Sunday, 15th December 2024

ಜೈವಿಕ ಸರಪಣಿಯ ಕೊಂಡಿ ಹುಡುಕುತ್ತಾ

ಜೀವ ವಿಜ್ಞಾನ

ಗಣೇಶ್ ಭಟ್, ವಾರಣಾಸಿ

ಕಳೆದ ವರ್ಷ ಭಾರತ ನಮೀಬಿಯಾದಿಂದ ೮ ಚೀತಾಗಳನ್ನು ಭಾರತಕ್ಕೆ ತರಿಸಿಕೊಂಡಿತ್ತು. ಇದಕ್ಕಾಗಿ ಭಾರತ ಸರಕಾರ ಸುಮಾರು ೭೫ ಕೋಟಿ ರುಪಾಯಿಗಳನ್ನು ಖರ್ಚು ಮಾಡಿತ್ತು. ಇದೀಗ ಪುನಃ ೧೨ ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ತರಿಸಿಕೊಳ್ಳಲಾಗಿದೆ.

ಭಾರತಕ್ಕೆ ಚೀತಾಗಳನ್ನು ಏಕೆ ತರಿಸಿಕೊಳ್ಳಲಾಗುತ್ತಿದೆ? ಅವುಗಳಿಗೇಕೆ ಇಷ್ಟು ಮಹತ್ವ ಕೊಡಲಾಗುತ್ತಿದೆ? ಅಥವಾ ಇವುಗಳ ಸಂರಕ್ಷಣೆಗೇಕೆ ಇಷ್ಟು ಖರ್ಚನ್ನು ಮಾಡಲಾಗುತ್ತಿದೆ? ಈ ರೀತಿಯ ಸಂಶಯಗಳು ಕೆಲವು ಜನರ ಮನಸ್ಸಿನಲ್ಲಿ ಮೂಡಿರಲಿಕ್ಕೂ ಸಾಕು. ನಾವು ಚಿಕ್ಕವರಿzಗ ನಮ್ಮ ಗzಯಲ್ಲಿ ಬೆಳೆದ ಭತ್ತವನ್ನು ಬೇಯಿಸಿ ನಮ್ಮ ಮನೆಯ ಅಂಗಳದ ಒಣಗಿಸಲಾಗುತ್ತಿತ್ತು. ಮನೆಗೆ ಬೇಕಾದ ತೆಂಗಿನ ಎಣ್ಣೆಯನ್ನು ತಯಾರಿಸಿಕೊಳ್ಳಲು ಕೊಬ್ಬರಿಯನ್ನೂ ಅಂಗಳದಲ್ಲಿ ಒಣಗಿಸಲಾಗುತ್ತಿತ್ತು. ಆದರೆ ಆ ಕಾಲದಲ್ಲಿ ನಮ್ಮಲ್ಲಿ ತುಂಬಾ ಕಾಗೆಗಳು ಇದ್ದುದರಿಂದ ಭತ್ತ ಹಾಗೂ ಕೊಬ್ಬರಿಗಳನ್ನು ಕಾಗೆಗಳ ಬಾಯಿಯಿಂದ ರಕ್ಷಿಸಲು ನಮ್ಮ ಹೆತ್ತವರು ಕಾಗೆಗಳನ್ನು ಓಡಿಸುವ ಕೆಲಸವನ್ನು ಹುಡುಗರಾದ ನಮಗೆ ಕೊಡುತ್ತಿದ್ದರು.

