Friday, 22nd November 2024

ನಾವು ಮಕ್ಕಳನ್ನು ಹೇಗೆ ಹುಟ್ಟಿಸುತ್ತೇವೆ ಎಂಬುದರ ಬಗ್ಗೆ ಅವರಿಗ್ಯಾಕೆ ಚಿಂತೆ?

ಸ0ಡೆ ಸಮಯ
ಸೌರಭ್‌ ರಾವ್, ಕವಯಿತ್ರಿ, ಬರಹಗಾರ್ತಿ

ಅಲ್ಲಾ, ರಾಜಕೀಯ ಮಾಡುವುದು ಬಿಟ್ಟು ಒಂದು ದೇಶದ ಹೆಂಗಸರ ಲೈಂಗಿಕ ಆಕರ್ಷಣೆ ಬಗ್ಗೆೆ ಓವಲ್ ಕಚೇರಿಯಂಥ ಸ್ಥಳದಲ್ಲಿ ಕೂತು ಗೊಡ್ಡು ಹರಟೆ ಮಾಡುವಷ್ಟು ಬಿಡುವಿತ್ತಾಾ ಅಮೆರಿಕಾದ ಅಧ್ಯಕ್ಷ ಮತ್ತು ಅವರ ಮಂತ್ರಿಮಂಡಲಕ್ಕೆ? ಯಾರಾದರೂ ಅವರನ್ನು ಭಾರತದ ಹೆಂಗಸರ ಜೊತೆ ಯಾವುದಾದರೂ ಸಂಬಂಧ ಬೆಳೆಸಿಕೊಳ್ಳಿ ಎಂದು ಬೇಡಿದ್ದರಾ? ಅಥವಾ ಭಾರತೀಯ
ಹೆಂಗಸರು ಬಲವಂತದಿಂದ ಅವರ ಮೈಮೇಲೆ ಬೀಳಲು ಹೋಗಿದ್ದರಾ? ಇದೆಂಥಾ ರೋಗಗ್ರಸ್ತ ಮನಸ್ಥಿತಿ?

ಅಧಿಕಾರದಲ್ಲಿರುವ ಬೆರಳೆಣಿಕೆಯಷ್ಟು ಮನುಷ್ಯರ ವಿಕೃತಿಯಿಂದ ಒಮ್ಮೊಮ್ಮೆ ಕೋಟಿಗಟ್ಟಲೆ ಜನ ಸಾವು – ನೋವು ಅನು ಭವಿಸುವುದನ್ನು ಪ್ರಪಂಚದ ಇತಿಹಾಸದುದ್ದಕ್ಕೂ ಕಂಡಿದ್ದೇವೆ, ಕಾಣುತ್ತಿದ್ದೇವೆ. ಆದರೆ ಈಗ ಬಾಂಗ್ಲಾದೇಶವಾಗಿರುವ ನೆಲದಲ್ಲಿ 1971ರಲ್ಲಿ ನಡೆದ ಹಿಂಸೆ, ಅತ್ಯಾಚಾರ, ನರಮೇಧವನ್ನು ಅಮೆರಿಕಾದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಹೇಗೆ ಜನಾಂಗೀಯ ಮತ್ಸರದಿಂದ ಕುರುಡಾಗಿ ಕಡೆಗಣಿಸಿದರು ಎಂಬುದಕ್ಕೆ ಇತ್ತೀಚಿಗೆ ಹೊರಬಂದಿರುವ ಶ್ವೇತಭವನದ ಓವಲ್ ಕಚೇರಿಯ ಆ ವರ್ಷದ ಧ್ವನಿಸುರುಳಿಗಳು ಪುರಾವೆ ನೀಡಿವೆ.

ಇದೇ ಸೆಪ್ಟೆೆಂಬರ್ 3ರಂದು ‘ದ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾದ ಜನಾಂಗೀಯ ಹತ್ಯೆೆಗಳ ಸಂಶೋಧನಾಕಾರರಾದ, ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಗ್ಯಾರಿ ಬ್ಯಾಸ್ ಅವರ ಲೇಖನವನ್ನು ನೀವೀಗಾಗಲೇ ಓದಿರಬಹುದು (ಶೀರ್ಷಿಕೆ: ದ ಟೆರಿಬಲ್ ಕಾಸ್ಟ್ ಆಫ್ ಪ್ರೆೆಸಿಡೆನ್ಷಿಯಲ್ ರೇಸಿಸಮ್). ಭಾರತ – ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆದ ಕೆಲವು ಚರ್ಚೆ, ಸಭೆಗಳಲ್ಲಿ ನಿಕ್ಸನ್ ಭಾರತೀಯರ ಬಗ್ಗೆೆ ಜನಾಂಗೀಯ ಮತ್ಸರವನ್ನು ಹರಡುವ ಮತ್ತು ಭಾರತೀಯ ಹೆಂಗಸರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿರುವುದು, ಜೊತೆಗೆ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್ ಕೂಡಾ ಅದನ್ನು ವಿರೋಧಿ ಸದೇ ಅದಕ್ಕೆ ಪೂರಕವಾಗಿ ಪ್ರತಿಕ್ರಯಿಸಿರುವ ಬಗ್ಗೆೆ ಬ್ಯಾಸ್ ವಿವರಿಸಿದ್ದಾರೆ.

