Friday, 22nd November 2024

ಎಷ್ಟು ದೂರ ಚಾಚಿವೆ ಡ್ರಗ್ ದಂಧೆಯ ಬಾಹುಗಳು?

ಶಶಾಂಕಣ
ಶಶಿಧರ ಹಾಲಾಡಿ

ದೆಹಲಿಯ ರಾಜ್ಯಸಭೆಯಲ್ಲಿ ಮೊನ್ನೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಅವರು ಭಾವೋದ್ವೇಗಭರಿತರಾಗಿ ಹೇಳಿದ ಕೆಲವು
ಮಾತುಗಳು ಎಲ್ಲೆಡೆ ಅಚ್ಚರಿಯನ್ನೇ ಉಂಟು ಮಾಡಿತು. ಬಾಲಿವುಡ್ ಲೋಕದಲ್ಲಿ ಸದ್ದು ಮಾಡುತ್ತಿರುವ, ಯುವ ನಟ ನಟಿಯರ ಜೀವನವನ್ನು ದುರಂತದತ್ತ ಕೊಂಡೊಯ್ಯುತ್ತಿರುವ ಮಾದಕ ವಸ್ತು ಅಥವಾ ಡ್ರಗ್ಸ್‌ ಚಟದ ಕುರಿತು, ಹಿಂದಿ ಚಿತ್ರ ನಟಿ ಕಂಗನಾ ರನೌತ್ ಕಟುವಾಗಿ ಟೀಕೆ ಮಾಡಿ, ಹಿಂದಿ ಚಿತ್ರರಂಗವು ‘ಗಟಾರ’ದ ರೀತಿ ಆಗಿದೆ, ಅದನ್ನು ಡ್ರಗ್ಸ್ ಚಟದಿಂದ ಚೊಕ್ಕಟಗೊಳಿಸಬೇಕು ಎಂದಿದ್ದರು. ಆ ಹೇಳಿಕೆಯಿಂದ ಭುಗಿಲೆದ್ದ ಸಾಮಾಜಿಕ ಜಾಲತಾಣದ ಚರ್ಚೆಯ ನೆಪಮಾಡಿಕೊಂಡು, ಹಿರಿಯ ನಟಿ, ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಹೇಳಿದ್ದಾದರೂ ಏನು? ಜನರ ಗಮನವನ್ನು ಬೇರೆಡೆ ಸೆಳೆಯಲೆಂದು ಈ ರೀತಿ ಮಾಡಲಾಗುತ್ತಿದೆ. ಸಿನಿಮಾ ಜಗತ್ತನ್ನು ಗಟಾರ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗೆ ಹಿಂದಿ ಚಿತ್ರರಂಗಕ್ಕೆೆ ಮಸಿಬಳಿಯದಂತೆ ಅವರನ್ನು ತಡೆಯಲು ಸರಕಾರ ಕ್ರಮಕೈಗೊಳ್ಳಬೇಕು! ಎಂದರು ಜಯಾ ಬಚ್ಚನ್.

ಅವರು ಹೇಳಿದ ರೀತಿ ಅದೆಷ್ಟು ಭಾವನಾತ್ಮಕವಾಗಿತ್ತೆಂದರೆ, ಬಾಲಿವುಡ್ ಜಗತ್ತಿನಲ್ಲಿ ಎಲ್ಲವೂ ನ್ಯಾಯಬದ್ಧವಾಗಿದೆ, ಅಲ್ಲಿನ ನೈತಿಕ ಮಟ್ಟ ಚೆನ್ನಾಗಿದೆ ಮತ್ತು ಅಷ್ಟು ಸಮಚಿತ್ತದಲ್ಲಿರುವ ಹಿಂದಿ ಸಿನಿಮಾ ಜಗತ್ತನ್ನು ಯಾರೂ ಟೀಕಿಸಬಾರದೇನೋ ಎಂಬ
ಭಾವವಿತ್ತು, ಅವರ ಮಾತಿನಲ್ಲಿ! ಜಯಾ ಬಚ್ಚನ್ ಅವರು ಸಹ ಪ್ರಖ್ಯಾತ ನಟಿಯಾಗಿದ್ದರಿಂದ, ಅವರು ಯಾವುದೇ ವಿಚಾರವನ್ನು ವ್ಯಕ್ತಪಡಿಸಿದರೂ ಪ್ರಭಾವಶಾಲಿಯಾಗಿ, ಮನಮುಟ್ಟುವಂತೆಯೇ ಇರುತ್ತದೆ, ಅದರಲ್ಲಿ ಅನುಮಾನವಿಲ್ಲ.

