Sunday, 10th November 2024

ಅಪರಾಧ, ಸಮಾಜಘಾತಕ ಚಟುವಟಿಕೆಗಳಲ್ಲಿ ರಾಜಕಾರಣ ಶೋಭೆಯಲ್ಲ

ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಸಮಾಜದಲ್ಲಿ ದಿನೇ ದಿನೇ ಅಪರಾಧ, ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಅಕ್ರಮ ಕಳ್ಳ ಸಾಗಾಣಿಕೆ, ಮಾದಕ ವಸ್ತುಗಳು ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತಿದೆ. ಇಂತಹ ಪ್ರಕರಣಗಳನ್ನು ಪ್ರಸ್ತುತ ಪೊಲೀಸ್ ಇಲಾಖೆ ಪೈಪೋಟಿಗೆ ಇಳಿದಂತೆ ಪತ್ತೆ ಹಚ್ಚಲು ಕಾರಣಗಳೂ ಇಲ್ಲದಿಲ್ಲ. ಸ್ಯಾಂಡಲ್’ವುಡ್, ಕಿರುತೆರೆ ರಂಗಕ್ಕೆ ಅಂಟಿ ಕೊಂಡಿರುವ ಮಾದಕ ವಸ್ತುವಿನ ಘಾಟು ಇಂತಹ ದಂಧೆಯ ಬುಡವನ್ನೇ ಅಲ್ಲಾಡಿಸಿದೆ.

ಹಾಗಾದರೆ ಇಂತಹ ದಂಧೆಗಳು ಈ ಹಿಂದೆಯೂ ನಡೆಯುತ್ತಿರಲಿಲ್ಲವೇ ಅಂದರೆ ಆಗಲೂ ನಡೆಯುತ್ತಿತ್ತು. ಆದರೆ ಅಲ್ಲೊಂದು ಇಲ್ಲೊಂದು ಪ್ರಕರಣಗಳಷ್ಟೇ ಬೆಳಕಿಗೆ ಬರುತ್ತಿದ್ದವು. ದುಷ್ಕೃತ್ಯಕ್ಕೆ ಪ್ರೇರಣೆ ನೀಡುವ ಮಾದಕ ವಸ್ತುವಿನ ಜಾಲ ಭಯೋತ್ಪಾ
ದನಾ ಚಟುವಟಿಕೆಯಷ್ಟೇ ಸಮಾನವಾದುದು.ಇಂತಹದ್ದೊಂದು ದಂಧೆಗೆ ಅಂಡರ್‍ ವರ್ಲ್ಡ್‌, ಬಾಲಿವುಡ್, ರಾಜಕಾರಣ, ಉನ್ನತ ಮಟ್ಟದ ಸಂಪರ್ಕವಿರುವುದರಿಂದ ಪ್ರಕರಣಗಳು ಪತ್ತೆಯಾಗಿ ಕೇಸು ದಾಖಲಾಗಬೇಕೆನ್ನುವಷ್ಟರಲ್ಲಿ ಪ್ರಭಾವ, ಒತ್ತಡ ಗಳು ಪೊಲೀಸ್ ಇಲಾಖೆಯ ಕೈ ಕಟ್ಟಿ ಹಾಕುತ್ತವೆ. ಆದರೂ ಇಲಾಖೆಯಲ್ಲಿರುವ ಹಲವಾರು ದಕ್ಷ ಅಧಿಕಾರಿಗಳು ಇಂತಹ ಶಕ್ತಿಗಳ ಹೆಡೆಮುರಿ ಕಟ್ಟಿ ರಾಜಕಾರಣಿ, ಪ್ರಭಾವಿಗಳಿಂದ ವರ್ಗಾವಣೆ, ಹಿಂಬಡ್ತಿಯ ಶಿಕ್ಷೆ, ಹಿಂಸೆ ಅನುಭವಿಸಿದ ನಿದರ್ಶನಗಳೂ ಇವೆ.

