Thursday, 12th December 2024

ಎಥೆನಾಲ್‌: ಆಧುನಿಕ ಜಗತ್ತಿನ ಅನಿವಾರ್ಯ

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ಇಂಧನ ಸಪ್ತಾಹ ಉದ್ಘಾಟಿಸಿ ಇಂಧನದಲ್ಲಿ ಶೇ.೨೦ರಷ್ಟು ಎಥೆನಾಲ್ ಬಳಕೆಗೆ ಚಾಲನೆ ನೀಡಿದರು. ೨೦೨೨ ನವೆಂಬರ್‌ನಲ್ಲಿ ಇಂಧನದಲ್ಲಿ ಶೇ.೧೦ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಆದರೆ ಅದನ್ನು ಮೇ ತಿಂಗಳಿನಲ್ಲಿಯೇ ಸಾಧಿ ಸಿದ್ದರಿಂದ ಉತ್ತೇಜಿತರಾಗಿ ೨೦೩೦ರಲ್ಲಿ ಶೇ.೨೦ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ೨೦೨೫ರಲ್ಲಿಯೇ ತಲುಪಲು ತೀರ್ಮಾನಿಸಿದೆ.

ಭಾರತ 2022ರಲ್ಲಿ ೯೦ ಬಿಲಿಯನ್ ಕಚ್ಚಾ ತೈಲದ ಆಮದಿಗೆ ವೆಚ್ಚ ಮಾಡಿದೆ. ಶೇ.೮೫ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಅಮೂಲ್ಯ ವಿದೇಶಿ ವಿನಿಮಯವು ಇದಕ್ಕಾಗಿ ವೆಚ್ಚವಾಗುತ್ತಿದೆ. ಇದೊಂದು ಹೊರಲಾಗದ ಹೊರೆಯಾದರೂ ಅನಿವಾರ್ಯವಾಗಿದೆ. ಏರುತ್ತಿರುವ ಡಾಲರ್ ಮೌಲ್ಯ ಮತ್ತು ನಿಲ್ಲುವ ಸೂಚನೆಯೇ ಕಾಣದ ರಷ್ಯಾ-ಯುಕ್ರೇನ್ ಸಮರ ಇಂಧನ ಬೆಲೆಯನ್ನು ಗಗನಕ್ಕೆ ಕೊಂಡೊಯ್ದಿದೆ. ಇವೆಲ್ಲವೂ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವ ಕಾರಣ ಇಂದನಕ್ಕಾಗಿ ಪರ್ಯಾಯ ಮಾರ್ಗೋಪಾಯ ಗಳನ್ನು ಕಂಡುಕೊಳ್ಳ ಬೇಕಾಗಿದೆ.

ಎಥೆನಾಲ್ ಅನ್ನು ಕಾಕಂಬಿ ಹೊರತುಪಡಿಸಿ ಅಕ್ಕಿ ಹುಲ್ಲು, ಗೋಧಿ ಹುಲ್ಲು, ಕಾರ್ನ್ ಸ್ಟೋವರ್, ಕಾರ್ನ್ ಕಾಬ್ಸ, ಬಿದಿರು ಮತ್ತು ವುಡಿ ಬಯೋಮಾಸ್‌ ನಿಂದ ಹೊರತೆಗೆಯಬಹುದು, ಇದನ್ನು ಎರಡನೇ ತಲೆಮಾರಿನ ಎಥೆನಾಲ್ ಮೂಲಗಳು ಅಥವಾ ೨ಎ ಎಂದು ಕರೆಯಲಾಗುತ್ತದೆ. ಹೀಗಾಗಿ, ಎರಡನೇ ತಲೆಮಾರಿನ ಜೈವಿಕ ಇಂಧನಗಳನ್ನು ತ್ಯಾಜ್ಯ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳಲ್ಲಿ ಸದ್ಯ ಎಥನಾಲ್ ಉತ್ಪಾದನೆಯಾಗುತ್ತಿದೆ. ನಮ್ಮ ಒಟ್ಟು ಸಕ್ಕರೆ ಉತ್ಪಾದನೆಯು ೩೬.೫ ಮಿಲಿಯನ್ ಟನ್‌ಗಳು ೨೧-೨೨ರಲ್ಲಿ ೩.೪ಮಿಲಿಯನ್ ಟನ್ ಎಥೆನಾಲ್ ಉತ್ಪಾ ದನೆಗೆ ಬಳಕೆಯಾಗಿದೆ.

