Sunday, 15th December 2024

ಸಂಚಾರ ನಿಯಂತ್ರಣಕ್ಕೆ ಕೃತಕ ಬುದ್ದಿಮತ್ತೆಯ ಬಳಕೆ

ತಂತ್ರಜ್ಞಾನದ ವೇದಿಕೆ

ಗಿರೀಶ್ ಲಿಂಗಣ್ಣ

ಕರ್ನಾಟಕ ರಾಜ್ಯ ಆಯವ್ಯಯವನ್ನು ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನ ಸಂಚಾರ ದಟ್ಟಣೆಯ ನಿಯಂತ್ರಣಕ್ಕೆ ೧೫೦ ಕೋಟಿ ರುಪಾಯಿ ವೆಚ್ಚದಲ್ಲಿ, ಅತಿಹೆಚ್ಚು ದಟ್ಟಣೆ ಕಾಣಬರುವ ಸುಮಾರು ೭೫ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಯನ್ನು ಬಳಸುವುದಾಗಿ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆಯ ಬಳಕೆ, ರಸ್ತೆಗಳನ್ನು ಎತ್ತರಿಸುವಿಕೆಯ ಮಗಳು ಸಂಚಾರ ದಟ್ಟಣೆಯ ನಿಯಂತ್ರಣದಲ್ಲಿ ಸಹಕಾರಿಯಾಗಲಿದ್ದು, ಇದರಿಂದಾಗಿ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಗಳಲ್ಲೊಂದು ತಹಬಂದಿಗೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಂಚಾರ ನಿಯಂತ್ರಣದಲ್ಲಿ ಕೃತಕ ಬುದ್ಧಿಮತ್ತೆ ಹೇಗೆ ಕಾರ್ಯಾಚರಿಸುತ್ತದೆ? ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ (ಎಐ) ಪ್ರಸ್ತುತತೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ವಿವಿಧ ಕ್ಷೇತ್ರ ಗಳಲ್ಲಿನ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ಬಳಸಲಾಗುತ್ತದೆ.

ಇವುಗಳ ಪೈಕಿ ಸಂಚಾರ ನಿಯಂತ್ರಣವೂ ಒಂದಾಗಿದೆ. ಸಂಚಾರ ದಟ್ಟಣೆಯು ಬಹುತೇಕ ದೊಡ್ಡ ನಗರಗಳಲ್ಲಿ ಅತಿದೊಡ್ಡ ಸಮಸ್ಯೆಯಾಗಿದ್ದು, ಪ್ರಯಾಣಿಕರಿಗೆ ಅಪಾರ ತೊಂದರೆ ಉಂಟು ಮಾಡುತ್ತಿದೆ. ಕೃತಕ ಬುದ್ಧಿಮತ್ತೆಯು ಕ್ಷಣಕ್ಷಣದ ಸಂಚಾರ ಮಾಹಿತಿಯ ವಿಶ್ಲೇಷಣೆಯ ಅನುಸಾರವಾಗಿ ಸಂಚಾರವನ್ನು ನಿಯಂತ್ರಿಸಿ ದಟ್ಟಣೆಯನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ. ಕೃತಕ ಬುದ್ಧಿಮತ್ತೆ ಆಧರಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳು, ಟ್ರಾಫಿಕ್ ಕ್ಯಾಮರಾಗಳು, ಸೆನ್ಸರ್‌ಗಳು, ಜಿಪಿಎಸ್ ಉಪಕರಣಗಳಂಥ ವಿವಿಧ ಮೂಲಗಳಿಂದ ಸಿಗುವ ಮಾಹಿತಿಗಳನ್ನು ಬಳಸಿಕೊಂಡು ಸಂಚಾರ ನಿಯಂತ್ರಣಕ್ಕೆ ನೆರವಾಗುತ್ತವೆ.

ಇದು ಕಾರ್ಯನಿರ್ವಹಿಸುವ ಪರಿಯನ್ನು ಮುಂದೆ ವಿವರಿಸಲಾಗಿದೆ: ಮಾಹಿತಿ ಸಂಗ್ರಹಣೆ: ಸಂಚಾರ ನಿಯಂತ್ರಣದಲ್ಲಿ ‘ಎಐ’ ಬಳಕೆಯ ಮೊದಲ ಹಂತವೆಂದರೆ ಮಾಹಿತಿಗಳ ಸಂಗ್ರಹಣೆ. ರಸ್ತೆಗಳು, ಹೆದ್ದಾರಿಗಳು ಮತ್ತು ಸೇತುವೆಗಳಲ್ಲಿ ಅಳವಡಿಸಲಾದ ವಿವಿಧ ಸೆನ್ಸರ್‌ಗಳು, ಕ್ಯಾಮರಾಗಳು ಮತ್ತು ಇತರ ಉಪಕರಣಗಳಿಂದ ಇದು ಮಾಹಿತಿಯನ್ನು ಸಂಗ್ರಹಿಸುತ್ತದೆ. ತನ್ಮೂಲಕ ವಾಹನ ದಟ್ಟಣೆ, ವೇಗ, ವಾಹನಗ ವರ್ಗೀಕರಣ ಮತ್ತು ಇತರ ಅಗತ್ಯ ಮಾಹಿತಿಗಳನ್ನು ಕಲೆಹಾಕಿ ಅವನ್ನು ಕೇಂದ್ರ ನಿಯಂತ್ರಣ ಕಚೇರಿಗೆ ಕಳುಹಿಸಲಾಗುತ್ತದೆ.

