ಅಂತರಂಗ
ಕಟ್ಟಾ ಸುಬ್ರಮಣ್ಯ ನಾಯ್ಡು
ಪ್ರಧಾನಿ ನರೇಂದ್ರ ಮೋದಿ ಅವರ ಪರಿಚಯ ನಿನ್ನೆ ಮೊನ್ನೆಯದ್ದಲ್ಲ. ಅವರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ, ಸಂಚಾಲಕರಾಗಿದ್ದಾನಿಂದ ಅವರನ್ನು ಭೇಟಿ ಮಾಡಿದ್ದೆ. ಆಗಿನಿಂದಲೂ ಅವರನ್ನು ಗಮನಿಸುತ್ತಿದ್ದೇನೆ. ಅವರ ಹಲವು ಅಂಶ ಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೆ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಒಮ್ಮೆ ನೀಡಿದ್ದ ಮಾತು ಈಗಲೂ ನೆನಪಿದೆ.
ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ, ಕರ್ನಾಟಕಕ್ಕೆ ನಾಲೈದು ಬಾರಿ ಭೇಟಿ ನೀಡಿದ್ದರು. ಒಮ್ಮೆ ಸುತ್ತೂರು ಮಠ ದಲ್ಲಿ ಆಯೋಜಿಸಿದ್ದ ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದ ವೇಳೆ ಅವರು ಕೆಲವು ಪಾಠವನ್ನು ನನಗೆ ಹೇಳಿದ್ದರು. ದಶಕದ ಬಳಿಕವೂ ಈ ಮಾತುಗಳು ನನಗೆ ನೆನಪಿದೆ. ಅವರು ಅಂದು ಹೇಳಿದ್ದ ಆ ಮಾತು, ರಾಜಕಾರಣಿಯಾದವರು ಸಾರ್ವಜನಿಕ ಜೀವನದಲ್ಲಿ ಯಾವ ರೀತಿ ಬದುಕಬೇಕು ಎನ್ನುವುದನ್ನು ಹೇಳಿದ್ದರು. ಕೇವಲ ಹೇಳುವುದಲ್ಲ, ಅವರು ಈಗಲೂ ಈ ಎಲ್ಲವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಮೋದಿ ಅವರು ನೀಡಿದ ಸಲಹೆಗಳು ಎಂದರೆ, ಕಾರಿನಲ್ಲಿ ಚಾಲಕರಿದ್ದಾಗ ಅಥವಾ ಸಹಾಯಕರು ಇರುವಾಗ ರಾಜಕೀಯದ ಗುಪ್ತ ಮಾತುಗಳನ್ನು ಆಡಬಾರದು. ಇದರೊಂದಿಗೆ ಸಾಮಾನ್ಯ ವಿಷಯಗಳನ್ನು ಬಿಟ್ಟರೆ, ಇನ್ಯಾವುದೇ ವಿಚಾರವನ್ನು ಫೋನ್ನಲ್ಲಿ ಮಾತನಾಡಬಾರದು. ಅಧಿಕಾರಿಗಳಾಗಲಿ, ಪಕ್ಷದ ನಾಯಕರಿಗೆ ಅಥವಾ ಸಚಿವರಿಗೆ ಯಾವುದಾದರೂ ಕಾರ್ಯವನ್ನು ವಹಿಸು ವಾಗ ಅವರನ್ನು ನೇರವಾಗಿ ಭೇಟಿಯಾಗಿ ಹೇಳಬೇಕು ಎಂದಿದ್ದರು. ಅವರೀಗಲೂ ಇದೇ ರೀತಿ ನಡೆಯುತ್ತಿದ್ದಾರೆ. ಮೋದಿ ಅವರು ಫೋನ್ನಲ್ಲಿ ಆರೋಗ್ಯ ವಿಚಾರಿಸಿಕೊಳ್ಳಲು ಅಥವಾ ಸಣ್ಣಪುಟ್ಟ ವಿಷಯಗಳನ್ನು ಮಾತನಾಡುತ್ತಾರೆ ಹೊರತು, ಅಭಿವೃದ್ಧಿ ಅಥವಾ ಹೊಸ ಯೋಜನೆಗಳ ಬಗ್ಗೆೆ ಎಂದಿಗೂ ಫೋನ್ ಮೂಲಕ ಮಾತನಾಡುವುದಿಲ್ಲ. ಅಧಿಕಾರಿಗಳನ್ನು ಕರೆಸಿಕೊಂಡು
ಮಾತನಾಡುತ್ತಾರೆ.
