Sunday, 15th December 2024

ಮಣ್ಣಿನ ಮಕ್ಕಳಿಗೆ ಉದ್ಯೋಗ ಗಗನ ಕುಸುಮವೇಕೆ ?

ಅಭಿಮತ

ರಮಾನಂದ ಶರ್ಮಾ

ramanandsharma28@gmail.com

ಇದು ಹೇರ್‌ಕಟಿಂಗ್ ಸಲೂನ್‌ಗೆ ಹೋದಾಗ ನಡೆದ ಘಟನೆ. ಕಟಿಂಗ್ ಮಾಡುವ ಹುಡುಗನಿಗೆ ಕನ್ನಡ ಬಾರದು, ನನಗೆ ಹಿಂದಿ ತಿಳಿಯದು. ಹೀಗಾಗಿ, ನಾನು ಹೇಳಿದ್ದು ಅವನಿಗೆ, ಅವನು ಹೇಳಿದ್ದು ನನಗೆ ತಿಳಿಯಲಿಲ್ಲ. ಸಲೂನ್‌ನಿಂದ ಹೊರ ಬಂದಾಗ ಗುರುತು ಸಿಗದ ರೀತಿಯಲ್ಲಿ ನನ್ನ ಹೇರ್‌ಸ್ಟೈಲ್ ಬದಲಾಗಿತ್ತು. ಅದನ್ನು ನೋಡಿ ಮನೆ ಯಲ್ಲಿ ನಗೆಪಾಟಲಿಗೆ ಈಡಾಗಿದ್ದು ಬೇರೆ ಮಾತು.

ಪರಿಚಯವಿದ್ದ ಸಲೂನ್ ಮಾಲೀಕನಿಗೆ ಫೋನಾಯಿಸಿ, ಸ್ಥಳೀಯ ಭಾಷೆ ಮಾತನಾಡುವ ಕೆಲಸಗಾರರನ್ನು ಇಟ್ಟುಕೊಳ್ಳದೆ ದೂರದ ಬಿಹಾರಿಗಳನ್ನು ಇರಿಸಿಕೊಂಡಿದ್ದಕ್ಕೆ ತರಾಟೆಗೆ ತೆಗೆದುಕೊಂಡೆ. ಆತ, ‘ಸರ್, ನೀವು ಹೇಳಿದ್ದು ಸರಿ. ನಮ್ಮವರು ಯಾರೂ ಕೆಲಸಕ್ಕೆ ಸರಿಯಾಗಿ ಬರುವುದಿಲ್ಲ. ಅವರಿಗೆ ನಿಯತ್ತಿಲ್ಲ. ಸಮಯ ಪರಿಪಾಲನೆಯಿಲ್ಲ. ಕೆಲಸದ ದಿನಗಳಿಗಿಂತ ರಜಾದಿನಗಳೇ ಹೆಚ್ಚು. ಈ ಬಿಹಾರಿಗಳಾದರೋ ಸಮಯಕ್ಕೆ ಸರಿಯಾಗಿ ಬರುತ್ತಾರೆ, ರಜೆ ಹಾಕುವುದಿಲ್ಲ.

ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಾರೆ. ಸಂಬಳವೂ ನಮ್ಮವರಿಗಿಂತ ಕಡಿಮೆಯೇ. ನೀವೇ ಹೇಳಿ, ನನ್ನ ಬಿಜಿನೆಸ್ ಹಾಳುಮಾಡಿ ಕೊಂಡು ನನ್ನವರನ್ನು ಇಟ್ಟುಕೊಳ್ಳಬೇಕೋ ಅಥವಾ ನಮ್ಮತನ ಮರೆತು ಬಿಜಿನೆಸ್ ನಡೆಸಬೇಕೋ?’ ಎಂದ. ನನಗೆ ಮುಂಜಾನೆ ದಿನಪತ್ರಿಕೆ ಹಾಕು ವವನು ಈಶಾನ್ಯ ಭಾರತದ ವಲಸಿಗ. ಈ ಬಗ್ಗೆ ಪ್ರಶ್ನಿಸಿದಾಗ, ಸಲೂನ್ ಮಾಲೀಕ ನಂತೆ ವಿತರಕ ಏಜಂಟ್‌ನದೂ ಇದೇ ಮಾತು- ‘ನಮ್ಮ ಹುಡುಗರಿಗೆ ನಿಯತ್ತು ಕಮ್ಮಿ, ಸೋಂಬೇರಿಗಳು, ಮುಂಜಾನೆ ಬೇಗ ಎದ್ದೇಳುವು ದಿಲ್ಲ, ಹೇಳದೆ-ಕೇಳದೆ ರಜೆ ಹಾಕುತ್ತಾರೆ.