ಆದರೆ, ಅವರ ಈ ಭಾವೋದ್ವೇಗಕ್ಕೆ ನಿಜವಾದ ಕಾರಣವಾದರೂ ಏನು? ಅವರ ಈ ಮನೋಕ್ಲೇಷಕ್ಕೆ ಕಾರಣ ಹುಡುಕುತ್ತಾ ಹಿಂದೆ ಹಿಂದೆ ಹೋದರೆ, ಜೂನ್ 14ರಂದು ಮರಣಹೊಂದಿದ ಯುವ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ತನಕ ಬಂದು ನಿಲ್ಲುತ್ತದೆ. ಜತೆ
ಯಲ್ಲೇ, ಬಾಲಿವುಡ್‌ನಲ್ಲಿ ತಾಂಡವವಾಡುತ್ತಿರುವ ಡ್ರಗ್ಸ್ ‌ ಸೇವನೆಯ ಅಭ್ಯಾಸವು ಅಂತಹ ಒಬ್ಬ ಪ್ರತಿಭಾವಂತ ನಟನ ಸಾವಿಗೆ ಪ್ರಮುಖ ಕಾರಣ ಎಂದು ಕಂಗನಾ ರನೌತ್ ಮತ್ತು ಮಾಧ್ಯಮಗಳು ಹೇಳುತ್ತಿರುವ ವಿದ್ಯಮಾನವೂ ಗಮನ ಸೆಳೆಯುತ್ತದೆ.

ಹಿಂದಿ ಸಿನಿಮಾ ರಂಗದಲ್ಲಿ ಎಲ್ಲೆೆ ಮೀರಿರುವ ಡ್ರಗ್ಸ್ ಸೇವನೆ ಚಟವೇ ಸುಶಾಂತ್ ಸಿಂಗ್ ರಾಜಪೂತ್ ಸಾವಿಗೆ ಕಾರಣವಾಗಿರ ಬಹುದು, ಆ ಜಾಲವನ್ನು ಮಟ್ಟಹಾಕಿ ಎಂದು ಅಭಿಯಾನ ಆರಂಭಿಸಿರುವ ನಟಿ ಕಂಗನಾ ರನೌತ್ ಅವರ ಮಾತುಗಳು, ಜಯಾ ಬಚ್ಚನ್ ಅವರ ಕೋಪಕ್ಕೆ ಏಕೆ ಕಾರಣವಾಗಬೇಕು? ದೂರದ ಹಿಮಾಚಲ ಪ್ರದೇಶದಿಂದ ಬಂದಿರುವ ಕಂಗನಾ ರನೌತ್ ಅವರ ಯಶಸ್ಸನ್ನು ಕಂಡು ಕರುಬಿದರೆ ಜಯಾಬಚ್ಚನ್? ತನ್ನ ಸ್ವಂತ ಶಕ್ತಿಯಿಂದ ಇಂದು ಹಿಂದಿ ಸಿನಿಮಾದ ಪ್ರಮುಖ ನಟಿ
ಯಾಗಿ ಬೆಳೆದಿರುವ ಕಂಗನಾ ರನೌತ್, ಅದೇ ಚಿತ್ರರಂಗದ ಕೊಳಕುಗಳನ್ನು ಎತ್ತಿ ತೋರಿಸಲು ಗಟಾರದ ಹೋಲಿಕೆಯನ್ನು ನೀಡಿದರೆ, ಅದನ್ನು ಧನಾತ್ಮಕವಾಗಿ ಸ್ವೀಕರಿಸುವ ಬದಲು, ರಾಜ್ಯಸಭೆಯಲ್ಲಿ ಅದನ್ನು ಪ್ರಸ್ತಾಪಿಸಿ, ಅಲ್ಲಿರಬಹುದಾದ ಗಟಾರದ ವಾಸನೆಯು ದೇಶದದ ತುಂಬಾ ಹರಡುವಂತೆ ಜಯಾ ಮಾಡಿದ್ದೇಕೆ? ಜಯಾ ಬಚ್ಚನ್ ಅವರು ತಮ್ಮ ಮಾತಿನಲ್ಲಿ ಹಲವು ಅಂಕಿ ಅಂಶಗಳನ್ನು ಸಹ ನೀಡಿದರು. ಹಿಂದಿ ಸಿನಿಮಾವು ಪ್ರತಿದಿನ 5 ಲಕ್ಷ ಜನರಿಗೆ ನೇರವಾಗಿ ಉದ್ಯೋಗಾವಕಾಶ ನೀಡುತ್ತಿದ್ದು, ಪರೋಕ್ಷವಾಗಿ ಮಿಲಿಯಗಟ್ಟಲೆ ಜನರನ್ನು ಸಾಕುತ್ತಿದೆ ಎಂಬರ್ಥದ ಮಾತುಗಳನ್ನು ಹೇಳಿದರು.