ಇಂದು ಯಾವುದೇ ಒಂದು ದುರ್ಘಟನೆ, ವಿದ್ಯಮಾನಗಳು ಘಟಿಸಿದರೂ ರಾಜಕಾರಣ ಪ್ರವೇಶ ಪಡೆಯುವುದರಿಂದ ಅಪರಾಧ ಪ್ರಕರಣಗಳಿಗೆ ಹೆಚ್ಚು ಕುಮ್ಮಕ್ಕು ನೀಡಿದಂತಾಗುತ್ತದೆ. ಒಬ್ಬ ಲಂಚ ಸ್ವೀಕರಿಸಿದ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದರೆ ಆತ ಒಂದು ತಿಂಗಳಲ್ಲಿ ಜಾಮೀನು ಪಡೆದು ಹೊರಬಂದು ಹುದ್ದೆಯಲ್ಲಿ ಮುಂಬಡ್ತಿ ಪಡೆದು ಕರ್ತವ್ಯ ನಿರ್ವಹಿಸು ತ್ತಾನೆಂದರೆ, ಕೋಟ್ಯಂತರ ರುಪಾಯಿ ವಂಚಿಸಿದ ಸಂಸ್ಥೆಯೊಂದು ಸಾಕ್ಷಿ ಸಮೇತ ಇ.ಡಿ ಬಲೆಗೆ ಬಿದ್ದು ಆ ಪ್ರಕರಣದಿಂದ ಪಾರಾ ಗುತ್ತದೆ ಅಂದರೆ, ಒಬ್ಬ ಅತ್ಯಾಚಾರಿ, ಕೊಲೆಗಡುಕ ಸಾಕ್ಷಿ ಸಮೇತ ಸಿಕ್ಕಿ ಬಿದ್ದು ಕೆಲ ತಿಂಗಳಲ್ಲಿ ಹೊರಬಂದು ರಾಜಾರೋಷ ವಾಗಿ ತಿರುಗಾಡುತ್ತಾನೆಂದರೆ ಇದರ ಹಿಂದೆ ಒಂದು ಬಲವಾದ ಶಕ್ತಿ ಕೆಲಸ ಮಾಡಿರಲೇ ಬೇಕಲ್ಲವೇ? ಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಇಂದು ಕೈಯ್ಯಾಡಿಸದ ಕ್ಷೇತ್ರಗಳೇ ಇಲ್ಲ.

ಇಂತಹ ಪ್ರಕರಣಗಳಲ್ಲಿ ಪಕ್ಷಬೇಧ ಮರೆತು ಪಕ್ಷಾತೀತವಾಗಿ ಬೆಂಬಲ ನೀಡುವ ವ್ಯವಸ್ಥೆಗಳಿರುವುದರಿಂದ ಮತ್ತು ಇತ್ತೀಚಿಗೆ ನಟಿಮಣಿಯರ ಹಿಂದೆ ಸುತ್ತಿಕೊಂಡಿರುವ ಗಾಂಜಾ ನಂಟಿಗೆ ಹೆಚ್ಚಿನ ಶಿಕ್ಷೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾಕ್ಷ್ಯ ನಾಶ, ಆರೋಪಿಗಳಿಗೆ ಐಶಾರಾಮಿ ವ್ಯವಸ್ಥೆ, ಜಾಮೀನು ವ್ಯವಸ್ಥೆಗಳನ್ನು ಒದಗಿಸಲು ರಾಜಕಾರಣಿಗಳು ತಾ ಮುಂದು ನಾ ಮುಂದು ಎಂಬಂತೆ ವರ್ತಿಸುತ್ತಿದ್ದು, ಏಕೆಂದರೆ ಇವರಿಗೆ ಚುನಾವಣಾ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರು ಇವರೇ ಆಗಿರುವುದರಿಂದ ಮತ್ತು ಈ ಪ್ರಕರಣದಲ್ಲಿ ಎಲ್ಲಾ ಪಕ್ಷಗಳ ಡಜನ್ ಗಟ್ಟಲೆ ನಾಯಕರ ಪಾತ್ರ, ಸಂಪರ್ಕದ ಕೊಂಡಿ ಇರುವುದರಿಂದ ಯಾವುದೇ ಅಪರಾಧ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಪ್ರಮುಖವಾಗಿ ಅಭಿವೃದ್ಧಿ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕಲೆ, ಸಂಸ್ಕೃತಿ, ಕ್ರೀಡೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕಾರಣ ಮತ್ತು ಮೂಗು ತೂರಿಸಬಾರದು. ಅಪರಾಧ, ಸಮಾಜಘಾತುಕ ಚಟುವಟಿಕೆಗಳಲ್ಲಿ ಕೈ ಜೋಡಿಸುವುದು ಕೂಡ ಒಂದರ್ಥದಲ್ಲಿ ದೇಶದ್ರೋಹಕ್ಕೆ ಸಮಾನವಾದುದು.