ದಿನಾಲು ವಿಳಂಬ ವಿತರಣೆಗಾಗಿ ನಿಮ್ಮಂಥವರಿಂದ ಸಹಸ್ರನಾಮ ಕೇಳಬೇಕು. ಈ ಅಸ್ಸಾಂ ಹುಡುಗರು ಬೆಳಗ್ಗೆ ೫ರೊಳಗೆ ನನ್ನ ಬಳಿ ಬಂದು ಪತ್ರಿಕೆ ಎತ್ತಿಕೊಂಡು ೭ರೊಳಗೆ ವಿತರಿಸಿ ೮ರ ಹೊತ್ತಿಗೆ ಮೆಟ್ರೋ ಕೆಲಸಕ್ಕೆ ಹೋಗ್ತಾರೆ. ಅವರು ಎಂದೂ ರಜೆ ಹಾಕು ವುದಿಲ್ಲ. ಈಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ’. ಪತ್ರಿಕೆ ವಿತರಕನ ಈ ಮಾತು ಸತ್ಯಕ್ಕೆ ದೂರ ಎನಿಸಲಿಲ್ಲ.

ವರ್ಷಗಳ ಹಿಂದಿನ ಮಾತು. ಪಕ್ಕದ ಬಡಾವಣೆಯಲ್ಲಿರುವ ಹುಡುಗನೊಬ್ಬನನ್ನು ಕಾರು ತೊಳೆಯಲು ಗೊತ್ತುಮಾಡಿದ್ದೆ. ಆತ ೨ ದಿನ ಕೆಲಸ ಮಾಡಿ, ೩ನೇ ದಿನ ಇನ್ನೊಬ್ಬನನ್ನು ಕರೆತಂದು, ‘ನಾಳೆಯಿಂದ ನನ್ನ ಬದಲಿಗೆ ಇವನು ಬರುತ್ತಾನೆ’ ಎಂದು ಪರಿಚಯಿ ಸಿದ. ಒಂದು ವಾರ ಕಳೆದರೂ ಒಬ್ಬರೂ ಬಾರದಿರಲು, ಗತಿಯಿಲ್ಲದೆ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿಯಾಗಿರುವ ನೇಪಾಳಿಯೊಬ್ಬನನ್ನು ಕಾರು ತೊಳೆಯುವ ಕೆಲಸಕ್ಕೆ ಗೊತ್ತುಮಾಡಿದೆ. ಇದೀಗ ಸುಮಾರು ೩ ವರ್ಷಗಳು, ಆ ನೇಪಾಳಿ ಒಂದೇ ಒಂದು ದಿನ ರಜೆ ಹಾಕಲಿಲ್ಲ ಮತ್ತು ಸಮಯಕ್ಕೆ ಸರಿಯಾಗಿ ತನ್ನ ಕೆಲಸ ಪೂರೈಸಿ ಹೋಗುತ್ತಾನೆ. ಪ್ರತಿಷ್ಠಿತರೇ ಹೆಚ್ಚಿರುವ ಆ ಬಡಾವಣೆಯಲ್ಲಿ ಪ್ರತಿದಿನ ಸುಮಾರು ೩೦ ಕಾರುಗಳನ್ನು ತೊಳೆಯುತ್ತಾನೆ.

ವಾರಾಂತ್ಯ ಮತ್ತು ರಜೆಗಳ ದಿವಸ ಈ ಸಂಖ್ಯೆ ಹೆಚ್ಚಾಗುತ್ತದೆ. ಆತನ ಹೆಂಡತಿ ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಫ್ಲ್ಯಾಟ್‌ನಲ್ಲಿ
ಮನೆಗೆಲಸ ಮಾಡುತ್ತಾಳೆ. ಈತ ಸೆಕ್ಯುರಿಟಿ ಮತ್ತು ಕಾರು ತೊಳೆಯುವ ಕೆಲಸದೊಂದಿಗೆ ಬಡಾವಣೆಯಲ್ಲಿ ಯಾರು ಕರೆದರೂ ನಿಷ್ಠೆಯಿಂದ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾನೆ. ಈತನ ಮಾಸಿಕ ಆದಾಯ ತೆರಿಗೆ ಗೋಜು ಇಲ್ಲದೆ ಸುಮಾರು ಒಂದು ಲಕ್ಷವಂತೆ. ಈತ ಊರಿನಲ್ಲಿ ಈಗ ಮನೆ ಕಟ್ಟಿಸುತ್ತಿದ್ದಾನೆ!

