Friday, 22nd November 2024

ಪರಿಸರ ಪ್ರೇಮಿ, ಪ್ರಾಣಿ ಪ್ರಿಯ

ಶಶಾಂಕ್ ಮುದೂರಿ

ಪ್ರಧಾನಿ ಮೋದಿಯವರಿಗೆ ಪ್ರಕೃತಿ ಎಂದರೆ, ಬೆಟ್ಟಗುಡ್ಡಗಳಲ್ಲಿ ಸುತ್ತಾಡುವುದು ಎಂದರೆ ಬಹಳ ಇಷ್ಟ. ತಮ್ಮ ಆಧ್ಯಾತ್ಮಿಕ ಸಾಧನೆಯ ಒಂದು ಭಾಗವಾಗಿ ಅವರು ಪ್ರಕೃತಿಯ ಒಡನಾಟವನ್ನು ಪರಿಭಾವಿಸಿದ್ದು ವಿಶೇಷ ವಿದ್ಯಮಾನ. ಮೋದಿಯವರು  ಯುವ ವಯಸ್ಸಿನಲ್ಲಿ ಹುಟ್ಟೂರನ್ನು ತೊರೆದು ಹಿಮಾಲಯದತ್ತ ತೆರಳಿದ್ದು, ಅಲ್ಲಿನ ಜನರೊಂದಿಗೆ ಒಡನಾಟ ನಡೆಸಿದ್ದು, ಅಲ್ಲಿನ ಅಧ್ಯಾತ್ಮ ಸಾಧಕರನ್ನು ಅರಸುತ್ತಾ ಓಡಾಡಿದ್ದು, ಇವೆಲ್ಲವನ್ನೂ ಅವರ ಪ್ರಕೃತಿ ಪ್ರೇಮದ ಭಾಗವಾಗಿ ನೋಡಬಹುದು.

ಅಷ್ಟೇಕೆ, ಅವರ ಯೋಗಾಭ್ಯಾಸದ ಸಾಧನೆ, ವಿಶ್ವದ ಎಲ್ಲರೂ ಯೋಗಾಭ್ಯಾಸದಲ್ಲಿ ನಿರತರಾಗಬೇಕೆಂಬ ಅಭಿಲಾಷೆ, ಪ್ರಾಣಿ ಪಕ್ಷಿಗಳ ಮೇಲೆ ತೋರುತ್ತಿರುವ ವಿಶೇಷ ಪ್ರೀತಿ ಇವೆಲ್ಲವೂ ಅವರ ಪ್ರಕೃತಿ ಪ್ರೇಮದ ಭಾಗಗಳೆಂದೇ ಹೇಳಬಹುದು. ಹಾಗೆ ನೋಡ ಹೋದರೆ, ಮೋದಿಯವರ ಪ್ರಕೃತಿ ಪ್ರೇಮವು ಅವರ ರಾಜಕೀಯ ಜೀವನದ ಜಂಜಾಟದಿಂದ ಸಣ್ಣ ಬಿಡುವು ಮಾಡಿ ಕೊಳ್ಳುವ ಸಂದರ್ಭ. ದೇಶದ ಪ್ರಧಾನಿ ಹುದ್ದೆ ಜವಾಬ್ದಾರಿಯ ನಡುವೆಯೂ, ಕಾಡು ಸುತ್ತುವ ಮೋದಿಯವರ ಹವ್ಯಾಸ ಅನುಕರಣಾರ್ಹ.

ಕಳೆದ ವರ್ಷ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ, ‘ಮ್ಯಾನ್ ವರ್ಸಸ್ ವೈಲ್ಡ್‌’ ಸರಣಿಯ ಅಂಗವಾಗಿ, ದಟ್ಟ ಕಾಡಿನ ನಡುವೆ ನಡೆಯುತ್ತಾ,  ಅಲ್ಲಿನ ನದಿಯೊಂದನ್ನು ಪುಟ್ಟ ಹರಿಗೋಲಿನಲ್ಲಿ ಕುಳಿತು ದಾಟುವ ಸಾಹಸ ಮಾಡಿದ ನರೇಂದ್ರ ಮೋದಿ ಯವರು, ಆ ಒಂದು ಚಟುವಟಿಕೆಯ ಮೂಲಕ ಹೊಸ ದಾಖಲೆಯನ್ನೇ ಬರೆದರು.