ಹಟ್ಟಿಯ ದನಗಳ ಮೈಯಲ್ಲಿರುವ ಉಣ್ಣಿಯನ್ನು/ಉಣುಗು ತಿನ್ನಲು ಬರುತ್ತಿದ್ದ ಕಾಗೆಗಳು ಹಾಗೂ ಅವುಗಳಿಗೆ ಮೈಯೊಡ್ಡಿ ನಿಲ್ಲುತ್ತಿದ್ದ ಹಸುಗಳ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧವೇ ಇತ್ತು. ಬೆಳಗಿನ ಹೊತ್ತು ಮನೆಯ ಮಾಡಿನಲ್ಲಿ ಕೂತು ಕಾಗೆಗಳು ರಾಗವಾಗಿ ಕೂಗಿದರೆ ಮನೆಗೆ ಯಾರೋ ನೆಂಟರು ಬರುತ್ತಾರೆ ಎನ್ನುವ ಸೂಚನೆ ಎಂದು ಭಾವಿಸುತ್ತಿದ್ದರು. ಏನಾದರೂ ಆಹಾರ ಸಿಕ್ಕಾಗ ಕಾಗೆಗಳು ಕೂಗಿ ತಮ್ಮ ನೂರಾರು ಸಂಖ್ಯೆಯಲ್ಲಿ ಬಳಗವನ್ನು ಸೇರಿಸುತ್ತಿದ್ದವು. ಆದರೆ ದುರಂತವೇನೆಂದರೆ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ಇದ್ದ ಕಾಗೆಗಳಿಂದು ಮಾಯವಾಗಿವೆ. ಶ್ರಾದ್ಧದ ಎಡೆ ಯನ್ನು ತಿನ್ನಲೂ ಕಾಗೆಗಳು ಬರುತ್ತಿಲ್ಲ. ಕಾಗೆಗಳ ಸಂಖ್ಯೆಯು ಕಡಿಮೆಯಾಗಿ ಸಸ್ಯಗಳ ಬೀಜಪ್ರಸರಣಕ್ಕೆ ತೊಂದರೆಯಾಗಿದೆ.

ಇಂದು ಹೋಟೆಲ್‌ಗಳು, ಮೀನು ಮಾರುಕಟ್ಟೆಗಳ ಬಳಿ ಅಲ್ಪ ಸ್ವಲ್ಪ ಸಂಖ್ಯೆಯಲ್ಲಿ ಕಾಗೆಗಳು ಕಾಣಸಿಗುತ್ತಿವೆಯಷ್ಟೇ! ೮೦-೯೦ ರ ದಶಕದವರೆಗೂ ಮುಸ್ಸಂಜೆಯ ಹೊತ್ತಿನಲ್ಲಿ ಮನೆಯೆದುರಿನ ಗುಡ್ಡದಿಂದ ನರಿಗಳ ಊಳಿಡುವಿಕೆ ಕೇಳಿಬರುತ್ತಿತ್ತು. ಆದರೆ ಇಂದು ನಮ್ಮ ಹಳ್ಳಿಗಳಲ್ಲಿ ನರಿಗಳೂ ಇಲ್ಲ
ಅವುಗಳ ಊಳಿಡುವಿಕೆಯ ದನಿಯೂ ಇಲ್ಲ. ಕಾಗೆ, ನರಿಗಳ ಸಂಖ್ಯೆ ಈ ರೀತಿಯಾಗಿ ಕುಗ್ಗಲು ಕಾರಣ ಮನುಷ್ಯರೇ. ಕಾಗೆಗಳು ರಾತ್ರಿಹೊತ್ತು ಒಂದು ನಿರ್ದಿಷ್ಟ ಕಡೆ ಜತೆ ಸೇರಿ ವಿಶ್ರಾಂತಿ ಯನ್ನು ಪಡೆಯುತ್ತವೆ. ಆ ಸಂದರ್ಭದಲ್ಲಿ ಅವುಗಳು ಜನ ಸಂಚಾರವನ್ನು ಇಷ್ಟಪಡುವುದಿಲ್ಲ.

ಕಾಗೆಗಳು ವಾಸಿಸುವ ಸ್ಥಳಗಳನ್ನು ದಕ್ಷಿಣ ಕನ್ನಡ ಹಾಗೂ ಕಾಸರಗೋಡುಗಳಲ್ಲಿ ಕಕ್ಕೆ ಬಿತ್ತಿಲು(ಕಾಗೆ ಹಿತ್ತಿಲು), ಕಕ್ಕೆ ಪದವು(ಕಾಗೆ ಬಯಲು) ಎಂದು
ಕರೆಯಲಾಗುತ್ತಿತ್ತು. ಆದರೆ ಜನಸಂಖ್ಯೆ ಹೆಚ್ಚಾದಂತೆ ಮನುಷ್ಯರು ಕಕ್ಕೆ ಬಿತ್ತಿಲುಗಳಲ್ಲಿಯೂ ಮನೆಗಳನ್ನು ಕಟ್ಟಲು ಆರಂಭಿಸಿದರು. ಪಟಾಕಿಗಳನ್ನು ಸಿಡಿಸಿ ಕಾಗೆಗಳನ್ನು ಅವುಗಳ ಆವಾಸಸ್ಥಾನಗಳಿಂದ ಓಡಿಸಲಾಯಿತು. ವಾಸಿಸುವ ನೆಲೆಯನ್ನೇ ಕಳೆದುಕೊಂಡ ಕಾಗೆಗಳ ಸಂತತಿ ಕ್ಷೀಣಿಸ ತೊಡಗಿತು.

