Saturday, 14th December 2024

ಶೇ.40 ಕಮಿಷನ್‌ ಆರೋಪಕ್ಕೆ ಶಕ್ತಿ ಕೊಟ್ಟ ಲೋಕಾ

lokayukta raid

ವರ್ತಮಾನ

maapala@gmail.com

ಸರಕಾರದ ಕಾಮಗಾರಿಗಳಿಗೆ ೪೦ ಪರ್ಸೆಂಟ್ ಕಮಿಷನ್ ಪಡೆಯುವ ಆರೋಪದಿಂದ ಆಗಿರುವ ಹಾನಿ, ಹೆಚ್ಚಿದ ಆಡಳಿತ ವಿರೋಧಿ ಅಲೆ ತಡೆಯಲು ಹರಸಾಹಸ ಮಾಡಿ ಇನ್ನೇನು ಆ ಆರೋಪದಿಂದ ಸ್ವಲ್ಪ ಮಟ್ಟಿಗೆ ಹೊರಬರುತ್ತಿದೆ ಎನ್ನುವಾಗ ಪಕ್ಷದ ಚೆನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳು ಪ್ರಶಾಮತ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವುದು ಮಾಡಿದ ಪ್ರಯತ್ನ ವೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ಹಿಂಡಿದಂತಾಯಿತು ಎನ್ನುವ ಹಂತಕ್ಕೆ ತಲುಪಿದೆ.

ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರಾಗಿದ್ದ, ನಿಯೋಜನೆ ಮೇಲೆ ಬೆಂಗಳೂರು ಜಲ ಮಡಳಿಯಲ್ಲಿ ಲೆಕ್ಕ ಪತ್ರ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮಾಡಾಳು ಪ್ರಶಾಂತ್ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಲಂಚ ಪಡೆದು ಸಿಕ್ಕಿ ಬಿದ್ದಿದ್ದರೆ ಸರಕಾರ ಅಷ್ಟೊಂದು ತಲೆಕೆಡಿಸಿಕೊಳ್ಳ
ಬೇಕಾಗಿರಲಿಲ್ಲ. ಆದರೆ, ಅವರು ತಮ್ಮ ತಂದೆ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜಂಟ್ಸ್ ಲಿಮಿಟೆಡ್‌ಗೆ (ಕೆಎಸ್‌ಡಿಎಲ್) ಸಂಬಂಧಿಸಿದ ರಾಸಾಯನಿಕ ಗುತ್ತಿಗೆಯ ಕಾರ್ಯಾದೇಶ ನೀಡಲು 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ.

ಅಷ್ಟೇ ಅಲ್ಲ, ಅವರ ಕಚೇರಿ ಮತ್ತು ಮನೆಯಲ್ಲಿ ೮ ಕೋಟಿ ರುಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಇದೇ ಬಿಜೆಪಿಗೆ ತಲೆನೋವಾಗಿರುವುದು.
ಮಾಡಾಳು ಪ್ರಶಾಂತ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಪಡೆಯುತ್ತಿದ್ದ ಲಂಚ ಅವರ ಇಲಾಖೆಗೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಾಗಿ ಅವರ ತಂದೆ ಆಡಳಿತ ಪಕ್ಷದ ಶಾಸಕರೂ ಆಗಿರುವ ಮಾಡಾಳು ವಿರೂಪಾಕ್ಷಪ್ಪ ಅಧ್ಯಕ್ಷರಾಗಿರುವ ಕೆಎಸ್‌ಡಿಎಲ್‌ಗೆ ರಾಸಾಯಿನಿಕ
ಪೂರೈಕೆ ಟೆಂಡರ್‌ಗೆ ಸಂಬಂಧಿಸಿದಂತಹದ್ದು. ಕೆಎಸ್‌ಡಿಎಲ್‌ಗೆ ಸಂಬಂಧಿಸಿದಂತೆ ಟೆಂಡರ್ ಅವ್ಯವಹಾರದ ಬಗ್ಗೆ ಇದು ಮೊದಲ ಪ್ರಕರಣವೇನೂ ಅಲ್ಲ. ಈ ಹಿಂದೆಯೂ ಲಂಚದ ಆರೋಪ ಕೇಳಿಬಂದಿತ್ತು.