ನಮ್ಮ ದೇಶದ ಬೇರೆ ಯಾವುದೇ ಪ್ರಧಾನಮಂತ್ರಿಯೂ, ದಟ್ಟ ಕಾಡಿನ ನಡುವೆ ಮತ್ತು ನದಿಯಲ್ಲಿ ಇಂತಹ ಸಾಹಸ ಮಾಡಿಲ್ಲ.
ಕಳೆದ ವರ್ಷ ಆಗಸ್ಟ್‌ 12ರಂದು ಡಿಸ್ಕವರಿ ಚಾನೆಲ್‌ನಲ್ಲಿ ನರೇಂದ್ರ ಮೋದಿಯವರ ಕಾಡು ಸುತ್ತುವ ಸಾಹಸದ ಸಾಕ್ಷ್ಯಚಿತ್ರವು ಪ್ರಸಾರಗೊಂಡಾಗ, ಆ ಚಿತ್ರ ಒಂದು ಹೊಸ ದಾಖಲೆಯನ್ನು ಬರೆಯಿತು. ಬ್ರಿಟಿಷ್ ಸಾಹಸಿ ಬೇರ್ ಗ್ರಿಲ್ಸ್‌‌ನ ಏಕಾಂಗಿ ಸಾಹಸಗಳು, ವಿಶ್ವದ ವಿವಿಧ ಚಾನೆಲ್‌ಗಳಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಸಾರಗೊಳ್ಳುತ್ತಿದ್ದುದರಿಂದ, ಆ ಸಾಹಸಿಗೆ ಅವರದೇ ಆದ ವೀಕ್ಷಕ ರಿದ್ದಾರೆ. ಈ ವಿಶ್ವ ವಿಖ್ಯಾತ ಸಾಹಸಿ ಬೇರ್ ಗ್ರಿಲ್ಸ್‌‌ನ ಮಾರ್ಗದರ್ಶನದಲ್ಲಿ, ಉತ್ತರಾಖಂಡ ರಾಜ್ಯದ ಜಿಮ್ ಕಾರ್ಬೆಟ್ ರಾಷ್ಟ್ರೀಯ ವನ್ಯಧಾಮದಲ್ಲಿ ಮೋದಿಯವರು ಓಡಾಡಿದ ದೃಶ್ಯಗಳು ಲಕ್ಷಾಂತರ ವೀಕ್ಷಕರ ಮನ ಸೆಳೆದವು.

ವನ್ಯಪ್ರಾಣಿಗಳ ವಾಸಸ್ಥಾನ: ಸಾಕಷ್ಟು ಹುಲಿಗಳು ಮತ್ತು ಇತರ ವನ್ಯಜೀವಿಗಳ ಆವಾಸ ತಾಣ ಎನಿಸಿರುವ ಕಾರ್ಬೆಟ್ ರಾಷ್ಟ್ರೀಯ ವನ್ಯಧಾಮದಲ್ಲಿ ಮೋದಿಯವರು ಕಾಡು ಗಿಡಗಳ ನಡುವೆ ನಡೆದರು. ಅವರಿಗೆ ಅಂದು ಮಾರ್ಗದರ್ಶಿಯಾಗಿದ್ದ ಬೇರ್ ಗ್ರಿಲ್ಸ್, ಮೋದಿಯವರಿಗಾಗಿ ಒಂದು ಆಯುಧವನ್ನು ತಯಾರು ಮಾಡಿಕೊಟ್ಟರು. ಕಾಡಿನಲ್ಲೇ ದೊರೆತ ಉದ್ದನೆಯ ಕೋಲಿನ ತುದಿಗೆ ಹರಿತವಾದ ಚೂರಿಯನ್ನು ಬಿಗಿದು, ಅದನ್ನು ಮೋದಿಯವರಿಗೆ ನೀಡುತ್ತಾ ಬೇರ್ ಗ್ರಿಲ್ಸ್‌ ಹೇಳುತ್ತಾರೆ, ‘ಮೋದಿಯವರೆ, ಇದೇ ಇಲ್ಲಿರುವ ಆಯುಧ. ಅಕಸ್ಮಾತ್ ಹುಲಿ ಏನಾದರೂ ಎದುರಿಗೆ ಬಂದು ಆಕ್ರಮಣ ಮಾಡಿದರೆ, ಈ ಆಯುಧದಿಂದ ಅದನ್ನು ಹೀಗೆ ಇರಿಯಬೇಕು’. ಅದಕ್ಕೆ ಮೋದಿಯವರ ಉತ್ತರ ಮಾರ್ಮಿಕ!

