Saturday, 23rd November 2024

ಹಳೆ ಬೇರಿನಲ್ಲಿ ಹೊಸ ಚಿಗುರು: ಆರ್ಟಿಮಿಸಿನೀನ್

ಹಿಂದಿರುಗಿ ನೋಡಿದಾಗ

ನಮ್ಮ ಜೀವ ಜಗತ್ತಿನಲ್ಲಿ ಅಲಿಖಿತ ನಿಯಮಗಳಿವೆ. ಅವುಗಳಲ್ಲಿ ಒಂದು, ಬದುಕುವುದಕ್ಕಾಗಿ ಜೀವಿಗಳ ನಡುವೆ ನಡೆಯುವ ನಿರಂತರ ಹೋರಾಟ. ಈ
ಹೋರಾಟದಲ್ಲಿ ಬಲಶಾಲಿಯಾದದ್ದು ಬದುಕುತ್ತದೆ ಹಾಗೂ ದುರ್ಬಲವಾದದ್ದು ಅಳಿಯುತ್ತದೆ. ಪ್ರಕೃತಿಯು ನಿಷ್ಪಕ್ಷಪಾತಿ.

ಬದುಕುವ ಅವಕಾಶವನ್ನು, ತನ್ನದೇ ಆದ ಆತ್ಮರಕ್ಷಣಾ ತಂತ್ರಗಳನ್ನು ರೂಪಿಸಿಕೊಳ್ಳಲು ಸಮಾನ ಅವಕಾಶವನ್ನು ಮಾಡಿಕೊಡುತ್ತದೆ. ಒಂದು ಸಲ ನಡೆಯುವ ಯುದ್ಧದಲ್ಲಿ ಒಂದು ಜೀವಿಯು ಸೋತರೆ, ಮತ್ತೊಂದು ಸಲ ನಡೆಯುವ ಯುದ್ಧದಲ್ಲಿ, ಸೋತ ಜೀವಿಯು ಗೆಲ್ಲಲು ಅಗತ್ಯವಾದ ತಂತ್ರವನ್ನು ರೂಪಿಸಿಕೊಳ್ಳಲು ಸಮಾನ ಅವಕಾಶವನ್ನು ಒದಗಿಸಿಕೊಡುತ್ತದೆ. ಒಂದು ರೀತಿಯಲ್ಲಿ ತೆಲುಗು ಪೌರಾಣಿಕ ಚಲನ ಚಿತ್ರದಂತೆ. ರಾವಣನು ವಾಯುವ್ಯಾಸ ಬಿಟ್ಟರೆ, ರಾಮ ಪರ್ವತಾಸವನ್ನು ಬಿಡುತ್ತಾನೆ. ರಾವಣನು ಆಗ್ನೇಯಾಸವನ್ನು ಬಿಟ್ಟರೆ, ರಾಮನು ವರುಣಾಸ ವನ್ನು  ಬಿಡುತ್ತಾನೆ. ಹೀಗೆ ಯುದ್ಧವು ನಿರಂತರವಾಗಿ ನಡೆಯುತ್ತದೆ.

ಮೊದಲ ಬಾರಿಗೆ ಮನುಷ್ಯನು ಪ್ಲಾಸ್ಮೋಡಿಯಂನನ್ನು ನಿಗ್ರಹಿಸಲು ಕಲಿತು, ಮಲೇರಿಯ ಕದನದಲ್ಲಿ ವಿಜಯಿ ಯಾದ. ಆದರೆ ಪ್ಲಾಸ್ಮೋಡಿಯಂ ಸುಮ್ಮನಿರಲಿಲ್ಲ. ಪ್ಲಾಸ್ಮೋಡಿಯಮ್ಮಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳ ಬೇಕಿತ್ತು. ಹಾಗಾಗಿ ಸಿಂಕೋನ ಮರದಿಂದ ಪ್ರತ್ಯೇಕಿಸಿದ ಕ್ವಿನೈನನ್ನೇ ತಿಂದು ಬದುಕುವ ಕಲೆಯನ್ನು ರೂಢಿಸಿ ಕೊಂಡಿತು. ಇದನ್ನು ಔಷಧ ನಿರೋಧಕತೆ ಅಥವಾ ಡ್ರಗ್ ರೆಸಿಸ್ಟನ್ಸ್ ಎಂದು ಕರೆಯುತ್ತೇವೆ. ಮಲೇರಿಯ ಕದನದಲ್ಲಿ ಪ್ಲಾಸ್ಮೋಡಿಯಂ ಮೇಲುಗೈಯನ್ನು ಸಾಧಿಸಿತು.

