ಹಬ್ಬದ ಸಡಗರ
ಗ.ನಾ.ಭಟ್ಟ
ಅರುವತ್ತು ವರ್ಷಗಳ ಹಿಂದಿನ ಸಿನಿಮಾ- ಕುಲವಧು. ಈ ಸಿನಿಮಾದಲ್ಲಿ ಅಪರೂಪದ ಒಂದು ಹಾಡಿದೆ. ಅದೇ ‘ಯುಗ ಯುಗಾದಿ ಕಳೆದರೂ |
ಯುಗಾದಿ ಮರಳಿ ಮರಳಿ ಬರುತಿದೆ ||’ ಎಂಬ ನಿತ್ಯನೂತನ, ಚಿರೋಲ್ಲಾಸದ ಹಾಡು. ಅದನ್ನು ರಚಿಸಿದವರು ವರಕವಿ ಡಾ|| ದ.ರಾ.ಬೇಂದ್ರೆ. ಹಾಡಿದವರು ಎಸ್. ಜಾನಕಿ.
“ಯುಗ ಯುಗಾದಿ ಕಳೆದರೂ | ಯುಗಾದಿ ಮರಳಿ ಮರಳಿ ಬರುತಿದೆ || ಹೊಸ ವರುಷಕೆ ಹೊಸ ಹರುಷವ | ಹೊಸತು ಹೊಸತು ತರುತಿದೆ || ಎಂಬ ಮೊದಲ ಸೊಲ್ಲೇ ಅರ್ಥಗರ್ಭಿತವಾದುದು. ಭಾರತೀಯರ ಪಾಲಿಗೆ ಯುಗಾದಿ ಹೊಸ ಹಬ್ಬ. ಅದು ಪ್ರತಿ ವರ್ಷ ಬರುತ್ತದೆ. ಮರಳಿ ಮರಳಿ ಬರುತ್ತದೆ. ಆದರೆ ಎಂದೂ ಅದು ಮಾಸುವುದಿಲ್ಲ. ಹೊಸ ವರ್ಷಕ್ಕೆ ಹೊಸ ಹರುಷವನ್ನು ತರುತ್ತದೆ. ಹೊಸತು ಹೊಸತಾಗಿ, ನವೋನವೀನವಾಗಿ ಕಂಗೊಳಿಸುತ್ತಾ, ಮನಮನಕೆ ಮುದವನ್ನು ನೀಡುತ್ತಾ ಬರುತ್ತದೆ.
ವರುಷಕೊಂದು ಹೊಸತು ಜನ್ಮ | ಹರುಷಕೊಂದು ಹೊಸತು ನೆಲೆಯು | ಅಖಿಲ ಜೀವಜಾತಕೆ | ಆ ಒಂದೇ ಒಂದು ಜನ್ಮದಲ್ಲಿ | ಒಂದೇ ಬಾಳ್ವೆ | ಒಂದೇ ಹರೆಯ | ನಮಗದಷ್ಟೇ ಏತಕೋ || ಎಂಬ ಪಲ್ಲವಿಯಲ್ಲಿ ಕವಿ ಬೇಂದ್ರೆಯವರಿಗೆ ವರುಷ, ಹರುಷ ಒಂದೇ ಆಗಿ ಹೊಸದರ ಜನ್ಮವಾಗಿ, ನೆಲೆಯಾಗಿ ಸಕಲ ಜೀವಜಾತಕ್ಕೂ ಸುಖೋನ್ಮಾದವನ್ನೂ, ನವೊಲ್ಲಾಸವನ್ನೂ ಕೊಡುವ ರೂಪಕವಾಗಿ ಕಾಣುತ್ತದೆ. ಜಗತ್ತಿನ ಸುಖ, ಸಂತೋಷ, ಆನಂದಗಳನ್ನು ಒಂದೇ ತೆಕ್ಕೆಯಲ್ಲಿ ಹೀರಿ ಅವನ್ನು ಅನುಭವಿಸಿಬಿಡುವ ನವತಾರಣ್ಯದ ಜನ್ಮ. ಅದನ್ನು ಕವಿ ಗುರುತಿಸಿದ್ದು ಒಂದೇ ಬಾಳ್ವೆ, ಒಂದೇ ಹರೆಯ ಎಂಬ ನವತಾರುಣ್ಯದ ಹೊಸ್ತಿಲಲ್ಲಿ.
