Saturday, 23rd November 2024

ಪ್ರಥಮ ವೈದ್ಯಕೀಯ ನೊಬೆಲ್ ಪುರಸ್ಕೃತ ರಾಸ್

ಹಿಂದಿರುಗಿ ನೋಡಿದಾಗ

ಓ ದೇವರೆ, ಇಂದು ನಿನ್ನ ಪಟ್ಟನ್ನು ಸಡಿಲಿಸಿದೆ / ನನ್ನ ಕೈಯಲ್ಲಿ ಕಡು ರಹಸ್ಯವನಿರಿಸಿದೆ ದೇವರೆ! ನೀನೆನ್ನ ಹೊಗಳು, ನಿನ್ನ ಆಣತಿಯ / ಮೇರೆಗೆ
ತಾನೆ ಇವೆಲ್ಲವನು ಮಾಡಿರುವೆ ಏದುಸಿರಿನೊಡನೆ ಹರಿದಿದೆ ಕಣ್ಣೀರು / ಓ ಸ್ವಾರ್ಥಪೂರಿತ ಠಕ್ಕು ಬೀಜಗಳೇ!

ಲಕ್ಷಲಕ್ಷ ಜನರ ಕೊಲ್ಲುವ ಕೊಲೆಗಡುಕರೆ / ನನಗಿನಿತು ನಿಚ್ಚಳವಾಗಿ ತಿಳಿದಿಹುದು ಬದುಕುವರು ಕೋಟ್ಯಾನುಕೋಟಿ ಜನರು / ಸಾವೆ! ಎಲ್ಲಿದೆ ನೀನು ಬೀಸುವ ಕುಡುಗೋಲು ಸಾವಿನ ಯಶಸ್ಸಿಗೆ ಸಮಾಧಿ? -ಸರ್ ರೊನಾಲ್ಡ್ ರಾಸ್ ಸರ್ ಸರ್ಜನ್-ಮೇಜರ್ ರೊನಾಲ್ಡ್ ರಾಸ್ (೧೮೫೭- ೧೯೩೨) ಭಾರತದ ಅಲ್ಮೋರದಲ್ಲಿ ಹುಟ್ಟಿದರು. ತಂದೆ ಕ್ಯಾಂಪ್ಬೆಲ್ ಕ್ಲೇಯಿ ಗ್ರಾಂಟ್ ರಾಸ್. ಬ್ರಿಟಿಷ್ ಸೈನ್ಯದಲ್ಲಿ ವೈದ್ಯನಾಗಿದ್ದ. ತಾಯಿ ಮಾತಿಲ್ಡ. ೮ ವರ್ಷಗಳ ಬಾಲಕ ರಾಸ್‌ನನ್ನು ೧೮೬೫ರಲ್ಲಿ ಇಂಗ್ಲೆಂಡಿಗೆ ಕಳುಹಿಸಿದರು. ಬಾಲಕ ರಾಸನಿಗೆ ಪ್ರಾಣಿಶಾಸವೆಂದರೆ ಇಷ್ಟ. ಅದಕ್ಕಿಂತಲೂ ಮಿಗಿಲಾಗಿ ಚಿತ್ರಕಲೆ, ಸಂಗೀತ ಮತ್ತು ಕಾವ್ಯ. ೧೭ ವರ್ಷಗಳಾದಾಗ ರಾಸ್ ತಾನು ಕಲಾಕಾರನಾಗಬೇಕೆಂದು ನಿಶ್ಚಯಿಸಿದ.

ಆದರೆ ತಂದೆ ರಾಸ್ ಅವರಿಗೆ ಮಗನು ತನ್ನಂತೆ ವೈದ್ಯನಾಗಿ, ಬ್ರಿಟಿಷ್ ಮಿಲಿಟರಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂಬ ಮಹದಾಸೆ. ಭಾರತೀಯ ಮಿಲಿಟರಿ ಸೇವೆಯಲ್ಲಿ ಒಳ್ಳೆಯ ಸಂಬಳ ದೊರೆಯುತ್ತಿತ್ತು. ಹಾಗಾಗಿ ರಾಸ್ ಲಂಡನ್ನಿನ ಸೈಂಟ್ ಬಾಥಲೋಮಿಯೋಸ್ ಸೇರಿ ವೈದ್ಯಕೀಯ ಶಿಕ್ಷಣವನ್ನು ಪಡೆದ. ಅಂಗರಚನಾ ವಿಜ್ಞಾನ ಆಸಕ್ತಿ ಯಿರಲಿಲ್ಲ. ಅಂಗಕ್ರಿಯಾ ವಿಜ್ಞಾನ, ಊತಕ ವಿಜ್ಞಾನ, ಮೈಕ್ರೋಸ್ಕೋಪ್ ಅಧ್ಯಯನಗಳು ಆಕರ್ಷಿಸಿದವು.