ಮಾಡಾಳು ವಿರೂಪಾಕ್ಷಪ್ಪ ವಿರುದ್ಧವೇ ಈ ಆರೋಪ ಇತ್ತು. ಆದರೆ, ಆ ಸಂದರ್ಭದಲ್ಲಿ ಸಾಕ್ಷ್ಯಗಳು ಇಲ್ಲದ ಕಾರಣ ಅದು ಅಲ್ಲಿಗೆ ಮುಚ್ಚಿಹೋಗಿತ್ತು.
ಆದರೆ, ಈ ಬಾರಿ ಸಾಕ್ಷ್ಯ ಸಮೇತ ಆರೋಪಕ್ಕೆ ಪುಷ್ಟಿ ಸಿಕ್ಕಿದೆ. ಕೇವಲ ಇದೊಂದೇ ಅಲ್ಲ, ಇದುವರೆಗೆ ಸರಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೂ ತನ್ನ ಆರೋಪವನ್ನು ಇನ್ನಷ್ಟು ತೀವ್ರಗೊಳಿಸಲು ಉದಾಹರಣೆ ಸಹಿತ ಒಂದು ಅಸ್ತ್ರ ಸಿಕ್ಕಿದಂತಾಗಿದೆ. ಈ
ಕಾರಣಕ್ಕಾಗಿಯಾದರೂ ಕಾಂಗ್ರೆಸ್ ತಾನು ಯಾವ ಲೋಕಾಯುಕ್ತ ಸಂಸ್ಥೆಯನ್ನು ಸಂಸ್ಥೆಯನ್ನು ಹಲ್ಲಿಲ್ಲದ ಹಾವಾಗಿ ಮಾಡಿತ್ತೋ ಅದಕ್ಕೀಗ ಕೃತಜ್ಞನಾಗಿರಬೇಕಾಗಿದೆ.

ಹೌದು, 2004-05ರ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದ ಮೇಲೆ ೨೦೧೩ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಗಿದ್ದೇ ಲೋಕಾಯುಕ್ತ ಸಂಸ್ಥೆ. 2008ರಲ್ಲಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಲಂಚ ಪ್ರಕರಣಕ್ಕೆ ಸಂಬಂಽಸಿದಂತೆ ಆಡಳಿತ ಪಕ್ಷದ ಶಾಸಕ ಕೆಜಿಎಫ್ ನ ಸಂಪಂಗಿ ಬಂಧನ ಪ್ರಕರಣ, ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ
ಸಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅವರ ಪುತ್ರ ಕಟ್ಟಾ ಜಗದೀಶ್ ಬಂಧನ ಪ್ರಕರಣ, ಸಚಿವರಾಗಿದ್ದ ಜನಾರ್ದನ ರೆಡ್ಡಿ ಜೈಲಿಗೆ ಹೋಗಲು ಮತ್ತು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣವಾದ ಪ್ರಕರಣಗಳು ಲೋಕಾಯುಕ್ತದಲ್ಲೇ ಆಗಿದ್ದಂಥವು.

ಅದರಲ್ಲೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಸದನದಲ್ಲಿ ತೊಡೆತಟ್ಟಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದರು. ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತ ಇದೇ ರೀತಿ ಮುಂದುವರಿದರೆ ಮುಂದೆ ತಮ್ಮ ಸರಕಾರಕ್ಕೂ ತೊಂದರೆಯಾಗಬಹುದು ಎಂಬ ಕಾರಣಕ್ಕೋ ಏನೋ, ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಭಾಸ್ಕರರಾವ್ ಅವರ ಪುತ್ರ ಲೋಕಾಯುಕ್ತ ಸಂಸ್ಥೆಯಲ್ಲೇ ಅಕ್ರಮ ಎಸಗಿದ ಪ್ರಕರಣ ಮುಂದಿಟ್ಟುಕೊಂಡು ಲೋಕಾಯುಕ್ತದ ಶಕ್ತಿ ಕುಂದಿಸಿ ಮುಖ್ಯಮಂತ್ರಿ ಕೈಕೆಳಗೆ ಬರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿದ್ದರು.