‘ನನ್ನ ಸಂಸ್ಕಾರವೆಂದರೆ, ಕೊಲ್ಲುವ ಸಂಸ್ಕಾರವಲ್ಲ. ಆದ್ದರಿಂದ ಈ ಆಯುಧ ನನಗೆ ಅವಶ್ಯಕತೆಯಿಲ್ಲ. ಆದರೆ, ಇದನ್ನು ನಿಮಗೋಸ್ಕರ (ನಿಮ್ಮ ರಕ್ಷಣೆಗೋಸ್ಕರ) ನನ್ನ ಬಳಿ ಇಟ್ಟುಕೊಳ್ಳುತ್ತೇನೆ!’ ಆ ಒಂದು ದಿನ ಆಳೆತ್ತರದ ಹುಲ್ಲಿನ ನಡುವೆ, ದಾರಿ ಇಲ್ಲದ ಕಡೆ ದಾರಿ ಮಾಡಿಕೊಂಡು, ಬೆಳೆದಿದ್ದ ಪೊದೆಯನ್ನು ಅತ್ತಿತ್ತ ಸರಿಸುತ್ತಾ ಮೋದಿಯವರು ನಡೆದ ಪರಿ ಜನರನ್ನು ವಿಸ್ಮಯಗೊಳಿಸಿತು. ನಿಜ, ಆ ಒಂದು ದೃಶ್ಯವನ್ನು ಛಾಯಾಚಿತ್ರೀಕರಿಸಲು ಅಲ್ಲಿ ಒಂದಿಬ್ಬರು ಛಾಯಾಗ್ರಹಕರು ಇದ್ದರು,

ಮೋದಿಯವರ ರಕ್ಷಣೆಗಾಗಿ ದೂರದಲ್ಲಿ ಭದ್ರತಾ ಸಿಬ್ಬಂದಿಯೂ ಇದ್ದಿರಬಹುದು. ಆದರೂ, ಸಾಹಸಿ ಬೇರ್ ಗ್ರಿಲ್ಸ್ನ  ಮಾರ್ಗದರ್ಶನದಲ್ಲಿ, ಆ ವಿಶ್ವವಿಖ್ಯಾತ ಸಾಹಸಿಗೆ ಸರಿಸಮನಾಗಿ, ದಟ್ಟ ಕಾಡಿನಲ್ಲಿ ಮೋದಿ ಅಂದು ನಡೆದದ್ದಂತೂ ನಿಜ, ಪುಟಾಣಿ ಹರಿಗೋಲಿನಲ್ಲಿ ಕುಳಿತು ನದಿಯನ್ನು ದಾಟಿದ್ದೂ ನಿಜ, ಆ ಮೂಲಕ ಹೊಸ ದಾಖಲೆ ಬರೆದದ್ದೂ ನಿಜ.