ತಂದೆಯ ಒತ್ತಡ ಹೆಚ್ಚಿದಾಗ ಕೇವಲ ೩ ದಿನಗಳ ಕಾಲ ಓದಿ ಜುಲೈ ೧೮೭೯ ರಲ್ಲಿ ಪರೀಕ್ಷೆಯನ್ನು ತೆಗೆದುಕೊಂಡ. ಉತ್ತೀರ್ಣನಾದ. ಭಾರತದಲ್ಲಿ ಕೆಲಸ ಮಾಡಲು ಅಗತ್ಯವಾಗಿದ್ದ ಲೈಸೆನ್ಷಿಯೇಟ್ ಆಫ್ ದಿ ಸೊಸೈಟಿ ಆಫ್ ಅಪೋಥೆಕರೀಸ್ ಪರೀಕ್ಷೆಯನ್ನು ತೆಗೆದುಕೊಂಡ. ಪರೀಕ್ಷೆಯ
ದಿನ ಬೆಳಗ್ಗೆಯಷ್ಟೇ ಪಠ್ಯದ ಮೇಲೆ ಕಣ್ಣಾಡಿಸಿ ಪರೀಕ್ಷೆಗೆ ಹೋದ. ನಪಾಸಾದ. ಹಾಗಾಗಿ ಪರೀಕ್ಷೆಯನ್ನು ಮತ್ತೊಮ್ಮೆ ೧೮೮೧ರಲ್ಲಿ ತೆಗೆದುಕೊಂಡು ಉತ್ತೀರ್ಣನಾದ. ಅದೇ ವರ್ಷ ಭಾರತೀಯ ವೈದ್ಯಕೀಯ ಸೇವೆಗಳನ್ನು ಸೇರಿಕೊಂಡ. ೨೨ ಸೆಪ್ಟೆಂಬರ್ ೧೮೮೧ರಂದು ಭಾರತಕ್ಕೆ ಹೊರಟ.
ಭಾರತಕ್ಕೆ ಬಂದ ಕೂಡಲೇ ಮದರಾಸ್ ರೆಜಿಮೆಂಟ್ ಇನ್ ಫೆಂಟ್ರಿಯಲ್ಲಿ ಕೆಲಸವನ್ನಾರಂಭಿಸಿದ. ನಂತರ ೧೮೮೩ರಲ್ಲಿ ಬೆಂಗಳೂರಿನ ಸಿವಿಲ್ ಮತ್ತು ಮಿಲಿಟರಿ ಸ್ಟೇಷನ್ನಿಗೆ ವರ್ಗವಾಯಿತು.

ಇಂದಿನ ಮಹಾತ್ಮಗಾಂಧಿ ರಸ್ತೆಗೆ ಹತ್ತಿರದಲ್ಲಿ ಅವನ ಬಂಗಲೆಯಿತ್ತು. ಅವನ ಮಲಗುವ ಕೋಣೆಯ ಕಿಟಕಿಯ ಬಳಿ ಒಂದು ನೀರಿನ ತೊಟ್ಟಿ. ಅದು
ಸೊಳ್ಳೆಗಳ ವರ್ಧನಾ ಕೇಂದ್ರವಾಗಿತ್ತು. ಹಾಗಾಗಿ ಅಷ್ಟೂ ಸೊಳ್ಳೆಗಳು ರೊನಾಲ್ಡ್ ರಾಸನನ್ನು ಮುತ್ತಿಕೊಂಡು ಮೇಜುವಾನಿಯನ್ನು ಮಾಡಲಾ ರಂಭಿಸಿದವು. ಮರುದಿನ ಬೆಳಗ್ಗೆ ರೊನಾಲ್ಡ್ ರಾಸ್, ಆ ನೀರಿನ ತೊಟ್ಟಿಯನ್ನು ಮಗುಚಿ ಒಳಗಿದ್ದ ನೀರನ್ನೆಲ್ಲ ಚೆಲ್ಲಿದ. ಆ ರಾತ್ರಿ ಸುಖ ನಿದ್ರೆಯನ್ನು
ಮಾಡಿದ. ಆಗ ಅವನಿಗೆ ಸೊಳ್ಳೆಗಳ ಬಗ್ಗೆ ಒಂದು ರೀತಿಯ ಕುತೂಹಲವೂ ಬೆಳೆಯಿತು.