ಒಟ್ಟಿನಲ್ಲಿ ಕವಿಗೆ ಯುಗಾದಿ ಹೊಸ ವರುಷದ ಹೊಸ ಹರುಷದ ಸಂಕೇತವಾಗಿ ಕಂಡಿದೆ. ಆದರೆ ಬೇಂದ್ರೆಯವರಿಗೆ ಕಂಡಂತೆ ಎಲ್ಲರಿಗೂ ಇಂದಿನ
ಯುಗಾದಿ ಕಾಣುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ಯಾಕೆ ಅಂದರೆ-ಸಾಮಾನ್ಯವಾಗಿ ಬಹುಪಾಲು ಮಂದಿಗೆ ಯುಗಾದಿ ಅಥವಾ ಇನ್ನಿತರ ಹಬ್ಬಗಳು ಒಂದು ಯಾಂತ್ರಿಕವಾಗಿ, ಆಚರಿಸಲೇ ಬೇಕೆಂಬ ವಿಽಯಾಗಿ, ಸಂಪ್ರದಾಯ ಜಡವಾಗಿ ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಿಗೆ ಹಾಯಾಗಿ ತಿಂದುಂಡು,
ಮಜಾಹೊಡೆದು, ವಿಶ್ರಾಂತಿ ಪಡೆಯುವ ದಿನವಾಗಿ ಪರಿಣ ಮಿಸುತ್ತವೆ.
ಅದರಲ್ಲಿ ಯಾವುದೇ ವಿಚಿಕಿತ್ಸತೆ ಇಲ್ಲ; ಯೋಚನೆ ಇಲ್ಲ; ತರ್ಕ ಇಲ್ಲ; ಆದರ್ಶ ಇಲ್ಲ; ಸಂಸ್ಕೃತಿ ಇಲ್ಲ. “ಆಚರಿಸಬೇಕು; ಆಚರಿಸಬೇಕು” ಅಷ್ಟೇ! ಮತ್ತೇನೂ ಇರುವುದಿಲ್ಲ. ಭಾರತೀಯರ ಹಬ್ಬಗಳು ಒಂದೊಂದೂ ಒಂದೊಂದರ ಪ್ರತೀಕವಾಗಿ ಕಾಣಿಸಿಕೊಳ್ಳುತ್ತವೆ. ಯುಗಾದಿ ಹೊಸದರ ಪ್ರತೀಕ. ಕಾಲ ಅಖಂಡವಾದುದು; ಅದು ಪ್ರವಾಹರೂಪದ್ದು; ಅದು ನಿಲ್ಲುವುದಿಲ್ಲ ಎಂಬ ಪ್ರeಯಿಂದಲೇ ನಾವು ಈ ಹಬ್ಬವನ್ನು ಆಚರಿಸಬೇಕು. ಇದಕ್ಕೊಂದು ಲೆಕ್ಕಾಚಾರವಿದೆ. ನಮಗೆ ಗತಿಸಿಹೋದ ಕಾಲಗಳೆಷ್ಟು? ನಮಗೀಗ ಎಷ್ಟು ವರ್ಷ? ನಾವು ಮಾಡಿದ ತಪ್ಪು-ನೆಪ್ಪುಗಳೆಷ್ಟು? ಬದುಕನ್ನು ಕಟ್ಟುವುದಕ್ಕೆ ನಾವು ಪಟ್ಟ ಪಾಡೆಷ್ಟು? ಅನುಭವಿಸಿದ ಸುಖ- ದುಃಖಗಳು ಯಾವವು? ಮಾನ-ಅವಮಾನ ಎಷ್ಟು? ಇವೇ ಮೊದಲಾದುವನ್ನು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಸದವಕಾಶ ಕಲ್ಪಿಸುವ ಹಬ್ಬ.
ಮಾಡಿದ್ದರಲ್ಲಿ ತಪ್ಪಿದ್ದರೆ, ದೋಷಗಳಿದ್ದರೆ ಅವನ್ನು ತಿದ್ದಿಕೊಳ್ಳುವುದಕ್ಕೆ, ಮುಂದೆ ಮತ್ತೆ ಅವು ಘಟಿಸದಂತೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಇದೊಂದು ಸುಸಂಧಿಯನ್ನು ಒದಗಿಸುವ ಹಬ್ಬ. ಸಿಂಹಾವಲೋಕನಕ್ಕೆ ಸುವರ್ಣಾವಕಾಶ ಕಲ್ಪಿಸುವ ಹಬ್ಬ. ಹೀಗೆ ತಿಳಿದು ಆಚರಿಸಿದರೆ ಖಂಡಿತಕ್ಕೂ ಈ ಹಬ್ಬ ಸಾರ್ಥಕ್ಯವನ್ನು ತರುತ್ತದೆ. ಕಾಲ ಅಥವಾ ಸಮಯ ಎಂದಕೂಡಲೆ ನಮ್ಮ ಹೊಣೆಗಾರಿಕೆ ಹೆಚ್ಚಾಗಿಬಿಡುತ್ತದೆ. ಕಾಲವನ್ನು ಸದುಪಯೋಗ ಪಡಿಸಿಕೊಳ್ಳದಿದ್ದರೆ ನಮ್ಮ ಬಾಳು ವ್ಯರ್ಥ. ಕಾಲದ ಅಥವಾ ಸಮಯದ ಮೌಲ್ಯ, ಮಹತ್ವ, ಅದರ ಬೆಲೆ ಗೊತ್ತಾಗಬೇಕಾದರೆ ಪರೀಕ್ಷೆಯಲ್ಲಿ -ಲಾಗಿ ಮನೆಯಲ್ಲೇ ಕೂತ ವಿದ್ಯಾರ್ಥಿಯನ್ನು ಕೇಳಬೇಕು.
