ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@gmail.com
Tryst with destiny ಭಾರತ ಸ್ವತಂತ್ರವಾದ ಸಮಯದಲ್ಲಿ, ಜವಾಹರ್ ಲಾಲ್ ನೆಹರು ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಮತ್ತು ಭಾರತದ ಭವಿಷ್ಯದ ಕುರಿತು ಭಾಷಣ ಸಾಗಿತ್ತು. ‘ಬಹಳ ವರ್ಷಗಳ ಹಿಂದೆ ವಿಧಿಯ ಜತೆ ಸರಸವಾಡಲು ನಿರ್ಧರಿಸಿದೆವು. ಅದು ಈಗ ಸಂಪೂರ್ಣ ಅರ್ಥ ಪಡೆದುಕೊಳ್ಳುತ್ತಿದೆ. ಪೂರ್ಣ ಪ್ರಮಾಣದಲ್ಲಿ ನಮ್ಮ ಮಾತನ್ನು ನಾವೀಗ ಉಳಿಸಿಕೊಳ್ಳುತ್ತಿದ್ದೇವೆ. ಮಧ್ಯರಾತ್ರಿಯ ವೇಳೆಯಲ್ಲಿ, ಯಾವಾಗ ಇಡೀ ಪ್ರಪಂಚ ಮಲಗಿರುತ್ತೋ ಆಗ ಭಾರತ ತನ್ನ ಜೀವನ ಹಾಗೂ ಸ್ವಾತಂತ್ರ್ಯಕ್ಕೋಸ್ಕರ ಎದ್ದಿರುತ್ತೆ; ಆ ಕ್ಷಣ ಬರುತ್ತದೆ ಎಂದಿದ್ದೆವು.
ನೆನಪಿಡಿ ಅಂಥ ಅಪರೂಪದ ಕ್ಷಣ ಈಗ ಬಂದಿದೆ. ಯಾವಾಗ ನಾವು ಹಳತಿನಿಂದ ಹೊಸತನಕ್ಕೆ ಕಾಲಿಡುತ್ತೇವೋ, ಒಂದಿಡೀ ಯುಗ ಮುಗಿದು ಹೊಸತೊಂದು ಆರಂಭವಾಗಿರುತ್ತದೆ. ಮತ್ತು ಹತ್ತಿಕ್ಕಲಾದಂತಹ ದೇಶದ ಅಂತರಾತ್ಮ ತನ್ನದೇ ಆದ ಹೇಳಿಕೆಗಳನ್ನು ಕಂಡುಕೊಂಡಾಗ…’ ಹೀಗೆಂದು ಮಾತನಾಡುತ್ತ ಹೋಗುತ್ತಾರೆ.
ಹೇಳಬೇಕೆಂದರೆ, ನೆಹರುರನ್ನು ಸೀಲೋಲ, ಹಲವಾರು ಪ್ರಮಾದಗಳ ಕಾರಣೀಕರ್ತ ಎಂದು ಎಷ್ಟೇ ಹೇಳಿದರೂ, ಅವರಲ್ಲೂ ಭಾರತವನ್ನು ಆಧುನಿಕ ದೇಶವನ್ನಾಗಿ ಮಾಡುವ ಅದಮ್ಯ ಕನಸುಗಳಿದ್ದವು. ಯಾರು ಏನೇ ಅಂದರೂ ಅವರು ನಮ್ಮ ದೇಶದ ಮೊದಲ ಪ್ರಧಾನಿ ತಾನೇ?! ಇಷ್ಟೆಲ್ಲ ನೆನಪಾಗಿದ್ದು, ರಾಹುಲ್ ಗಾಂಧಿ ಮೊನ್ನೆ ಮೊನ್ನೆ ಕೇಂಬ್ರಿಜ್ ವಿವಿಯಲ್ಲಿ ಭಾರತದ ಬಗ್ಗೆ, ಇಲ್ಲಿನ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ ವಿಷಯಗಳ ಹಿನ್ನೆಲೆಯಲ್ಲಿ. ಅದಕ್ಕಿಂತ ಮುಂಚೆ ಎಷ್ಟೋ ಭಾರತೀಯರು ಅಂತಾರಾಷ್ಟ್ರೀಯ ಮಟ್ಟದ ಹಲವಾರು ಚರ್ಚೆ, ಭಾಷಣ, ಉಪನ್ಯಾಸಗಳಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಏಕೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕಕ್ಕೆ ಕರೆಸಿ, ‘ಹೌಡಿ ಮೋದಿ’ ಕಾರ್ಯಕ್ರಮವನ್ನೂ ಮಾಡಲಿಲ್ಲವೇ? ಬಿಡಿ, ಇದೇ ಕಾಂಗ್ರೆಸ್ನ ಶಶಿ ತರೂರ್ ಸಹ ಆಕ್ಸ್ಫರ್ಡ್ನಲ್ಲಿ ಮಾಡಿದ ಭಾಷಣ, ಎಲ್ಲೆಡೆ ವ್ಯಾಪಕ ಪ್ರಚಾರ ಪಡೆದಿತ್ತು.