೧೮೭೭: ಪ್ಯಾಟ್ರಿಕ್ ಮ್ಯಾನ್ಸನ್ (೧೮೪೪-೧೯೨೨) ಎಂಬ ಸ್ಕಾಟ್ಲಂಡಿನ ವೈದ್ಯನು ಟೈವಾನಿನಲ್ಲಿ ವೈದ್ಯನಾಗಿದ್ದ. ಆತನು ಆನೆಕಾಲಿನ ರೋಗವನ್ನು (ಎಲಿಫೆಂಟಿಯಾಸಿಸ್) ಕುರಿತು ಅಧ್ಯಯನವನ್ನು ಮಾಡುತ್ತಿದ್ದ. ವುಚೆರಿಯ ಬ್ಯಾಂಕ್ರಾಫ್ಟ್ ಎಂಬ ದುಂಡು ಹುಳ. ಇದರ ಮರಿಹುಳುಗಳು (ಲಾರ್ವ)
ರೋಗಿಯ ರಕ್ತದಲ್ಲಿರುತ್ತವೆ. ಅನಾಫಿಲಸ್ ಸೊಳ್ಳೆಯು ರೋಗಿಯ ರಕ್ತವನ್ನು ಹೀರಿದಾಗ ಮರಿಹುಳುವು ರಕ್ತದ ಮೂಲಕ ಸೊಳ್ಳೆಯ ಒಡಲನ್ನು ಸೇರುತ್ತದೆ. ವರ್ಧಿಸುತ್ತದೆ. ಅದೇ ಸೊಳ್ಳೆಯು ಮತ್ತೊಬ್ಬ ಆರೋಗ್ಯವಂತನನ್ನು ಕಚ್ಚಿದಾಗ, ಮರಿಹುಳು ಆತನ ಒಡಲನ್ನು ಸೇರುತ್ತದೆ.

ಇದನ್ನು ಅಧ್ಯಯನ ಮಾಡಿದ ಮ್ಯಾನ್ಸನ್, ಮಲೇರಿಯವನ್ನು ಸೊಳ್ಳೆಗಳೇ ಹರಡುತ್ತಿರಬಹುದು ಎಂದು ತರ್ಕಿಸಿದ. ಆದರೆ ಸೊಳ್ಳೆಗಳು ವರ್ಧನೆ ಯಾಗುತ್ತಿರುವ ನೀರನ್ನು ಕುಡಿಯುವುದರಿಂದ ಮಲೇರಿಯವು ಹರಡುತ್ತಿರಬೇಕು ಎಂದು ಬಲವಾಗಿ ನಂಬಿದ್ದ. ಪ್ಯಾಟ್ರಿಕ್ ಮ್ಯಾನ್ಸನ್, ಟೈವಾನ್ ನಗರವನ್ನು ಬಿಟ್ಟು ಲಂಡನ್ನಿನಲ್ಲಿ ನೆಲೆಸಿದ. ೧೮೯೪ರಲ್ಲಿ ರೊನಾಲ್ಡ್ ರಾಸ್ ರಜೆಯ ಮೇಲೆ ಲಂಡನ್‌ಗೆ ಬಂದ. ಅಲ್ಲಿ ಪ್ಯಾಟ್ರಿಕ್ ಮ್ಯಾನ್ಸನ್‌ನನ್ನು ಭೇಟಿಯಾದ. ಮ್ಯಾನ್ಸಸ್ ಮಲೇರಿಯ ಪೀಡಿತನ ರಕ್ತವನ್ನು ಸೂಕ್ಷ್ಮದರ್ಶಕ ದಡಿಯಲ್ಲಿ ತೋರಿಸುತ್ತಾ, ಅದರಲ್ಲಿ ಚಲಿಸುತ್ತಿರುವ ದುಂಡನೆಯ ಕಾಯಗಳನ್ನು (ಪ್ಲಾಸ್ಮೋಡಿಯಂ ಲಿಂಗಾಣುಗಳು) ತೋರಿಸಿದ.

