Thursday, 21st November 2024

ನಾಡ ಸೇನಾನಿ ಷಡಕ್ಷರಿ ಅವರಿಗೆ ನಾಡ ಹಬ್ಬಕ್ಕೆ ಸ್ವಾಗತ

ಪರಿಶ್ರಮ

parishramamd@gmail.com

ಹೆಚ್ಚುಕಡಿಮೆ ಎಲ್ಲರೂ ತಮ್ಮ ಮಕ್ಕಳನ್ನ ಕನ್ನಡ ಶಾಲೆಯಿಂದ ದೂರವಿಟ್ಟು ಇಂಗ್ಲೀಷ್ ಮಾಧ್ಯ ಮದಲ್ಲಿ ಓದಿಸುವ ಹಂಬಲವನ್ನು ಹೊಂದಿರುತ್ತಾರೆ. ಇಂತಹ ಸಮಯದಲ್ಲಿ, ನಾವು ಯಾಕೆ ಕನ್ನಡ ಮಾಧ್ಯಮ ದಲ್ಲಿ ಓದಿದವರಿಗೆ ಕನಿಷ್ಟ ೫೦ ಪ್ರತಿಷತ ಉದ್ಯೋಗ ಖಾತ್ರಿಯ ಭರವಸೆ ನೀಡುವ ಕಾಯಿದೆ ತರುವಂತೆ ಹೋರಾಡಬಾರದು ಅಂತ ಷಡಕ್ಷರಿ ಸಾರ್ ಸ್ಟೇಟ್ಮೆಂಟ್ ಕೊಟ್ಟಿದ್ದರು.

ನಾಡು, ನುಡಿ, ನೆಲ, ಜಲ, ಭಾಷೆಯ ಋಣ ತೀರಿಸೋಕೆ ಪುಣ್ಯ ಎಲ್ಲರಿಗೂ ಸಿಗೋದಿಲ್ಲ, ಕೆಲವರು ಈ ಮಣ್ಣಲ್ಲಿ ಹುಟ್ಟಿದ್ದು ಪುಣ್ಯ ಎನ್ನುತ್ತಾರೆ. ಕೆಲವರು ನುಡಿಗಾಗಿ ದುಡಿದು ಹೊರಟುಬಿಡುತ್ತಾರೆ. ಕೆಲವರು ನೆಲ-ಜಲ-ಭಾಷೆಯ ವಿಷಯಕ್ಕೆ ಬಂದರೆ ಟೊಂಕ ಕಟ್ಟಿ ನಿಂತು ಕೆಲಸ ಮಾಡಲು ಶುರು ಮಾಡು ತ್ತಾರೆ.

ಇಂತಹವರು ನಮ್ಮ ಮಧ್ಯೆ ಅಂತ ಹೇಳುವ ನಾವು ನಮ್ಮೊಡನೆ ಇಂದು ದಂತ ಕಥೆಯಂತೆ ಬದುಕಿರುವ ಎಸ್.ಷಡಕ್ಷರಿಯವರ ಬಗ್ಗೆ ಹೇಳೋವಾಗ ಹೆಮ್ಮೆ ಎನಿಸದೆ ಇರೋದಿಲ್ಲ. ಭಾಷೆಗಾಗಿ ಬದುಕು, ಬದುಕಿಗಾಗಿ ಭಾಷೆಯೆಂಬಂತೆ ಬದುಕುತ್ತಿರುವ ಉದ್ಯಮಿ. ಕನ್ನಡದ ಸೇನಾನಿ ನಾಡೋಜ ಷಡಕ್ಷರಿಯವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ ಎನ್ನುವುದೇ ಹಬ್ಬ. ಕನ್ನಡದ ಹಬ್ಬ ನಡೆಸಲು ಕನ್ನಡಿಗನೊಬ್ಬ ಪಟ್ಟಕ್ಕೇರಿದ ಕ್ಷಣವೇ ಸಾಕು ಎನಿಸುತ್ತದೆ. ನಾಯಕ ಸಮರ್ಥನಾಗಿದ್ದರೆ ನಾಡು ಸಮೃದ್ಧವಾಗಿರುತ್ತದೆ. ಪಂಡಿತರೆಲ್ಲರೂ ಖುಷಿಯಾಗಿದ್ದರೆ, ಪ್ರಪಂಚವನ್ನೇ ಜ್ಞಾನ ಭಂಡಾರವನ್ನಾಗಿಸುತ್ತಾರೆ ಎನ್ನುವುದು ನನ್ನ ಅಭಿಪ್ರಾಯ.

