ಲೈಫ್‌ಸೈನ್ಸ್ ಜೊತೆ ಅಪೊಲೊ ಪಾಲುದಾರಿಕೆ
ನವದೆಹಲಿ: ಟರ್ಕಿಯಲ್ಲಿ ಇತ್ತೀಚಿಗೆ ಸಂಭವಿಸಿದ ಪ್ರಬಲ ಭೂಕಂಪವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈ ನೈಸರ್ಗಿಕ ದುರಂತದಲ್ಲಿ ಇತರ ಸಾವಿರಾರು ಜನರೂ ಗಾಯ ಗೊಂಡಿದ್ದಾರೆ.
ದುರಂತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯಾಚರಣೆ ಹಂತವು ಪೂರ್ಣಗೊಂಡಿದ್ದರೂ, ನೈಸರ್ಗಿಕ ವಿಕೋಪದಿಂದ ಚೇತರಿಸಿಕೊಳ್ಳುವ ಮತ್ತು ಪುನರ್ವಸತಿ ಕಾರ್ಯಾಚರಣೆಯು ಈಗಷ್ಟೇ ಪ್ರಾರಂಭವಾಗಿದೆ. ಅನೇಕ ಆಸ್ಪತ್ರೆಗಳು ನಾಶಗೊಂಡಿವೆ. ಇತರ ಹಲವು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿಲ್ಲ. ಸೇವೆಗೆ ಲಭ್ಯ ಇರುವ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಯ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ.
ಈ ಬಿಕ್ಕಟ್ಟಿನ ಸಮಯದಲ್ಲಿ ಟರ್ಕಿ ದೇಶವನ್ನು ಬೆಂಬಲಿಸಲು, ರೋಗಿಗಳ ದೇಹಸ್ಥಿತಿ ಮೇಲೆ ದೂರದಿಂದಲೇ ನಿಗಾ ಇರಿಸುವುದಕ್ಕೆ ನೆರವಾಗಲು 1000 ರಿಮೋಟ್ ಪೇಷಂಟ್ ಮಾನಿಟರಿಂಗ್ ಪ್ಯಾಚ್‌ಗಳನ್ನು ದಾನ ಮಾಡಲು ಅಪೊಲೊ ಹಾಸ್ಪಿಟಲ್ಸ್ ಮತ್ತು ಲೈಫ್‌ಸೈನ್ಸ್ (LifeSigns) ಪಾಲುದಾರಿಕೆ ಮಾಡಿಕೊಂಡಿವೆ. ಹೃದಯದ ಬಡಿತ ಸೇರಿದಂತೆ ರೋಗಿಗಳ ದೇಹಸ್ಥಿತಿಯ ಪ್ರಮುಖ ಲಕ್ಷಣಗಳ ಮೇಲೆ ನಿಗಾ ಇರಿಸುವ ವೈದ್ಯಕೀಯ ಸಾಧನಗಳಲ್ಲಿ ಈ ಪ್ಯಾಚ್‌ಗಳನ್ನು ಬಳಸಬಹುದು. ರೋಗಿಯ ಹೃದಯ ಬಡಿತ, ಇಸಿಜಿ ಲಯ, ಉಸಿರಾಟದ ದರ, ದೇಹದ ಉಷ್ಣತೆಯ ಮೇಲೆ ವೈದ್ಯರು ವಿಶ್ವಾಸಾರ್ಹವಾಗಿ ನಿಗಾ ಇರಿಸಲು ಈ ಪ್ಯಾಚ್‌ಗಳು ನೆರವಾಗಲಿವೆ. ರಕ್ತದಲ್ಲಿನ ಆಮ್ಲಜನಕದ ಮಟ್ಟದ ಮೇಲೆ ನಿಗಾ ಇರಿಸುವ ಸಾಧನಗಳಿಗೆ ಸಂಪರ್ಕ ಕಲ್ಪಿಸುವುದಕ್ಕೂ ಇವುಗಳನ್ನು ಬಳಸಬಹುದು. ರೋಗಿಗಳಿಗೆ ತೀವ್ರ ನಿಗಾ ಆರೈಕೆಯ ಹಾಸಿಗೆಗಳನ್ನು ಒದಗಿಸುವ ಅನಿವಾರ್ಯತೆಯನ್ನು ಇವುಗಳು ದೂರ ಮಾಡುತ್ತವೆ. ಆಸ್ಪತ್ರೆಗಳ ಹೊರಗೆ ಅಥವಾ ಬಯಲು ಪ್ರದೇಶದಲ್ಲಿಯೇ ಆರೈಕೆಯ ಅಗತ್ಯವಿರುವವರಿಗೂ ಈ ಪ್ಯಾಚ್‌ಗಳನ್ನು ಬಳಸಬಹುದು.
