ವರ್ತಮಾನ
maapala@gmail.com
ವಾರದ ಹಿಂದೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಪೂರಕ ವರದಿಗಳೇ ಬರುತ್ತಿದ್ದವು. ಆಡಳಿತಾರೂಢ ಬಿಜೆಪಿ ಸೋಲಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಪಕ್ಷ ಕೂಡ ಸಿದ್ಧವಾಗಿತ್ತು. ಅದಕ್ಕೆ ಬೇಕಾದ ವೇದಿಕೆಯನ್ನೂ ಸಿದ್ಧಪಡಿಸಿಕೊಂಡಿತ್ತು. ಆದರೆ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ವಿಚಾರದಲ್ಲಿ ಉಂಟಾಗಿರುವ ಗೊಂದಲ ಎಲ್ಲಾ ಬಣ್ಣವನ್ನೂ ಮಸಿ ನುಂಗಿತು ಎನ್ನುವಂತೆ ಕಾಂಗ್ರೆಸ್ಸಿನ ಇಷ್ಟು ದಿನಗಳ ಶತ ಪ್ರಯತ್ನಕ್ಕೆ ಹಿನ್ನಡೆ ತಂದುಕೊಟ್ಟಿದ್ದು ಸುಳ್ಳಲ್ಲ.
ಏಕೆಂದರೆ ಈ ಪ್ರಕರಣದಿಂದಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾಗುತ್ತಾರೆ ಎಂದು ಹೇಳಲಾಗುತ್ತಿರುವ ಸಿದ್ದರಾಮಯ್ಯ ಅವರನ್ನು ಕೋಲಾರ ದಂಥ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವು ದಾದರೂ ಹೇಗೆ ಎಂಬ ಪ್ರಶ್ನೆ ಕೇಳುವಂತಾಗಿದೆ. ಹೌದು, ಸಿದ್ದರಾಮಯ್ಯ ಕ್ಷೇತ್ರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಒಗ್ಗಟ್ಟು ಎನ್ನುವುದು ಕೇವಲ ಮಾತಿಗೆ ಮಾತ್ರ ಸೀಮಿತ ಎಂಬುದು ಸ್ಪಷ್ಟವಾಗಿದೆ.
ಸಿದ್ದರಾಮಯ್ಯ ಸುಲಭವಾಗಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಅವರೇ ಆಗುವುದರಲ್ಲಿ ಸಂಶಯ ಇರಲಿಲ್ಲ. ಅದಕ್ಕೆ ಬೇಕಾದ ವೇದಿಕೆಯೂ ಸಿದ್ಧವಾಗುತ್ತಿತ್ತು. ಮುಖ್ಯಮಂತ್ರಿ ರೇಸ್‌ನಲ್ಲಿರುವವ ಮತ್ತೊಬ್ಬ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ವಿರುದ್ಧ ಹಲವು ಪ್ರಕರಣಗಳಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಹೀಗಾಗಿ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬುದು ಕಾಂಗ್ರೆಸ್‌ನ ಒಂದು ವಲಯದಲ್ಲಿ ಸ್ಪಷ್ಟವಾಗಿತ್ತು. ಆದರೆ, ಮೂಲ ಕಾಂಗ್ರೆಸಿಗರು ಸಾಕಷ್ಟು ಮಂದಿ ಮುಖ್ಯಮಂತ್ರಿ ರೇಸ್‌ನಲ್ಲಿರುವಾಗ ಸಿದ್ದರಾಮಯ್ಯ ಅವರನ್ನು ಮತ್ತೆ ಆ ಸ್ಥಾನದಲ್ಲಿ ಕೂರಿಸಲು ರಾಜ್ಯದ ಮೂಲ ಕಾಂಗ್ರೆಸ್ ನಾಯಕರಿಗೆ ಮನಸ್ಸಿದ್ದಂತೆ ಕಾಣಿಸುತ್ತಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಕ್ಷೇತ್ರದ ಕುರಿತು ವಿವಾದ ಸೃಷ್ಟಿಯಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
2018ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಸೋಲುವ ಭೀತಿ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದರೂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬದಾಮಿಯಿಂದಲೂ ಕಣಕ್ಕಿಳಿದು ಬದಾಮಿಯಿಂದ ಮಾತ್ರ ಗೆಲ್ಲುವಂತಾಯಿತು. ಈ ಬಾರಿ ಕಾಂಗ್ರೆಸ್ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಆ ಪಕ್ಷಕ್ಕೆ ಮಾತ್ರವಲ್ಲ, ಸಿದ್ದರಾಮಯ್ಯ ಅವರಿಗೂ ಇತ್ತು. ಒಂದೊಮ್ಮೆ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ತಮಗೆ ಸಿಗುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಭಾವಿಸಿದ್ದರು. ಈ ಕಾರಣಕ್ಕಾಗಿ ಹೋಗಿ ಬರಲು ಕಷ್ಟವಾಗುತ್ತದೆ ಎಂಬ ಕಾರಣ ಮುಂದಿಟ್ಟುಕೊಂಡು ಬೆಂಗಳೂರು ಸಮೀಪದ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿ ಅಂತಿಮವಾಗಿ ಕೋಲಾರವನ್ನು ಆಯ್ಕೆ ಮಾಡಿಕೊಂಡರು.