ಉತ್ಪಾದನೆಯು ಅಗತ್ಯಕ್ಕಿಂತ ಹೆಚ್ಚಿರುವುದರಿಂದ ೫.೫ಮಿಲಿಯನ್ ಟನ್ ಸಕ್ಕರೆಯು ಗೋದಾಮಿನಲ್ಲಿ ಶೇಖರಣೆಯಾಗಿದೆ. ಭಾರತ ೨೧-೨೨ರಲ್ಲಿ ೯ ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಿ ವಿಶ್ವದಲ್ಲಿ ಬ್ರೆಜಿಲ್ ನಂತರ ಸಕ್ಕರೆ ರಫ್ತಿನಲ್ಲಿ ಎರಡನೆಯ ಸ್ಥಾನದಲ್ಲಿರುವುದು. ಸಕ್ಕರೆಯ ಬಳಕೆಗಿಂತ ಉತ್ಪಾದನೆಯು ಹೆಚ್ಚಿರುವುದು ಹೀಗಾಗಿ ಮಾರಾಟವಾಗದ ಸಕ್ಕರೆ ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಈ ಕಾರಣದಿಂದ ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಿದ ಕಬ್ಬಿಗೆ ಹಣ ಪಾವತಿ ಮಾಡುವುದು ತಡ ಮಾಡುತ್ತಿzರೆ ಇದು ರೈತರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.

ಈ ಸಮಸ್ಯೆಗೆ ಪರಿಹಾರಾರ್ಥವಾಗಿ ಸರಕಾರ ನೀಡುತ್ತಿರುವ ಹಲವಾರು ಉತ್ತೇಜನಕರ ರಿಯಾಯತಿಗಳಿಂದ ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆ ಯಾಗುತ್ತಿದೆ. ಇಂದು ಎಥೆನಾಲ್ ಉತ್ಪಾದನೆ ಸಕ್ಕರೆ ಕಾರ್ಖಾನೆಗಳಿಗೆ ಪರ್ಯಾಯ ಆದಾಯ ಮೂಲವಾಗಿದೆ. ಇದರಿಂದಾಗಿ ರೈತರಿಗೂ ಆರ್ಥಿಕವಾಗಿ ಲಾಭವಾಗಿದೆ ಹಾಗೂ ಅವರ ಬಾಕಿ ಹಣವು ಪಡೆಯಲು ಸಾಧ್ಯವಾಗುತ್ತಿದೆ. ೨೦೧೪ರ ಮುನ್ನ ಇಂಧನದೊಂದಿಗೆ ಎಥೆನಾಲ್ ಶೇ.೧.೪ ರಷ್ಟು ಮಿಶ್ರಣ ವಾಗುತ್ತಿತ್ತು ಅಂದಿನ ಸರಕಾರ ಎಥೆನಾಲ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಿರಲಿಲ್ಲ.

ಮೋದಿ ಸರಕಾರ ಬಂದ ನಂತರ ಅಸಾಂಪ್ರದಾಯಿಕ ಇಂಧನ ಉತ್ಪಾದನೆಗೆ ಮಹತ್ವ ದೊರೆತು ಅದರ ಬಹುಮುಖ ಲಾಭವು ಅನೇಕ ಕ್ಷೇತ್ರಗಳಲ್ಲಿ ಕಂಡು ಬರುತ್ತಿದೆ. ಕಳೆದ ಎಂಟು ವರ್ಷದಲ್ಲಿ ಇಂಧನದಲ್ಲಿ ಎಥೆನಾಲ್ ಮಿಶ್ರಣದಿಂದ ದೇಶವು ?೪೧,೫೦೦ ಕೋಟಿ ವಿದೇಶಿ ವಿನಿಮಯದಲ್ಲಿ ಉಳಿತಾಯ ಮಾಡಿದೆ. ಇದಲ್ಲದೆ ರೈತರು ?೪೦,೬೦೦ಕೋಟಿ ಆದಾಯ ಗಳಿಸಲು ಸಾಧ್ಯವಾಗಿದೆ.