ಹೆಚ್ಚಿನ ಜೀವಹಾನಿ ತಪ್ಪಿಸಲು ವ್ಯಕ್ತಿಯ ಪ್ರಮುಖ ಅಂಗಗಳ ಸಮರ್ಪಕ ಕಾರ್ಯನಿರ್ವಹಣೆಯನ್ನು ಸೂಕ್ತ ಸಮಯದಲ್ಲಿ ಮೇಲ್ವಿಚಾರಣೆ ಮಾಡುವ ಅಗತ್ಯ ಇರುತ್ತದೆ. ವಿಶೇಷವಾಗಿ ರೋಗಿಗಳಿಗೆ ಕನಿಷ್ಠ ಸಾಮಾನ್ಯ ಆರೈಕೆ ಮತ್ತು ಔಷಧಿಗಳೂ ದೊರೆಯದಿರುವ ಸಂಕಷ್ಟದ ಸಮಯದಲ್ಲಿ ಮತ್ತು ಹಠಾತ್ತಾಗಿ ಎದುರಾದ ಅಪಾರ ನಷ್ಟದಿಂದ ಅವರು ತೀವ್ರ ಸ್ವರೂಪದ ಒತ್ತಡವನ್ನು ಎದುರಿಸುತ್ತಿರುವಾಗ ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸುವುದು ತುಂಬ ಮಹತ್ವದ್ದಾಗಿರುತ್ತದೆ.
ಅಪೊಲೊ ಹಾಸ್ಪಿಟಲ್ಸ್‌ನ ಡಾ. ಸಾಯಿ ಪ್ರವೀಣ್ ಹರನಾಥ್ ಅವರು ಈ ಬಗ್ಗೆ ಮಾತನಾಡಿ, ’ಸಕಾಲದಲ್ಲಿ ಚಿಕಿತ್ಸೆ ನಿರೀಕ್ಷಿಸುತ್ತಿರುವ ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸುವುದಕ್ಕೆ ಸಹಾಯ ಮಾಡುವ ತೀವ್ರ ನಿಗಾದ ನಮ್ಮ ಸಂಪೂರ್ಣ ಘಟಕದ ಸಹಾಯ, ಉಪ–ಪರಿಣತ ತಂಡಗಳ ವೈದ್ಯಕೀಯ ನೆರವು ಮತ್ತು ಮಾರ್ಗದರ್ಶನದ ಅಗತ್ಯವಿರುವ ಈ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಲು ಅಪೊಲೊ ಹಾಸ್ಪಿಟಲ್ಸ್‌ಗಳು ಸನ್ನದ್ಧ ಸ್ಥಿತಿಯಲ್ಲಿ ಇವೆ’ ಎಂದು ಹೇಳಿದ್ದಾರೆ.
ಪೇಷಂಟ್ ಮಾನಿಟರಿಂಗ್ ಪ್ಯಾಚ್‌ಗಳನ್ನು ದಾನ ಮಾಡಿರುವ ಲೈಫ್‌ಸೈನ್ಸ್‌ನ ಸ್ಥಾಪಕ ಮತ್ತು ನಿರ್ದೇಶಕ ಹರಿ ಸುಬ್ರಮಣ್ಯಂ ಅವರಿಗೆ ನಿರ್ಣಾಯಕ ಸಂದರ್ಭದಲ್ಲಿ ಇಂತಹ ಸಾಧನದ ಅಗತ್ಯವು ಸಂಪೂರ್ಣವಾಗಿ ಮನದಟ್ಟಾಗಿದೆ. ‘ವ್ಯಕ್ತಿಯ ವಿವಿಧ ಅಂಗಾಂಗಳ ಪ್ರಮುಖ ಲಕ್ಷಣಗಳ ಮೇಲೆ ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ನಿಗಾ ಇರಿಸುವುದು ತುಂಬ ಮಹತ್ವದ್ದಾಗಿರುತ್ತದೆ. ರೋಗಿಗಳಿಗೆ ಆಗುವ ಹಾನಿ ತಡೆಗಟ್ಟಲು ಮತ್ತು ಕಾಯಿಲೆ ಗುಣಪಡಿಸುವಿಕೆಯನ್ನು ಉತ್ತೇಜಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ನಮ್ಮ ವೈದ್ಯಕೀಯ ಸಾಧನಗಳು ವೈದ್ಯರಿಗೆ ನೆರವಾಗುತ್ತವೆ ಎನ್ನುವುದರಲ್ಲಿ ನಾವು ಯಾವಾಗಲೂ ನಂಬಿಕೆ ಇರಿಸಿದ್ದೇವೆ’ ಎಂದು ಹೇಳಿದ್ದಾರೆ.
