತ್ತ ಎಸೆಯಬೇಕು ಎಂಬುದು ಜನಪದ ನಂಬಿಕೆ. ಜತೆಗೆ, ಅಂದು ನಡೆಸುವ ಕುಚೋದ್ಯಗಳಿಗೆ ಕಾನೂನಿನ ಕಟ್ಟಿಲ್ಲ ಎಂಬ ಅಲಿಖಿತ ನಿಯಮ!

ಇನ್ನೇನು ಚಳಿಗಾಲ ಕಳೆದು, ಬೇಸಗೆ ಬರುತ್ತಿದೆ ಎಂದರೆ, ಮೊದಲು ಸ್ವಾಗತಿಸುವುದು ಶಿವರಾತ್ರಿ. ಶಿವರಾತ್ರಿಯ ದಿನದಿಂದ ಸೆಕೆ ಆರಂಭ ಎಂಬ ನಮ್ಮೂರಿನ ನಂಬಿಕೆಯು, ಬಹುಮಟ್ಟಿಗೆ ನಿಜವಾಗುತ್ತಿತ್ತು, ಶಿವರಾತ್ರಿಯ ತನಕ ಹೌದೋ ಎಲ್ಲವೊ ಎಂದು ಇರುವ ಚಳಿಯು ಒಮ್ಮೆಗೇ ಕಣ್ಮರೆಯಾಗಿ, ಮರುದಿನ ದಿಂದ ಸೆಕೆ ಆರಂಭವಾಗುವ ರೀತಿ ಒಂದು ಪುಟ್ಟ ವಿಸ್ಮಯ.

ನಮ್ಮ ಹಳ್ಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯ, ದೇಶದಲ್ಲಿ ಆಚರಣೆಗೊಳ್ಳುವ ಶಿವರಾತ್ರಿ, ನಿಜ ದೃಷ್ಟಿಯಲ್ಲಿ ಒಂದು ಜನಪದರ ಹಬ್ಬ. ಜಾಗರಣೆ, ಉಪವಾಸಗಳು ಶಿವರಾತ್ರಿಯ ಅಂಗಗಳು. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಈ ಹಬ್ಬದ ಆಚರಣೆ. ನಮ್ಮ ಹಳ್ಳಿಯ ಶಿವರಾತ್ರಿ ಎಂದರೆ, ಜನಪದರು ಮತ್ತು ಗ್ರಾಮೀಣರು ಸಂತಸದಿಂದ ಆಟವಾಡುತ್ತಾ, ಕುಚೋದ್ಯದ ಚಟುವಟಿಕೆಗಳನ್ನು ನಡೆಸುತ್ತಾ, ಒಂದು ದಿನವಿಡೀ ಉಲ್ಲಾಸ ದಿಂದ ಕಳೆಯುವ ರೀತಿಯೇ ಅನುಕರಣೀಯ.

ಇದೊಂದು ಹಬ್ಬವು ಜನಪದ ಆಟಗಳನ್ನೇ ಮೈಗೂಡಿಸಿಕೊಂಡು, ಜನಪದ ಕ್ರೀಡೆಗಳಿಗೆ ಅವಕಾಶ ಕೊಡುವ ರೀತಿಯನ್ನು ಕಂಡರೆ, ಬಹು ಹಿಂದೆ, ನಾವು ಈಗ ಏನನ್ನು ಶಿವರಾತ್ರಿ ಪೂಜೆ ಎಂದು ಹೇಳುತ್ತೇವೋ ಅವೆಲ್ಲವೂ ಜನಪ್ರಿಯವಾಗುವ ಮೊದಲು, ಹಳ್ಳಿ ಜನರ ಹಬ್ಬವಾಗಿತ್ತು ಎಂದು ಹೇಳಲು ಹಲವು ಪುರಾವೆಗಳು ಸಿಗುತ್ತವೆ. ನಮ್ಮ ಹಳ್ಳಿಯಲ್ಲಂತೂ ಕೆಲವು ದಶಕಗಳ ಹಿಂದೆ ನಡೆಯುತ್ತಿದ್ದ ಶಿವರಾತ್ರಿಯು, ಪೂಜೆ ಭಜನೆಗಳಿಗಿಂತ ಹೆಚ್ಚಾಗಿ, ಗ್ರಾಮೀಣ ಯುವಕರ ಕುಚೋದ್ಯ ಮತ್ತು ಆಟಗಳ ಮೂಲಕವೇ ಪ್ರಸಿದ್ಧ ಎನಿಸಿತ್ತು. ಈಗಲೂ ಆ ಜನಪದ ಆಟಗಳ ಮುಂದುವರಿಕೆ ನಡೆದಿದ್ದರೂ, ನಿಧಾನವಾಗಿ ಆಗಿನ ದಿನಗಳ ಅಮಾಯಕ ಸಂತಸ, ನಿರಾಳ ಮನೋಭಾವ ಕಡಿಮೆ ಆಗುತ್ತಾ ಹೋಗುತ್ತಿದೆ. ಅದಕ್ಕೆ ಹಲವು ಕಾರಣಗಳೂ ಇವೆ.

