ಪ್ರಚಲಿತ
ಮಾರುತೀಶ್ ಅಗ್ರಾರ
ಹಿ.ಪ್ರದೇಶ, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ರಾಜಾಸ್ಥಾನದ ಕೆಲವು ಜಿಲ್ಲೆಗಳು ಖಲಿಸ್ತಾನದ ಭಾಗ ವಾಗಬೇಕೆಂದು ಸಿಖ್ ಫಾರ್ ಜಸ್ಟಿಸ್ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಹೆಸರಿಸಲಾಗಿದೆ. ಪಂಜಾಬನ್ನು ಭಾರತದಿಂದ ಬೇರ್ಪಡಿಸುವ ಕುರಿತಂತೆ ಸಿಖ್ಖರಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ಖಲಿಸ್ತಾನ್ ಭಯೋತ್ಪಾದಕರು ಮಾಡಿದ್ದಾರಂತೆ!
ಪಂಜಾಬ್ ಮಹಾ ದೇಶಭಕ್ತರಿಗೆ ಜನ್ಮ ಕೊಟ್ಟ ಭೂಮಿ. ಲಾಲಾ ಲಜಪತ್ ರಾಯ್, ಭಗತ್ ಸಿಂಗ್, ಮದನ್ ಲಾಲ್ ಧಿಂಗ್ರಾ, ಉಧಮ್ ಸಿಂಗ್ ಇವರೆಲ್ಲ ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಪಂಜಾಬಿನ ಕೆಚ್ಚೆದೆಯ ವೀರರು. ಅಲ್ಲದೇ, ಅನೇಕ ಸಿಖ್ ಗುರುಗಳು ಹಾಗೂ ಆ ಸಮುದಾಯದ ಅನೇಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಪೂರ್ವದ ಇತಿಹಾಸವನ್ನೊಮ್ಮೆ ಕೆದಕಿದರೆ ಪ್ರತಿಯೊಬ್ಬ ಭಾರತೀಯನೂ ಪಂಜಾಬಿಗಳ ಶೌರ್ಯ, ತ್ಯಾಗ, ಹೋರಾಟಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾನೆ.
ಹಾಗಾಗಿ ಪಂಜಾಬ್ ಮಣ್ಣಿನ ಕಣಕಣದಲ್ಲೂ ದೇಶಪ್ರೇಮದ ಘಮಲಿದೆ, ಪ್ರತಿಯೊಬ್ಬ ಪಂಜಾಬಿಗರ ನರನಾಡಿಗಳಲ್ಲಿ ರಾಷ್ಟ್ರೀಯತೆಯ ಭಾವವಿದೆ. ದುರ್ದೈವವೆಂದರೆ ಅಸಂಖ್ಯಾತ ದೇಶಪ್ರೇಮಿಗಳು ಹುಟ್ಟಿದ ನಾಡಿನಲ್ಲಿ ಕೆಲ ಕಿಡಿಗೇಡಿಗಳ ಕುತಂತ್ರದಿಂದ ಭಾರತದ ಅಸ್ಮಿತೆಗೆ, ಸಾರ್ವಭೌಮತೆಗೆ ಭಂಗ ತರುವಂತ ಕೆಲಸದಲ್ಲಿ ಭಯೋತ್ಪಾದಕ ಗುಂಪೊಂದು ಈಗ ನಿರತವಾಗಿದೆ.
ಹೌದು, ಕೆಲ ಕಿಡಿಗೇಡಿಗಳು ಪಂಜಾಬನ್ನು ಭಾರತದಿಂದ ಬೇರ್ಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅದಕ್ಕಾಗಿ ವಿದೇಶ ಗಳಲ್ಲಿ ಭಾರತದ ವಿರುದ್ಧ ದೊಡ್ಡ ಮಟ್ಟದ ಪಿತೂರಿಯನ್ನು ಅಯೋಜಿಸುತ್ತಿದ್ದಾರೆ! ಅಂದಹಾಗೆ ಆ ಕಿಡಿಗೇಡಿಗಳು ಯಾರು ಗೊತ್ತಾ? ಅವರೇ ಖಲಿಸ್ತಾನಿ ಭಯೋತ್ಪಾದಕ ಹೋರಾಟಗಾರರು. ಇವರು ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರ ವನ್ನು ನಿರ್ಮಾಣ ಮಾಡಬೇಕೆಂದು ಅದಕ್ಕಾಗಿ ಪಂಜಾಬನ್ನು ಭಾರತದಿಂದ ವಿಭಜಿಸಬೇಕೆಂದು ಹೋರಾಡುತ್ತಿದ್ದಾರೆ! ಎಂಥಾ
ಅಯೋಗ್ಯರಿರಬೇಕು ಇವರು.