ಮಾಹಿತಿ ವಿಶ್ಲೇಷಣೆ: ಈ ರೀತಿ ಕಲೆ ಹಾಕಲಾದ ಮಾಹಿತಿಗಳನ್ನು ‘ಎಐ ಅಲ್ಗಾರಿದಂ’ ಮೂಲಕ ನೈಜಸಮಯದಲ್ಲಿ ವಿಶ್ಲೇಷಿಸಲಾಗುತ್ತದೆ. ಅದು
ಸಂಚಾರವನ್ನು ವಿಶ್ಲೇಷಿಸಿ, ಸಂಚಾರ ದಟ್ಟಣೆ, ಅಪಘಾತಗಳು ಹಾಗೂ ವಾಹನ ಸಂಚಾರಕ್ಕೆ ಅಡೆತಡೆ ಉಂಟುಮಾಡಬಲ್ಲ ಇತರ ಅಂಶಗಳನ್ನು ಗುರುತಿಸುತ್ತದೆ. ಮಾತ್ರವಲ್ಲ, ಹಿಂದಿನ ಮಾಹಿತಿಗಳು, ಹವಾಮಾನ ಪರಿಸ್ಥಿತಿ ಹಾಗೂ ಇತರ ಅಂಶಗಳ ಆಧಾರದಲ್ಲಿ ಈ ಅಲ್ಗಾರಿದಂ ಸಂಚಾರ ಸ್ಥಿತಿಗಳನ್ನು ಅಂದಾಜಿಸುತ್ತದೆ.

ನಿರ್ಧಾರ ಕೈಗೊಳ್ಳುವಿಕೆ: ಒಂದು ಬಾರಿ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ, ‘ಎಐ’ ವ್ಯವಸ್ಥೆಯು ಅದರ ಫಲಿತಾಂಶದ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತದೆ. ಉದಾಹರಣೆಗೆ, ಒಂದು ವೇಳೆ ಯಾವುದಾದರೂ ನಿರ್ದಿಷ್ಟ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದರೆ, ದಟ್ಟಣೆಯನ್ನು ತಪ್ಪಿಸಿ
ಮುಂದುವರಿಯಲು ನೆರವಾಗುವ ಬದಲಿ ರಸ್ತೆಯನ್ನು ಈ ವ್ಯವಸ್ಥೆಯು ಚಾಲಕರಿಗೆ ಸೂಚಿಸಬಹುದು. ಅದರೊಡನೆ, ಈ ಕೃತಕ ಬುದ್ಧಿಮತ್ತೆಯು ಟ್ರಾಫಿಕ್ ಸಿಗ್ನಲ್ ಸಮಯವನ್ನೂ ಬದಲಾಯಿಸಿ, ಕಾಯುವಿಕೆಯ ಅವಧಿಯನ್ನು ಕಡಿಮೆಗೊಳಿಸಬಲ್ಲದು. ಇದರಿಂದಾಗಿ ಸಂಚಾರ ದಟ್ಟಣೆ
ಕಡಿಮೆಯಾಗಿ, ಅಪಘಾತಗಳು ಮತ್ತು ಇತರ ಸಮಸ್ಯೆಗಳೂ ಕಡಿಮೆಯಾಗುತ್ತವೆ.

ಅಡಾಪ್ಟಿವ್ ಕಂಟ್ರೋಲ್: ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ಸಂಚಾರ ನಿಯಂತ್ರಣ ವ್ಯವಸ್ಥೆಗ ಅಡಾಪ್ಟಿವ್  ಅಂದರೆ, ಹೊಂದಿಕೊಳ್ಳುವ ಗುಣವುಳ್ಳವಾಗಿವೆ. ಅಂದರೆ, ಅವು ತಾವು ಕಲೆಹಾಕುವ ಮಾಹಿತಿಗಳಿಂದ ಕಲಿತುಕೊಂಡು, ಅದಕ್ಕೆ ಪೂರಕವಾದ ಬದಲಾವಣೆಗಳನ್ನು ತರಬಲ್ಲವು.
ಉದಾಹರಣೆಗೆ, ಯಾವುದಾದರೂ ನಿರ್ದಿಷ್ಟ ಪ್ರದೇಶದಲ್ಲಿ ಪದೇಪದೆ ವಾಹನ ದಟ್ಟಣೆ ಉಂಟಾಗುತ್ತದೆ ಎಂಬುದಾಗಿ ಈ ವ್ಯವಸ್ಥೆ ಗುರುತಿಸಿದರೆ, ‘ಎಐ’ ವ್ಯವಸ್ಥೆಯು ಅಲ್ಲಿನ ಸಂಚಾರ ಸಂಕೇತದ ಸಮಯವನ್ನು ಬದಲಾಯಿಸಿ, ಆ ಮೂಲಕ ಅಲ್ಲಿನ ವಾಹನ ಸಂಚಾರವು ಸುಗಮವಾಗುವಂತೆ
ಮಾಡುತ್ತದೆ.