ಈ ಮೂರು ಉದಾಹರಣೆಗಳು, ನಮ್ಮಲ್ಲಿ ಮಣ್ಣಿನ ಮಕ್ಕಳು ಏಕೆ ಮತ್ತು ಹೇಗೆ ಉದ್ಯೋಗ ವಂಚಿತರಾಗಿದ್ದಾರೆ ಎನ್ನುವುದಕ್ಕೆ
ವಿಸ್ತೃತ ಕಾರಣಗಳನ್ನು ನೀಡುತ್ತವೆ. ಇವು ಪೂರ್ಣಸತ್ಯವಾಗಿಲ್ಲದಿರಬಹುದು; ಆದರೆ ಇದರಲ್ಲಿ ತಥ್ಯ ಅಡಗಿದೆ ಎನ್ನುವುದನ್ನು ತಳ್ಳಿಹಾಕಲಾಗದು. ಒಂದು ಕಾಲಕ್ಕೆ ತಮಿಳುನಾಡಿನಿಂದ ಬಂದ ವಲಸಿಗರು ಕರ್ನಾಟಕದ ರಬ್ಬರ್, ಕಾಫಿ ಮತ್ತು ಅಡಕೆ ತೋಟ ಗಳಲ್ಲಿ ಕಾಣುತ್ತಿದ್ದರು. ಕಟ್ಟಡ ನಿರ್ಮಾಣ ಮತ್ತು ಲೋಕೋಪಯೋಗಿ ಕೆಲಸಗಳಲ್ಲೂ ಅವರೇ ಕಾಣುತ್ತಿದ್ದರು.

ಇವರನ್ನು ಬಿಟ್ಟರೆ ಉತ್ತರ ಮತ್ತು ಹೈದ್ರಾಬಾದ್ ಕರ್ನಾಟಕದ ಕೂಲಿಕಾರರು ಕಾಣುತ್ತಿದ್ದರು. ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಗಳ ಉಚಿತ ಕೊಡುಗೆಗಳ ನಂತರ ತಮಿಳು ವಲಸಿಗರು ಕಾಣುತ್ತಿಲ್ಲ. ಉತ್ತರ ಮತ್ತು ಹೈದ್ರಾಬಾದ್ ಕರ್ನಾಟಕದಿಂದ ಬರುತ್ತಿದ್ದ ಕೂಲಿಕಾರರು, ಗೋವಾ ಮತ್ತು ಮಹಾರಾಷ್ಟ್ರದ ಕಡೆ ತಿರುಗಿದ್ದಾರೆ. ಈ ವಲಸಿಗರ ಸ್ಥಳವನ್ನು ಉತ್ತರ ಭಾರತ, ಈಶಾನ್ಯ ಭಾರತ, ಬಂಗಾಳ, ಒಡಿಶಾ ಮತ್ತು ನೇಪಾಳದ ವಲಸಿಗರು ತುಂಬಿದ್ದಾರೆ.

