ಚಿಕ್ಕನಾಯಕನಹಳ್ಳಿ : ನಿರ್ಜೀವ ಕೆರೆಗಳನ್ನು ಮುಚ್ಚಿ ಮನೆಗಳನ್ನು ಕಟ್ಟಲು ಈಗಿನ ವಸತಿ ಸಚಿವರು ಬಿಲ್ಡರ್ಗಳೊಂದಿಗೆ ಶಾಮೀಲಾಗಿ ಹುನ್ನಾರ ನಡೆಸಿದ್ದಾರೆಂದು ರೈತಸಂಘದ ಅಧ್ಯಕ್ಷ ರಾಮನಹಳ್ಳಿ ಕುಮಾರಯ್ಯ ಆರೋಪಿಸಿದರು.
ಕ್ವಿಂಟಾಲ್ ಕೊಬ್ಬರಿಗೆ ೨೦ ಸಾವಿರ ರೂ ಬೆಂಬಲ ಬೆಲೆ ನಿಗದಿ ಹಾಗು ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ತಾಲ್ಲೂಕು ಕಚೇರಿ ಮುಂಭಾಗ ಸೋಮ ವಾರ ನಡೆದ ಪ್ರತಿಭಟನೆ ಧರಣಿಯಲ್ಲಿ ಮಾತನಾಡಿದರು.
ವಸತಿ ಸಚಿವ ವಿ.ಸೋಮಣ್ಣನವರು ರಾಜ್ಯದಲ್ಲಿರುವ ಸುಮಾರು ೪೯೩ ಕೆರೆಗಳನ್ನು ನೀರು ಇಲ್ಲ ಎಂದ ಮಾತ್ರಕ್ಕೆ ಮುಚ್ಚಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದಾರೆ. ಕೆರೆ ಮುಚ್ಚಿಸುವ ಬದಲು ಕೆರೆಯ ಒತ್ತುವರಿಯನ್ನು ಖುಲ್ಲಾ ಮಾಡಿ ಉಳಿಸಲು ಪ್ರಯತ್ನ ಪಡಬೇಕು. ಕೆರೆಗಳನ್ನು ಪುನಶ್ಚೇತನ ಗೊಳಿಸಲು ಸಾಧ್ಯವಿದೆ ಅದರ ಬಗ್ಗೆ ಸೂಕ್ಷö್ಮ ಕಣ್ಣುಗಳು ಮಾನ್ಯ ಸಚಿವರಿಗೆ ಇರಬೇಕೆಂದು ಎಚ್ಚರಿಸಿದರು. ರೈತರು ತಮ್ಮ ಮನೆಗಳಲ್ಲಿ ಅಡುಗೆಗೆ ಕೊಬ್ಬರಿ ಎಣ್ಣೆಯ ಬಳಕೆ ಪ್ರಾರಂಭಿಸಬೇಕು. ಸರಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ೨೦೦ ಮಿ.ಲೀ. ಕೊಬ್ಬರಿ ಎಣ್ಣೆಯನ್ನು ಹಂಚಬೇಕು. ರೈತರ ಸಾಲ ಮನ್ನಾದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಉಡಾಫೆ ಯಾಗಿ ಮಾತನಾಡಿದ್ದು, ರೈತಪರ ಯೋಜನೆಗಳನ್ನು ಸರಕಾರ ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಅದನ್ನು ನಿಗದಿತ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು, ಇಲ್ಲದಿದ್ದಲ್ಲಿ ನ್ಯಾಯಾಲಯದ ಮೋರೆ ಹೋಗ ಲಾಗುವುದೆಂದು ಎಚ್ಚರಿಸಿದರು.
*
ವಕೀಲ ಎಂ.ಬಿ.ನಾಗರಾಜ್ ಮಾತನಾಡಿ ಬೆಲೆ ಕುಸಿತ ಕಂಡಾಗ ತೆಂಗು ಬೆಳೆಯಲು ತಗುಲುವ ಖರ್ಚನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೇ ಪರಿಶೀಲಿಸಿ ವರದಿ ತಯಾರಿಸಲಿ ಅದರ ಮೇಲೆ ಸರಕಾರ ಬೆಲೆ ನಿಗದಿ ಮಾಡಬೇಕು. ತಾಲ್ಲೂಕಿನಲ್ಲಿ ಶೇ ೯೦ ರಷ್ಟು ರೈತರಿದ್ದರೂ ಪ್ರತಿಭಟನೆಗೆ ಕೇವಲ ಬೆರಳಣಿಕೆಯಷ್ಟು ಜನ ಆಗಮಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ತೆಂಗು ಬೆಳೆಗಾರರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸರಕಾರ ರೈತರಿಗೆ ಶೂನ್ಯ ಕೊಡುಗೆ ನೀಡಿದ್ದು ಮುಂದಿನ ದಿನಗಳಲ್ಲಿ ರೈತರೇ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಪುರದಯ್ಯ, ಕಾರ್ಯದರ್ಶಿ ಶೇಖರನಾಯ್ಕ, ಪ್ರಗತಿಪರ ರೈತ ತರಬೇನಹಳ್ಳಿ ಷಡಕ್ಷರಿ, ಗಂಗಾಧರಸ್ವಾಮಿ, ನವಿಲೆ ಸಿದ್ದೇಗೌಡ, ಜಯರಾಮಣ್ಣ, ಹರ್ಷ, ಪ್ರತಿಭಟನೆಯಲ್ಲಿ ಹಾಜರಿದ್ದರು.