ಇದರೊಂದಿಗೆ ೨೭ ಲಕ್ಷ ಮೆಟ್ರಿಕ್ ಟನ್ ಗ್ರೀನ್ ಹೌಸ್ ಅನಿಲ ಹೊರಸೂಸುವುದು ಕಡಿಮೆಯಾಗಿ ಪರಿಸರಕ್ಕೆ ಬಹು ದೊಡ್ಡ ಲಾಭವಾಗಿದೆ. ಮುಂದಿನ ದಿನಗಳಲ್ಲಿ ಎಥೆನಾಲ್ ಶೇಕಡಾ ೨೦ರಷ್ಟು ಮಿಶ್ರಣ ಮಾಡುವುದರಿಂದ ಇದರ ಲಾಭವು ದುಪ್ಪಟ್ಟಾಗುವುದು ನಿಶ್ಚಿತ. ಸದ್ಯ ಭಾರತದಲ್ಲಿ ೩೦೨ ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಾಗುತ್ತಿದೆ. ೨೦೨೫ರೊಳಗೆ ಈ ಉತ್ಪಾದನೆ ಸಾವಿರ ಕೋಟಿ ಲೀಟರ್ ತಲುಪುವ ನಿರೀಕ್ಷೆ ಮಾಡಲಾಗಿದೆ. ಒಟ್ಟು ದೇಶದ ಎಥೆನಾಲ್ ಮಾರುಕಟ್ಟೆಯು ?೨೦ ಸಾವಿರ ಕೋಟಿ ಎಂದು ಅಂದಾಜಿಸಲಾಗಿ ಇದು ೨ಲಕ್ಷ ಕೋಟಿಯನ್ನು ತಲಪುವುದೆಂದು ಹೇಳಲಾಗುತ್ತಿದೆ. ಮೋದಿ ಸರಕಾರವು ಬಂದ ತರುವಾಯ ಸಮರೋಪಾದಿಯಲ್ಲಿ ಪರ್ಯಾಯ ಇಂಧನ ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದೆ.

ವಿಶೇಷವಾಗಿ ಸೋಲಾರ್ ವಲಯದಲ್ಲಿ ೨೦ ಗೀಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಾಲ್ಕು ವರ್ಷ ಮುಂಚಿತವಾಗಿ ೨೦೨೦ ರಲ್ಲಿಯೇ ಸಾಧಿಸಲಾಯಿತು. ಈಗ ೧೦೦ ಗೀಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ರಾಜ್ಯಗಳಲ್ಲಿ ಬೆಳೆಯುವ ಗೋಧಿ, ಭತ್ತ ಮತ್ತು ಕಬ್ಬು ಬೆಳೆಯನ್ನು ಕಟಾವು ಮಾಡಿದ ತರುವಾಯ ಕತ್ತರಿಸಿ ಉಳಿದ ಭಾಗಕ್ಕೆ
ಬೆಂಕಿಯಲ್ಲಿ ಸುಡುತ್ತಾರೆ. ಇದರಿಂದ ವಾಯು ಮಾಲಿನ್ಯವು ಅಪಾಯ ಮಟ್ಟ ಮೀರಿ ಪರಿಸರಕ್ಕೆ ಅಪಾಯವಾಗಿದೆ. ಈ ಭಾಗದ ರೈತರು ಅಂದಾಜು ೩೫ ಮಿಲಿಯನ್ ಟನ್ ಹುಲ್ಲು ಪ್ರತಿ ವರ್ಷ ಸುಡುತ್ತಾರೆ. ಇವರು ಸುಟ್ಟ ಹುಲ್ಲು ಮತ್ತು ಕಡ್ಡಿಗಳಿಂದ ಭಾರಿ ಪ್ರಮಾಣದ ಹೊಗೆಯು ದೆಹಲಿಯನ್ನು
ಆವರಿಸುತ್ತಿದೆ. ದಟ್ಟ ಹೊಗೆಯು ದೆಹಲಿಯ ವಾಯುಮಾಲಿನ್ಯವು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಕಳೆದ ವರ್ಷ ದೆಹಲಿಯ ವಾಯು ಮಾಲಿನ್ಯದ ಪರಿಸ್ಥಿತಿಯು ಎಂತಹ ವಿಷಮತೆಯನ್ನು ತಲುಪಿತ್ತೆಂದರೆ ಶಾಲಾ ಕಾಲೇಜುಗಳಿಗೆ ರಜಾ ನೀಡಲಾಯಿತು ಕಚೇರಿಗಳು ಬಾಗಿಲು ಹಾಕಿ ಮನೆಯಿಂದಲೇ ಕೆಲಸ ಮಾಡವಂತಾಯಿತು. ದೆಹಲಿಯ ವಾಯು ಮಾಲಿನ್ಯ ವಿಶ್ವ ಮಟ್ಚದಲ್ಲಿ ಚರ್ಚೆಯ ವಿಷಯವಾಗಿದೆ.
ಸುಟ್ಟು ಬೂದಿಯಾಗುತ್ತಿರುವ ಹುಲ್ಲು ಮತ್ತು ಕಡ್ಡಿಗಳನ್ನು ಸುಡುವ ಬದಲು ಅವುಗಳಿಂದ ರೈತರಿಗೆ ಆದಾಯ ಮೂಲವಾಗಿಸುವ ನಿಟ್ಟಿನಲ್ಲಿ ಅವುಗಳನ್ನು ಎಥೆನಾಲ್ ಆಗಿ ಪರಿವರ್ತಿಸುವ ಕಾರ್ಖಾನೆಯನ್ನು ಹರಿಯಾಣದ ಪಾನಿಪತ್ ನಲ್ಲಿ ?೯೦೦ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ.