ಹರಿಗೋಲಿನ ಸಾಹಸ ಪಯಣ: ಆನೆ, ಹುಲಿ ಮೊದಲಾದ ಪ್ರಾಣಿಗಳು ಓಡಾಡುವ ಜಾಗದಲ್ಲಿ ನಡೆದ ಮೋದಿಯವರು,
ನದಿಯೊಂದರ ತಟಕ್ಕೆ ಬಂದು, ಹರಿಗೋಲಿನಲ್ಲಿ ಕುಳಿತುಕೊಳ್ಳುತ್ತಾರೆ. ಬಹುಷಃ ಯಾವುದೇ ದೇಶದ ಪ್ರಧಾನಿಯೊಬ್ಬರು ಅಲ್ಲಿಯ
ತನಕ ಅಷ್ಟು ಸರಳ ಹರಿಗೋಲಿನಲ್ಲಿ ಕುಳಿತಿರಲಿಲ್ಲ! ಕಾಡಿನ ಗಿಡಗಳಿಂದ ಮಾಡಿದ ಆ ಹರಿಗೋಲಿನ ಒಂದೇ ಲಕ್ಷುರಿ ಎಂದರೆ,
ನೀರು ಒಳಕ್ಕೆೆ ಬಾರದಂತೆ ಪ್ಲಾಸ್ಟಿಕ್ ಷೀಟನ್ನು ಸುತ್ತಲಾಗಿತ್ತು!

ಸಾಕಷ್ಟು ವಿಶಾಲವಾಗಿದ್ದ ಅಲ್ಲಿನ ನದಿಯಲ್ಲಿ ಆ ಪುಟ್ಟ ಹರಿಗೋಲಿನಲ್ಲಿ ಕುಳಿತ ಮೋದಿಯವರನ್ನು, ಬೇರ್ ಗ್ರಿಲ್ಸ್ ಜಾಗ್ರತೆ ಯಾಗಿ, ನದಿ ಮಧ್ಯಕ್ಕೆ ಕರೆದೊಯ್ಯುತ್ತಾನೆ. ಈ ವಿಶೇಷ ಸಾಹಸ ಯಾತ್ರೆಯ ಸನ್ನಿವೇಶದಲ್ಲಿ ಒಮ್ಮೆಗೇ ಅಲ್ಲಿ ಮಳೆ ಬರುತ್ತದೆ. ಭಾರತದ ಪ್ರಧಾನಮಂತ್ರಿಯೊಬ್ಬರು ನಡೆಸುತ್ತಿದ್ದ ಆ ಒಂದು ಸನ್ನಿವೇಶಕ್ಕೆ ಅಂದು ಸುರಿದ ಹನಿ ಮಳೆಯು, ಆ ಸಾಹಸಕ್ಕೆ ಅಪ್ಪಟ ಕಾಡಿನ ಕಳೆಯನ್ನು ಕಟ್ಟಿಕೊಟ್ಟಿತು!

ಹರಿಗೋಲಿನಲ್ಲಿ ಕುಳಿತು, ಹನಿಮಳೆಯಲ್ಲಿ ನೆನೆಯುತ್ತಲೇ ನದಿಯನ್ನು ದಾಟಿದ ಮೋದಿಯವರಿಗೆ, ಪರಿಸರದ ಸ್ವಚ್ಛತೆಯ
ಕುರಿತು ಬೇರ್ ಗ್ರಿಲ್ಸ್ ಪ್ರಶ್ನೆ ಕೇಳುತ್ತಾನೆ. ನಮ್ಮ ದೇಶದ ಜನರು ತಾವೇ ಅರಿತುಕೊಂಡು ಪರಿಸರವನ್ನು ಸ್ವಚ್ಛವಾಗಿಡಬೇಕು, ಆ
ಕುರಿತು ಕೆಲಸ ನಡೆಯುತ್ತಿದೆ ಎಂದು ಮೋದಿ ಉತ್ತರಿಸುತ್ತಾರೆ. ಆ ನದಿ ದಡದಲ್ಲಿರುವ ದುಂಡು ಕಲ್ಲುಗಳ ಮೇಲೆ, ಹನಿ ಮಳೆ ಯಲ್ಲೇ ಆ ರೀತಿ ಉತ್ತರ ನೀಡುತ್ತಿರುವ ಮೋದಿಯವರ ಮಾತುಗಳು, ಅವರ ಸರಳತೆಗೆ, ಆ ಸರಳತೆಯಲ್ಲೂ ಉನ್ನತ ಆಶಯ ಗಳನ್ನು ಇಟ್ಟುಕೊಂಡ ದೂರದರ್ಶಿತ್ವಕ್ಕೆ ಪ್ರತೀಕ ಎನಿಸುತ್ತವೆ. ಪ್ರಧಾನಿಯವರ ಪ್ರಕೃತಿ ಪ್ರೇಮವು ನಮ್ಮ ದೇಶದ ಎಲ್ಲರಿಗೂ ಸ್ಫೂರ್ತಿ ಎನಿಸಬೇಕು, ಎಲ್ಲರಲ್ಲೂ ಪರಿಸರ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಬೇಕು. ಇದೇ ಮೋದಿಯವರ ಆಶಯವಲ್ಲವೆ!