ಶಿವರಾತ್ರಿಯ ದಿನ ನಡೆಯುವ ಸೆಟ್ಟೆ ಕುಟ್ಟುವ ಚಟುವಟಿಕೆಯು ಗ್ರಾಮೀಣ ಕುಚೋದ್ಯಕ್ಕೆ ಒಂದು ಉತ್ತಮ ಉದಾಹರಣೆ. ‘ಸೆಟ್ಟೆ’ ಎಂದರೆ ಮನೆ
ಮುಂದಿನ ಗದ್ದೆ, ಅಗೇಡಿಗಳಲ್ಲಿ ಇರುವ ಮಣ್ಣಿನ ಹೆಂಟೆಗಳು. ಜನವರಿಯ ಸಮಯದಲ್ಲಿ ಕೊಯ್ಲು ಮುಗಿದು, ಗದ್ದೆಯು ಒಣಗಿ, ಅದರಲ್ಲೊಮ್ಮೆ ಹೂಟೆ
(ಉಳುವಿಕೆ) ಮಾಡಿರುತ್ತಾರೆ. ಆಗ ಅಂಗೈ ಅಗಲದ ಮಣ್ಣಿನ ಹೆಂಟೆಗಳು ಅಗೇಡಿಯ ತುಂಬಾ ಹರಡಿ, ಬಿಸಿಲಿಗೆ ಒಣಗಿರುತ್ತವೆ. ಶಿವರಾತ್ರಿಯ ದಿನ, ರಾತ್ರಿಯ ಕತ್ತಲು ಏರಿದಂತೆಲ್ಲಾ, ತುಂಟ ಯುವಕರು ನಿಶ್ಶಬ್ದವಾಗಿ ಬಂದು, ಮನೆ ಮುಂದಿನ ಅಗೇಡಿಯ ಸೆಟ್ಟೆಯನ್ನು ಎತ್ತಿ, ಬಿರುಸಾಗಿ ಅಂಗಳಕ್ಕೆ ಎಸೆಯುವುದೇ ಸೆಟ್ಟೆ ಕುಟ್ಟುವುದು. ಒಣಗಿದ ಮಣ್ಣಿನ ಹೆಂಟೆಯು ಅಂಗಳಕ್ಕೆ ಬಿದ್ದ ಕೂಡಲೆ ಪುಡಿ ಪುಡಿಯಾಗುತ್ತದೆ.

ಮನೆಯವರು ಸೆಟ್ಟೆಗಳು ಬಿದ್ದ ಶಬ್ದ ಕೇಳಿ ಒಳಗಿನಿಂದಲೇ, ‘ಯಾರಾ, ಅದು ಸೆಟ್ಟೆ ಕುಟ್ಟುವುದು?’ ಎಂದು ಗದರಿದ ತಕ್ಷಣ ಸೆಟ್ಟೆ ಕುಟ್ಟುವವರು ಕತ್ತಲಲ್ಲೇ ಮಂಗಮಾಯ. ಅವರ ಗುಂಪು ಇನ್ನೊಂದು ಮನೆಗೆ ಸೆಟ್ಟೆ ಕುಟ್ಟಲು ಹೋಗುತ್ತಾರೆ! ಈ ಕೆಲಸ ಅದೆಷ್ಟು ಜನಪ್ರಿಯ ಮತ್ತು ಉಲ್ಲಾಸಭರಿತವದದ್ದು ಎಂದರೆ, ನಮ್ಮೂರಿನ ಅದೆಷ್ಟೋ ಜನರು ಶಿವರಾತ್ರಿಯನ್ನು ಕರೆಯುವುದು ‘ಸೆಟ್ಟೆ ಕುಟ್ಟುವ ಹಬ್ಬ’ ಎಂದೇ!