ಸುಟ್ಟು ಬೂದಿಯಾಗುತ್ತಿದ್ದ ಪದಾರ್ಥವು ಇಂದು ಆದಾಯ ತರುವಂತಾಗಿದೆ. ತತ್ಕಾರಣ ಮಾಲಿನ್ಯವೂ ಕಡಿಮೆಯಾಗಿ ಜನ ನೆಮ್ಮದಿಯ ನಿಟ್ಟಿಸುರು ಬಿಡುವಂತಾಗಿದೆ. ಇಂಧನ ಕಂಪನಿಗಳು ದೇಶದ ಐದು ಕಡೆಗಳಲ್ಲಿ ಕೃಷಿ ತ್ಯಾಜ್ಯದಿಂದ ಎಥೆನಾಲ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲಿದ್ದಾರೆ.
ಈ ಪಟ್ಟಿಯಲ್ಲಿ ಕರ್ನಾಟಕದ ದಾವಣಗೆರೆಯು ಕೂಡ ಒಂದು. ಕರ್ನಾಟಕದಲ್ಲಿ ಈಗಾಗಲೇ ೩೨ ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದಿಸಲು ಅನುಮತಿ ನೀಡಲಾಗಿದೆ ಮತ್ತು ಇನ್ನೂ ೬೦ ಕಾರ್ಖಾನೆಗಳು ಅನುಮತಿ ಪಡೆಯುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ದೇಶದ ಅತಿ ಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ರಾಜ್ಯವಾಗಲಿದೆ.

ರಾಜ್ಯ ಸರಕಾರ ಹೊಲದಲ್ಲಿ ಬೀಳುವ ಹುಲ್ಲನ್ನು ಬಳಸಿ ಎಥೆನಾಲ್ ಉತ್ಪಾದಿಸುವ ಘಟಕಗಳನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪನೆ ಮಾಡಲು ಉತ್ತೇಜಿಸಬೇಕು. ಇದರಿಂದ ಗ್ರಾಮಗಳಲ್ಲಿ ಉದ್ಯೋಗಾವಕಾಶವಾಗುವುದು ಮತ್ತು ಎಥನಾಲ್ ಉತ್ಪಾದನಾ ಸ್ಥಳಕ್ಕೆ ಹುಲ್ಲು ಸಾಗಿಸುವ ಸಾರಿಗೆ ವೆಚ್ಚವು ಉಳಿತಾಯವಾಗುವುದು. ಕೇಂದ್ರ ಸರಕಾರ ಶೇ. ೨೦ ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸುವ ಸಲುವಾಗಿ ಎಥನಾಲ್ ಉತ್ಪಾದಕರಿಗೆ ಸಾಲದ ಬಡ್ಡಿಯಲ್ಲಿ ರಿಯಾಯತಿ ಯನ್ನು ನೀಡುತ್ತಿದೆ ಇದಕ್ಕಾಗಿ ೫ಸಾವಿರ ಕೋಟಿ ವೆಚ್ಚವಾಗುತ್ತಿದೆ.