ಇಂತಹ ಒಂದು ‘ಎಂಟರ್ ಟೇನ್‌ಮೆಂಟ್ ಇಂಡಸ್ಟ್ರಿ’ಗೆ ಮಸಿಬಳಿಯುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದೂ ಹೇಳಿದರು. ಈ ನಡುವೆ ಊಟದ ತಟ್ಟೆೆಯಲ್ಲಿರುವ ತಿನಿಸುಗಳನ್ನು ಸಹ ಹೋಲಿಸಿ, ತುಸು ಅವಹೇಳನಾತ್ಮಕವಾಗಿಯೂ ಮಾತನಾಡಿದರು! ಅಷ್ಟಕ್ಕೂ, ಈ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿ ಎಂದರೇನು? ಜನರ ಬಳಿ ಸಿನಿಮಾ ನೋಡಲು ಹಣ
ವಿದ್ದರೆ ತಾನೆ, ಎರಡನೆಯ ಸ್ತರದ ಆದಾಯ ಗಳಿಕೆಯನ್ನು ನಂಬಿರುವ ಎಂಟರ್‌ಟೇನ್ ಇಂಡಸ್ಟ್ರಿಗೆ ದುಡ್ಡು ಬರುವುದು? ಕೇವಲ ಎಂಟರ್‌ಟೇನ್‌ಮೆಂಟ್‌ನಿಂದ ಪ್ರಾಥಮಿಕ ಮಟ್ಟದಲ್ಲಿ ಸಂಪತ್ತು ಗಳಿಕೆ ಹೇಗೆ ತಾನೆ ಸಾಧ್ಯ? ಸದಭಿರುಚಿಯ ಮನರಂಜನೆಯನ್ನು ಜನರು ಬಯಸಿ, ಹಣಕೊಟ್ಟು ನೋಡಿದಾಗ ಮಾತ್ರ, ಐದು ಲಕ್ಷ ಜನರಿಗೆ ನೇರ ಉದ್ಯೋಗವಕಾಶ ದೊರಕಲು ಸಾಧ್ಯ. ಆದರೆ ಕಂಗನಾ ರನೌತ್ ಮಾಡಿರುವ ಟೀಕೆ ಬೇರೆಯ ಆಯಾಮದ್ದು. ಮುಂಬಯಿ ಚಿತ್ರರಂಗದ ಬಹುಪಾಲು ಜನರು ಡ್ರಗ್ಸ್ ‌ ಸೇವನೆ ಮಾಡುತ್ತಿದ್ದು, ಅದನ್ನು ತಡೆಯುವ ಅಗತ್ಯವಿದೆ ಎಂದೇ ಅವರು ಒತ್ತಿ ಹೇಳಿದ್ದು. ಮುಂಬಯಿ ಮಾತ್ರವೇಕೆ, ಇಂದು ಬೆಂಗಳೂರಿನ ಚಿತ್ರ ಜಗತ್ತಿನ ಕೆಲವರು ಸಹ ಡ್ರಗ್ಸ್ ‌ ಜಾಲದ ಆರೋಪದಲ್ಲಿ ಸಿಕ್ಕಿಬಿದ್ದಿದ್ದಾರೆ.