ಇನ್ನು ಈ ಸೂಕ್ಷ್ಮ ವಿಚಾರದೊಂದಿಗೆ ಅವರು ಹೇಳಿದ ಮತ್ತೊಂದು ವಿಷಯವೆಂದರೆ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಶುದ್ಧ ಹಸ್ತನಾಗಿರಬೇಕು ಎಂದು. ಯಾವುದೇ ಕಾರಣಕ್ಕೂ ರಾಜಕಾರಣಿಗಳು ಭ್ರಷ್ಟರಾಗಬಾರದು ಎಂದು ಸಲಹೆ ನೀಡುತ್ತಿದ್ದ ಅವರು, ಒಬ್ಬ ರಾಜಕಾರಣಿ ಒಮ್ಮೆ ಸಾರ್ವಜನಿಕ ಜೀವನದಲ್ಲಿ ಹೆಸರು ಕೆಡಿಸಿಕೊಂಡರೆ, ಮತ್ತೊಮ್ಮೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ. ಕಾರ್ಯಕರ್ತರು, ಮತದಾರರ ಮುಂದೆ ಅಧಿಕಾರಯುತವಾಗಿ ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಳ್ಳಬೇಕಾಗಿ ಬರುತ್ತದೆ. ಆದ್ದರಿಂದ ಈ ರೀತಿಯ ಕೆಲಸಕ್ಕೆ ಯಾರೊಬ್ಬರು ಮುಂದಾಗಬಾರದು ಎನ್ನುವ ಮಾತನ್ನು ಹೇಳುತ್ತಿರುತ್ತಾರೆ. ಈ ರೀತಿ ಪಕ್ಷದ ಅಭ್ಯಾಸವರ್ಗದ ವೇಳೆ ಹಾಗೂ ಇನ್ನಿತ್ತರೆ ಸನ್ನಿವೇಶದಲ್ಲಿ ಹೇಳುವ ಮೋದಿ ಅವರು, ನಿಜ ಜೀವನದಲ್ಲಿ ಇದನ್ನು ಚಾಚುತಪ್ಪದೇ ಪಾಲಿಸುತ್ತಾರೆ. ಅದಕ್ಕಾಗಿಯೇ, ನರೇಂದ್ರ ಮೋದಿ ಅವರು ಭಾರತದ ಜನಪ್ರಿಯ ಪ್ರಧಾನಿ ಗಳಾಗಿ ಹೊರಹೊಮ್ಮಿದ್ದಾರೆ. ಹಾಗೇ ನೋಡಿದರೆ, ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಹಲವು ಪ್ರಧಾನಿಗಳು ಬಂದು ಹೋಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತಮ ಕೆಲಸವನ್ನು ಮಾಡಿದ್ದರು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ಇಂದಿರಾ ಗಾಂಧಿ ಅವರ ಬಳಿಕ ಹೆಚ್ಚು ಕಮಾಂಡಿಂಗ್ ಆಗಿ ಅಧಿಕಾರ ನಡೆಸುತ್ತಿರುವವರು ಎಂದರೆ ನರೇಂದ್ರ ಮೋದಿ. ಇಂದಿರಾ ಗಾಂಧಿ ಅವರು ಸರ್ವಾಧಿಕಾರಿಯ ರೀತಿ ನಡೆದ ಎಲ್ಲರನ್ನು ಹಿಡಿತಕ್ಕೆ ಪಡೆದಿದ್ದರು. ಆದರೆ ನರೇಂದ್ರ ಮೋದಿ ಅವರು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮೂಲಕ, ದೇಶವನ್ನು ಮುನ್ನಡೆಸುತ್ತಿದ್ದಾರೆ.
