Sunday, 15th December 2024

‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ..’

ವಿಶ್ಲೇಷಣೆ

ವಿನಾಯಕ ಮಠಪತಿ

ನಿರಂತರ ಹೋರಾಟ ಮನೋಭಾವದಿಂದ ಬದುಕುವುದು ಸಾಮಾನ್ಯ ಮಾತಲ್ಲ. ವೃತ್ತಿ ಬದುಕಿನುದ್ದಕ್ಕೂ ಅದೆಷ್ಟೋ ಯಾತನೆ ಗಳನ್ನು ಅನುಭವಿಸಿಯೂ ಮತ್ತೆ ಎದ್ದು ಬರುವುದಿದೆಯಲ್ಲ, ಅದು ಸಾಮಾನ್ಯರಿಗೆ ಸಾಧ್ಯವಿಲ್ಲ. ಯಡಿಯೂ ರಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಬೆಳವಣಿಗೆ ಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸುಳ್ಳಲ್ಲ.

ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ‘ಹರಿಶ್ಚಂದ್ರ ಮಹಾಕಾವ್ಯ’ದ ಈ ಸಾಲು ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎಂದರೆ ತಪ್ಪಾಗಲಾರದು. ತನ್ನ ಆಸ್ಥಾನ ತ್ಯಜಿಸಿ ಹೊರನಡೆದ ಸತ್ಯ ಹರಿಶ್ಚಂದ್ರನನ್ನು ಕುರಿತು ಅಯೋಧ್ಯೆ ನಾಡಿನ ಪ್ರಜೆಗಳು ಆಡಿದ ಮಾತಿದು. ಇಲ್ಲಿ ಸಾಮ್ರಾಜ್ಯದ ಪುಣ್ಯವು ಪುರುಷನ ರೂಪದಲ್ಲಿ ಹೋಗುತ್ತಿದೆ ಎಂದರ್ಥ ಧ್ವನಿಸುತ್ತದೆ. ಇದೇ ರೀತಿ, ಕರ್ನಾಟಕ ವಿಧಾನಸಭೆಯ ಅಧಿವೇಶನದ ವೇಳೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿದ ಕೊನೆಯ ಭಾಷಣದ ನಂತರ, ‘ಸುದೀರ್ಘ ರಾಜಕೀಯ ಇತಿಹಾಸದ ಅನುಭವ ಹೊತ್ತ ಈ ಮಹಾನ್ ನಾಯಕ ಪರದೆ ಹಿಂದೆ ಸರಿಯುತ್ತಿದ್ದು, ಇವರ ಹಿಂದೆಯೇ ಕೆಲವು ರಾಜಕೀಯ ಮೌಲ್ಯಗಳು ಸಾಗುತ್ತಿವೆ’ ಎಂದು ಭಾಸವಾಗುತ್ತದೆ.

ಹೌದು, ಸದ್ಯ ರಾಜ್ಯ ಚುನಾವಣಾ ರಾಜಕಾರಣದಿಂದ ದೂರ ಸರಿಯುತ್ತಿರುವ ರೈತನಾಯಕ, ಮಾಜಿ ಸಿಎಂ ಬಿ.ಎಸ್.  ಯಡಿಯೂರಪ್ಪ ಅವರ ಕುರಿತು ಮೇಲಿನ ವಾಕ್ಯ ಅತ್ಯಂತ ಸೂಕ್ತ ವಾಗಿ ಹೊಂದಿಕೊಳ್ಳುತ್ತದೆ ಎಂದರೆ ತಪ್ಪಾಗಲಾರದು. ಸುಮಾರು ಐದು ದಶಕಗಳ ಕಾಲ ತಮ್ಮ ಹೋರಾಟದ ಮೂಲಕ ಈ ನಾಡಿನ ರೈತರ ಸಂಕಷ್ಟಗಳಿಗೆ ಗಟ್ಟಿದನಿಯಾಗಿದ್ದ ಯಡಿಯೂರಪ್ಪ, ಮುಂಬರುವ ದಿನಗಳಲ್ಲಿ ಚುನಾವಣಾ ರಾಜಕಾರಣದಿಂದ ದೂರ ಸರಿಯುತ್ತಿರುವುದು, ಇಡೀ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಒಂದು ನೋವಿನ ಗಳಿಗೆಯೇ ಸರಿ.