ಸೆಟೆ ಕುಟ್ಟುವ ವಿಚಾರವನ್ನು ಹೇಳಿದಾಗಲೆಲ್ಲಾ, ಈಗಿನ ತಲೆಮಾರಿನವರು ಮತ್ತು ಬಯಲು ಸೀಮೆಯವರು ಕೇಳುವ ಪ್ರಶ್ನೆ ‘ಸೆಟ್ಟೆ ಕುಟ್ಟುವುದರಿಂದ
ಏನು ಲಾಭ? ಸೆಟ್ಟೆ ಕುಟ್ಟುವವರನ್ನು ಪತ್ತೆ ಮಾಡಿ ನಾಲ್ಕು ಪೆಟ್ಟು ಕೊಡುವ ಸಾಧ್ಯತೆ ಇದೆ ಅಲ್ಲವೆ?’. ಶಿಕ್ಷೆ ಕೊಡುವ ಮಾತೇ ಇಲ್ಲ, ಅದು ಹಬ್ಬದ ಒಂದು
ಭಾಗ ಮತ್ತು ಜನಪದ ಆಚರಣೆ. ಜತೆಗೆ, ಶಿವರಾತ್ರಿಯ ದಿನ ಹುಡುಗರು, ಯುವಕರು ಮಾಡುವ ಇಂತಹ ಕುಚೋದ್ಯಗಳಿಗೆ ಯಾವುದೇ ಶಿಕ್ಷೆ ಇಲ್ಲ ಎಂಬುದು ಗ್ರಾಮೀಣ ಜನರ ನಂಬಿಕೆ, ಅಲಿಖಿತ ನಿಯಮ. ಈ ಅಲಿಖಿತ ಕಾನೂನಿನ ರಕ್ಷಣೆ ನೆಪ ಮಾಡಿಕೊಂಡು, ಸೆಟ್ಟೆ ಕುಟ್ಟುವಂತಹ ನಿರಪಾಯಕಾರಿ ಚಟುವಟಿಕೆಯ ಜತೆ, ಇತರ ಸಣ್ಣ ಪುಟ್ಟ ಹಾನಿಯನ್ನೂ ಯುವಕರು ಮಾಡುವುದುಂಟು.

ಒಂದು ವರ್ಷ ಶಿವರಾತ್ರಿಯ ದಿನ, ಕತ್ತಲಾಗಿ ಒಂದೆರಡು ಗಂಟೆಯಾಗಿತ್ತು. ನಮ್ಮ ಮನೆಯ ಅಂಗಳದ ಮೇಲೆ ಯಾರೋ ಒಂದೇ ಸಮನೆ ಸೆಟ್ಟೆ ಕುಟ್ಟಲು ಆರಂಭಿಸಿದರು. ಯಾರು ಅಂತ ಗೊತ್ತಾಗುತ್ತಿರಲಿಲ್ಲ; ಏಕೆಂದರೆ, ನಮ್ಮ ಮನೆಗೆ ಆಗಿನ್ನೂ ವಿದ್ಯುತ್ ಸಂಪರ್ಕ ಇರಲಿಲ್ಲ. ಬ್ಯಾಟರಿ ಸೆಲ್ ಹಾಕಿ ಬೆಳಕು ನೀಡುವ ಮೂರು ಸೆಲ್‌ನ ಒಂದು ಎವರೆಡಿ ಬ್ಯಾಟರಿ ಇತ್ತು; ಅದರ ಬೆಳಕನ್ನು ಬೀರಿ ನೋಡಿದರೆ, ಏನೂ ಕಾಣಿಸುತ್ತಿಲ್ಲ. ನಮ್ಮ ಮನೆ ಎದುರಿನ ತೋಟದ ಹಿಂಭಾಗದಿಂದ ಸೆಟ್ಟೆ ಬರುತ್ತಿದೆಯೋ, ಮನೆಯ ಹಿಂಭಾಗದಿಂದ ಸೆಟ್ಟೆ ಬರುತ್ತಿದೆಯೋ ಗೊತ್ತಾಗುತ್ತಿರಲಿಲ್ಲ.