ಮೋದಿ ಅವರನ್ನು ನಾನು ಇತ್ತೀಚಿಗೆ ನೋಡಿದ್ದಲ್ಲ. ಮೊದಲಿನಿಂದಲೂ ಅವರಲ್ಲಿನ ನಾಯಕತ್ವದ ಗುಣವಿತ್ತು. ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪೂರ್ವಾಂಚಲ, ಉತ್ತರಾಂಚಲ ಹಾಗೂ ಈಶಾನ್ಯ ರಾಜ್ಯಗಳ ಉಸ್ತುವಾರಿಯನ್ನು ವಹಿಸಿಕೊಂಡಿ ದ್ದರು. ಆಗಿನಿಂದಲೂ ಅವರೊಂದಿಗೆ ಒಡನಾಟ ಬೆಳೆಸುವ ಅವಾಕಾಶವಿತ್ತು. ಬಳಿಕ ನಾನು ರಾಷ್ಟ್ರೀಯ ಸ್ಲಂ ಮೋರ್ಚಾ ರಾಷ್ಟ್ರೀಯ ಸಂಚಾಲಕನಾಗಿದ್ದೆ. ಆಗ ಅವರು ನನ್ನನ್ನು ‘ಜಿಗ್ಗಿ ಜೊಪ್ಡಿ ರಾಯ್ಡು’ ಎಂದು ಕರೆಯುತ್ತಿದ್ದರು.
ಹಿಂದಿಯಲ್ಲಿ ‘ಜಿಗ್ಗಿ ಜೊಪ್ಡಿ’ ಅಂದರೆ, ಗುಡಿಸಲು ಎಂದರ್ಥ. ಅದಾದ ಬಳಿಕ ಗುಜರಾತ್ನ ಮುಖ್ಯಮಂತ್ರಿಗಳಾದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಅವರು ಆ ರಾಜ್ಯದಲ್ಲಿ ನಡೆಸಿದ ಆಡಳಿತವೂ ಇಡೀ ದೇಶಕ್ಕೆ ಮಾದರಿ ಎಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗುವ ಮೊದಲು ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಆಡಳಿತದಲ್ಲಿ, ಐದು ವರ್ಷಕ್ಕೆ ಮೂರ್ನಾಲ್ಕು ಮುಖ್ಯಮಂತ್ರಿಗಳು ಬದಲಾದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಹಿಂದುಳಿದ ವರ್ಗದಿಂದ ಬಂದಿರುವ ಮೋದಿ ಅವರು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದರು.