ಭಾರತಕ್ಕೆ ಹಿಂದಿರುಗಿದ ಮೇಲೆ ಮಲೇರಿಯವನ್ನು ಕುರಿತು ಸಂಶೋಧನೆಯನ್ನು ನಡೆಸುವಂತೆ ಪ್ರೋತ್ಸಾಹಿಸಿದ. ಅದೇ ಕ್ಷಣದಲ್ಲಿ ಮ್ಯಾನ್ಸನ್
ಮತ್ತು ರಾಸ್ ನಡುವೆ ಒಂದು ಅವಿನಾಭಾವ ಗೆಳೆತನವು ಮೂಡಿತು. ರೊನಾಲ್ಡ್ ರಾಸ್ ಭಾರತಕ್ಕೆ ಹಿಂದಿರುಗಿದ. ಸಿಕಂದರಾಬಾದಿನಲ್ಲಿ ಕೆಲಸವನ್ನು ಆರಂಭಿಸಿದ. ಸೊಳ್ಳೆಗಳಲ್ಲಿ ಅಸಂಖ್ಯ ನಮೂನೆಗಳಿವೆ. ರಾಸನಿಗೆ ಸೊಳ್ಳೆಗಳನ್ನು ಗುರುತಿಸುವ ಬಗ್ಗೆ ಏನೂ ತಿಳಿದಿರಲಿಲ್ಲ. ಜೊತೆಗೆ ಗುರುತಿಸಲು ನೆರವಾಗುವಂತಹ ಪುಸ್ತಕಗಳಾಗಲಿ ಅಥವ ವ್ಯಕ್ತಿಗಳಾಗಲಿ ಅಲ್ಲಿರಲಿಲ್ಲ. ಹಾಗಾಗಿ ರಾಸ್ ತಪ್ಪು ತಪ್ಪು ಸೊಳ್ಳೆಗಳನ್ನೆಲ್ಲ ಹಿಡಿದು, ಅವುಗಳ ಒಡಲನ್ನು ಛೇದಿಸಿ ಅಧ್ಯಯನ ಮಾಡಲಾರಂಭಿಸಿದ. ಹೀಗೆ ಎರಡು ವರ್ಷಗಳು ಕಳೆದುಹೋದವು. ಇದರಿಂದ ರಾಸನಿಗೆ ಬೇಸರವಾಗಲಿಲ್ಲ.

ಅವನು ದಣಿವರಿಯದ ಸಂಶೋಧಕನಾಗಿದ್ದ. ಹಾಗೂ ಪ್ರತಿಸಲವೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ. ೧೮೯೭: ರೆಕ್ಕೆಗಳ ಮೇಲೆ ಚುಕ್ಕೆಗಳಿದ್ದ ಒಂದು ಹೊಸ ಸೊಳ್ಳೆಯು ದೊರೆಯಿತು. ಪ್ಲಾಸ್ಮೋಡಿಯಂ -ಲ್ಸಿ-ರಂ ಮಲೇರಿಯ ಪೀಡಿತನಾಗಿದ್ದ ಸ್ವಯಂಸೇವಕನೊಬ್ಬ, ದಿನಕ್ಕೆ ಎರಡಾಣೆ ಕೂಲಿಯನ್ನು ಪಡೆದು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳಲು ಸಿದ್ಧನಾದ. ಅವನನ್ನು ಒಂದು ಕೋಣೆಯಲ್ಲಿ ನಾಲ್ಕು ದಿನಗಳ ಕಾಲ ಕೂಡಿಹಾಕಿದರು. ಈ ಚುಕ್ಕೆ ಸೊಳ್ಳೆಗಳನ್ನು ಒಳಗೆ ಬಿಟ್ಟರು. ಆ ಸೊಳ್ಳೆಗಳು ಅವನನ್ನು ಕಚ್ಚಿ ಕಚ್ಚಿ ರಕ್ತವನ್ನು ಹೀರಲಾರಂಭಿಸಿದವು. ಆದರೆ ಅವನು
ಸೊಳ್ಳೆಗಳನ್ನು ಪಟ್ಟನೆ ಹೊಡೆದು ಅವುಗಳನ್ನು ಕೊಲ್ಲುವ ಹಾಗಿರಲಿಲ್ಲ. ಹಲ್ಲು ಕಚ್ಚಿಕೊಂಡು ಸೊಳ್ಳೆಗಳ ಕಡಿತವನ್ನು ಸಹಿಸಿಕೊಳ್ಳಬೇಕಿತ್ತು.