2020ರಲ್ಲೂ ಕೋವಿಡ್ ಪರಿಸ್ಥಿತಿಯ ಮಧ್ಯೆಯೂ ಅಮೆರಿಕಾದಲ್ಲಿ ಅಧಿಕಾರದ ಸಮಸ್ಯೆ ಮತ್ತು ಜನಾಂಗೀಯ ಮತ್ಸರದ ವಿರುದ್ಧ ಜನ ಪ್ರತಿಭಟಿಸುತ್ತಿರುವ ನಡುವೆಯೇ ಈ ಧ್ವನಿಸುರುಳಿಗಳು ಅಧಿಕೃತ ದಾಖಲೆಯಾಗಿ ಹೊರಬಂದಿರುವುದು ಭೂತ – ವರ್ತಮಾನಗಳು ಇನ್ನೂ ಈ ದುರದೃಷ್ಟಕರ ಎಳೆಯೊಂದರಿಂದ ಹೆಣೆದುಕೊಂಡಿರುವುದನ್ನು ತೋರಿಸುತ್ತಿವೆ. ನಿಕ್ಸನ್ ಅವರ ಮಾತುಗಳಲ್ಲಿ ಸ್ವಪ್ರತಿಷ್ಠೆ, ಭಾರತೀಯರ ಮೇಲಿನ ತಿರಸ್ಕಾರದ ಭಾವನೆಗಳು ಮತ್ತು ಭಾರತದ ಹೆಂಗಸರ ವಿರುದ್ಧ ವಿಷಕಾರು ವಷ್ಟು ಲೈಂಗಿಕ ವಿಕರ್ಷಣೆ ಎದ್ದು ಕಾಣುತ್ತದೆ.

ಜೂನ್ 1971ರಲ್ಲಿ ಆ ಮಹಾನುಭಾವ ಆಡಿದ ಮಾತು ಕೇಳಿ: ನಿಸ್ಸಂದೇಹವಾಗಿ, ಇಡೀ ಪ್ರಪಂಚದಲ್ಲೇ ಅತ್ಯಂತ ನಿರಾಕರ್ಷಕ ಹೆಂಗಸರೆಂದರೆ ಭಾರತೀಯ ಹೆಂಗಸರು. ಈ ಮಾತನ್ನು ವಿಷಪೂರಿತ ಧ್ವನಿಯಲ್ಲಿ ಬೇರೆ ಹೇಳುತ್ತಾರೆ ಎಂದು ಬ್ಯಾಸ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ. ನಿಕ್ಸನ್ ಮುಂದಿನ ಮಾತುಗಳು: ಲೈಂಗಿಕ ಆಕರ್ಷಣೆಯೇ ಇಲ್ಲದ ಜನ ಇವರು. ಆಫ್ರಿಕಾದ ಕಪ್ಪು ವರ್ಣೀಯರ ಬಗ್ಗೆ ಜನ ಕೇಳುತ್ತಾರೆ. ಅವರಲ್ಲಿ ಹುರುಪಾದರೂ ಇದೆ, ಪ್ರಾಣಿಗಳ ರೀತಿ ಆಕರ್ಷಣೆಯಾದರೂ ಇದೆ, ಆದರೆ ದೇವರೇ, ಆ ಭಾರತೀಯರು, ಆಕ್, ಪಥೆಟಿಕ್. ಆಖ್. (The most sexless, nothing, these people. I mean, people say, what about the Black Africans? Well, you can see something, the vitality there, I mean they have a little animallike charm, but God, those Indians, ack, pathetic. Uch.) ಇಂಥವರ ಮನಸ್ಥಿತಿಯೇ ಅರ್ಥವಾಗುವುದಿಲ್ಲ.