ನರೇಂದ್ರ ಮೋದಿ ಅವರನ್ನು ವಿರೋಧಿಸುವ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಅವರ ಕಾರ್ಯಗಳನ್ನು ನೋಡಬೇಕಿದೆ. ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ, ಇನ್ನೊಂದು ಅವಧಿಗೆ ಪಕ್ಷವನ್ನು ಆಡಳಿತಕ್ಕೆ ತರಲು ಆಗದ ಸಿದ್ದರಾಮಯ್ಯ ಅವರು ಮೋದಿ ಅವರ ಆಡಳಿತ ಗುಟ್ಟನ್ನು ನೋಡಬೇಕು. ಮೋದಿ ಅವರು ಏನು ಅಭಿವೃದ್ಧಿ ಕಾರ್ಯ ಮಾಡದಿದ್ದರೆ, ಗುಜರಾತ್ ಜನ ಮೂರು ಬಾರಿ ಮೋದಿ ಅವರನ್ನು ಬೆಂಬಲಿಸುತ್ತಿದ್ದರೇ? ಗುಜರಾತ್ ಮುಖ್ಯಮಂತ್ರಿ ಯಾಗಿ ಹೆಸರು ಮಾಡಿದ ಬಳಿಕ ಮೋದಿ ಅವರನ್ನು ಬಿಜೆಪಿ ವರಿಷ್ಠರು ರಾಷ್ಟ್ರ ರಾಜಕಾರಣಕ್ಕೆ ತಗೆದುಕೊಂಡು ಹೋದರು. ಆದರೆ ಮೋದಿ ಅವರು ದೆಹಲಿ ರಾಜಕಾರಣಕ್ಕೆ ತೆರಳುವ ಮೊದಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ. ಈ ಸಿದ್ಧತೆ ಇದಿದ್ದರಿಂದಲೇ 2013ರ ಲೋಕಸಭಾ ಚುನಾವಣೆ ವೇಳೆ ಸುಮಾರು 15 ಸಾವಿರ ಕಿಮೀಗೂ ಹೆಚ್ಚು ಪ್ರಯಾಣ ಮಾಡಿ, ದೇಶವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಇದರ ಫಲವಾಗಿಯೇ ಬಿಜೆಪಿ ಯಾವುದೇ ಅಂಗಪಕ್ಷಗಳ ಸಹಾಯವಿಲ್ಲದೇ, ಲೋಕಸಭೆಯಲ್ಲಿ ಅಧಿಕಾರ ಹಿಡಿಯಿತು.
ಇನ್ನು ಈ ಸಮಯದಲ್ಲಿ ನಾನೊಂದು ಘಟನೆಯನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲು ನಾಲ್ಕೈದು ದಿನ ಇರುವಾಗ
ರಾಜ್ಯ ಬಿಜೆಪಿ ನಿಯೋಗ ಗುಜರಾತ್ಗೆ ತೆರಳಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ನಾನು ಸೇರಿದಂತೆ ಅನೇಕ ನಾಯಕರು ಮೋದಿ ಅವರನ್ನು ಭೇಟಿಯಾಗಿದ್ದೆವು. ನಾವು ಹೋಗಿದ್ದ ಮುಖ್ಯ ಉದ್ದೇಶವೆಂದರೆ, ರಾಜ್ಯದ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡುವುದಕ್ಕೆ. ಈ ವೇಳೆ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಮೋದಿ ಅವರೊಂದಿಗೆ ಚರ್ಚಿಸುತ್ತಿದ್ದಾಗ, ನಾನು ಮೂಲೆಯಲ್ಲಿದ್ದೆ. ಆದರೆ ನನ್ನನ್ನು ಗಮನಿಸಿದ ಅವರು, ಆಗಲೂ ಜಿಗ್ಗಿ ಜೊಪ್ಡಿ ರಾಯ್ಡು ಎಂದು ನೆನಪು ಮಾಡಿಕೊಂಡು ಹತ್ತಿರ ಕರೆದು ಉಭಯ ಕುಶಲೋಪರಿ ವಿಚಾರಿಸಿದರು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರಳತೆಯನ್ನು ತೋರಿಸುತ್ತಿದೆ. ಈ ರೀತಿಯ ಗುಣವೇ ಅವರನ್ನು ದೊಡ್ಡ ಸ್ಥಾನದಲ್ಲಿ ನಿಲ್ಲಿಸಿದೆ.
