Saturday, 23rd November 2024

ಅಮೃತ ಸರಿಳಿನಿಂ ನಿರ್ಮಿಸಿದ ಲತೆ ಎಂದು ಕವಿ ಕಂಡ ಜಿಲೇಬಿ

ತಿಳಿರು ತೋರಣ

srivathsajoshi@yahoo.com

ಜಿಲೇಬಿಯ ಮೂಲ ಪಶ್ಚಿಮ ಏಷ್ಯಾ, ಅದು ಭಾರತಕ್ಕೆ ಬಂದದ್ದು ಅಂತ ಥಿಯರಿ ಇದೆ. ಆದರೆ, ೧೫ನೆಯ ಶತಮಾನದಲ್ಲೇ ಈ ಭಕ್ಷ್ಯವು ‘ಕುಂಡಲಿಕಾ’ ಮತ್ತು ‘ಜಲವಲ್ಲಿಕಾ’ ಎಂಬ ಹೆಸರಿನಿಂದ ಭಾರತದಲ್ಲಿತ್ತು; ಸಂಸ್ಕೃತದ ‘ಜಲವಲ್ಲಿಕಾ’ವೇ ಜಲೇಬಿ ಆದ್ದದ್ದೆಂಬ ಇನ್ನೊಂದು ಥಿಯರಿಯೂ ಇದೆ. ಹಾಗೆ ನೋಡಿದರೆ ಕನ್ನಡದಲ್ಲಿ ಜಿಲೇಬಿಯು ದ್ವಾಪರ ಯುಗದಿಂದಲೂ ಇದೆಯೆಂದು ಮಾಯಾಬಜಾರ್ ಚಿತ್ರದ ‘ಭಲೇ ಜಿಲೇಬಿ ಮೊದಲು ಇವೆಲ್ಲ ನನ್ನ ಪಾಲು…’ ಆಧಾರವಾಗಿಟ್ಟುಕೊಂಡು ಹೇಳಬಹುದೆನ್ನಿ.

ಅಣ್ಣಾಜಿ ಎಂಬ ಕವಿಯು ಜಿಲೇಬಿಯನ್ನು ‘ಅಮೃತ ಸರಳಿನಿಂ ನಿರ್ಮಿಸಿದ ಲತೆ’ ಎಂದು ಬಣ್ಣಿಸಿದವನು. ಅಣ್ಣಾಜಿ ರಾಜೇಂದ್ರ ಎಂಬ ಪೂರ್ಣ ನಾಮಧೇಯದ ಈತ ಒಬ್ಬ ವೀರಶೈವ ಕವಿ. ವೀರೇಂದ್ರನೆಂಬುವವನ ಮೊಮ್ಮಗ, ಅಯ್ಯಣಭೂಪ ಎಂಬುವವನ ಮಗ- ಎಂದು ಈತನ ಪ್ರವರ. ಕ್ರಿ.ಶ 1600ರ ಆಸುಪಾಸಿನಲ್ಲಿ ಬಾಳಿದ್ದವನು; ಬಹುಶಃ ಯಾವುದೋ ರಾಜವಂಶಕ್ಕೆ ಸೇರಿದ್ದವನಿರಬೇಕು. ಅಣ್ಣಾಜಿ ಕವಿ ಬರೆದ ‘ಸೌಂದರವಿಲಾಸ’ ಕೃತಿಯು ಶಿವಭಕ್ತ ನಂಬಿಯಣ್ಣನ ಕಥೆ.

ನಂಬಿಯಣ್ಣನಿಗೆ ಸೌಂದರನಂಬಿ, ಸುಂದರಮೂರ್ತಿ ಅಂತೆಲ್ಲ ಹೆಸರುಗಳೂ ಇದ್ದುವು, ಇದೊಂದು ಶೃಂಗಾರರಸ ಪ್ರಧಾನ ಕಾವ್ಯ, ಪರವೆ ಮತ್ತು ಸಂಕಿಲೆ ಎಂಬ ಕನ್ಯೆಯರೊಡನೆ ನಂಬಿಯಣ್ಣ ನಡೆಸಿದ ಶೃಂಗಾರವೇ ಈ ಕೃತಿಯ ವಸ್ತು, ಆದ್ದರಿಂದಲೇ ಸೌಂದರವಿಲಾಸ ಎಂಬ ಹೆಸರು- ಅಂತ ವಿದ್ವಾಂಸರ ಅಭಿಪ್ರಾಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಭಾಷಾಭಿವೃದ್ಧಿ ಯೋಜನೆಯಡಿ ಹಸ್ತಪ್ರತಿ ಸಂರಕ್ಷಣೆ ಗ್ರಂಥಸಂಪಾದನೆ ಮಾಲೆಯಲ್ಲಿ ‘ಅಣ್ಣಾಜಿಯ ಸೌಂದರ ವಿಳಾಸ’ ಗ್ರಂಥವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯು ಪ್ರಕಟಿಸಿದೆ.

ಅದಿರಲಿ, ಅಣ್ಣಾಜಿ ಕವಿಗೆ ಜಿಲೇಬಿ ಎಲ್ಲಿಂದ ಸಿಕ್ಕಿತು? ಆಗಲೇ ಹೇಳಿದಂತೆ ಆತ ರಚಿಸಿದ್ದು ಶೃಂಗಾರರಸವುಳ್ಳ ಕಾವ್ಯ. ‘ಶೃಂಗಾರ ಮೊದಲಾದ ನವರಸ ಉಪಮೆ ಉತ್ಪ್ರೇಕ್ಷೆ ಚಿತ್ರಾರ್ಥ ಭಾವದಿಂದ ಸೇರಿಸುವುದೆಂದು ಶಂಕರ ನಿರೂಪಣೆಯಾಗೆ| ಸಾರತರಮಾದ ಮಧುರೋಕ್ತಿ ಮೃದುಪದ ಗಂಭೀರ ವಚನಾ ರಚನೆಯಿಂದ ವಿಸ್ತರಿಸಿದೆನು…’ ಎಂದು ಆರಂಭದಲ್ಲಿ ಆತನೇ ಹೇಳಿಕೊಂಡಿದ್ದಾನೆ. ಕಾವ್ಯದಲ್ಲಿ ನಗರವರ್ಣನೆಯದೊಂದಿಷ್ಟು ಪದ್ಯಗಳು ಬರುತ್ತವೆ. ಅವುಗಳಲ್ಲೊಂದು ಮಿಠಾಯಿ ಅಂಗಡಿಯನ್ನು ಕುರಿತ ಪದ್ಯ.