ಬಿಜೆಪಿಯವರೂ ಅವರನ್ನು ಗೌರವಿಸುವಂತಹ ಮಾತುಗಳನ್ನಾಡಿದ್ದರು ತರೂರ್. ಆಮೇಲೆ ಆ ಭಾಷಣವನ್ನೇ ಸಂಕಲಿಸಿ, ಅದಕ್ಕಿನ್ನೊಂದಿಷ್ಟು ಮಾಹಿತಿಯ ಹೂರಣವನ್ನಿಟ್ಟು, ಪುಸ್ತಕವನ್ನೂ ಮಾಡಿದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತು. ಆದರೆ, ಶಶಿ ತರೂರ್ ಭಾಷಣದಲ್ಲಿ ಒಂದು ಪದವಾದರೂ ಮೋದಿಯನ್ನು ಬೈದಿದ್ದಾಗಲಿ, ಭಾರತ- ಭಾರತೀಯ ಸರಕಾರಗಳ ನಡೆಯನ್ನು ವಿರೋಧಿಸಿದ್ದಾಗಲಿ ಇರಲಿಲ್ಲ.
ಅಷ್ಟಕ್ಕೂ ಅವರು ಮತ್ತು ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಲೇ ಇರುವವರು. ವಿರೋಧಿಸಬೇಕೆಂದರೆ, ಭಾರತದಲ್ಲೇ ವಿರೋಽಸುತ್ತಾರೆ, ವಿರೋಧಿಸಬೇಕು ಸಹ. ಅದೇ ಪ್ರಜಾಪ್ರಭುತ್ವದ ಸೌಂದರ್ಯ. ಆದರೆ, ಬೇರೆ ಯಾರೋ ಪರಕೀಯ ದೇಶಗಳ ಮುಂದೆ ನಮ್ಮನ್ನೇ ನಾವು ಬೈದುಕೊಂಡರೆ? ಅದೇ ರೀತಿ ರಾಹುಲ್ ಗಾಂಧಿಯ ಭಾಷಣವೂ ವಿಶ್ವ ದೆಲ್ಲೆಡೆ ಪ್ರಸಾರವಾಯಿತು; ಪ್ರಚಾರ ಪಡೆಯಿತು.
ಆದರೆ, ಬೇರೆ ಕಾರಣಕ್ಕೆ; ಅದು ಅಲ್ಲಿ ಪ್ರದರ್ಶಿಸಿದ ತಮ್ಮ ‘ಪಪ್ಪು’ತನಕ್ಕೆ ಮಾತ್ರ! ಇಷ್ಟೇ ನೋಡಿ, ಜವಾಹರ್ ಲಾಲ್ ನೆಹರು, ಶಶಿ ತರೂರ್
ಹಾಗೂ ರಾಹುಲ್ ಒಂದೇ ಪಕ್ಷದವರು. ರಾಹುಲ್ ಅಂತೂ ನೆಹರು ಮನೆತನದ ಕುಡಿಯೇ! ಬೇರೆಯವರೆಲ್ಲ ದೇಶದ ಪರವಾಗಿ ಮಾತನಾಡಿದರೆ, ರಾಹುಲ್ ಮಾತ್ರ ಭಾರತದ ವಿರುದ್ಧ ಮಾತನಾಡಿದಕ್ಕೆ ಅಲ್ಲಿನ ವಿದ್ಯಾರ್ಥಿಗಳ ಪ್ರಶ್ನೆಗೂ ಉತ್ತರಿಸಲಾಗದಂತಹ ಪರಿಸ್ಥಿತಿಯಲ್ಲಿ ಬಾಯಿ ತೆರೆದು ಕೂತಿದ್ದರು.
