Thursday, 12th December 2024

ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ: ಡಾ.ಚಂದ್ರಶೇಖರ್‌

ವೈದ್ಯ ವೈವಿಧ್ಯ

drhsmohan@gmail.com

ಮನೋ ರೋಗಿಗಳೆಲ್ಲ ಹುಚ್ಚರಲ್ಲ – ಮಾನಸಿಕ ಆರೋಗ್ಯ ವಿಚಾರಗಳು ಜನಸಾಮಾನ್ಯರಿಗೆ ತಲುಪಬೇಕು. ಅವರಲ್ಲಿ ಈ ವಿಚಾರಗಳ ಬಗ್ಗೆ ವೈಜ್ಞಾನಿಕ ಹಾಗೂ ಆರೋಗ್ಯಕರ ಆಚರಣೆ ಬೆಳೆಯಬೇಕು ಎಂಬ ಸದುದ್ದೇಶದಿಂದ ಮನೋವಿಜ್ಞಾನವನ್ನು ಸುಲಭ ರೀತಿಯಲ್ಲಿ ಜನರಿಗೆ ತಲುಪಿಸುವಲ್ಲಿ ಡಾ.ಚಂದ್ರಶೇಖರರ ಕೊಡುಗೆ, ಪ್ರಯತ್ನ ಅಪಾರ. ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (NIMHANS) ಪ್ರಾಧ್ಯಾಪಕರಾಗಿರುವ ಇವರು 1972ರಿಂದ ಲೇಖನ ವ್ಯವಸಾಯ ಆರಂಭಿಸಿ ಅವಿರತವಾಗಿ ಬರೆಯುತ್ತಿರುವವರು.

ಇದುವರೆಗೆ 302 ಲೇಖನಗಳು ಪ್ರಕಟವಾಗಿವೆ. 1980 ರಲ್ಲಿ ಮೊದಲ ಪುಸ್ತಕ ಮಗು -ಮನಸ್ಸು ಮತ್ತು ಆರೋಗ್ಯ ಪ್ರಕಟವಾದಂದಿ ನಿಂದ ಇದುವರೆಗೆ ಮಾನಸಿಕ ಆರೋಗ್ಯದ ಬಗ್ಗೆ ೩೮ ಕನ್ನಡ ಪುಸ್ತಕಗಳು, ೬ ಇಂಗ್ಲಿಷ್ ಪುಸ್ತಕ ಗಳು, ಎರಡು ತೆಲುಗು ಪುಸ್ತಕಗಳು (ಕನ್ನಡದಿಂದ ಅನುವಾದಿತ) ಮೂರು ಮಾನಸಿಕ ಆರೋಗ್ಯ ಕೈಪಿಡಿಗಳು – ಹೀಗೆ ೪೯ ಪುಸ್ತಕ ಗಳನ್ನು ಬರೆದಿದ್ದಾರೆ.

1980 ರಲ್ಲಿ ಯುಗಾದಿ ಕಾದಂಬರಿ ವಿಶೇಷ ಬಹುಮಾನ ಮನೆ ಮನಸ್ಸು ಕಾದಂಬರಿಗೆ ೮೨ ರಲ್ಲಿ ಬುದ್ಧಿಮಾಂದ್ಯತೆ ಮತ್ತು ಅದರ ಚಿಕಿತ್ಸೆ ಪುಸ್ತಕಕ್ಕೆ  ಅತ್ಯುತ್ತಮ ಮಾನಸಿಕ ಆರೋಗ್ಯ ಶಿಕ್ಷಣ ಪುಸ್ತಕ ಎಂದು ಡಾ.ಜಯರಾಮ್ ಪ್ರಶಸ್ತಿ ೧೯೮೩ ರಲ್ಲಿ ಭಾನಾಮತಿ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಡಾ ಹೆಚ್ ನರಸಿಂಹಯ್ಯ ದತ್ತಿ ನಿಧಿ ಬಹುಮಾನ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿದ್ದು ಇವರ ಕಠಿಣ ಶ್ರಮ,ಅವಿರತ ಸಾಧನೆಗಳ ಫಲ
ಎನ್ನಬ ಹುದು.