ಅದರಲ್ಲಿ ಗರಿಗರಿ ಜಿಲೇಬಿ! ಆ ಅಂಗಡಿಯಲ್ಲಿ ಜಿಲೇಬಿ ಮಾತ್ರವಲ್ಲ, ಯಾವುದೆಲ್ಲ ತಿಂಡಿಗಳಿದ್ದುವು ಗೊತ್ತೇ? ಬಾಯಿಯಲ್ಲಿ ನೀರೂರಿದರೆ ನಿಯಂತ್ರಿಸಿ ಕೊಂಡು ನಿಧಾನವಾಗಿ ಓದಿ, ವಾರ್ಧಕ ಷಟ್ಪದಿ ಛಂದಸ್ಸಿನ ಪದ್ಯ: ‘ಕರಜಿಗೆಯ ಕಾಯಿಯತಿರಸವುದ್ದಿ ನೊಡೆಯು ಹಿಮ| ಕರನಂತೆ ರಾಜಿಸುವ ಇಡ್ಡಲಿಗೆಯೆಳ್ಳುಂಡೆ| ತರಣಿಮಂಡಲದಂತೆಯೆಸೆವ ಒಬ್ಬಟ್ಟು ಗಾರಗೆಯ ಚಕ್ಕುಲಿ ಸೇವಗೆ| ಹೊರೆಯಪೇಣಿಯು ಮನೋಹರ ದುಂಡೆಯರಗುಸ| ಕ್ಕರೆಬುರುಡೆ ಹಾಲುಂಡಲಿಗೆಯು ಸ್ವಾದಿ ಸಲಮೃತ| ಸರಳಿನಿಂ ನಿರ್ಮಿಸಿದ ಲತೆಯಂತೆ ಜಿಲ್ಲಬಿಯ ಅಂಗಡಿಗಳೆಸೆದಿರ್ದುವು||’ ಆಹಾ… ಕರ್ಜಿಕಾಯಿ, ಅತಿರಸ, ಉದ್ದಿನವಡೆ, ಚಂದ್ರನಂತಿರುವ ಇಡ್ಲಿ, ಎಳ್ಳುಂಡೆ, ಸೂರ್ಯಮಂಡಲದಂಥ ಒಬ್ಬಟ್ಟು, ಗಾರಿಗೆ, ಚಕ್ಕುಲಿ, ಶ್ಯಾವಿಗೆ, ಫೇಣಿ, ಮನೋಹರದ ಉಂಡೆ (ಬೂಂದಿಲಡ್ಡು), ಅರಗುಸಕ್ಕರೆ, ಬುರುಡೆ ತುಂಬ ಹಾಲು, ಉಂಡಲಿಗೆ. ಇವೆಲ್ಲದಕ್ಕೆ ಮುಕುಟಪ್ರಾಯವಾಗಿ ಅಮೃತದ ಸರಳಿನಿಂದ ನಿರ್ಮಿಸಿದ ಬಳ್ಳಿಯಂತೆ ಕಾಣುವ ಜಿಲ್ಲಬಿ!

ಅಣ್ಣಾಜಿ ಕವಿ ಜಿಲೇಬಿ ಎನ್ನದೆ ‘ಜಿಲ್ಲಬಿ’ ಎಂದೇಕೆ ಬರೆದಿರಬಹುದು? ಜಿಲೇಬಿ ಎಂದು ಬರೆದಿದ್ದರೂ ಛಂದಸ್ಸಿನ ನಿಯಮಕ್ಕೇನೂ ಭಂಗ ಬರುತ್ತಿರಲಿಲ್ಲ. ಬಹುಶಃ ಆಗಿನ್ನೂ ಅದರ ಅರೇಬಿಕ್ ಅಥವಾ ಪಾರಸೀಕ ಮೂಲದ ಝಲ್ಲಬಿಯಾ ಪದವೇ ಭಾರತೀಯ ಭಾಷೆಗಳಲ್ಲೂ ಬಳಕೆಯಲ್ಲಿತ್ತು. ಮುಘಲರು
ಭಾರತಕ್ಕೆ ದಾಳಿಯಿಟ್ಟು ಸಾಮ್ರಾಜ್ಯ ಸ್ಥಾಪಿಸಿ ಹತ್ತೈವತ್ತು ವರ್ಷಗಳಷ್ಟೇ ಆಗಿದ್ದವು, ಅವರ ಮೂಲಕ ಭಾರತಕ್ಕೆ ಬಂದ ಜಿಲೇಬಿಯು ಆಗಿನ್ನೂ ‘ಝಲ್ಲಬಿ’ ಆಗಿಯೇ ಇತ್ತು. ಕನ್ನಡದಲ್ಲಿ ಮಹಾಪ್ರಾಣ ಕಳೆದುಕೊಂಡು ಜಲ್ಲಬಿ ಆಗಿತ್ತು.

