Saturday, 23rd November 2024

ಹಿಂದುಸ್ತಾನ ಹಿಂದಿದೆಯಂತೆ; ಹೊಡೀರಿ ಹಲಗಿ !

ವಿದೇಶವಾಸಿ

dhyapaa@gmail.com

ವಿಶ್ವದಲ್ಲಿ ಅತ್ಯಂತ ಸಂತೋಷವಾಗಿರುವ ನೂರ ನಲವತ್ತಾರು ದೇಶಗಳ ಪಟ್ಟಿಯಲ್ಲಿ ಹಿಂದುಸ್ತಾನ ನೂರ ಮೂವತ್ತಾರನೆಯ ಸ್ಥಾನದಲ್ಲಿದೆ. ಕಳೆದ ವರ್ಷ ನಮ್ಮ ದೇಶ ನೂರ ಇಪ್ಪತ್ತಾರನೆಯ ಸ್ಥಾನದಲ್ಲಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಭಾರತ ಹತ್ತು ಸ್ಥಾನ ಕೆಳಗೆ ಕುಸಿದಿದೆ. ಈ ಪಟ್ಟಿಯ ಕೊನೆಯ ಸ್ಥಾನ ದಲ್ಲಿರುವ ಅಫ್ಘಾನಿಸ್ತಾನಕ್ಕಿಂತ ನಾವು ಹತ್ತು ಸ್ಥಾನ ಮೇಲಿದ್ದೇವೆ. ಹೊಡೀರಿ ಹಲಗಿ!

ಕಳೆದ ವರ್ಷ ಆರ್ಥಿಕತೆ ಕುಸಿದು, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್ಎಫ್) ಯಿಂದ ನಾಲ್ಕೂವರೆ ಬಿಲಿಯನ್ ಡಾಲರ್ ಸಹಾಯ ಪಡೆದು ಬದುಕಿಕೊಂಡ ನಮ್ಮ ದೇಶದ ಬಲಕ್ಕಿರುವ ಬಾಂಗ್ಲಾದೇಶ ಈ ಪಟ್ಟಿಯಲ್ಲಿ ತೊಂಬತ್ತೊಂಬತ್ತನೆಯ ಸ್ಥಾನದಲ್ಲಿದೆ. ಕಳೆದ ವರ್ಷವಿಡೀ ಆರ್ಥಿಕತೆ ಕುಸಿದು, ರಾಜಕೀಯ ದೊಂಬರಾಟಕ್ಕೆ ಸಾಕ್ಷಿಯಾದ ಶ್ರೀಲಂಕಾ ನಮಗಿಂತ ಹತ್ತು ಮನೆ ಮೇಲೆ ಇದೆ. ಹಿಜಾಬ್ ವಿಷಯವದಲ್ಲಿ ಮಹಿಳೆಯರು ಪ್ರತಿನಿತ್ಯ ಸರಕಾರ ದೊಂದಿಗೆ ಘರ್ಷಣೆ ನಡೆಸುತ್ತಿರುವ ಇರಾನ್ ದೇಶ ಭಾರತಕ್ಕಿಂತ ಇಪ್ಪತ್ತು ಅಂಕ ಮುಂದಿದೆ.

ಸರಕಾರದ ವಿರುದ್ಧ ಮಾತನಾಡಲು ಅವಕಾಶವಿರದ, ಕೋವಿಡ್ ಸಮಯದಲ್ಲಿ ಸಾಕಷ್ಟು ಅಲ- ಕಲಕ್ಕೊಳಗಾದ ಚೀನಾ ಎಂಬತ್ತೆರಡನೆಯ ಸ್ಥಾನದಲ್ಲಿದೆ. ತುಮುಲಕ್ಕೊಳಗಾದ ಲಿಬಿಯಾ, ಇಥಿಯೋಪಿಯಾ, ಇರಾಕ್ ಇತ್ಯಾದಿಗಳೂ ಭಾರತ ಕ್ಕಿಂತ ಮುಂದಿವೆ. ಹೋಗಲಿ ಬಿಡಿ, ಸಿಯೇರಾ ಲಿಯೋನಿ (ಸನ್ನಿ ಲಿಯೋನಿ ಅಲ್ಲ!) ಎಂಬ ದೇಶದ ಹೆಸರು ಎಷ್ಟು ಜನ ಕೇಳಿದ್ದೀರಿ? ಆ ದೇಶವೂ ಭಾರತಕ್ಕಿಂತ ಮುಂದಿದೆ ಎಂದರೆ, ಹೊಡೀರಿ ಹಲಗಿ!