ನಿರಂತರ ಹೋರಾಟ ಮನೋಭಾವದಿಂದ ಬದುಕುವುದು ಒಬ್ಬ ವ್ಯಕ್ತಿಗೆ ಸಾಮಾನ್ಯ ಮಾತಲ್ಲ. ವೃತ್ತಿ ಬದುಕಿನುದ್ದಕ್ಕೂ ಅಧಿಕಾರದ ಜತೆಜತೆಗೆ ಅದೆಷ್ಟೋ ಸಂಕಷ್ಟ, ನೋವು, ಯಾತನೆಗಳನ್ನು ಅನುಭವಿಸಿಯೂ ಮತ್ತೆಮತ್ತೆ ಎದ್ದು ಬರುವುದಿದೆಯಲ್ಲ, ಅದು ಸಾಮಾನ್ಯರಿಗೆ ಸಾಧ್ಯವಿಲ್ಲ. ಯಡಿಯೂರಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಸುಳ್ಳಲ್ಲ. ಈ ಎಲ್ಲ ಕಾರಣಗಳಿಂದಲೇ ಇವರು ಈಗಲೂ
ಜನಮಾನಸದಿಂದ ದೂರ ಸರಿದಿಲ್ಲ.

ತಾಳ್ಮೆಯಿದ್ದರೆ ಯಶಸ್ಸು ಸಾಧ್ಯ: ಹೌದು, ಇಂದಿನ ಯುವಜನರು ಯಡಿಯೂರಪ್ಪನವರಲ್ಲಿರುವ ತಾಳ್ಮೆ ಎಂಬ ಅಂಶವನ್ನು ತಮ್ಮ ಬದುಕಿನಲ್ಲೂ ರೂಢಿಸಿಕೊಂಡರೆ ಸಾಕು, ತಮ್ಮ ವೃತ್ತಿಯಲ್ಲಿ ಅತ್ಯಂತ ಎತ್ತರಕ್ಕೆ ಏರಬಹುದು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರು ಸಚಿವ ಸ್ಥಾನದಂಥ ಹುದ್ದೆ ಬಯಸುವುದು, ಇಲ್ಲವೇ ಮಹತ್ವದ ಸ್ಥಾನಮಾನಕ್ಕೆ ಹಾತೊರೆ ಯುವುದು ಇಂದು ಸಾಮಾನ್ಯವಾಗಿದೆ. ಹುದ್ದೆ ಬಯಸುವುದು ತಪ್ಪಲ್ಲ, ಅದಕ್ಕೆ ತಕ್ಕನಾಗಿ ತಮ್ಮ ಕಾರ್ಯವೈಖರಿ ಬದಲಾಯಿ ಸಿಕೊಳ್ಳಬೇಕು.

ಪಕ್ವತೆ ಇದ್ದರೆ ಎಲ್ಲವೂ ತಾನಾಗಿಯೇ ಬರುತ್ತದೆ ಎಂಬುದಕ್ಕೆ ಯಡಿಯೂರಪ್ಪನವರು ಸ್ಪಷ್ಟ ನಿದರ್ಶನ. ಜನಸಂಘದ ನಂತರ
ಹುಟ್ಟಿಕೊಂಡ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಟ್ಟುವುದು ಅಷ್ಟೊಂದು ಸಣ್ಣ ಕೆಲಸವಾಗಿರಲಿಲ್ಲ. ಆಗಿನಿಂದಲೇ ಯಡಿ
ಯೂರಪ್ಪ ಹಳ್ಳಿ ಹಳ್ಳಿಗೂ ಭೇಟಿನೀಡಿ ಜನರನ್ನು ಸಂಘಟಿಸಿದರು. ಆ ಸಂದರ್ಭದಲ್ಲಿ ರಾಜಕೀಯ ಪಕ್ಷ ಎಂದರೆ ಕೇವಲ
ಕಾಂಗ್ರೆಸ್ ಎಂಬ ಮಾತಿತ್ತು. ಅವೆಲ್ಲವನ್ನೂ ಮೆಟ್ಟಿ ನಿಂತು, ಕ್ಷಣಿಕ ಅಧಿಕಾರದ ಆಸೆಗೆ ವಾಲಿಕೊಳ್ಳದೆ ಮುನ್ನಡೆದ ಯಡಿಯೂ ರಪ್ಪ ನಂತರ ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗೂ ಬೆಳೆದದ್ದು ಇತಿಹಾಸ. ತಾಳ್ಮೆ ಒಂದಿದ್ದರೆ ಬದುಕಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಯಡಿಯೂರಪ್ಪ ಒಂದು ನಿದರ್ಶನ.

