Saturday, 14th December 2024

ದಕ್ಷಿಣ ಭಾರತ ಚಿತ್ರಗಳ ಸುವರ್ಣ ಪರ್ವ !

ವೀಕೆಂಡ್ ವಿತ್ ಮೋಹನ್

camohanbn@gmail.com

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದಾನೊಂದು ಕಾಲದಲ್ಲಿ ಭಾರತೀಯ ಚಲನಚಿತ್ರವೆಂದರೆ ಕೇವಲ ಬಾಲಿವಯಡ್‌ಗೆ ಸೀಮಿತವಾಗಿತ್ತು. ನ್ಯೂಯಾರ್ಕ್ ನಗರದ ಕೆಂಪು ಹಾಸಿನ ಮೇಲೆ ನಡೆಯುವ ಆಸ್ಕರ್ ಸಮಾರಂಭದಲ್ಲಿ ಬಾಲಿವುಡ್ ಗಣ್ಯರು ಮಾತ್ರ ಕಾಣಿಸಿಕೊಳ್ಳುತ್ತಿದ್ದರು.

ಎ.ಆರ್.ರೆಹಮಾನ್ ಸಂಗೀತ ನೀಡಿದ್ದ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರಕ್ಕೆ ಆಸ್ಕರ್ ಬಂದಿದ್ದನ್ನು ಕೊಂಡಾಡಿದ್ದೆವು. ಆದರೆ ಈ ಚಿತ್ರ ನಿರ್ಮಾಣ ಮಾಡಿದ್ದು ಭಾರತೀಯ ನಿರ್ಮಾಪಕನಲ್ಲ. ಜಗತ್ತಿನಲ್ಲಿ ತಮ್ಮನ್ನು ತಾವು ಅತೀ ಬುದ್ಧಿವಂತರೆಂದುಕೊಂಡಿರುವ ಅಮೆರಿಕನ್ನರಿಗೆ ಆಸ್ಕರ್ ಪ್ರಶಸ್ತಿಗಾಗಿ ಲಾಭಿ ಮಾಡುವ ಕಲೆ ಪರಂಪರಾಗತವಾಗಿ ಬೆಳೆದುಕೊಂಡು ಬಂದಿದೆ. ಹಾಲಿವುಡ್ ಚಲನಚಿತ್ರ ಗಳಿಗೆ ಮಾತ್ರ ಆಸ್ಕರ್ ಸಿಗುವಂತೆ ಮಾಡಿ ಅಲ್ಲಿನ ಚಿತ್ರರಂಗವನ್ನು ಜಗತ್ತಿನ ನಂಬರ್ ಒನ್ ಮಾಡಿದ್ದರು.

ಮಹಾಭಾರತದ ಹಲವು ಪಾತ್ರಗಳನ್ನು ಬಳಸಿಕೊಂಡು ಆ ಪಾತ್ರಗಳಿಗೆ ಮರುನಾಮಕರಣ ದೊಂದಿಗೆ ಹಾಲಿವುಡ್ ಚಿತ್ರಗಳನ್ನು ನಿರ್ಮಿಸಿ ಆಸ್ಕರ್ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದರು. ಜಗತ್ತಿ ನಾದ್ಯಂತ ಭಾರತದಲ್ಲಿಯೂ ಅವರು ಬಳಸಿಕೊಳ್ಳುವ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಆದರೆ ನಮ್ಮದೇ ಪಾತ್ರಗಳನ್ನು ಕದ್ದು ಆಧುನಿಕ ಸ್ಪರ್ಶ ನೀಡಿ ನಮ್ಮ ಮುಂದಿಟ್ಟಿರುವುದು ಭಾರತೀಯರ ಅರಿವಿಗೆ ಬರುತ್ತಿರಲಿಲ್ಲ. ಉದಾಹರಣೆಗೆ ‘ಹಲ್ಕ’ ಎಂಬ ಪಾತ್ರದಾರಿಯನ್ನು ಮಹಾನ್ ದೈತ್ಯ ನನ್ನಾಗಿ ಬಿಂಬಿಸಿ ದೊಡ್ಡ ಚಿತ್ರವನ್ನು ನಿರ್ಮಾಣ ಮಾಡಿದರು.