ಕಳೆದ ಒಂದು ವರ್ಷದಿಂದ ರಷ್ಯಾದೊಂದಿಗೆ ಯುದ್ಧದ ಜಟಾಪಟಿಗೆ ಇಳಿದು, ಪ್ರತಿನಿತ್ಯ ಬಾಂಬ್ ತಿನ್ನುತ್ತಿರುವ ಯುಕ್ರೇನ್ ಯಾರಿಗೆ ಗೊತ್ತಿಲ್ಲ ಹೇಳಿ? ಆ ದೇಶವೂ ಭಾರತಕ್ಕಿಂತ ಇಪ್ಪತ್ತೈದು ಸ್ಥಾನ ಮೇಲಿದೆ. ಬಹುಷಃ ಮೊದಲೆಲ್ಲ ಹಾಸ್ಯ ಮಾಡಿ ಕೊಂಡು ಜನರನ್ನು ನಗಿಸುತ್ತಿದ್ದ, ಜೀವನ ಸಾಗಿಸುತ್ತಿದ್ದ ಈಗಿನ ಅಧ್ಯಕ್ಷ ವ್ಲಾದಿಮಿರ್ ಝೆಲೆಂಸ್ಕಿ ಯುದ್ಧದ ಸಮಯದಲ್ಲೂ ಜೋಕ್ ಹೇಳಿ ಜನರನ್ನು ನಗಿಸುತ್ತಿರಬೇಕು. ಜನರನ್ನು ನಗಿಸಿ ಸಂತೋಷಪಡಿಸುವುದೇ ಆದರೆ, ನಮ್ಮಲ್ಲಿರುವ ಪ್ರಾಣೇಶ್, ಡುಂಡಿರಾಜ, ಮಿಮಿಕ್ರಿ ದಯಾನಂದ್ ಅವರೆಲ್ಲ ಜನರನ್ನು ನಗಿಸುವಲ್ಲಿ ವಿಫಲರಾಗಿದ್ದಾರೆ.

ಅವರನ್ನು ಬಿಡಿ, ಕಪಿಲ್ ಶರ್ಮಾನಿಂದ ಹಿಡಿದು ನಮ್ಮ ‘ರಾ’ಜಕೀಯದ ಮಂದಿ(ದೆ) ಯವರೆಗೆ ಎಲ್ಲರೂ ಭಾರತೀಯರನ್ನು ರಂಜಿಸುವಲ್ಲಿ ಸೋತಿದ್ದಾರೆ ಎಂದಾದರೆ, ಹೊಡೀರಿ ಹಲಗಿ! ಅಂದಹಾಗೆ, ಇದನ್ನೆಲ್ಲ ಹೇಳಲು ಆಧಾರ ಯಾವುದು ಎನ್ನುವು ದನ್ನು ತಿಳಿಯದಿದ್ದರೆ ಹೇಗೆ? ಇದೆಲ್ಲ ಸಮೀಕ್ಷೆ ಮತ್ತು ಅಂಕಿ-ಅಂಶಗಳಿಂದ ನಿರ್ಧರಿತವಾಗುವುದು. ಈ ಸಮೀಕ್ಷೆ ನಡೆಸುವಾಗ ಆ ದೇಶದ ವ್ಯಾಪಾರ ಮತ್ತು ಆರ್ಥಿಕತೆ, ಶಿಕ್ಷಣ, ಸರಕಾರ ಮತ್ತು ರಾಜಕೀಯ, ಸಂವಹನ ಮತ್ತು ತಂತ್ರಜ್ಞಾನ, ಕಾನೂನು ಮತ್ತು ವ್ಯವಸ್ಥೆ, ಆರೋಗ್ಯ, ಪರಿಸರ ಮತ್ತು ಶಕ್ತಿ, ಧರ್ಮ ಮತ್ತು ನೈತಿಕತೆ, ಆಹಾರ ಮತ್ತು ವಸತಿ, ವೈವಿಧ್ಯತೆ, ಭಾವನೆಗಳು, ಕೆಲಸ, ಸಾರಿಗೆ, ಇತ್ಯಾದಿಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರೆ ಒಳ್ಳೆಯದೇ ಅಲ್ಲವೇ? ಹಾಗಾದರೆ, ನಿಜವಾ ಗಿಯೂ ಹೊಡೀರಿ ಹಲಗಿ!