ನಂತರ ನಡೆದಿರುವುದು ಇತಿಹಾಸ. ಎಸಿಬಿ ಬಂದ ಮೇಲೆ ಕೆಲವು ಅಧಿಕಾರಿಗಳ ಮೇಲೆ ದಾಳಿಗಳು ನಡೆದವೇ ವಿನಃ ಒಂದೇ ಒಂದು ‘ಹೈ ಪ್ರೊಫಲ್’ ಪ್ರಕರಣಗಳನ್ನು ದಾಖಲಿಸಿಕೊಳ್ಳಲಿಲ್ಲ. ದಾಖಲಾದ ಬಹುತೇಕ ಪ್ರಕರಣಗಳಲ್ಲೂ ಬಿ ರಿಪೋರ್ಟ್ ದಾಖಲಿಸಿ ಕೈತೊಳೆದುಕೊಂಡಿತು. ಇತ್ತೀಚೆಗೆ
ಎಸಿಬಿ ರಚಿಸಿದ ಸರಕಾರದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸುವವರೆಗೂ ರಾಜ್ಯದಲ್ಲಿ ಗಂಭೀರ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗದಲೇ ಇಲ್ಲ. ಹಾಗೆಂದು ಭ್ರಷ್ಟಾಚಾರ ನಡೆದಿಲ್ಲ ಎಂದಲ್ಲ. ಮುಖ್ಯಮಂತ್ರಿ ಕೈಕೆಳಗೆ ಬರುವ ಎಸಿಬಿ ಹೇಗೆ ತಾನೇ ಆಡಳಿತ ಪಕ್ಷದವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ? ಅಷ್ಟರ ಮಟ್ಟಿಗೆ ಹೈಕೋರ್ಟ್ ಆದೇಶದ ಮೇಲೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವವರೆಗೆ ಭ್ರಷ್ಟಾಚಾರ, ಅಕ್ರಮ ನಡೆಸಿದವರು ಪಾರಾಗಿದ್ದರು.

ಇದೀಗ ಲೋಕಾಯುಕ್ತ ಬಲಗೊಳ್ಳುತ್ತಿದ್ದಂತೆ ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ವಿಶೇಷವೆಂದರೆ, ಲೋಕಾಯುಕ್ತ ಪೊಲೀಸ್
ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಮಂದಿ ಎಸಿಬಿಯಲ್ಲೂ ಇದ್ದರು. ಆದರೆ, ಆಗ ಅವರು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬುದಕ್ಕೆ ಎಸಿಬಿ ಯಾವ ರೀತಿ ರಾಜಕೀಯ ಮರ್ಜಿಯಲ್ಲಿ ಕೆಲಸ ಮಾಡುತ್ತಿತ್ತು ಎಂಬುದು ಅರ್ಥವಾಗುತ್ತದೆ.

ಅದು ಒತ್ತಟ್ಟಿಗಿರಲಿ, ಇದೀಗ ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮೇಲೆ ನಡೆದ ದಾಳಿಯ ಕುರಿತು ಹೇಳುವುದಾದರೆ,ಆತನ ವಿರುದ್ಧ ಲಂಚದ ಆರೋಪ ಇದು ಹೊಸದೇನೂ ಅಲ್ಲ. ೨೦೧೩-೧೮ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ
ಸಿದ್ದರಾಮಯ್ಯ ಅವರ ಸರಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಅವರ ವಿಶೇಷಾಧಿಕಾರಿಯಾಗಿ ಪ್ರಶಾಂತ್ ಕರ್ತವ್ಯ ನಿರ್ವಹಿಸುತ್ತಿದದ್ರು. ಆಗ ಲಂಚ ಸ್ವೀಕರಿಸಿ ಸಿಕ್ಕಿಬಿದ್ದು ಅಮಾನತಾಗಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ತೆರವುಗೊಳಿಸಲಾಗಿತ್ತು. ಆದರೂ
ಬುದ್ಧಿ ಕಲಿಯದೆ ಮತ್ತೆ ಅದೇ ಚಾಳಿ ಮುಂದುವರಿಸಿ ಈಗ ಬಿಜೆಪಿ ಸರಕಾರಕ್ಕೇ ಮುಳುವಾಗುವ ಹಂತಕ್ಕೆ ಬಂದು ಮುಟ್ಟಿದ್ದಾರೆ.