ನಿಕ್ಸನ್ ಸತ್ತುಹೋಗಿದ್ದಾರೆ, ಈಗ್ಯಾಕೆ ಈ ಮಾತು ಎಂದು ತಳ್ಳಿಹಾಕುವಂತಿಲ್ಲ. ಅವರ ಆ ಧೋರಣೆ, ಭಾರತ ಮಾತ್ರವಲ್ಲದೇ ದಕ್ಷಿಣ ಏಷ್ಯಾಗೆ ಸಂಬಂಧಪಟ್ಟ ರಾಜಕೀಯ ನಿರ್ಧಾರಗಳ, ನಿಲುವುಗಳ, ನೀತಿಗಳ ಮೇಲೂ ಪ್ರಭಾವ ಬೀರಿತು. ಅದರ ಪರಿಣಾಮ
ಎಲ್ಲರಿಗೂ ತಿಳಿದೇ ಇದೆ. ನಿಕ್ಸನ್ ಮನಸ್ಸಿನಲ್ಲಿ ಈ ದ್ವೇಷಭರಿತ ಧೋರಣೆ ಎಷ್ಟು ಗಟ್ಟಿಯಾಗಿ ಬೇರೂರಿತ್ತು ಎನ್ನುವುದಕ್ಕೆ, ಅದೇ ವರ್ಷ, ನವೆಂಬರ್ 4ರಂದು ಇಂದಿರಾ ಗಾಂಧಿ ಶ್ವೇತಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರೊಟ್ಟಿಗೆ ಚರ್ಚೆ ನಡೆಸುವಾಗ ಮಧ್ಯೆೆ ತೆಗೆದುಕೊಂಡ ಒಂದು ವಿರಾಮದಲ್ಲೂ ಭಾರತೀಯ ಹೆಂಗಸರ ಬಗ್ಗೆ ಅವಹೇಳನ ಮುಂದುವರೆಸಿದ್ದಾರೆ: ನನಗಂತೂ ಅವರು ಟರ್ನ್ ಆಫ್. ಅದು ಹೇಗೆ ಬೇರೆ ಜನರನ್ನು ಅವರು ಆಕರ್ಷಿಸುತ್ತಾರೆ, ಹೆನ್ರಿ? ಹೇಳು. (To me, they turn me off. How the hell do they turn other people on, Henry? Tell me ಹೆನ್ರಿ ಅದಕ್ಕೆ ಕೊಟ್ಟ ಉತ್ತರ ಧ್ವನಿಸುರುಳಿಯಲ್ಲಿ ಸ್ಪಷ್ಟವಾಗಿ ಕೇಳಿಸ ದಿದ್ದರೂ, ನಿಕ್ಸನ್ ಮಾತನ್ನು ಆತ ವಿರೋಧಿಸಿಲ್ಲ ಎನ್ನುವುದು ತಿಳಿಯುತ್ತದೆ ಎನ್ನುತ್ತಾರೆ ಬ್ಯಾಸ್. ಅವರು ನನ್ನನ್ನು ಟರ್ನ್ ಆಫ್ ಮಾಡುತ್ತಾರೆ. ಹೇಸಿಗೆ ಹುಟ್ಟಿಸುತ್ತಾರೆ, ಅವರೊಡನೆ ಕಠಿಣವಾಗಿ ನಡೆದುಕೊಳ್ಳುವುದು ಸುಲಭ.