ಈಗ, ಸಮೀಕ್ಷೆಯ ಪ್ರಕಾರ ಭಾರತಕ್ಕಿಂತಲೂ ಮುಂದಿರುವ ದೇಶದೊಂದಿಗೆ ಒಮ್ಮೆ ತುಲನೆ ಮಾಡಿ ನೋಡೋಣ. ಹಾಗೆ ಯಾವುದೇ ದೇಶದ ಜತೆ ನಮ್ಮ ತುಲನೆ ಮಾಡಬಹುದಾದರೂ, ಈ ಪಟ್ಟಿಯಲ್ಲಿ ಪಾಕಿಸ್ತಾನ ಇರುವಾಗ, ಅದರಲ್ಲೂ ನಮ್ಮ ದೇಶಕ್ಕಿಂತ ಮುಂದಿರುವಾಗ ಉಳಿದ ದೇಶಗಳ ಜತೆ ತುಲನೆ ಏಕೆ? ಮೊದಲನೆಯದಾಗಿ ವ್ಯಾಪಾರ ಮತ್ತು ಆರ್ಥಿಕತೆ.
ಬಹುಷಃ ಪಾಕಿಸ್ತಾನದ ಜನರು ಸದ್ಯದ ಪರಿಸ್ಥಿತಿಯಲ್ಲಿ ಎಷ್ಟು ಸಂತೋಷದಿಂದ ಇzರೆ ಎನ್ನುವುದಕ್ಕೆ ಇದೊಂದೇ ಮಾನದಂಡ ಸಾಕು.

ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎನ್ನುವುದು ಹೊಸ ಮಾತೇನೂ ಅಲ್ಲ. ಆ ದೇಶದ ದೊಡ್ಡ ಕಾರ್ಖಾನೆಗಳು ಗೇಟಿಗೆ ಬೀಗ ಜಡಿದು ಕೆಲವು ತಿಂಗಳೇ ಕಳೆದಿವೆ. ಕೆಲವು ಮಾಲ್‌ಗಳು ಈಗಾಗಲೇ ಮಕಾಡೆ ಮಲಗಿವೆ, ಇನ್ನುಳಿದ ಕೆಲವು ರಾತ್ರಿ ಎಂಟು ಗಂಟೆಗೇ ಮಲಗಿ ನಿದ್ರಿಸುತ್ತಿವೆ. ಕೆಲವು ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಎಂಟು ಗಂಟೆಗಾದರೆ, ಇನ್ನು ಕೆಲವು ಕಡೆ ಹತ್ತು ಗಂಟೆಯ ನಂತರ ವಿದ್ಯುತ್ ದೀಪ ಬಳಸಬರದು ಎಂಬ ಫರ್ಮಾನು ಹೊರಟಿದೆ.

ಅಷ್ಟಕ್ಕೂ, ವಿದ್ಯುತ್ ಇದ್ದರೆ ತಾನೆ ಬಳಸುವುದು? ಡಾಲರ್‌ ವಿನಿಮಯ ದರ, ಪೆಟ್ರೋಲ-ಡೀಸೆಲ್ ದರ ಭಾರತದ
ದುಪ್ಪಟ್ಟಾಗಿದೆ. ವಿದೇಶಿ ಮೀಸಲು ಇನ್ನು ಒಂದು ವಾರಕ್ಕೆ ಸಾಕಾಗುವಷ್ಟಿದೆ, ಇನ್ನು ದೇಶದ ಜಿಡಿಪಿ, ಶೇರು ಮಾರುಕಟ್ಟೆ ಯನ್ನೆಲ್ಲ ಕೇಳುವುದೇ ಬೇಡ. ಆದರೂ ಸಮೀಕ್ಷೆಯ ಪ್ರಕಾರ ಪಾಕಿಸ್ತಾನದ ಜನ ಸಂತೋಷದಿಂದ ಇದ್ದಾರೆ ಎಂದರೆ,
ಹೊಡೀರಿ ಹಲಗಿ! ಎರಡನೆಯದಾಗಿ ಶಿಕ್ಷಣ.

