Thursday, 12th December 2024

ಕಾಂಗ್ರೆಸ್ ಪಾಳಯಕ್ಕೆ ಅಮಿತ ಚಿಂತೆ

ಮೂರ್ತಿ ಪೂಜೆ

ಕಳೆದ ವಾರ ತಲುಪಿದ ರಹಸ್ಯ ಸಂದೇಶವೊಂದರಿಂದ ರಾಜ್ಯ ಕಾಂಗ್ರೆಸ್ ನಾಯಕರು ಚಿಂತೆಗೆ ಬಿದ್ದಿದ್ದಾರಂತೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಬೇಕು, ಮರಳಿ ಅಧಿಕಾರ ಹಿಡಿಯಬೇಕು ಎಂಬ ಕಾರಣಕ್ಕಾಗಿ ಬಿಜೆಪಿ ವರಿಷ್ಠರು ಹೆಣೆದ ಬಲೆಯೇ ಈ
ಚಿಂತೆಗೆ ಕಾರಣ. ಅಂದ ಹಾಗೆ, ಕಾಂಗ್ರೆಸ್ ನಾಯಕರ ಈ ಚಿಂತೆಗೆ ಕಾರಣರಾದವರು ಕೇಂದ್ರ ಗೃಹ ಸಚಿವ ಅಮಿತ್ ಶಾ.

ಚುನಾವಣೆಯಲ್ಲಿ ಗೆಲ್ಲಬಲ್ಲ ಪಕ್ಷದ ಅಭ್ಯರ್ಥಿಗಳಷ್ಟೇ ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯ ಗಳಿಂದ ಗೆಲ್ಲಬಲ್ಲ ಅಭ್ಯರ್ಥಿಗಳನ್ನೂ ಅವರು ಗುರುತಿಸಿದ್ದಾರಂತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನೇರ ಹಣಾಹಣಿ ಇರುವಂಥ ಕಡೆ ಕಾಂಗ್ರೆಸ್ ಇಲ್ಲವೇ ಜೆಡಿಎಸ್‌ನ ಆಯ್ದ ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡಿ ಗೆಲ್ಲಿಸಿಕೊಳ್ಳುವುದು ಅಮಿತ್ ಶಾ ಹೆಣೆದ ಹೊಸ ರಣತಂತ್ರ. ಇದರ ಭಾಗವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಸುಮಾರು ೩೦ ಮಂದಿಯನ್ನು ಅವರು ಗುರುತಿಸಿದ್ದು ಈಗಾಗಲೇ ಅಂಥವರ ಜತೆ ಸಂಪರ್ಕದಲ್ಲಿದ್ದಾರೆ.

ಒಂದು ವೇಳೆ ಬಿಜೆಪಿ ಬಹುಮತ ಪಡೆಯದೆ, ಸರಕಾರ ರಚಿಸಲು ಇಪ್ಪತ್ತೋ ಮೂವತ್ತೋ ಸೀಟುಗಳ ಕೊರತೆಯಾದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯಗಳಿಂದ ಅಷ್ಟು ಮಂದಿಯನ್ನು ಎಳೆದುಕೊಳ್ಳು ವುದು ಶಾ ಅವರ ಯೋಜನೆ. ಅರ್ಥಾತ್, ಚುನಾವಣೆಗೂ ಮುನ್ನವೇ ವಿಪಕ್ಷಗಳ ಶಿಬಿರದಲ್ಲಿ ತಮಗೆ ಬೇಕಾದ ಸೈನಿಕರ ಪಡೆಯನ್ನು ಸಜ್ಜುಗೊಳಿಸಿಕೊಳ್ಳುವುದು ಶಾ ಲೆಕ್ಕಾಚಾರ. ಚುನಾವಣಾ ಫಲಿತಾಂಶ ಬಂದ ನಂತರ ಬೆಂಬಲಕ್ಕಾಗಿ ಕಾಂಗ್ರೆಸ್/ಜೆಡಿಎಸ್ ಪಾಳಯಗಳಿಂದ ಒಬ್ಬೊಬ್ಬ ಶಾಸಕರನ್ನೇ ಸೆಳೆಯಲು ಯತ್ನಿಸುವುದು, ಅದು ಎಲ್ಲರ ಹುಯಿಲಿಗೆ ಕಾರಣವಾಗುವುದು ಶಾ ಅವರಿಗಿಷ್ಟವಿಲ್ಲ. ಹೀಗಾಗಿ ಈ ಪಕ್ಷಗಳ ಆಯ್ದ ಅಭ್ಯರ್ಥಿಗಳ ಮೇಲೆ ಈಗಲೇ ಬಂಡವಾಳ ಹೂಡಿದರೆ, ಫಲಿತಾಂಶ ಬಂದ ನಂತರ ಅವರು ಬಿಜೆಪಿಗೆ ಬರಲು ತಾವಾಗಿಯೇ ಸಿದ್ಧರಿರುತ್ತಾರೆ.