ಇನ್ನು ಗzಗಳಿಗೆ ಸಿಂಪಡಿಸಲಾಗುತ್ತಿದ್ದ ಕೀಟನಾಶಕಗಳಿಂದಾಗಿ ಸತ್ತುಬಿದ್ದ ಕಪ್ಪೆಗಳನ್ನು ತಿಂದ ನರಿಗಳ ದೇಹಕ್ಕೂ ಕೀಟನಾಶಕಗಳು ಸೇರಿ ನರಿಗಳು ನಿಸ್ಸಂತಾನವಾದವು. ಪ್ರಕೃತಿಯ ಜೈವಿಕ ಆಹಾರ ಸರಣಿಯು ಒಂದಕ್ಕೊಂದು ಬೆಸೆದುಕೊಂಡಿದೆ. ಈ ಸರಣಿಯು ಸರಿಯಿದ್ದಾಗ ಪ್ರಾಣಿಗಳ ಸಂಖ್ಯೆ ಯಲ್ಲಿ ತನ್ನಿಂತಾನೆಯೇ ಸಮತೋಲನ ಸಾಧಿಸಲ್ಪಡು ತ್ತದೆ. ಆದರೆ ಒಂದು ಪ್ರಾಣಿಯು ನಾಶವಾಗಿ ಹೋದರೆ ಇನ್ನೊಂದು ಪ್ರಾಣಿಯ ಸಂತಾನ ವಿಪರೀತವೆನಿಸುವಷ್ಟು ಹೆಚ್ಚಾಗುತ್ತದೆ. ಉದಾಹರಣೆಗೆ ನಮ್ಮ ರಾಷ್ಟ್ರ ಪಕ್ಷಿ ನವಿಲನ್ನೇ ತೆಗೆದುಕೊಳ್ಳೋಣ. ಹಿಂದೆ ಮಾನವರ ಬೇಟೆಗೆ ಸಿಲುಕಿ ನವಿಲುಗಳು ಎಷ್ಟು ಅಳಿದು ಹೋಗಿದ್ದವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.

ಕಠಿಣ ಕಾನೂನುಗಳ ಪರಿಣಾಮ ನವಿಲುಗಳ ಬೇಟೆ ನಿಂತೇ ಹೋಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿಯಲ್ಲಿ ನಾವಿಂದು ಎಂದರಲ್ಲಿ ನವಿಲುಗಳನ್ನು ಕಾಣಬಹುದಾಗಿದೆ. ಹಳ್ಳಿಗಳಲ್ಲಿ ಕೃಷಿಕರು ಈ ನವಿಲುಗಳಿಂದಾಗಿ ದೊಡ್ಡ ಮಟ್ಟಿನ ಉಪಟಳವನ್ನು ಎದುರಿಸಬೇಕಾಗಿದೆ. ಭತ್ತದ ಗzಗಳಿಗೆ ನವಿಲುಗಳು ಬಂದವು ಎಂದರೆ ಭತ್ತ ಖಾಲಿಯಾಗುತ್ತದೆ. ಪ್ರೌಢ ನವಿಲೊಂದು ಒಂದೆರಡು ಕಿಲೋ
ಭತ್ತವನ್ನು ನುಂಗುತ್ತದೆ. ಉರಗಪ್ರಿಯಗಳಾದ ನವಿಲುಗಳು ಹಾವುಗಳನ್ನು ಹುಡುಕಿ ಹುಡುಕಿ ಕೊಂದು ತಿನ್ನುತ್ತವೆ. ಇದರ ಪರಿಣಾಮವಾಗಿ ರೈತ ಮಿತ್ರ ಹಾವುಗಳಾದ ಕೇರೆ ಹಾವು ಮೊದಲಾದ ಉರಗಗಳ ಸಂತತಿ ಗಣನೀಯವಾಗಿ ಇಳಿದಿದೆ.