ಇದಾದ ಬಳಿಕ ಪ್ರಧಾನಿಯಾಗಿದ್ದಾಗ ಒಮ್ಮೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ವಿಮಾನ ನಿಲ್ದಾಣದಲ್ಲಿ
ಭೇಟಿಯಾಗಲು ಹೋಗಿದ್ದಾಗ, ಹಳೇ ಹೆಸರಿನಿಂದಲೇ ನನ್ನನ್ನು ನೆನಪು ಮಾಡಿಕೊಂಡು, ಶೇಕ್ಹ್ಯಾಂಡ್ ನೀಡಿ ಆತ್ಮೀಯವಾಗಿ
ಮಾತನಾಡಿಸಿದರು. ಈ ರೀತಿ ಎಲ್ಲರನ್ನು ಒಂದಾಗಿ ಕಾಣುವ ಮೋದಿ ಅವರ ಗುಣವೇ ನನಗೆ ಬಲು ಇಷ್ಟವಾಗುವುದು.
ಗುಜರಾತ್ ಮುಖ್ಯಮಂತ್ರಿಯಿಂದ ದೇಶ ಪ್ರಧಾನಿಯಾದ ಬಳಿಕ ಅವರು ಭಾರತವನ್ನು ‘ವಿಶ್ವಗುರು’ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಹಲವು ಕ್ರಮ ಕೈಗೊಂಡರು. ಅದಕ್ಕಾಗಿಯೇ ಹಲವು ದೇಶಗಳು ಈ ಹಿಂದಿಗಿಂತ ಇಂದು ಭಾರತದ ಬೆಂಬಲಕ್ಕೆ ನಿಂತಿವೆ. ಒಂದು ಕಾಲದಲ್ಲಿ ಮೋದಿ ಅವರಿಗೆ ವೀಸಾ ನಿರಾಕರಿಸಿದ್ದ ಅಮೆರಿಕ ಇದೀಗ ಅದೇ ಮೋದಿ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತವನ್ನು ನೀಡುತ್ತಿದೆ ಎಂದರೆ, ಮೋದಿ ಅವರ ವರ್ಚಸ್ಸು ಎಷ್ಟರ ಮಟ್ಟಿಗೆ ಏರಿದೆ ಎನ್ನುವುದನ್ನು ನೋಡಬೇಕು.
ಇದರ ನಡುವೆ ಮತ್ತೊಂದು ಅಚ್ಚರಿಯನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಅಮೆರಿಕ ಹಾಗೂ ರಷ್ಯಾ ದೇಶಗಳು ಪರಸ್ಪರ
ಬದ್ಧವೈರಿಗಳು ಎನ್ನುವುದು ಜಗಜಾಹಿರ. ಆದರೆ ಭಾರತದ ವಿಷಯ ಬಂದ ಕೂಡಲೇ, ಈ ಎರಡು ದೇಶಗಳು ನಮ್ಮ ಬೆಂಬಲಕ್ಕೆ ನಿಲ್ಲುತ್ತಿವೆ. ಇದಕ್ಕೆ ಕಾರಣ ಮೋದಿ ಅವರ ವಿದೇಶಾಂಗ ನೀತಿ ಅಲ್ಲದೇ ಬೇರೇನು ಅಲ್ಲ. ಇದರೊಂದಿಗೆ ವಿಶ್ವ ಬ್ಯಾಂಕ್ ಅದಿಪತ್ಯವನ್ನು ಸ್ಥಾಪಿಸಿದ್ದ ಅಮೆರಿಕಕ್ಕೆ ಉತ್ತರಿಸುವುದಕ್ಕಾಗಿ ಬ್ರಿಕ್ಸ್ ಅನ್ನು ಸ್ಥಾಪಿಸುವ ನಾಯಕತ್ವವನ್ನು ಮೋದಿ ವಹಿಸಿದ್ದರು. ಈ ರೀತಿ ಭಾರತದ ಅಭಿವೃದ್ಧಿಗೆ ಒಂದಿಲ್ಲೊಂದು ವಿಷಯದಲ್ಲಿ ಮೋದಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೋದಿ ಅವರು ಗುರುವಾರ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರಿನ್ನು ನೂರು ಕಾಲ ಬಾಳಿ, ನಮ್ಮನ್ನು ಮುನ್ನಡೆಸಲಿ ಎಂದು ಆಶಿಸುತ್ತೇನೆ.