ಅರ್ಥಾತ್, ಯುದ್ಧ ಗೆಲ್ಲುವ ಮುನ್ನವೇ ವಿರೋಧಿ ಸೈನ್ಯದಿಂದ ನಿಷ್ಠ ಸೈನಿಕರನ್ನು ಸಜ್ಜುಗೊಳಿಸಿಟ್ಟುಕೊಳ್ಳುವುದು ಶಾ ಅವರ ಗೇಮ್‌ಪ್ಲಾನ್. ಇದರ ವಿವರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚಿಂತಿತರಾಗಿದ್ದಾರೆ. ಏಕೆಂದರೆ, ಅಮಿತ್ ಶಾ ಸಂಪರ್ಕದಲ್ಲಿರುವ ಅಭ್ಯರ್ಥಿಗಳು ಯಾರೆಂದು ಪತ್ತೆಮಾಡುವುದು ಹೇಗೆ? ಅದೇ ರೀತಿ, ಶಾ ಆಯ್ಕೆ ಮಾಡಿಕೊಂಡಿರುವ ಇಂಥ ಅಭ್ಯರ್ಥಿಗಳ ಪೈಕಿ ಜೆಡಿಎಸ್‌ನವರು ಇದ್ದಾರಾದರೂ, ಕಾಂಗ್ರೆಸ್‌ ನವರ ಸಂಖ್ಯೆಯೇ ಹೆಚ್ಚು ಎಂಬುದು ನಿಸ್ಸಂಶಯ. ಹೀಗಾಗಿ ಈ ನಾಯಕರು ಚಿಂತೆಗೆ ಬಿದ್ದಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಎಲ್ಲ ರಾಜಕೀಯ ಪಕ್ಷಗಳೂ ಕಸರತ್ತು ನಡೆಸುವುದು ಸಹಜ. ಆದರೆ ಭವಿಷ್ಯದಲ್ಲಿ ತಮ್ಮ ಜತೆ ನಿಲ್ಲಬಹುದಾದವರನ್ನು ವಿಪಕ್ಷಗಳ ಪಾಳಯದಿಂದ ಈಗಲೇ ಹೆಕ್ಕಿ ತೆಗೆಯುವ ಶಾ ಅವರ ರಣನೀತಿ ಕರ್ನಾಟಕಕ್ಕಂತೂ ಹೊಸತು. ಪರಿಣಾಮ? ಮುಂದಿನ ವಿಧಾನಸಭಾ ಚುನಾವಣೆಯು ಬಿಜೆಪಿ ವಿರೋಧಿಗಳನ್ನು ಮಾತ್ರವಲ್ಲದೆ ಕರ್ನಾಟಕವನ್ನೇ ನಡುಗಿಸಲಿರುವುದು ಸ್ಪಷ್ಟ.