ಪಾಕಿಸ್ತಾನದ ಸಾಕ್ಷರತೆಯ ಪ್ರಮಾಣ ಅರವತ್ತೆರಡು ಪ್ರತಿಶತ. ಭಾರತದ ಸಾಕ್ಷರತಾ ಪ್ರಮಾಣ ಎಪ್ಪತ್ತೆಂಟು ಪ್ರತಿಶತ. ಅತಿ ಹೆಚ್ಚು ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುವ ದೇಶಗಳ ಪೈಕಿ ಮೊದಲನೆಯ ಸ್ಥಾನ ನೈಜೇರಿಯಾಕ್ಕಾದರೆ ಎರಡನೆಯ ಸ್ಥಾನ ಪಾಕಿಸ್ತಾನಕ್ಕೆ. ಭಾರತ ಪ್ರತಿವರ್ಷ ಶಿಕ್ಷಣಕ್ಕೆ ಎಂದು ಮೀಸಲಿಡುವ ಮೊತ್ತ ನೂರ ಹನ್ನೆರಡು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು. ಪಾಕಿಸ್ತಾನ ಶಿಕ್ಷಣಕ್ಕೆಂದು ಮೀಸಲಿಡುವ ಹಣ? ಕ್ಷಮಿಸಿ, ಈ ಮಾಹಿತಿ ವಿಕಿಪೀಡಿಯಾದಲ್ಲೂ ಸಿಗುವುದಿಲ್ಲ. ಆದರೂ ಪಾಕಿಸ್ತಾನದ ಜನ ಭಾರತೀಯರಿಗಿಂತ ಖುಷಿಯಲ್ಲಿದ್ದಾರೆ.

ಶಿಕ್ಷಣ ಸಂತೋಷಕ್ಕೆ ಅಡ್ಡಿ ಎನ್ನುವುದಾದರೆ, ಹೊಡೀರಿ ಹಲಗಿ!

ಮೂರನೆಯದಾಗಿ ಇಂಧನ. ಒಂದು ಕಡೆ ಭಾರತದ ದೂರದ ಹಳ್ಳಿಯ ಮೂಲೆಗೂ ವಿದ್ಯುತ್ ತಲುಪುತ್ತಿದೆ. ಪಾಕಿಸ್ತಾನದಲ್ಲಿ ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆ ಎಂದರೂ ವಿದ್ಯುತ್ ಇಲ್ಲ. ವಿಶ್ವದ ಅತಿ ಹೆಚ್ಚು ರಿನೆವೇಬಲ್ ಎನರ್ಜಿ ಅಥವಾ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ದೇಶಗಳ ಪೈಕಿ ಜರ್ಮನಿ, ಚೀನಾ, ಅಮೆರಿಕದ ನಂತರ ಭಾರತ ನಾಲ್ಕನೆಯ ಸ್ಥಾನದಲ್ಲಿದೆ. ಇಂದು ಭಾರತ ತನಗೆ ಬೇಕಾಗುವ ಶೇಕಡಾ ನಲವತ್ತರಷ್ಟು ವಿದ್ಯುತ್ ಶಕ್ತಿಯನ್ನು ರಿನೆವೇಬಲ್ ಎನರ್ಜಿಯಿಂದ ಭರಿಸಿಕೊಳ್ಳುತ್ತಿದೆ.

ಪಾಕಿಸ್ತಾನ? ಅದೂ ತನಗೆ ಬೇಕಾದ ಶೇಕಡಾ ಹತ್ತರಷ್ಟನ್ನು ತಯಾರಿಸಿಕೊಳ್ಳುತ್ತಿದೆ. ನಲವತ್ತು ಹೆಚ್ಚೋ, ಹತ್ತು ಹೆಚ್ಚೋ ಎನ್ನಬೇಡಿ. ನಲವತ್ತಕ್ಕಿಂತ ಹತ್ತು ಮೊದಲು ಎನ್ನಿ, ಹೊಡೀರಿ ಹಲಗಿ! ಇನ್ನು ಸರಕಾರ ಮತ್ತು ರಾಜಕೀಯ. ಭಾರತ
ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೇ ಸ್ವಾತಂತ್ರ್ಯ ಪಡೆದ ದೇಶಗಳು. ಎರಡೂ ಒಟ್ಟೊಟ್ಟಿಗೇ ಹೊಸ ರಾಜಕೀಯ ಜೀವನ ಆರಂಭಿಸಿದ ದೇಶಗಳು.