ನಮ್ಮ ಅಮ್ಮಮ್ಮನಿಗಂತೂ ತುಂಬಾ ಕೋಪ ಬಂದಿತ್ತು; ಏಕೆಂದರೆ, ಅದುವರೆಗೆ, ಯಾವುದೇ ಶಿವರಾತ್ರಿ ಹಬ್ಬದ ದಿನ ಇಷ್ಟೊಂದು ಪ್ರಮಾಣದ ಸೆಟ್ಟೆಗ ಳನ್ನು ನಮ್ಮ ಅಂಗಳಕ್ಕೆ ಯಾರೂ ಎಸೆದಿರಲಿಲ್ಲ, ಎಲ್ಲೋ ನಾಲ್ಕಾರು ಸೆಟ್ಟೆ ಬೀಳುತ್ತಿದ್ದುದು ಮಾಮೂಲು. ‘ಕುಟ್ಟಿ, ಸಮಾ ಕುಟ್ಟಿ, ನನ್ನ ಮಂಡೆ ಮೇಲೆ ಬೀಳುವ ರೀತಿ ಸೆಟ್ಟೆ ಕುಟ್ಟಿ’ ಎಂದು ದೊಡ್ಡ ದನಿಯಲ್ಲಿ ಬೈಯ್ಯುತೊಡಗಿದರು. ಅಂಗಳಕ್ಕೆ ಹೋಗುವ ಧೈರ್ಯ ಸಾಲದು, ಏಕೆಂದರೆ, ಒಂದರ ಹಿಂದೆ ಒಂದರಂತೆ ಸೆಟ್ಟೆಗಳು ಬಂದು ಬೀಳುತ್ತಿದ್ದವು!

ಮನೆಯೊಳಗಿನಿಂದಲೇ ಸ್ವಲ್ಪ ಹೊತ್ತು ಬಾಯಿ ಮಾಡಿದರು; ಅರ್ಧ ಗಂಟೆಯ ನಂತರ ಸೆಟೆಗಳು ಬಂದು ಬೀಳುವುದು ಕಡಿಮೆಯಾಯಿತು. ಈ ಸೆಟ್ಟೆ ಕುಟ್ಟುವುದರಲ್ಲೂ ಕೆಲವು ಶಿಸ್ತುಗಳಿವೆ. ಯಾವುದೇ ಕಾರಣಕ್ಕೂ ಯಾರೂ ಕಲ್ಲುಗಳನ್ನು ಎಸೆಯುತ್ತಿರಲಿಲ್ಲ, ಮೈಮೇಲೆ ಬಿದ್ದು ಗಾಯವಾಗುವಂತಹ ಯಾವುದೇ ವಸ್ತುಗಳನ್ನೂ ಎಸೆಯುತ್ತಿರಲಿಲ್ಲ. ಸಣ್ಣ ಸಣ್ಣ ಮಣ್ಣಿನ ಹೆಂಟೆ ಅಂಗಳದಲ್ಲಿ ಬಿದ್ದು ಪುಡಿಯಾಗುವುದು, ಮಾಡಿನ ಮೇಲೆ ಬೀಳುವುದು ಮಾತ್ರ ಈ ಕುಚೋದ್ಯದ ತಿರುಳು.