ಅಂದು ಕಾಂಗ್ರೆಸ್ ಹುಟ್ಟಿದ್ದು ಸ್ವಾತಂತ್ರ್ಯ ಹೋರಾಟಕ್ಕಾಗಿ. ಸಿವಿಕ್ ನ್ಯಾಷಲಿಸಮ್ ಅನ್ನು ತಮ್ಮ ಪಕ್ಷದ ಸಿದ್ಧಾಂತವಾಗಿಟ್ಟುಕೊಂಡ, ಅದೇ ಕಾಂಗ್ರೆಸಿನ ಪರಮೋಚ್ಚ ನಾಯಕ ಆಗಿದ್ದುಕೊಂಡು, ಕೇಂಬ್ರಿಜ್ ವಿವಿಯಲ್ಲಿ ಭಾರತದ ಬಗ್ಗೆ, ಇಲ್ಲಿನ ಪ್ರಜಾಪ್ರಭುತ್ವದ ಬಗ್ಗೆ ಮೊಸಳೆ ಕಣ್ಣಿರು ಹಾಕಿದ ರಾಹುಲ್ ಗಾಂಧಿ ಇಲ್ಲೇ ಇದ್ದು ಅದರ ವಿರುದ್ಧ ಹೋರಾಡಲು ಶಕ್ತಿಯನ್ನೇ ಕಳೆದುಕೊಂಡರೇ? ಕನಿಷ್ಠ ಆಡಳಿತಾರೂಢ ಬಿಜೆಪಿಯ ವಿರುದ್ಧ ಹೋರಾಟ ಮಾಡಲೂ ಶಕ್ತಿಯಿಲ್ಲದಾಯಿತೆ? ಮೋದಿಯಂಥ ನಾಯಕನ ವಿರುದ್ಧ ಹೋರಾಡುವಂತಹ ನಾಯಕತ್ವದ ಕೊರತೆಯಂತೂ ಅವರಲ್ಲಿ ಇದೆ, ಆದರೆ, ಅದನ್ನು ಬೇರೆ ದೇಶಗಳ ಮುಂದೆ ಹೇಳಿಕೊಳ್ಳುವ ಮಟ್ಟಿಗಿನ ಅಸಹಾಯಕತೆ, ಹತಾಶೆ ಯಾಕೆ ಬೇಕಿತ್ತು? ಭಾರತದೆಲ್ಲೆಡೆ ‘ಪಪ್ಪು’ ಎಂದೇ (ಕು)
ಖ್ಯಾತರಾಗಿದ್ದ ಇವರು, ಪ್ರಪಂಚಾದ್ಯಂತ ಅದೇ ರೀತಿ ‘ಫ್ರೇಮ್’ ಬೆಳೆಸಿಕೊಳ್ಳೋಕೆ ಹೊರಟರೆ? ದೇಶದ ಸೈನಿಕರ ಮೇಲೆ ಆದಂತಹ ಪುಲ್ವಾಮಾ ದಾಳಿಯನ್ನು ಬರೀ ಒಂದು ಕಾರ್ ಬ್ಲಾಸ್ಟ್ ಅಂತ ಹೇಳಿ, ಸೈನಿಕರಿಗೆ ಅವಮಾನ ಮಾಡಿ.
