Sunday, 15th December 2024

ಕೈ ಕಚ್ಚುತ್ತಿರುವ ಅರ್ಕಾವತಿ ರೀಡೂ ಪ್ರಕರಣ

ವರ್ತಮಾನ

maapala@gmail.com

ಮುಚ್ಚಿಯೇ ಹೋಯಿತು ಎನ್ನುವಂತಿದ್ದ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೀಡಿದ್ದ ವರದಿಯನ್ನು ಬಿಜೆಪಿ ಸರಕಾರ ಸದನದಲ್ಲಿ ಮಂಡಿಸದೇ ಕೇವಲ ರಾಜಕೀಯ ಆರೋಪ- ಪ್ರತ್ಯಾರೋಪಗಳಿಗೆ ಸೀಮಿತಗೊಳಿಸಿದ್ದರಿಂದ ಕಾಂಗ್ರೆಸ್ ಅದರ ಲಾಭ ಪಡೆಯುವಂತಾಗಿತ್ತು. ಇದರಿಂದಾಗಿ ಅದು ಅಷ್ಟಕ್ಕೇ ಸೀಮಿತ ಎಂಬ ಭಾವನೆ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಿಗೂ ಬಂದಿತ್ತು.

ಆದರೆ, ವಿಧಾನಸಭೆ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳಿವೆ ಎನ್ನುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯ ಅಂಶಗಳನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ೪೦ ಕಮಿಷನ್ ಪ್ರಕರಣವನ್ನು ಪ್ರಸ್ತಾಪಿಸಿ ಆಡಳಿತ ರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಂಗ್ರೆಸ್‌ಗೆ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟನ್ನೇ ನೀಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಬಿಜೆಪಿಗೆ ಇಷ್ಟೊಂದು ಅನುಕೂಲ ಮಾಡಿಕೊಡುತ್ತದೆ ಎಂಬುದು ಆ ಪಕ್ಷದ ನಾಯಕರಿಗೂ ಅರಿವಿರಲಿಲ್ಲ. ಇದ್ದಿದ್ದರೆ ಸರಕಾರ ಬಂದು ಮೂರೂವರೆ ವರ್ಷದವರೆಗೆ ಹಗರಣ
ಕುರಿತಂತೆ ನ್ಯಾಯಮೂರ್ತಿ ಕೆಂಪಣ್ಣ ಸಲ್ಲಿಸಿದ್ದ ವರದಿಯನ್ನು ಸದನದಲ್ಲಿ ಮಂಡಿಸದೇ ಇರುತ್ತಿರಲಿಲ್ಲ. ಅದರಲ್ಲೂ ೪೦ ಪರ್ಸೆಂಟ್ ಕಮಿಷನ್ ಆರೋಪವನ್ನೇ ಪ್ರಧಾನವಾಗಿಟ್ಟುಕೊಂಡು ಕಾಂಗ್ರೆಸ್ ಸರಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುತ್ತಿದ್ದಾಗ ಈ ವರದಿಯನ್ನು ಮಂಡಿಸದೇ ಸರಕಾರ ಸುಮ್ಮನೆ ಇರುತ್ತಿರಲಿಲ್ಲ.

ಆದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಒಂದು ಲೆಕ್ಕದಲ್ಲಿ ಸರಕಾರವನ್ನು ಉದ್ರೇಕಿಸಿ ಕೆಂಪಣ್ಣ ಆಯೋಗದ ವರದಿಯ ಕೆಲವು ಅಂಶಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸುವಂತೆ ನೋಡಿಕೊಂಡರು. ಒಂದು ರೀತಿ ಕೋಲು ಕೊಟ್ಟು ಪೆಟ್ಟುತಿನ್ನುವಂತೆ ಮಾಡಿಕೊಂಡರು ಎನ್ನಬಹುದು. ಇದರ ಪರಿಣಾಮ ಕಳೆದ ಹಲವು ತಿಂಗಳುಗಳಿಂದ ಕಾಂಗ್ರೆಸ್‌ನ ೪೦ ಪಸೆಂಟ್ ಸರಕಾರ ಆರೋಪದಿಂದ ಇಕ್ಕಟ್ಟಿಗೆ ಸಿಲುಕಿ ಚಡಪಡಿಸುತ್ತಿದ್ದ ಬಿಜೆಪಿಗೆ ಚುನಾವಣೆ ಸಮಯಕ್ಕೆ ಕಾಂಗ್ರೆಸ್ ವಿರುದ್ಧ ಬಳಸಲು ಒಂದೊಳ್ಳೇ ಅಸವೇ ಸಿಕ್ಕಿದಂತಾಗಿದೆ.