ಛಾಯಾಚಿತ್ರಗ್ರಾಹಕರಾಗಿ
ನರೇಂದ್ರ ಮೋದಿಯವರು ಕೆಲವೊಮ್ಮೆ ವಿವಿಧ ಸಂದರ್ಭಗಳಲ್ಲಿ ಛಾಯಾಚಿತ್ರ ತೆಗೆದದ್ದುಂಟು. ವಿದೇಶ ಪ್ರವಾಸಕ್ಕೆ  ಹೋಗಿ ದ್ದಾಗ, ತಮ್ಮ ಜತೆಯಲ್ಲಿ ಬಂದ ಛಾಯಾಚಿತ್ರ ಗ್ರಾಹಕರ ಕ್ಯಾಮೆರಾವನ್ನು ಪಡೆದು, ಕೆಲವು ಚಿತ್ರ ತೆಗೆಯುವುದು ಅವರ  ಹವ್ಯಾಸ.

2016ರಲ್ಲಿ ಒಂದು ದಿನ ಮೋದಿಯವರು ಛತ್ತೀಸ್ ಗಡ್‌ದಲ್ಲಿದ್ದರು. ಅಲ್ಲಿನ ಹೊಸ ರಾಜಧಾನಿ ನಯಾ ರಾಯ್‌ಪುರದಲ್ಲಿ ಜಂಗಲ್ ಸಫಾರಿ ಪಾರ್ಕ್‌ನ ಉದ್ಘಾಟನೆಯ ಸಂದರ್ಭ. ಆ ಸಫಾರಿಯ ಭಾಗವಾಗಿದ್ದ ಹುಲಿಯೊಂದರ ಹತ್ತಿರ ಸಾಗಿ, ಮೋದಿಯವರು ಆ ಹುಲಿಯ ಫೋಟೊ ತೆಗೆಯುತ್ತಿದ್ದ ದೃಶ್ಯವನ್ನು ಕಂಡು ಅಂದು ಆ ಉದ್ಘಾಟನಾ ಸಮಾರಂಭಕ್ಕೆ ಬಂದವರೆಲ್ಲರೂ ಬೆರಗಾದರು. ಜತೆಗೆ, ಆ ಫೋಟೊವನ್ನು ಟ್ವಿಟರ್‌ನಲ್ಲಿ ಕಂಡು ಮೋದಿಯ ಅಭಿಮಾನಿಗಳು ಸಂತಸಪಟ್ಟರು.

‘ಪಂಜರದ ಹುಲಿ’ಯ ಫೋಟೊವನ್ನು ತೆಗೆಯುತ್ತಿದ್ದಾರೆ ಎಂದು ಮೋದಿಯವರನ್ನು ಟ್ವಿಟರ್‌ನಲ್ಲಿ ಕಿಚಾಯಿಸಿದವರೂ ಇದ್ದರು. ಅದಕ್ಕೆ ಉತ್ತರವಾಗಿ, ನಮ್ಮ ದೇಶದ ಮೊದಲಿನ ಪ್ರಧಾನಿಯವರು ಸರ್ಕಸ್ ಹುಲಿಯೊಡನೆ ತೆಗೆಸಿಕೊಂಡ ಹಳೆಯ ಫೋಟೊ ವನ್ನು ಅಪ್‌ಲೋಡ್ ಮಾಡಿ, ಈಗಿನ ಪ್ರಧಾನಿಯವರು ಕಾಡಿನ ಹುಲಿಯ ಫೋಟೊ ತೆಗೆಯುತ್ತಿದ್ದಾರೆ ನೋಡಿ ಎಂದು ಹೆಮ್ಮೆ ಯಿಂದ ಕಮೆಂಟ್ ಮಾಡಿದ ಅಭಿಮಾನಿಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದರು.