ಶಿವರಾತ್ರಿಯ ದಿನ ಪ್ರತಿಯೊಬ್ಬರೂ ಒಂದಾದರೂ ಸೆಟ್ಟೆಯನ್ನು ಬೇರೆಯವರ ಮನೆಯತ್ತ ತೂರಬೇಕು ಎಂಬುದು ಮತ್ತೊಂದು ಗ್ರಾಮೀಣ ನಂಬಿಕೆ.
ಅದಕ್ಕೇ ಹೇಳಿದ್ದು, ಇದೊಂದು ಜನಪದ ಆಟವಾಗಿತ್ತು ಎಂದು. ನಾವೆಲ್ಲಾ ಮಕ್ಕಳು, ಸಣ್ಣದೊಂದು ಸೆಟ್ಟೆಯನ್ನು ನಮ್ಮ ಹಿಂದಿನ ಮನೆಯವರ ಅಂಗಳಕ್ಕೆ ಎಸೆಯುತ್ತಿದ್ದೆವು. ಆ ಸದ್ದು ಕೇಳಿದ ಕೂಡಲೆ, ಆ ಮನೆಯಲ್ಲಿದ್ದ ನರ್ಸಿ ಎಂಬ ವಯಸ್ಸಾದ ಒಬ್ಬ ಮಹಿಳೆಯು ‘ಹ್ವಾಯ್, ನೀವು ಕತ್ತಲಲ್ಲಿ ಸೆಟ್ಟೆ ಕುಟ್ಟಿದರೆ ನಂಗೆ ಗೊತ್ತಾತ್!’ ಎಂದು ರಾಗವಾಗಿ ನಮ್ಮನ್ನು ತಮಾಷೆ ಮಾಡುತ್ತಿದ್ದಳು.

ಅದೊಂದು ವರ್ಷ ನಮ್ಮ ಮನೆಯ ಅಂಗಳಕ್ಕೆ ನೂರಾರು ಸೆಟ್ಟೆಗಳನ್ನು ಎಸೆದರು ಎಂದೆನಲ್ಲ, ಅರ್ಧ ಗಂಟೆಯ ಹೊತ್ತಿಗೆ ಸೆಟ್ಟೆ ಕುಟ್ಟುವವರು ಕತ್ತಲಲ್ಲಿ ಕರಗಿಹೋದರು. ಮರುದಿನ ಬೆಳಗ್ಗೆ ನಮಗೊಂದು ಅಚ್ಚರಿ ಕಾದಿತ್ತು : ನಮ್ಮ ಮನೆಯಿಂದ ಸುಮಾರು ೧೫೦ ಮೀಟರ್ ದೂರದ ಗದ್ದೆಯಂಚಿನಲ್ಲಿ ಆರೇಳು ತೆಂಗಿನ ಮರಗಳಿದ್ದವು. ಜಾಸ್ತಿ ಎತ್ತರವಿರಲಿಲ್ಲ, ನಮ್ಮ ಅಮ್ಮಮ್ಮನು ಸುಮಾರು ಹತ್ತು ವರ್ಷಗಳ ಹಿಂದೆ ತಾವೇ ಕೈಯಾರೆ ನೆಟ್ಟು ಬೆಳೆಸಿದ್ದ ಮರಗಳವು. ಅವುಗಳಲ್ಲಿ ಹತ್ತಿಪ್ಪತ್ತು ಎಳನೀರುಗಳಿದ್ದವು.

ರಾತ್ರಿ ಹೊತ್ತಿನಲ್ಲಿ ಯಾರೋ ಅಷ್ಟೂ ಎಳನೀರನ್ನು ಕಿತ್ತು, ಅಲ್ಲೇ ಕುಡಿದು ಎಸೆದು ಹೋಗಿದ್ದರು. ಅದನ್ನು ಕಂಡು ನಮ್ಮ ಅಮ್ಮಮ್ಮನಿಗೆ ನಿಜಕ್ಕೂ ಬೇಸರವಾಯಿತು. ಸೆಟ್ಟೆ ಕುಟ್ಟುವ ನೆಪದಲ್ಲಿ ನಮ್ಮನ್ನು ಒಳಗೆ ಬಂಽಯಾಗಿಸಿ, ಗದ್ದೆ ಬದಿಯ ತೆಂಗಿನ ಮರದ ಎಲ್ಲಾ ಎಳನೀರನ್ನು ತೆಗೆದು ಕುಡಿದಿದ್ದರು ಆ ತುಂಟರು! ಆದರೆ ಅಮ್ಮಮ್ಮ ಏನೂ ಹೇಳಲಿಲ್ಲ, ಏಕೆಂದರೆ, ಶಿವರಾತ್ರಿಯ ದಿನ ಇಂತಹ ಕುಚೋದ್ಯ ಮಾಡಿದ್ದಕ್ಕೆ ಶಿಕ್ಷೆ ಇಲ್ಲ ಎಂಬ ನಂಬಿಕೆಯೇ ಇತ್ತಲ್ಲ.

