ನವದೆಹಲಿ: ಇಂದು ಮುಂಗಾರು ಅಧಿವೇಶನ ಶುರುವಾದ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸದರು ಸೇರಿದಂತೆ ಎಲ್ಲರಿಗೂ ಕರೊನಾ ಪರೀಕ್ಷೆ ಕಡ್ಡಾಯವಾಗಿದೆ.
ಸಂಸದರನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಂತ್ಕುಮಾರ್ ಹೆಗಡೆ ಸೇರಿದಂತೆ 17 ಮಂದಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸಂಸದ ಅನಂತ್ಕುಮಾರ್ ಅವರು ಕಳೆದ ಶುಕ್ರವಾರ ಅವರು ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನದ ಮೂಲಕ ತೆರಳಿದ್ದರು. ಅಲ್ಲಿ ತಲುಪಿದ ಬಳಿಕ ಎನ್ ಐಸಿಪಿಆರ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.
ತಮಗೆ ಯಾವುದೇ ರೀತಿಯಲ್ಲಿಯೂ ಸೋಂಕಿನ ಲಕ್ಷಣಗಳು ಇಲ್ಲ. ಆದರೂ ಪಾಸಿಟಿವ್ ಬಂದಿದೆ ಎಂದು ಅನಂತ್ಕುಮಾರ್ ಹೇಳಿದ್ದಾರೆ. ಸದ್ಯ ಇವರು ದೆಹಲಿಯ ನಿವಾಸದಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ನಡುವೆಯೇ, ಅಧಿವೇಶನದಲ್ಲಿ ಹಾಜರು ಆಗಹೊರಟಿದ್ದ ಸಂಸದರನ್ನು ಪರೀಕ್ಷೆ ಮಾಡಿದಾಗ 16 ಮಂದಿಗೆ ಕರೊನಾ ಪಾಸಿಟಿವ್ ಬಂದಿದೆ.
ಇವರ ಪೈಕಿ, ಅತ್ಯಧಿಕ ಕರೊನಾ ಪಾಸಿಟಿವ್ ಬಂದಿರುವುದು ಬಿಜೆಪಿ ಸಂಸದರಿಗೆ. 12 ಮಂದಿ ಬಿಜೆಪಿ ಸಂಸದರು, ಇಬ್ಬರು ವೈಎಸ್ಆರ್ ಕಾಂಗ್ರೆಸ್ ಹಾಗೂ ತಲಾ ಒಬ್ಬರು ಶಿವ ಸೇನಾ, ಡಿಎಂಕೆ ಹಾಗೂ ಆರ್ಎಲ್ಪಿ ಎಂದು ಮೂಲಗಳು ತಿಳಿಸಿವೆ.