ನಮ್ಮ ನಾಡೋಜರ ಬಗ್ಗೆ ಹೇಳಬೇಕೆಂದರೆ ಅವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಯ ಚಿಂತಾಮಣಿ ತಾಲ್ಲೂಕ್ಕಿನ ತುಳವನೂರು ಗ್ರಾಮದಲ್ಲಿ ತಂದೆ ವಿ.
ಸುಂದರಯ್ಯ ಮತ್ತು ತಾಯಿ ಪಾರ್ವತಮ್ಮ. ಇವರು ವ್ಯಾಸಂಗ ನಡೆದಿದ್ದು ಮೈಸೂರ್ ಕಾಲೇಜ್ ಆಫ್ ಎಂಜನಿಯರಿಂಗ್‌ನಲ್ಲಿ. ಎಂಜಿನಿಯರ್ ಆದ ಮೇಲೆ ಎಲ್ಲರು ಜೀವನಕಟ್ಟಿಕೊಳ್ಳುವುದರ ಜತೆಗೆ, ನಾಡು ನುಡಿಯನ್ನ ಕಟ್ಟುವ ಕೆಲಸವನ್ನು ಮಾಡಿದರು. ಏನೇ ಕೆಲಸ ಮಾಡಬೇಕಿದ್ದರೂ ನಾವು ವಿಘ್ನೇಶ್ವರನಿಗೆ ಕೈ ಮುಗಿಯೋದು ವಾಡಿಕೆ. ಹಾಗೆಯೇ ಇವರು ತಮ್ಮ ಸಂಗ್ರಹದಲ್ಲಿ ೨೫೦೦ ವಿವಿಧ ಬಗೆಯ ವಿಘ್ನೇಶ್ವರನ ವಿಗ್ರಹವನ್ನು ಸಂಗ್ರಹ ಮಾಡಿದ್ದಾರೆ.

ಅದಕ್ಕೇನೇ ಇರಬಹುದು ಇವರು ಮಾಡಿಕೊಡುವ ಕೆಲಸದಲ್ಲಿ ವಿಘ್ನಗಳು ಬರೋದೆ ಕಮ್ಮಿ, ಹಾಗೆಯೇ ಕೆಲವೊಮ್ಮೆ ಜನ ಆಡಿದ ಮಾತನ್ನ, ಕೊಟ್ಟ ಮಾತನ್ನ ಮರೆತು ಬಿಡುತ್ತಾರೆ ಆದರೆ ಎಸ್.ಷಡಕ್ಷರಿ ಅವರು ಒಮ್ಮೆ ಮಾತುಕೊಟ್ರೆ ಅದಕ್ಕೆ ಕಟಿ ಬದ್ಧರಾಗಿ ನಿಲ್ಲುವುದು ಅವರ ಮಾತಿಗೆ ತಪ್ಪದ
ನಿಲುವನ್ನ ಎತ್ತಿ ತೋರಿಸುತ್ತದೆ. ನಾವು ಬರೀ ಕನ್ನಡಿಗರಾದರೆ ಸಾಲದು, ಕನ್ನಡದ ಕಟ್ಟಾಳುಗಳಾಗಬೇಕು ಎಂದು ಹೊರಟ ಹಲವು ನುಡಿ ಸೇವಕರಲ್ಲಿ, ಹೆಚ್ಚುಕಡಿಮೆ ಎಲ್ಲರೂ ತಮ್ಮ ಮಕ್ಕಳನ್ನ ಕನ್ನಡ ಶಾಲೆಯಿಂದ ದೂರವಿಟ್ಟು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸುವ ಹಂಬಲವನ್ನು ಹೊಂದಿರುತ್ತಾರೆ.

ಯಾಕಂದ್ರೆ ನಾಳೆ ನಮ್ಮ ಮಕ್ಕಳಿಗೆ ಕೆಲಸ ಸಿಗೋದು ಕಷ್ಟ ಆಗಬಹುದು ಅಂತ. ಇಂತಹ ಸಮಯದಲ್ಲಿ, ನಾವು ಯಾಕೆ ಕನ್ನಡ ಮಾಧ್ಯಮದಲ್ಲಿ ಓದಿದ ವರಿಗೆ ಕನಿಷ್ಟ ೫೦ ಪ್ರತಿಷತ ಉದ್ಯೋಗ ಖಾತ್ರಿಯ ಭರವಸೆ ನೀಡುವ ಕಾಯಿದೆ ತರುವಂತೆ ಹೋರಾಡಬಾರದು ಅಂತ ಷಡಕ್ಷರಿ ಸಾರ್ ಸ್ಟೇಟ್ಮೆಂಟ್ ಕೊಟ್ಟಿದ್ದರು. ಅದಿನ್ನೂ ನಾವ್ಯಾರು ಯೋಚಿಸದೇ ಇರುವ ಸಮಯದಲ್ಲಿ, ಆ ವಿಷಯ ನಮ್ಮೆಲ್ಲರನ್ನ ಯೋಚನೆಗೆ ದೂಡುತ್ತವೆ. ಅದೇ ರೀತಿ ನಮ್ಮ
ಪಕ್ಕದ ತಮಿಳುನಾಡಿನಲ್ಲಿ ಸರಕಾರಿ ನೌಕರರ ಮಕ್ಕಳು ಸರಕಾರಿ ಶಾಲೆಗೆ ಸೇರಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಿದಂತೆ ನಮ್ಮಲ್ಲೂ ಆ ಆದೇಶ ತಂದರೆ ನಮ್ಮ ಷಡಕ್ಷರಿ ಸಾರ್ ಹೇಳಿದ ಮಾತ ಆದಷ್ಟು ಬೇಗ ಜಾರಿಗೆ ಬರೋ ಸಮಯ ದೂರವಿಲ್ಲ ಅನಿಸುತ್ತೆ.