* ‘ಎಐ’ ಆಧರಿತ ಸಂಚಾರ ನಿಯಂತ್ರಣ ವ್ಯವಸ್ಥೆಯ ಪ್ರಯೋಜನಗಳು: ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ಸಂಚಾರ ನಿಯಂತ್ರಣ ವ್ಯವಸ್ಥೆಗಳು ಸಾಕಷ್ಟು ಅನುಕೂಲಗಳನ್ನು ಕಲ್ಪಿಸುತ್ತವೆ.

ಅವೆಂದರೆ, ಸುಧಾರಿತ ವಾಹನ ಸಂಚಾರ: ನೈಜ ಸಮಯವನ್ನು ಆಧರಿಸಿದ ವಿಶ್ಲೇಷಣೆಯ ಮೂಲಕ ‘ಎಐ’ ವ್ಯವಸ್ಥೆಗಳು ಕ್ಷಿಪ್ರನಿರ್ಧಾರ ಕೈಗೊಳ್ಳುತ್ತವೆ. ಆ ಮೂಲಕ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುತ್ತವೆ.

ಸಂಚಾರ ದಟ್ಟಣೆಗೆ ಕಡಿವಾಣ: ಬದಲಿ ರಸ್ತೆಗಳನ್ನು ಸೂಚಿಸುವ ಹಾಗೂ ಟ್ರಾಫಿಕ್ ಸಿಗ್ನಲ್‌ಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವುದರಿಂದ, ‘ಎಐ’ ಆಧರಿತ ವ್ಯವಸ್ಥೆಗಳು ರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೆರವಾಗುತ್ತವೆ. ಆ ಮೂಲಕ ಪ್ರಯಾಣಿಕರ
ಸಮಯವನ್ನೂ, ವಾಯುಮಾಲಿನ್ಯವನ್ನೂ ತಡೆಗಟ್ಟಲು ಸಹಾಯಮಾಡುತ್ತವೆ.

ಹೆಚ್ಚಿನ ಸುರಕ್ಷತೆ: ‘ಎಐ’ ಆಧರಿತ ವ್ಯವಸ್ಥೆಗಳು ಸಂಭವನೀಯ ಅಪಾಯಗಳನ್ನು ಗುರುತಿಸಿ ಅವನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತವೆ.

ಕಡಿಮೆ ವೆಚ್ಚದ ವ್ಯವಸ್ಥೆ: ಸಾಂಪ್ರದಾಯಿಕ ಸಂಚಾರ ನಿಯಂತ್ರಣ ವ್ಯವಸ್ಥೆಗಳಿಗೆ ಹೋಲಿಸಿದಾಗ, ಕೃತಕ ಬುದ್ಧಿಮತ್ತೆ ಆಧರಿತ ವ್ಯವಸ್ಥೆಗಳು ಕಡಿಮೆ
ವೆಚ್ಚದಾಯಕವಾಗಿವೆ. ಏಕೆಂದರೆ, ಸಾಂಪ್ರದಾಯಿಕ ವ್ಯವಸ್ಥೆಗಳಿಗೆ ಹೆಚ್ಚಿನ ಮಾನವ ಸಂಪನ್ಮೂಲದ ಅಂದರೆ ಉದ್ಯೋಗಿಗಳ ಅಗತ್ಯವಿರುತ್ತದೆ.
ಕೃತಕ ಬುದ್ಧಿಮತ್ತೆಯನ್ನು ಆಧರಿಸಿರುವ ಸಂಚಾರ ನಿಯಂತ್ರಣ ವ್ಯವಸ್ಥೆಗಳು ಸಂಚಾರ ದಟ್ಟಣೆಯ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತವೆ.

ಪ್ರತಿಕ್ಷಣದ ಮಾಹಿತಿಗಳನ್ನು ಅವಲೋಕಿಸಿ ಕ್ಷಿಪ್ರವಾಗಿ ನಿರ್ಧಾರ ಕೈಗೊಳ್ಳುತ್ತವೆ. ಈ ವ್ಯವಸ್ಥೆಗಳು ಸುಗಮ ಸಂಚಾರಕ್ಕೆ ನೆರವಾಗಿ, ವಾಹನ ದಟ್ಟಣೆಯನ್ನು ಕಡಿಮೆಗೊಳಿಸಿ, ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಪ್ಪಿಸುತ್ತವೆ. ಈ ತಂತ್ರಜ್ಞಾನವು ಇನ್ನೂ ಅಭಿವೃದ್ಧಿ ಹೊಂದುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಇನ್ನಷ್ಟು ಆಧುನಿಕವಾದ ‘ಎಐ’ ಆಧರಿತ ವ್ಯವಸ್ಥೆಗಳನ್ನು ನಾವು ನಿರೀಕ್ಷಿಸಬಹುದು. ಆ ಮೂಲಕ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಇನ್ನಷ್ಟು ಪ್ರಯೋಜನ ಲಭಿಸಬಹುದು.