Thursday, 12th December 2024

ಲೈಂಗಿಕ ಕಿರುಕುಳ ಆರೋಪ: ಸಹಾಯಕ ಪ್ರಾಧ್ಯಾಪಕ ಅಮಾನತು

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮತ್ತು ಅಸಭ್ಯ ವರ್ತನೆಯ ಆರೋಪದ ಮೇಲೆ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.
ಪ್ರೊಫೆಸರ್ ಅಬಿದ್ ಹುಸೇನ್ ಅವರ ನಡವಳಿಕೆಯ ಬಗ್ಗೆ ವಿಶ್ವವಿದ್ಯಾಲಯದ ಆಂತರಿಕ ದೂರುಗಳ ಸಮಿತಿಯು ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದೆ. ಆದರೆ ಅಬಿದ್ ಹುಸೇನ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿ ದ್ದಾರೆ ಮತ್ತು ಅಧ್ಯಾಪಕರು ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ತಿಂಗಳಲ್ಲಿ ಕ್ಯಾಂಪಸ್ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಅಧ್ಯಾಪಕ ರನ್ನು ಅಮಾನತುಗೊಳಿಸಿದ ಎರಡನೇ ಪ್ರಕರಣ ಇದಾಗಿದೆ. ಸೈಕಾಲಜಿ ವಿಭಾಗದ ಏಳು ಅಧ್ಯಾಪಕರು ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜೆಎಂಐ ರಿಜಿಸ್ಟ್ರಾರ್ ನಜೀಮ್ ಹುಸೇನ್ ಜಾಫ್ರಿ ಅವರು ಕಚೇರಿ ಮೆಮೊದಲ್ಲಿ ತಿಳಿಸಿದ್ದಾರೆ.

ದೂರಿನಲ್ಲಿ, ಹುಸೇನ್ ಅವರು ತುಂಬಾ ಆಕ್ರಮಣಕಾರಿ ವರ್ತಿಸಿದ್ದಾರೆ ಮತ್ತು ವಿಶೇಷವಾಗಿ ಡೀನ್ ಸಮ್ಮುಖದಲ್ಲೇ ವಿಭಾಗದ ಮುಖ್ಯಸ್ಥರನ್ನು ನಿಂದಿಸಿದ್ದು, ಅಸಂಸದೀಯ ಭಾಷೆ ಬಳಸಿದ್ದಾರೆ ಎಂದು ಮಹಿಳಾ ಅಧ್ಯಾಪಕರೊಬ್ಬರು ಆರೋಪಿಸಿದ್ದಾರೆ.

ಹುಸೇನ್ ಅವರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದಾರೆ. ಅಲ್ಲದೆ ವಿಭಾಗದ ಮುಖ್ಯಸ್ಥರ ಮೇಲೂ ದಾಳಿ ಮಾಡಿದ್ದಾರೆ ಎಂದು ಮಹಿಳಾ ಸಹೋದ್ಯೋಗಿಯೊಬ್ಬರು ದೂರಿದ್ದಾರೆ.