ಈ ಪ್ರಕರಣದಲ್ಲಿ ನಮ್ಮ ಸರಕಾರ ಏನೂ ತಪ್ಪೇ ಮಾಡಿಲ್ಲ, ನಾನು ಒಂದಿಂಚೂ ಭೂಮಿ ಡಿನೋಟಿಫೈ ಮಾಡಿಲ್ಲ ಎಂದು ನ್ಯಾ.ಕೆಂಪಣ್ಣ ವರದಿ ಹೇಳಿದೆ ಎಂದು ಸಿದ್ದರಾಮಯ್ಯ ಎಷ್ಟೇ ಹೇಳಬಹುದು, ಆದರೆ, ವರದಿಯ ಪ್ರತಿ ಯನ್ನು ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪ ಮಾಡಿದ್ದರಿಂದ ಮತ್ತು ಅರ್ಕಾವತಿ ಕರ್ಮಕಾಂಡ ಎಂದು ನ್ಯಾಯಮೂರ್ತಿಗಳ ವರದಿಯೇ ಹೇಳಿದೆ ಎಂದು ಹೇಳಿರುವುದರಿಂದ ಮುಖ್ಯಮಂತ್ರಿ ಹೇಳಿಕೆಗೆ ಹೆಚ್ಚು ಬಲ ಬರುತ್ತದೆ.

ಹೀಗಾಗಿಯೇ ಬಿಜೆಪಿಯನ್ನು ಭ್ರಷ್ಟ ಎನ್ನುತ್ತಿರುವ ಕಾಂಗ್ರೆಸ್ ವಿರುದ್ಧ ಆ ಸರಕಾರದ ಭ್ರಷ್ಟಾಚಾರವನ್ನು ಸಾಬೀತುಪಡಿಸುವ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಲಿದೆ. ರಾಜ್ಯದ ಜನ ಕಾರ್ಯಾಂಗ, ಶಾಸಕಾಂಗದ ಮೇಲಿನ
ನಂಬಿಕೆ ಕಳೆದುಕೊಂಡಿರಬಹುದು. ಆದರೆ, ನ್ಯಾಯಾಂಗದ  ಬಗ್ಗೆ ಇನ್ನೂ ನಂಬಿಕೆ, ಗೌರವ ಹೊಂದಿದ್ದಾರೆ. ಹೀಗಾಗಿ ರಾಜಕಾರಣಿಗಳು ಮಾಡುವ ಆರೋಪಗಳಿಗೆ ನ್ಯಾಯಾಂಗದ ಬೆಂಬಲ ಇದೆ ಎಂದಾದರೆ ಅದನ್ನು ಜನ ನಂಬುವ ಸಾಧ್ಯತೆ ಹೆಚ್ಚು. ಕೇವಲ ನನ್ನಲ್ಲಿ ದಾಖಲೆಗಳಿವೆ ಎಂದು ಹೇಳಿಕೊಂಡು ಆರೋಪ ಮಾಡುವುದಕ್ಕಿಂತ ನ್ಯಾಯಾಂಗ ದಾಖಲೆಗಳನ್ನು ಜನರಿಗೆ ತೋರಿಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಇದು ಗೊತ್ತಿದ್ದೇ ಸದನದಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಕೆಲ ಅಂಶಗಳನ್ನು ಪ್ರಸ್ತಾಪಿಸುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದು ನಿಮ್ಮ ಕಾಂಟ್ರಾಕ್ಟರ್ ಕೆಂಪಣ್ಣನವರ ಆಧಾರವಿಲ್ಲದ ವರದಿಯಲ್ಲ. ನ್ಯಾಯಮೂರ್ತಿ ಕೆಂಪಣ್ಣ ನೀಡಿರುವ ವರದಿ ಎಂಬುದನ್ನು ಒತ್ತಿ ಹೇಳಿದ್ದು. ಅಷ್ಟೇ ಅಲ್ಲ, ಡಿನೋಟಿಫಿಕೇಷನ್ ಬದಲು ‘ರಿಡೂ’ ಎಂಬ ಹೊಸ ಪದ ಸೃಷ್ಟಿಸಿ ಸುಮಾರು ೮ ಸಾವಿರ ಕೋಟಿ ರು. ಬೃಹತ್ ಭ್ರಷ್ಟಾಚಾರ ನಡೆದಿದೆ. ಜಮೀನು ಮಾಲೀಕರ ಹಿತಾಸಕ್ತಿಗಾಗಿ ೮೦೦ ಎಕರೆಗೂ ಹೆಚ್ಚು ಜಮೀನನ್ನು ‘ರೀಡೂ’ ಹೆಸರಿನಲ್ಲಿ ಡಿನೋಟಿಫೈ ಮಾಡಿರುವುದು ಸತ್ಯ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ, ಇದು ಅರ್ಕಾವತಿ ಕರ್ಮಕಾಂಡ ಎಂದೂ ವರದಿಯಲ್ಲಿ ಹೇಳಲಾಗಿದೆ. ಎಕರೆಗೆ ೧೦ ಕೋಟಿ ರು. ಎಂದರೂ ೮೦೦೦ ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದರು.