ಈ ಪಾತ್ರಕ್ಕೆ ಸ್ಪೂರ್ತಿ ಮಹಾಭಾರತದ ’ಭೀಮ’ನೆಂಬ ಕನಿಷ್ಟ ಯೋಚನೆಯನ್ನೂ ಮಾಡದೆ ಭಾರತೀಯರು ’ಹಲ್ಕ’ ಪಾತ್ರಕ್ಕೆ ಶಿಳ್ಳೆ ಹೊಡೆದರು. ಅಷ್ಟೇ ಯಾಕೆ ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ‘ಹಾಲೋವೀನ್’ ಹಬ್ಬ ಆಚರಿಸಿ ದೆವ್ವದ ವೇಷಧಾರಿಗಳನ್ನು ಸೃಷ್ಟಿಸಲಾಗುತ್ತದೆ. ಇಡೀ ಜಗತ್ತಿಗೆ ಈ ಆಚರಣೆ ಹಬ್ಬಿದೆ, ಭಾರತೀಯರು ತಮ್ಮ ಮಕ್ಕಳಿಗೆ ದೆವ್ವದ ವೇಷ ಧರಿಸಿ ರಸ್ತೆಗೆ ಇಳಿಸುತ್ತಾರೆ. ವಿಪರ್ಯಾಸವೆಂದರೆ ಪೋಷಕರು ಮಹಾಭಾರತದ ‘ಭೀಮ’ನ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದಿಲ್ಲ, ಪಿತೃ ಪಕ್ಷದ ಮಹತ್ವವನ್ನು ಮಕ್ಕಳಿಗೆ ಹೇಳಿಕೊಡುವುದಿಲ್ಲ.

ಬಾಲಿವುಡ್ ಅಂಗಳದಲ್ಲಿ ಭಾರತೀಯ ಇತಿಹಾಸ ಮತ್ತು ಪರಂಪರೆ ಬಿಂಬಿಸುವ ಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗಲಿಲ್ಲ. ಹೆಚ್ಚಾಗಿ ಪ್ರೇಮಕಥೆಗಳು, ಭೂಗತ ಲೋಕದ ಕಥೆಗಳು, ಮುಸಲ್ಮಾನರನ್ನು ಓಲೈಸುವ ಪಾತ್ರಗಳು, ಗ್ರಾಫಿಕ್ ಹೆಚ್ಚಾಗಿರುವ ಕಥೆಗಳೇ ನಿರ್ಮಾಣವಾಗಿದ್ದವು. ನೂರಾರು
ಕೋಟಿಯ ಸಂಭಾವನೆ ಪಡೆಯುವ ‘ಖಾನ್’ಗಳು ಎಂದಿಗೂ ಭಾರತೀಯ ಸಂಸ್ಕೃತಿ ಬಿಂಬಿಸುವ ಚಿತ್ರದಲ್ಲಿ ಅಭಿನಯಿಸಲಿಲ್ಲ.ಆಸ್ಕರ್ ಅಂಗಳಕ್ಕೆ ಭಾರತ ಚಿತ್ರರಂಗದ ಚೆಂಡು ಬಿದ್ದದ್ದು ಬಹಳ ಕಡಿಮೆ. ಹಾಲಿವುಡ್ ಮೋಹಕ್ಕೊಳಗಾದ ಬಾಲಿವುಡ್ ಮಂದಿ ಅದೇ ಮಾದರಿಯ ಚಿತ್ರಗಳನ್ನು
ನಿರ್ಮಾಣ ಮಾಡ ಹೊರಟು ಕೈ ಸುಟ್ಟುಕೊಂಡರು. ಈಗ ಕಾಲ ಬದಲಾಗಿದೆ, ದಕ್ಷಿಣ ಭಾರತದ ಚಿತ್ರಗಳು ನೂರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ.

ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡಂತಹ ಚಿತ್ರಗಳ ನಿರ್ಮಾಣವಾಗುತ್ತಿದೆ. ಪ್ರೇಕ್ಷಕ ಪ್ರಭು ಹುಚ್ಚೆದ್ದು ಸಿನಿಮಾ ಮಂದಿರಕ್ಕೆ ಬರುತ್ತಿzನೆ. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಚಿತ್ರ ಆಸ್ಕರ್ ಪಡೆಯುವ ಮೂಲಕ ಇಡೀ ಜಗತ್ತಿಗೆ ದಕ್ಷಿಣ ಭಾರತದ ಸಿನೆಮಾಗಳ
ತಾಕತ್ತನ್ನು ತೋರಿಸಿದೆ. ‘ನಾಟು ನಾಟು’ ಹಾಡನ್ನು ಯಾರೇ ಕೇಳಿದರು ಪುನಃ ಪುನಃ ಕೇಳಬೇಕೆನಿಸುತ್ತಿರುತ್ತದೆ. ಬ್ರಿಟಿಷರ ಗುಲಾಮಿ ಮನಃಸ್ಥಿತಿ ಯನ್ನು ಬಿಚ್ಚಿಡುವ ಚಿತ್ರ ಇದಾಗಿದ್ದು, ಇಂತಹ ಚಿತ್ರದ ಹಾಡನ್ನು ಪಾಶ್ಚಿಮಾತ್ಯರು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಮತ್ತೊಂದು ಪರಮಾಶ್ಚರ್ಯ!

ಬ್ರಿಟಿಷರು ತಾವು ಮಾಡಿದ್ದೇ ಸರಿಯೆಂಬುದನ್ನು ಇಂದಿಗೂ ಹೇಳುತ್ತಲೇ ಇರುವಂತಹ ಸಂದರ್ಭದಲ್ಲಿ, ಅವರ ದೌರ್ಜನ್ಯಗಳನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡುವ ವೀರರಿಬ್ಬರ ಕಥೆ ಯನ್ನು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಈ ಚಿತ್ರದಲ್ಲಿ ಬಾಲಿವುಡ್ ಶೈಲಿಯ ಕಥೆಯಿಲ್ಲ, ಆಂಧ್ರ ಪ್ರದೇಶದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ನೈಜ ಕಥೆಯನ್ನಾಧರಿಸಿ ಮಾಡಿರುವ ಸಿನಿಮಾ. ಹಾಡಿನ ಸಾಹಿತ್ಯವೂ ತುಂಬ ಸರಳವಾಗಿದೆ, ಟೈಟಾನಿಕ್ ಸಿನಿಮಾ ಹಾಡಿನ ಮಾದರಿಯಲ್ಲಿ ನಿರ್ಮಾಣವಾಗಿಲ್ಲ.

ಸ್ಥಳೀಯ ಪರಂಪರೆ ಬಿಂಬಿಸುವ ವಿಷಯಗಳನ್ನು ಹಾಡಿನಲ್ಲಿ ಸಾಹಿತ್ಯದ ಮೂಲಕ ಹೇಳಲಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಜೋತು ಬಿದ್ದಿರುವ
ಕೆಲವು ಭಾರತೀಯರು ತಮ್ಮ ಮಕ್ಕಳನ್ನು ವಿದೇಶಿ ನೃತ್ಯ ಕಲಿಯಲು ಕಲಿಕಾ ಶಾಲೆಗಳಿಗೆ ಕಳುಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಹಾಡಿನಲ್ಲಿರುವ ನೃತ್ಯ ಗಮನಿಸಿದರೆ ವಿದೇಶಿ ನೃತ್ಯ ಪ್ರಕಾರಗಳನ್ನು ನಾಟು ನಾಟು ಹಾಡಿನ ಪ್ರಾಕಾರದ ಮುಂದೆ ನೀವಾಳಿಸಿಬಿಡುವಂತಿದೆ.
ಆಂಧ್ರ ಪ್ರದೇಶದ ಬುಡಕಟ್ಟು ಜನಾಂಗದವರನ್ನು ಪ್ರತಿನಿಧಿಸುವ ಸಾಹಿತ್ಯವನ್ನು ಬಳಸಿಕೊಂಡು ಎಂ.ಎಂ.ಕೀರ್ವಾಣಿ ಅದ್ಭುತವಾಗಿ ಹಾಡನ್ನು ಬರೆದಿದ್ದಾರೆ.

