Thursday, 12th December 2024

ಅಕ್ರಮ ಮದ್ಯ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ ಎನ್.ಎಮ್.ನಾಗರಾಜ್

ಚಿಕ್ಕಬಳ್ಳಾಪುರ : ಯಾವುದೇ ವ್ಯಕ್ತಿಗಳು ಅಕ್ರಮ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ ಕೂಡಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್ ಸೂಚಿಸಿದರು.

ಅವರು ಬುಧವಾರ ಜಿಲ್ಲಾಡಳಿತ ಹಾಗೂ ಬಾಗೇಪಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೆಮರಿ ಹೋಬಳಿಯ “ಪೆದ್ದನಗರ್ಲು” ಗ್ರಾಮದಲ್ಲಿ “ಜಿಲ್ಲಾಧಿ ಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ ಒಂದು  ಸಾಮಾಜಿಕ  ಪಿಡುಗಾಗಿದ್ದು,  ಕುಡಿತದಿಂದ  ತಮ್ಮ ಆರೋಗ್ಯ ಹಾಗೂ ಮಕ್ಕಳ ಮೇಲೆ ಹೆಚ್ಚು  ಕೆಟ್ಟ  ಪ್ರಭಾವ ಬೀರುತ್ತದೆ. ಅಲ್ಲದೇ ಅಕ್ರಮ ಮದ್ಯಪಾನ ಮಾರಾಟ ಮಾಡುವುದು ಅಪರಾಧ ಈ ನಿಟ್ಟಿನಲ್ಲಿ ಮದ್ಯಪಾನ ಸೇವನೆಗೆ ದಾಸರಾಗದೇ ಉತ್ತಮ ಆರೋಗ್ಯಕ್ಕೆ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮಗಳು ಅಭಿವೃದ್ಧಿಯಾಗಲು ಸ್ವಚ್ಛತೆ ಅತ್ಯಗತ್ಯವಾಗಿದ್ದು,. ಮುಖ್ಯವಾಗಿ  ಪ್ರತಿಯೊಬ್ಬರೂ ತಮ್ಮ  ವಯಕ್ತಿಕ  ಸ್ವಚ್ಛತೆಯ ಜೊತೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯನ್ನು  ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

*೧೫೧ನಿವೇಶನ ರಹಿತರಿಗಾಗಿ  ಜಮೀನು ಮಂಜೂರು*

ಪೆದ್ದನಗರ್ಲು ಗ್ರಾಮದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ನೀಡಲು ೩ಎಕರೆ ಜಮೀನು ಈಗಾಗಲೇ ಮಂಜೂರು ಮಾಡಿಲಾಗಿದೆ. ಈ ಗ್ರಾಮ ದಲ್ಲಿ ೧೫೧ ನಿವೇಶನ ರಹಿತ ಫಲಾನುಭವಿಗಳನ್ನು ಗುರ್ತಿಸಲಾಗಿದ್ದು, ಅವರೆಲ್ಲ ರಿಗೂ ನಿವೇಶನವನ್ನು ಹಂಚಿಕೆ ಮಾಡಲು  ಅಗತ್ಯ  ಕ್ರಮ  ಕೈಗೊಳ್ಳಲು  ತಾಲೂಕು  ಪಂಚಾಯತ್  ಕಾರ್ಯ ನಿರ್ವಾಹಕಾಧಿಕಾರಿಗೆ ಸೂಚನೆ  ನೀಡಿದರು.