ಏಕೆಂದರೆ ಜಿಲೇಬಿಯ ಮೂಲ ಪಶ್ಚಿಮ ಏಷ್ಯಾ, ಅಲ್ಲಿಂದ ಅದು ಭಾರತಕ್ಕೆ ಬಂದದ್ದು ಅಂತೊಂದು ಬಲವಾದ ಥಿಯರಿ ಇದೆ. ಆದರೆ, 15ನೆಯ ಶತಮಾನದಲ್ಲಿ ಅದಾಗಲೇ ಈ ಭಕ್ಷ್ಯವು ‘ಕುಂಡಲಿಕಾ’ ಮತ್ತು ‘ಜಲವಲ್ಲಿಕಾ’ ಎಂಬ ಹೆಸರಿನಿಂದ ಭಾರತದಲ್ಲಿತ್ತು; ಸಂಸ್ಕೃತದ ‘ಜಲವಲ್ಲಿಕಾ’ವೇ ಜಲೇಬಿ ಆದ್ದದ್ದೆಂಬ ಇನ್ನೊಂದು ಥಿಯರಿಯೂ ಇದೆ. ಹಾಗೆ ನೋಡಿದರೆ ಕನ್ನಡದಲ್ಲಿ ಜಿಲೇಬಿಯು ದ್ವಾಪರ ಯುಗದಿಂದಲೂ ಇದೆಯೆಂದು ಮಾಯಾಬಜಾರ್
ಚಿತ್ರದ ‘ಭಲೇ ಜಿಲೇಬಿ ಮೊದಲು ಇವೆಲ್ಲ ನನ್ನ ಪಾಲು…’ ಸಾಲನ್ನು ಆಧಾರವಾಗಿಟ್ಟುಕೊಂಡು ಹೇಳಬಹುದೆನ್ನಿ.

ಪಾವೆಂ ಆಚಾರ್ಯರು ಪದಾರ್ಥಚಿಂತಾಮಣಿಯಲ್ಲಿ ಜಿಲೇಬಿಯನ್ನು ವಿಸ್ತೃತವಾಗಿ ಬಡಿಸಿದ್ದಾರೆ. ಅರ್ಥಾತ್ ವ್ಯುತ್ಪತ್ತಿಯ ಒಗಟನ್ನು ಬಿಡಿಸಿದ್ದಾರೆ. ಜಿಲೇಬಿಯ ದಾಯಾದಿ ಜಹಾಂಗಿರೀ (ಜಾಂಗ್ರಿ)ಯನ್ನೂ ಉಲ್ಲೇಖಿಸಿದ್ದಾರೆ: ‘ಇಸ್ಲಾಮಿ ಆಳಿಕೆಯ ಕಾಲದಲ್ಲಿ ಸಾಮಾನ್ಯವಾಗಿ ಸನಾತನಿಗಳೆನಿಸಿದ ಹಿಂದುಗಳು ಮುಸ್ಲಿಂ ಸಂಸ್ಕೃತಿಯ ಲಕ್ಷಣಗಳನ್ನು ದೂರವೇ ಇರಿಸಿದ್ದರು. ಇಸ್ಲಾಮಿ ಆಳಿಕೆಯಲ್ಲಿ ಅರಮನೆಯ ಸಂಪರ್ಕವುಳ್ಳವರನ್ನು ಬಿಟ್ಟರೆ
ವೇಷ ಭೂಷಣಗಳಲ್ಲಿ ಅವರ ಪ್ರಭಾವ ಸನಾತನಿಗಳ ಮೇಲೆ ಕಡಿಮೆಯಿತ್ತು. ಆದರೆ ಎಲ್ಲ ವಿಷಯಗಳಲ್ಲಿ ಇದು ಸಾಧ್ಯವಾಗಿರಲಿಲ್ಲ.

ಉದಾಹರಣೆಗೆ, ಮುಸ್ಲಿಂ ಬಾವರ್ಚಿಗಳು ಅನ್ವೇಷಿಸಿದ ಕೆಲ ಸಿಹಿ ತಿಂಡಿಗಳು ಹಿಂದೂ ಜನರ ಅಡುಗೆಯಲ್ಲಿ ತಲೆ ಹಾಕಿದ್ದವು. ‘ಶಿರಾ’ ಅಂಥದೊಂದು. ಇದು ಶೀರ್(ಹಾಲು) ಅಥವಾ ಶೀರೀನೀ (ಮಾಧುರ್ಯವುಳ್ಳದ್ದು) ಜೊತೆಗೆ ರವಾ ಸೇರಿ, ಚಲಾವಣೆಯಲ್ಲಿ ಪೂರ್ವಪದ ಶಿರಾ ಎಂದಷ್ಟೇ ಉಳಿದು ಕೊಂಡಿರುವ ಪದ. ಇನ್ನೊಂದು ‘ಜಹಾಂಗೀರ್’. ಇದು ಜಹಾಂಗೀರ್ ಬಾದಶಾಹನ ಕಾಲದಲ್ಲಿ ಯಾವನೋ ಮುಸ್ಲಿಂ ಅಡುಗೆಯವನ ಆವಿಷ್ಕಾರ ವಿದ್ದಿರಬೇಕೆಂಬ ಕಲ್ಪನೆ ಹುಟ್ಟಬಹುದು.

ಆದರೆ ವಸ್ತುಸ್ಥಿತಿ ಹಾಗಿಲ್ಲ. ಜಹಾಂಗೀರೀ ಎಂಬುದೊಂದು ಹಸ್ತಾಭರಣ. ನಮ್ಮ ‘ಮುರಿಗೆ’ ಆಭರಣವನ್ನು ಹೋಲುವಂಥದ್ದು. ಜಹಾಂಗೀರೀ ಪದ ಪಾರಸೀಕ ಮೂಲದ್ದು. ಜಹಾಂಗೀರಿ ಸಿಹಿತಿಂಡಿಯನ್ನು ಮಾಡುವಾಗ ಮುರಿಗೆಯಂತೆ ಸುರುಳಿಯಾಗಿ ಹಿಟ್ಟನ್ನು ಹೊಯ್ದು ಕರಿದು ಸಕ್ಕರೆ ಪಾಕದಲ್ಲಿ  ಹಾಕುತ್ತೇವೆ. ಜಹಾಂಗಿರೀ ಉದ್ದಿನಹಿಟ್ಟಿನಿಂದ ತಯಾರಿಸಿದ್ದಾದರೆ ಜಿಲೇಬಿ ಎಂಬ ಅಂಥದೇ ಇನ್ನೊಂದು ತಿಂಡಿ ಮೈದಾಹಿಟ್ಟಿನಿಂದ ಸುಮಾರಾಗಿ ಅದೇರೀತಿ ತಯಾರಿಸಿದ ಪಾಕದ ತಿಂಡಿ. ಹಿಂದೀಯಲ್ಲಿ ಅದನ್ನು ಜಲೇಬಿ ಎನ್ನುತ್ತಾರೆ. ಈ ಶಬ್ದ ಎಲ್ಲಿಯದು? ಡಾ. ಶಂಕರ ಕೆದಿಲಾಯರು ಬರೆದ ಫಾರಿನ್ ವರ್ಡ್ಸ್ ಇನ್ ಕನ್ನಡ ಪುಸ್ತಕದ ಪ್ರಕಾರ ಇದು ಪಾರಸೀಕ ಪದವೇ. ಅಂದಹಾಗೆ ನಮಗೆಲ್ಲ ಇಂದು ಸುಪರಿಚಿತವಾಗಿರುವ ಸೂಕ್ಷ್ಮ ಬಿಳಿ ಗೋದಿ ಹಿಟ್ಟಿಗಿರುವ ಮೈದಾ ಎಂಬ ಹೆಸರೂ ಪಾರಸೀಕ.’