ಅಂದಹಾಗೆ ಭಾರತ ವಿರೋಧಿಗಳ ಕುಮ್ಮಕ್ಕು ಹಾಗೂ ಪಾಕಿಸ್ತಾನದ ನೆರವಿನಿಂದ ಪ್ರಚೋದನೆಗೆ ಒಳಗಾಗಿರುವ ಖಲಿಸ್ತಾನ್ ಹೋರಾಟಗಾರರು ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರಕ್ಕಾಗಿ ಜಾಗತಿಕ ಸಮುದಾಯವನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನಕ್ಕೆ ಮುಂದಾಗಿರುವುದು ದುರಂತ. ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರ ಬೇಕು ಎಂದು ಮೊದಲಿಗೆ ಬೇಡಿಕೆ ಇಟ್ಟವರು
ಶಿರೋಮಣಿ ಅಕಾಲಿದಳದ ಮುಖಂಡ ಮಾಸ್ಟರ್ ತಾರಾ ಸಿಂಗ್.
೧೯೨೯ರ ಡಿಸೆಂಬರ್ ೩೧ರಂದು ಲಾಹೋರಿನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ಮೋತಿಲಾಲ್ ನೆಹರೂ ಪೂರ್ಣ ಸ್ವರಾಜ್ಯದ ಕುರಿತಂತೆ ಪ್ರಸ್ತಾಪಿಸುತ್ತಿದ್ದಂತೆ ಅದನ್ನು ವಿರೋಧಿಸಿ ಸಿಖ್ಖರಿಗೆ ಪ್ರತ್ಯೇಕ ರಾಜ್ಯ ಬೇಕೆಂದು
ಮೊದಲಿಸಿದ್ದರು ತಾರಾ ಸಿಂಗ್. ಆದರೆ ಅಂದು ಸಹ ತಾರಾ ಸಿಂಗ್ ಅವರ ಬೇಡಿಕೆಗೆ ಯಾರೂ ಕೂಡ ಸೊಪ್ಪು ಹಾಕಲಿಲ್ಲ. ಪರಿಣಾಮ ಖಲಿಸ್ತಾನ್ ಹೋರಾಟ ಸ್ವಲ್ಪ ದಿನಗಳ ಮಟ್ಟಿಗೆ ತಟಸ್ಥವಾಯಿತು. ನಂತರ ಅಂದರೆ ೧೯೪೭ರಲ್ಲಿ ದೇಶ ವಿಭಜನೆ ಯ ಸಮಯದಲ್ಲಿ ಪಂಜಾಬ್ ಎರಡು ಭಾಗಗಳಾಗಿ ಹೋಳಾಯಿತು.
ಪಂಜಾಬಿನ ಒಂದು ಭಾಗ ಪಾಕಿಸ್ತಾನಕ್ಕೆ, ಇನ್ನೊಂದು ಭಾಗ ಭಾರತದಲ್ಲೇ ಉಳಿಯಿತು. ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರದ ಕಡೆ ಸಂಪೂರ್ಣವಾಗಿ ಇರದಿದ್ದರೂ ಸಿಖ್ಖರಿಗಾಗಿ ಯಾವುದೇ ಕೆಲಸ ಮಾಡಲು ಹಾಗೂ ಯಾರೊಂದಿಗಾದರೂ ಕೈಜೋಡಿಸಲು
ತಯಾರಿದ್ದನು. ಭಿಂದ್ರನ್ ವಾಲೆ ಮತ್ತು ಜಗಜಿತ್ ಸಿಂಗ್ ಇಬ್ಬರ ಪರಿಚಯದ ನಂತರ ಖಲಿಸ್ತಾನ್ ಉಗ್ರರ ಹೋರಾಟ ಇನ್ನೊಂದು ಮಗ್ಗುಲಿಗೆ ವಾಲಿತು. ಅನೇಕ ದಶಕಗಳ ಕಾಲ ಶಾಂತಿಯುತವಾಗಿ, ಸಣ್ಣಪುಟ್ಟ ಪ್ರತಿಭಟನೆಗಳ ಮೂಲಕ ತಮ್ಮ
ಹೋರಾಟವನ್ನು ಮುನ್ನಡೆಸುತ್ತ ಬಂದಿದ್ದ ಖಾಲಿಸ್ತಾನ್ ಪ್ರತ್ಯೇಕತಾವಾದಿ ಗುಂಪು ಭಿಂದ್ರನ್ ವಾಲೆಯ ಬೆಂಬಲದ ತರುವಾಯ ಹಿಂಸಾತ್ಮಕ ರೂಪ ಪಡೆದಿದ್ದು ದುರ್ದೈವ.
