Thursday, 12th December 2024

ಎಚ್ಎಎಲ್ ಘಟಕದಲ್ಲಿ ಕೆಲಸ: ಜಾಲತಾಣದಲ್ಲಿ ವಂಚಕರು ಸಕ್ರಿಯ

ಉದ್ಯೋಗಾಕಾಂಕ್ಷಿಗಳು ಮೋಸ ಹೋಗಬೇಡಿ

ಯಾವುದೇ ಅಧಿಸೂಚನೆ ಹೊರಡಿಸಿಲ್ಲ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಎಚ್ಎಎಲ್ ಘಟಕ ಆರಂಭವಾಗಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಕೆಲಸ ಕೊಡಿಸುವ ನೆಪದಲ್ಲಿ ಹಣ ಪೀಕುತ್ತಿದ್ದಾರೆ.
 ಉದ್ಯೋಗ ಕೊಡಿಸುತ್ತೇವೆಂದು ವಂಚಕರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿ, ಉದ್ಯೋಗಾಕಾಂಕ್ಷಿ ಗಳಿಗೆ ಆಸೆ ತೋರಿಸಿ ಸಾವಿರಾರು ರುಪಾಯಿ ಪಡೆದು ವಂಚಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನೂರಾರು ಮಂದಿ ಕೆಲಸದ ನೆಪದಲ್ಲಿ ಹಣಕಳೆದುಕೊಂಡು ಸುಮ್ಮನಾಗಿದ್ದಾರೆ.ಕೆಲ ತಿಂಗಳ ಹಿಂದೆಯೂ ವಂಚಕರು ಕೆಲಸ ಕೊಡಿಸುವ ನೆಪದಲ್ಲಿ ಹಣಪಡೆದು ಕಾಣೆಯಾಗಿದ್ದರು.
ಕೇಂದ್ರ ಸರಕಾರದ ಅಧೀನದಲ್ಲಿರುವ ಎಚ್ಎಎಲ್ ಘಟಕಕ್ಕೆ ನೇಮಕಾತಿ ಮಾಡಬೇಕಾದರೆ ಸರಕಾರ ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆ ಗಳನ್ನು ಕೈಗೊಳ್ಳುತ್ತದೆ. ಯಾವುದೇ ಮಧ್ಯವರ್ತಿಗಳು ಹಾಗೂ ಖಾಸಗಿ ಸಂಸ್ಥೆಗಳ ಮೂಲಕ ನೇಮಕ ಮಾಡುವುದಿಲ್ಲ. ಈ ಬಗ್ಗೆ ಉದ್ಯೋಗಾಕಾಂಕ್ಷಿಗಳಿಗೆ ಅರಿವಿದ್ದರೂ ಮೋಸ ಹೋಗುತ್ತಿರುವುದು ವಿಪರ್ಯಾಸ ಎಂದು ಎಚ್ಎಎಲ್ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.