ಹಾವುಗಳ ಸಂಖ್ಯೆ ಕಡಿಮೆಯಾದ ಪರಿಣಾಮವಾಗಿ ಇಲಿಗಳ ಪ್ರಮಾಣ ಹೆಚ್ಚಾಗುತ್ತಿದೆ. ನವಿಲುಗಳ ಮೊಟ್ಟೆಯನ್ನು ಕದಿಯುತ್ತಿದ್ದ, ಮರಿಗಳನ್ನು ಕೊಂದು ತಿನ್ನುತ್ತಿದ್ದ ನರಿಗಳು ನಾಶವಾಗಿ ಹೋದುದು ಈ ಭಾಗದಲ್ಲಿ ನವಿಲುಗಳು ವಿಪರೀತವೆನಿಸುವಷ್ಟು ತುಂಬಲು ಕಾರಣವಾಗಿದೆ. ಇತ್ತೀಚೆಗಿನ ಕೃಷಿಕರಿಗೆ ಕಾಡುಹಂದಿಯ ಉಪಟಳವೂ ಭಾರೀ ಹೆಚ್ಚಾಗಿದೆ. ತೋಟದಲ್ಲಿರುವ ಅಡಕೆ ಸಸಿ, ಗಡ್ಡೆಗೆಣಸು ಯಾವುದನ್ನೂ ಹಂದಿಗಳು ಉಳಿಸುತ್ತಿಲ್ಲ. ಹೆಣ್ಣು ಕಾಡು ಹಂದಿಯು ವರ್ಷಕ್ಕೆರಡು ಬಾರಿ ಮರಿಗಳನ್ನು ಹಾಕುತ್ತವೆ.

ಒಂದು ಬಾರಿಗೆ ೪ ರಿಂದ ೧೨ ರ ವರೆಗೆ ಮರಿಗಳನ್ನು ಇಡುತ್ತವೆ. ಆದರೆ ಹಂದಿಗಳನ್ನು ಬೇಟೆಯಾಡುವ ಪ್ರಾಣಿಗಳೇ ಇಲ್ಲದಿರುವುದರಿಂದ ಅವುಗಳ ಸಂಖ್ಯೆ ಅನಿಯಂತ್ರಿತವಾಗಿ ಬೆಳೆಯುತ್ತಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕಾಡಿನ ಪ್ರಮಾಣವೂ ಹೆಚ್ಚಾಗುತ್ತಿರುವುದು ಹಂದಿಗಳ ಸಂಖ್ಯೆಯ ಏರಿಕೆಗೆ ಸಹಾಯಕವಾಗಿದೆ. ಹಂದಿಗಳನ್ನು ಬೇಟೆಯಾಡುವ ಹುಲಿ, ಚಿರತೆ, ಕತ್ತೆಕಿರುಬ, ನರಿ ಮೊದಲಾದ ಪ್ರಾಣಿಗಳು ನಮ್ಮ ಪ್ರದೇಶದಲ್ಲಿ
ಅಳಿದು ಹೋಗಿರುವ ಕಾರಣ ಈಗ ಈ ಹಂದಿಗಳಿಗೆ ಶತ್ರುಗಳೇ ಇಲ್ಲವಾಗಿದೆ. ಇದೇ ರೀತಿ ಕೋತಿಗಳ ಸಂಖ್ಯೆಯೂ ಮಿತಿಮೀರಿ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮರ ಹತ್ತಿ ಬೇಟೆಯಾಡಬಲ್ಲ ಚಿರತೆಗಳ ಸಂಖ್ಯೆ ಕ್ಷೀಣಿಸಿರುವುದು ಕೋತಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ಪ್ರಾಣಿಗಳ ವಿಚಾರದಲ್ಲಿ ಮಾತ್ರ ಅಲ್ಲ, ಮರಗಿಡಗಳ ವಿಚಾರದಲ್ಲೂ ಮಾನವ ಹಸ್ತಕ್ಷೇಪ ಅನಾಹುತಕ್ಕೆ ಎಡೆ ಮಾಡಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ೩೦-೩೫ ವರ್ಷಗಳಿಂದೀಚೆಗೆ ಕಾಡನ್ನು ಬೆಳೆಸುವ ಉದ್ದೇಶದಿಂದ ದೊಡ್ಡ ಪ್ರಮಾಣದಲ್ಲಿ ಅಕೇಶಿಯಾ, ಮ್ಯಾಂಜಿಯಂನಂತಹ ಗಿಡಗಳನ್ನು ನೆಟ್ಟು ಬೆಳೆಸಲಾಯಿತು. ಈ ಮರಗಳು ಯಾವುದೇ ಆರೈಕೆ ಇಲ್ಲದೇ ಇದ್ದರೂ ವೇಗವಾಗಿ ಬೆಳೆದುವು. ಆದರೆ ಇದೀಗ ಅಕೇಶಿಯಾ ಮರಗಳು ಇಲ್ಲಿನ
ಸಸ್ಯ ವೈವಿಧ್ಯಕ್ಕೆ ದೊಡ್ಡ ಹೊಡೆತವನ್ನು ನೀಡಿವೆ. ಇದರಿಂದ ಕ್ಷಿಪ್ರ ಹಸುರೀಕರಣದ ಉದ್ದೇಶ ಯಶಸ್ವಿಯಾದರೂ ಸ್ಥಳೀಯ ಸಸಿ-ಮರಗಳು, ಔಷಧಿಯ ಗಿಡ-ಬಳ್ಳಿಗಳು ನಾಶವಾಗಿವೆ.