ಮೋದಿಯವರ ಪರಿಸರ ಕಾಳಜಿ
ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಗುಜರಾತ್ ರಾಜ್ಯದಲ್ಲಿ ‘ಹವಾಮಾನ ಬದಲಾವಣೆ ಇಲಾಖೆ’ (ಕ್ಲೈಮೇಟ್ ಚೇಂಜ್ ಡಿಪಾರ್ಟ್‌ಮೆಂಟ್) ಇದೆ! ಇದನ್ನು ಆರಂಭಿಸಿದವರು ನರೇಂದ್ರ ಮೋದಿ, ಅವರು ಆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಈ
ರೀತಿಯ ಒಂದು ಇಲಾಖೆಯು ನಮ್ಮ ದೇಶದಲ್ಲೇ ಮೊದಲ ಬಾರಿಗೆ ಗುಜರಾತ್ ರಾಜ್ಯದಲ್ಲಿ ಕಾರ್ಯಾರಂಭ ಮಾಡಿತು. ಜಗತ್ತಿನ ವಿವಿಧ ದೇಶಗಳು ‘ಹವಾಮಾನ ಬದಲಾವಣೆ’ಯ ಕುರಿತು ಮಾತನಾಡುತ್ತಿದ್ದರೆ, ಮೋದಿಯವರು ‘ಹವಾಮಾನ ನ್ಯಾಯ’ದ (ಕ್ಲೈಮೇಟ್ ಜಸ್ಟಿಸ್) ಕುರಿತು ಸಾಕಷ್ಟು ಚಿಂತನೆ ನಡೆಸಿದ್ದಾಾರೆ. ನಮ್ಮ ಇಂದಿನ ಜಗತ್ತು ಮನುಷ್ಯನ ಆಟಾಟೋಪದಿಂದಾಗಿ ‘ಹವಾಮಾನ ಬದಲಾವಣೆ’ ಎಂಬ ವ್ಯತಿರಿಕ್ತ ಸ್ಥಿತಿಯನ್ನು ತಲುಪಿರುವ ಈ ಸಂದರ್ಭದಲ್ಲಿ, ಈ ದುಸ್ಥಿತಿಯ ವಿರುದ್ಧ ಹೋರಾಡಲು ಮಾನವೀಯ ಮೌಲ್ಯ ಪದ್ಧತಿಯನ್ನು ಬಳಸಬೇಕು ಎಂಬುದು ಮೋದಿಯವರು ಆಶಯ ಎನಿಸಿದೆ. ಕಳೆದ ವರ್ಷ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಹಸ ನಡಿಗೆ ಎನಿಸಿದ ‘ಮ್ಯಾನ್ ವರ್ಸಸ್ ವೈಲ್ಡ್‌’ ಕಾರ್ಯಕ್ರಮದಲ್ಲೂ, ನಮ್ಮ ದೇಶವಾಸಿಗಳು ಪರಿಸರದೊಂದಿಗೆ ಸಹಬಾಳ್ವೆ ನಡೆಸುವ ಮನೋಭಾವವುಳ್ಳವರು ಎಂದೇ ಮೋದಿಯವರು ಹೇಳಿದ್ದಾರೆ.