ಹಾಗಿದ್ದರೆ ಮುಘಲರಿಂದ ಮೈದಾ ಪರಿಚಯವಾಗುವ ಮೊದಲಿಗೆ ಭಾರತದಲ್ಲಿ ಅಕ್ಕಿ-ಉದ್ದಿನ ಮಿಶ್ರಣದಿಂದ ಜಿಲೇಬಿ ತಯಾರಿಸುತ್ತಿದ್ದರೇ? ಅಥವಾ ಜಹಾಂಗೀರಿಯನ್ನೇ ಜಿಲೇಬಿ ಎನ್ನುತ್ತಿದ್ದರೇ? ಜಲವಲ್ಲಿಕಾ, ಅಮೃತವಲ್ಲರಿ ಮುಂತಾದ ಹೆಸರುಗಳ ಬಳಕೆಯನ್ನು ಗಮನಿಸಿದಾಗ ಜಾಂಗ್ರಿ-ಜಿಲೇಬಿ ಓವರ್
ಲ್ಯಾಪ್ ಆಗಿರುವ ಸಾಧ್ಯತೆಗಳೂ ಇವೆ. ಕ್ರಿ.ಶ ೧೬ನೆಯ ಶತಮಾನ ದವನೆನ್ನಲಾದ ಕನ್ನಡಿಗ, ಮೈಸೂರಿನ ಮಂಗರಸನು ‘ಸೂಪಶಾಸ್ತ್ರ’ ದಲ್ಲಿ ಅಮೃತವಲ್ಲರಿಯನ್ನು ವಿವರಿಸಿದ್ದಾನೆ: ‘ಅರೆದಕ್ಕಿಯುದ್ದಿಟ್ಟ ಸಂಪಳೆಯನೊಕ್ಕಣ್ಣ| ಕರಟದೊಳ್ ತುಂಬಿ ಕೆಲವಂ ತುಪ್ಪದೊಳ| ಗುರುಳಿಯಪ್ಪಂತು ಬಿಡೆ ಪೀಯೂಷಪಿಂಡಮಾದುದು ಕೆಲವ ಲತೆಯಂತಿರೆ| ಹರಿದು ಬಿಡಲಮೃತವಲ್ಲರಿಯೆಂಬ ಹೆಸರಾಯ್ತು| ಕರತಳದಲಪ್ಪದೊಲ್ ಬಿಡೆ ಜೇನುಕೊಡ ವೆಸರ| ಧರಿಯಿಸಿ ಯೊಳಗೋಗುವಡೆದುವು ಮತ್ತದಕೆ ಸಕ್ಕರೆಯ ಪಾಕವನಿಡುವುದು||’ ಅಕ್ಕಿ ಮತ್ತು ಉದ್ದನ್ನು ರುಬ್ಬಿ ತಯಾರಿಸಿದ ಹಿಟ್ಟನ್ನು ತುಪ್ಪ ದಲ್ಲಿ ಕರಿಯಬೇಕು. ಸಂಪಳೆ ಎಂದರೆ ಹಿಟ್ಟು.

ಹಾಗೆ ಹಿಟ್ಟನ್ನು ತುಪ್ಪದಲ್ಲಿ ಕರಿಯುವಾಗ ಮೂಡುವ ಆಕಾರದ ಆಧಾರದಿಂದ ಮೂರು ಬಗೆಯ ತಿಂಡಿಗಳಾಗುತ್ತವಂತೆ. ದುಂಡಗೆ (ಗೋಳಿಬಜೆಯಂತೆ ಅಂದ್ಕೊಳ್ಳೋಣ) ಹಿಟ್ಟಿನ ಉಂಡೆ ಕರಿದರೆ ಅದಕ್ಕೆ ‘ಪೀಯೂಷಪಿಂಡ’ ಎಂದು ಹೆಸರು. ಒಂದು ಕಣ್ಣು ತೆರೆದ ತೆಂಗಿನ ಕರಟದ ಸಹಾಯದಿಂದ ಬಳ್ಳಿ ಯಂತೆ ಆಕಾರ ತಂದು ಕರಿದರೆ ಅದಕ್ಕೆ ‘ಅಮೃತವಲ್ಲರಿ’ ಎಂದು ಹೆಸರು. ಎರೆಯಪ್ಪ ಅಥವಾ ಮದ್ದೂರ್‌ವಡೆಯಂತೆ ಹಿಟ್ಟನ್ನು ಕೈಯಲ್ಲಿ ಚಪ್ಪಟೆ ಯಾಕಾರ ತಟ್ಟಿ ಕರಿದರೆ ಅದರ ಹೆಸರು ‘ಜೇನುಗೊಡ’. ಆಕಾರ ಯಾವುದೇ ಇದ್ದರೂ ಕರಿದ ಬಳಿಕ ಸಕ್ಕರೆಪಾಕದಲ್ಲಿ ಮುಳುಗಿಸಿ ಸಿಹಿಯಾಗಿಸಬೇಕು.