ಉತ್ತರ ಕರ್ನಾಟಕವೆಂದರೆ ಅಕ್ಕರೆ: ಸ್ವಾತಂತ್ರ್ಯಾನಂತರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಅನೇಕ ಸಮಸ್ಯೆಗಳಿಂದ ಬಳಲಿದ್ದು ಸುಳ್ಳಲ್ಲ. ಈ ಸಂದರ್ಭದಲ್ಲಿ ಅನೇಕ ರಾಜಕೀಯ ನಾಯಕರು ತಮ್ಮ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ರೈತರ ಸಮಸ್ಯೆಗಳಿಗೆ ಯಡಿಯೂರಪ್ಪ ಯಾವಾಗಲೂ ಧ್ವನಿಯಾಗುತ್ತಿದ್ದರು. ಸ್ಥಳೀಯ ಮಟ್ಟದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ
ಸಮಸ್ಯೆಗಳನ್ನು ವಿಧಾನಸೌಧದವರೆಗೂ ತಲುಪಿಸುವ ಕೆಲಸ ಮಾಡುತ್ತಿದ್ದರು.

ಈ ಭಾಗದ ರೈತರು ಹಾಗೂ ನೇಕಾರರ ಸಮಸ್ಯೆಗಳಿಗೆ ಯಡಿಯೂರಪ್ಪ ಧ್ವನಿಯಾಗಿದ್ದರು. ತಾವು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಜತೆಗೆ ರೈತ ಮುಖಂಡರ ಜತೆಗೂಡಿ ಅವರು ಹೋರಾಟ ರೂಪಿಸುತ್ತಿದ್ದುದನ್ನು ಈಗಲೂ ಜನ ಮರೆತಿಲ್ಲ. ಜನಸಂಘದ ನಂತರ ದಲ್ಲಿ ೧೯೮೦ರಲ್ಲಿ ಬಿಜೆಪಿ ಪಕ್ಷ ರಚನೆಯಾದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿ ಯೊಂದು ಹಳ್ಳಿಯುದ್ದಕ್ಕೂ ಸಂಚರಿಸಿ ರೈತರನ್ನು ಒಂದುಗೂಡಿಸಿದ ಪರಿಣಾಮವೇ ನಂತರ ಅನೇಕ ಹೋರಾಟಗಳು, ಚಳವಳಿ ಗಳು ಕಂಡುಬಂದವು.

ಈ ಕಾರಣದಿಂದಲೇ ಉತ್ತರ ಕರ್ನಾಟಕದ ಜನರು ಯಡಿಯೂರಪ್ಪನವರನ್ನು ಅತ್ಯಂತ ಪ್ರೀತಿಯಿಂದ ನಂಬಿ ಗೌರವಿಸಿದ್ದು, ಜತೆಗೆ ಅವರ ಅಧಿಕಾರದ ಕನಸು ನನಸಾಗಿಸಲೂ ಅವರು ಆಶೀರ್ವಾದ ಮಾಡಿದ್ದು.