ಜಗಜಿತ್ ಸಿಂಗನ ಮುಂದಾಳತ್ವದಲ್ಲಿ ಅಂದರೆ ೧೯೭೦-೮೦ರ ದಶಕದಲ್ಲಿ ಖಲಿಸ್ತಾನ್ ಹೋರಾಟ ವ್ಯಾಪಕವಾಗಿ ಹರಡಿತು. ಆ ಸಮಯದಲ್ಲಿ ಪಂಜಾಬಿನಲ್ಲಿ ನಡೆಯುತ್ತಿದ್ದ ಘರ್ಷಣೆಯಲ್ಲಿ ಅನೇಕರು ಸಾವನ್ನಪ್ಪಿದರು. ಇದಕ್ಕೆಲ್ಲಾ ಭಿಂದ್ರನ್ ವಾಲೆಯ ಪ್ರಚೋದಿತ ಹೋರಾಟಗಳು ಸಹ ಕಾರಣವಾಗಿದ್ದವು. ನೋಡ ನೋಡುತ್ತಿದ್ದಂತೆಯೇ ಪಂಜಾಬಿನಲ್ಲಿ ಹಿಂಸಾತ್ಮಕ ಘಟನೆಗಳು ಭುಗಿಲೆದ್ದವು.
ಭಿಂದ್ರನ್ ವಾಲೆ ಮೇಲೆ ಪೊಲೀಸ್ ಠಾಣೆಗಳಲ್ಲಿ ಕೋಮು ಪ್ರಚೋದಿತ, ಭಯೋತ್ಪಾದಕ ಕೇಸ್‌ಗಳು ದಾಖಲಾದವು. ಇದರಿಂದ ಎಚ್ಚೆತ್ತು ಕೊಂಡ ಭಿಂದ್ರನ್ ವಾಲೆ ಸರ್ಕಾರ ತನ್ನನ್ನು ಯಾವಾಗ ಬೇಕಾದರೂ ಬಂಧಿಸಬಹುದು ಎಂದು ಅಂದಾಜಿಸಿ ಅಮೃತಸರದ ಗೋಲ್ಡನ್ ಟೆಂಪಲ್ ಅನ್ನೇ ಮನೆ ಮಾಡಿಕೊಂಡು ಬಿಟ್ಟ. ಅಲ್ಲಿ ಕೂತೇ ಸಾಕಷ್ಟು ಭಯೋತ್ಪಾದಕ ಚಟುವಟಿಕೆ ಗಳನ್ನು ನಡೆಸುತ್ತಿದ್ದ ಭಿಂದ್ರನ್ ವಾಲೆಯ ಉಪಟಳ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿತು.
ಆಗ ಬೇರೆ ದಾರಿ ಕಾಣದೆ ಇಂದಿರಾ ನೇತೃತ್ವದ ಕೇಂದ್ರ ಸರ್ಕಾರ ಭಿಂದ್ರನ್ ವಾಲೆಯನ್ನು ಬಂಽಸಲು ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಆರಂಭಿಸಿತು. ಬರೋಬ್ಬರಿ ಒಂಬತ್ತು ದಿನಗಳ ಕಾಲ ನಡೆದ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾ ಚರಣೆಯಲ್ಲಿ ಭಿಂದ್ರನ್ ವಾಲೆಯು ಸೇರಿದಂತೆ ನೂರಾರು ಜನರು ಸಾವನ್ನಪ್ಪಿದರು. ಅನೇಕರನ್ನು ಬಂಧಿಸಲಾಯಿತು.