ಇಂತಹ ಸಮಯದಲ್ಲಿ, ಡ್ರಗ್ಸ್ ‌‌ನಿಂದ ಚಿತ್ರಜಗತ್ತನ್ನು ಮುಕ್ತಗೊಳಿಸಲು ಪ್ರಯತ್ನ ಅಗತ್ಯ ಎಂಬರ್ಥದ ಮಾತುಗಳನ್ನು ಹೇಳಿ ದಾಗ, ಅದು ಹಿಂದಿ ಚಿತ್ರರಂಗಕ್ಕೆ ಮಸಿ ಬಳಿಯುವ ಪ್ರಯತ್ನ ಆಗಲಾರದು. ರಾಜ್ಯಸಭೆಯಲ್ಲಿ ಕೇಳಿಬಂದ ಚಿತ್ರರಂಗದ ಗೌರವ ಕಾಪಾಡುವ ಮಾತುಗಳಿಗೆ, ಅದೇ ಹಿಂದಿ ಚಿತ್ರರಂಗದ ಖ್ಯಾತ ನಟಿ ಕಂಗನಾ ರನೌತ್ ಕಾರಣ ಎಂಬ ವಿಚಾರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ. ಆರಂಭದಿಂದಲೂ ತನ್ನ ಮುಕ್ತ ಮಾತು ಮತ್ತು ನೇರ ಅಭಿಪ್ರಾಯಗಳಿಗೆ ಹೆಸರಾಗಿರುವ ಕಂಗನಾ ರನೌತ್, ಕಳೆದ ಒಂದೆರಡು ತಿಂಗಳುಗಳಿಂದ ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಇನ್ನಿಲ್ಲದ ರೀತಿ ಗುರಿಯಾಗಿದ್ದಾರೆ. ಇದಕ್ಕೆ ಕಾರಣಗಳು ಹಲವು. ಈಚೆಗೆ, ಅಂದರೆ 2020ರಲ್ಲಿ ಕೇಂದ್ರ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗಿರು ವುದು ಮಹಾರಾಷ್ಟ್ರದ ಕೆಲವು ರಾಜಕೀಯ ಪಕ್ಷಗಳಿಗೆ ಇರುಸು ಮುರುಸನ್ನುಂಟುಮಾಡಿರಬಹುದೆ? ಮುಂದೊಂದು ದಿನ ಕಂಗನಾ ಅವರು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡು, ರಾಜ್ಯಸಭಾ ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಈ ವಿಚಾರವನ್ನೇ
ಮುಂದುಮಾಡಿಕೊಂಡು, ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟು, ಕಂಗನಾ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಊರ್ಮಿಳಾ ಮೊದಲಾದ ನಟಿಯರು ಆರೋಪ ಮಾಡಿದ್ದಾಾರೆ! ಆದರೆ, ಊರ್ಮಿಳಾ ಅವರು 2019ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಲೋಕಸಭಾ
ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಯಾರು ತಾನೆ ಮರೆಯಲು ಸಾಧ್ಯ? ಅತ್ತ ನೋಡಿದರೆ, ಜಯಾ ಬಚ್ಚನ್ ಅವರು 2004 ರಿಂದಲೂ ನಿರಂತರವಾಗಿ ರಾಜ್ಯಸಭಾ ಸದಸ್ಯರಾಗಿ ಮುಂದುವರಿದಿದ್ದಾರೆ, ಒಂದಲ್ಲ ಎರಡಲ್ಲ, ನಾಲ್ಕು ಬಾರಿ ಆಯ್ಕೆಯಾಗಿ ದ್ದಾರೆ!

ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ ಸತತ ನಾಲ್ಕು ಬಾರಿ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆ ಗೊಂಡಿರುವ ಜಯಾಬಚ್ಚನ್, 1992 ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ವಿಷಯ ಅದಲ್ಲ, ಇತ್ತ  ಮುಂಬಯಿಯಲ್ಲಿ ಶಿವಸೇನೆ ಸರಕಾರವು ಕಂಗನಾ ರನೌತ್ ಅವರ ಮನೆಯ ಬಹುಭಾಗವನ್ನು ಮಿಂಚಿನ ಕಾರ್ಯಾಚರಣೆಯ ಮೂಲಕ ಒಡೆದು ಹಾಕಿದ ಒಂದೇ ವಾರದಲ್ಲಿ, ಅತ್ತ ರಾಜ್ಯಸಭೆಯಲ್ಲೂ ಅವರನ್ನು ಟಿಕಿಸಲಾಗುತ್ತದೆ ಎಂದರೆ, ಒಂದು ವಿಷಯ ಸ್ಪಷ್ಟ. ಕಂಗನಾ ರನೌತ್ ಅವರು ಡ್ರಗ್ಸ್ ವಿಚಾರವನ್ನು ಪ್ರಸ್ತಾಪಿಸುತ್ತಾ, ತಮ್ಮ ನೇರ, ದಿಟ್ಟ ಮಾತುಗಳ ಮೂಲಕ, ದೊಡ್ಡ ಒಂದು ವ್ಯವಸ್ಥೆೆ ಯನ್ನೇ ಎದುರು ಹಾಕಿಕೊಂಡಿದ್ದಾರೆ. ಅವರು ಹಿಮಾಚಲ ಪ್ರದೇಶದವರು, ಆದ್ದರಿಂದ ಹಿಂದಿ ಚಿತ್ರರಂಗಕ್ಕೆ ಮತ್ತು ಮುಂಬಯಿಗೆ ಹೊರಗಿನವರು, ಆದ್ದರಿಂದ ಶಿವಸೇನೆಯ ಕೆಂಗಣ್ಣಗೆ ಗುರಿಯಾಗಿದ್ದಾರೆ ಎಂಬುದು ನೆಪ, ಅಷ್ಟೆ.

