Sunday, 15th December 2024

ನಗರ ವಿಧಾನಸಭಾ ಕ್ಷೇತ್ರಕ್ಕೆ ಕಮಲಾಧಿಪತಿ ನಾನೇ: ಸೊಗಡು

ಕಾಂಗ್ರೆಸ್ ಹೋದರೆ ವಿಷ ಕುಡಿದಂತೆ
ನನಗೆ ಟಿಕೆಟ್ ಸಿಗುತ್ತದೆ

ತುಮಕೂರು: ನಗರ ವಿಧಾನಸಭಾ ಕ್ಷೇತ್ರಕ್ಕೆ ಕಮಾಲಾಧಿಪತಿ ನಾನೇ. ಟಿಕೆಟ್ ನನಗೆ ದೊರೆ ಯಲಿದ್ದು ಸ್ಪರ್ಧಿಸುವುದು ಖಚಿತವೆಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಹೋದರೆ ವಿಷ ಕುಡಿದಂತೆ. ತಾಯಿ ಸಮಾನವಾದ ಬಿಜೆಪಿ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಈಗಾಗಲೇ ನಮ್ಮ ಪಕ್ಷದಲ್ಲಿ ಎಲ್ಲೆಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ನನಗೆ ಟಿಕೆಟ್ ನೀಡುವ ಬಗ್ಗೆ ಹಿರಿಯ ನಾಯಕರು  ಭರವಸೆ ನೀಡಿದ್ದಾರೆ. ಜತೆಗೆ ಕ್ಷೇತ್ರದ ಜನರು ಸಹ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಈ ಬಾರಿ  ನನಗೆ ಟಿಕೆಟ್ ಸಿಗುವುದು ಖಚಿತ ಎಂದು   ಹೇಳಿ ದರು.
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬಳಿಕ ನನಗೆ ಪಕ್ಷದ ಟಿಕೆಟ್ ಘೋಷಿಸುವುದಷ್ಟೇ ಬಾಕಿ ಇದೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲೇಬೇಕು ಎಂಬ ತೀರ್ಮಾನ ಸಹ ಮಾಡ ಲಾಗಿದೆ. ಹಾಗಾಗಿ 2023ರ ಚುನಾವಣೆಗೆ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟಪಡಿಸಿದರು..
2018ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ವರಿಷ್ಠರು ಇದೊಂದು ಬಾರಿ ತಾಳ್ಮೆಯಿಂದ ಸುಮ್ಮನಿರುವಂತೆ ಸೂಚಿಸಿದ್ದರು. ಅದರಂತೆ ನಾನು ಸಹ ಸುಮ್ಮನಾಗಿದ್ದೆ. ಈ ಬಾರಿ ಎಲ್ಲರ ಬೆಂಬಲವೂ ನನ್ನ ಪರ ಇದೆ ಎಂದರು.
ನಾನು ತುಮಕೂರು ನಗರ ಕ್ಷೇತ್ರದಲ್ಲಿ 1993 ರಿಂದ 2013ರ ವರೆಗೆ 20 ವರ್ಷಗಳ ಕಾಲ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ ಶಾಂತಿ ಮಂತ್ರ ಮತ್ತು ಕಾಯಕ ಮಂತ್ರವನ್ನು ಜಪಿಸಿ ನಗರದ ಜನರ ಹಿತರಕ್ಷಣೆಗಾಗಿ ಶ್ರಮವಹಿಸಿದ್ದೇನೆ.
ಹಾಗೆಯೇ ರಸ್ತೆ, ಚರಂಡಿ, ಕುಡಿಯುವ ನೀರು, ದೇವಾಲಯಗಳ ನಿರ್ಮಾಣ ಸೇರಿದಂತೆ ಕೋಟ್ಯಂತರ ರು.ಗಳ ವೆಚ್ಚದಲ್ಲಿ ಅಭಿ ವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆ. ಇದೆಲ್ಲಾ ಪಕ್ಷದ ನಾಯಕರು ಹಾಗೂ ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು  ಹೇಳಿದರು.
ಸದ್ಯದಲ್ಲೇ ನಾನು ಕ್ಷೇತ್ರದಲ್ಲಿ 20 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕರಪತ್ರಗಳನ್ನು ಹಂಚುವ ಕೆಲಸ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಜೋಳಿಗೆ ಹಿಡಿದು ಜನರ ಬಳಿ ಹೋಗುವೆ
ಈಗಾಗಲೇ ಕ್ಷೇತ್ರದ ಜನರೇ ನನಗೆ 2 ಜೋಳಿಗೆ ಮತ್ತು 11 ತಮಟೆ ನೀಡಿದ್ದಾರೆ. ನಾನು ಶಾಸಕನಾಗಿರುವ ಅವಧಿಯಲ್ಲಿ ಆಗಿರುವ ಅಭಿವೃದ್ಧಿ, ಕಾರ್ಯಗಳನ್ನು ಈ ಮೂಲಕ ಜನತೆಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು. ನನಗೆ ಕ್ಷೇತ್ರದ ಜನರು ನೀಡಿರುವ ಜೋಳಿಗೆ ಠೇವಣಿ ಹಣ ಹಾಕುವುದಾಗಿ ಹೇಳಿದ್ದಾರೆ. ಜನರ ಇಚ್ಛೆಯಂತೆ ಸದ್ಯದಲ್ಲೇ ನಾನು ನಗರದಾದ್ಯಂತ ಜೋಳಿಗೆ ಹಿಡಿದು ಮತಯಾಚನೆ ಮಾಡುತ್ತೇನೆ ಎಂದರು
ಜನಸಂಘದ ಕಾಲದಿಂದಲೂ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಾ ಬಂದಿದ್ದೇನೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಕ್‌ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದೆವು. 1977 ರಲ್ಲಿ ವಾಕ್ ಸ್ವಾತಂತ್ರ್ಯ ಬಂತು .ರಾಜ್ಯದಲ್ಲಿ 2013 ರಲ್ಲಿ ಕೆಜೆಪಿ ಮತ್ತು ಬಿಜೆಪಿ ಎಂದು ಎರಡು ಭಾಗವಾದಾಗ ನನಗೆ ಹಿನ್ನಡೆಯಾಯಿತು. ಅಂದಿನಿಂದಲೂ ರಾಜಕೀಯವಾಗಿ ದೂರವಾಗಿಲ್ಲ, ಪಕ್ಷದ ಸಂಘಟನೆ, ಕ್ಷೇತ್ರದ ಜನರ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡುತ್ತಲೇ ಬಂದಿದ್ದೇನೆ ಎಂದು  ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ  ಜಯಸಿಂಹರಾವ್, ಚೌಡಯ್ಯ, ಶಬ್ಬಿರ್ ಅಹಮದ್‌, ಶಾಂತಣ್ಣ, ನವೀನ್ ಇದ್ದರು.