ವಿಪರ್ಯಾಸವೆಂದರೆ ಈ ಕಾರ್ಯಾಚರಣೆಯಲ್ಲಿ ನಮ್ಮ ಸುಮಾರು ೮೩ ಯೋಧರು ಹುತಾತ್ಮರಾದರು. ಭಿಂದ್ರನ್ ವಾಲೆಯ ಸಾವಿನ ಪ್ರತೀಕಾರವಾಗಿ ಇಂದಿರಾಗಾಂಧಿಯ ಹತ್ಯೆ, ಪಂಜಾಬ್ ಸಿಎಂ ಬಿಯಾಂತ್ ಸಿಂಗ್ ಸಾವು, ಮಾಜಿ ಸೇನಾ ಜನರಲ್ ಎ.ಎಸ್. ವೈದ್ಯ ಹಾಗೂ ಅನೇಕ ಅಮಾಯಕ ಜೀವಗಳು ಬಲಿಯಾದದ್ದು ದುರ್ದೈವ. ತದನಂತರ ಅಂದರೆ ಭಿಂದ್ರನ್
ವಾಲೆಯ ಸಾವಿನ ನಂತರ ಖಲಿಸ್ತಾನ್ ಪರವಾದ ಹೋರಾಟಗಳು ಕೆಲಕಾಲ ಮರೆಯಾಗಿತ್ತಾದರೂ ಅಲ್ಲಲ್ಲಿ ಸಣ್ಣದಾಗಿ ಹೊಗೆಯಾಡುತ್ತಲೇ ಇತ್ತು ಎನ್ನಬಹುದು. ಆದರೆ ದಿನೇ ದಿನೇ ಖಲಿಸ್ತಾನಿ ಪ್ರತ್ಯೇಕತಾವಾದಿ ಬೆಂಬಲಿಗರ ಹೋರಾಟಗಳು
ಹಿಂಸಾತ್ಮಕ ರೂಪ ತಾಳಿದ್ದರಿಂದ ಖಲಿಸ್ತಾನಿ ಸಂಘಟನೆಯ ಮೇಲೆ ಸರ್ಕಾರ ನಿಷೇಧವನ್ನು ಹೇರಿತು.
ಮತ್ತೊಂದು ಕಡೆ ಭಿಂದ್ರನ್ ವಾಲೆಯ ಸಾವಿನ ನಂತರ ಜಗಜಿತ್ ಸಿಂಗ್ ಚೌಹಾಣ್ ಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಖಲಿಸ್ತಾನ್ ಹೋರಾಟದಿಂದ ಬಹಿರಂಗವಾಗಿ ಹಿಂದೆ ಸರಿದ. ಜೊತೆಗೆ ಇಂಗ್ಲೆಂಡಿನಿಂದ ಮರಳಿ ಪಂಜಾಬ್‌ಗೆ ಬಂದ
ಜಗಜಿತ್ ಸಿಂಗ್ ಕೆಲ ದಿನಗಳವರೆಗೂ ಯಾವುದೇ ಹೋರಾಟಗಳಲ್ಲಿ ಭಾಗಿಯಾಗದೆ ಮೌನವಹಿಸಿದ. ಆದರೂ ಆತನೊಳಗಿದ್ದ ಖಲಿಸ್ತಾನ್ ರಾಷ್ಟ್ರದ ಹುಚ್ಚು ಕೆಲವೊಮ್ಮೆ ಮಾತುಗಳ ಮೂಲಕ ಸೋಟಗೊಳ್ಳುತ್ತಿತ್ತು.
ಅನೇಕ ಸಿಖ್ಖರು ಈತನಿಂದ ಪ್ರಭಾವಿತರಾಗಿ ಖಲಿಸ್ತಾನ್ ರಾಷ್ಟ್ರ ಸ್ಥಾಪನೆಯ ಹೋರಾಟಕ್ಕೆ ಧುಮುಕಿದರು. ಭಾರತ ವಿರೋಧಿ
ಚಟುವಟಿಕೆಗಳಲ್ಲಿ ಭಾಗಿಯಾದರು. ತೀರಾ ಇತ್ತೀಚೆಗೆ ಅಂದರೆ ೨೦೦೭ರಲ್ಲಿ ಜಗಜಿತ್ ಸಿಂಗ್ ಚೌಹಾಣ್ ಸಾವನ್ನಪ್ಪಿದ ನಂತರ ಖಲಿಸ್ತಾನ್ ಪರವಾದ ಹೋರಾಟ ಸ್ವಲ್ಪ ಕಾಲ ಹಳ್ಳ ಹಿಡಿದಿತ್ತು. ಜೊತೆಗೆ ಖಲಿಸ್ತಾನ್ ಸಂಘಟನೆಯನ್ನು ನಿಷೇಧಿಸಿದ್ದ ರಿಂದ ಕೆಲ ಚುಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು.