ಟರ್ಕಿಯ ವೈದ್ಯಕೀಯ ಸಂಘದ ಕೇಂದ್ರೀಯ ಮಂಡಳಿಯ (ಎಂಎಸಿಸಿ) ಪ್ರಧಾನ ಕಾರ್ಯದರ್ಶಿ ಪ್ರೊ. ವೇದತ್ ಬುಲುತ್ ಅವರು ಪ್ರತಿಕ್ರಿಯಿಸಿ, ‘ಮಾನವೀಯ ಆರೋಗ್ಯ ನೆರವು ಮತ್ತು ‘ಎಂಎಸಿಸಿ’ ಬಗ್ಗೆ ಅಪೊಲೊ ಹಾಸ್ಪಿಟಲ್ಸ್ ಸಮೂಹ ತೋರಿದ ಒಗ್ಗಟ್ಟಿಗೆ ಟರ್ಕಿಯ ವೈದ್ಯಕೀಯ ಸಂಘದ ಪರವಾಗಿ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವ ಎಲ್ಲಾ ಪ್ರಯತ್ನಗಳು ಅಮೂಲ್ಯವಾಗಿವೆ. ವಿಪತ್ತು ಸಂಭವಿಸಿದ ವಲಯದಲ್ಲಿ ಅದಾನ ವೈದ್ಯಕೀಯ ಚೇಂಬರ್, ಸರಕು ಸಾಗಣೆ ನಿರ್ವಹಿಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಬಗೆಯ ವೈದ್ಯಕೀಯ ಸರಬರಾಜುಗಳನ್ನು ಅದಾನದಿಂದ ಇತರ ನಗರಗಳಿಗೆ ವಿತರಿಸಲಾಗುತ್ತಿದೆ. ನಿರ್ದಿಷ್ಟವಾಗಿ, ನಾಲ್ಕು ನಗರಗಳು ಭಾರಿ ಪ್ರಮಾಣದಲ್ಲಿ ಹಾನಿಗೆ ಒಳಗಾಗಿವೆ. ಈ ನಗರಗಳಲ್ಲಿ ವೈದ್ಯಕೀಯ ಚೇಂಬರ್‌ಗಳ ಕಟ್ಟಡಗಳು ಸಹ ಕುಸಿದು ಬಿದ್ದಿವೆ’ ಎಂದು ಹೇಳಿದ್ದಾರೆ.
ವಿಕಿರಣ ಕ್ಯಾನ್ಸರ್ ತಜ್ಞರು ಮತ್ತು ಅದಾನ ವೈದ್ಯಕೀಯ ಚೇಂಬರ್‌ನ ಅಧ್ಯಕ್ಷರಾಗಿರುವ ಡಾ ಸೆಲಾಹತಿನ್ ಮೆಂಟೆಸ್ ಅವರು ಮಾತನಾಡಿ, ‘1,5 ಕೋಟಿ ಜನರು ಸೇರಿದಂತೆ ಒಟ್ಟು 11 ಪ್ರಾಂತ್ಯಗಳ ಮೇಲೆ ಭೀಕರ ಪರಿಣಾಮ ಬೀರಿದ ಭೂಕಂಪದ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಸಮುದಾಯ ತೋರಿದ ಒಗ್ಗಟ್ಟಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು’ ಎಂದು ಹೇಳಿದ್ದಾರೆ.
‘ದುರಂತದ ದುಃಸ್ವಪ್ನದಿಂದ ಹೊರಬಂದು ನಡೆಯುತ್ತಿರುವ ಚೇತರಿಸಿಕೊಳ್ಳುವ ಮತ್ತು ಪುನರ್ವಸತಿ ಕಾರ್ಯಾಚರಣೆಯ ಪ್ರಯತ್ನಗಳು ಹಲವಾರು ದೇಶಗಳಲ್ಲಿ ವ್ಯಾಪಿಸಿರುವ ಸ್ವಯಂಸೇವಕರ ಅಂತರರಾಷ್ಟ್ರೀಯ ಜಾಲದ ಮೂಲಕ ಸಾಧ್ಯವಾಗಿದೆ. ಈ ನೈಸರ್ಗಿಕ ಪ್ರಕೋಪಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಈಗಾಗಲೇ ನಿಭಾಯಿಸುತ್ತಿರುವ ಟರ್ಕಿಯ ಕಾರ್ಯನಿರತ ವೈದ್ಯರಿಂದ ತೀವ್ರ ಸ್ವರೂಪದ ಸಮನ್ವಯ ಮತ್ತು ಸಹಕಾರದ ಅಗತ್ಯವಿದೆ. ಸಾಧನಗಳು ಮತ್ತು ಪರಿಣತಿಯ ಈ ದೇಣಿಗೆಯು ಈ ಎರಡೂ ಮಹಾನ್ ದೇಶಗಳ ನಡುವೆ ವೈದ್ಯಕೀಯ ಸೇತುವೆ ನಿರ್ಮಿಸಲು ಮತ್ತು ದುಃಖ ನಿವಾರಿಸಲು ನೆರವಾಗಲಿದೆ ಎಂದು ನಾವು ಭಾವಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.