ಏಕೆಂದರೆ, ಸರಕಾರದ ವಿರುದ್ಧ ೪೦ ಪರ್ಸೆಂಟ್ ಹಗರಣದ ಆರೋಪ ಶಕ್ತಿ ಕಳೆದುಕೊಳ್ಳುತ್ತಿರುವ ಆತಂಕದಲ್ಲಿದ್ದ ಕಾಂಗ್ರೆಸ್‌ಗೆ ಈ ಪ್ರಕರಣ ಸಾಕ್ಷ್ಯ ಸಮೇತ ಲಂಚ ಪ್ರಕರಣವನ್ನು ಮತ್ತೆ ಒದಗಿಸಿಕೊಟ್ಟಿದೆ. ಈ ಪ್ರಕರಣವನ್ನೇ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ತನ್ನ ೪೦ ಪರ್ಸೆಂಟ್ ಹಗರಣದ ಹೋರಾಟವನ್ನು ತೀವ್ರಗೊಳಿಸಿ ಚುನಾವಣೆಯಲ್ಲಿ ಬಿಜೆಪಿಗೆ ತಿರುಗೇಟು ನೀಡಲು ಅವಕಾಶ ಮಾಡಿಕೊಟ್ಟಿದೆ. ಕಳೆದ ಎರಡು ತಿಂಗಳಿನಿಂದ ರಾಜ್ಯಕ್ಕೆ ಪದೇ ಪದೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಸತತ ಪ್ರಯತ್ನ ೪೦ ಪರ್ಸೆಂಟ್ ಹಗರಣದಲ್ಲಿ ಸಿಕ್ಕಿ ನರಳುತ್ತಿದ್ದ ರಾಜ್ಯದ ಬಿಜೆಪಿ ಸರಕಾರವನ್ನು ತಕ್ಕ ಮಟ್ಟಿಗೆ ಪಾರು ಮಾಡಿತ್ತು. ಇದಕ್ಕೆ ಪೂರಕವಾಗಿ ಮೀಸಲು ಹೆಚ್ಚಳ, ಸರಕಾರದ ವಿವಿಧ ಜನಪರ ಕಾರ್ಯಕ್ರಮಗಳು ಕೂಡ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಬೂಸ್ಟರ್ ಡೋಸ್ ನೀಡಿದ್ದವು.

ಇದರ ಅನುಕೂಲ ಪಡೆದು ಮುಂಬರುವ ವಿಧಾನಸಭೆ ಚುನಾವಣೆಗೆ ಆಡಳಿತ ವಿರೋಽ ಅಲೆಯನ್ನು ಮೆಟ್ಟಿನಿಂತು ಆಡಳಿತ ಪಕ್ಷ ಮೇಲೇಳಲು ಪ್ರಯತ್ನಿಸುತ್ತಿದ್ದಂತೆ ಮಾಡಾಳು ಪ್ರಕಾಶ್ ಲಂಚ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವುದು ತಲೆ ಮೇಲೆ ಬಂಡೆ ಎತ್ತಿಹಾಕಿದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಈ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಎಸಿಬಿ ಇದ್ದಿದ್ದರೆ ಇಂತ ದಾಳಿ ನಡೆಯುತ್ತಿರಲಿಲ್ಲ, ಲೋಕಾಯುಕ್ತಕ್ಕೆ ಶಕ್ತಿ ಕೊಟ್ಟಿದ್ದರಿಂದ ಈ ರೀತಿ ಆಯಿತು ಎಂದು ಬಿಜೆಪಿಯವರು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಬಹುದು. ಕಾಂಗ್ರೆಸ್‌ನ ಹಗರಣಗಳನ್ನು ಎಸಿಬಿ ನೆರವಿನೊಂದಿಗೆ ಮುಚ್ಚಿಹಾಕಲಾಗಿತ್ತು. ಆದರೆ, ನಮ್ಮ ಸರಕಾರದ ಅವಧಿಯಲ್ಲಿ ಯಾರೇ ತಪ್ಪು ಮಾಡಿದರೂ ಸಿಕ್ಕಿಬೀಳುತ್ತಾರೆ ಎಂಬುದು ಖಾತರಿಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳಬಹುದು. ಆದರೆ, ನಮ್ಮ ಸರಕಾರದ ಅವಽಯಲ್ಲಿ ಯಾವುದೇ ಅಕ್ರಮ ಆಗಿಲ್ಲ. ಲಂಚ ಪ್ರಕರಣ ನಡೆಯುತ್ತಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗಳು ಸುಳ್ಳು ಎನ್ನುವುದನ್ನು ಮಾಡಾಳು ಪ್ರಕರಣ ಸಾಬೀತುಪಡಿಸಿದೆ. ಅಷ್ಟರ ಮಟ್ಟಿಗೆ ಲೋಕಾಯುಕ್ತ ಸಂಸ್ಥೆಗೆ ಮರುಜೀವ ನೀಡಿದ್ದೇವೆ ಎಂದು ಬೀಗುತ್ತಿರುವ ಬಿಜೆಪಿಗೆ ಅದೇ ಲೋಕಾಯುಕ್ತ ಮಗ್ಗುಲ ಮುಳ್ಳಾಗಿದೆ.

ಲಾಸ್ಟ್ ಸಿಪ್: ಕೋಲು ಕೊಟ್ಟು ಅದೇ ಕೋಲಿನಿಂದ ಪೆಟ್ಟು ತಿನ್ನುವುದು ಎಂದರೆ ಹೈಕೋರ್ಟ್ ಆದೇಶದಂತೆ ಬಿಜೆಪಿ ಸರಕಾರ ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರ ನೀಡಿದ್ದು.