Saturday, 23rd November 2024

ರಾಹುಲ್ ಗಾಂಧಿ ಹೇಳಿಕೆಗೆ ಗದ್ದಲ: ರಾಜ್ಯಸಭೆಯ ಕಲಾಪ ಮುಂದೂಡಿಕೆ

ನವದೆಹಲಿ: ಲಂಡನ್ನಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತದ ಪ್ರಜಾ ಪ್ರಭುತ್ವದ ಮೂಲ ರಚನೆಗೆ ಗಂಭೀರ ಸ್ವರೂಪದ ಅಪಾಯ ಬಂದೆರಗಿದೆ’ ಎಂಬ ಹೇಳಿಕೆ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಸಂಸದರು ಗದ್ದಲ ಎಬ್ಬಿಸಿದ ನಂತರ ರಾಜ್ಯಸಭೆಯ ಕಲಾಪವನ್ನು ಮುಂದೂ ಡಲಾಯಿತು.
ಸದನದ ನಾಯಕ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಲಂಡನ್ನಲ್ಲಿ ನೀಡಿದ ಹೇಳಿಕೆಗಳಿಗಾಗಿ ಸದನಕ್ಕೆ ಬಂದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಇಂದಿರಾ ಗಾಂಧಿಯವರ ಹೆಸರನ್ನು ತೆಗೆದು ಕೊಳ್ಳದೆ ಗೋಯಲ್ ಅವರು, ‘ತುರ್ತು ಪರಿಸ್ಥಿತಿ ವೇಳೆ ಮತ್ತು ಕಾಂಗ್ರೆಸ್ ನಾಯಕರು ಶಾಸನದ ಪ್ರತಿಯನ್ನು ಹರಿದು ಹಾಕಿದಾಗ ಭಾರತೀಯ ಪ್ರಜಾಪ್ರಭುತ್ವ ಅಪಾಯದಲ್ಲಿತ್ತು’ ಎಂದು ಹೇಳಿದರು.
ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು, ‘ರಾಜ್ಯಸಭಾ ಸದಸ್ಯರಲ್ಲದ ನಾಯಕರನ್ನು ಸದನಕ್ಕೆ ಕರೆಯಬೇಕೆಂಬ ಬೇಡಿಕೆ ಖಂಡನೀಯ’ ಎಂದರು. ಖರ್ಗೆ ಅವರು, ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ನೆನಪಿಸಿ ಕೊಂಡರು.
ಆದರೆ, ಆಡಳಿತಾರೂಢ ಪಕ್ಷದ ಸದಸ್ಯರು ಅದಕ್ಕೆ ಅಡ್ಡಿಪಡಿಸಿದವು. ಈ ಹಂತದಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಸದನದ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.