ಬಹುಶಃ ಅಮೃತವಲ್ಲರಿ ಎಂಬ ಹೆಸರು ಜಿಲೇಬಿಗಿಂತಲೂ ಜಹಾಂಗೀರಿಗೇ ಹೆಚ್ಚು ಸೂಕ್ತ. ಏಕೆಂದರೆ ಆಕಾರದಲ್ಲಿ ಅದು ಕಲಾವಿದನೊಬ್ಬ ಬಿಡಿಸಿದ ಆಲಂಕಾರಿಕ ಚಕ್ರವಾಗಿ ಮುತ್ತು- ಹವಳಗಳನ್ನು ಕೋದ ಕಡಗದಂತೆ ಅತಿಸುಂದರ. ಜಿಲೇಬಿಗೆ ಅಂಥ ಶೋಆಫ್ ಶೋಕಿ ಇಲ್ಲ. ಆದರೂ ಜನಪ್ರಿಯತೆ ಮತ್ತು ಪ್ರಸಿದ್ಧಿಯ ಮಟ್ಟಿಗೆ ಜಿಲೇಬಿಯದೇ ಮೇಲುಗೈ. ರಾಷ್ಟ್ರಪಕ್ಷಿ, ರಾಷ್ಟ್ರಪ್ರಾಣಿ, ರಾಷ್ಟ್ರಪುಷ್ಪ ಅಂತೆಲ್ಲ ಇದ್ದಂತೆ ಭಾರತದ ರಾಷ್ಟ್ರೀಯ ಸಿಹಿತಿಂಡಿ ಅಂತೇನಾದರೂ ಇರುತ್ತಿದ್ದರೆ ಜಿಲೇಬಿ ಅವಿರೋಧವಾಗಿ ಆಯ್ಕೆಯಾಗುತ್ತಿತ್ತು.

ಚುನಾವಣೆ ನಡೆದಿದ್ದರೂ ಉಳಿದೆಲ್ಲ ಭಕ್ಷ್ಯಗಳು ಠೇವಣಿ ಕಳೆದುಕೊಳ್ಳುತ್ತಿದ್ದವು. ಇದನ್ನು ನಾನಿಲ್ಲಿ ಇಷ್ಟು ಅಭಿಮಾನದಿಂದ ಹೇಳಲಿಕ್ಕೆ ಕಾರಣ- ನನ್ನದು ಸ್ವೀಟ್ ಟೂಥ್ ಅಲ್ಲವಾದರೂ, ಸಕ್ಕರೆಯಿಂದ ಮಾಡಿದ ತಿಂಡಿಗಳತ್ತ ನನಗೆ ಅಷ್ಟೇನೂ ಒಲವಿಲ್ಲವಾದರೂ, ಸಿಹಿಯ ಪೈಕಿ ಅತ್ಯಂತ ಇಷ್ಟವಾಗುವುದು ಜಿಲೇಬಿಯೇ. ನಮ್ಮ ಮದುವೆಯಂದು ಮುಖ್ಯ ಭಕ್ಷ್ಯವಾಗಿ ವಧುವಿನ ಆಯ್ಕೆಯಂತೆ ಹೋಳಿಗೆ ಇತ್ತು; ವರನ ಆಯ್ಕೆಯಂತೆ ಜಿಲೇಬಿಯೂ ಇತ್ತು!
ಮಂಗರಸನ ಪಾಕಪದ್ಯದಲ್ಲಿರುವ ಅಮೃತವಲ್ಲರಿಯು ಜಿಲೇಬಿಯೇ ಅಂತಾದರೆ- ನನಗದರಲ್ಲಿ ಗಮನ ಸೆಳೆವುದು ‘ಒಕ್ಕಣ್ಣ ಕರಟದೊಳ್ ತುಂಬಿ…’ ಎಂಬ ವಿವರಣೆ. ಏಕೆಂದರೆ ನಮ್ಮಕಡೆಯೂ ಜಿಲೇಬಿ ಮಾಡುವ ಸಾಂಪ್ರದಾಯಿಕ ವಿಧಾನದಲ್ಲಿ ಹಿಟ್ಟನ್ನು ತೆಂಗಿನ ಕರಟದ ತೂತಿನಿಂದ ಬಿಟ್ಟು ಕರಿಯುವುದು.

ಅದೂ ಶುದ್ಧ ತುಪ್ಪದಲ್ಲಿ ಕರಿದರೇನೇ ರಾಜಮಾನ್ಯ ಜಿಲೇಬಿ ಅನಿಸುವುದು (ಮುನಿಸಿಕೊಂಡು ಮನೆಬಿಟ್ಟು ಹೋದ ತುಂಟ ಹುಡುಗ ‘ಬಬ್ಲೂ’ ಆಮೇಲೆ ಜಿಲೇಬಿ ಪ್ರಲೋಭನೆಯಿಂದ ಮನೆಗೆ ಮರಳುವ ದೃಶ್ಯವಿದ್ದ ೯೦ರ ದಶಕದ ಆ ಸುಂದರ ಜಾಹಿರಾತು ತುಪ್ಪದ್ದಲ್ಲ ‘ಧಾರಾ’ ಅಡುಗೆ ಎಣ್ಣೆಯದು). ಪರಿಣತ
ಅಡುಗೆಭಟ್ಟರ ಕೈಯಿಂದ ಅಂದದ ವಿನ್ಯಾಸ ಪಡೆಯುತ್ತ ಜಿಲೇಬಿ ತಯಾರಾಗುವ ಪ್ರಕ್ರಿಯೆ ನೋಡುವುದೇ ಚಂದ. ಪಾಕದಲ್ಲಿ ಮಿಂದು ಬಂದಾಗಿನ ಅದರ ಗರಿಗರಿತನ, ಬಾಯೊಳಗಿಡುತ್ತಿದ್ದಂತೆ ಕರಗುವ ಸಿಹಿ ಅನುಭವ ಇನ್ನೂ ಚಂದ! ಈಗಿನ ಕಾಲದವರು ಒಂದೆರಡು ಜಿಲೇಬಿ ತಿಂದಾಗಲೇ ಸುಸ್ತಾದರೆ ಹಿಂದಿನ ಕಾಲದಲ್ಲಿ ಪಂಥ ಕಟ್ಟಿ ತಿನ್ನುವವರಿರುತ್ತಿದ್ದರು. ಸಮಾರಂಭದ ಭೋಜನ ಸಮಾಪ್ತವಾಗುತ್ತ ಬರುತ್ತಿದ್ದಂತೆ ಪಂಥಾಹ್ವಾನಗಳು ಶುರುವಾಗು ತ್ತಿದ್ದುವು.