ಮೋದಿ ನಿವಾಸದ ನವಿಲುಗಳು
ಮೋದಿಯವರ ಪ್ರಾಣಿ ಪ್ರೀತಿ ಇಂದು ಜಗದ್ವಿಖ್ಯಾತವಾಗಿದೆ. ನವದೆಹಲಿಯ ಪ್ರಧಾನಿ ನಿವಾಸದಲ್ಲಿರುವ ಉದ್ಯಾನವನದಲ್ಲಿನ
ನವಿಲುಗಳಿಗೆ ಕಾಳು ತಿನ್ನಿಸುತ್ತಿದ್ದ ಮೋದಿಯವರ ಚಿತ್ರಗಳು, ವಿಡಿಯೊಗಳು ಕಳೆದ ತಿಂಗಳು ಅಂತರ್ಜಾಲದಲ್ಲಿ ಹರಿದಾಡಿ
ದವು. ಪ್ರತಿದಿನ ತಪ್ಪದೇ ತಮ್ಮ ನಿವಾಸದ ಆವರಣದಲ್ಲಿರುವ ಉದ್ಯಾನವನದಲ್ಲಿ ಯೋಗಾಭ್ಯಾಸ, ಸರಳ ವ್ಯಾಯಾಮ
ಮಾಡುವ ಮೋದಿಯವರು, ಅಲ್ಲಿನ ನವಿಲುಗಳನ್ನು ಮತ್ತು ಇತರ ಜೀವಿಗಳನ್ನು ಸಾಕಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿ
ದ್ದಾರೆ. ಆ ಉದ್ಯಾನವನದ ನವಿಲುಗಳು ಇವರೊಂದಿಗೆ ಎಷ್ಟು ಹೊಂದಿಕೊಂಡಿದ್ದಾವೆಂದರೆ, ಮೋದಿಯವರು ಕೈಯಿಂದ ಕಾಳು
ನೀಡಿದಾಗ ಹತ್ತಿರ ಬಂದು ತಿನ್ನುತ್ತವೆ! ನವಿಲೊಂದು ತನ್ನೆಲ್ಲಾ ಗರಿಗಳನ್ನು ಬಿಚ್ಚಿ, ನರ್ತನ ಮಾಡುತ್ತಿರುವಾಗ, ಪ್ರತಿದಿನದಂತೆ
ವಾಕಿಂಗ್ ಬರುವ ಮೋದಿಯವರನ್ನು ಕಂಡು, ಬೆದರದೇ ತನ್ನ ನೃತ್ಯವನ್ನು ಮುಂದುವರಿಸುತ್ತದೆ. ನಿಜ, ಈ ವಿಡಿಯೊಗಳನ್ನು
ಸಾಕಷ್ಟು ಮುತುವರ್ಜಿ ವಹಿಸಿ, ವೃತ್ತಿನಿರತರು ಚಿತ್ರೀಕರಿಸಿ, ಎಡಿಟ್ ಮಾಡಿದ್ದಾರೆ. ಹಾಗಿದ್ದರೂ, ಆ ನವಿಲುಗಳಿಗೆ ತಾವೇ ಕೈಯಾರೆ ಕಾಳು ತಿನ್ನಿಸುತ್ತಾ ಅವುಗಳನ್ನು ವಿಶ್ವಾಸದಿಂದ ಮೋದಿಯವರು ನೋಡಿ ಕೊಳ್ಳುವ, ಆ ನವಿಲುಗಳಿಗೆ ಪ್ರೀತಿ ತೋರುವ ಪರಿಯನ್ನು ಆ ವಿಡಿಯೊಗಳು ಬಿಂಬಿಸುವ ರೀತಿ ಮಾತ್ರ ಅದ್ಭುತ!

