Thursday, 12th December 2024

ಸೋನು ನಿಗಮ್ ತಂದೆಯ ಮನೆಯಿಂದ 72 ಲಕ್ಷ ರೂಪಾಯಿ ಕಳ್ಳತನ

ಮುಂಬೈ: ಗಾಯಕ ಸೋನು ನಿಗಮ್ ಅವರ ತಂದೆಯ ಮನೆಯಿಂದ 72 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪದಲ್ಲಿ ಅವರ ಮಾಜಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸೋನು ನಿಗಮ್ ತಂದೆ ಆಗಮ್‌ಕುಮಾರ್ ನಿಗಮ್ ಮುಂಬೈನ ಒಶಿವರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಬಿಲ್ಡಿಂಗ್‌ನಲ್ಲಿ ವಾಸವಿದ್ದಾರೆ. ಈ ಕಳ್ಳತನ ಮಾರ್ಚ್ 19 ಮತ್ತು 20ರಂದು ನಡೆದಿದೆ ಎಂದು ಆಪಾದಿಸಲಾಗಿದೆ.

ಸೋನು ನಿಗಮ್ ಅವರ ತಂಗಿ ನಿಕಿತಾ ಸೋಮವಾರ ಪೊಲೀಸ್ ಠಾಣೆಗೆ ಆಗಮಿಸಿದ ದೂರು ನೀಡಿದ್ದಾರೆ. ಆಗಮ್‌ಕುಮಾರ್, ಸುಮಾರು ಎಂಟು ತಿಂಗಳ ಹಿಂದೆ ರೆಹಾನ್ ಎಂಬುವವರನ್ನು ಚಾಲಕರಾಗಿ ಹೊಂದಿದ್ದರು. ಅವರ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದಿದ್ದರು ಎನ್ನಲಾಗಿದೆ.

ಭಾನುವಾರ ಸಂಜೆ ಮಗಳಿಗೆ ಕರೆ ಮಾಡಿ, ಮರದ ಕಪಾಟಿಲ್ಲಿ ಇದ್ದ ಡಿಜಿಟಲ್ ಲಾಕರ್‌ನಿಂದ 40 ಲಕ್ಷ ರೂಪಾಯಿ ಕಾಣೆಯಾಗಿದೆ ಎಂದು ಹೇಳಿದರು. ಮರುದಿನ 7 ಬಂಗ್ಲೊದಲ್ಲಿದ್ದ ಸೋನು ನಿಗಮ್ ನಿವಾಸಕ್ಕೆ ವೀಸಾ ಕೆಲಸಕ್ಕಾಗಿ ಆಗಮ್‌ಕುಮಾರ್ ತೆರಳಿದ್ದರು. ಮರಳಿ ಬಂದು ನೋಡಿದಾಗ ಲಾಕರ್‌ನಿಂದ 32 ಲಕ್ಷ ರೂಪಾಯಿ ಕಾಣೆಯಾಗಿತ್ತು. ಲಾಕರ್‌ಗೆ ಯಾವುದೇ ಹಾನಿ ಆಗಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸಿಸಿ ಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದಾಗ, ಎರಡೂ ದಿನ ಕೂಡಾ ರೆಹಾನ್, ದೊಡ್ಡ ಚೀಲದೊಂದಿಗೆ ಅವರ ಫ್ಲಾಟ್‌ಗೆ ತೆರಳಿದ್ದು ಕಂಡುಬಂದಿದೆ. ನಕಲಿ ಕೀಲಿ ಬಳಸಿ ಈ ಹಣ ಲಪಟಾಯಿಸಿರಬೇಕು ಎಂದು ಅವರು ಶಂಕಿಸಿದ್ದಾರೆ.