ಉಗ್ರರ ಪರ ಮಾತಾಡಿದ್ದರಲ್ಲ ಅದೂ ಪ್ರಧಾನಿ ಕನಸಿನ ಗುಂಗಲ್ಲಿದ್ದವರು. ಹಾಗಿದ್ದರೆ, ಅಪ್ಪಿತಪ್ಪಿ ಇವರ ಸರಕಾರ ಬಂದು ಅವಾಗಲೂ ಇದೇ ರೀತಿಯ
ದಾಳಿಗಳಾದರೆ, ಯಾವುದರಿಂದ ಕಣ್ಣು ಒರೆಸುತ್ತಾರೆ? ಒಂದು ರಾಷ್ಟ್ರೀಯ ಪಕ್ಷಕ್ಕೆ, ತನ್ನ ದೇಶದಲ್ಲಿ ನಡೆಯುತ್ತಿರುವ ಹಲವಾರು ವಿಚಾರಗಳ ವಿರುದ್ಧ ಹೋರಾಡುವುದು ಕಷ್ಟವೇ ಅಲ್ಲ. ಅದೂ ಕಾಂಗ್ರೆಸ್ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿತಲ್ಲ, ಅದರ ೧೦ರಷ್ಟು ಶಕ್ತಿಯೂ ಈಗ ಇಲ್ಲವೇ? ಇಲ್ಲವೆನ್ನು ವುದು ಗೊತ್ತಿದ್ದರೂ ಬೇರೆ ಯಾರದ್ದೋ ಮುಂದೆ ತೋರಿಸಿ, ಅನುಕಂಪ ಗಿಟ್ಟಿಸಿಕೊಳ್ಳುವುದು ಏಕೆ ಬೇಕಿತ್ತು? ಇಂದು ಕಾಂಗ್ರೆಸಿನ ಎಲ್ಲ ನಾಯಕರೂ ಮೋದಿಯನ್ನು ಕೆಟ್ಟಾತಿಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಅಂಥ ಮೋದಿ ನಿಂದಕರಿಗೆ, ತಮ್ಮ ಪಕ್ಷದ ಇತಿಹಾಸ, ಹೋರಾಟಗಳ ಮಾಹಿತಿ ಇದ್ದಂತಿಲ್ಲ. ಅಥವಾ ಇವರ ಕಿವಿ ಕೆಪ್ಪು, ಕಣ್ಣು ಕುರುಡಾಗಿರಲೂಬಹುದು.
ಈಗಿನ ಕಾಂಗ್ರೆಸ್ ಎಂದರೆ, ಸೋನಿಯಾ-ರಾಹುಲ್-ಪ್ರಿಯಾಂಕಾ ಬಾಲ ಬಡಿಯುವವರ ಗುಂಪು ಎಂದಾಗಿರುವುದು ಗೊತ್ತಿಲ್ಲದ ಸಂಗತಿಯಲ್ಲ.
ಒಂದು ಪಕ್ಷ, ಸಂಘಟನೆ ರೂಪುಗೊಳ್ಳುವುದೇ ಒಂದು ಸಿದ್ಧಾಂತ ಅಥವಾ ಹೋರಾಟಗಳ ಮೇಲೆ. ಪ್ರಪಂಚದ ಯಾವುದೇ ಸಂಘಟನೆಯ ಇತಿಹಾಸ ನೋಡಿದರೂ ಅದರ ಹಿಂದೆ ಹೋರಾಟದ ಕುರುಹುಗಳು ಇದ್ದೇ ಇರುತ್ತವೆ. ಅಥವಾ ಒಂದು ಸಿದ್ಧಾಂತಕ್ಕೋಸ್ಕರವಾದರೂ ಅದು ರೂಪುಗೊಂಡಿ ರುತ್ತದೆ. ಚೇ ಗುವಾರ, ಭಗತ್ಸಿಂಗ್, ಚಂದ್ರಶೇಖರ್ ಅಜಾದ್… ಹೀಗೆ ಹಲವರು ತಮ್ಮ ಜೀವನವನ್ನೂ ಲೆಕ್ಕಿಸದೇ ತಂತಮ್ಮ ವಿಭಿನ್ನ ಸಿದ್ಧಾಂತಕ್ಕೆ ಅರ್ಪಿಸಿಕೊಂಡವರು.
ಇವರ್ಯಾರೂ ಯಾವುದೋ ರಾಜಕೀಯ ಬೆವಣಿಗೆಗಾಗಿ ಬದುಕಿದವರಲ್ಲ, ತಾವು ನಂಬಿದ್ದ ಸಿದ್ಧಾಂತಗಳಿಗೋಸ್ಕರ, ವಿಚಾರಕ್ಕೋಸ್ಕರ ತಮ್ಮ
ಬದುಕನ್ನೂ ಲೆಕ್ಕಿಸದೇ ಹೋರಾಡಿದವರು. ಆದರೆ, ಈಗ ಸಿದ್ಧಾಂತಗಳಿಗೋಸ್ಕರ ಬದುಕುತ್ತಿರುವ ಯಾವುದಾದರೂ ಪಕ್ಷ ಇದೆಯೇ? ಇದ್ದರೂ, ಅವರ ಸೋಗಲಾಡಿ ಸಿದ್ಧಾಂತವಿದ್ದರೆ, ಅದು ಅವರ ವಿರೋಧಿಗಳನ್ನು ಟೀಕಿಸುವುದಷ್ಟೇ. ಆದರೆ, ಸಿದ್ಧಾಂತಗಳ ರೂಪುರೇಷೆಗಳೂ ಇವರಿಗೆಲ್ಲ ಯಾಕೆ ಬೇಕು? ಅಸಲಿಗೆ, ಮೋದಿ ಜನಪ್ರಿಯತೆಯ ಮುಂದೆ ಕಾಂಗ್ರೆಸಿಗರೂ ಸೇರಿದಂತೆ, ಪ್ರತಿಪಕ್ಷಗಳ ಮಹತ್ವಾಕಾಂಕ್ಷಿ ಹಾಗೂ ಪ್ರಭಾವಿ(?)ನಾಯಕರು ಗಳೆಲ್ಲರೂ ಮಂಕಾಗಿ ಹೋಗಿದ್ದಾರೆ.