ಮನುಷ್ಯನು ಸುಮ್ಮನೇ ಕೂರಲಿಲ್ಲ. ಅವನು ಕ್ಲೋರೋಕ್ವಿನ್ ಎಂಬ ಮಾತ್ರೆಯನ್ನು ಸೃಜಿಸಿದ. ಪ್ಲಾಸ್ಮೋಡಿಯಂ ಮೇಲೆ ವಿಜಯವನ್ನು ಸಾಧಿಸಿದ. ಆದರೆ ಪ್ಲಾಸ್ಮೋಡಿಯಂ ಕಾಲಕ್ರಮೇಣ ಕ್ಲೋರೋಕ್ವಿನ್‌ನನ್ನೂ ಸಹ ನಿರ್ವೀಯಗೊಳಿಸಿತು. ಆಗ ಮನುಷ್ಯನು ಮತ್ತೊಂದು ಔಷಧವನ್ನು ರೂಪಿಸಿದ… ಮಲೇರಿಯ ಕದನವು ಹೀಗೆ ಮುಂದುವರಿಯುತ್ತಿದೆ.

ಮಲೇರಿಯ ಕದನದಲ್ಲಿ ಮನುಷ್ಯನು ಸೋತು, ಪ್ಲಾಸ್ಮೋಡಿಯಂ ಮಹಾ ವಿಜಯವನ್ನು ಸಾಧಿಸುತ್ತದೆ ಎನ್ನುವ ಸಂದರ್ಭದಲ್ಲಿ ಚೀನಾ ದೇಶದಲ್ಲಿ ಒಂದು ಹೊಸ ಔಷಧವು ನಿರ್ಮಾಣವಾಯಿತು. ಅದುವೇ ಆರ್ಟಿಮಿಸಿನಿನ್! ಈ ಹೊಸ ಔಷಧವು ಮಲೇರಿಯ ಕದನದಲ್ಲಿ ಮನುಷ್ಯನ ಗೆಲುವಿಗೆ ಪ್ರಮುಖ ಕಾರಣವಾಯಿತು. ವಿಶ್ವ ಆರೋಗ್ಯ ಸಂಸ್ಥೆಯ ಅನ್ವಯ, ವಿಶ್ವದ ೯೨ ದೇಶಗಳಲ್ಲಿರುವ ೩.೪ ಶತಕೋಟಿ (ಬಿಲಿಯನ್) ಜನರಿಗೆ (ಅಂದರೆ ಪ್ರಪಂಚದ ಸುಮಾರು ಅರ್ಧ ಜನರಿಗೆ) ಮಲೇರಿಯ ಬರುವ ಸಾಧ್ಯತೆಯಿದೆ. ಇವರಲ್ಲಿ ೧.೨ ಶತಕೋಟಿ ಜನರು ಮಲೇರಿಯಕ್ಕೆ ಬಲಿಯಾಗುವ ಸಾಧ್ಯತೆಯು ತೀವ್ರವಾಗಿದೆ.

೨೦೦೦- ೨೦೧೨ರ ನಡುವೆ, ಮನುಷ್ಯನ ನಿರಂತರ ಪ್ರಯತ್ನದಿಂದ ಮಲೇರಿಯ ಸಂಬಂಧಿತ ಹೊಸ ಪ್ರಕರಣಗಳನ್ನು ೨೫% ರಷ್ಟು ಹಾಗೂ ಸಾವು ನೋವನ್ನು ೪೨% ಕಡಿಮೆ ಮಾಡಲು ಸಾಧ್ಯವಾಗಿದೆ. ಕೆಲವು ದೇಶಗಳು ಮಲೇರಿಯ ಮುಕ್ತ ದೇಶಗಳಾಗುವ ಹಾದಿಯಲ್ಲಿವೆ. ಇದಕ್ಕೆ ಪ್ರಮುಖ ಕಾರಣ
ಆರ್ಟಿಮಿಸಿನಿನ್ ಮತ್ತು ಅದರ ಸಂಯುಕ್ತಗಳು! ಆರ್ಟಿಮಿಸಿನಿನ್ ಸಂಯುಕ್ತ ಚಿಕಿತ್ಸೆ (ಎಸಿಟಿ = ಆರ್ಟಿಮಿಸಿನಿನ್ ಕಾಂಬಿನೇಶನ್ ಥೆರಪಿ) ಅತ್ಯಂತ ಯಶಸ್ವಿಯಾಗಿದೆ.