ಒಂದು ಸಣ್ಣ ಬುಡಕಟ್ಟು ಜನಾಂಗದ ಕಥೆಯನ್ನಾಧರಿಸಿದ ಚಿತ್ರ ನ್ಯೂಯಾರ್ಕ್ ಅಂಗಳದಲ್ಲಿ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಪಡೆಯುವುದು ಸಾಮಾನ್ಯದ ಮಾತಲ್ಲ. ಕನ್ನಡದ ‘ಕಾಂತಾರ’ ಸಿನಿಮಾ ದಕ್ಷಿಣ ಕನ್ನಡದ ದೈವಾರಾಧನೆಯನ್ನು ಬಿಂಬಿಸುತ್ತದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಒಡನಾಟ  ವನ್ನು ಬಿಂಬಿಸುವ ಈ ಸಿನಿಮಾ ದೇಶದಾದ್ಯಂತ ೪೦೦ ಕೋಟಿ ರು. ಗೂ ಅಧಿಕ ಗಳಿಕೆ ಮಾಡಿತ್ತು. ಈ ಚಿತ್ರದಲ್ಲಿ ಬಾಲಿವುಡ್ ಮಾದರಿಯಲ್ಲಿ ಪ್ರೇಮಕಥೆಯನ್ನು ಅತಿಯಾಗಿ ತೋರಿಸಿರಲಿಲ್ಲ. ವೀಕ್ಷಕರಿಗೆ ಇಷ್ಟವಾದದ್ದು ದೈವಾರಾಧನೆಯೇಹೊರತು ಪ್ರೇಮಕಥೆಯಲ್ಲ. ಕಾಡಂಚಿನ ಸಣ್ಣ ಹಳ್ಳಿಯಲ್ಲಿ ನಡೆಯುವ ಚಿತ್ರಕತೆ ಭಾರತದಾದ್ಯಂತ ಈ ಮಟ್ಟದ ಯಶಸ್ಸನ್ನು ಗಳಿಸುತ್ತದೆಯೆಂದು ಯಾರೂ ಊಹಿಸಿರಲಿಲ್ಲ.

‘ಕೆಜಿಎಫ್’ ಮತ್ತೊಂದು ಮೈಲಿಗಲ್ಲನ್ನು ಮುಟ್ಟಿಸಿದ ಕನ್ನಡ ಚಿತ್ರ. ಬಾಲಿವುಡ್ ಅಂಗಳದಲ್ಲಿ ಸುಮಾರು ೫೦೦ ಕೋಟಿ ರು.ಬಾಚಿಕೊಂಡಂತಹ ಚಿತ್ರವಿದು. ಬಾಲಿವುಡ್ ಅನ್ನೂ ಮೀರಿಸುವಂತೆ ಭೂಗತ ಜಗತ್ತನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿತ್ತು. ಮುಂಬೈ ನಗರದ ಪ್ರೇಕ್ಷಕರಿಗೆ ನಟ ಯಶ್ ನೂತನ ಹೀರೋ ಆಗಿ ಹೊರಹೊಮ್ಮಿದ್ದ. ಈ ಮೂರೂ ಚಿತ್ರಗಳೂ ವಿಭಿನ್ನ ಕಥಾಹಂದರ ಹೊಂದಿವೆ. ಒಂದಕ್ಕೊಂದು ಸಂಬಂಧವಿಲ್ಲದಿದ್ದರೂ ಬಾಲಿವುಡ್ ಚಿತ್ರಗಳನ್ನು ಮೀರಿಸುವಂತಹ ಗಳಿಕೆ ದಾಖಲಿಸಿದೆ. ಬಾಲಿವುಡ್ ನಿರ್ಮಾಪಕರು ದಕ್ಷಿಣ ಭಾರತದ ನಿರ್ದೇಶಕರ ಮನೆಯ ಮುಂದೆ ನಿಂತು ಕೈಕಟ್ಟಿ ತಮ್ಮ ಸಿನಿಮಾಗಳಿಗೆ ದಿನಾಂಕ ನಿಗದಿಮಾಡುವಂತೆ ಮಾಡಿವೆ.