ಹತ್ತಿಪ್ಪತ್ತು ಜಿಲೇಬಿಗಳು ಸಲೀಸಾಗಿ ಹೊಟ್ಟೆಗಿಳಿ ಯುತ್ತಿದ್ದವು. ಕೊನೆಗೆ ಮೊಸರಿನ ಜೊತೆ ಒಂದು, ಉಪ್ಪಿನಕಾಯಿ ರಸ ಹಚ್ಚಿ ಇನ್ನೊಂದು ಹೀಗೆ ಕ್ಲೈಮ್ಯಾಕ್ಸ್. ಎಲ್ಲ ಗತಕಾಲದ ವೈಭವ. ಒಟ್ಟಾರೆಯಾಗಿ ದಕ್ಷಿಣಭಾರತದಲ್ಲಿ ಜಿಲೇಬಿ ಭಕ್ಷಣ ಮದುವೆ ಮತ್ತಿತರ ವಿಶೇಷ ಸಮಾರಂಭಗಳ ಔತಣಕ್ಕೆ, ಅಥವಾ ಹೆಣ್ಣು ಮಗು ಹುಟ್ಟಿದರೆ ಸಿಹಿ ಹಂಚೋಣಕ್ಕೆ ಮಾತ್ರ ಸೀಮಿತ. ಮತ್ತೆ ಕೆಲವೆಡೆ ವರ್ಷಕ್ಕೊಮ್ಮೆ ನಡೆಯುವ ಜಿಲೇಬಿ ಜಾತ್ರೆಗಳು. ಯಾದಗಿರಿ ಜಿಲ್ಲೆಯ ಶಹಾಪೂರದಲ್ಲಿ ಹಜರತ್ ಮುನವರ್ ಬಾಷಾ ದರ್ಗಾದ ಜಾತ್ರೆ ಅಂಗವಾಗಿ ಜಿಲೇಬಿ ಭಕ್ಷಣದ ಸಂಪ್ರದಾಯವಿದೆಯಂತೆ. ಹಿಂದೂ-ಮುಸ್ಲಿಂ ಭಾವೈಕ್ಯದ ಆ ಜಾತ್ರೆಗೆ ಭಕ್ತರು ಆಗಮಿಸಿ ದರ್ಗಾದಲ್ಲಿ ದರ್ಶನ ಪಡೆದ ಬಳಿಕ ಜಿಲೇಬಿ ಸೇವಿಸಿದರೆ ಒಳ್ಳೆಯದಾಗುತ್ತದೆ ಅಂತೊಂದು ನಂಬಿಕೆ.

ಹಾಗೆಯೇ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಪ್ರತಿ ವರ್ಷ ಜನವರಿ ೨೬ರಂದು ಗಣತಂತ್ರ ದಿವಸದ ಸಂಭ್ರಮಕ್ಕೆ ಭರ್ಜರಿಯಾಗಿ ಜಿಲೇಬಿ ಸೇವನೆ. ವರ್ಷಗಳಿಂದ ನಡೆದುಬಂದಿರುವ ಕ್ರಮ. ಆವತ್ತೊಂದೇ ದಿನ ಸುಮಾರು ೯೦ಸಾವಿರ ಕೆಜಿಗಿಂತಲೂ ಹೆಚ್ಚು ಜಿಲೇಬಿ ಅಲ್ಲಿ ಮಾರಾಟವಾಗುತ್ತದಂತೆ. ಉತ್ತರ ಭಾರತದಲ್ಲಾದರೆ ಹಾಗಲ್ಲ, ಅಲ್ಲಿ ವರ್ಷವಿಡೀ ದಿನಾ ಬೆಳಗ್ಗೆ ಬ್ರೇಕ್ ಫಾಸ್ಟ್‌ಗೂ ಜಿಲೇಬಿ ತಿನ್ನುವ ರೂಢಿಯಿದೆ ಎಂದು ನನಗೆ ಗೊತ್ತಾದದ್ದು ದಶಕಗಳ ಹಿಂದೆ ನಾನು ಮೊದಲ ಉದ್ಯೋಗನಿಮಿತ್ತ ಕೆಲ ತಿಂಗಳಕಾಲ ದಿಲ್ಲಿಯಲ್ಲಿದ್ದಾಗ. ದಕ್ಷಿಣ ಭಾರತದವರಿಗೆ ಜಿಲೇಬಿ ವಿಶೇಷ ಭಕ್ಷ್ಯವಾದರೆ ಉತ್ತರದವರಿಗದು ಸ್ಟೇಪಲ್ ಫುಡ್. ಅವರು ಆಲೂಗೆಡ್ಡೆ ಪಲ್ಯದ ಜೊತೆಯೆಲ್ಲ ಜಿಲೇಬಿ ತಿನ್ನ ಬಲ್ಲರು! ಅಂದಹಾಗೆ ದಿಲ್ಲಿಯಲ್ಲಿ ಕೆಲವು ಜಿಲೇಬಿ ಅಂಗಡಿಗಳಿಗೆ ನೆಹರು, ರಾಜೀವ ಗಾಂಧಿ, ಮನಮೋಹನ ಸಿಂಗ್ ಆದಿಯಾಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ವಿವಿಐಪಿ ಗಿರಾಕಿಗಳ ಖ್ಯಾತಿಯೂ ಇದೆ.