ರಾಸ್ ಸ್ವಯಂ ಸೇವಕನನ್ನು ಕಚ್ಚಿದ ಸೊಳ್ಳೆಗಳನ್ನು ಹಲವು ಗುಂಪುಗಳಲ್ಲಿ ವಿಂಗಡಿಸಿದ. ಮೊದಲ ಗುಂಪಿನ ಸೊಳ್ಳೆಗಳನ್ನು ಎರಡು ದಿನಗಳ ನಂತರ, ಎರಡನೆಯ ಗುಂಪಿನ ಸೊಳ್ಳೆಗಳನ್ನು ನಾಲ್ಕು ದಿನಗಳ ನಂತರ, ಮೂರನೆಯ ಗುಂಪಿನ ಸೊಳ್ಳೆಗಳನ್ನು ಆರು ದಿನಗಳ ನಂತರ… ಹೀಗೆ ಕ್ರಮವಾಗಿ ವಿಚ್ಛೇದಿಸಿ, ಅವುಗಳ ಅಧ್ಯಯನವನ್ನು ಮಾಡಲಾರಂಭಿಸಿದ. ಎರಡು ದಿನಗಳ ಅವಧಿಯಲ್ಲಿ ಪರೀಕ್ಷಿಸಿದ ಸೊಳ್ಳೆಯ ಕರುಳಿನ ಜೀವಕೋಶಗಳಲ್ಲಿ ಕಪ್ಪು ಕಪ್ಪು ಬಣ್ಣದ ಹರಳುರೂಪಿ ರಚನೆಗಳು ಕಂಡುಬಂದವು. ನಾಲ್ಕು, ಆರನೆ ದಿನಗಳ ಅವಧಿಯನ್ನು ಕಳೆದ ಸೊಳ್ಳೆಗಳ ಕರುಳಿನ ಜೀವಕೋಶಗಳಲ್ಲಿ ಕಪ್ಪು ಬಣ್ಣದ ಹರಳುರೂಪಿ ರಚನೆಗಳು ಗಾತ್ರದಲ್ಲಿ ಕ್ರಮವಾಗಿ ದೊಡ್ದದಾಗಿದ್ದವು. ರಾಸ್ ಎಲ್ಲವನ್ನು ದಾಖಲಿಸಿದ.

ತಜ್ಞರ ಸಹಾಯದಿಂದ ಸೊಳ್ಳೆಯನ್ನು ಗುರುತಿಸಿದ. ಅದು ಅನಾಫಿಲಸ್ ಸೊಳ್ಳೆಯಾಗಿತ್ತು. ಹೀಗೆ ಮಲೇರಿಯ ರೋಗಿಯ ರಕ್ತವನ್ನು ಹೀರಿದ ಸೊಳ್ಳೆಗಳ ಒಡಲಿನಲ್ಲಿ, ಪ್ಲಾಸ್ಮೋಡಿಯಂ ಪರಾವಲಂಬಿಯು ಅಭಿವರ್ಧನೆಯಾಗುವ ವಿವಿಧ ಹಂತಗಳನ್ನು ರಾಸ್ ನಿಖರವಾಗಿ ದಾಖಲಿಸಿದ.
ರಾಸ್ ತನ್ನ ಸಂಶೋಧನಾ ಬರಹವನ್ನು ಹಿರಿಯ ಅಧಿಕಾರಿ ಸರ್ಜನ್ ಮೇಜರ್ ಜಾನ್ ಸ್ಮಿಥ್ ಅವರಿಗೆ ತೋರಿಸಿದ. ಅವರ ಸಲಹೆಯ ಮೇರೆಗೆ ಇಡೀ ಪ್ರಬಂಧವನ್ನು ಹಾಗೂ ಮೈಕ್ರೋಸ್ಕೋಪಿನಲ್ಲಿ ಕೆಳಗೆ ಅಧ್ಯಯನ ಮಾಡಿದ್ದ ಸೊಳ್ಳೆಗಳ ಒಡಲಿನ ಸ್ಲೈಡುಗಳನ್ನು ಮ್ಯಾನ್ಸನ್ನನಿಗೆ ಕಳುಹಿಸಿಕೊಟ್ಟ.
ಮ್ಯಾನ್ಸನ್ ರಾಸನ ಸಂಶೋಧನೆಯನ್ನು ಒಪ್ಪಿಕೊಂಡ.

ಸಂಶೋಧನಾ ಪ್ರಬಂಧವು ಬ್ರಿಟಿಷ್ ಮೆಡಿಕಲ್ ಜರ್ನಲಿನಲ್ಲಿ ಪ್ರಕಟವಾಯಿತು. ಲೇಖನಕ್ಕೆ ಪೂರಕವಾಗಿ ಮ್ಯಾನ್ಸಸ್, ಸ್ಲೈಡುಗಳ ನೆರವಿನಿಂದ ಸ್ವಯಂ ಚಿತ್ರಗಳನ್ನು ಬಿಡಿಸಿದ್ದ. ರೊನಾಲ್ಡ್ ರಾಸ್ ಮಲೇರಿಯ ಸಂಬಂದಿತ ಸಂಶೋಧನೆಯನ್ನು ಮುಂದುವರಿಸಲು ಅತ್ಯುತ್ಸಾಹವನ್ನು ತೋರಿದ.
ಆದರೆ ಹಿರಿಯ ಅಧಿಕಾರಿಗಳು ಅವನನ್ನು ಉತ್ತರ ಭಾರತ ದಲ್ಲಿದ್ದ ಖೇರವಾರ ಎಂಬ ಕುಗ್ಗಾಡಿಗೆ ವರ್ಗಾಯಿಸಿದರು. ಅಲ್ಲಿ ಮಲೇರಿಯ ಸಮಸ್ಯೆ ಇರಲಿಲ್ಲ. ಹಾಗಾಗಿ ತನ್ನ ಸಂಶೋಧನೆಯನ್ನು ಮುಂದುವರಿಸಲು ಮತ್ತೆ ತನ್ನನ್ನು ಸಿಕಂದರಾಬಾದಿಗೆ ವರ್ಗಾಯಿಸಬೇಕೆಂದು ರಾಸ್ ಕೇಳಿಕೊಂಡ. ಆದರೆ ಹಿರಿಯ ಅಧಿಕಾರಿಗಳು ಒಪ್ಪಿಕೊಳ್ಳಲಿಲ್ಲ.