ಭಾರತೀಯ ಚಿತ್ರರಂಗವೆಂದರೆ ಈಗ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಸಿನೆಮಾಗಳೆಂಬುದು ಜಗತ್ತಿಗೆ ತಿಳಿದಿದೆ. ಒಂದು ಕಾಲದಲ್ಲಿ ಅದೇ ಖಾನ್ ಬಳಗದ ನಾಯಕರು ಚಿತ್ರ ನಿರ್ಮಿಸುತ್ತಿದ್ದರು. ಅವರ ಚಿತ್ರಗಳಲ್ಲಿ ಭಾರತೀಯತೆ ಕಾಣಿಸುತ್ತಿರಲಿಲ್ಲ. ಭಾರತೀಯ ಪುರಾತನ ಆಚರಣೆಗಳು ಅವರಿಗೆ ತೀರಾ ಕೆಳಮಟ್ಟದಲ್ಲಿದ್ದಂತೆ ಕಾಣುತ್ತಿತ್ತು. ಆಚರಣೆಗಳನ್ನೊಳಗೊಂಡ ಚಿತ್ರಗಳು ನಿರ್ಮಾಣವಾದರೆ ಹಣ ಗಳಿಸಲಾಗುವುದಿಲ್ಲವೆಂಬ ಮನಃಸ್ಥಿತಿಯಲ್ಲಿತ್ತು. ಕೇವಲ ಹಣಗಳಿಕೆಯ ಹಿಂದೆ ಬಿದ್ದಿದ್ದ ಬಾಲಿವುಡ್ ಎಂದಿಗೂ ಜಗತ್ತಿಗೆ ಭಾರತೀಯತೆಯನ್ನು ಅರ್ಥ ಮಾಡಿಸುವ ಕೆಲಸ
ಮಾಡಲಿಲ್ಲ. ಬ್ರಿಟಿಷರು ಬಿಟ್ಟು ಹೋದ ಗುಲಾಮಿ ಮನಃ ಸ್ಥಿತಿಯ ಚಿತ್ರ ನಿರ್ಮಾಣ ಮಾಡಲು ಮುಂದಾದ ಬಾಲಿವುಡ್ ನಿರ್ಮಾಪಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಗೆ ಅವಮಾನ ಮಾಡಿದ್ದೇ ಹೆಚ್ಚಾಗಿತ್ತು.

ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ಸಿನಿ ಮಾಗಳು ಭಾರತೀಯ ಪುರಾತನ ಸಂಸ್ಕೃತಿಯನ್ನು ಜಗತ್ತಿನ ಮುಂದೆ ತೆರೆದಿಡುತ್ತಿವೆ. ದಕ್ಷಿಣ ಭಾರತದ ಸಿನೆಮಾಗಳಿಂದ ಪ್ರೇರೇಪಿತರಾಗಿ ಬಾಲಿವುಡ್ ನಿರ್ದೇಶಕರುಗಳು ದಕ್ಷಿಣದ ಸೊಗಡಿನ ಸಿನೆಮಾಗಳ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಕೇವಲ ಸಂಸ್ಕೃತಿ ಬಿಂಬಿಸಲು ಸೀಮಿತವಾಗದೇ ಉತ್ತಮ ಗಳಿಕೆಯಲ್ಲೂ ಮುಂದಿರುವು
ದನ್ನು ಸಾಬೀತುಪಡಿಸಿವೆ. ಕರೋನ ನಂತರದ ಕಾಲಘಟ್ಟದಲ್ಲಿ ಮನೆಯಲ್ಲಿ ಕುಳಿತು ಸಿನಿಮಾ ನೋಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಯಾಗಿರುವುದು ಮತ್ತೊಂದು ಸಂತಸದ ವಿಷಯ. ೧೯೭೦ ಮತ್ತು ೧೯೮೦ರ ದಶಕದಲ್ಲಿ ಕನ್ನಡದಲ್ಲಿ ಪುಟ್ಟನ ಕಣಗಾಲ್ ಉತ್ತಮ ಚಿತ್ರಗಳನ್ನು ನಿರ್ದೇಶಿಸುತ್ತಿದ್ದರು. ಒಂದೊಂದುಸಿನಿಮಾ ಒಂದೊಂದು ಕಥೆಯನ್ನು ಹೇಳುತ್ತಿತ್ತು, ಒಂದು ಸಿನೆಮಾಕ್ಕೂ ಮತ್ತೊಂದು ಸಿನೆಮಾಕ್ಕೂ ಸಂಬಂಧವೇ ಇರುತ್ತಿರಲಿಲ್ಲ.