ಆದರೆ, ಸ್ವಾತಂತ್ರ್ಯದ ನಂತರ ಭಾರತದಲ್ಲಿ ಒಂದೋ ಎರಡೋ ಬಾರಿ ಮಾತ್ರ ಸ್ಥಿರ ಸರಕಾರ ಇರಲಿಲ್ಲ. ಜವಾಹರ್ ಲಾಲ್ ನೆಹರು ಮೂರು ಸಲ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಎರಡು ಸಲ ಪೂರ್ಣ ಅವಧಿಯ ಸರಕಾರ ನಡೆಸಿದರು. ರಾಜೀವ್ ಗಾಂಧಿ, ನರಸಿಂಹ ರಾವ್, ವಾಜಪೇಯಿ ಸಮಯದಲ್ಲೂ ಸರಕಾರ ಪೂರ್ತಿ ಸಮಯ ನಡೆದಿತ್ತು. ಕಳೆದ ಒಂಬತ್ತು ವರ್ಷದಿಂದ ಮೋದಿ ಸರಕಾರವಿದ್ದು, ಅದೂ ತನ್ನ ಅವಧಿ ಮುಗಿಸುವುದರಲ್ಲಿ ಸಂದೇಹವಿಲ್ಲ.

ಆದರೆ ಪಾಕಿಸ್ತಾನ ಸ್ವತಂತ್ರವಾದಾಗಿನಿಂದ, ಕಳೆದ ಎಪ್ಪತ್ತೈದು ವರ್ಷದಲ್ಲಿ ಒಮ್ಮೆಯೂ ಯಾವುದೇ ಸರಕಾರ ತನ್ನ ಪೂರ್ಣ ಅವಧಿ ಮುಗಿಸಿಲ್ಲ. ಇನ್ನು ಪಾಕಿಸ್ತಾನದ ಪ್ರಧಾನಿಗಳ ಹತ್ಯೆ, ಕೊಲೆಯ ಸಂಚು, ಅವರ ಮೇಲಿನ ಮೊಕದ್ದಮೆ, ಇತ್ಯಾದಿಗಳನ್ನು ನೋಡಿಯೂ ಅಲ್ಲಿಯ ಜನ ಆನಂದದಿಂದ ಇದ್ದಾರೆ ಎಂದರೆ, ಹೊಡೀರಿ ಹಲಗಿ!

ಕಾನೂನಿನ ವಿಷಯಕ್ಕೆ ಬರುವುದಾದರೆ, ವಿಶ್ವದ ನೂರ ನಲವತ್ತು ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ನೂರ ಮೂವತ್ತನೆಯ ಸ್ಥಾನವಾದರೆ ಭಾರತಕ್ಕೆ ಅರವತ್ತೆಂಟನೆಯ ಸ್ಥಾನ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಶರೀಫ್, ಪರ್ವೇಜ್ ಮುಶರ-, ಸೌದಿ ಅರೇಬಿಯಾಕ್ಕೆ ಹೋಗಿ ಉಳಿದದ್ದು, ಭುಟ್ಟೋ ಪರಿವಾರ ಅಮೆರಿಕದಲ್ಲಿ ನೂರಾರು ಎಕರೆ ಜಮೀನು ಖರೀದಿಸಿದ್ದು ಯಾರಿಗೂ ತಿಳಿಯದ ವಿಚಾರವೇನಲ್ಲ.