ವಲಸಿಗರ ಈ ಪ್ರವಾಹ ಎಷ್ಟು ದಟ್ಟವಾಗಿದೆಯೆಂದರೆ, ‘ಸಾಸಿವೆಯಿಲ್ಲದ ಮನೆಯನ್ನಾದರೂ ಹುಡುಕಬಹುದು, ವಲಸಿಗರಿಲ್ಲದ ಸ್ಥಳವನ್ನು ಹುಡುಕಲಾಗದು’ ಎನ್ನುವಂತಾಗಿದೆ. ಹೋಟೆಲ್ಲುಗಳಲ್ಲಿ ಈವರೆಗೆ ಬಹುತೇಕ ಕರಾವಳಿ ಮತ್ತು ಮಲೆನಾಡಿನ ಕಾರ್ಮಿಕರು ಕಾಣುತ್ತಿದ್ದು, ಅವರೀಗ ಅಪರೂಪವಾಗಿದ್ದಾರೆ. ಬಹುತೇಕ ಹೋಟೆಲ್ಲುಗಳಲ್ಲಿ ಬಿಹಾರಿ, ನೇಪಾಳಿ ಮತ್ತು ಈಶಾನ್ಯ ಭಾರತದ ಹುಡುಗರು- ಹುಡುಗಿಯರು ದುಡಿಯುವುದು ಕಾಣುತ್ತದೆ. ತಾರಾ ಹೋಟೆಲ್ಲುಗಳಲ್ಲಿ ವಲಸಿಗರದ್ದೇ ದರ್ಬಾರು. ಬಾರ್, ಕ್ಲಬ್ ಗಳಲ್ಲಿ ಕನ್ನಡ ಮಾಯವಾಗಿ ದಶಕಗಳೇ ಆಗಿದ್ದು, ಕನ್ನಡಿಗರು ಮತ್ತು ಕನ್ನಡ ಹೆಸರಿಗೆ ಮಾತ್ರ ಎಂದು ಸಾಮಾಜಿಕ ತಾಣ ದಲ್ಲಿ ಪೋಸ್ಟ್‌ಮಾಡಿ ಹಿಂದಿವಾಲನೊಬ್ಬ ತೀವ್ರ ತರಾಟೆಗೆ ಒಳಗಾಗಿದ್ದು ಈಗ ಇತಿಹಾಸ.

ಇನ್ನು ಮಾಲ್, ಡಿಪಾರ್ಟ್‌ಮೆಂಟಲ್ ಸ್ಟೋರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಮಾತನಾಡುವುದೇ ಅಪರಾಧ ಎನ್ನುವಷ್ಟರ ಮಟ್ಟಿಗೆ ಕನ್ನಡೇತರ ಕೆಲಸಗಾರರು ತುಂಬಿದ್ದಾರೆ. ಕನ್ನಡ ಮಾತನಾಡಿದರೆ, ‘ಹಿಂದಿ ಮೆ ಬೋ ಲೋ’ ಎನ್ನುವಷ್ಟು ಧಾರ್ಷ್ಟ್ಯ ತೋರಿಸುತ್ತಾರೆ. ಸೆಕ್ಯುರಿಟಿ ಏಜನ್ಸಿಗಳಲ್ಲಿ ಕನ್ನಡಿಗರಿಗೆ ಬಹುತೇಕ ಬಾಗಿಲು ಬಂದ್ ಆಗಿದೆ. ಬೆಂಗಳೂರಿನಲ್ಲಿ ಸುಮಾರು ೭೩,೦೦೦ ವಸತಿ ಸಮುಚ್ಚಯಗಳಿದ್ದು ಇವುಗಳ ಸೆಕ್ಯುರಿಟಿಯಲ್ಲಿ ಹಿಂದಿವಾಲಾಗಳದ್ದೇ ಕಾರುಬಾರು. ಸೆಕ್ಯುರಿಟಿ ಮತ್ತು ಹಿಂದಿವಾಲಾಗಳು ಒಂದೇ ನಾಣ್ಯದ ಎರಡು ಮುಖಗಳು.