ಭಾಷೆಯ ಬೇರು ಗಟ್ಟಿಯಾಗಿ ಬೇರೂರಿದರೆ ಭಾಷಾಭಿಮಾನ ತಾನಾಗಿಯೇ ಹುಟ್ಟುತ್ತದೆ. ಅವರೆಡು ಒಂದನ್ನೊಂದು ಬಿಟ್ಟು ಇರಲಾರವು. ಭಾಷೆ ನೆಲ ಜನ
ಅನ್ನೋ ಅಭಿಮಾನ ಶುರುವಾಗುವುದೇ ಮನೆಯಲ್ಲಿ. ಅದಕ್ಕೇ ದೊಡ್ಡವರು ಹೇಳಿದ್ದು; ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು. ಅದಕ್ಕೆ ನಾವು ಮೊದಲು ಕಲಿತ ಭಾಷೆಯನ್ನ ಮಾತೃಭಾಷೆ ಅನ್ನೋದು. ಇಂತಹ ಮಾತೃ ಭಾಷೆಯ ಶಿಕ್ಷಣದ ಪ್ರಾಮುಖ್ಯತೆಯನ್ನ ದೊಡ್ಡವರು ಹೇಳಿದಾಗ ಅದಕ್ಕೊಂದು ತೂಕ ಬರುತ್ತದೆ. ೯ನೇ ಜಿಲ್ಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಎಸ್.ಷಡಕ್ಷರಿಯವರ ಅಭಿಮತ ಕೂಡ ಅದೆ ಕನ್ನಡ ಮಾಧ್ಯಮ ಶಾಲೆಯನ್ನ ಇಂಗ್ಲೀಷ ಶಾಲೆಗಳ ನಡುವೆ ವಿಲೀನಗೊಳಿಸುವುದನ್ನ ಬಿಟ್ಟು.

ಕನ್ನಡವನ್ನ ಗಟ್ಟಿಗೊಳಿಸಿ ಕನ್ನಡ ಶಾಲೆಗೆ ಬರಲು ಮಕ್ಕಳನ್ನ ಹುರಿದುಂಬಿಸಿ ಈ ಮಾತನ್ನ ಹೇಳುವಾಗ ದೊಡ್ಡವರ ಮಾತೊಂದು ನನೆಪಿಗೆ ಬರುತ್ತದೆ.
ಅದು ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂದು. ಈ ನಿಟ್ಟಿನಲ್ಲಿ ಮಾತನಾಡುವಾಗ ನಮಗೆ ಷಡಕ್ಷರಿಯವರ ಮತ್ತೊಂದು ಮಾತು ನನೆಪಾಗುತ್ತದೆ. ನಾವು ಗೂಡು ಬಿಟ್ಟರು ಗುರಿ ಬಿಡಬಾರದು, ಅಂತೆಯೆ ಯಾವ ಗೂಡು ನಮಗೆ ಗುರಿಯತ್ತ ಹಾರುವುದನ್ನ ಕಲಿಸಿತೋ ಯಾವ ಗೂಡು ನಮಗೆ ಮಳೆಗಾಳಿಬಿಸಿಲಿನಿಂದ ನಮ್ಮನ್ನ ರಕ್ಷಿಸಿತೋ ಅಂತಃ ಗೂಡನ್ನ ಮರೆಯುವುದುಂಟೆ. ಹಾಗೆಯೇ ನಮ್ಮ ಊರು ಕೂಡ, ಚಿಕ್ಕಬಳ್ಳಾಪುರದ ಬಗ್ಗೆ ಅಗಾದವಾದ ಅಭಿಮಾನ ಹೊಂದಿರುವ ಇವರು ನನ್ನೂರಿಗೆ ದೊಡ್ಡ ದೊಡ್ಡ ಕಾರ್ಖಾನೆ ಬರಬೇಕು ನನ್ನೂರಿನ ಜನ ಕೆಲಸಕ್ಕಾಗಿ ಹೊರ ಊರಿಗೆ ಹೋಗೋದನ್ನ ನಿಲ್ಲಿಸಬೇಕು ಅನ್ನುವ ಭಾವನೆ ಅವರದ್ದು.