ಏಕೆಂದರೆ, ಚಾಮುಂಡೇಶ್ವರಿ ಕ್ಷೇತ್ರದಿಂದ ಕಳೆದ ಬಾರಿ ತಮ್ಮನ್ನು ಸೋಲಿಸಿದ್ದ ಜಿ.ಟಿ.ದೇವೇಗೌಡರೇ ಎದುರಾಳಿಯಾಗಿದ್ದರು. ಇನ್ನು ವರುಣಾದಿಂದ ಕಣಕ್ಕಿಳಿಯುವುದಾದರೆ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ರಾಜಕೀಯ ಭವಿಷ್ಯವನ್ನು ತಾವೇ ಹೊಸಕಿದಂತಾಗುತ್ತದೆ ಎಂಬ ಕಾರಣಕ್ಕೆ ಕೋಲಾರ ದಿಂದ ಕಣಕ್ಕಿಳಿಯಲು ನಿರ್ಧರಿಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಇತರೆ ನಾಯಕರೂ ಒಪ್ಪಿದ್ದರು. ಆದರೆ, ಇನ್ನೇನು ಟಿಕೆಟ್ ಹಂಚಿಕೆ
ಅಂತಿಮ ಹಂತಕ್ಕೆ ಬರುತ್ತಿದೆ ಎನ್ನುವಾಗ ಸಿದ್ದರಾಮಯ್ಯ, ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ. ಅಲ್ಲಿ ಗೆಲುವು
ಕಷ್ಟಸಾಧ್ಯ. ಹೀಗಾಗಿ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ.
ಆದ್ದರಿಂದ ರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂಬ ಸಂದೇಶ ಪಕ್ಷದ ವರಿಷ್ಠರಿಂದ ಬಂತು. ಹಾಗಿದ್ದರೆ ಸಿದ್ದರಾಮಯ್ಯ ಆ ಕ್ಷೇತ್ರ ಆಯ್ಕೆ ಮಾಡಿ ಕೊಂಡಾಗ ಅದು ಸುರಕ್ಷಿತವಲ್ಲ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿರಲಿಲ್ಲವೇ? ಸಿದ್ದರಾಮಯ್ಯ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಸ್ಪರ್ಧೆಗೆ ಬೇಕಾದ ಎಲ್ಲ ಸಿದ್ಧತೆ ನಡೆಸಿ ವಾರ್ ರೂಂ ಆರಂಭಿಸಿದ ಬಳಿಕ ಕ್ಷೇತ್ರದ ಚಿತ್ರಣ ಬದಲಾಯಿತೇ? ತಮ್ಮೂರಿನಿಂದ ಆಯ್ಕೆಯಾದವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಗೊತ್ತಿದ್ದರೂ ಅಂತಹ ಅಭ್ಯರ್ಥಿಯನ್ನು ಸೋಲಿಸುವಷ್ಟರ ಮಟ್ಟಿಗೆ ಕೋಲಾರ ಕ್ಷೇತ್ರದ ಮತದಾರರು ನಿರ್ಮೋಹಿ ಗಳೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಉದ್ಭವವಾಗುತ್ತಲೇ ಇದೆ.