ರಾಹುಲ್ ಅಂತಲೇ ಅಲ್ಲ, ಭಾವೀ ಪ್ರಧಾನಿಯ ಕನಸನ್ನು ಕಂಡ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ಇರಬಹುದು, ತೆಲಂಗಾಣದ ಚಂದ್ರಶೇಖರ್ ರಾವ್, ಆಂಧ್ರದ ಚಂದ್ರಬಾಬು ನಾಯ್ಡು, ಬಿಹಾರದ ನಿತೀಶ್ ಹೀಗೆ ಸಾಲು ಸಾಲು ನಾಯಕರಿಗೆ ರಾಜ್ಯ ಬಿಟ್ಟು ಹೊರಬರಲಾಗುತ್ತಲೇ ಇಲ್ಲ. ಇಂಥ ಅಸಹಾಯಕತೆ ಅವರನ್ನು ಹತಾಶೆಗೆ ದೂಡಿರುವುದನ್ನು ಅರ್ಥ ಮಾಡಿಕೊಳ್ಳಬಹುದು. ಅಷ್ಟಕ್ಕೂ ರಾಹುಲ್ ಮಾತನಾಡಿದ್ದು ಪ್ರಜಾ
ಪ್ರಭುತ್ವದ ಬಗ್ಗೆ. ಭಾರತದ ಪ್ರಜಾಪ್ರಭುತ್ವ ಸೇರಿದಂತೆ ದೇಶದ ಆಂತರಿಕ ವಿಚಾರಗಳ ಬಗ್ಗೆ ವಿದೇಶ ಶಕ್ತಿಗಳ ಮುಂದೆ ರಾಹುಲ್ ಗಾಂಧಿ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಸದನದಲ್ಲಿ ವಿಪಕ್ಷಗಳ ಮೈಕ್ಗಳು ಆಫ್ ಮಾಡಿ ಪ್ರತಿಪಕ್ಷಗಳ ಧ್ವನಿಯನ್ನು ದಮನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯ ಸ್ಪೀಕರ್ ವಿರುದ್ಧವೇ ವಿದೇಶಿ ನೆಲದಲ್ಲಿ ಅವರು ಟೀಕಿಸಿದ್ದಾರೆ. ಇಷ್ಟಕ್ಕೂ ಪ್ರಜಾಪ್ರಭುತ್ವದ ಬಗೆಗಿನ ಕನಿಷ್ಠ ಅರಿವಾದರೂ ರಾಹುಲ್ಗೆ ಇದೆಯೇ? ಅದೇ ಕೇಂಬ್ರಿಜ್ನಲ್ಲಿ ಪ್ರಶ್ನೆ ಕೇಳಿದ ಯುವಕನನ್ನು, ಮರುಪ್ರಶ್ನೆ ಹಾಕದಂತೆ ತಡೆಯಲಾಯಿತಲ್ಲ, ಆಗಾದರೂ ತನ್ನ ಪ್ರಜಾಪ್ರಭುತ್ವದ ಉದಾರತೆಯನ್ನು ರಾಹುಲ್ ಅಲ್ಲಿ ತೋರಿಸಬೇಕಿತ್ತು! ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅಂತ ಕಾಂಗ್ರೆಸ್ ಮತ್ತು ಅದರ ಪ್ರಣೀತ ಬುದ್ಧಿಜೀವಿಗಳು ಹೇಳುತ್ತಿರುತ್ತಾರಲ್ಲ, ಅದು ಎಷ್ಟರ ಮಟ್ಟಿಗೆ ಅಪಾಯದಲ್ಲಿದೆ? ಅಪಾಯ ಇದ್ದೀತಾದರೆ, ದೇಶದ ಜನಗಳು ಅದು ಹೇಗೆ ಮತ್ತೊಮ್ಮೆ ಮಗದೊಮ್ಮೆ ಮೋದಿ ಹೆಸರನ್ನು ಹೇಳುತ್ತಾರೆ? ೧೩೦ ಕೋಟಿ ಜನರ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವುದು ಅಷ್ಟು ಸುಲಭವೇ? ಇದೇ ರಾಹುಲ್ರ ಅಜ್ಜಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ವಿಪಕ್ಷಗಳ ನಾಯಕರನ್ನ ಬಂಧಿಸಿದ್ದರಲ್ಲಾ, ಆಗ ಪ್ರಜಾಪ್ರಭುತ್ವವಿತ್ತೇ?