ಇದಲ್ಲದೆ ಎಥನಾಲ್ ಉತ್ಪಾದನೆ ಆಕರ್ಷಕಗೊಳಿಸಲು ಸರ್ಕಾರ ಅದರ ಬೆಲೆಯನ್ನು ೫೪.೨೭ಪೈಸೆಯಿಂದ ೫೭.೬೧ಪೈಸೆಗೆ ಹೆಚ್ಚಳ ಮಾಡಿರುವುದು.
ವಾಹನ ತಯಾರಕರಿಗೆ ಸರಕಾರ ಇಂಧನದಲ್ಲಿ ಶೇ.೨೦ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಎಚ್ಚರಿಸಿದ್ದಾರೆ ಮುಂಬರುವ ದಿನಗಳಲ್ಲಿ ವಾಹನಗಳು ಈ ಇಂಧನಕ್ಕೆ ಹೊಂದಬಲ್ಲ ಹಾಗೆ ಬದಲಾವಣೆ ಮಾಡಿಕೊಳ್ಳುವ ಸಲುವಾಗಿ. ಸಂಪೂರ್ಣ ಎಥೆನಾಲ್ ಮೂಲಕ ವಾಹನ ಚಲಿಸಲು ಉ-೮೦ ಅಥವಾ ಉ-೧೦೦ ಯೋಜನೆಯಲ್ಲಿ ಟಿವಿಎಸ್ ಅಪಾಚೆ ದ್ವಿಚಕ್ರ ವಾಹನವನ್ನು ಪುಣೆಯಲ್ಲಿ ಪ್ರಯೋಗಾರ್ಥವಾಗಿ ಚಾಲನೆ ಮಾಡಿ ಯಶಸ್ಸು ಕಾಣಲಾಗಿದೆ.

ಕಬ್ಬು ಮಾತ್ರವಲ್ಲದೆ ಜೋಳ ಬಾರ್ಲಿ ಮತ್ತು ಪೂರಕ ವಸ್ತುಗಳು ಹಾಗೂ ಹುಲ್ಲುಕಡ್ಡಿಗಳಿಂದ ಎಥೆನಾಲ್ ಉತ್ಪಾದನೆ ಮಾಡಲು ಉತ್ತೇಜಿಸಲಾಗುತ್ತಿದೆ. ಅತಿಯಾದ ನೀರನ್ನು ಬಳಸುವ ಕಬ್ಬು ಬೆಳೆಯುವ ಬದಲು ಇತರ ಆಹಾರ ಧಾನ್ಯಗಳಿಗೆ ರೈತರು ಬದಲಾವಣೆ ಮಾಡಿಕೊಳ್ಳಲು ಇದರಿಂದ ಸಹಾಯವಾಗಿ  ರಿನ ಬಳಕೆಯು ಕಡಿಮೆಯಾಗುತ್ತದೆ. ದೇಶದ ಶೇ.೫೦ರಷ್ಟು ಭೂಮಿಯು ಕೃಷಿ ಭೂಮಿಯಾಗಿದೆ ಅದರಲ್ಲಿ ಅನೇಕ ಕಾರಣಗಳಿಂದ ಅರ್ಧಕ್ಕೂ ಹೆಚ್ಚು ಜಮೀನುಗಳು ಖಾಲಿಯಾಗೆ ಉಳಿದಿದೆ. ಇಂತಹ ಜಾಗದಲ್ಲಿ ಎಥೆನಾಲ್ ಉತ್ಪಾದನೆಗೆ ಬೇಕಾಗುವ ಹೊಂಗೆ ಜಟ್ರೊ- ಹಿಪ್ಪೆ ಸುರಹೊನ್ನೆ ಮರಗಳನ್ನು ಉತ್ತೇಜಿಸಲು ಸರಕಾರ ಸಹಾಯ ಧನ ಕೊಡುವ ಯೋಜನೆ ರೂಪಿಸಬೇಕಾಗಿದೆ.