ಶಿಸ್ತು ಮತ್ತು ಸಮಯಪ್ರಜ್ಞೆ: ಒಬ್ಬ ಪತ್ರಕರ್ತನಾಗಿ ಹೇಳುವುದಾದರೆ, ಯಡಿಯೂರಪ್ಪ ಯಾವತ್ತೂ ಸಮಯಕ್ಕೆ ಹೆಚ್ಚು ಮಹತ್ವ ನೀಡಿದವರು. ತಾವು ಕರೆಯುತ್ತಿದ್ದ ಸುದ್ದಿಗೋಷ್ಠಿಗಳಲ್ಲಿ ಸಮಯಕ್ಕೆ ಹೆಚ್ಚು ಬೆಲೆ ನೀಡುವ ಸ್ವಭಾವ ಅವರದ್ದು. ಹೇಳಬೇಕಾದ ವಿಷಯವನ್ನು ಯಾವುದೇ ಗೊಂದಲಗಳಿಲ್ಲದೆ ಪೂರ್ವಭಾವಿಯಾಗಿ ತಯಾರಿಸಿಟ್ಟುಕೊಂಡ ಮಾಹಿತಿಗಳನ್ನು ತಿಳಿಸುವ ಅವರ ಕಲೆ ಅದ್ಭುತ. ಜತೆಗೆ, ತಮ್ಮ ಆರೋಗ್ಯ ಮತ್ತು ಆಹಾರದ ಕಡೆಗೂ ಯಡಿಯೂರಪ್ಪ ಯಾವತ್ತೂ ಗಮನ ಹರಿಸುತ್ತಾರೆ. ಇದೇ ಕಾರಣದಿಂದಾಗಿಯೇ ೮೦ರ ಈ ಇಳಿವಯಸ್ಸಿನಲ್ಲೂ ನಿರಂತರ ಸುತ್ತಾಟ ನಡೆಸಲು ಅವರಿಗೆ ಸಾಧ್ಯವಾಗಿದೆ.
ಮಿತವಾದ ಹಾಗೂ ಪುಷ್ಟಿದಾಯಕವಾದ ಆಹಾರ ಸೇವಿಸುವ ಮೂಲಕ ಈಗಲೂ ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿರುವುದು ಯಡಿಯೂರಪ್ಪನವರ ವೈಶಿಷ್ಟ್ಯ.

ಚಪಾತಿ ತಿಂದು ಪಕ್ಷ ಸಂಘಟನೆ: ಅದು ೧೯೮೦ರ ಕಾಲಘಟ್ಟ. ಬಿಜೆಪಿ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತುನೀಡಿದ್ದ ಯಡಿಯೂರಪ್ಪ ಎಲ್ಲೆಡೆ ಸುತ್ತಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೆಳಗಾವಿಗೆ ಬಂದಿದ್ದ ಅವರು ಅಂದಿನ
ಜಿಲ್ಲಾ ಬಿಜೆಪಿ ಮುಖಂಡ ಮತ್ತು ವಕೀಲ ಅರ್ಜುನ್ ಹಂಪಿಹೊಳಿ ಅವರು ನಗರದ ಬಸ್ ನಿಲ್ದಾಣದಲ್ಲಿ ಕೊಟ್ಟ ಚಪಾತಿ ತಿಂದು ಪ್ರಯಾಣ ಬೆಳೆಸಿದ್ದರು. ಕೇವಲ ಪಕ್ಷ ಸಂಘಟನೆಯೊಂದೇ ತಮ್ಮ ಮೂಲಧ್ಯೇಯ ಎಂಬುದನ್ನು ಭಾವಿಸಿದ್ದ ಅವರು, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ- ಧಾರವಾಡ, ಹಾವೇರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಿಜೆಪಿಯು ಬಲಿಷ್ಠವಾಗಲು ಶ್ರಮಿಸಿದ್ದರು.

ಲಿಂಗಾಯತರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ: ಪ್ರಮುಖವಾಗಿ, ಅಖಂಡ ಲಿಂಗಾಯತ ಸಮುದಾಯವು ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರನ್ನು ಬೆಂಬಲಿಸಿತು. ಅವರೇ ನಮ್ಮ ನಾಯಕನೆಂದು ಒಪ್ಪಿಕೊಂಡ ಸಮುದಾಯ, ಬಹುಕಾಲದವರೆಗೂ ಅವರನ್ನು ಬೆಂಬಲಿಸಿತು. ನಂತರ ಜನತಾ ಪರಿವಾರದ ರಾಮಕೃಷ್ಣ ಹೆಗಡೆ ಅವರ ಜತೆಗಿದ್ದ ಲಿಂಗಾಯತ ಸಮುದಾಯಕ್ಕೆ ಹೊಸ ಭರವಸೆ ಮೂಡಿಸಿದ್ದ ನಾಯಕ ಯಡಿಯೂರಪ್ಪನವರು.