ಛಲಬಿಡದ ತ್ರಿವಿಕ್ರಮನಂತೆ ಹಿಡಿದ ಪಟ್ಟು ಬಿಡದೆ ರಾಸ್ ಪ್ರಯತ್ನಿಸಿದ. ಎಲ್ಲ ರೀತಿಯ ಶಿ-ರಸ್ಸನ್ನೂ ಪ್ರಯೋಗಿಸಿದ. ಕೊನೆಗೆ, ರಾಸನನ್ನು ಕಲಕತ್ತೆಗೆ ವರ್ಗಾಯಿಸಿದರು. ಕಲಕತ್ತೆ ಯಲ್ಲಿ ಅಷ್ಟಾಗಿ ಮಲೇರಿಯ ಸಮಸ್ಯೆ ಇರಲಿಲ್ಲ. ತನ್ನ ಸಂಶೋಧನೆಯ ಆಯಕಟ್ಟಿನ ಸಮಯದಲ್ಲಿ ಆದ ವರ್ಗಾವಣೆಯು ರಾಸನನ್ನು ಕಂಗೆಡಿಸಿತು. ಆದರೆ ಕಲಕತ್ತೆಯಲ್ಲಿ ಅತ್ಯುತ್ತಮ ಆಸ್ಪತ್ರೆಯಿತ್ತು. ಪ್ರಯೋಗಾಲಯಗಳಿದ್ದವು. ಈ ಬಗ್ಗೆ ತನ್ನ ಅಳಲನ್ನು ತೋಡಿಕೊಂಡು ಮ್ಯಾನ್ಸನ್ನನಿಗೆ ಪತ್ರವನ್ನು ಬರೆದ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಮ್ಯಾನ್ಸಸ್ ಹಕ್ಕಿಗಳಲ್ಲಿ ಹರಡುವ ಮಲೇರಿಯ ಕಾಯಿಲೆಯ
ಬಗ್ಗೆ ಅಧ್ಯಯನವನ್ನು ನಡೆಸಬಹುದೆಂದು ಸೂಚಿಸಿದ.

ರಾಸ್ ಸಂಶೋಧನೆಯನ್ನು ಆರಂಭಿಸಿದ. ಹಕ್ಕಿಗಳಲ್ಲಿ ಪ್ಲಾಸ್ಮೋಡಿಯಂ ರೆಲಿಕ್ಟಮ್ ಎಂಬ ಆದಿಜೀವಿಯು ಮಲೇರಿಯವನ್ನು ಉಂಟು ಮಾಡುತ್ತಿತ್ತು. ಹಕ್ಕಿಗಳಲ್ಲಿ ಪ್ಲಾ ರೆಲಿಕ್ಟಮ್ ನನ್ನು ರೋಗಿಷ್ಟ ಹಕ್ಕಿಯಿಂದ ಆರೋಗ್ಯವಂತ ಹಕ್ಕಿಗೆ ಕುಲೆಕ್ಸ್ -ಟಿಗನ್ಸ್ ಎಂಬ ಬೂದುಬಣ್ಣದ ಸೊಳ್ಳೆಯು ವರ್ಗಾಯಿಸುತ್ತಿತ್ತು. ರೋಗಿಷ್ಟ ಹಕ್ಕಿಗಳನ್ನು ಒಂದು ಗೂಡಿನಲ್ಲಿಟ್ಟ. ಅವುಗಳ ರಕ್ತವನ್ನು ಕುಡಿಯಲು ಸೊಳ್ಳೆಗಳನ್ನು ಬಿಟ್ಟ. ಒಂದೆರಡು ದಿನಗಳ ನಂತರ, ಆ ಸೊಳ್ಳೆಗಳನ್ನು ಸಂಗ್ರಹಿಸಿ, ಆರೋಗ್ಯವಂತ ಹಕ್ಕಿಗಳಿದ್ದ ಗೂಡಿನಲ್ಲಿ ಬಿಟ್ಟ. ಸೊಳ್ಳೆಗಳು ಆರೋಗ್ಯವಂತ ಹಕ್ಕಿಗಳನ್ನು ಕಚ್ಚಿ, ಮಲೇರಿಯ ಆದಿಜೀವಿ ಯನ್ನು ವರ್ಗಾಯಿಸಿದವು. ಆರೋಗ್ಯವಾಗಿದ್ದ ಹಕ್ಕಿಗಳಿಗೆ ಮಲೇರಿಯವು ಅಂಟಿಕೊಂಡಿತು.