ಅದು ನಿರುಮ್ಮಳವಾಗಿಯೂ ಇತ್ತೇ? ಹೋಗಲಿ, ಪ್ರಜಾಪ್ರಭುತ್ವಕ್ಕೆ ಸ್ವತಃ ರಾಹುಲ್ಗೆ ಸೂಕ್ತ ಮನ್ನಣೆ ನೀಡಿ ಗೊತ್ತೇ? ಹೈಕಮಾಂಡ್ ಸಂಸ್ಕೃತಿಯಲ್ಲೇ ಮುಳುಗೇಳುವ ಕಾಂಗ್ರೆಸ್ನಲ್ಲಿ ಎಂದಾದರೂ ಆಂತರಿಕವಿದ್ದ ಉದಾಹರಣೆ ಸಿಗುತ್ತದೆಯೇ? ಕಾಮರಾಜ್, ನಿಜಲಿಂಗಪ್ಪ, ಮೊರಾರ್ಜಿ, ಸೀತಾರಾಮ್ ಕೇಸರಿ… ಮತ್ತಿತರರನ್ನೆಲ್ಲ ನೆಹರು ವಂಶಸ್ಥರು ಹೇಗೆ ನಡೆಸಿಕೊಂಡಿದ್ದರು ಎಂಬುದು ಗೊತ್ತಿಲ್ಲದ ಸಂಗತಿಯೇ? ಅದೂ ಬೇಡ, ಮಾಜಿ ಪ್ರಧಾನಿ
ಮನಮೋಹನ್ ಸಿಂಗ್ ಅವರ ಸಚಿವ ಸಂಪುಟ ತೆಗೆದುಕೊಂಡ ಸುಗ್ರೀವಾಜ್ಞೆಯನ್ನು ‘ನಾನ್ ಸೆನ್ಸ್’ ಎಂದು ಇದೇ ರಾಹುಲ್ ಗಾಂಧಿ ಮಾಧ್ಯಮಗಳ ಎದುರು ಹರಿದು ಹಾಕಿದ್ದರಲ್ಲಾ, ಅದೇ ಪ್ರಜಾಪ್ರಭುತ್ವವೇ? ಮಮತಾ ಬ್ಯಾನರ್ಜಿಯ ಒಂದು ಕಾರ್ಟೂನ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಕ್ಕೆ ಪ್ರೊಫೆಸರ್ ಅನ್ನು ಅರೆಸ್ಟ್ ಮಾಡಿದಾಗ, ಬರೀ ಸರಕಾರದ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಸಿ ದ್ದಕ್ಕೆ ೧೨೦ ಜನರ ಮೇಲೆ ಕೇಸ್ ಹಾಕಿದಾಗ, ಶಾಹ್ ಬಾನುಗೋಸ್ಕರ ಸುಪ್ರೀಂ ಕೋರ್ಟ್ ತೀರ್ಪನ್ನೇ ರಾಜೀವ್ ಗಾಂಧಿ ಅನೂರ್ಜಿತಗೊಳಿಸಿದಾಗ, ೫೦ಕ್ಕೂ ಹೆಚ್ಚು ಸಲ ಆರ್ಟಿಕಲ್ ೩೫೬ರ ಸಹಾಯದಿಂದ ಇಂದಿರಾ ಗಾಂಧಿಯವರು ಸರಕಾರಗಳನ್ನೇ ವಿಸರ್ಜಿಸಿದಾಗ, ಅದು ಹೋಗಲಿ ಸುದೀರ್ಘ
ಅವಽಯವರೆಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಇದೇ ರಾಹುಲ್ ಮತ್ತವರ ತಾಯಿ ಸೋನಿಯಾ ಇಟ್ಟುಕೊಂಡಿದ್ದಾಗ…. ಆಗೆಲ್ಲ ಪ್ರಜಾಪ್ರಭುತ್ವವಿತ್ತೇ? ಈ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾತ್ರ ಇರಲು ಪ್ರಜಾಪ್ರಭುತ್ವವೇನು ಗಾಂಧಿ ಮನೆತನದ ಆಸ್ತಿಯೇ?
