ವೈದ್ಯ ಲೋಕ
ಡಾ.ಮೋಹನ್ ಮುರಲೀ ಚೂಂತಾರು
ಮಾರ್ಚ್ ೬ರಂದು ವಿಶ್ವಾದ್ಯಂತ ‘ದಂತ ವೈದ್ಯರ ದಿನ’ವನ್ನು ಆಚರಿಸಲಾಗುತ್ತದೆ. ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಅಭಿನಂದನೆ ತಿಳಿಸುವ ದಿನವಿದು. ಅದೇಕೋ ಏನೋ ಗೊತ್ತಿಲ್ಲ ದಂತವೈದ್ಯರ ಬಗೆಗಿನ ಭಯ ಜನಸಾಮಾನ್ಯ ರಲ್ಲಿ ಇನ್ನೂ ಉಳಿದಿದೆ. ದಂತವೈದ್ಯರು ಎಂದರೆ ‘ನೋವುಂಟುಮಾಡುವವರು’ ಎಂಬ ಹಣೆಪಟ್ಟಿ ಇನ್ನೂ ಪೂರ್ತಿ ಕಳಚಿ ಕೊಂಡಿಲ್ಲ.
ಹೀಗಾಗಿ ಇವರನ್ನು ಖಳನಾಯಕರಂತೆ ಚಿತ್ರಿಸಲಾಗುತ್ತಿದೆ ಮತ್ತು ರೋಗಿಗಳು ದಂತವೈದ್ಯರ ಬಳಿ ಬರಲು ಹಿಂದೇಟು ಹಾಕು ವಂತಾಗುತ್ತಿದೆ. 1790ರ ಮಾರ್ಚ್ ೬ರಂದು ಜಾನ್ ಗ್ರೀನ್ ವುಡ್ ಎಂಬ ಅಮೆರಿಕದ ಖ್ಯಾತ ದಂತವೈದ್ಯರು ಪ್ರಪ್ರಥಮ ಬಾರಿಗೆ ಕಾಲಿನಿಂದ ಚಾಲಿಸ ಲ್ಪಡುವ ದಂತಕುರ್ಚಿಯನ್ನು ಸಂಶೋಧಿಸಿದರು. ಇವರ ನೆನಪಿಗಾಗಿ ಮಾರ್ಚ್ ೬ನ್ನು ವಿಶ್ವಾದ್ಯಂತ ದಂತ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ.
ಭಾರತದಲ್ಲಿ ಡಾ. ಕಫಿಯುದ್ದೀನ್ ಅಹ್ಮದ್ ಅವರನ್ನು ದಂತವೈದ್ಯ ಶಾಸ್ತ್ರದ ಪಿತಾಮಹ ಎಂದೂ, ವಿಶ್ವದಲ್ಲಿ ಡಾ.ಪಿರಿಯ -ಚಾರ್ಡ್ ಅವರನ್ನು ಆಧುನಿಕ ದಂತ ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೂ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನ ಮತ್ತು ಕೌಶಲಗಳ ಕೊರತೆ ಯಿಂದಾಗಿ ದಂತವೈದ್ಯಕೀಯ ಕ್ಷೇತ್ರ ಎಂದರೆ ಜನರಲ್ಲಿ ಭಯ ಆವರಿಸುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರಗಳು ಬಂದಿವೆ, ಹೀಗಾಗಿ ಈ ಕ್ಷೇತ್ರ ಈಗ ಮೊದಲಿನಂತಿಲ್ಲ.
ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸಲೋಕಕ್ಕೆ ಬಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹಾಕೃತಿಯ ಕುರ್ಚಿ, ಹವಾನಿಯಂತ್ರಿತ ವಾತಾವರಣ ಹೀಗೆ ಸಾಕಷ್ಟು ಸೌಕರ್ಯಗಳನ್ನು ಈಗ ಕಾಣಬಹುದು. ಜತೆಗೆ, ದಂತ ವೈದ್ಯಕೀಯ ಚಿಕಿತ್ಸೆಯು ಕೇವಲ ನೋವು ನಿವಾರಕ ವ್ಯವಸ್ಥೆಯಾಗಷ್ಟೇ ಉಳಿಯದೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿಯೂ ರೂಪಾಂತರ ಕಂಡಿದೆ ಎಂಬುದನ್ನು ಮರೆಯಲಾಗದು.
ಆರೋಗ್ಯಪೂರ್ಣ ಸಮಾಜವೊಂದರ ನಿರ್ಮಾಣದಲ್ಲಿ, ಆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂಥ ಪ್ರತಿ ಪ್ರಜೆಯ ಆರೋಗ್ಯ ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು, ಅಲೋಪಥಿ, ಹೋಮಿಯೋ ಪಥಿ, ಯುನಾನಿ ಅಥವಾ ದಂತವೈದ್ಯರೂ ಇರಬಹುದು.
ಒಟ್ಟಿನಲ್ಲಿ ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುವ ವ್ಯಕ್ತಿಗಳೇ ಆಗಿರುತ್ತಾರೆ. ಇನ್ನು ವ್ಯಕ್ತಿಯೊಬ್ಬನ ಸರ್ವತೋಮುಖ ಬೆಳವಣಿಗೆಗೆ ಹಲ್ಲಿನ ಆರೋಗ್ಯವೂ ಅತ್ಯವಶ್ಯಕ.
ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶದ್ವಾರವಿದ್ದಂತೆ. ಜೀರ್ಣಾಂಗವ್ಯೂಹದ ಹೊಸ್ತಿಲೇ ನಮ್ಮ ಬಾಯಿ. ಇಂಥ ಬಾಯಿ ಯಲ್ಲಿ ಹಲ್ಲುಗಳು ಸುಸ್ಥಿತಿಯಲ್ಲಿ ಇರದಿದ್ದಲ್ಲಿ ಜೀರ್ಣಾಂಗ ವ್ಯವಸ್ಥೆ ಹಳಿತಪ್ಪುವುದು ಖಂಡಿತ. ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಿರಲು ಹಲ್ಲಿನ ಆರೋಗ್ಯವೂ ಚೆನ್ನಾಗಿರಬೇಕು; ಒಂದೊಮ್ಮೆ ಇದನ್ನು ನಿರ್ಲಕ್ಷಿಸಿದರೆ, ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುವುದು ಸಹಜ.
ಹಿಂದಿನ ಕಾಲದಲ್ಲಿ ದಂತವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತರಾಗಿದ್ದರು. ಆದರೆ ಈಗ ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳೆದಂತೆ ಈ ಕ್ಷೇತ್ರದಲ್ಲೂ ಹೊಸ ಮಾರ್ಪಾಟುಗಳು ಕಂಡುಬಂದಿವೆ. ಹಲ್ಲಿನ ಆಕರ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿಮಾಡುವವರೆಗೆ ದಂತವೈದ್ಯ ವಿಜ್ಞಾನ ಮುಂದುವರಿದಿದೆ. ದಂತಚಿಕಿತ್ಸೆಯು ಕೇವಲ ರೋಗ ಚಿಕಿತ್ಸಾ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆ ಯುವ ಪ್ರಕ್ರಿಯೆಯನ್ನೂ ಒಳಗೊಂಡಿದೆ. ನಿಯತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗಳಿಗೆ ಒತ್ತು ನೀಡಲಾಗುತ್ತಿದೆ.