ನರೇಗಾ  ಯೋಜನೆಯನ್ನು  ಸದ್ಬಳಕೆ  ಮಾಡಿಕೊಂಡು  ಜಲಮೂಲಗಳನ್ನು  ರಕ್ಷಣೆ  ಮಾಡಬೇಕು.ಮಣ್ಣಿನ  ರಕ್ಷಣೆ  ಜೊತೆಗೆ  ನೀರನ್ನು  ಮಿತಬಳಕೆ ಮಾಡಿಕೊಂಡು  ಕೃಷಿ  ಮಾಡಬೇಕು.ಅಂತರ್ಜಲ ಇದೆ  ಎಂದು  ಮನಸೋ ಇಚ್ಛೆ   ನೀರು ಹೊರ ತಗೆಯುದು ಅಪಾಯಕಾರಿ ಬೆಳವಣಿಗೆ.ಪರಿಸರವು ನಮ್ಮ ಅಗತ್ಯ  ಬೇಡಿಕೆಗಳನ್ನು  ಪೂರೈಸುತ್ತದೆ  ನಮ್ಮ  ದುರಾಸೆಗಳನ್ನಲ್ಲ ಎಂದು  ಮಾರ್ಮಿಕವಾಗಿ  ತಿಳಿಸಿಕೊಟ್ಟು,    ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆ ಗಳಲ್ಲಿ ಸರ್ಕಾರವು ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ. ಸಾರ್ವಜನಿಕರು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅಂಗವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಂದ ಖುದ್ದು ಅಹವಾಲುಗಳನ್ನು ಸ್ವೀಕರಿಸಿ ರೈತರಿಗೆ ಭೂಮಿಯ ಹಕ್ಕು ಮತ್ತು ಮಾಹಿತಿಗೆ ಪಹಣಿ ಅತ್ಯಗತ್ಯವಾಗಿದೆ. ಗ್ರಾಮವಾಸ್ತವ್ಯ ಕಾರ್ಯಕ್ರಮದ ಮೂಲಕ ಕಂದಾಯ ಇಲಾಖೆಯ ಅಧಿಕಾರಿಗಳು ಖುದ್ದು ಮನೆ ಮನೆಗೆ ಭೇಟಿ ನೀಡಿ ರೈತರ ಪಹಣಿಗಳನ್ನು ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ರೈತರು ಅವುಗಳನ್ನು ಸರಿಪಡಿಸಿಕೊಳ್ಳಲು ಇದೊಂದು ಸದಾವಕಾಶವಾಗಿದ್ದು ಪ್ರತಿಯೊಬ್ಬರು ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಂದಾಯ ಇಲಾಖೆಯಿಂದ ದುರ್ಬಲರಿಗೆ, ವಯೋ ವೃದ್ಧರಿಗೆ, ಅಂಗವಿಕರಲರಿಗೆ, ವಸತಿ ರಹಿತರಿಗೆ ವಸತಿ, ನಿವೇಶನ, ಸೇರಿದಂತೆ ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯುವಂತಹ ಸವಲತ್ತುಗಳನ್ನು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಯಶಸ್ವಿ ಯಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಈ ಕುರಿತು ಎಲ್ಲಾ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಳಿಗೆಗಳನ್ನು ಸ್ಥಾಪಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