ಆದರೂ ತಾನೇ ನೆಟ್ಟು ಬೆಳೆಸಿದ, ಒಂದೆರಡು ವರ್ಷಗಳ ಹಿಂದಷ್ಟೇ ಫಲ ನೀಡಲು ಆರಂಭಿಸಿದ ಆ ತೆಂಗಿನ ಮರಗಳಿಂದ ಎಲ್ಲಾ ಎಳನೀರನ್ನು ತುಂಟರು ಕಿತ್ತಿದ್ದಕ್ಕೆ ಅವರಿಗೆ ಬಹಳ ಬೇಸರವಾಗಿತ್ತೆಂಬುದು ನಿಜ. ಆ ಬೇಸರವನ್ನು ನೀಗಲು, ಅವರು ಗಮನಿಸಿದ್ದ ಒಂದು ಕಥೆ ಹೇಳುತ್ತಿದ್ದರು. ಅದಕ್ಕೂ ನಾಲ್ಕಾರು ದಶಕಗಳ ಮೊದಲು, ನಮ್ಮ ಮನೆಯ ಹಿಂದೆ ಒಬ್ಬಳು ಕೃಷಿ ಕಾರ್ಮಿಕಳು ಇದ್ದಳಂತೆ. ಶಿವರಾತ್ರಿಯ ದಿನ ಇದೇ ರೀತಿ ಯಾರೋ ಕುಚೋದ್ಯ ಮಾಡಿ, ಆಕೆ ನೆಟ್ಟು ಬೆಳೆಸಿದ್ದ ತೊಂಡೆ ಚಪ್ಪರದ ಕಾಯಿಗಳನ್ನು ಕಿತ್ತು, ಅಲ್ಲಿದ್ದ ಸ್ನಾನದ ಮಡಕೆಯನ್ನು ಈಚೆಗೆ ತಂದು ಇಟ್ಟಿದ್ದರಂತೆ, ಅದು ಒಡೆದು ಹೋಗಿತ್ತು. ಇನ್ನೂ ಬೇರೆ ಬೇರೆ ರೀತಿಯ ಕುಚೋದ್ಯ ಮಾಡಿದ್ದರಂತೆ.

ಆ ಮನೆಯಲ್ಲಿದ್ದ ಒಂಟಿ ಹೆಂಗಸಿಗೆ ಆ ಕುಚೋದ್ಯಗಳನ್ನು, ತರಲೆಗಳನ್ನು ನೋಡಿ ವಿಪರೀತ ಕೋಪ ಬಂತು. ಶಿವರಾತ್ರಿ ದಿನದ ಅಂತಹ ಸಣ್ಣಪುಟ್ಟ ಅಪರಾಧಗಳಿಗೆ ಶಿಕ್ಷೆ ಇಲ್ಲ ಎಂಬ ಅಲಿಖಿತ ನಿಯಮವನ್ನು ಮೀರಿ, ಆಕೆ ಒಂದು ‘ಶಾಪ’ ಹಾಕಿದಳು : ಮನೆಮುಂದಿನ ಅಂಗಳವನ್ನು ಸಗಣಿ ನೀರಿನಿಂದ ಸಾರಿಸಿ, ತುಳಸಿ ಕಟ್ಟೆಯ ಮುಂದೆ ಕುಳಿತು, ಸಗಣಿ ನೀರಿಗದ್ದಿದ ಪರಕೆಯನ್ನು ನೆಲಕ್ಕೆ ಬಡಿಯುತ್ತಾ ‘ನನಗೆ ಅಷ್ಟೊಂದು ನಷ್ಟ ಮಾಡಿದ ಯಾರಿಗೇ ಆಗಲೀ ಶಿಕ್ಷೆ ಆಗಲಿ’ ಎಂದು ನಾಲ್ಕಾರು ಸಲ ಹೇಳಿಕೊಂಡಳತೆ.