‘ರಾಜಕಾರಣದಲ್ಲಿ ಸತ್ಯವಂತ ರನ್ನು, ಸೆಕ್ಯುರಿಟಿಯಲ್ಲಿ ಕನ್ನಡಿಗರನ್ನು ಹುಡುಕುವುದು ಒಂದೇ’ ಎನ್ನುವ ಜೋಕ್‌ನಲ್ಲಿ ಅರ್ಥ ವಿಲ್ಲದಿಲ್ಲ. ಬ್ಯಾಂಕುಗಳಲ್ಲಿ ಮತ್ತು ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಕನ್ನಡ ಮತ್ತು ಕನ್ನಡಿಗರು ಕಳೆದುಹೋಗಿದ್ದು, ಅದು ಈಗ ಸುದ್ದಿ ಎಂದು ಅನಿಸುವುದಿಲ್ಲ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಾನಮಾನ ಉಳಿಸುವ ಎಲ್ಲ ಪ್ರಯತ್ನಗಳು
(?) ಹೊಳೆಯಲ್ಲಿ ಹೋಮ ಮಾಡಿದಂತಾಗಿದೆ, ಅದು ಬೇರೆ ಮಾತು. ಬ್ಯಾಂಕುಗಳಲ್ಲಿ ಕನ್ನಡ ಸಿಬ್ಬಂದಿಗಳು ಕಡಿಮೆ ಇರುವುದಕ್ಕೆ, ದೇಶಾದ್ಯಂತ ಮತ್ತು ಕನಿಷ್ಠ ನಾಗರಿಕ ಸೌಲಭ್ಯಗಳೂ ಇರದಂಥ ಪ್ರದೇಶಗಳಿಗೆ ವರ್ಗಾವರ್ಗಿ ಇರುವ ಮತ್ತು ದಿನನಿತ್ಯದ ಕೆಲಸ ದಲ್ಲಿ ಹಣಕಾಸು ರಿಸ್ಕ್ ಇರುವ ಬ್ಯಾಂಕ್ ಉದ್ಯೋಗವನ್ನು ಕನ್ನಡಿಗರು ಇಷ್ಟಪಡುವುದಿಲ್ಲ; ಅದರ ಬದಲಿಗೆ ಒಳ್ಳೆ ಸಂಬಳ-ಸೌಲಭ್ಯವಿರುವ, ದೊಡ್ಡ ನಗರಗಳಿಗೆ ಮತ್ತು ವಿದೇಶಿ ಕಚೇರಿಗಳಿಗೆ ನಿಯುಕ್ತಿಯಾಗುವ ಸಾಧ್ಯತೆಯಿರುವ ಐಟಿ ಕಂಪನಿಗಳನ್ನು ಕನ್ನಡಿಗರು ಇಷ್ಟಪಡುತ್ತಾರೆ ಎಂದು ತೇಪೆಬಡಿದು ಸತ್ಯವನ್ನು ಮರೆಮಾಚಲಾಗುತ್ತದೆ.

ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿನೀಡಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಬಿಹಾರದ ರಾಜಕಾರಣಿ ರಾಜೀವ ಪ್ರತಾಪ ರೂಢಿ ಯವರು, ‘ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ಶೇ. ೬೦ರಷ್ಟು ಟೆಕ್ಕಿಗಳು ಬಿಹಾರಿಗಳು’ ಎಂದು ಹೆಮ್ಮೆಯಿಂದ ಬೀಗಿ ಹೇಳಿದ್ದು, ಈವರೆಗೆ ಪ್ರಚಲಿತವಿದ್ದ ಸುಳ್ಳುಮಾಹಿತಿಗೆ ನೇರವಾಗಿ ಮೊಳೆ ಹೊಡೆದಿದ್ದಾರೆ. ಇದು ಟೆಕ್ ಉದ್ಯಮಕ್ಕೆ ಕರ್ನಾಟಕದಲ್ಲಿ
ನೆಲೆಯೂರಲು ಹಲವಾರು ರಿಯಾಯಿತಿ ನೀಡಿದ ಕರ್ನಾಟಕಕ್ಕೆ ಟೆಕ್ ಕಂಪನಿಗಳು ನೀಡಿದ ‘ರಿಟರ್ನ್ ಗಿಫ್ಟ್’ ಎಂದು ಕೆಲವರು ಕುಚೋದ್ಯ ಮಾಡುತ್ತಾರೆ.

ರೂಢಿಯವರು ಹೆಮ್ಮೆಯಿಂದ ಹೇಳಿದ ಮಾತು, ಹುದುಗಿಟ್ಟ ಸತ್ಯವನ್ನು ಬಿಚ್ಚಿಟ್ಟಿದ್ದು ಒಂದು ವಿಪರ್ಯಾಸ. ಉಳಿದ ಶೇ. ೪೦ ರಷ್ಟು ಭಾಗದಲ್ಲಿ ಕನ್ನಡಿಗರ ಪಾಲು ಎಷ್ಟಿರಬಹುದು ಎನ್ನುವುದು ಊಹೆಗೆ ಬಿಟ್ಟಿದ್ದು. ಬೆಂಗಳೂರಿನಲ್ಲಿ ಸುಮಾರು ೭೨೦೦೦
ಅಪಾರ್ಟ್‌ಮೆಂಟ್‌ಗಳು ನಿರ್ಮಾಣದ ವಿವಿಧ ಹಂತ ದಲ್ಲಿವೆಯಂತೆ. ಹಾಗೆಯೇ ಮನೆಗಳು ಬೇರೆ. ಇವುಗಳಲ್ಲಿ ಕೆಲಸಮಾಡುವ ಕಾರ್ಮಿಕರಲ್ಲಿ ಶೇ. ೯೫ರಷ್ಟು ಜನ ವಲಸಿಗರು. ಕೋವಿಡ್ ಸಮಯದಲ್ಲಿ ಈ ಕಾರ್ಮಿಕರು ತವರಿಗೆ ಮರಳಿದಾಗ ಕಟ್ಟಡ ನಿರ್ಮಾಣ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿತ್ತು.