ಬಾಲಿವುಡ್ ಜಗತ್ತನ್ನು ಅವರು ಗಟಾರಕ್ಕೆ ಹೋಲಿಸಿದ್ದು ತಪ್ಪು ಎಂಬ ಆರೋಪ ಸಹ ಒಂದು ನೆಪ ಅಷ್ಟೆ. 2020ರ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅವರು ರಾಜ್ಯಸಭಾ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಅವರನ್ನು ಟೀಕಿಸುವುದು ಸಹ ಒಂದು ನೆಪ,
ಅಷ್ಟೆ. ಕಳೆದ 15 ವರ್ಷಗಳಿಂದಲೂ ಹಿಂದಿ ಸಿನಿಮಾ ವಲಯವನ್ನು ಹತ್ತಿರದಿಂದ ಕಂಡಿರುವ ಕಂಗನಾ ರನೌತ್, ಆ ಬಣ್ಣದ ಜಗತ್ತಿನಲ್ಲಿ ರಾಡಿಯ ರೂಪದಲ್ಲಿ ತುಂಬಿರುವ ಕೊಳಕನ್ನು ಎತ್ತಿ ತೋರಿಸಲು ಪ್ರಯತ್ನಿಸಿದ್ದಾರೆ, ಮಾತ್ರವಲ್ಲ ಆ ಬಣ್ಣದ ಜಗತ್ತಿನ ಬಹಳಷ್ಟು ಮಂದಿ ಡ್ರಗ್ಸ್ ‌ಸೇವಿಸುತ್ತಾರೆ ಎಂದು ನೇರವಾಗಿ, ಬಹಿರಂಗವಾಗಿ ಹೇಳಿದ್ದೇ ಇದಕ್ಕೆ ಕಾರಣವೆ? ಮುಂಬಯಿಯನ್ನು ಆಳುತ್ತಿರುವ ಡ್ರಗ್ ಮಾಫಿಯಾ ವಿರುದ್ಧ ದನಿ ಎತ್ತಿದ್ದರಿಂದಲೇ, ಅವರ ಮನೆಯನ್ನು ಅಲ್ಲಿನ ಸರಕಾರ ಬಹುಬೇಗನೆ ಒಡೆದು ಹಾಕಿತೆ? ಮುಂಬಯಿಯಲ್ಲಿ ಆ ರೀತಿ ನಿಯಮ ಮೀರಿ ನಿರ್ಮಿಸಿದ ಸಾವಿರಾರು ಮನೆಗಳಿದ್ದರೂ, ಕೇವಲ 24 ಗಂಟೆಗಳ ನೋಟೀಸು ನೀಡಿ, ಕಂಗನಾ ಅವರ ಮನೆಯನ್ನು ಮಾತ್ರ ಒಡೆದು ಹಾಕಬೇಕೆಂದರೆ, ಅವರು ಡ್ರಗ್ ಮಾಫಿಯಾ ವಿರುದ್ಧ
ಗುಡುಗಿದ್ದೇ ಕಾರಣವೆ? ಈ ಎಲ್ಲಾ ವಿದ್ಯಮಾನಗಳಿಗೆ ಸದ್ಯದ ಕಾರಣ ಜೂನ್ ನಲ್ಲಿ ಘಟಿಸಿದ ಸುಶಾಂತ್ ಸಿಂಗ್ ರಾಜಪೂತ್ ಅವರ
ಮರಣ. ಆ ನಂತರ, ಮುಂಬಯಿಯಲ್ಲಿ ಹದಿನೈದಕ್ಕೂ ಹೆಚ್ಚು ಡ್ರಗ್ ಪೆಡಲರ್‌ಗಳ ಬಂಧನವಾಗಿದೆ. ಅಷ್ಟೇಕೆ, ಇದೇ ಅವಧಿ ಯಲ್ಲಿ ಕರ್ನಾಟಕದಲ್ಲೂ ಡ್ರಗ್ ಸರಬರಾಜು ಸರಪಣಿಗೆ ಬಾಂಬ್ ಬಿದ್ದಂತಾಗಿದೆ. ಲಕ್ಷಗಟ್ಟಲೆ ರುಪಾಯಿ ಮೌಲ್ಯದ ಗಾಂಜಾ ಮತ್ತು ಇತರ ಆಧುನಿಕ ಡ್ರಗ್‌ಗಳನ್ನು ವಶಪಡಿಸಿಕೊಂಡ ವರದಿಗಳು ಬಂದಿವೆ.