ಅದನ್ನು ನಮ್ಮೂರಿನಲ್ಲಿ ಶಾಪ ಹಾಕುವುದು ಎನ್ನುವುದುಂಟು. ಅದಾಗಿ ಒಂದು ವರ್ಷದೊಳಗೆ, ಅಂದರೆ ಮುಂದಿನ ಶಿವರಾತ್ರಿಗಿಂತ ಮುಂಚೆ, ಅರ್ಧ ಕಿಮೀ ದೂರದಲ್ಲಿದ್ದ ಒಬ್ಬ ವ್ಯಕ್ತಿ ಇಹಲೋಕ ತ್ಯಜಿಸಿದನಂತೆ. ಅವನೇ ಆ ರಾತ್ರಿ ಆಕೆಯ ಸ್ನಾನದ ಹಂಡೆ ಒಡೆದು ಹಾಕಿದ್ದು, ಅಲ್ಲಿದ್ದ ತರಕಾರಿಗಳನ್ನು ಕಿತ್ತು ಹಾಕಿದ್ದು ಎಂದು ಅಮ್ಮಮ್ಮ ಹೇಳುತ್ತಿದ್ದರು. ಈ ಕಥೆಯ ಹಿಂದೆ ಮೂಢನಂಬಿಕೆಯ ಆಚರಣೆಗಳಿರುವುದರಿಂದ, ಅದನ್ನು ನಾನು ಎಂಡಾರ್ಸ್ ಮಾಡಲಾರೆ, ಆದರೆ, ಜನಪದ ನಂಬಿಕೆಗಳ ಮಜಲನ್ನು ತಿಳಿಸುವ, ಅಲಿಖಿತ ಕಾನೂನನ್ನು ದುರಪಯೋಗ ಮಾಡಿಕೊಳ್ಳುವ ತುಂಟ ಯುವಕರ ದುಸ್ಸಾಹಸಗಳನ್ನು ವಿವರಿಸುವ ಈ ಕಥೆ ಕುತೂಹಲ ಹುಟ್ಟಿಸುತ್ತಲೇ ಇರುತ್ತದೆ. ಆ ದುರಂತ ಕಥೆಯ ಹಿನ್ನೆಲೆಯಲ್ಲಿ, ಇನ್ನೆಷ್ಟೋ ಕುಚೋದ್ಯ ಮತ್ತು
ಕೀಟಲೆಗಳನ್ನು ಸಹ ಕಾಣಬಹುದು.

ನಮ್ಮೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ರಾತ್ರಿ ಆಗಿನ ದಿನಗಳಲ್ಲಿ ಭಜನೆ ನಡೆಯುತ್ತಿತ್ತು; ‘ಓರಾಮ ನೀನಾಮ ಮೇಮಿ
ರುಚಿರ, ಮೇಮಿ ರುಚಿರ ನಾಮ ಮೆಂತ ರುಚಿರ’ ಎಂಬ ಭಜನೆಯನ್ನು ವಯಸ್ಸಾದವರು ಹಾಡುತ್ತಿದ್ದರು. ಆದರೆ ಅದಕ್ಕಿಂತ ದೊಡ್ಡದಾಗಿ, ಉಲ್ಲಾಸ
ತುಂಬಿದ ಚಟುವಟಿಕೆಗಳನ್ನು ಮಾಡುತ್ತಿದ್ದವರು ಊರಿನ ಗಂಡಸರು. ತೆಂಗಿನ ಕಾಯಿಯನ್ನು ಗುರಿ ಇಟ್ಟು ಒಡೆಯುವ ಆಟವು ಶಿವರಾತ್ರಿಯಂದು
ನಡೆಯುತ್ತಿತ್ತು. ಜತೆಗೆ, ‘ಹಣಬಿನ ರಥ’ಕ್ಕೆ ಬೆಂಕಿ ಕೊಡುವ ಹಬ್ಬವೂ ಆ ರಾತ್ರಿ ನಡೆಯುತ್ತಿತ್ತು. ಬೇರೆ ಬೇರೆ ಮನೆಗಳಿಂದ ಸಂಗ್ರಹಿಸಿದ ಸೌದೆ, ಹಳೆ
ಬಟ್ಟೆಗಳನ್ನು ರಾಶಿ ಹಾಕಿ ಬೆಂಕಿ ಕೊಡುವ ಈ ಆಚರಣೆಯು ಕಾಮದಹನವನ್ನು ಹೋಲುತ್ತದೆ.