ಜತೆಗೆ ಸೌಂದರ್ಯವರ್ಧಕ ಚಿಕಿತ್ಸೆಯಾಗಿಯೂ ಇದು ಬದಲಾಗಿದೆ. ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ ಆತನ ಜೀವನದ ದೃಷ್ಟಿಕೋನವನ್ನು ಬದಲಿಸಬಲ್ಲ, ಆತ್ಮವಿಶ್ವಾಸ ಹೆಚ್ಚಿಸಬಲ್ಲ ಪರ್ವಕಾಲದಲ್ಲಿ ಮತ್ತು ಪ್ರಕ್ರಿಯೆಯಲ್ಲಿ ದಂತವೈದ್ಯರ ಪಾತ್ರ ಅಗಾಧವಾಗಿದೆ ಎಂಬುದನ್ನು ಮರೆಯದಿರೋಣ.
ದಂತಪಂಕ್ತಿಯ ಆರೋಗ್ಯ ಕಾಪಾಡಲು ಒಂದಿಷ್ಟು ಸಲಹೆಗಳು:
೧. ದಿನಕ್ಕೆರಡು ಬಾರಿ ಕನಿಷ್ಠ ೩ ನಿಮಿಷಗಳ ಕಾಲ ಹಲ್ಲುಜ್ಜಬೇಕು.
೨. ದಿನಕ್ಕೊಮ್ಮೆಯಾದರೂ ದಂತದಾರ ಅಥವಾ ದಂತಬಳ್ಳಿ ಬಳಸಿ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸಿ.
೩. ಹಲ್ಲುನೋವು ಬಂದಾಗ ಮಾತ್ರ ದಂತವೈದ್ಯರ ಭೇಟಿ ಮಾಡುವುದು ಸರಿಯಾದ ಕ್ರಮವಲ್ಲ. ಕನಿಷ್ಠ ೬ ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡಬೇಕು.
೪. ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಸಮತೋಲಿತ ಮತ್ತು ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಹಣ್ಣು ಹಂಪಲು, ಹಸಿ ತರಕಾರಿಯುಕ್ತ ಆಹಾರ ಸೇವಿಸಿ. ಇಂಗಾಲಯುಕ್ತ ಕೃತಕ ಪೇಯಗಳನ್ನು ತ್ಯಜಿಸಿ. ತಾಜಾ ಹಣ್ಣಿನ ರಸ,
ಕಬ್ಬಿನ ಹಾಲು ಎಳನೀರು ಮುಂತಾದ ನೈಸರ್ಗಿಕ ಪೇಯಗಳನ್ನು ಸೇವಿಸಿ.
೫. ಎರಡು ಊಟಗಳ ನಡುವೆ ಸಿಹಿ ಪದಾರ್ಥ ಮತ್ತು ಅಂಟು ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅನಿವಾರ್ಯವಾದಲ್ಲಿ ಸೇವಿಸಿದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
೬. ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಮೌತ್ವಾಶ್ ಬಳಸುವ ಅಭ್ಯಾಸ ಮಾಡಿಕೊಳ್ಳಿ. ಕನಿಷ್ಠಪಕ್ಷ ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪುಹಾಕಿ ಆ ದ್ರಾವಣದಿಂದ ಬಾಯಿ ಶುಚಿಗೊಳಿಸಬೇಕು.
೭. ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸಬೇಕು. ಇದರಿಂದ ಬಾಯಿವಾಸನೆ, ವಸಡಿನ ಉರಿಯೂತ ಮತ್ತು ವಸಡಿನಲ್ಲಿ ರಕ್ತ ಒಸರುವುದು ನಿಯಂತ್ರಣಕ್ಕೆ ಬರುತ್ತದೆ.
೮. ಹಲ್ಲುನೋವು ಬಂದಾಗ ಸ್ವಯಂವೈದ್ಯ ಮಾಡಿಕೊಂಡು ನೋವು ನಿವಾರಕ ಔಷಧಿ ತೆಗೆದುಕೊಳ್ಳುವುದು ಬಹಳ ಅಪಾಯ ಕಾರಿ. ಇಂಥ ವೇಳೆ ದಂತವೈದ್ಯರ ಸಲಹೆ ಅತ್ಯಗತ್ಯ.