‘ರಂಗನಾಯಕಿ’ಯಂತಹ ಸಿನೆಮಾವನ್ನು ೧೯೮೦ ರ ದಶಕದಲ್ಲಿ ನಿರ್ಮಿಸುವುದು ಸುಲಭದ ಮಾತಲ್ಲ. ತಾನು ನಿರ್ದೇಶಿಸಿದ ಚಿತ್ರಗಳನ್ನು ಕನ್ನಡಿಗರ ಮನೆಗೆ ತಲುಪಿಸುವಲ್ಲಿ ಪುಟ್ಟಣ್ಣ ಕಣಗಾಲ್ ಅಂದೇ ಯಶಸ್ವಿಯಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳು ಇಂದೇನಾದರೂ ತೆರೆಗೆ
ಅಪ್ಪಳಿಸಿದ್ದರೆ ಅದೆಷ್ಟು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿತ್ತೋ ದೇವರೇ ಬಲ್ಲ. ಶಂಕರ್‌ನಾಗ್ ಆ ಕಾಲದಲ್ಲಿಯೇ ಮಾಲ್ಡೀವ್ಸ್ ನಲ್ಲಿ ನೀರಿನ ಒಳಗಡೆ ರಾಜಕುಮಾರ್ ದೈತ್ಯ ಆಕ್ಟೋಪಸ್ ಜತೆ ಹೊಡೆದಾಡುವ ದೃಶ್ಯವನ್ನು ನಿರ್ದೇಶಿಸಿದ್ದರು. ಬಾಲಿವುಡ್ ಮಾಫಿಯಾ ದಕ್ಷಿಣ ಕರ್ನಾಟಕದ ಚಿತ್ರಗಳು
ಮುನ್ನೆಲೆಗೆ ಬರುವುದನ್ನು ತಡೆದಿತ್ತು. ಬದಲಾದ ಕಾಲಘಟ್ಟದಲ್ಲಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ಚಿತ್ರರಂಗವನ್ನು ಮೀರಿಸುವಂತೆ ಬೆಳೆಯುತ್ತಿರು ವುದು ಆರೋಗ್ಯಕರ ಬೆಳವಣಿಗೆ.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲವೆಂಬಂತೆ ದಕ್ಷಿಣ ಭಾರತದ ಸಿನಿಮಾಗಳು ಇಂದು ಜಗತ್ತಿನೆಡೆ ಹೆಸರು ಮಾಡುತ್ತಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ. ನ್ಯೂಯಾರ್ಕ್ ನಗರದ ಕೆಂಪು ಹಾಸಿನ ಮೇಲೆ ತೆಲುಗು ಚಿತ್ರರಂಗದ ಸಂಗೀತಗಾರನೊಬ್ಬ ಹೆಜ್ಜೆ ಹಾಕಿ ಪ್ರಶಸ್ತಿ