ಅದರಲ್ಲೂ ಮಹಾ ಅಪಾಯಕಾರಿಯಾದ ಪ್ಲಾಸ್ಮೋಡಿಯಂ -ಲ್ಸಿ-ರಂ ಪ್ರಕರಣಗಳನ್ನು ಕೇವಲ ಆರ್ಟಿಮಿಸಿನಿನ್ ಸಂಯುಕ್ತಗಳನ್ನು ಬಳಸಿಯೇ ಚಿಕಿತ್ಸೆ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ.

೧೯೭೦ರ ದಶಕ: ವಿಯಟ್ನಾಮಿನಲ್ಲಿ ಮಲೇರಿಯವು ಪ್ರಳಯ ಸ್ವರೂಪವನ್ನು ತಳೆಯಿತು. ವಿಯಟ್ನಾಮ್ ಚೀನದ ನೆರವನ್ನು ಕೋರಿತು. ವಿಯಟ್ನಾ ಮಿನ ಅಹವಾಲನ್ನು ಚೀನಾದ ಅಧ್ಯಕ್ಷ ಮಾವೋ ತ್ಸೆ ತುಂಗ ನೇರವಾಗಿ ಸ್ವೀಕರಿಸಿದ. ಮಲೇರಿಯ ನಿಗ್ರಹಕ್ಕಾಗಿ ಒಂದು ಹೊಸ ಯೋಜನೆಯನ್ನು ರಹಸ್ಯವಾಗಿ, ೦೫-೨೩-೧೯೬೭ರಂದು (ಮೇ ೫) ರೂಪಿಸಿದ. ಹಾಗಾಗಿ ಈ ಯೋಜನೆಗೆ ೫೨೩ ಎಂಬ ರಹಸ್ಯ ನಾಮಧೇಯವನ್ನು ನೀಡಿದ. ಬೀಜಿಂಗಿನ ಹೋಟೆಲ್ ಒಂದರಲ್ಲಿ ಸಮಾವೇಶವನ್ನು ನಡೆಸಿ, ಯೋಜನೆಗೆ ಅಧಿಕೃತ ಚಾಲನೆಯನ್ನು ನೀಡಿದ.

ಜನವರಿ, ೧೯೬೯ ರಲ್ಲಿ ೫೨೩ ತಂಡವು ಚೀನೀ ಔಷಧ ವಿಜ್ಞಾನಗಳ ಸಂಸ್ಥೆಗೆ (ಇನ್ ಸ್ಟಿಟ್ಯೂಟ್ ಆಫ್ ಚೈನೀಸ್ ಮೆಟೀರಿಯ ಮೆಡಿಕ) ಭೇಟಿಯನ್ನು ನೀಡಿತು. ಸಂಶೋಧನೆಯಲ್ಲಿ ಪಾಲುಗೊಳ್ಳುವಂತೆ ಅಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ. ಯುಯು ತು (೧೯೩೦) ಅವರಿಗೆ ಆಹ್ವಾನವನ್ನು ನೀಡಿತು. ಚೀನೀ ಮೂಲಿಕೆಗಳಲ್ಲಿ ಮಲೇರಿಯ ನಿಗ್ರಹಕ್ಕೆ ಸೂಕ್ತವಾದ ಮೂಲಿಕೆಯನ್ನು ಹುಡುಕುವ ಕೆಲಸಕ್ಕಾಗಿ ಒಂದು ತಂಡವನ್ನು ಕಟ್ಟಿ, ಆ ತಂಡದ ನಾಯಕತ್ವ ವನ್ನು ಯುಯು ತು ಅವರಿಗೆ ನೀಡಿತು. ಯುಯು ತು ತಂಡದವರು ಸಾಂಪ್ರದಾಯಿಕ ಚೀನೀ ವೈದ್ಯಕೀಯದಲ್ಲಿ ಅಸ್ತಿತ್ವದಲ್ಲಿದ್ದ ಸುಮಾರು ೨೦೦೦ ಔಷಧಗಳನ್ನು ಪರೀಕ್ಷಿಸಿದರು. ಅವುಗಳಲ್ಲಿ ೬೪೦ ಔಷಧಗಳನ್ನು ಜ್ವರ ನಿಗ್ರಹಿಸಲು ಬಳಕೆಯಾಗುತ್ತಿದ್ದವು. ತಂಡದ ಸದಸ್ಯರು ಉಪಯುಕ್ತ ವಾಗಬಹುದೆಂದು ಅನಿಸಿದ ೧೦೦ ಔಷಧ ಸಸ್ಯಗಳ ಪಟ್ಟಿಯನ್ನು ಮಾಡಿದರು.