ಶಾಲೆಯಲ್ಲಿನ ಮಗುವೂ ದೇಶದ ವಿರುದ್ಧವಾಗಿ, ಅದರ ಮರ್ಯಾದೆಗೆ ಧಕ್ಕೆ ಬಾರದ ಹಾಗೆ ಇರುತ್ತದೆ.
ಆದರೆ, ೫೨ ವರ್ಷದ ಕಾಂಗ್ರೆಸ್ನ ಯುವರಾಜನಿಗೆ, ಸ್ವಲ್ಪವೂ ಇದರ ಅರಿವು ಬೇಡವೇ? ಭಾರತದಲ್ಲಿ ನಡೆಯುತ್ತಿರುವುದೆಲ್ಲ ಬೇರೆ ದೇಶಗಳಿಗೆ
ಗೊತ್ತೇ ಇರುತ್ತದೆ. ಅದಕ್ಕೆ ಮತ್ತಿಷ್ಟು ಉಪ್ಪು ಖಾರ ಹಾಕಿ ಕಣ್ಣೀರು ಸುರಿಸುವುದು ಏತಕ್ಕೆ ಬೇಕಿತ್ತು? ಹಲವಾರು ದೇಶಗಳ ವ್ಯಾಜ್ಯದ ಮಧ್ಯಸ್ಥಿಕೆಗೆ ಭಾರತವನ್ನು ಕರೆಯುತ್ತಿದ್ದಾಗ, ಇಲ್ಲಿನ ಆಂತರಿಕ ವಿಷಯಗಳ ಸುಧಾರಣೆಗೆ ಯುಕೆ, ಯುಎಸ್ಎಗೆ ಆಮಂತ್ರಿಸುವುದು ಯಾಕೆ ಬೇಕಿತ್ತು? ಇದೆಲ್ಲ ಅಪಸವ್ಯದ ನಡುವೆ, ಕ್ಷಮೆ ಯನ್ನೂ ಕೇಳದಿರುವಷ್ಟು ಗಾಂಧಿ ಮತ್ತವರ ಗ್ಯಾಂಗಿನ ಅಹಂ.
ಜನರನ್ನು ಗೆಲ್ಲಬೇಕಿದ್ದರೆ ಅವರ ಹೃದಯ, ಮನಸ್ಸಿಗೆ ಹತ್ತಿರವಾಗಬೇಕು. ಅದನ್ನು ಬಿಟ್ಟು ಬೇರೆ ದೇಶದ ನೆಲದಲ್ಲಿ ಈ ರೀತಿ ಮಾತನಾಡಿರೆ, ಇವರನ್ನು ಯಾರಾದರೂ ನಂಬುತ್ತಾರೆಯೇ? ಭಾರತ್ ಜೋಡೋ ಯಾತ್ರಾ, ಅವರ ಮನೆಯವರು ಉಗ್ರರ ಗುಂಡಿಗೆ ತುತ್ತಾದ ವಿಷಯವನ್ನು ಹೇಳಿ. ಭಾರೀ ದೇಶಭಕ್ತನೆಂದು ನಂಬಿಸಿಕೊಂಡು, ಆಗಾಗ ಟೆಂಪಲ್ ರನ್ ಮಾಡಿ. ಕೊನೆಗೆ, ಬೇರೆ ದೇಶದ ನೆಲದಲ್ಲಿ ಭಾರತದ ಮರ್ಯಾದೆಯನ್ನು ತಗೆಯುವುದು
ನೋಡಿದರೆ, ಇಂಥವರಿಗೆ ಅಂತಾನೇ ಜೇಡರ ದಾಸಿಮಯ್ಯ ಈ ವಚನವನ್ನು ಬರೆದಿರಬಹುದು: ‘ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ! ರಾಮನಾಥ.’