ಜತೆಯಲ್ಲೇ, ಕನ್ನಡ ಚಿತ್ರರಂಗದ ಇಬ್ಬರು ನಟಿಯರು ಈ ಸಂಬಂಧ ಪರಪ್ಪನ ಅಗ್ರಹಾರವನ್ನು ನೋಡಿದ ಸುದ್ದಿ ಬಿತ್ತರವಾಗಿದೆ. ನಾಲ್ಕೆೆಂಟು ಡ್ರಗ್ ಪೆಡಲರ್‌ಗಳ ಬಂಧನದ ಸುದ್ದಿಯೂ ವರದಿಯಾಗಿದೆ. ಕಳೆದ ತಿಂಗಳು ಡಿಜಿಹಳ್ಳಿಯ ಹತ್ತಿರ ಶಾಸಕರೊಬ್ಬರ ಮನೆಯನ್ನು ಸುಟ್ಟ ಮತ್ತು ಸನಿಹದ ಪೊಲೀಸ್ ಠಾಣೆಯನ್ನು ಸುಡುವ ಪ್ರಯತ್ನದ ಹಿಂದೆಯೂ ಡ್ರಗ್ ಲೋಕದ ಕರಾಳ ನೆರಳು ಇರಬಹುದೆಂದು ಕೆಲವು ಮಾಧ್ಯಮಗಳು ವರದಿಮಾಡಿವೆ. ಮುಂಬಯಿ ಮತ್ತು ಬೆಂಗಳೂರಿನ ಕೆಲವು ಆಯಕಟ್ಟಿನ ಬೀದಿಗಳ ಮೂಲೆಗಳಲ್ಲಿ ಡ್ರಗ್ ಸರಬರಾಜುದಾರರು ಯುವಜನರಿಗೆ ಲಾಕ್ ಡೌನ್ ಸಮಯದಲ್ಲೂ ಡ್ರಗ್ ಸರಬರಾಜು ಮಾಡುತ್ತಿದ್ದರೆಂಬ ಕಳವಳಕಾರಿ ವರದಿಗಳು ಪತ್ರಿಕೆಗಳಲ್ಲಿ ಬಂದಿವೆ. ಬಹುಷಃ ನಮ್ಮಂತಹ ಜನಸಾಮಾನ್ಯರ ಅರಿವಿನ ಲೋಕದಿಂದ ಮರೆಯಾಗಿ ರುವ ಒಂದು ಡ್ರಗ್ಸ್ ‌‌ಲೋಕ, ನಮ್ಮ ನಗರ, ಪಟ್ಟಣಗಳಲ್ಲಿ ಬೇರೂರಿದೆಯೆ? ಕೆಲವು ಯುವಜನರು ಡ್ರಗ್ಸ್ ಸೇವನೆಯನ್ನು ಆಧುನಿಕ
ಜೀವನ ಶೈಲಿಯ ಭಾಗವೆಂಬಂತೆ ತಪ್ಪು ತಿಳಿವಳಿಕೆಗೆ ಬಿದ್ದಿದ್ದಾರೆನಿಸುತ್ತಿದೆ.

ಸಂತಸದ ಪಾರ್ಟಿಗಳಲ್ಲಿ ಡ್ರಗ್ಸ್  ಸೇವನೆಯು, ಆಧುನಿಕ ನಾಗರಿಕತೆಯ ಸಂಕೇತ ಎಂದೇ ಯುವಜನರ ಒಂದು ವಲಯ ಬಲವಾಗಿ
ನಂಬಿರುವಂತೆ ಕಾಣಿಸುತ್ತಿದೆ.  ಎಲ್ಲೆೆಡೆ ಡ್ರಗ್ಸ್ ‌ ಪತ್ತೆಯಾಗುವ ವರದಿಗಳಿಗೆ ಕಾರಣವೇನು? ಅಷ್ಟೊಂದು ಜನರು ನಮ್ಮ ದೇಶದಲ್ಲಿ ಡ್ರಗ್ಸ್  ಸೇವಿಸುತ್ತಿದ್ದಾರೆಯೆ? ಇವೆಲ್ಲಾ ಬಾಲಿವುಡ್ ಪ್ರಭಾವವೆ? ಚಲನಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸುವ ನಟ ನಟಿಯರು, ಮಕ್ಕಳ, ಯುವಜನರ ರೋಲ್ ಮಾಡೆಲ್. ಅದರಲ್ಲಿ ಯಾವುದೇ ಸಂಶಯವಿಲ್ಲ.