ಇದೇ ವೇಳೆಗೆ ಯುಯುತು ಅವರು ಒಂದು ಸರಳ ತರ್ಕವನ್ನು ಕಾರ್ಯರೂಪಕ್ಕೆ ತಂದರು. ಈ ಎಲ್ಲ ೬೪೦ ಔಷಧಗಳ ನಿರ್ಮಾಣದಲ್ಲಿ ಸರ್ವೆ ಸಾಮಾನ್ಯವಾಗಿ ಬಳಕೆಯಾಗುತ್ತಿದ್ದ ಸಸ್ಯವು ಯಾವುದೆಂದು ಹುಡುಕಿದರು. ಆಗ ಆರ್ಟಿಮೀಸಿಯ ಆನುವ ಎಂಬ ಸಸ್ಯವು ಅವರ ಕಣ್ಣಿಗೆ ಬಿದ್ದಿತು. ಅದನ್ನು ತಮ್ಮ ತಂಡದವರು ಆಯ್ದ ೧೦೦ ಔಷಧಗಳ ಪಟ್ಟಿಯ ಜೊತೆಯಲ್ಲಿ ಸೇರಿಸಿದರು. ಯುಯು ತು ತಂಡದವರು ೧೦೦ ಔಷಧಿಯ ಸಸ್ಯಗಳ ಸಾರವನ್ನು ಪ್ರತ್ಯೇಕಿಸಿದರು. ಅವನ್ನು ದಂಶಕಗಳಲ್ಲಿ (ರೋಡೆಂಟ್ಸ್) ಮಲೇರಿಯವನ್ನು ಉಂಟು ಮಾಡುತ್ತಿದ್ದ ಪ್ಲಾಸ್ಮೋಡಿಯಂ ರ್ಬೆ ಮೇಲೆ
ಪ್ರಯೋಗಿಸಿದರು.

ಹಾಗೆಯೇ ಆರ್ಟಿಮೀಸಿಯದ ಸಾರವನ್ನೂ ಪ್ರಯೋಗಿಸಿದರು. ಆರ್ಟೀಮಿಸಿಯವು ಪ್ಲಾಸ್ಮೋಡಿಯಂನನ್ನು ೬೮% ರಷ್ಟು ನಿಗ್ರಹಿಸಿತು. ಪ್ರಯೋಗವನ್ನು
ಪುನರಾವರ್ತಿಸಿದರು. ಆದರೆ ಪ್ರತಿಸಲವೂ ನಿಗ್ರಹ ಪ್ರಮಾಣವು ೧೨%-೪೦% ಆಸುಪಾಸಿನಲ್ಲಿ ಏರುಪೇರಾಗುತ್ತಿತ್ತು. ಇದಕ್ಕೆ ಕಾರಣವನ್ನು ಹುಡುಕಿದರು.
ಆರ್ಟಿಮೀಸಿಯ ಹುಟ್ಟುವ ನೆಲದ ಗುಣ, ಋತುಮಾನ ವೈಪರೀತ್ಯ, ಗಿಡದ ಬೇರೆ ಬೇರೆ ಭಾಗಗಳು ಹಾಗೂ ಸಾರವನ್ನು ಸಂಗ್ರಹಿಸುವ ವಿಧಾನಗಳಲ್ಲಿರುವ ಭಿನ್ನತೆಯೇ ಫಲಿತಾಂಶದ ಏರುಪೇರುಗಳಿಗೆ ಕಾರಣ ಎಂಬ ತೀರ್ಮಾನಕ್ಕೆ ಬಂದರು.