ಹಾಗೆ ತನ್ನ ಜಿಲ್ಲಾ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗ ಅಲ್ಲಿ ಕೆಲವೇ ಕೆಲವು ತಾಣಗಳು ಮಾತ್ರ ಜನರಿಗೆ ಗೊತ್ತಿದೆ ಅದನ್ನ ಹೊರತು ಪಡಿಸಿ
ಉಳಿದಜಾಗಗಳು ಕೂಡ ನಮ್ಮ ಜಿಲ್ಲೆಯಲ್ಲಿದೆ, ಅಲ್ಲಿಗೆ ಬೆಂಗಳೂರಿನಂತ ಮಹಾನಗರದಿಂದ ಜನರನ್ನ ಆಕರ್ಷಿಸುವ ಕೆಲಸ ನಡೆಯಬೇಕು ಇದರ ಜೊತೆ ಜೊತೆಗೆ ಸಾಹಿತ್ಯ ಸಮ್ಮೇಳನಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಅನುಷ್ಠಾನವನ್ನುಕೂಡ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು ಅನ್ನುವುದು ಷಡಕ್ಷರಿಯವರ ಅಭಿಪ್ರಾಯ.

ದೂರದೃಷ್ಟಿ ಭವಿಷ್ಯದ ಯುವಜನತೆಯ ಹಿತದೃಷ್ಟಿಯಿಂದ ಕೆಲಸ ಮಾಡುವ, ಕನ್ನಡಿಗರನ್ನ ಹುರಿದುಂಬಿಸುವ ಕ್ಷಣ ಹೊತ್ತು ಅಣಿಮುತ್ತು ಅಂಕಣದ
ಮುಖಾಂತರ ಕನ್ನಡಿಗರ ಬಳಗದ ಹೆಮ್ಮೆಯ ವ್ಯಕ್ತಿಯಾಗಿ, ವ್ಯಕ್ತಿತ್ವವಾಗಿ ಬೆಳೆದು ನಿಂತಿರುವ ನಮ್ಮ ಷಡಕ್ಷರಿಯವರಿಗೆ ನಾಡೋಜ ಪುರಸ್ಕಾರದ ಜೊತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶ್ತಿಗಳು ಇವರ ಮನೆಯನ್ನ ಅಲಂಕರಿಸಿ ಕನ್ನಡಿಗನಿಗೆ ಗೌರವ ಕೊಟ್ಟ ಸಾರ್ಥಕಭಾವವನ್ನ ಪ್ರತಿ
ಕನ್ನಡಿಗನಿಗುಕೊಟ್ಟ ಹೆಮ್ಮೆಯನ್ನ ಎಲ್ಲರಿಗೂ ಸಲ್ಲುವಂತೆ ಮಾಡಿದೆ.

ನಾಡು ನಮಗೆ ಜಾಗಕೊಟ್ಟಿದೆ ನುಡಿ ನಮಗೆ ಸಂಪರ್ಕಸಾಧನವಾಗಿ ಉಳಿಯದೆ ಅದು ಬದುಕಾಗಿ ಬದಲಾಗಿದೇ. ಜಲರಾಶೀ ನಮಗೆ ಜೀವತುಂಬಿದೆ. ಕರಣಕ್ಕೆ ಕೇಳಿದೊಡನೆ ಅರ್ಥವಾಗವ ಭಾಷೆ ಹೊಂದಿರುವ ಕರುನಾಡಿನಲ್ಲಿ ಇಂತಹ ಸಾಧಕರ ಮಧ್ಯೆ ನಾವಿದ್ದೇವೆ ಅನ್ನೋದೆ ನಮಗೆಲ್ಲ ಹೆಮ್ಮೆಇಂದು
೯ನೇ ಜಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ತಮ್ಮ ತವರು ಚಿಕ್ಕಬಳ್ಳಾಪುರಕ್ಕೆ ಬರುತ್ತಿರುವ ನಮ್ಮೂರಿನ ಹೆಮ್ಮೆಯ ಕುವರನಿಗೆ ಸ್ವಾಗತ ಕೋರುವ ಸಮಯವಿದೆ. ಇದು ಅವರು ಪಟ್ಟ ಪರಿಶ್ರಮಕ್ಕೆ ಸಂದ ಗೌರವ.