ಪಾಳು ಬಿದ್ದ ಭೂಮಿಯಲ್ಲಿ ಬೆಳದ ಮರದಿಂದ ಆದಾಯ ಹೆಚ್ಚಳವಾಗುವುದರಿಂದ ರೈತರು ತಮ್ಮ ಆದಾಯ ವೃದ್ಧಿಗೆ ಕೇವಲ ಆಹಾರ ಧಾನ್ಯಗಳ ಮೇಲೆ ಮಾತ್ರ ಅವಲಂಬಿತವಾಗುವುದು ತಪ್ಪುತ್ತದೆ ಮತ್ತು ಈ ಪರ್ಯಾಯ ಮೂಲವು ರೈತರಿಗೆ ಆರ್ಥಿಕ ಸ್ಥಿರತೆ ಒದಗಿಸಲು ಸಹಾಯವಾಗುವುದು ಆ
ದಿಕ್ಕಿನಲ್ಲಿ ಎಥೆನಾಲ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ.

ರೈತರ ಆದಾಯ ದ್ವಿಗುಣಗೊಳಿಸುವ ಸರಕಾರದ ಆಶಯಕ್ಕೆ ಎಥನಾಲ್ ಉತ್ಪಾದನೆಯು ಪೂರಕವಾಗಿದೆ. ಹೊಲದಲ್ಲಿ ಬೆಳೆಯುವ ಹುಲ್ಲು ಕೂಡ ಆದಾಯದ ಮೂಲವಾಗಿ ಕೃಷಿ ವೆಚ್ಚವು ತಗ್ಗುವುದು. ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವುದು
ಅವರ ಆದಾಯ ಹೆಚ್ಚಳಕ್ಕೆ ಮತ್ತೊಂದು ದಾರಿಯಾಗಿದೆ.  ಮೋದಿಯವರು ಆದಾಯ ದ್ವಿಗುಣ ಮಾಡಲಾಗುವುದು ಎಂದರೆ ಈ ಎಲ್ಲ ಉಪಕ್ರಮಗಳ ಮೂಲಕ ಎಂಬುದನ್ನು ಅವರ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಕೆಲವು ತಜ್ಞರು ಆಹಾರ ಧಾನ್ಯಗಳನ್ನು ಎಥೆನಾಲ್ ಉತ್ಪಾದನೆಗೆ ಬಳಕೆಯಾದರೆ ಮುಂದಿನ ದಿನಗಳಲ್ಲಿ ಆಹಾರ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಶೈಶಾವಸ್ಥೆಯಲ್ಲಿರುವ ಈ ಯೋಜನೆಯಿಂದ ಅಂತಹ ಅತಿರೇಕದ ಪರಿಸ್ಥಿತಿಯು ಉದ್ಭವಿಸುವ ಸಾಧ್ಯತೆಯು ಇಲ್ಲವೆಂದೇ ಹೇಳಬಹುದು. ಎಥೆನಾಲ್ ಬಳಕೆಯ ಲಾಭವನ್ನು ಲೆಕ್ಕ ಹಾಕಿದರೆ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ. ಇಂಧನದಲ್ಲಿ ಎಥೆನಾಲ್ ಮಿಶ್ರಣದಿಂದ ವಾಯು ಮಾಲಿನ್ಯ ಕಡಿಮೆಯಾಗಿ ಪರಿಸರಕ್ಕೆ ಲಾಭವು ರೈತಾಪಿ ವರ್ಗಕ್ಕೆ ಆದಾಯದ ಹೆಚ್ಚಳಕ್ಕೆ ಮತ್ತೊಂದು ಮೂಲವಾಗಿದೆ. ಇಂಧನ ಆಮದು ತಗ್ಗಿ ವಿದೇಶಿ ವಿನಿಮಯ ಉಳಿತಾಯವಾಗಿ ದೇಶದ ಆರ್ಥಿಕ ದೃಢತೆಗೆ ಸಹಕಾರಿಯಾಗಿದೆ.

ಹೀಗೆ ಒಂದು ಉಪಕ್ರಮದಿಂದ ಹಲವಾರು ಪ್ರಯೋಜನಗಳು ಪಡೆಯಬಹುದಾಗಿದೆ. ಬಹು ಮುಖ್ಯವಾಗಿ ಪರ್ಯಾಯ ಇಂಧನದ ಮೂಲವಾದ ಎಥನಾಲ್ ಬಳಕೆಯು ಈ ಕ್ಷೇತ್ರದಲ್ಲಿ ಭಾರತವು ಆತ್ಮನಿರ್ಭರತೆ ಸಾಽಸಲು ಬಹು ದೊಡ್ಡ ಹೆಜ್ಜೆಯಾಗಿದೆ.