ಸಿಟ್ಟಿಗೆದ್ದ ಸೋಮಣ್ಣ ಈ ಮಧ್ಯೆ, ವಸತಿ ಖಾತೆ ಸಚಿವ ವಿ. ಸೋಮಣ್ಣ ಸಿಟ್ಟಿಗೆದ್ದಿದ್ದಾರೆ. ಕಳೆದ ವಾರ ಮಲೆಮಹದೇಶ್ವರ ಬೆಟ್ಟದಿಂದ ಪ್ರಾರಂಭವಾದ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯಲ್ಲಿ ತಮಗೆ ಪ್ರಾಮುಖ್ಯ ನೀಡಲಿಲ್ಲ ಎಂಬುದು ಈ ಸಿಟ್ಟಿಗೆ ಕಾರಣ. ಮಲೆಮಹದೇಶ್ವರ ಬೆಟ್ಟವಿರುವ ಚಾಮರಾಜನಗರ ಜಿಲ್ಲೆಗೆ ಸೋಮಣ್ಣ ಅವರೇ ಉಸ್ತುವಾರಿ ಸಚಿವರು. ಹೀಗಾಗಿ ಅಲ್ಲಿಂದ ಪ್ರಾರಂಭವಾಗುವ ಯಾತ್ರೆಯ ನೇತೃತ್ವವನ್ನು ತಮಗೇ ನೀಡಬೇಕಿತ್ತು ಎಂಬುದು ಅವರ ವಾದ. ಆದರೆ ಪಕ್ಷ ಈ ಕೆಲಸ ಮಾಡುವ ಬದಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಯಾತ್ರೆಯ ಸಾರಥ್ಯ ನೀಡಿದೆ. ಇದು ಸರಿಯಲ್ಲ ಎಂಬುದು ಸೋಮಣ್ಣ ಅವರ ಸಿಟ್ಟು.

ಇದರಾಳದಲ್ಲಿ ಮತ್ತಷ್ಟು ಟ್ವಿಸ್ಟ್‌ಗಳಿವೆ. ಅದೆಂದರೆ, ಈ ರಥಯಾತ್ರೆಯ ಸಾರಥ್ಯ ಸೋಮಣ್ಣ ಅವರಿಂದ ತಪ್ಪಿ ಈಶ್ವರಪ್ಪ ಅವರಿಗೆ ದಕ್ಕಲು ಮಾಜಿ ಸಿಎಂ ಯಡಿಯೂರಪ್ಪ ಕಾರಣ. ಸೋಮಣ್ಣ ವಿರುದ್ಧ ಕಳೆದೊಂದು ದಶಕದಿಂದ ಕಿಡಿಕಾರುತ್ತಿರುವ ಯಡಿಯೂರಪ್ಪ, ಸಂದರ್ಭ ಸಿಕ್ಕಾಗಲೆಲ್ಲ
ಅದನ್ನು ತೋರಿಸುತ್ತಲೇ ಇದ್ದಾರೆ. ಏಕೀ ಸಿಟ್ಟು ಎಂಬುದನ್ನು ನೋಡಲು ಹೋದರೆ, ಕಥೆ ಕೆಜೆಪಿಯ ಕಾಲಕ್ಕೆ ಹೋಗುತ್ತದೆ. ೨೦೧೩ರಲ್ಲಿ ಬಿಜೆಪಿ ತೊರೆದು ಕೆಜೆಪಿ ಪಕ್ಷ ಸೇರಿದ ಯಡಿಯೂರಪ್ಪ, ಬಿಜೆಪಿಯ ಘಟಾನುಘಟಿ ಲಿಂಗಾಯತ ನಾಯಕರನ್ನೆಲ್ಲ ತಮ್ಮೊಂದಿಗೆ ಕರೆದೊಯ್ಯಲು ಬಯಸಿದ್ದರು.
ಒಂದು ವೇಳೆ ಈ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಿದ್ದರೆ, ಬಿಜೆಪಿಯ ಸ್ಥಿತಿ ಮತ್ತಷ್ಟು ದಯನೀಯವಾಗುತ್ತಿತ್ತು.