ಕರಾವಳಿ ಭಾಗದಲ್ಲಿ ನೇರಳೆ ಹಣ್ಣಿನ ರುಚಿಯನ್ನು ಹೋಲುವ ಹಣ್ಣುಗಳನ್ನು ಕೊಡುತ್ತಿದ್ದ ಕುಂಟಾಲ, ಮುಳ್ಳು ಹಣ್ಣು, ಮಡಕೆ ಹಣ್ಣು, ಕೇಪುಳ ಹಣ್ಣು, ಒಳ್ಳೆ ಕೊಡಿ, ಕೊಡಗಾಸನ, ಬೆಟ್ಟದ ನೆಲ್ಲಿಕಾಯಿ ಮೊದಲಾದ ಸ್ಥಳೀಯ ಸಸ್ಯ ವೈವಿಧ್ಯಗಳು ವಿನಾಶದ ಹಾದಿಯಲ್ಲಿವೆ. ಶಿರಾಡಿ, ಚಾರ್ಮಾಡಿ, ಆಗುಂಬೆ ಮೊದಲಾದ ಘಾಟಿಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪ್ರಯಾಣಿಕರು ಕೊಡುವ ತಿಂಡಿಗೆ ಕಾದು ಕುಳಿತಿರುವ ಕೋತಿಗಳ ಸಾಲು ಸಾಲನ್ನು ನೀವು ಕಂಡಿರಬಹುದು. ಅವುಗಳಿಗೆ ಕಾಡಿನಲ್ಲಿ ಸಾಕಷ್ಟು ಹಣ್ಣುಹಂಪಲುಗಳು ಸಿಗುತ್ತಿಲ್ಲ ಕಾಡಿನಲ್ಲಿ ಹಣ್ಣು ಹಂಪಲುಗಳು ಸಿಗದಿದ್ದಾಗ ಕೋತಿಗಳು ನಾಡಿಗೆ ದಾಳಿ ಮಾಡಿ ತೆಂಗು, ಕೊಕ್ಕೋ, ಅಡಕೆ ಕೃಷಿಗಳಿಗೆ ಭಾರೀ ಹಾನಿಯನ್ನುಂಟುಮಾಡು ತ್ತವೆ.

ಕೋತಿಗಳು ಕಾಡಿನಲ್ಲಿ ಆಹಾರದ ಕೊರತೆಯನ್ನು ಎದುರಿಸುವುದನ್ನು ಮನಗಂಡು ಅವುಗಳಿಗೆ ಪ್ರಕೃತಿ ಸಹಜ ಆಹಾರವನ್ನು ಒದಗಿಸುವ ಉದ್ದೇಶದಿಂದ ಚಾರ್ಮಾಡಿಯ ಘಟ್ಟದ ಕಾಡು ಗಳಲ್ಲಿ ಕೋತಿಗಳಿಗೆ ಇಷ್ಟವಾದ ಹಣ್ಣುಗಳನ್ನು ಬಿಡುವ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಎರಡು ವರ್ಷಗಳ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ್ದರು.