ಪ್ರೊ.ಯುಯು ತು, ಒಂದು ದಿನ ಪ್ರಾಚೀನ ಚೀನೀ ಗ್ರಂಥಗಳನ್ನು ತೆಗೆದು ಅವುಗಳಲ್ಲಿ ಆರ್ಟಿಮೀಸಿಯದ ಪ್ರಸ್ತಾಪವಿರುವ ಭಾಗಗಳನ್ನು ಅಧ್ಯಯನ ಮಾಡಲಾರಂಭಿಸಿದರು. ಸುಮಾರು ೧೭೦೦ ವರ್ಷಗಳ ಹಿಂದೆ ಜಿ- ಹಾಂಗ್ ಎಂಬುವವರು ಬರೆದ ಗ್ರಂಥವು ಅವರ ಗಮನವನ್ನು ಸೆಳೆಯಿತು. ಸಾಮಾನ್ಯವಾಗಿ ಪ್ರಾಚೀನ ಚೀನೀ ವೈದ್ಯಕೀಯದಲ್ಲಿ, ಯಾವುದೇ ಸಸ್ಯ/ಮೂಲಿಕೆಯನ್ನು ನೀರಿನಲ್ಲಿ ಕುದಿಸಿ ಸಾರವನ್ನು ಪಡೆಯುವ ಪದ್ಧತಿಯಿತ್ತು.
ಆದರೆ ಜಿ-ಹಾಂಗ್, ಆರ್ಟೆಮೀಸಿಯವನ್ನು ತಣ್ಣೀರಿನಲ್ಲಿ ಕಿವುಚಿ ಸಾರವನ್ನು ತೆಗೆದು, ಜ್ವರದಲ್ಲಿ ಬಳಸಬೇಕು ಎಂದು ಸೂಚಿಸಿದ್ದ. ಯುಯು ತು ಅವರಿಗೆ ಮಿಂಚು ಹೊಡೆದಂತಾಯಿತು! ಯುರೇಕ ಕ್ಷಣವು ಅವರ ಮುಂದೆ ಆಗಷ್ಟೇ ಪ್ರತ್ಯಕ್ಷವಾಗಿತ್ತು. ಆರ್ಟಿಮೀಸಿಯವು ಹೆಚ್ಚು ಉಷ್ಣತೆಯನ್ನು ತಾಳಿಕೊಳ್ಳದು. ಹೆಚ್ಚುವರಿ ಉಷ್ಣತೆಯಲ್ಲಿ ಅದರ ಜ್ವರ ನಿಗ್ರಹಕ ಘಟಕವು ನಾಶವಾಗುತ್ತಿದ್ದಿರಬೇಕು.

ಹಾಗಾಗಿ ಯರ್ರಾಬಿರ್ರಿ ಫಲಿತಾಂಶವು ಬರುತ್ತಿದೆ ಎಂಬ ಅಂಶವು ಅವರಿಗೆ ಕ್ಷಣದಲ್ಲಿಯೇ ಹೊಳೆಯಿತು. ಈ ಅಧ್ಯಯನದಲ್ಲಿ ಮತ್ತೂ ಒಂದು ಅಂಶವು ಯುಯು ತು ಅವರ ಗಮನಕ್ಕೆ ಬಂದಿತು. ಜೀ-ಹಾಂಗ್, ಆರ್ಟಿಮೀಸಿ ಯದ ಉಳಿದ ಭಾಗಗಳಿಗಿಂತ, ಎಲೆಗಳು ಹೆಚ್ಚು ಉಪಯುಕ್ತ ಎಂಬ ಅಂಶವನ್ನು ಪ್ರಸ್ತಾಪಿಸಿದ್ದ. ಆರ್ಟಿಮೀಸಿಯದ ಎಲೆಗಳಿಂದ ಮಾತ್ರ ಸಾರವನ್ನು ತೆಗೆಯಬೇಕು ಎಂಬ ನಿರ್ಧಾರಕ್ಕೆ ಬಂದರು. ಪ್ರೊ.ಯುಯು ತು ಅವರ ತಂಡವು,
ಸಾರವನ್ನು ಪ್ರತ್ಯೇಕಿಸಲು ಎಥನಾಲನ್ನು ಬಳಸಿತ್ತು.