ಮುಂದಿನ ತರಗತಿಗೆ ಹೋಗುವಂತೆಯೂ ಇಲ್ಲ. ಅಲ್ಲೇ ಕೂರುವಂತೆಯೂ ಇಲ್ಲ. ಅಂತಹ ಸ್ಥಿತಿಯನ್ನು ತಂದಿರುತ್ತದೆ -ಲಾದ ಆ ವರ್ಷ. ಒಂಭತ್ತು
ತಿಂಗಳ ಮಹತ್ವವನ್ನು ತಿಳಿಯಬೇಕಿದ್ದರೆ ಮಗುವನ್ನು ಹೊತ್ತ ಗರ್ಭಿಣಿಯನ್ನು ಕೇಳಬೇಕು. ದಿನದಿಂದ ದಿನಕ್ಕೆ, ತಿಂಗಳಿಂದ ತಿಂಗಳಿಗೆ ಬೆಳೆಯುತ್ತಿರುವ ಹೊಟ್ಟೆಯ ಭಾರ, ಹೊಟ್ಟೆಯಲ್ಲಿರುವಾಗಲೇ ಮಗುವಿನ ಕಡೆಗೆ ಜವಾಬ್ದಾರಿ ಹೊರುವ ತಾಯ್ತತನದ ಹಿರಿಮೆ, ಆತಂಕ, ಕಾತರ, ಮಗುವನ್ನು ಪಡೆಯುವ ಸಂತಸದ ಘಳಿಗೆಯನ್ನು ಕಾಯುವ ಮಧುರ ಕ್ಷಣ-ಹೀಗೆ ಒಂದೇ ಎರಡೇ ಅವು ಅವಳಿಗೆ ಮಾತ್ರ ತಿಳಿದಿರುತ್ತದೆ.
ಬಡವ-ಶ್ರೀಮಂತ, ದಡ್ಡ-ಬುದ್ಧಿವಂತ, ಮೇಲು-ಕೀಳು, ಆಲಸಿ-ಕ್ರಿಯಾಶೀಲ, ಯುವಕ-ಮುದುಕ, ಹೆಣ್ಣು-ಗಂಡು ಎಂಬ ಭೇದಭಾವವಿಲ್ಲದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ ಕಾಲ ಕೆಲವೊಮ್ಮೆ ಪಕ್ಷಪಾತ ಮಾಡುತ್ತದೆಯೇನೋ ಅಂತ ಅನ್ನಿಸುತ್ತದೆ. ವಾಸ್ತವವಾಗಿ ಅದು ಪಕ್ಷಪಾತ ಮಾಡುವುದಿಲ್ಲ. ಆದರೆ ಅದು ಅಂತಹ ಭ್ರಮೆಯನ್ನು ಹುಟ್ಟಿಸುತ್ತದೆ. ಹೊಲ- ಗದ್ದೆ, ಕೋರ್ಟು-ಕಛೇರಿ, ಕಾರ್ಖಾನೆ, ಬಸ್‌ಚಾಲನೆ, ಹೈನುಗಾರಿಕೆ, ಸೈನಿಕ ಕ್ಷೇತ್ರ ಮೊದಲಾದ ವಿಭಾಗಗಳಲ್ಲಿ ಕೆಲಸ ಮಾಡುವವರು “ನಮಗೇನೂ ಬದಲಾವಣೆಯೇ ಇರುವುದಿಲ್ಲ, ನಮಗೆ ಎಲ್ಲಾ ದಿನಗಳೂ ಒಂದೇ” ಅನ್ನುತ್ತಿರುತ್ತಾರೆ.