ಯಡಿಯೂರಪ್ಪನವರ ಈ ಪ್ಲಾನು ಅರ್ಥವಾಗುತ್ತಿದ್ದಂತೆ ಸಂಘ ಪರಿವಾರದ ನಾಯಕರಾದ ಮೈ.ಚ. ಜಯದೇವ್ ಮತ್ತು ಬಿ.ಎಲ್. ಸಂತೋಷ್ ಅವರು ಸೋಮಣ್ಣ ಅವರನ್ನು ಸಂಪರ್ಕಿಸಿ, ‘ಪಕ್ಷದ ಲಿಂಗಾಯತ ನಾಯಕರನ್ನೆಲ್ಲ ಕೆಜೆಪಿಗೆ ಕರೆದೊಯ್ಯಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ
ಯತ್ನವನ್ನು ಹೇಗಾದರೂ ಮಾಡಿ ವಿಫಲಗೊಳಿಸಿ’ ಎಂದಾಗ ಫೀಲ್ಡಿಗಿಳಿದ ಸೋಮಣ್ಣ ತಮ್ಮ ಕರಾಮತ್ತು ತೋರಿಸಿದರು. ಅರ್ಥಾತ್, ಪಕ್ಷದಿಂದ ಹೊರಗೆ ಒಂದು ಕಾಲಿಟ್ಟಿದ್ದ ಹಲವು ನಾಯಕರು ಕಮಲ ಪಾಳಯದಲ್ಲೇ ಉಳಿಯುವಂತೆ ನೋಡಿಕೊಂಡರು. ಈ ಬೆಳವಣಿಗೆಗೆ ಕ್ರುದ್ಧರಾದ
ಯಡಿಯೂರಪ್ಪ ತಮ್ಮ ದಾರಿಗೆ ಅಡ್ಡನಿಂತ ಸೋಮಣ್ಣ ಅವರ ವಿರುದ್ಧ ಕಿಡಿಕಾರತೊಡಗಿದರು.

ಅಷ್ಟಕ್ಕೂ, ಅಂದು ಪಕ್ಷನಿಷ್ಠರಾಗಿ ಏನು ಮಾಡಬೇಕಿತ್ತೋ ಅದನ್ನೇ ಸೋಮಣ್ಣ ಮಾಡಿದ್ದರು. ಆದರೆ ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಯಡಿಯೂರಪ್ಪ ಹೆಜ್ಜೆಹೆಜ್ಜೆಗೂ ಸಿಟ್ಟು ತೋರಿಸತೊಡಗಿದರು. ೨೦೧೯ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ, ಸೋಮಣ್ಣ ಮಂತ್ರಿಯಾದರು. ಆ ಘಟ್ಟದಲ್ಲಿ ಮೈಸೂರು ಜಿಲ್ಲೆಯ ಉಸ್ತುವಾರಿ ಹೊತ್ತ ಸೋಮಣ್ಣ ದಸರಾ ಮಹೋತ್ಸವವು ಅಚ್ಚುಕಟ್ಟಾಗಿ ನಡೆಯಲು ಕಾರಣರಾದಾಗ ಖುದ್ದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೇ ತಾರೀಫ್ ಮಾಡಿದರಂತೆ.

ಆದರೆ ಇದಾದ ಒಂದೇ ವಾರದಲ್ಲಿ ಸೋಮಣ್ಣರನ್ನು ಮೈಸೂರು ಜಿಲ್ಲೆಯ ಉಸ್ತುವಾರಿಯಿಂದ ಕಿತ್ತು ಹಾಕಿದ ಯಡಿಯೂರಪ್ಪ ಚಾಮರಾಜನಗರಕ್ಕೆ ಎತ್ತಂಗಡಿ ಮಾಡಿದರು. ಸೋಮಣ್ಣ ಈ ಬೆಳವಣಿಗೆಯಿಂದ ನೊಂದರೂ ದೂಸ್ರಾ ಮಾತನಾಡಲಿಲ್ಲ; ಬದಲಿಗೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡತೊಡಗಿದರು. ಮುಂದೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೂ, ಸೋಮಣ್ಣರಿಗೆ
ಆಗುತ್ತಿದ್ದ ಕಿರುಕುಳ ತಪ್ಪಲಿಲ್ಲ. ಈ ಮಧ್ಯೆ, ತಮಗಿರುವ ಪುರಾತನ ಸಿಟ್ಟಿನ ಜತೆಗೆ ಲಿಂಗಾಯತ ನಾಯಕತ್ವದ ವಿಚಾರದಲ್ಲಿ ತಮ್ಮ ಮಗ ವಿಜಯೇಂದ್ರ ಅವರಿಗೆ ಸೋಮಣ್ಣ ಅಡ್ಡಗಾಲು ಎಂದು ಭಾವಿಸಿರುವ ಯಡಿಯೂರಪ್ಪ ಪುನಃ ತಮ್ಮ ಕರಾಮತ್ತು ತೋರಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾದ ಬಿಜೆಪಿಯ ವಿಜಯಸಂಕಲ್ಪ ರಥಯಾತ್ರೆಯ ಸಾರಥ್ಯ ಸೋಮಣ್ಣ ಅವರ ಕೈತಪ್ಪಿದ್ದಕ್ಕೆ  ಇದೇ ಕಾರಣ. ಪರಿಣಾಮ? ಸೋಮಣ್ಣ ಸಿಟ್ಟಿಗೆದ್ದಿದ್ದಾರೆ. ಈ ಸಿಟ್ಟನ್ನು ತಣಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಂದ ಹಿಡಿದು ಸಿಎಂ ಬಸವರಾಜ ಬೊಮ್ಮಾಯಿ ಅವರ ತನಕ ಹಲವರು ಯತ್ನಿಸಿರುವುದೇನೋ ನಿಜ. ಆದರೆ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ದ್ವೇಷ ಇರುವವರೆಗೆ ಈ
ಎಪಿಸೋಡ್‌ಗೆ ತಾರ್ಕಿಕ ಅಂತ್ಯ ಸಿಗುವುದಿಲ್ಲ. ಅಂದಹಾಗೆ, ಸೋಮಣ್ಣ ಎಲ್ಲೇ ಇದ್ದರೂ ಸ್ಥಿರಾಸ್ತಿ ಇದ್ದಂತೆ. ಹೀಗಾಗಿ ಬಿಜೆಪಿಯಲ್ಲಿ ಅವರಿಗಾಗುತ್ತಿರುವ ಕಿರುಕುಳದ ಲಾಭ ತಮ್ಮ ಪಕ್ಷಕ್ಕಾಗಲಿ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ‘ಹೈಟೆಕ್ ಗಾಳ’ ರೆಡಿ ಮಾಡಿದ್ದಾರಂತೆ.