ಸರಕಾರವು ಹಮ್ಮಿಕೊಂಡಿರುವ ಹುಲಿ, ಸಿಂಹ, ಚಿರತೆ, ಹಾರ್ನ್ ಬಿಲ್, ಖಡ್ಗಮೃಗ ಮೊದಲಾದ ಪ್ರಾಣಿ ಪಕ್ಷಿಗಳ ಸಂರಕ್ಷಣೆ ಯೋಜನೆಗಳು ಪ್ರಾಕೃತಿಕ ಸಮತೋಲನಕ್ಕೆ ದಾರಿ ಮಾಡಿಕೊಟ್ಟಿದೆ. ಸರಕಾರವು ಈ ಪ್ರಾಣಿಗಳ ಸಂರಕ್ಷಣೆಗಾಗಿ ಕಾಡನ್ನು ರಕ್ಷಿತಾರಣ್ಯಗಳು ಅಥವಾ ನ್ಯಾಷನಲ್ ಪಾರ್ಕ್
ಎಂದು ಘೋಷಿಸಿ ಅರಣ್ಯವನ್ನು ಅತಿಕ್ರಮಿಸದಂತೆ ನಾಗರಿಕರ ಮೇಲೆ ನಿರ್ಬಂಧವನ್ನು ಹೇರುವುದರಿಂದ ಆ ಕಾಡುಗಳಲ್ಲಿ ಅಕ್ರಮವಾಗಿ ಮರ ಕಡಿಯುವುದು ನಿಂತು ಹೋಗುತ್ತದೆ. ಸಸಿ ಗಿಡಗಳನ್ನು ತಿಂದು ನಾಶ ಮಾಡುವ ಜಿಂಕೆ ಕಡವೆಗಳಂತಹ ಪ್ರಾಣಿಗಳ ಸಂಖ್ಯೆಯನ್ನು ಹುಲಿ, ಸಿಂಹ, ಚಿರತೆಗಳು ನಿಯಂತ್ರಣದಲ್ಲಿಡುತ್ತವೆ. ಇದರಿಂದಾಗಿ ಅರಣ್ಯದ ವೃದ್ಧಿ ಯಾಗುತ್ತದೆ. ಹಾರ್ನ್ ಬಿಲ್ ಪಕ್ಷಿಯು ಸಸ್ಯಗಳ ಬೀಜ ಪ್ರಸರಣದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

೭೦ ವರ್ಷಗಳ ಹಿಂದೆಯೇ ಅರಣ್ಯನಾಶ ಹಾಗೂ ಬೇಟೆಯಿಂದಾಗಿ ಭಾರತದಲ್ಲಿ ಚೀತಾವು ಕಣ್ಮರೆಯಾಗಿ ಹೋದುದರಿಂದ ಒಂದು ರೀತಿಯ ಜೈವಿಕ ಆಸಮತೋಲವುಂ ಟಾಯಿತು. ಇದನ್ನು ಸರಿಪಡಿಸುವ ಉದ್ದೇಶದಿಂದ ಕೋಟ್ಯಂತರ ರುಪಾಯಿಗಳನ್ನು ವ್ಯಯಿಸಿ ಚೀತಾಗಳನ್ನು ಭಾರತಕ್ಕೆ ತರಿಸಿಕೊಳ್ಳಲಾಗುತ್ತಿದೆ ಹಾಗೂ ಸಂರಕ್ಷಿಸಲಾ ಗುತ್ತಿದೆ. ಒಟ್ಟು ನೂರರಷ್ಟು ಚೀತಾಗಳನ್ನು ದಕ್ಷಿಣ ಆಫ್ರಿಕಾ ದಿಂದ ಭಾರತಕ್ಕೆ ತರಿಸಲಾಗು ತ್ತಿದೆ. ಭಾರತದ ಅರಣ್ಯಗಳ ಉಳಿವಿಗೆ, ಆಹಾರ ಶೃಂಖಲೆಯ ಸಮತೋಲನಕ್ಕೆ ಚೀತಾ ಗಳೂ ಅತೀ ಅಗತ್ಯ. ಹೀಗಾಗಿ ಜೀವ ವೈವಿಧ್ಯದ ಸರಪಳಿಯ
ಮಿಸ್ಸಿಂಗ್ ಲಿಂಕ್ ಅನ್ನು ಪುನ: ಜೋಡಿಸುವ ಉದ್ದೇಶದಿಂದ ಚೀತಾಗಳನ್ನು ಭಾರತದಲ್ಲಿ ಮರುಪರಿಚಯಿಸಲಾಗುತ್ತಿದೆ.
Read E-Paper click here