*ಪ್ರಾತ್ಯಕ್ಷಿಕೆ ನೀಡಿದ  ಜಿಲ್ಲಾಧಿಕಾರಿ*
ಚುನಾವಣೆ  ಪ್ರಕ್ರಿಯೆಗಳನ್ನು  ಹೆಚ್ಚು  ಹೆಚ್ಚು   ಜನಸ್ನೇಹಿಯಾಗಿಸಲು    ರಾಜ್ಯ  ಚುನಾವಣಾ  ಆಯೋಗವು  ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ   ಸಾರ್ವಜನಿಕರಲ್ಲಿ  ಅರಿವು  ಮೂಡಿಸಲು  ನಿರ್ದೇಶನ  ನೀಡಿರುತ್ತದೆ.ಅದರಂತೆ  ಜಿಲ್ಲಾಡಳಿತ  ಜಿಲ್ಲಾದ್ಯಂತ ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಮತಯಂತ್ರಗಳ  ಕಾರ್ಯ  ನಿರ್ವಹಣೆಯ ಬಗ್ಗೆ  ಯಾವುದೇ  ರೀತಿಯ  ಅನುಮಾನ  ಬೇಡ.ಶೇ ೧೦೦ ರಷ್ಟು    ಸಮರ್ಪಕವಾಗಿ ಕೆಲಸ  ಮಾಡುತ್ತವೆ .ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿ ಕೊಡಬೇಡಿ ಎಂದು  ಪ್ರಾತ್ಯಕ್ಷಿಕೆ  ಮೂಲಕ  ಸಾರ್ವಜನಿಕರಿಗೆ  ಮತಯಂತ್ರಗಳ ಬಳಕೆ  ಕುರಿತು  ಸವಿವರವಾಗಿ   ಪೆದ್ದನ ಗರ್ಲು ಗ್ರಾಮಸ್ಥರಲ್ಲಿ  ಅರಿವು  ಮೂಡಿಸಿದರು ಜೊತೆಗೆ  ಚುನಾವಣೆಯ ಪ್ರಕ್ರಿಯೆಗಳಲ್ಲಿ  ಎಲ್ಲರೂ  ಪಾಲ್ಗೊಂಡು ಮುಂದಿನ ಚುನಾವಣೆಗಳಲ್ಲಿ  ಶೇ೧೦೦ರಷ್ಟು ಮತದಾನ ಮಾಡಲು ಮನವಿ  ಮಾಡಿದರು.

ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದ ಬೀದಿಗಳಲ್ಲಿ ರಸ್ತೆ, ಚರಂಡಿ, ಮೂಲಸೌಕರ್ಯಗಳ ಸ್ಥಿತಿ ಗತಿಗಳ ಪರಿಶೀಲನೆ ನಡೆಸಿದರು. ವಿವಿಧ ಯೋಜನೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಪಿಂಚಣಿ, ಪಹಣಿ ಸೇರಿದಂತೆ  ವಿವಿಧ  ಮಂಜೂರಾತಿ  ಪತ್ರಗಳನ್ನು ವಿತರಿಸಿದರು.

ವಿವಿಧ ಇಲಾಖೆಗಳಿಂದ ತೆರಯಲ್ಪಟ್ಟ ಕೃಷಿ, ತೋಟಗಾರಿಕೆ, ರೇಷ್ಮೆ ವಸ್ತುಪ್ರದರ್ಶನ ಮಳಿಗೆಗಳು, ಆರೋಗ್ಯ ಶಿಬಿರ ಸೇರಿದಂತೆ ಇತರೆ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಗ್ರಾಮಸ್ಥರಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮಕ್ಕೂ  ಮುನ್ನ  ಸ್ಥಳೀಯರು  ಜಿಲ್ಲಾಧಿಕಾರಿಗಳಿಗೆ  ಆರತಿ  ಮೂಲಕ   ಭವ್ಯ  ಸ್ವಾಗತ  ನೀಡಿದರು. ಪೊಲನಾಯಕನ ಹಳ್ಳಿ  ಸರ್ಕಾರಿ  ಶಾಲೆಯ ಮಕ್ಕಳು   ನೀಡಿದ ನೃತ್ಯ ಮತ್ತು  ಹಾಸ್ಯ  ನಾಟಕ ಪ್ರದರ್ಶನಕ್ಕೆ  ಮನಸೋತ ಜಿಲ್ಲಾಧಿಕಾರಿಗಳು  ಮಕ್ಕಳಿಗೆ  ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಧಿಕಾರಿ  ಸಂತೋಷ್  ಕುಮಾರ್,  ಬಾಗೇಪಲ್ಲಿ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಆನಂದ್ , ಗ್ರೇಡ್  ೨ ತಹಶೀಲ್ದಾರ್   ಸುಬ್ರಮಣ್ಯ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರೂಪ,  ಸ್ಥಳೀಯ ಗ್ರಾಮಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಆಶಾಕಾರ್ಯಕರ್ತೆಯರು ಹಾಗೂ  ಗ್ರಾಮಸ್ಥರು  ಪಾಲ್ಗೊಂಡಿದ್ದರು.