ಹಾಗೆಯೇ ಕೋಲ್ಕತ್ತಾದಲ್ಲಿ ರಾಮಕೃಷ್ಣ ಪರಮಹಂಸರಿಗಿದ್ದ ಜಿಲೇಬಿ ಪ್ರೇಮ ಕೂಡ ಸಿಹಿ ದಂತಕಥೆಯೇ. ಜಿಲೇಬಿ ಪ್ರೇಮದ ವಿಚಾರದಲ್ಲಿ ನಮ್ಮ ಕನ್ನಡ ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಜಯಂತ ಕಾಯ್ಕಿಣಿಯವರ ಕವಿತೆಗಳ ಸಂಕಲನವೊಂದರ ಹೆಸರೇ ‘ಒಂದು ಜಿಲೇಬಿ’ ಅಂತ ಇದೆ. ಹಾಗೆಯೇ ಬಿ. ಎ. ಸನದಿ ಅವರದೊಂದು ಕವನ ಸಂಕಲನ ‘ಜಿಲೇಬಿ ಝಣ್ ಝಣ್’. ರಂಗರಾಜ್ ಚಕ್ರವರ್ತಿ ಅವರ ಲೇಖನಗಳ ಗುಚ್ಛ ಸಹ ‘ಜಿಲೇಬಿ’. ಪೂರ್ಣಚಂದ್ರ ತೇಜಸ್ವಿಯವರಿಗೆ ಜಿಲೇಬಿ ರುಚಿ ಹತ್ತಿಸಿದವರು ಅವರ ಗುರುಗಳಾದ, ಮಲೆನಾಡಿನ ಕೃಷಿ ಪರಿಣತರಾಗಿದ್ದ ಅಲಿಗೆ ಪುಟ್ಟಯ್ಯನಾಯಕ ಎಂಬುವವರಂತೆ. ಅದೂ ಸಕ್ಕರೆಪಾಕದಲ್ಲಿ ಅದ್ದಿದ್ದಲ್ಲ, ಜೇನುತುಪ್ಪದಲ್ಲಿ ಅದ್ದಿ ತಯಾರಿಸಿದ ಜಿಲೇಬಿ! ಆಮೇಲೆ ಪುಟ್ಟಯ್ಯರಲ್ಲಿಗೆ ತೇಜಸ್ವಿ ಭೇಟಿ ನೀಡಿದಾಗೆಲ್ಲ ಜಿಲೇಬಿ ಸಮಾರಾಧನೆ ಇರುತ್ತಿತ್ತಂತೆ.

ಹಾಗೆಯೇ, ಕಳೆದ ವಾರದ ಅಂಕಣದಲ್ಲಿ ನೆನಪಿಸಿಕೊಂಡಿದ್ದ ‘ತಿಂಡಿಪೋತ’ ಡಿ. ವಿ. ಗುಂಡಪ್ಪನವರದೂ ಒಂದು ಜಿಲೇಬಿ ಪ್ರಸಂಗ ಇದೆ. ಒಮ್ಮೆ ಅವರಿಗೆ ಸಕ್ಕರೆಕಾಯಿಲೆ ಉಲ್ಬಣವಾಗಿ ಆಸ್ಪತ್ರೆಯಲ್ಲಿದ್ದರು. ಅವರನ್ನು ನೋಡಲೆಂದು ಸಾಹಿತಿ ಹಾ.ಮಾ.ನಾಯಕರು ಆಸ್ಪತ್ರೆಗೆ ಧಾವಿಸಿ ಬಂದರು. ಅಷ್ಟರಲ್ಲಿ ಶುಗರ್ ತಹಬಂದಿಗೆ ಬಂದಿದ್ದರಿಂದ, ಡಿವಿಜಿಯವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಅವರು ಮನೆ ಸೇರಿದ್ದರು. ಹೇಗಿದ್ದರೂ ಅವರನ್ನು ನೋಡಲೆಂದು ಬಂದಿದ್ದಾಗಿದೆ, ಸೀದಾ ಮನೆಗೇ ಹೋಗಿ ಮಾತಾಡಿಸಿಕೊಂಡು ಆಶೀರ್ವಾದ ಪಡೆದು ಹೋಗುವುದೆಂದು ನಿಶ್ಚಯಿಸಿದ ಹಾಮಾನಾ,
ಡಿವಿಜಿಯವರ ಮನೆಗೆ ಬಂದರು.

ಅಲ್ಲಿ ಕಂಡದ್ದೇನು? ಡಿವಿಜಿ ಲಕ್ಷಣವಾಗಿ ಚಕ್ಳಮಕ್ಳ ಹಾಕ್ಕೊಂಡು ಜಿಲೇಬಿ ತಿನ್ನುತ್ತಿದ್ದಾರೆ! ಹಾಮಾನಾಗೆ ಅಚ್ಚರಿ. ಏನ್ಸಾರ್ ಇದೂ? ಎಂದು ಕೇಳಿದ್ದಕ್ಕೆ,
ಅವರಿಗೂ ಒಂದು ಜಿಲೇಬಿ ಕೊಟ್ಟು, ‘ನೋಡ್ರಿ, ಜಿಲೇಬಿ ತಿಂದು ಆನಂದಪಡೋದು ಒಂದು ಡಿಪಾರ್ಟ್‌ಮೆಂಟ್. ರೋಗ ಅಂತ ನರಳೋದು ಇನ್ನೊಂದು ಡಿಪಾರ್ಟ್‌ಮೆಂಟ್. ನನ್ನ ದೇಹದಲ್ಲಿ ಇವೆರಡಕ್ಕೂ ಬೇರೆಬೇರೆ ಚಾನಲ್‌ಗಳಿವೆ. ಒಂದು ಇನ್ನೊಂದರಲ್ಲಿ ತಲೆಹಾಕುವುದಿಲ್ಲ!’ ಎಂದರಂತೆ ಡಿವಿಜಿ. ‘ಎರಡು ಕೋಣೆಗಳ ನೀಂ ಮಾಡು ಮನದಾಲಯದಿ| ಹೊರ ಕೋಣೆಯಲಿ ಲೋಗರಾಟಗಳನಾಡು| ವಿರಮಿಸೊಬ್ಬನೆ ಮೌನದೊಳಮನೆಯ
ಶಾಂತಿಯಲಿ| ವರಯೋಗ ಸೂತ್ರವಿದು ಮಂಕುತಿಮ್ಮ||’ ಎಂದಿರುವಂತೆ ಮನದಾಲಯದಲ್ಲಿ ಮಾತ್ರವಲ್ಲ ಡಿವಿಜಿ ಬಹುಶಃ ದೇಹದಲ್ಲೂ ಎರಡು ಕೋಣೆ ಮಾಡಿಕೊಂಡಿದ್ದರು: ಒಂದು ಇನ್ಸುಲಿನ್ ಗುಳಿಗೆ ಸೇವನೆಗೆ, ಇನ್ನೊಂದು ಜಿಲೇಬಿ ಭಕ್ಷಣಕ್ಕೆ!