ರಾಸ್, ರೋಗಗ್ರಸ್ತ ಹಕ್ಕಿಗಳನ್ನು ಕಚ್ಚಿದ್ದ ಸೊಳ್ಳೆಗಳನ್ನು ಹಿಡಿದು, ಅವುಗಳನ್ನು ಛೇದಿಸಿ ನೋಡಿದ. ಅವುಗಳ ಕರುಳಿನ ಜೀವಕೋಶಗಳಲ್ಲಿ ದಟ್ಟ ವರ್ಣದ ಹರಳುಗಳಂತಹ ರಚನೆಗಳು ಕಂಡು ಬಂದವು. ಅವು ಕ್ರಮೇಣ ದೊಡ್ಡದಾದವು. ನಂತರ ಅವುಗಳ ಒಡಲಿನಿಂದ ಹುಳುವಿನಿಂದ ರಚನೆಗಳು
ಹೊರಬಿದ್ದವು. ಅವು ಕರುಳಿನಿಂದ ಸೊಳ್ಳೆಯ ಜೊಲ್ಲು ಗ್ರಂಥಿಗಳತ್ತ ಸಾಗಿದವು. ಜೊಲ್ಲು ಗ್ರಂಥಿಗಳಲ್ಲಿ ಬೀಡುಬಿಟ್ಟವು. ಈ ಸೊಳ್ಳೆಯು ಆರೋಗ್ಯ ವಾಗಿದ್ದ ಹಕ್ಕಿಗಳನ್ನು ಕಚ್ಚಿದಾಗ, ಸೊಳ್ಳೆಯ ಜೊಲ್ಲಿನ ಜೊತೆಯಲ್ಲಿ ಹಕ್ಕಿಗಳ ಒಡಲನ್ನು ಪ್ರವೇಶಿಸುತ್ತಿದ್ದವು!

ರಾಸ್, ಹಕ್ಕಿಗಳಲ್ಲಿ ಮಲೇರಿಯವನ್ನು ಉಂಟು ಮಾಡುತ್ತಿದ್ದ ಪ್ಲಾ ರೆಲಿಕ್ಟಮ್ ಜೀವಿಯ ಜೀವನಚಕ್ರವನ್ನು ಪೂರ್ಣವಾಗಿ ಅನಾವರಣ
ಮಾಡಿದ್ದ! ಮನುಷ್ಯರಿಗೆ ಬರುವ ಮಲೇರಿಯದಲ್ಲೂ ಹೀಗೆಯೇ ನಡೆಯುತ್ತಿರಬೇಕು ಎಂದು ತರ್ಕಿಸಿದ.

೧೮೯೮ : ಜಿಯೋವನ್ನಿ ಬ್ಯಾಟಿಸ್ಟ ಗ್ರಾಸಿ (೧೮೫೪-೧೯೨೫) ಎಂಬ ಇಟಾಲಿಯನ್ ವೈದ್ಯ ಮತ್ತು ಪ್ರಾಣಿಶಾಸ್ತ್ರಜ್ಞ. ಮಲೇರಿಯವನ್ನು ಸೊಳ್ಳೆಗಳೇ ಹರಡುತ್ತವೆ ಎಂಬ ವಿಷಯವು ಅವನಿಗೆ ಮನವರಿಕೆಯಾಗಿತ್ತು. ಮನುಷ್ಯರಲ್ಲಿ ಯಾವ ಪ್ರಭೇದದ ಸೊಳ್ಳೆಯು ಮಲೇರಿಯವನ್ನು ಹರಡುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಅವನು ಅನಾಫಿಲಸ್ ಕ್ಲಾವಿಗರ್ ಮತ್ತು ಕ್ಯುಲೆಕ್ಸ್ ಕುಲದ ಎರಡು ಪ್ರಭೇದಗಳನ್ನು ಅಧ್ಯಯನಕ್ಕೆ ಆಯ್ದುಕೊಂಡ.