ಎಂದಿರುವುದೂ ಅಧಿಕೃತವಾಗಿ ಧ್ವನಿಸುರುಳಿಯಲ್ಲಿ ದಾಖಲಾಗಿದೆ. ಹೇಳಿ, ಇಷ್ಟು ಸೊಕ್ಕಿನಿಂದ ಕೂಡಿದ ಹೇಳಿಕೆ ಕೊಡುವ ಚಿತ್ತವಿಕೃತಿಯ ಮನುಷ್ಯ ಅಧಿಕಾರದಲ್ಲಿದ್ದರೆ, ವಿದೇಶಾಂಗ ನೀತಿಗಳ ಮೇಲೆ ಅದರ ಪರಿಣಾಮ ಬೀರದೆ ಇರಲು ಹೇಗೆ ಸಾಧ್ಯ?
ಲೇಖನ ಮುಂದುವರೆಸುತ್ತಾ, ಕೆಲ ದಿನಗಳ ನಂತರ, ನವೆಂಬರ್ 12ರಂದು ಭಾರತ – ಪಾಕಿಸ್ತಾನಗಳ ನಡುವಿನ ಒತ್ತಡಗಳ ಬಗ್ಗೆ ಚರ್ಚಿಸುವಾಗ ಅದಕ್ಕೆ ಸಂಬಂಧವೇ ಇರದೇ, ಅವರು ಹೇಗೆ ಸಂತಾನೋತ್ಪತ್ತಿ ಮಾಡುತ್ತಾರೋ ನನಗಂತೂ ಗೊತ್ತಿಲ್ಲ, ಎನ್ನುತ್ತಾರೆ ನಿಕ್ಸನ್ ಎಂದು ಬ್ಯಾಸ್ ತಿಳಿಸುತ್ತಾರೆ. ಎಲ್ಲಾ ದ್ವೇಷ – ಮತ್ಸರಗಳಿಂದ ನಾನು ದೂರವಿದ್ದೆ ಎಂದು ಹೇಳಿಕೊಳ್ಳುತ್ತಲೇ
ಬಂದಿರುವ ಹೆನ್ರಿ ಕಿಸ್ಸಿಂಜರ್‌ ಕೂಡಾ ಈ ಕಾಡು ಹರಟೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಬ್ಯಾಸ್ ತೋರಿಸುತ್ತಾರೆ. ಇದರ ಬಗ್ಗೆೆ ಕಿಸ್ಸಿಂಜರ್ ಅವರನ್ನು ಭೇಟಿ ಮಾಡಿರುವ ‘ದ ಪ್ರಿಂಟ್‌’ನ ಪ್ರಧಾನ ಸಂಪಾದಕ, ಶೇಖರ್ ಗುಪ್ತಾ ಕೂಡಾ ಇತ್ತೀಚಿಗೆ ಬಂದ ತಮ್ಮ 559ನೇ ‘ಕಟ್ ದ ಕ್ಲಟ್ಟರ್’ ವಿಡಿಯೋದಲ್ಲಿ ಇದರಿಂದ ನಿಕ್ಸನ್ ಮಾತ್ರವಲ್ಲದೇ ಕಿಸ್ಸಿಂಜರ್ ಕೂಡಾ ಸುಳ್ಳುಗಾರ ಎಂದು ತಿಳಿಯು ತ್ತದೆ ಎಂದಿದ್ದಾರೆ.

ಬಾಂಗ್ಲಾದೇಶದಿಂದ ವಲಸೆ ಮಾಡಿದ್ದ ಲಕ್ಷಾಂತರ ಜನರಿಗೆ ಭಾರತ ಆಶ್ರಯ ನೀಡಿದೆ ಎಂದು ಆಗ ಅಸಮಾಧಾನ ತೋರಿದ್ದ ಕಿಸ್ಸಿಂಜರ್, ತಿರಸ್ಕಾರದಿಂದ ಭಾರತೀಯರನ್ನು, They are a scavenging people, ಎಂದು ಕರೆದಿರುವುದು ದಾಖಲಾಗಿದೆ ಎಂದು ಬ್ಯಾಸ್ ವಿವರಿಸುತ್ತಾರೆ. ಹೀಗೆ ಮುಂದುವರಿಯುತ್ತದೆ ಅವರ ಹೇಳಿಕೆಗಳು. ಅಲ್ಲಾ, ರಾಜಕೀಯ ಮಾಡುವುದು ಬಿಟ್ಟು ಒಂದು ದೇಶದ ಹೆಂಗಸರ ಲೈಂಗಿಕ ಆಕರ್ಷಣೆ ಬಗ್ಗೆ ಓವಲ್ ಕಚೇರಿಯಂಥ ಸ್ಥಳದಲ್ಲಿ ಕೂತು ಗೊಡ್ಡು ಹರಟೆ ಮಾಡುವಷ್ಟು ಬಿಡುವಿತ್ತಾ ಅಮೆರಿಕಾದ ಅಧ್ಯಕ್ಷ ಮತ್ತು ಅವರ ಮಂತ್ರಿಮಂಡಲಕ್ಕೆ ಯಾರಾದರೂ ಅವರನ್ನು ಭಾರತದ ಹೆಂಗಸರ ಜೊತೆ ಯಾವುದಾದರೂ ಸಂಬಂಧ ಬೆಳೆಸಿಕೊಳ್ಳಿ ಎಂದು ಬೇಡಿದ್ದರಾ? ಅಥವಾ ಭಾರತೀಯ ಹೆಂಗಸರು ಬಲವಂತದಿಂದ ಅವರ ಮೈಮೇಲೆ ಬೀಳಲು ಹೋಗಿದ್ದರಾ? ಇದೆಂಥಾ ರೋಗಗ್ರಸ್ತ ಮನಸ್ಥಿತಿ? ಒಂದು ಅಮಾನವೀಯ ಪ್ರಚೋದನೆ ಕಂಡರೂ, ಕೇಳಿದರೂ, ಅದಕ್ಕೆ ಅಮಾನವೀಯವಾಗಿ ಪ್ರತಿಕ್ರಿಯಿಸದೇ ಘನತೆಯಿಂದ ಅದನ್ನು ಎದುರಿಸಿ, ನ್ಯಾಯವಾಗಿ ನಡೆದುಕೊಂಡು ಜನರಿಗೆ  ಮಾದರಿ ಯಾಗಬೇಡವಾ ಈ ನಾಯಕರು (?) ಎನಿಸಿಕೊಂಡವರು? ಆ ಮನುಷ್ಯನ ಮಾತಿಗೆ ಉತ್ತರವಾಗಿ ತಾವೇನು ಕ್ಲಿಂಟ್‌ ಈಸ್ಸ್ಟ್  ವುಡ್ ಅಂದುಕೊಂಡಿದ್ದೀರಾ? ಭಾರತದ ಹೆಂಗಸರು ಬಿಡಿ, ಯಾವುದೇ ಹೆಂಗಸರಾದರೂ ನಿಮ್ಮ ಮೈಮೇಲೆ ಹಾರಿಬೀಳುವಷ್ಟು ನಿಮ್ಮನ್ನು ನೀವು ಸುರಸುಂದರಾಂಗ ಅಂದುಕೊಂಡಿದ್ದೀರಾ? ಎಂದು ಯಾರಾದರೂ ಕೇಳಿದ್ದರೆ ಎಷ್ಟು ಬಾಲಿಶ ಎನಿಸುತ್ತದೆ.