ಆದರೂ ಕೆಲ ಪ್ರತ್ಯೇಕತಾವಾದಿ ಸಿಖ್ಖರಿಗೆ ಖಲಿಸ್ತಾನ್ ರಾಷ್ಟ್ರದ ಹುಚ್ಚು ಬಿಟ್ಟಿರಲಿಲ್ಲ. ಅಂಥವರು ವಾರಿಸ್ ಪಂಜಾಬ್ ದೇ ಹಾಗೂ ಇನ್ನು ಬೇರೆ ಬೇರೆ ಹೆಸರಿನ ಸಂಘಟನೆ ಮೂಲಕ ಖಲಿಸ್ತಾನ್ ಚಳವಳಿಯನ್ನು ಹತ್ತಿಕ್ಕುವ ಕೆಲಸವನ್ನು ಮುಂದು ವರಿಸಿದರು. ಇತ್ತೀಚಿಗಂತೂ ಖಲಿಸ್ತಾನ್ ಉಗ್ರರ ದಾಂಧಲೆ ಅತಿರೇಕಕ್ಕೆ ಹೋಗಿದೆ. ಅದರಲ್ಲೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಖಲಿಸ್ತಾನ್ ಚಳವಳಿ ಯನ್ನು ಮುಂದುವರಿಸಲು ಬಿಡುವುದಿಲ್ಲ ಎನ್ನುವ ಹೇಳಿಕೆಯೊಂದನ್ನು ನೀಡಿದ ನಂತರ ಅವರನ್ನೇ ಗುರಿಯಾಗಿಸಿಕೊಂಡು ಇಂದಿರಾಗಾಂಧಿಗೆ ಆದಗತಿಯೇ ನಿಮಗೂ ಆಗಬೇಕೇನು? ಎನ್ನುವ ಮೂಲಕ ಧಾರ್ಷ್ಟ್ಯತನ ಮೆರೆದಿದ್ದಾನೆ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್.
ಇತ್ತೀಚೆಗೆ ಪಂಜಾಬಿನ ಅಮೃತಸರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸಣ್ಣ ಗಲಾಟೆಯಿಂದ ಪ್ರಚೋದಿತ ಗೊಂಡಿರುವ ಅಮೃತಪಾಲ್ ಸಿಂಗ್ ನೇತೃತ್ವದ ಭಯೋತ್ಪಾದಕ ಗುಂಪೊಂದು ಈಗ ಖಲಿಸ್ತಾನ್ ದೇಶದ ಹೋರಾಟವನ್ನು ಹತ್ತಿಕ್ಕುತಿದೆ.
ಇದರ ಮುಂದುವರಿದ ಭಾಗವಾಗಿ ವಿದೇಶಗಳಲ್ಲಿ ನೆಲೆಸಿರುವ ಖಲಿಸ್ತಾನಿ ಬೆಂಬಲಿಗರು ಆಯಾಯ ದೇಶಗಳಲ್ಲಿ ಭಾರತ ವಿರೋಽ ಕುಕೃತ್ಯಗಳನ್ನು ಎಸಗುತ್ತಿದ್ದಾರೆ.
ಇವರಿಗೆಲ್ಲ ಭಾರತ ವಿರೋಧಿ ಸಂಘಟನೆಗಳು, ವ್ಯಕ್ತಿಗಳು ಹಾಗೂ ನರೇಂದ್ರ ಮೋದಿಯವರ ಯಶಸ್ಸನ್ನು ಸಹಿಸದ ಕುಪ್ರಸಿದ್ಧರು ಇಂದು ಖಲಿಸ್ತಾನ್ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವುದು ದೌರ್ಭಾಗ್ಯವೇ ಸರಿ. ಅದರಲ್ಲೂ ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ರಾಜಾಸ್ಥಾನದ ಕೆಲವು ಜಿಲ್ಲೆಗಳು ಖಲಿಸ್ತಾನದ ಭಾಗವಾಗಬೇಕೆಂದು ಸಿಖ್ ಫಾರ್ ಜಸ್ಟಿಸ್ ಬಿಡುಗಡೆ ಮಾಡಿದ ನಕ್ಷೆಯಲ್ಲಿ ಹೆಸರಿಸಲಾಗಿದೆ.