ನಿಮ್ಮ ಅಭಿಪ್ರಾಯದಲ್ಲಿ ವೈದ್ಯಕೀಯ ಲೇಖನಗಳ ಬಗ್ಗೆ ಜನರ ನಿರೀಕ್ಷೆ ಏನು ?

ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಹೇಗೆ ಬರುತ್ತದೆ, ಬರಲು ಕಾರಣಗಳಾವುವು, ಅದನ್ನು ಬೇಗ ಗುರುತಿಸುವುದು ಹೇಗೆ? ಅದಕ್ಕೆ ಸುಲಭ
ಮತ್ತು ಪರಿಣಾಮಕಾರಿ ಚಿಕಿತ್ಸೆ ಏನು, ಎಲ್ಲಿ ಸಿಗುತ್ತದೆ ಮತ್ತು ಬರದಂತೆ ನಿವಾರಿಸಲು ಸಾಧ್ಯವೇ ಅದನ್ನು ಸರಳವಾದ ಮತ್ತು ಆಕರ್ಷಕ ಭಾಷೆಯಲ್ಲಿ ಬರೆದುದನ್ನು ತಿಳಿಯಲು ಜನ ಇಚ್ಚಿಸುತ್ತಾರೆ. ಜತೆಗೆ ನಮ್ಮ ದೇಹದ ಕಾರ್ಯ ವಿಧಾನಗಳನ್ನು ತಿಳಿಯಲೂ ಬಯಸುತ್ತಾರೆ, ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ.

ಪತ್ರಿಕಾ ಲೇಖನಗಳು ಪುಸ್ತಕಗಳ ಇತಿ- ಮಿತಿಗಳು ಏನು?
ಮನೋವೈದ್ಯಕೀಯ ಲೇಖನಗಳನ್ನು ಪುಸ್ತಕಗಳನ್ನು ಜನಸಾಮಾನ್ಯರು ಹಾಗೂ ಅಲ್ಪಮಟ್ಟದ ಮಾನಸಿಕ ಅಸ್ವಸ್ಥತೆ ಇರುವವರು ಓದುತ್ತಾರೆ. (ತೀವ್ರತರ
ಕಾಯಿಲೆಯವರು ಸಹಜವಾಗಿ ಓದಲಾರರು) ಓದಿ ತಮ್ಮ ಮಾನಸಿಕ ಸಮಸ್ಯೆಗಳನ್ನು ಗುರುತಿಸುತ್ತಾರೆ. ಅವುಗಳ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಅಪರೂಪಕ್ಕೆ ಕೆಲವರು ರೋಗ ಭಯವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದ್ದರೂ ಅದು ಗೌಣ.

ವೈದ್ಯ – ರೋಗಿಗಳ ನಡುವೆ ರೋಗದ ಬಗ್ಗೆ ಸಂಭಾಷಣೆ, ಸಲಹೆ, ಪ್ರತಿಕ್ರಿಯೆಗಳು ಪಾಶ್ಚಾತ್ಯ ದೇಶದಲ್ಲಿರುವಷ್ಟು ನಮ್ಮಲ್ಲಿ ಇಲ್ಲ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ?

ನಿಜ, ಕಾಯಿಲೆಗಳ ಬಗ್ಗೆ, ಪರೀಕ್ಷೆ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ನಮ್ಮ ವೈದ್ಯರು ರೋಗಿಗಳಿಗೆ ಮತ್ತು ಮನೆಯವರಿಗೆ ಹೇಳುವುದಕ್ಕಿಂತ ಹೇಳದಿರು ವುದೇ ಹೆಚ್ಚು. ಅದೆಲ್ಲ ನಿಮಗೇಕೆ? ಅದನ್ನು ನನಗೆ ಬಿಡಿ, ನಾನು ಹೇಳಿದಂತೆ ಕೇಳಿ ಎನ್ನುವ ವೈದ್ಯರೇ ಹೆಚ್ಚು. ವೈದ್ಯಕೀಯ ವಿಧಾನಗಳನ್ನು ಗುಟ್ಟು ಮಾಡಿ ಅದಕ್ಕೊಂದು ಪವಾಡ / ಅದ್ಭುತ ರೂಪ ಕೊಡಲಾಗುತ್ತದೆ. ಇದು ಸರಿ ಅಲ್ಲ. ಕಾಯಿಲೆ ಬಗ್ಗೆ ಎಲ್ಲ ವಿವರಗಳನ್ನು ಪಡೆಯುವ ಹಕ್ಕು ರೋಗಿಗೆ ಮತ್ತು ಮನೆಯವರಿಗೆ ಇದೆ.