ಯುಯು ತು ಅವರು ಎಥನಾಲಿನ ಬದಲು ಈಥರ್‌ನನ್ನು ಬಳಸಿ, ಆರ್ಟಿಮೀಸಿಯದ ಸಾರವನ್ನು ಪ್ರತ್ಯೇಕಿಸಿದರು. ಇದನ್ನು ಸ್ಯಾಂಪಲ್-೧೯೧ ಎಂದು ಕರೆದರು. ಅಕ್ಟೋಬರ್ ೪, ೧೯೭೧: ಯುಯು ತು ಅವರು ಸ್ಯಾಂಪಲ್ -೧೯೧ನ್ನು ದಂಶಕಗಳ ಮಲೇರಿಯ ಮತ್ತು ಮಂಗಗಳ ಮಲೇರಿಯದ ಮೇಲೆ ಪ್ರಯೋಗಿಸಿದರು. ಈ ಎರಡೂ ಜೀವಿಗಳಲ್ಲಿ ಮಲೇರಿಯವನ್ನು ಉಂಟು ಮಾಡುತ್ತಿದ್ದ ಪ್ಲಾಸ್ಮೋಡಿಯಂ ನೂರಕ್ಕೆ ನೂರರಷ್ಟು ನಾಶವಾಯಿತು!
ಮಾರ್ಚ್ ೮, ೧೯೭೨ : ನಾನ್ಜಿಂಗ್‌ನಲ್ಲಿ ೫೨೩ ಸದಸ್ಯರ ಸಭೆಯು ನಡೆಯಿತು. ಆ ಸಭೆಯಲ್ಲಿ ಪ್ರೊ.ಯುಯು ತು ಅವರು ತಮ್ಮ ಸಂಶೋಧನೆಯನ್ನು ಮಂಡಿಸಿದರು. ಯುಯು ತು ಅವರ ಫಲಿತಾಂಶವು ೫೨೩ ತಂಡದಲ್ಲಿ ಮಹಾ ಸಂಚಲನವನ್ನು ಉಂಟು ಮಾಡಿತು.

ಪ್ರೊ.ಯುಯು ತು  ಅವರು, ಅದೇ ವರ್ಷವೇ ಆರ್ಟಿಮೀಸಿಯ ಸಾರವನ್ನು ಮನುಷ್ಯರ ಮೇಲೆ ಪ್ರಯೋಗಿಸಿ ಅಧ್ಯಯನವನ್ನು ಸಂಪೂರ್ಣಗೊಳಿಸಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಬಂದರು. ಆಗಸ್ಟ್ ೧೯೭೨: ಪ್ರೊ.ಯುಯು ತು ತಂಡದವರು ಅಧ್ಯಯನವನ್ನು ಆರಂಭಿಸಿದರು. ಆದರೆ ಯುಯು ತು
ಅವರಿಗೆ ಈ ಹೊಸ ಔಷಧದ ಸುರಕ್ಷತೆಯ ಬಗ್ಗೆ ಸ್ವಲ್ಪ ಅನುಮಾನವಿತ್ತು. ಹಾಗಾಗಿ, ಆರ್ಟಿಮೀಸಿಯದ ಸಾರವನ್ನು ಮೊದಲು ತಮ್ಮ ಮೇಲೆ ಪ್ರಯೋಗಿಸಿ ಕೊಂಡರು. ಸಾರವನ್ನು  ಸ್ವಯಂ ಸೇವಿಸಿದರು. ಅವರಿಗೆ ಯಾವುದೇ ಅಹಿತಕರ ಪರಿಣಾಮಗಳು ಆಗಲಿಲ್ಲ. ಆ ಸಾರವು ಸಂಪೂರ್ಣವಾಗಿ ಸುರಕ್ಷಿತ ಎಂಬ ಅಂಶವು ಅವರಿಗೆ ಮನವರಿಕೆಯಾಯಿತು.