ಸ್ವೀಕರಿಸುತ್ತಾನೆಂದರೆ ಅದು ಸಾಮಾನ್ಯದ ವಿಷಯವಲ್ಲ, ಈಗಾಗಲೇ ಹೊಟ್ಟೆ ಉರಿದುಕೊಂಡಿರುವ ಕೆಲವು ಬಾಲಿವುಡ್ ಮಂದಿ ಆರ್‌ಆರ್‌ಆರ್ ಚಿತ್ರಕ್ಕೆ ಆಸ್ಕರ್ ಬಂದಿರುವುದನ್ನು ಸಹಿಸಲಾಗದೇ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಚಿತ್ರಗಳು ಅವರಿಗೆ ಬೇಕಿಲ್ಲ. ಭಾರತೀಯ ಚಿತ್ರರಂಗದ ಅಡಿಪಾಯವೇ ತಾವೆಂಬಂತೆ ಬಿಂಬಿಸಿಕೊಂಡು ಬಂದಂತಹ ಈ ಮಂದಿಯ ಚಿತ್ರಗಳನ್ನು ಜನರು ನೋಡುತ್ತಿಲ್ಲ.‘ಕಾಶ್ಮೀರ್ ಫೈಲ್ಸ್’ ಚಿತ್ರ ದೇಶದಾದ್ಯಂತ ಪ್ರಶಂಸೆ ಪಡೆಯಲು ಕಾರಣ ಇತಿಹಾಸದಲ್ಲಿ
ಮುಚ್ಚಿಟ್ಟ ಕರಾಳ ಅಧ್ಯಾಯವೊಂದರ ಅನಾವರಣ. ಇತಿಹಾಸದ ಒಂದು ಮಜಲನ್ನು ಮಾತ್ರ ಭಾರತೀಯರಿಗೆ ತೋರಿಸುತ್ತಿದ್ದ ಬಾಲಿವುಡ್‌ನಲ್ಲಿಯೂ ಬದಲಾವಣೆ ಕಾಣುತ್ತಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯಲ್ಲಿ ದೀಪಿಕಾ ಪಡುಕೋಣೆ ದೇಶವಿರೋಧಿಗಳ ಪರವಾಗಿ ನಿಂತಿದ್ದನ್ನು ಕಂಡಂತಹ ಭಾರತೀಯ ವೀಕ್ಷಕ ಆಕೆಯ ‘ಚೆಪಾಕ್’ ಸಿನೆಮಾವನ್ನು ಮೂಲೆಗುಂಪುಮಾಡಿದ್ದ. ಇದರಿಂದ ಪಾಠ ಕಲಿಯದ ಒಂದಷ್ಟು ಬಾಲಿವುಡ್ ಮಂದಿ ಇಂದಿಗೂ ತಮ್ಮ ಹಠಮಾರಿ ಧೋರಣೆಯನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಕೆಲವರು ಬುದ್ಧಿ ಕಲಿತು ಚಿತ್ರ ನಿರ್ಮಾಣಕ್ಕೆ ಮುಂದಾಗಿzರೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ನಲ್ಲಿ ಬಿಡುಗಡೆಯಾಗಿ ಕೋಟಿಗಟ್ಟಲೆ ಹಣಗಳಿಕೆ ಮಾಡುತ್ತಿರುವುದನ್ನು ಅರಿತು, ದಕ್ಷಿಣದ
ಸೊಗಡಿನ ಚಿತ್ರ ನಿರ್ಮಾಣಕ್ಕೆ ಕೈಹಾಕುತ್ತಿದ್ದಾರೆ. ಒಟ್ಟಿನಲ್ಲಿ ದಕ್ಷಿಣದ ಚಿತ್ರಗಳು ಇಡೀ ಭಾರತದ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುತ್ತಿರುವುದು ಹೆಮ್ಮೆಯ ವಿಷಯ. ದಕ್ಷಿಣದ ಸಿನೆಮಾಗಳಿಂದ ಬಾಲಿವುಡ್ ಪಾಠ ಕಲಿಯಬೇಕಾದಂತಹ ಪರಿಸ್ಥಿತಿ ಬರುತ್ತದೆಯೆಂದು ಯಾರೂ ಊಹಿಸಿರಲಿಲ್ಲ.