ಇಂತಿರುವ ಜಿಲೇಬಿಯನ್ನು ಜಾತಿಸೂಚಕ ಕೋಡ್‌ವರ್ಡ್ ಆಗಿಯೂ ಬಳಸುತ್ತಾರೆಂದು ಗೊತ್ತಾದದ್ದು ಹಿಂದೊಮ್ಮೆ ಕರ್ನಾಟಕ ವಿಧಾನಸಭೆಯಲ್ಲಿ ನಡೆದಿದ್ದ ಸ್ವಾರಸ್ಯಕರ ಚರ್ಚೆಯಿಂದ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲ. ಆ ಚರ್ಚೆ ಹೀಗಿತ್ತು: ‘ಜಿಲೇಬಿಗೆ ಸಂಬಂಧಿಸಿದ ಕಡತಗಳು
ಹೋದರೆ ಈ ಸರ್ಕಾರದಲ್ಲಿ ಕೊಳೆಯುತ್ತ ಬೀಳೋದು ಗ್ಯಾರಂಟಿ. ಈ ಸರ್ಕಾರಕ್ಕೆ ಜಿಲೇಬಿ ಎಂದರೆ ಅಲರ್ಜಿ. ಅದಕ್ಕೇ ನಾನ್ -ಜಿಲೇಬಿ ಕಡತಗಳು ಮಾತ್ರ ವಿಲೇವಾರಿ ಆಗುತ್ತಿವೆ’ ಎಂದು ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್ ಟೀಕಿಸಿದರು.

ಹಲವು ಸದಸ್ಯರು ‘ಯಾವುದದು ಜಿಲೇಬಿ?’ ಎಂದು ಕುತೂಹಲದಿಂದ ಕೇಳಿದರು. ‘ಆಡಳಿತ ನಡೆಸುವವರ ಸಂಕೇತ ಭಾಷೆಯಲ್ಲಿ ‘ಜಿಲೇಬಿ’ ಎಂದರೆ ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯ. ಜಿಲೇಬಿಗೆ ಸಂಬಂಧಿಸಿದ ಕಡತಗಳನ್ನು ಪಕ್ಕಕ್ಕೆಇಡಲಾಗುತ್ತದೆ. ನಾನ್-ಜಿಲೇಬಿ (ಮೇಲಿನ ಮೂರೂ
ಸಮುದಾಯಗಳನ್ನು ಹೊರತುಪಡಿಸಿ ಇತರ ಜಾತಿಗಳು) ಕಡತಗಳು ಬಂದರೆ ತತ್‌ಕ್ಷಣ ವಿಲೇವಾರಿ ಆಗುತ್ತವೆ’ ಎಂದು ಶೆಟ್ಟರ್ ಸರ್ಕಾರವನ್ನು ಕುಟುಕಿದರು. ‘ನಮ್‌ಕಡೆ ಹೆಣ್ಣು ಹುಟ್ಟಿದರೆ ಜಿಲೇಬಿ, ಗಂಡಾದರೆ ಪೇಢಾ ಹಂಚ್ತೀವಿ. ಸ್ವೀಟ್ ಏನು ಬಂದೈತಿ ನೋಡಿದಾಗ ಯಾವ ಕೂಸು ಹುಟ್ಟೈತಿ ಅಂತ ಗೊತ್ತಾಗ್ತೈತಿ. ಈ ಸರ್ಕಾರ ಕೂಡ ಕಡತ ವಿಲೇವಾರಿಗೆ ಅಂಥದ್ದೇನೋ ನಿಯಮ ಮಾಡೈತಿ’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಚರ್ಚೆಗೆ ಇನ್ನಷ್ಟು ರಂಗು ತುಂಬಿದರು.

‘ಹೆಣ್ಣು ಹುಟ್ಟಿದರೆ ಲಕ್ಷ್ಮಿ ಬಂದಂತೆ. ಜಿಲೇಬಿ ಹಂಚಿ ಸಂಭ್ರಮಿಸುವುದು ಒಳ್ಳೆ ಯದೇ!’ ಎಂದು ಆಡಳಿತ ಪಕ್ಷದ ಸದಸ್ಯರು ಹೇಳಿದಾಗ ‘ಸರಕಾರದ ಈ ಜಿಲೇಬಿ, ನಾನ್-ಜಿಲೇಬಿ ಕಡತಗಳಿಂದ ಯಾರಿಗೆ ಲಕ್ಷ್ಮಿ ಒಲಿದಳೋ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ದನಿಗೂಡಿಸಿದರಂತೆ. ಆದರೆ ನೆನಪಿರಲಿ: ಈ ಗೋಸುಂಬೆ ರಾಜಕಾರಣಿಗಳ ‘ಜಿಲೇಬಿ’ ಮಾತ್ರ ಯಾವ ಕಾರಣಕ್ಕೂ ಅಮೃತವಲ್ಲ ರೀ, ತೀಕ್ಷ್ಣ ವಿಷ ರೀ! ಅಣ್ಣಾಜಿ ಕವಿ ನೋಡಿದ್ದಿದ್ದರೆ ಅದನ್ನು ‘ವಿಷದ ಉರುಳಿನಂತಿರುವ ಲತೆ’ ಎನ್ನುತ್ತಿದ್ದನು.