ಮುಂದೇನಾಗುತ್ತದೋ ನೋಡಬೇಕು. ಸಂತೋಷ್ ಮೌನಕ್ಕೇನು ಕಾರಣ? ಅಂದಹಾಗೆ, ಸಂಘ ಪರಿವಾರದ ನಾಯಕ ಬಿ.ಎಲ್.ಸಂತೋಷ್ ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ. ಪಕ್ಷ ಮತ್ತು ಸರಕಾರ ನಡೆಸುವ ವಿಷಯದಲ್ಲಿ ಅವರು ಮೌನಿಯಾಗಿಲ್ಲವಾದರೂ, ಯಡಿಯೂರಪ್ಪ ಅವರ ವಿಷಯದಲ್ಲಿ ಮಾತ್ರ ಈ ಮೌನ ಜಾರಿಯಲ್ಲಿದೆ. ಅರ್ಥಾತ್, ಇವತ್ತು ಚುನಾವಣಾ ರಣಾಂಗಣದಲ್ಲಿ ಯಡಿಯೂರಪ್ಪ ಏನಾದರೂ ಹೇಳಿದರೆ ಆ
ಕುರಿತು ಸಂತೋಷ್ ವಿರೋಧದ ದನಿಯೆತ್ತುತ್ತಿಲ್ಲ. ಕಾರಣ? ಇದ್ದಕ್ಕಿದ್ದಂತೆ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಅವರಿಗೆ ಹೆಚ್ಚಿರುವ ಪ್ರಾಶಸ್ತ್ಯ.