ಇದು ನಿಜಕ್ಕೂ ಆತಂಕಕಾರಿ ಸಂಗತಿ. ಇಷ್ಟೇ ಅಲ್ಲದೆ, ಪಂಜಾಬನ್ನು ಭಾರತದಿಂದ ಬೇರ್ಪಡಿಸುವ ಕುರಿತಂತೆ ವಲಸಿಗ ಸಿಖ್ಖರಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ಖಲಿ ಸ್ತಾನ್ ಭಯೋತ್ಪಾದಕರು ಮಾಡಿದ್ದಾರಂತೆ! ಇದು ಸಹ ಧಾರ್ಷ್ಟ್ಯದ
ಪರಮಾವಧಿಯಲ್ಲದೇ ಮತ್ತೇನು? ಅನೇಕರಿಗೆ ನೆನಪಿರಬಹುದು ೨೦೨೦ ರಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ರೈತ ಹೋರಾಟವನ್ನು ಹತ್ತಿಕ್ಕಿ, ನಂತರ ಕೆಂಪುಕೋಟೆಗೆ ನುಗ್ಗಿ ಉದ್ಧಟತನ ಪ್ರದರ್ಶಿಸಿದ್ದು ಇದೇ ಖಲಿಸ್ತಾನಿ ಬೆಂಬಲಿತ
ಉಗ್ರರು ಎನ್ನುವುದು ನೆನಪಿರಲಿ. ಅಲ್ಲದೇ ಭಾರತದ ವರ್ಚಸ್ಸನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸುವ ದುರುದ್ದೇಶದಿಂದ ರೈತ ಪರ ಪ್ರತಿಭಟನೆಯನ್ನು ಜಾಗತಿಕವಾಗಿ ಅಪಪ್ರಚಾರ ಮಾಡುವಲ್ಲಿಯೂ ಖಲಿಸ್ತಾನಿಗಳ ಕೈವಾಡವಿರುವುದು ಬಹಿರಂಗಗೊಂಡಿದೆ.
ಒಟ್ಟಿನಲ್ಲಿ ಖಲಿಸ್ತಾನ್ ಪ್ರತ್ಯೇಕವಾದಿಗಳು ತಮ್ಮ ತಲೆ-ಬುಡವಿಲ್ಲದ ಹೋರಾಟದಲ್ಲಿ ಭಾರತದ ಘನತೆಯನ್ನು ಹಾಳುಮಾಡಲು ಯತ್ನಿಸುತ್ತಿರುವುದಂತೂ ದಿಟ. ಭಾರತದ ಮೇಲಿನ ದ್ವೇಷದಿಂದ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನೇ ದಾಳವಾಗಿ ಬಳಸು ತ್ತಿರುವ ಪಾಕಿಸ್ತಾನದ ಖಲಿಸ್ತಾನಿಗಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುವುದರೊಂದಿಗೆ ಭಾರತದಲ್ಲಿ ಅಸ್ಥಿರತೆ ಉಂಟು ಮಾಡಲು ಯತ್ನಿಸುತ್ತಿದೆ. ಜೊತೆಗೆ ಸೂಪರ್ ಪವರ್ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತವನ್ನು ಸಹಿಸದ ಕೆಲ ವಿದೇಶಿ ಮಾಧ್ಯಮಗಳು ಕೂಡ ಖಲಿಸ್ತಾನಿಗಳ ಬೆಂಬಲಕ್ಕೆ ನಿಂತು ಅವರಿಗೆ ವ್ಯಾಪಕ ಪ್ರಚಾರ ಕೊಡುತ್ತಿವೆ ಎನ್ನುವ ಮಾತುಗಳು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಳಿಬರುತ್ತಿವೆ.
ಆತಂಕದ ವಿಷಯವೆಂದರೆ ಅಮೃತಪಾಲ್ ಸಿಂಗ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡು ಅಲೆದಾಡುತ್ತಿದ್ದಾನೆ ಎನ್ನುವ ವರದಿಗಳು ಬರುತ್ತಿವೆ. ಒಂದುವೇಳೆ ಇವನೇನಾದರೂ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾದರೆ ಪ್ರತ್ಯೇಕ ಖಲಿಸ್ತಾನ್
ರಾಷ್ಟ್ರದ ರೂಪುರೇಷೆ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದನ್ನು ಹೇಳಲಾಗದು. ಹಾಗಾಗಿ ಭಾರತ ಸರ್ಕಾರ ಸಾಧ್ಯ ವಾದಷ್ಟು ಬೇಗ ಅಮೃತಪಾಲ್ ಸಿಂಗನನ್ನು ಬಂಧಿಸುವುದರ ಜೊತೆಗೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಹೆಡೆಮುರಿ ಕಟ್ಟದಿದ್ದರೆ ದೇಶ ಮತ್ತೊಂದು ದುರಂತಕ್ಕೆ ಕಾರಣವಾಗಬೇಕಾದಿತು ಎಚ್ಚರ!