ಅದನ್ನು ನೋಡಿಯೂ ಅಲ್ಲಿಯ ಜನ ಖುಷಿಯಿಂದ ಇದ್ದರೆ, ಹೊಡೀರಿ ಹಲಗಿ! ಧರ್ಮ ಮತ್ತು ನೈತಿಕತೆಯ ವಿಷಯ ಹೇಳದಿದ್ದರೆ
ಆದೀತೇ? ಒಂದು ಕಡೆ ಭಾರತದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಾಗುತ್ತಿದ್ದರೆ, ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರು ನಿರ್ನಾಮವಾಗುತ್ತಿದ್ದಾರೆ. ಅಳಿದುಳಿದ ಅಲ್ಪಸಂಖ್ಯಾತ ಹೆಣ್ಣು ಮಕ್ಕಳನ್ನು ಒತ್ತಾಯ ಮಾಡಿ, ಬಲಾತ್ಕಾರ ಮಾಡಿ ಮದುವೆ ಯಾಗುತ್ತಿದ್ದಾರೆ.

ಇತ್ತೀಚಿನವರೆಗೂ ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ಮುಸ್ಲಿಮೇತರ ಆಟಗಾರರಿಗೆ ಊಟದ ವ್ಯವಸ್ಥೆ ಬೇರೆ ಮಾಡಲಾಗುತ್ತಿತ್ತು. ಈಗ ತಂಡಲ್ಲಿ ಮುಸ್ಲಿಮರ ಹೊರತಾಗಿ ಬೇರೆ ಯಾರೂ ಇಲ್ಲಎನ್ನುವುದು ಬೇರೆ ವಿಚಾರ. ಎಪ್ಪತ್ತೈದು ವರ್ಷ ಹಿಂದಿನದ್ದು ಬಿಡಿ, ಕಳೆದ ಹತ್ತು ವರ್ಷದ ಎಷ್ಟು ದೇವಸ್ಥಾನಗಳು, ಚರ್ಚ್‌ಗಳು, ಗುರುದ್ವಾರಗಳು ನೆಲಸಮವಾದವು? ಇನ್ನು ಏಕತೆ, ಕರೋನಾ ಮಹಾಮಾರಿಯ ಸಂದರ್ಭದಲ್ಲಿ ಮುಸ್ಲಿಮೇತರರಿಗೆ ಪರಿಹಾರ ಸಾಮಗ್ರಿಯನ್ನು ನೀಡದ ದೇಶ ಪಾಕಿಸ್ತಾನ. ಇದರಿಂದ ಜನರು ಸಂತೋಷಪಡುತ್ತಿದ್ದಾರೆ ಎಂದಾದರೆ, ಹೊಡೀರಿ ಹಲಗಿ!

ಆರೋಗ್ಯ ಬಿಡಲಾದೀತೇ? ಆರೋಗ್ಯ ಸೂಚ್ಯಂಕದಲ್ಲಿ ಭಾರತ ನಲವತ್ತೆರಡು ಅಂಕ ಗಳಿಸಿ ನೂರ ನಲವತ್ತನೆಯ ಸ್ಥಾನ ದಲ್ಲಿದ್ದರೆ, ಪಾಕಿಸ್ತಾನ ಮೂವತ್ತೇಳು ಅಂಕ ಗಳಿಸಿ ನೂರ ಐವತ್ತೈದನೆಯ ಸ್ಥಾನದಲ್ಲಿದೆ. ಅದಿರಲಿ, ಕಳೆದ ಇಪ್ಪತ್ತೈದು ವರ್ಷದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಯಲ್ಲಿ ಭಾರತದ ಪ್ರಮಾಣ ಶೇಕಡಾ ಇಪ್ಪತ್ತರಷ್ಟಿದ್ದರೆ, ಪಾಕಿಸ್ತಾನದ ಪ್ರಮಾಣ ಶೇಕಡಾ ಹತ್ತರಷ್ಟಿದೆ. ಆರೋಗ್ಯ ಇಲ್ಲದ ಜನ ಖುಷಿಯಿಂದ ಕುಣಿಯುತ್ತಿದ್ದಾರೆ ಎಂದರೆ, ಹೊಡೀರಿ ಹಲಗಿ!