ಗ್ರಾಸಿ ಜೊತೆಯಲ್ಲಿ ಬಿಗ್ನಾಮಿ ಮತ್ತು ಬ್ಯಾಸ್ಟಿಯಾನೆಲ್ಲಿ ಯವರು ಸುವ್ಯವಸ್ಥಿಯ ಅಧ್ಯಯನವನ್ನು ಕೈಗೊಂಡರು. ಅನಾಫಿಲಸ್ ಕ್ಲಾವಿಗರ್ ಸೊಳ್ಳೆಯು ಮಲೇರಿಯವನ್ನು ಹರಡುತ್ತದೆ ಎನ್ನುವುದನ್ನು ನಿರೂಪಿಸಿದರು. ತಮ್ಮ ಅಧ್ಯಯನವನ್ನು ಮತ್ತೆರಡು ವರ್ಷಗಳ ಕಾಲ ಮುಂದುವರಿಸಿದರು. ಪ್ಲಾ -ಲ್ಸಿ-ರಂ, ಪ್ಲಾ ವೈವಾಕ್ಸ್ ಮತ್ತು ಪ್ಲಾ ಮಲೇರಿಯೆಗಳು ಮನುಷ್ಯ ಹಾಗೂ ಸೊಳ್ಳೆಗಳ ಒಡಲಿನಲ್ಲಿ ನಡೆಸುವ ತಮ್ಮ ಜೀವನಚಕ್ರದ ಎಲ್ಲ ಘಟ್ಟಗಳನ್ನು
ವಿಸ್ತೃತವಾಗಿ ವರ್ಣಿಸಿದರು.

೧೮೯೯ : ಬ್ರಿಟಿಷ್ ಸರ್ಕಾರವು ಪಶ್ಚಿಮ ಆಫ್ರಿಕದ ಸಿಯೆರಾ ಲಿಯೋನ್‌ನಲ್ಲಿದ್ದ, ಉಷ್ಣವಲಯ ಕಾಡುಗಳಲ್ಲಿ ಕಂಡುಬರುವ ರೋಗಗಳನ್ನು ಕುರಿತು ಅಧ್ಯಯನ ಮಾಡುವ ಸಂಸ್ಥೆಯಾದ ಲಿವರ್ ಪೂಲ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್ನಿಗೆ ರಾಸ್‌ನನ್ನು ಕಳುಹಿಸಿಕೊಟ್ಟಿತು. ಅಲ್ಲಿ ರಾಸ್, ಪ್ಲಾಸ್ಮೋಡಿಯಂ ಅನಾಫಿಲಸ್ ಕ್ಲಾವಿಗರ್ ಮೂಲಕ ಮಾತ್ರವಲ್ಲ, ಅ ಗ್ಯಾಂಬಿಯೆ ಮತ್ತು ಅ -ನೆಸ್ಟಸ್ ಮೂಲಕವೂ ಹರಡುತ್ತದೆ ಎನ್ನುವುದನ್ನು ತೋರಿಸಿಕೊಟ್ಟ. ನಂತರ ಆಫ್ರಿಕದಲ್ಲಿ ಸೊಳ್ಳೆಯ ವರ್ಧನಾ ತಾಣಗಳನ್ನು ನಾಶಪಡಿಸಲಾರಂಭಿಸಿದ.

ನದಿ ಪಾತ್ರಗಳನ್ನು ನೇರಗೊಳಿಸಿದ. ನಿಂತ ನೀರಿನ ತಾಣಗಳನ್ನು ಸ್ವಚ್ಛಗೊಳಿಸಿದ. ಮಳೆಯ ನೀರು ನಿಲ್ಲದಂತೆ ರಸ್ತೆಗಳನ್ನು ಸಮತಟ್ಟುಗೊಳಿಸಿದ. ೧೯೦೨ ರಲ್ಲಿ ಮಲೇರಿಯ ನಿಗ್ರಹಕ್ಕೆ ಮಾರ್ಗದರ್ಶನವನ್ನು ನೀಡಿದ ರೊನಾಲ್ಡ್ ರಾಸ್‌ನಿಗೆ, ಅಂಗಕ್ರಿಯ ವಿಜ್ಞಾನ ಮತ್ತು ವೈದ್ಯಕೀಯದ ಪ್ರಪ್ರಥಮ ನೊಬೆಲ್ ಪಾರಿತೊಷಕವನ್ನು ನೀಡಿ ಗೌರವಿಸಲಾಯಿತು.