ರಾತ್ರಿಯಿಡೀ ಇಂತಹ ಜನಪದ ಆಟಗಳನ್ನು ಆಡಿದ ನಂತರ, ಹುಲ್ಲಿನಿಂದ ಮಾಡಿದ ಉದ್ದನೆಯ ತೊಲೆಯ ಒಂದು ತುದಿಗೆ ಬೆಂಕಿ ಹಚ್ಚಿ, ಬೆಳಗಿನ
ಹೊತ್ತಿಗೆ ಅದನ್ನು ಹೊತ್ತು ಎಲ್ಲರ ಮನೆಯ ಮುಂದೆ ಮೆರವಣಿಗೆ ತೆಗೆಯುತ್ತಿದ್ದರು. ಆ ಮೆರವಣಿಗೆಯ ಸಮಯದಲ್ಲಿ ಹಾಡುವ ಜನಪದ ಹಾಡುಗಳಲ್ಲಿ
ಊರಿನ ಹಿತವನ್ನು ಬಯಸುವ ಪದಗಳಿವೆ. ಜತೆಯಲ್ಲೇ, ಊರಿನ ಧನಿಕರನ್ನು, ಉಳ್ಳವರನ್ನು ಆಡಿಕೊಳ್ಳುವ ಹಾಡುಗಳೂ ಇವೆ! ಆ ಹಾಡುಗಳಲ್ಲಿ
ಅಲ್ಲಲ್ಲಿ ಅಶ್ಲೀಲತೆಯ ಬಳಕೆ ಢಾಳಾಗಿರುತ್ತಿತ್ತು!

‘ . . . ಬಾಚಣಿಗೆ ಕೆಲ್ಲೋ ಧಿಂಸಾಲ್’ ‘ . . . ಕೊಂಕ್ ಬಾಳೆ ಹಣ್ಣೊ ಧಿಂಸಾಲ್’ ‘ಧಿಂಸಾಲ್ ಎನಿರೇ ಒಂದೇ ಧನಿರೇ ಧಿಂಸಾಲ್’ ‘ದಿಂ ಸಾಲ್ ಎನಿರೋ
ದಿಮ್ ಕುಟಿಕಾ ಕುಣಿರೋ’ ಈ ರೀತಿ ಹಾಡುವ ಧಿಂಸಾಲ್ ಹಾಡುಗಳು, ಒಂದು ಜನಪದ ಕಾವ್ಯವೇ ಸರಿ. ಆ ಕಾವ್ಯದ ಭಾಗಗಳು ಕಾಲನ ಹೊಡೆತಕ್ಕೆ
ಲುಪ್ತವಾಗಿವೆ. ರಾತ್ರಿ ಹೊತ್ತಿನಲ್ಲಿ ಮನೆ ಮನೆಗೆ ಹೋಗಿ ಈ ರೀತಿ ಹಾಡು ಹೇಳುವುದು, ತೀರ್ಥಹಳ್ಳಿಯ ಸುತ್ತಲಿನ ಅಂಟಿಕೆ ಪಂಟಿಕೆ ಜನಪದ ಆಚರಣೆ ಯನ್ನು ನೆನಪಿಸುತ್ತದೆ. ರಾತ್ರಿ ಇಡೀ ಜಾಗರಣೆ ಮಾಡುವುದು, ಒಂದು ದಿನ ಉಪವಾಸ ಮಾಡುವುದು, ಕಠಿಣವಾದ ಉಪವಾಸ ಮಾಡಲು ದೇಹ ಸಹಕರಿಸದೇ ಇದ್ದರೆ, ಅವಲಕ್ಕಿ, ಹೆಸರು ಕೀರು ಮೊದಲಾದ ಲಘು ಆಹಾರ ಮತ್ತು ತಿಂಡಿಗಳನ್ನು ಮಾಡಿಕೊಂಡು ತಿನ್ನುವುದು ಇವೆಲ್ಲವೂ ಶಿವರಾತ್ರಿಯ ಭಾಗಗಳಾಗಿ ನಮ್ಮ ಸಮಾಜದಲ್ಲಿ ಬೆರೆತುಹೋಗಿರುವ ಪರಿ ವಿಶಿಷ್ಟ.

 
Read E-Paper click here