Friday, 22nd November 2024

ಬಿಜೆಪಿಗೆ ಬಾಹ್ಯ ಬೆಂಬಲ: ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಸದ್ಯಕ್ಕೆ ಬಾಹ್ಯ ಬೆಂಬಲ ಘೋಷಿಸಿದರು.

ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಮಲತಾ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ. ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಯತ್ತ ಮುನ್ನಡೆಯುತ್ತಿದೆ. ಮೋದಿ ನಾಯಕತ್ವವನ್ನು ನಾನು ನಂಬಿದ್ದೇನೆ. ಈ ಕಾರಣಕ್ಕಾಗಿ ನಾನು ಬಿಜೆಪಿಗೆ ನಾನು ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಿಸಿದರು.

ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟ ಅವರು, ಮೋದಿ ನಾಯಕತ್ವದಲ್ಲಿ ಮಾತ್ರವೇ ದೇಶದಲ್ಲಿ ಅಭಿವೃದ್ಧಿ ಸಾಧ್ಯ. ನನ್ನ ಹಲವು ಹೋಜನೆ ಗಳಿಗೆ ಕೇಂದ್ರದಿಂದ ಅಪಾರ ನೆರವು ಸಿಕ್ಕಿದೆ. ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇನೆ. ಬದಲಾವಣೆಗಾಗಿ ನನಗೆ ಇನ್ನಷ್ಟು ಶಕ್ತಿಯ ಅಗತ್ಯವಿದೆ ಎಂದು ಹೇಳುವ ಮೂಲಕ ಬಾಹ್ಯ ಬೆಂಬಲ ಘೋಷಣೆ ಮಾಡಿದರು.

ನಾನೆಂದೂ ಕಳಂಕ ತರುವ ಕೆಲಸ ಮಾಡುವುದಿಲ್ಲ. ನಾನು ರಾಜಕಾರಣ ಬಿಡುತ್ತೇನೆ ಹೊರತು ಸ್ವಾಭಿಮಾನ ಬಿಡಲ್ಲ. ಪ್ರಾಣ ಬಿಟ್ಟರು ಕೂಡ ನಾನು ಮಂಡ್ಯ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.