ತುಮಕೂರು: ರಾಜ್ಯ ಸರಕಾರಿ ನೌಕರರ ಸಂಘ 7ನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಬುಧವಾರ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರ ರೋಗಿಗಳ ವಿಭಾಗ ಸೇರಿದಂತೆ ಸರಕಾರಿ ಕಚೇರಿಗಳು ಸಂಪೂರ್ಣ ಬಂದ್ ಆಗಿ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು.
ರಾಜ್ಯ ಸರಕಾರಿ ನೌಕರರಿಗೆ ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಆದೇಶದ ಹೊರಡಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನ ಸರ್ಕಾರಿ ನೌಕರರ ಸಂಘ ತನ್ನ ಮುಷ್ಕರವನ್ನು ಪಡೆದಿದ್ದರಿಂದ ಸರಕಾರಿ ಕಚೇರಿಗಳು, ಆಸ್ಪತ್ರೆಗಳ ಸಿಬ್ಬಂದಿ ಎಂದಿನAತೆ ಕರ್ತವ್ಯಕ್ಕೆ ಹಾಜರಾದರು.
ಸಂಘದ ಕರೆ ಮೇರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ವಿಭಾಗ ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ದೂರದ ಹಳ್ಳಿಗಳಿಂದ ನಗರ, ಪಟ್ಟಣ ಪ್ರದೇಶಗಳಿಗೆ ಬಂದಿರುವ ರೈತರು, ಸಾರ್ವ ಜನಿಕರು ಚಿಕಿತ್ಸೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಬಂದಿದ್ದರೂ ಸಹ ಹೊರ ರೋಗಗಿಳ ವಿಭಾಗವನ್ನು ತೆರೆಯದೆ ಬಂದ್ ಮಾಡಿದ್ದು, ತುರ್ತು ಸೇವೆಗಳಿಗೆ ಮಾತ್ರ ಕರ್ತವ್ಯಕ್ಕೆ ಹಾಜರಾಗಲು ಮಾತ್ರ ಸರ್ಕಾರಿ ವೈದ್ಯರು ತೀರ್ಮಾನಿಸಿರುವುದರಿಂದ ಹೊರ ರೋಗಿಗಳು ಚಿಕಿತ್ಸೆ ಸಿಗದೆ ತಮ್ಮ ತಮ್ಮ ಊರುಗಳತ್ತ ತೆರಳಿದರು.
ಸರಕಾರಿ ಶಾಲಾ–ಕಾಲೇಜುಗಳು, ಕಂದಾಯ ಇಲಾಖೆ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನೌಕರರು ಕರ್ತವ್ಯ ಹಾಜರಾಗದೇ ತಮ್ಮ ಮುಷ್ಕರ ನಡೆಸಿದರು.
ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿ ಹೊರ ಗುತ್ತಿಗೆ ನೌಕರರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದು, ಉಳಿದಂತೆ ಸರ್ಕಾರಿ ನೌಕರರು ಕಚೇರಿ ಬಳಿಗೆ ಬಂದರೂ ಸಹ ಕಚೇರಿ ಒಳಗೆ ಹೋಗದೆ ಪ್ರತಿಭಟನೆ ನಡೆಸಿದ್ದು ಜಿಲ್ಲೆಯಾದ್ಯಂತ ಕಂಡು ಬಂದಿತು.