ಹಾಗೆಯೇ ರಸ್ತೆ-ಸೇತುವೆ ನಿರ್ಮಾಣ, ರೈಲುಮಾರ್ಗ, ಮೆಟ್ರೋ ಕಾಮಗಾರಿಗಳು ನಿಂತುಹೋಗಿದ್ದವು ಅಥವಾ ನಾಮ್-ಕೆ-ವಾಸ್ತೆ ಕೆಲಸ ನಡೆಯುತ್ತಿತ್ತು. ಆಗಲೇ ಬೆಂಗಳೂರಿಗರಿಗೆ ವಲಸಿಗರ ಸಂಖ್ಯೆಯ ಬ್ರಹ್ಮಾಂಡ ತಿಳಿದದ್ದು. ಈ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿದರೆ, ನಾವಿರುವುದು ಉತ್ತರ ಭಾರತದಲ್ಲೋ ಅಥವಾ ಕರ್ನಾಟಕದಲ್ಲೋ ಎಂಬ ಸಂಶಯ ಮೂಡುತ್ತದೆ. ಈ
ನಿರ್ಮಾಣಕಾರ್ಯ ನಡೆಯುವ ಪ್ರದೇಶದಲ್ಲಿ ಸಲಹೆ, ಸೂಚನೆ ಮತ್ತು ಎಚ್ಚರಿಕೆಯ ನಾಮಫಲಕಗಳು ಕನ್ನಡದಲ್ಲಿ ಅಪರೂಪ ವಾಗಿ ಕಾಣುತ್ತವೆ.

ಇತ್ತೀಚೆಗೆ ಆರಂಭವಾಗಿ, ಅಡುಗೆ ಮಾಡಿ ಊಟ ಮಾಡಲಾಗದ ಅಸಹಾಯಕತೆಯಲ್ಲಿರುವವರ ಮನಗೆದ್ದಿರುವ ಜೊಮೆಟೊದಂಥ
ಕಂಪನಿಗಳಲ್ಲಿ ಕನ್ನಡಿಗರನ್ನು ಹುಡುಕಬೇಕಂತೆ. ಇವು ಕರ್ನಾಟಕದಲ್ಲಿ ಮಣ್ಣಿನ ಮಕ್ಕಳು, ದುಡಿಯುವ ಕೈಗಳು ಹೇಗೆ ಕೆಲಸ ದಿಂದ ವಂಚಿತರಾಗಿದ್ದಾರೆ ಎನ್ನುವುದರ ಒಂದು ಝಲಕ್. ಕುಳಿತು ಬರೆದರೆ ಹನುಮಂತನ ಬಾಲದಷ್ಟು ಬೆಳೆಯುತ್ತದೆ. ಇದರಲ್ಲಿ ಎರಡು ಮುಖ್ಯವಾದ ವಿಷಯಗಳು ಇರುತ್ತವೆ. ಉದ್ಯೋಗದಾತರಲ್ಲಿ ಕನ್ನಡಿಗರು ಎಷ್ಟು ಜನರಿದ್ದಾರೆ? ಈ ಕನ್ನಡಿಗರಲ್ಲಿ ಕನ್ನಡೇ ತರರಂತೆ ಕನ್ನಡ ಮತ್ತು ಕನ್ನಡಿಗ ಅಸ್ಮಿತೆ ಇದೆಯೇ? ಒಬ್ಬ ಕನ್ನಡೇತರ ಉದ್ಯೋಗದಾತನಿದ್ದರೆ ಆತ ತನ್ನ ಭಾಷಾ ಬಾಂಧವರು ಅಥವಾ ಪ್ರದೇಶಬಾಂಧವರನ್ನು ಕರೆತಂದು ಉದ್ಯೋಗ ನೀಡುವುದು ತೀರಾ ಮಾಮೂಲು.