“ಕೇಳಿದಾಗ ನಮಗೆ ರಜೆ ಸಿಗುವುದಿಲ್ಲ, ನಮಗೆ ವಿಶ್ರಾಂತಿಯೇ ಇಲ್ಲವಾಗಿದೆ” ಅನ್ನುತ್ತಾರೆ. ಕೆಲವರು “ನಮಗೆ ಸಮಯವೇ ಸಾಕಾಗುವುದಿಲ್ಲ” ಅಂದರೆ ಇನ್ನು ಕೆಲವರು “ನಮಗೆ ಹೊತ್ತೇ ಹೋಗುವುದಿಲ್ಲ” ಅನ್ನುತ್ತಾರೆ. ಜಗತ್ತಿನಲ್ಲಿ ಏನಾದರೂ ದರೋಡೆ, ಕಳ್ಳತನ, ಭಯೋತ್ಪಾದನೆ, ಹಿಂಸಾಚಾರ, ಅತ್ಯಾಚಾರ, ಭ್ರಷ್ಟಾಚಾರ, ಲಂಚರುಷುವತ್ತುಗಳು ಅತಿಯಾಗಿ ನಡೆದಾಗ “ಕಾಲಾಯ ತಸ್ಮೈ ನಮಃ” “ಇದೆಲ್ಲ ಕಾಲದ ಮಹಿಮೆ” ಎಂದು, ಕಾಲಕ್ಕೆ ನಮಸ್ಕಾರ ಮಾಡಿ, ಕೈಚೆಲ್ಲಿ ಕುಳಿತುಕೊಳ್ಳುವವರೂ ಇದ್ದಾರೆ.
ಹಾಗಾದರೆ ಇದರ ನಿಜವಾದ ಅರ್ಥ ಏನು? ನಿಜವಾಗಲೂ ಕಾಲ ಯಾವುದೇ ಬದಲಾವಣೆಗೆ ಒಳಪಡುವುದಿಲ್ಲ. ಅದು ಪ್ರವಾಹರೂಪದ್ದು. ಅದು ಚಲಿಸುತ್ತಲೇ ಇರುತ್ತದೆ. ಅದರ ಪ್ರಭಾವಕ್ಕೆ ಸಿಲುಕಿದ ನಾವು ಮಾತ್ರ ಬದಲಾವಣೆಗೆ ಒಳಪಡುತ್ತಿರುತ್ತೇವೆ. ಶೈಶವ, ಬಾಲ್ಯ, ಯೌವನ, ವಾರ್ಧಕ್ಯ, ಮದುವೆ, ಮಕ್ಕಳು, ವಿದ್ಯಾಭ್ಯಾಸ ಇತ್ಯಾದಿ. ತನಗೆ ರಜೆ ಸಿಗುವುದಿಲ್ಲ, ನನಗೆ ಸಮಯವೇ ಹೋಗುವುದಿಲ್ಲ, ನನಗೆ ಸಮಯವೇ ಸಾಕಾಗುವುದಿಲ್ಲ ಅನ್ನುವವರು ಕಾಲ ಸಾಪೇಕ್ಷವಾದುದು ಅನ್ನುವುದನ್ನು ಗಮನಿಸಬೇಕು.
ಕಾರ್ಖಾನೆ, ಬಸ್‌ಚಾಲನೆ, ಸೈನಿಕವಿಭಾಗ ಮುಂತಾದವುಗಳಲ್ಲಿ ಕೆಲಸ ಮಾಡುವವರಿಗೆ ಅವರ ಕೆಲಸದ ಸ್ವಭಾವವೇ ಅಂಥಾದ್ದು ಅನ್ನುವುದನ್ನು
ಅವರು ಮರೆಯಬಾರದು. ಸೊಂಬೇರಿಗಳಿಗೆ ಸಮಯ ಅಧಿಕವಾದಂತೆ ಭಾಸವಾಗುವುದು ಸಹಜ. ಅದೇ ಕ್ರಿಯಾಶಿಲರಿಗೆ, ಸಾಹಸೋದ್ಯಮಿಗಳಿಗೆ, ಸದಾ ಚಟುವಟಿಕೆಯಿಂದಿರುವವರಿಗೆ ಸಮಯ ಸಾಕಾಗುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ. ಇಷ್ಟಿದ್ದರೂ ಮನುಷ್ಯ ಕಾಲವನ್ನು ಗೆಲ್ಲುವುದಕ್ಕೆ ಪ್ರಯತ್ನಿಸಿದ್ದಾನೆ. ಅದರಲ್ಲಿ ಯಶಸ್ವಿಯೂ ಆಗಿದ್ದಾನೆ. ಎತ್ತಿನ ಬಂಡಿಯ ಸ್ಥಾನದಲ್ಲಿ ಅತಿವೇಗದ ವಾಹನಗಳು ಬಂದಿವೆ. ಅಂಚೆಯ ಬದಲು ಮೊಬೈಲ್, ವಾಟ್ಸಪ್ಪು, ಈಮೈಲ್ ಮೊದಲಾದವು ಬಂದಿವೆ.