ಯಡಿಯೂರಪ್ಪ ಅವರನ್ನು ದೂರವಿಟ್ಟು ತಾವು ಚುನಾವಣೆಗೆ ಹೋದರೆ ಪರಿಸ್ಥಿತಿ ಕಷ್ಟವಾಗಲಿದೆ ಎಂಬ ಮಾತನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ವಿಧಾನಸಭಾ ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪ ಅವರಿಗೆ ಭೀಷ್ಮನ ಪೋಷಾಕು ತೊಡಿಸಿ ಯುದ್ಧ ಮಾಡಿಸುವುದು ಬಿಜೆಪಿ ನಾಯಕರ ಯೋಚನೆ. ವರಿಷ್ಠರ ಮಟ್ಟದಲ್ಲಿ ಯಡಿಯೂರಪ್ಪ ಅವರಿಗೆ ಹೀಗೆ ಆದ್ಯತೆ ಸಿಕ್ಕಿರುವಾಗ ಅವರ ವಿರುದ್ಧ ತಾವು
ದನಿಯೆತ್ತುವುದು ಹೇಗೆ ಎಂಬುದು ಸಂತೋಷ್ ಚಿಂತೆ. ಇದೇ ಕಾರಣಕ್ಕಾಗಿ ಸೋಮಣ್ಣ ವಿರುದ್ಧ ಯಡಿಯೂರಪ್ಪ ಗದೆ ಬೀಸಿದರೂ ಬಿ.ಎಲ್. ಸಂತೋಷ್ ಅದನ್ನು ತಡೆಯಲು ಯತ್ನಿಸಿಲ್ಲ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ನೀಡುತ್ತಿರುವುದು ತಾತ್ಕಾಲಿಕ ಆದ್ಯತೆ. ಕರ್ನಾಟಕದ ಲಿಂಗಾಯತರಿಗೆ ಅವರೇ ನಾಯಕ ಎಂಬ ಮಾತನ್ನು ನೆಚ್ಚಿ ವರಿಷ್ಠರು ಈ ಪ್ರಾಶಸ್ತ್ಯ ನೀಡುತ್ತಿದ್ದಾರೆ. ವಸ್ತುಸ್ಥಿತಿ ಎಂದರೆ, ಕರ್ನಾಟಕದ ಲಿಂಗಾಯತ ಸೈನ್ಯ ಈಗ
ಮುಂಚಿನ ರೂಪದಲ್ಲಿಲ್ಲ. ಏಕೆಂದರೆ ತಮಗೆ ಒಳ ಮೀಸಲಾತಿ ನೀಡದ ಬಿಜೆಪಿಯ ವಿರುದ್ಧ ಪ್ರಬಲ ಪಂಚಮಸಾಲಿ ಸಮುದಾಯ ಸಿಟ್ಟಿಗೆದ್ದಿದೆ. ಹೀಗಾಗಿ ಅದರ ಗಣನೀಯ ಪ್ರಮಾಣದ ಮತಗಳು ಕಾಂಗ್ರೆಸ್ ಕಡೆ ವಾಲಲಿವೆ.

ಈಗಾಗಲೇ ಸ್ಥಳೀಯ ಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಗುರುತಿಸಿರುವ ಪಂಚಮಸಾಲಿ ಸಮುದಾಯ ಬಿಜೆಪಿಗೆ ದೊಡ್ಡಮಟ್ಟದಲ್ಲಿ ಕೈಕೊಡಲಿದೆ. ಇನ್ನು ಸಾದ-ಬಣಜಿಗ ಮತಬ್ಯಾಂಕುಗಳ ನಡುವೆ ಬಹುತೇಕ ಕಡೆ ಹಣಾಹಣಿ ಏರ್ಪಡುವ ಲಕ್ಷಣ ದಟ್ಟವಾಗಿದ್ದು, ಈ ಮತಬ್ಯಾಂಕುಗಳನ್ನು
ಒಂದುಗೂಡಿಸುವುದು ಈ ಸಲ ಕಷ್ಟದ ಕೆಲಸ. ಹೀಗೆ ನೋಡುತ್ತಾ ಹೋದರೆ ಲಿಂಗಾಯತ ಮತಬ್ಯಾಂಕ್ ಈ ಸಲ ಬಿಜೆಪಿಗೆ ದೊಡ್ಡಲಾಭ ತಂದುಕೊಡುವುದು ಕಷ್ಟ ಎಂಬುದು ಬಿಜೆಪಿ ಮೂಲಗಳ ವಾದ. ಈ ಬಗ್ಗೆ ಸಂತೋಷ್ ಅವರಿಗೂ ಸಹಮತವಿದೆ. ಆದರೆ ವರಿಷ್ಠರು ಯಡಿಯೂರಪ್ಪ ಅವರ ಮೂಲಕ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಲಾಭ ಮಾಡಿಕೊಳ್ಳುವ ಮನಃಸ್ಥಿತಿಯಲ್ಲಿರುವುದರಿಂದ ಸಂತೋಷ್ ಅವರು ವಿರೋಧ ವ್ಯಕ್ತಪಡಿಸದೆ ಮೌನವಾಗಿದ್ದಾರೆ.