ಲಿಂಗಾಯತರು ಜಾತ್ಯತೀತವಾಗಿ ರಾಮಕೃಷ್ಣ ಹೆಗಡೆ ಅವರನ್ನು ಒಪ್ಪಿಕೊಂಡಿದ್ದರು. ಅವರ ರಾಜಕೀಯ ಅವಸಾನದ ನಂತರದಲ್ಲಿ ಹುಟ್ಟು ಹೋರಾಟಗಾರ ಯಡಿಯೂರಪ್ಪ ಅವರಿಗೆ ಪೂರ್ಣಪ್ರಮಾಣದಲ್ಲಿ ನಾಯಕತ್ವದ ಪಟ್ಟ ನೀಡಿದರು. ಇದಾದ ನಂತರ ೨೦೦೮ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಗಾದಿಗೆ ಏರಿದ್ದು. ನಂತರ ಕರ್ನಾಟಕದ ಎಲ್ಲ ಸಮುದಾಯಗಳ ಮಠಾಽಶರ ಆಪ್ತತೆಯನ್ನು ಯಡಿಯೂರಪ್ಪ ಗಳಿಸಿಕೊಂಡರು. ಲಿಂಗಾಯತ ಸಮುದಾಯ ಮಾತ್ರವಲ್ಲದೆ ಮಿಕ್ಕ ಅನೇಕ ಸಮುದಾಯಗಳ ಮಠಾಧೀಶರ ಜತೆಗಿನ ಅವರ ಬಾಂಧವ್ಯ, ಅವರ ಕಷ್ಟಕಾಲದಲ್ಲೂ ಬೆಂಬಲವಾಗಿ ನಿಂತಿತ್ತು. ಈ ಕಾರಣಗಳಿಂದಲೇ ಯಡಿಯೂರಪ್ಪನವರು ರಾಜಕೀಯ ಜೀವನದಲ್ಲಿ ಉತ್ತುಂಗವನ್ನು ಕಂಡುಕೊಳ್ಳಲು ಸಾಧ್ಯವಾಯಿತು.

ಕೊನೆವರೆಗೂ ಹೋರಾಟ: ಪ್ರಸ್ತುತ, ವಿಧಾನಸಭೆಯ ತಮ್ಮ ಕೊನೆಯ ಅಧಿವೇಶನದಲ್ಲಿ ಯಡಿಯೂರಪ್ಪನವರು ಮಾತನಾಡುತ್ತ, ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಟ ನಿರಂತರ ಎಂಬ ಮಾತನ್ನು ಹೇಳುವ ಮೂಲಕ ಗಟ್ಟಿತನ ವನ್ನು ಪ್ರದರ್ಶಿಸಿದರು. ಸುದೀರ್ಘ ರಾಜಕಾರಣದಲ್ಲಿ ಯಾವತ್ತೂ ದಣಿವು ಮಾಡಿಕೊಳ್ಳದ ಅಪರೂಪದ ರಾಜಕಾರಣಿ ಅವರು ಎಂದರೆ ತಪ್ಪಾಗಲಾರದು. ಈ ಎಲ್ಲ ಕಾರಣಗಳಿಂದಲೇ ಯಡಿಯೂರಪ್ಪ ಅವರನ್ನು ಜನ ಇಷ್ಟಪಡುತ್ತಾರೆ. ಕೇವಲ ಒಂದೆರಡು ಹೋರಾಟದಲ್ಲಿಯೇ ನೆನಪಿಗೆ ಸರಿಯುವವರ ಮಧ್ಯೆ ಯಡಿಯೂರಪ್ಪ ಯಾವತ್ತೂ ಭಿನ್ನವಾಗಿ ಕಾಣಿಸುತ್ತಾರೆ.

ಇಷ್ಟೊಂದು ಸುದೀರ್ಘವಾಗಿ ರಾಜಕೀಯ ಬದುಕನ್ನು ಸವೆಸಿದ್ದರೂ ದಣಿವು ಎಂಬುದು ಯಡಿಯೂರಪ್ಪನವರನ್ನು ಯಾವತ್ತೂ ಆವರಿಸಿಲ್ಲ. ಈಗಲೂ ಯುವಕರಂತೆ ಸುತ್ತಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ನಾಯಕ ಅವರು. ಇದೇ ಕಾರಣಕ್ಕೆ ಹೇಳುವುದು- ‘ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಅಂತ.

Read E-Paper click here