ವಿಜ್ಞಾನ-ವೈದ್ಯಕೀಯ-ಸಾಮಾಜಿಕ-ಸಾಂಸ್ಕೃತಿಕ ರಂಗಗಳಲ್ಲಿ ಮನುಷ್ಯ ತನ್ನ ಸಾಹಸ-ಸಾಧನೆ, ಮಹಿಮೆ- ವ್ಯಕ್ತಿತ್ವ, ಸಿದ್ಧಿ-ಸೃಜನಶೀಲತೆಗಳಿಂದ ಕಾಲಾತೀತನಾಗಲು ಯತ್ನಿಸಿದ್ದಾನೆ. ಅವುಗಳಲ್ಲಿ ಅಷ್ಟೋ ಇಷ್ಟೋ ಗೆಲುವನ್ನೂ ಸಾಧಿಸಿದ್ದಾನೆ. ಆದರೆ ಒಂದು ವಿಷಯದಲ್ಲಿ ಮಾತ್ರ ಆತ ಇನ್ನೂ
ಗೆಲುವನ್ನು ಸಾಧಿಸಿಲ್ಲ. ಅವನ ಅಳು, ನಗು, ಆಸೆ, ರೋಷ, ಆಕ್ರೋಶ, ಕಾಮ, ಮದ, ಮತ್ಸರ, ಲೋಭ, ಮೋಹ ಮುಂತಾದ ಹೃದಯಾವಸ್ಥೆಗಳಲ್ಲಿ ಮಾತ್ರ ಆತ ಎಷ್ಟು ಮಾತ್ರವೂ ಬದಲಾಯಿಸಿಲ್ಲ. ಮನುಷ್ಯನಲ್ಲಿ ಸಹಜವಾಗಿ ಉದ್ಭವಿಸುವ ಹೃದಯದ ವಿಕೃತಿಗಳನ್ನು, ಅರಿಗಳನ್ನು ಗೆದ್ದು
ಆ ಜಾಗದಲ್ಲಿ ಸಂಸ್ಕೃತಿ-ಸ್ನೇಹ-ಸೌಹಾರ್ದಗಳನ್ನು ಪ್ರತಿಷ್ಠಾಪಿಸುವುದಕ್ಕೇ ಹಬ್ಬ-ಹರಿದಿನಗಳು ಬರುವುದು. ಅವುಗಳ ಸಾಂಕೇತಿಕ ಅರ್ಥವನ್ನೋ, ಸಂದೇಶವನ್ನೋ, ಮೌಲ್ಯಗಳನ್ನೋ ಅರಿತು ಹಬ್ಬ ಆಚರಿಸಿದರೆ ಆ ಹಬ್ಬ ನಿಜಕ್ಕೂ ಅರ್ಥ ಪೂರ್ಣವಾಗುತ್ತದೆ.
ಯುಗಾದಿ ಹಬ್ಬದ ಸಂಕೇತವೇ ಅದು. ‘ನಮ್ಮ ಜೀವನವು ದಿನದಿನವೂ ಹೊಸದಾಗುತ್ತಿರಬೇಕು. ಅದೇ ಪ್ರಕೃತಿಯ ನಿಯಮ. ದಿನದಿನವೂ ನಮಗೆ ಪುನರ್ಜನ್ಮವಾಗಬೇಕು. ಉಲ್ಲಾಸ ಮತ್ತು ಪ್ರಯತ್ನವನ್ನು ತೊರೆಯದ ವಿರಕ್ತಿ ನಮ್ಮದಾಗಬೇಕು. ಲಂಪಟತೆಯಿಲ್ಲದ, ಕರ್ತವ್ಯವನ್ನು ಮರೆಯದ ಜೀವನೋಲ್ಲಾಸ ನಮ್ಮಲ್ಲಿ ನೆಲೆಗೊಳ್ಳಬೇಕು. ಇಂದಿನ ಸೋಲು ನಾಳಿನ ಗೆಲುವಿಗೆ ಹಾದಿಯೆಂಬ ನಿಟ್ಟಿನಲ್ಲಿ ನಮ್ಮ ಕಾರ್ಯಾಸಕ್ತಿ ಬೆಳೆಯಬೇಕು’ ಎಂಬುದೇ ಯುಗಾದಿ ಹಬ್ಬದ ಸಂದೇಶ.