ಇದಕ್ಕೆಲ್ಲ ಉತ್ತರ ಸಿಗುವುದು ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಗಿನ ಕೆಪಿಸಿಸಿ ಅಧ್ಯಕ್ಷ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಡಾ.ಜಿ.ಪರಮೇಶ್ವರ್ ಅವರ ಸೋಲಿನಲ್ಲಿ. ಆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರಿಂದ ಬಿಜೆಪಿ ಕುಸಿದುಹೋಗಿತ್ತು. ಕಾಂಗ್ರೆಸ್ ಅಽಕಾರಕ್ಕೆ ಬರುವುದು ಸ್ಪಷ್ಟವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾದರೆ ಅದಕ್ಕೆ ಸಿದ್ದರಾಮಯ್ಯ ಅವರ ಹೋರಾಟ ಮುಖ್ಯ ಕಾರಣವಾದರೂ ಅಧಿಕಾರಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿಯಾಗುವುದು ಪಕ್ಷದ ಸಂಪ್ರ
ದಾಯವಾಗಿತ್ತು. ಆದರೆ, ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್ ಸೋತರು. ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಅವರಿಗೆ ಒಲಿಯಿತು. ಯಾವುದೇ ಕಾರಣಕ್ಕೂ ಪರಮೇಶ್ವರ್ ಸೋಲುವ ಅಭ್ಯರ್ಥಿಯಾಗಿರಲಿಲ್ಲ.
ಬದಲಾಗಿ ಅವರನ್ನು ಸೋಲಿಸಲಾಯಿತು ಎಂಬುದು ಇತಿಹಾಸ. ಪರಮೇಶ್ವರ್ ಸೋಲಲು ಸಿದ್ದರಾಮಯ್ಯ ಮತ್ತು ಅವರ ತಂಡವೇ ಕಾರಣ ಎಂಬುದು ಆಗ ಎಲ್ಲರಿಗೂ ಗೊತ್ತಿದ್ದ ವಿಷಯ. ಅದೇ ರೀತಿ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾ ರ್ಜುನ ಖರ್ಗೆ ಸೋಲಿನ ಹಿಂದೆಯೂ ಸಿದ್ದರಾಮಯ್ಯ ಹೆಸರು ಕೇಳಿಬಂದಿತ್ತು. ಆದರೆ, ಸೋಲಿನ ಸತ್ಯಶೋಧನೆ ನಡೆಸಿದ್ದ ಸಮಿತಿ ಈ ಸೋಲಿಗೆ ಕಾರಣ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಶಾಸಕ ಶರಣಪ್ರಕಾಶ್ ಪಾಟೀಲ್ ಮೇಲೆ ಬಂತು. ಅವರಿಬ್ಬರು ಹಿರಿಯ ಮುಖಂಡರನ್ನು ತಾತ್ಸಾರದಿಂದ ನೋಡಿದ್ದು ಕಾರಣ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಸತ್ಯಶೋಧನಾ ಸಮಿತಿ ಹೇಳಿತ್ತು. ಆದರೆ, ಸುದರ್ಶನ್ ಅವರು ಸಿದ್ದರಾಮಯ್ಯ ಅವರಿಗೆ ಆಪ್ತರು ಎಂದು ಆಗ ಕೆಲವು ಕಾಂಗ್ರೆಸ್ ಮುಖಂಡರು ಹೇಳಿ ಸೋಲಿನ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ಕಟ್ಟುವ ಪ್ರಯತ್ನ ಮಾಡಿದ್ದರು.