ತಂತ್ರಜ್ಞಾನದ ಉಪಯೋಗ
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿ ಸುತ್ತಾಡುವಾಗ, ಅವರ ಮಾರ್ಗದರ್ಶಿ ಬೇರ್ ಗ್ರಿಲ್ಸ್‌ ಜತೆ ಮೋದಿಯವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಂಡ ಬೇರ್ ಗ್ರಿಲ್ಸ್‌ ತಕ್ಷಣ ಇಂಗ್ಲಿಷ್‌ನಲ್ಲಿ ಉತ್ತರ ನೀಡುತ್ತಿದ್ದರು.
ಮೋದಿಯವರು ಹಿಂದಿಯಲ್ಲಿ ಮಾತನಾಡುವುದನ್ನು ಆ ಬ್ರಿಟಿಷ್ ವ್ಯಕ್ತಿ ಅರ್ಥಮಾಡಿಕೊಂಡಿದ್ದಾರೂ ಹೇಗೆ? ಆತನಿಗೆ ಹಿಂದೆ ಬರುತ್ತಿತ್ತೆೆ? ಹಾಗೇನಿಲ್ಲ. ಈ ಸರಸ ಸಂಭಾಷಣೆಯ ವಿವರವನ್ನು ಮೋದಿಯವರು ವಿವರವಾಗಿ ಮನ್‌ಕಿ ಬಾತ್ ಕಾರ್ಯಕ್ರಮ ದಲ್ಲಿ ಹೇಳಿಕೊಂಡಿದ್ದಾರೆ. ‘ನಾನು ಬೇರ್ ಗ್ರಿಲ್ಸ್‌ ಜತೆ ಮಾತನಾಡುತ್ತಿದ್ದಾಗ, ತಂತ್ರಜ್ಞಾನವನ್ನು ಬಹಳವಾಗಿ ಉಪಯೋಗಿಸಿ ಕೊಂಡಿದ್ದೆೆ.

ನಾನು ಹಿಂದಿಯಲ್ಲಿ ಮಾತನಾಡಿದ ತಕ್ಷಣ, ಅವರ ಕಿವಿಯಲ್ಲಿದ್ದ ಉಪಕರಣವು ನನ್ನ ಮಾತುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಅವರಿಗೆ ಕೇಳಿಸುತ್ತಿತ್ತು. ಆದ್ದರಿಂದ, ನಾನು ಹಿಂದಿಯಲ್ಲಿ ಮಾತನಾಡಿದ್ದೆಲ್ಲವನ್ನೂ ಆ ಬ್ರಿಟಿಷ್ ವ್ಯಕ್ತಿ ಇಂಗ್ಲಿಷ್‌ನಲ್ಲಿ ಕೇಳಿಸಿ ಕೊಂಡು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಇದು ನಿಜವಾಗಿಯೂ ತಂತ್ರಜ್ಞಾನದ ವಿಸ್ಮಯವೇ ಸರಿ’ ಎಂದು ಮೋದಿ ಹೇಳಿದರು.

***

ನನಗೆ ಹದಿನೇಳು ಹದಿನೆಂಟು ವರ್ಷವಾದಾಗ ನಾನು ಮನೆ ಬಿಟ್ಟು ಹೊರಟೆ. ಮುಂದೇನು ಮಾಡುವುದು ಎಂದು ಯೋಚಿಸು ತ್ತಿದ್ದೆ. ನನಗೆ ಪ್ರಕೃತಿ ಎಂದರೆ ತುಂಬಾ ಇಷ್ಟ. ಹಿಮಾಲಯಕ್ಕೆ ಹೋದೆ. ಹಿಮಾಲಯದಲ್ಲಿ ಜನಸಾಮಾನ್ಯರ ಭೇಟಿಯಾಗುತ್ತಿತ್ತು, ಅವರ ಜತೆಯಲ್ಲೇ ವಾಸ ಮಾಡುತ್ತಿದ್ದೆೆ. ಅದೊಂದು ವಿಶೇಷ ಅನುಭವ! ಈ ಕಾಡನ್ನು ಅಪಾಯಕಾರಿ ಎಂದು ನಾವು ತಿಳಿಯ ಬಾರದು. ನಾವು ಪ್ರಕೃತಿಯೊಂದಿಗೆ ಯುದ್ಧಕ್ಕೆ ಹೊರಟರೆ, ಎಲ್ಲವೂ ಅಪಾಯಕಾರಿ ಎನಿಸುತ್ತದೆ. ಮನುಷ್ಯನೂ ಅಪಾಯಕಾರಿ ಎನಿಸುತ್ತಾನೆ.
– ನರೇಂದ್ರ ಮೋದಿ ಪ್ರಧಾನಿ