ಅಂಥದ್ದರಲ್ಲಿ ತನ್ನೊಳಗಿಂದ ತಾನಾಗೇ ಅಸಹ್ಯ ಹುಟ್ಟಿಸುವ ದ್ವೇಷಪೂರಿತ ಹೇಳಿಕೆಗಳನ್ನು ಒಂದು ಜವಾಬ್ದಾರಿಯುತ ಸ್ಥಾನ ದಲ್ಲಿ ಕೂತು ಕೊಡುವ ಮನಸ್ಸುಗಳು ಅಧಿಕಾರದಲ್ಲಿದ್ದರೆ ಅನಾಹುತಗಳಲ್ಲದೇ ಮತ್ತೇನಾಗುತ್ತದೆ? ಶೇಖರ್ ಗುಪ್ತಾ ಅವರು ಕಡೆಯದಾಗಿ ಇದರ ಬಗ್ಗೆೆ ಹೇಳಿದ ಮಾತು: ಮನಃಶಾಸ್ತ್ರಜ್ಞರು, ಮನೋರೋಗ ವೈದ್ಯರು ನಿಕ್ಸನ್ ಅಂತಹವರ ಮನಸ್ಥಿತಿಗಳನ್ನು ಅಧ್ಯಯನ ಮಾಡಬೇಕು. ರಾಜಕೀಯ ನಾಯಕರು ಜನಸೇವೆಯಲ್ಲಿದ್ದೇವೆ ಎಂದು ನೆನಪಿಟ್ಟುಕೊಳ್ಳಲಿ ಎಂದೆಲ್ಲಾ ಬರೆದರೆ,
ಮಾತನಾಡಿದರೆ ನಗೆಪಾಟಲಾಗುವ ಕಾಲದಲ್ಲಿದ್ದೇವೆ. ರಾಜಾರೋಷವಾಗಿ ಅಮಾನವೀಯತೆ, ಭ್ರಷ್ಟಾಚಾರ, ದುರಹಂಕಾರ ಮೆರೆವ ನಾಯಕರೇ ಹೆಚ್ಚಿರುವಾಗ, ಅದರಲ್ಲೂ ಸುದ್ದಿ ಅರೆಕ್ಷಣದಲ್ಲಿ ಹರಡುವ ಈ ಡಿಜಿಟಲ್ ಯುಗದಲ್ಲೂ ಅಂತಹವರು ಯಾವ ಭಯವೂ ಇಲ್ಲದೇ ತಮಗೆ ಬೇಕಾದಂತೆ ಬದುಕುತ್ತಿರುವಾಗ, ಇಂತಹ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಿಂದ
ನಮ್ಮ ಪ್ರಜ್ಞೆಗೂ ಎಂತಹ ನಾಯಕರನ್ನು ಆರಿಸಬೇಕು ಎಂಬುದರ ಬಗ್ಗೆೆ ಹೊಸ ಪಾಠಗಳು ಸಿಗುತ್ತವೇನೋ.