ವೈದ್ಯರ ಗುಣಮಟ್ಟಗಳು ಈಗೀಗ ಇಳಿ ಮುಖವಾಗುತ್ತಿವೆಯೇ? ಏಕೆ ?
೧. ನಾಯಿ ಕೊಡೆಗಳಂತೆ, ನಿರೀಕ್ಷಿತ ಮಟ್ಟದ ಬೋಧನಾ ಸೌಲಭ್ಯಗಳಿಲ್ಲದೆ ಹುಟ್ಟಿ, ಕೆಲಸ ಮಾಡುತ್ತಿರುವ ಖಾಸಗಿ ಮೆಡಿಕಲ್ ಕಾಲೇಜುಗಳು. ೨.
ಬೋಧನೆಯಲ್ಲಿ ಆಸಕ್ತಿ ವಹಿಸದೆ ಸದಾ ಪ್ರಾಕ್ಟೀಸ್ ನಿರತ ವೈದ್ಯ ಅಧ್ಯಾಪಕ ವರ್ಗ ೩. ಆಡಳಿತ ಅವ್ಯವಸ್ಥೆ ಇರುವ ಸರಕಾರಿ ಕಾಲೇಜುಗಳು ೪. ಹೆಚ್ಚು ಹಣ / ಸ್ಥಾನಮಾನ ಸಂಪಾದಿಸುವ ಆಸೆಯಿಂದ ಹಣ ತೆತ್ತು ಬರುವ ವೈದ್ಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಸ್ವಾರ್ಥ ಬುದ್ಧಿ. ೫. ಭೋಗ ಭಾಗ್ಯಗಳಿಗೇ ಹೆಚ್ಚು ಒತ್ತು ಕೊಡುವ ಸಾಮಾಜಿಕ ವ್ಯವಸ್ಥೆ. ೬. ವ್ಯಾಪಾರೀಕರಣವಾಗಿರುವ ವೈದ್ಯ ವೃತ್ತಿ ಇತ್ಯಾದಿ.

ಲೇಖನಗಳಿಂದ ಪುಸ್ತಕಗಳಿಂದ ನೀವು ನಿರೀಕ್ಷಿಸುವ ಬದಲಾವಣೆಗಳು  ಯಾವುವು ?
೧. ಕುರುಡು ನಂಬಿಕೆ, ಅಂಧಾನುಚರಣೆಗಳ ನಿರ್ಮೂಲನೆ ( ರೋಗಿ ಮತ್ತು ರೋಗದ ಬಗ್ಗೆ ) ೨. ರೋಗವನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆಗೆ ವೈದ್ಯರಲ್ಲಿ ಬರುವುದು. ೩. ಚಿಕಿತ್ಸೆಯಲ್ಲಿ ವೈದ್ಯರಿಗೆ ಪೂರ್ಣ ಸಹಕಾರ. ೪. ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯ ವರ್ಧನೆಯಲ್ಲಿ ಸಕ್ರಿಯ ಭಾಗ ವಹಿಸುವಿಕೆ. ೫. ವೈದ್ಯ ಹಾಗೂ ವೈದ್ಯ ವೃತ್ತಿಯ ಘನತೆಯನ್ನು ಉಳಿಸಿ ಬೆಳೆಸುವುದರಲ್ಲಿ ಆಸಕ್ತಿ.