ಇಷ್ಟೆಲ್ಲ ಹೇಳಿ ಈ ಸಮೀಕ್ಷೆ ನಡೆಸುವ ಸಂಸ್ಥೆಯ ಹೆಸರು ಹೇಳದಿದ್ದರೆ ಹೇಗೆ? ನಿಮ್ಮ ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಪ್ರಯಾಣದಲ್ಲಿ, ಆಹಾರ ಪದ್ಧತಿಯಲ್ಲಿ, ಸಮಾಜದಲ್ಲಿ ನೀವು ಎಷ್ಟು ಸಂತೋಷದಿಂದ ಇದ್ದೀರಿ ಎಂದು ವಿದೇಶದ ಕುಳಿತು ಹೇಳುವ ಸಂಸ್ಥೆಯ ಹೆಸರುಖ್ಠoಠಿZಜ್ಞಿZಚ್ಝಿಛಿ ಈಛಿqಛ್ಝಿಟmಞಛ್ಞಿಠಿ ಖಟ್ಝ್ಠಠಿಜಿಟ್ಞo ಘೆಛಿಠಿಡಿಟ್ಟh (ಖಈಖಘೆ). ಕಳೆದ ಹತ್ತು ವರ್ಷದಿಂದ ಈ ಸಂಸ್ಥೆ ಇದೇ ರೀತಿಯ ಸಮೀಕ್ಷೆ ನಡೆಸುತ್ತ ಬಂದಿದೆ. ಈ ಸಂಸ್ಥೆ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಸಂಯುಕ್ತ
ರಾಷ್ಟ್ರಗಳ ಒಕ್ಕೂಟಕ್ಕೆ ನೀಡುತ್ತದೆ. ಭೂಪಟದಲ್ಲಿ ಸುಮಾರು ಇನ್ನೂರು ದೇಶಗಳಿದ್ದರೂ, ಯಾವ ಕಾರಣಕ್ಕೋ ಏನೋ, ಸುಮಾರು ಐವತ್ತಕ್ಕೂ ಹೆಚ್ಚು ದೇಶವನ್ನು ಈ ಸಂಸ್ಥೆ ಸಮೀಕ್ಷೆಯಿಂದ ಹೊರಗೆ ಇಟ್ಟಿದೆ. (ಕಳೆದ ವರ್ಷ ಇನ್ನೂ ಹತ್ತು ದೇಶ ಕಮ್ಮಿ ಇತ್ತು.) ಇರಲಿ, ಜಗತ್ತಿನ ಸುಮಾರು ಎಂಟು ನೂರು ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದು ಲಕ್ಷ ಜನರನ್ನು ಈ ಸಂಸ್ಥೆ ಪರಿಗಣಿಸುತ್ತದೆ. ಅದರಲ್ಲೂ ಅರ್ಧಕ್ಕರ್ಧ ಆಯಾ ದೇಶದಲ್ಲಿ ಪ್ರಕಟವಾದ ಪತ್ರಿಕಾ ವರದಿಯನ್ನು ಗಮನಿಸುತ್ತದೆ.

ಆದರೂ ಸುಮಾರು ಐವತ್ತು ಸಾವಿರ ಜನರನ್ನು ಸಂಪರ್ಕಿಸುವುದು ಎಂದರೆ ಹುಡುಗಾಟವೇ? ಅದೇ ಲೆಕ್ಕದಲ್ಲಿ ಹೇಳುವು ದಾದರೆ, ಪ್ರತಿ ದೇಶದಲ್ಲಿ ಈ ಸಂಸ್ಥೆ ಮುನ್ನೂರ ಐವತ್ತಕ್ಕೂ ಕಮ್ಮಿ ಜನರನ್ನು ತನ್ನ ಸರ್ವೇಗೆ ಬಳಸಿಕೊಳ್ಳುತ್ತದೆ. ಇದೇನು ಸ್ವಾಮಿ, ಕರ್ನಾಟಕದ ನ್ಯೂಸ್ ಮತ್ತು ಮನರಂಜನೆಯ ಚಾನೆಲ್‌ಗಳು ತಮ್ಮ ಟಿಆರ್‌ಪಿ ತಿಳಿಯಲು ಒಂದು ಸಾವಿರ
ಸೆಟ್ಟಾಪ್ ಬಾಕ್ಸ್ ಅಳವಡಿಸುತ್ತವೆ, ಅಂಥದ್ದರಲ್ಲಿ ಈ ಸಂಸ್ಥೆ ನೂರ ಮೂವತ್ತು ಕೋಟಿ ಜನರಲ್ಲಿ ಮುನ್ನೂರ ಐವತ್ತು ಜನರ
ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಿದರೆ ಹೇಗೆ ಎನ್ನಬೇಡಿ. ಇದು ಭಾರತದ ಸಮೀಕ್ಷೆಯಲ್ಲ. ಇದು ವಿದೇಶದ್ದು. ಹಾಗಾಗಿ
ನಂಬಿರಿ, ಹಲಗಿ ಹೊಡೀರಿ!