ಆನಂತರವೇ ಅವರು ಸಾರ್ವಜನಿಕ ಪ್ರಯೋಗಕ್ಕೆ ಸಿದ್ಧವಾದರು. ಹೈನನ್ ದ್ವೀಪದಲ್ಲಿ ೨೧ ಮಲೇರಿಯ ಪೀಡಿತರನ್ನು ಆಯ್ಕೆ ಮಾಡಿಕೊಂಡರು. ಅವರ ಮೇಲೆ ಪ್ರಯೋಗಿಸಿದರು. ಮಲೇರಿಯವು ೯೫%-೧೦೦%ರಷ್ಟು ಗುಣವಾಯಿತು. ಈ ಫಲಿತಾಂಶವನ್ನು ನವೆಂಬರ್ ೧೭, ೧೯೭೨ರಂದು ನಡೆದ
ಸಭೆಯಲ್ಲಿ ಮಂಡಿಸಿದರು. ಈ ಯಶಸ್ಸು ಇಡೀ ಚೀನದ ಜನತೆಯಲ್ಲಿ ರೋಮಾಂಚನವನ್ನು ಉಂಟು ಮಾಡಿತು. ಆರ್ಟಿಮೀಸಿಯದಿಂದ ಸಾರವನ್ನು ಪ್ರತ್ಯೇಕಿಸುವ ಬೃಹತ್ ಪ್ರಯೋಗಗಳು ಆರಂಭವಾದವು. ಆರ್ಟಿಮೀಸಿಯದಲ್ಲಿರುವ ಯಾವ ರಾಸಾಯನಿಕ ಘಟವು ಮಲೇರಿಯ ನಿಗ್ರಹಕ ಗುಣವನ್ನು ಹೊಂದಿದೆ, ಅದರ ರಾಸಾಯನಿಕ ಸ್ವರೂಪವೇನು, ಅದನ್ನು ಪ್ರಯೋಗಾಲಯದಲ್ಲಿ ಸಂಯೋಜಿಸಲು ಸಾಧ್ಯವೇ ಇತ್ಯಾದಿ ಅಧ್ಯಯನಗಳು ಒಮ್ಮೆಲೆ ಆರಂಭವಾದವು.

ಆರ್ಟಿಮೀಸಿಯದಲ್ಲಿರುವ ಪಟುಕಾರಕ ರಾಸಾಯನಿಕವನ್ನು ಯುಯು ತು ತಂಡದವರು ಖಿಂಗಾಸು ಎಂದು ಕರೆದರೂ ಸಹ, ಜಗತ್ತಿನಲ್ಲಿ ಅದು ಆರ್ಟಿಮಿಸಿನೀನ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಯಿತು. ಪ್ರೊ.ಯುಯು ತು ಅವರಿಗೆ ೨೦೧೫ರಲ್ಲಿ ಅಂಗಕ್ರಿಯಾ ವಿಜ್ಞಾನ ಅಥವ ವೈದ್ಯಕೀಯಕ್ಕೆ
ಮೀಸಲಾಗಿರುವ ನೊಬೆಲ್ ಪಾರಿತೋಷಕವು ಲಭಿಸಿತು. ಆರ್ಟಿಮಿಸಿನಿನ್ ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿತು. ಆರ್ಟೀಮಿಸಿನೀನ್ ಚೀನಾ ದೇಶವು ಜಾಗ ತಿಕ ಆರೋಗ್ಯಕ್ಕೆ ನೀಡಿದ ಬಹು ದೊಡ್ಡ ಕೊಡುಗೆ ಎಂದು ಜಗತ್ತು ಹೊಗಳಿತು. ಇದರ ಹಿಂದೆಯೇ ಅಪಸ್ವರಗಳು, ಭಿನ್ನಾಭಿಪ್ರಾಯಗಳು ತೇಲಿಬಂದವು.