ಮುಖ್ಯಮಂತ್ರಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಸಿದ್ದರಾಮಯ್ಯ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಒಂದು ಗುಂಟೆಯಷ್ಟು ಜಮೀನು ಡೀನೋಟಿಫೈ ಮಾಡಿಲ್ಲ ಎಂದು ಜಾಣ್ಮೆಯಿಂದ ಹೇಳಿದರು. ಇವರು
ಡಿನೋಟಿಫಿಕೇಷನ್‌ಗೆ ರೀಡೂ ಎಂಬ ಹೊಸ ಹೆಸರು ಇಟ್ಟು  ಸುಮಾರು ೮೬೮ ಎಕರೆ ಭೂಮಿಯನ್ನು ಡೀನೋಟಿ-  ಮಾಡಿದರು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಉಲ್ಲಂಘಿಸಲಾಗಿದೆ ಎಂದು ಕೆಂಪಣ್ಣ ವರದಿ ಸ್ಪಷ್ಟವಾಗಿ ಹೇಳಿದೆ. ಸಿದ್ದರಾಮಯ್ಯ ಅವಧಿಯಲ್ಲೇ ಕೆಂಪಣ್ಣ
ವರದಿಯನ್ನು ಸಚಿವ ಸಂಪುಟ ಸಭೆಯ ಮುಂದೆ ಇಡಲಾಯಿತು. ಅದರಲ್ಲಿನ ಕಹಿ ಸತ್ಯವನ್ನು ತಿಳಿದು, ಮುಚ್ಚಿ ಹಾಕುವ ಉದ್ದೇಶದಿಂದ ಆ ಬಳಿಕ ತಮ್ಮಿಂದ ಯಾವುದೇ ತಪ್ಪು ಆಗಿಲ್ಲ, ರೈತರಿಗೆ ಅನ್ಯಾಯವಾಗಿಲ್ಲ ಎಂದು ತೇಪೆ ಹಚ್ಚಿ ಮೂಲೆಗೆ ಸರಿಸಿದರು. ನಾಮ್‌ಕೇ ವಾಸ್ತೆ ವರದಿಯ
ಶಿ-ರಸುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲು ವಿಜಯಭಾಸ್ಕರ್ ನೇತೃತ್ವದ ಸಮಿತಿ ರಚಿಸಿದರು ಎನ್ನುವ ಮೂಲಕ ತಮ್ಮ ಆರೋಪಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡಿದರು.

ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಯನ್ನು ಸದನದಲ್ಲಿ ಮಂಡಿಸದೆ ವರದಿ ಬಹಿರಂಗಪಡಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಎಷ್ಟೇ ಬೊಬ್ಬೆ ಹೊಡೆ ಯಬಹುದು. ಆದರೆ, ವರದಿಯ ಕೆಲವು ಅಂಶಗಳನ್ನು ಮುಖ್ಯಮಂತ್ರಿ ಬಹಿರಂಗಪಡಿಸಿದ್ದಾರೆ. ಅದೀಗ ಸಾರ್ವಜನಿಕ ಸ್ವತ್ತಾಗಿದೆ. ವರದಿಯನ್ನು ಸದನದಲ್ಲಿ ಮಂಡಿಸಲು ನಿರಾಕರಿಸಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಕಾಂಗ್ರೆಸ್ ಒತ್ತಾಯವನ್ನು ಮುಖ್ಯಮಂತ್ರಿ ತಳ್ಳಿಹಾಕಿದರೂ ಸದನದಲ್ಲಿ ಅವರು ಮಾಡಿರುವ ಆರೋಪ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿರುವುದಂತೂ ಸತ್ಯ.

ಅದಕ್ಕಿಂತ ಮುಖ್ಯವಾಗಿ ಈ ಕುರಿತು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವುದಾಗಿ ಮುಖ್ಯಮಂತ್ರಿ ಸದನದಲ್ಲಿ ಗುಡುಗಿದ್ದಾರೆ. ಇದಕ್ಕೆ ಪೂರಕವಾಗಿ ೨೦೧೪-೧೫ರಲ್ಲೇ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಯಾಗಿತ್ತು. ಲೋಕಾಯುಕ್ತರು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿ ವಿವರಣೆ
ಕೇಳಿದ್ದು, ಅದಕ್ಕೆ ಸಿದ್ದರಾಮಯ್ಯ ಪ್ರತಿ ಹೇಳಿಕೆ ನೀಡಿ ತಮ್ಮ ಮೇಲಿನ ಆರೋಪ ನಿರಾಕರಿಸಿದ್ದರು. ಅಷ್ಟೇ ಅಲ್ಲದೆ, ಯಾವುದೇ ಪೂರ್ವಾಗ್ರಹವಿಲ್ಲದೇ ತಮ್ಮ ಮುಂದೆ ಈ ಹೇಳಿಕೆ ಯನ್ನು ದಾಖಲಿಸುತ್ತಿದ್ದೇನೆ.