ವರದಿಯ ಪ್ರಕಾರ ಫಿನ್‌ಲ್ಯಾಂಡ್ ಮೊದಲನೆಯ ಸ್ಥಾನದಲ್ಲಿದೆ. ಡೆನ್ಮಾರ್ಕ್, ಸ್ವಿಡ್ಜರ್‌ಲ್ಯಾಂಡ್, ಐಸ್ಲ್ಯಾಂಡ್, ನೆದರ್ ಲ್ಯಾಂಡ್ ನಂತರದ ಸ್ಥಾನ ದಲ್ಲಿವೆ. ಅಮೆರಿಕವಾಗಲಿ, ಯುಕೆಯಾಗಲಿ ಮೊದಲ ಹತ್ತು ಸ್ಥಾನದಲ್ಲಿಲ್ಲ. ಅಲ್ಲ, ಎಲ್ಲಾ ಕುಳಿತು, ಯಾವುದೋ ದೇಶದ ಜನರ ಸಂತೋಷವನ್ನೂ ಅಳೆಯುವವರು ತಯಾರಾದರಲ್ಲ, ಅದಕ್ಕೆ ಹೇಳಿ. ನಾವು ಭಾರತೀಯರು ಪಾನಿಪುರಿ, ಭೇಲ್ಪುರಿ ತಿನ್ನುವುದರಲ್ಲಿ, ಬಣ್ಣ ಹಾಕಿ ಹೋಳಿ ಆಡುವುದರಲ್ಲಿ, ಬಾಲಿವುಡ್-ಟಾಲಿವುಡ್‌ನ ಸ್ಟಂಟ, ಫೈಟ್ ನೋಡುವುದರಲ್ಲಿ, ಅಣ್ಣಮ್ಮತಾಯಿ, ನಾಗಿನ್ ಡ್ಯಾ ಮಾಡುವುದರಲ್ಲಿ, ಅರ್ನಬ್ ಗೋಸ್ವಾಮಿ, ರಂಗಣ್ಣನ ನ್ಯೂಸ್ ನೋಡುವುದರಲ್ಲಿಯೂ
ಸಂತೋಷಪಡುತ್ತೇವೆಂದು ಅವರಿಗಾದರೂ ಹೇಗೆ ತಿಳಿಯಬೇಕು? ಮನುಷ್ಯ ಸಂತೋಷವನ್ನು ಎಲ್ಲಿ ಬೇಕಾದರೂ ಕಂಡುಕೊಳ್ಳಬಹುದು, ಹೇಗೂ ಅನುಭವಿಸಬಹುದು.

ಸಂತೋಷ ಹೀಗೇ ಸಿಗುತ್ತದೆ ಎಂದು ಹಾಳೆಯ ಮೇಲೆ ಬರೆದು ತೋರಿಸಲು ಅದೇನು ಗಣಿತದ ಸೂತ್ರವೂ ಅಲ್ಲ, ವಿಜ್ಞಾನದ
ನಿಯಮವೂ ಅಲ್ಲ. ಆದ್ದರಿಂದ ಯಾವುದೋ ವಿದೇಶಿ ಸಂಸ್ಥೆ ಭಾರತದ ಜನ ಸಂತೋಷದಿಂದ ಇಲ್ಲ ಎಂದರೆ… ಆ ಸಮೀಕ್ಷೆ ಯನ್ನೂ, ವರದಿಯನ್ನೂ ಗುಂಡಿಯಲ್ಲಿ ಹೂತು ಹಾಕಿ, ದುಃಖ, ಉದ್ವೇಗ ಬಿಟ್ಹಾಕಿ. ಹೊಡೀರಿ ಹಲಗಿ, ಜಗ್ಗಿ ಸ್ಟೆಪ್ ಹಾಕಿ!