ಆರ್ಟಿಮಿಸಿನೀನ್ ಒಂದು ತಂಡವು ನಡೆಸಿದ ಸಂಶೋಧನೆಯ ಫಲ. ಆದರೆ ನೊಬೆಲ್ ಸಮಿತಿಯು ಬಹುಮಾನವನ್ನು ಒಬ್ಬರಿಗೆ ಮಾತ್ರ ನೀಡಿತು.
ಇದು ಅನ್ಯಾಯ ಎಂಬ ಅಸಮಾಧಾನವು ಹೊಗೆಯಾಡಿತು. ಅದಕ್ಕೆ ಕೆಳಕಂಡ ವಿವರಣೆಯನ್ನು ನೀಡಲಾಯಿತು. – ೫೨೩ ತಂಡವು ಪ್ರಾಚೀನ ಚೀನೀ ವೈದ್ಯಕೀಯದಿಂದ ೧೦೦ ಸಸ್ಯ/ಮೂಲಿಕೆಗಳನ್ನು ಆಯ್ಕೆ ಮಾಡಿತ್ತು. ಅವುಗಳಲ್ಲಿ ಆರ್ಟಿಮೀಸಿಯವು ಸೇರಿರಲಿಲ್ಲ. ಅದನ್ನು ಯುಯು ತು ಅವರು ಸೇರಿಸಿದರು.

-ಆರ್ಟಿಮೀಸಿಯದ ಸಾರವು ಯರ್ರಾಬಿರ್ರಿ

ಫಲಿತಾಂಶವನ್ನು ನೀಡಿದಾಗ, ಅದನ್ನು ಎಥನಾಲ್ ಬದಲು ಈಥರ್ ಮಾಧ್ಯಮದಲ್ಲಿ ಸಾರವನ್ನು ಸಂಗ್ರಹಿಸಬೇಕು ಎಂದು ಸೂಚಿಸಿದ್ದು ಹಾಗೂ ಎಲೆಗಳನ್ನೇ ಬಳಸಬೇಕು ಎಂದು ಹೇಳಿದ್ದು ಪ್ರೊ.ಯುಯು ತು. -ಆರ್ಟಿಮೀಸಿಯ ಸಾರವನ್ನು ೨೧ ಜನರ ಮೇಲೆ (ಪ್ಲಾ ವೈವಾಕ್ಸ್ ೧೧ ರೋಗಿಗಳು, ಪ್ಲಾ -ಲ್ಸಿ-ರಂ ೯ ಹಾಗೂ ೧ ಮಿಶ್ರ ಸೋಂಕು) ಮೊದಲ ಬಾರಿಗೆ ಪ್ರಯೋಗಿಸಿ, ಅದರ ಉಪಯುಕ್ತತೆಯನ್ನು ಯುಯು ತು ಅವರೇ ತೋರಿಸಿದ್ದರು.

-ಆರ್ಟಿಮೀಸಿಯದಿಂದ, ಡೈ-ಹೈಡ್ರೋಆರ್ಟಿಮಿಸಿನಿನ್ ಎಂಬ ಘಟಕವನ್ನು ಪ್ರತ್ಯೇಕಿಸಿದರು. ಇದು ಉಳಿದ ಘಟಕಗಳಿಗಿಂತ ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿತ್ತು.

-ಆಕೆಯ ತಂಡವು ಆರ್ಟಿಮೀಸಿಯದಿಂದ ಪಟುಕಾರಕವನ್ನು ಪ್ರತ್ಯೇಕಿಸಿ, ೧೦೦ ಮಿಗ್ರಾಂ/ಕೆಜಿ ಪ್ರಮಾಣದಲ್ಲಿ ನೀಡಬೇಕು ಎಂದು ಚಿಕಿತ್ಸೆಯನ್ನು ಪ್ರಮಾಣ ಬದ್ಧಗೊಳಿಸಿತು. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಚೀನೀ ಸರ್ಕಾರವು ೧೯೮೬ ರಲ್ಲಿ ಅಧಿಕೃತವಾಗಿ ಆರ್ಟಿಮಿಸಿನೀನ್ ಔಷಧವನ್ನು
ಪ್ರೊ.ಯುಯು ತು ಕಂಡು ಹಿಡಿದರು ಎಂದು ಘೋಷಿಸಿತು.