ಇದರಲ್ಲಿ ಕನ್ನಡಿಗರು ತುಂಬಾ ಹಿಂದೆ ಎನ್ನುವುದು ಸತ್ಯ. ಕೆಲವು ವಿಚಾರಗಳಲ್ಲಿ, ಮುಖ್ಯವಾಗಿ ಕಟ್ಟಡ ನಿರ್ಮಾಣ, ಪ್ಲಾಸ್ಟರಿಂಗ್,
ಕಾರ್ಪೆಂಟರಿ, ಪ್ಲಂಬಿಂಗ್, ಇಲೆಕ್ಟ್ರಿಕಲ್ ಮತ್ತು ಸ್ಯಾನಿಟರಿ ಕೆಲಸಗಳಲ್ಲಿ ನೈಪುಣ್ಯ ಮುಖ್ಯವಾಗಿದ್ದು, ಇದರಲ್ಲಿ ವಲಸಿಗರು ಎತ್ತಿದ ಕೈ ಎನ್ನುವುದು ವಾಸ್ತವ ಎನ್ನಲಾಗುತ್ತದೆ. ಕೆಲಸಕ್ಕೆ ನಿಯತವಾಗಿ ಬರುವುದು, ರಜೆ ಹಾಕದಿರುವುದು ಮತ್ತು ಕಡಿಮೆ ಸಂಬಳಕ್ಕೆ ದುಡಿಯುವುದು ಇವರ ವೈಶಿಷ್ಟ್ಯ ಎನ್ನಲಾಗುತ್ತದೆ. ಹಾಗೆಯೇ ‘ಜಿಂದಾಬಾದ್ -ಮುರ್ದಾಬಾದ್’ ಮತ್ತು ಕೆಂಪುಬಾವುಟದ ಜಂಜಾಟ ಕೂಡ ಇವರಲ್ಲಿರುವುದಿಲ್ಲ.

ಇದು ನೀಲಿ ಕಾಲರ್ ಉದ್ಯೋಗದಲ್ಲಿನ ಸಮಸ್ಯೆಯಾದರೆ, ಬಿಳಿ ಕಾಲರ್ ಉದ್ಯೋಗದಲ್ಲಿ ಸರಕಾರದ ಕೆಲವು ನಿಲುವುಗಳು, ನೀತಿ
ನಿಯಮಾವಳಿಗಳು ಕನ್ನಡಿಗರು ಅಥವಾ ಸ್ಥಳೀಯರು ಉದ್ಯೋಗ ವಂಚಿತರಾಗುವುದರಲ್ಲಿ ‘ಖಳನಾಯಕತ್ವ’ ವಹಿಸಿದೆ ಎನ್ನಲಾ ಗುತ್ತಿದೆ. ‘ಮಲಯಾಳಿಗಳಿಗೆ ವೀಸಾ, ಪಾಸ್‌ಪೋರ್ಟ್ ಮತ್ತು ಉದ್ಯೋಗ ನೀಡಿದರೆ, ಅವರು ಕೊಚಿನ್‌ನಿಂದ ದುಬೈವರೆಗೆ ಈಜಲು ರೆಡಿ’ ಎಂದು ಖುಷ್ವಂತ್ ಸಿಂಗ್ ಹೇಳಿದುದರಲ್ಲಿ ತಥ್ಯವಿದೆ.

ಕೊನೆ ಹನಿ: ತೇನ್‌ಸಿಂಗ್ ಎವರೆಸ್ಟ್ ಏರಿ ಹೆಮ್ಮೆಯಿಂದ ಧ್ವಜ ನೆಡುವಾಗ, ‘ಕಾಫಿ ವೇಣುಮಾ ಸರ್’ ಎಂಬ ದನಿ ಹಿಂದಿನಿಂದ ಕೇಳಿಬಂತಂತೆ. ತೇನ್‌ಸಿಂಗ್ ತಿರುಗಿ ನೋಡಿದರೆ ಅಲ್ಲೊಬ್ಬ ಮದ್ರಾಸಿ ಕಾಫಿ ಕಪ್ ಹಿಡಿದುಕೊಂಡಿದ್ದನಂತೆ! ಈ ಜೋಕ್ ನಮಗೆ ಸೂರ್ತಿಯಾದಾಗಲೇ ನಮ್ಮ ಮಣ್ಣಿನ ಮಕ್ಕಳು ಮೇಲೆ ಬರುತ್ತಾರೆ.