ಹಾಗಿದ್ದರೂ ಈ ವಿಷಯದಲ್ಲಿ ತನಿಖೆ ನಡೆಯಬೇಕೆಂದು ತಾವು ಅಪೇಕ್ಷೆ ಪಟ್ಟಲ್ಲಿ, ತಮ್ಮ ವಕೀಲರ ಮೂಲಕ ಖುದ್ದಾಗಿ ಹಾಜರಾಗಿ ಹೇಳಿಕೆ ನೀಡಲು ಬದ್ಧವಾಗಿರುತ್ತೇನೆ. ನ್ಯಾ.ಕೆಂಪಣ್ಣ ಆಯೋಗವು ತನಿಖೆ ನಡೆಸುತ್ತಿದ್ದು, ಯಾವುದೇ ಸಾರ್ವಜನಿಕರು ತಂದ ದೂರು, ದಾಖಲೆಯನ್ನು ಸಲ್ಲಿಸಲು ಮುಕ್ತ ಅವಕಾಶ ಇರುತ್ತದೆ. ಸಮರ್ಪಕ ನ್ಯಾಯದಾನದ ಆಶಯದಿಂದ ಆಯೋಗಕ್ಕೆ ದೂರನ್ನು ಸಲ್ಲಿಸುವಂತೆ ದೂರುದಾರರಿಗೆ ತಾವು ಸೂಚಿಸ
ಬೇಕೆಂದು ಕೋರಿದ್ದರು. ಇದಾಗಿ ಕೆಲವು ತಿಂಗಳ ಬಳಿಕ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿ ಲೋಕಾಯುಕ್ತದ ಶಕ್ತಿಯನ್ನು ಸಿದ್ದರಾಮಯ್ಯ ಸರಕಾರ ದುರ್ಬಲಗೊಳಿಸಿತ್ತು.

ಹೀಗಾಗಿ ತನಿಖೆ ಮುಂದುವರಿಯಲಿಲ್ಲ. ಇದೀಗ ಅದೇ ಲೋಕಾಯುಕ್ತದ ಮುಂದೆ ಪ್ರಕರಣದ ವಿಚಾರಣೆ ಮುಂದುವರಿಸಲು ಸರಕಾರ ಆಸಕ್ತಿ ತೋರಿದೆ. ಕಾಂಗ್ರೆಸ್‌ನ ೪೦ ಪರ್ಸೆಂಟ್ ಸರಕಾರ ಆರೋಪದಿಂದ ಇಕಟ್ಟಿಗೆ ಸಿಲುಕಿದ್ದ ಬಿಜೆಪಿಗೆ ಬೇಕಾಗಿದ್ದುದು ಕೂಡ ಇದವೇ ಆಗಿತ್ತು. ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿ ಏನೇ ಇರಲಿ, ಮುಂದೆ ಲೋಕಾಯುಕ್ತ ತನಿಖೆಯಲ್ಲಿ ಆಗುವ ಪರಿಣಾಮಗಳು ಏನೇ ಆಗಿರಲಿ, ಸದ್ಯ ೪೦ ಪರ್ಸೆಂಟ್ ಕಮಿಷನ್ ಆರೋಪದಿಂದ ಹೊರಬರಲು ಉತ್ತಮ ದಾರಿ ಸಿಕ್ಕಿದೆ. ಅದನ್ನು ಬಿಟ್ಟುಕೊಡುವ ಸಾಧ್ಯತೆಯೂ ಇಲ್ಲ. ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಬಿಜೆಪಿಯ ನಡೆ ಗಮನಿಸಿದಾಗ, ಅರ್ಕಾವತಿ ಹಗರಣಕ್ಕೆ ಸಂಬಂಧಿಸಿದಂತೆ ತಾವು ಪರಿಶುದ್ಧರು ಎಂದು ಹೇಳಿಕೊಳ್ಳಲು ಸಿದ್ದರಾಮಯ್ಯ ಪ್ರಸ್ತಾಪಿಸಿದ ನ್ಯಾಮೂರ್ತಿ ಕೆಂಪಣ್ಣ ಆಯೋಗದ ವರದಿ ಕಾಂಗ್ರೆಸ್ ಪಾಲಿಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಲಾಸ್ಟ್ ಸಿಪ್: ರಾಜಕೀಯ ಭ್ರಷ್ಟಾಚಾರಿಗಳ ಮಧ್ಯೆ ನಾನೊಬ್ಬನೇ ಸಾಚಾ ಎಂಬ ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಎಡವಟ್ಟು ಮಾಡುತ್ತದೆ.