ಸಿದ್ದರಾಮಯ್ಯ ಬೆಂಬಲಿಗರು ಆ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರು ಖರ್ಗೆ ಗೆಲ್ಲಿಸಲು ಸಹಕರಿಸಲಿಲ್ಲ ಎಂದು ಆರೋಪಿಸಿದ್ದರು. ಈ ಎರಡೂ ಅಂಶಗಳು ಇದೀಗ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂಬ ಸಮೀಕ್ಷಾ ವರದಿ ಬರಲು ಕಾರಣ ಎಂಬ ಅಂಶ ಗೌಪ್ಯವಾಗೇನೂ ಉಳಿದಿಲ್ಲ. ಇದರಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಕ್ಕಿಂತ ಅವರಿಗೆ ಅವರ ಬಗ್ಗೆಯೇ ಅಪನಂಬಿಕೆ ಹುಟ್ಟಿಸುವ ಪ್ರಯತ್ನ
ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬದಾಮಿಯಿಂದ ಹೊರಬಂದು ಕೋಲಾರ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ಆ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಬೇಕಾದರೆ ಸುರಕ್ಷಿತ ಎನ್ನಲಾದ ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಹಾಗೆ ಆಯ್ಕೆ ಮಾಡಿಕೊಂಡರೆ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರ ತ್ಯಾಗ ಮಾಡಬೇಕಾಗುತ್ತದೆ. ಹಾಗೇನಾದರೂ ಆದರೆ ತನ್ನ ರಾಜಕೀಯ
ಲಾಭಕ್ಕಾಗಿ ಪುತ್ರನ ರಾಜಕೀಯ ಭವಿಷ್ಯವನ್ನು ಹಾಳು ಮಾಡಿದ ಆರೋಪ ಸಿದ್ದರಾಮಯ್ಯ ಮೇಲೆ ಬರುತ್ತದೆ. ಮತ್ತೊಂದೆಡೆ ಕೋಲಾರದಲ್ಲಿ ಸೋಲುವ ಭೀತಿ ಇದೆ ಎಂದಾದರೆ ಸಿದ್ದರಾಮಯ್ಯ ಆ ಕ್ಷೇತ್ರ ತೊರೆಯುತ್ತಾರೆ. ಕ್ಷೇತ್ರ ತೊರೆದರೆ ಗೆಲ್ಲಿಸಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇಲ್ಲ ಎಂಬ
ಸಂದೇಶವನ್ನು ಸಾರಿದಂತಾಗುತ್ತದೆ.
ಏನೇ ಆದರೂ ಅಪವಾದ ಸಿದ್ದರಾಮಯ್ಯ ಮೇಲೆ ಬರುತ್ತದೆ ಎಂಬುದು ರಾಜ್ಯ ಕಾಂಗ್ರೆಸ್ ನಾಯಕರ ಯೋಚನೆಯಾಗಿತ್ತು ಎಂಬುದು ಒಳರಾಜಕೀಯ ಅರಿತವರಿಗೆ ಗೊತ್ತಾಗುತ್ತದೆ. ಆದರೆ, ಇದರಿಂದ ನಿಜವಾಗಿ ಮುಜುಗರ ಅನುಭವಿಸಿದ್ದು ಮಾತ್ರ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯ
ಮಂತ್ರಿ ಅಭ್ಯರ್ಥಿಯನ್ನು ಒಂದು ಕ್ಷೇತ್ರದಿಂದ ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದು ಅಧಿಕಾರ ಹೇಗೆ ಹಿಡಿಯಲು ಸಾಧ್ಯ ಎಂಬ ಪ್ರಶ್ನೆ ಉದ್ಭವವಾಗುವುದರ ಜತೆಗೆ ಅದೀಕಾರದ ಸಮೀಪ ಬರುತ್ತಿರುವ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲ. ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶ ಹೋಗಿ ಆಗಿದೆ.
ಕಾಂಗ್ರೆಸ್ಸನ್ನು ಬಲವಾಗಿ ನಂಬಿದ್ದ ಮತದಾರರ ನಂಬಿಕೆಯ ಬುಡಕ್ಕೇ ಈ ಪ್ರಕರಣ ಕೊಡಲಿ ಪೆಟ್ಟು ನೀಡಿದೆ. ಮೂಲ ಕಾಂಗ್ರೆಸ್ಸಿಗರು ಹೊರಗಿನಿಂದ ಬಂದವರನ್ನು ನಂಬುವುದಿಲ್ಲ, ಅವರನ್ನು ತಮ್ಮವರೆಂದು ಅಪ್ಪಿಕೊಳ್ಳುವುದಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ. ಚುನಾವಣೆ ಸಮೀಪಿಸುತ್ತಿರುವಾಗ ಇದು ಕಾಂಗ್ರೆಸ್ ಪಾಲಿಗೆ ಮಗ್ಗುಲ ಮುಳ್ಳಾಗಿದೆ.
ಲಾಸ್ಟ್ ಸಿಪ್: ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬುದು ದೇವರ ಮೇಲೆ ನಂಬಿಕೆ ಇಲ್ಲದವರಿಗೂ ಅನುಭವಕ್ಕೆ ಬರುತ್ತದೆ.