ಚಲನಚಿತ್ರಗಳ ಬಣ್ಣದ ಲೋಕದಲ್ಲಿ ಅಮೋಘವಾಗಿ ನರ್ತಿಸುವ, ಮನೋಜ್ಞವಾಗಿ ನಟಿಸುವ, ವೀರಾವೇಶ ದಿಂದ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುವ, ಕಳ್ಳರನ್ನು ಹಿಡಿಯುವ ಸುಂದರ ನಟರೇ ಇಂದಿನ ಯುಜನಾಂಗದ ರೋಲ್ ಮಾಡೆಲ್. ಮಕ್ಕಳು ಮತ್ತು ಯುವಜನರು, ತಾವು ಅಭಿಮಾದಿಂದ ನೋಡುವ ನಟರನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಚಲನಚಿತ್ರಗಳ ಸನ್ನಿವೇಶ ಗಳನ್ನು ತಮ್ಮ ಜೀವನದುದ್ದಕ್ಕೂ ಆರೋಪಿಸಿಕೊಳ್ಳುತ್ತಾರೆ. ಚಲನಚಿತ್ರ ನಟರು ಸಕಾರಾತ್ಮಕ ಕಥನಗಳನ್ನು ತೋರಿಸಿಕೊಟ್ಟರೆ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೂಬಹುದು.

ಅದೇ ನಟರು ಪಾರ್ಟಿಗಳಲ್ಲಿ, ರಹಸ್ಯ ಕೂಟಗಳಲ್ಲಿ ಡ್ರಗ್ಸ್  ಸೇವನೆ ಮಾಡಿದರೆ, ಅದನ್ನು ಸಹ ಅನುಕರಿಸುವ ಸಾಧ್ಯತೆಯೂ ಇದೆ. ಅಪರೂಪಕ್ಕೆ, ವಿಲಾಸಕ್ಕಾಗಿ ಸೇವಿಸುವ ಡ್ರಗ್ಸ್ , ಬರಬರುತ್ತಾ ಚಟವಾಗುತ್ತದೆ. ಆಗಲೇ ಡ್ರಗ್ ಪೆಡಲರ್‌ಗಳು ಸಕ್ರಿಯರಾಗುತ್ತಾರೆ, ಎಂಜಿನಿಯರಿಂಗ್ ಕಾಲೇಜುಗಳ ದಾರಿಯಲ್ಲಿ, ಅದ್ಯಾವುದೋ ಫ್ಲಾಟ್‌ಗಳ ಮೂಲೆಯಲ್ಲಿ, ಊರಾಚೆಯ ರೆಸಾರ್ಟ್‌ಗಳಲ್ಲಿ
ಹೊಗೆ ಹರಡಲು ಆರಂಭವಾಗುತ್ತದೆ. ಹಿಂದಿ ಚಿತ್ರರಂಗ ಗಟಾರವಾಗಿದೆ, ಅಲ್ಲಿನ ಬಹುಪಾಲು ನಟರು ಡ್ರಗ್ ಸೇವನೆ ಮಾಡು ತ್ತಿದ್ದಾರೆ.

ಅದನ್ನು ಸರಿಪಡಿಸಿ ಎಂದು ಕಂಗನಾ ರನೌತ್ ವ್ಯಕ್ತಪಡಿಸಿರುವ ಕಳಕಳಿಯು, ಈ ನಿಟ್ಟಿನಲ್ಲಿ ಬಹು ಮುಖ್ಯವೆನಿಸುತ್ತದೆ. ತನ್ನಂತೆಯೇ ಹೊರರಾಜ್ಯದಿಂದ ಬಂದು ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ಸುಶಾಂತ್ ಸಿಂಗ್ ರಾಜಪೂತ್ ಸಾವಿಗೆ ಡ್ರಗ್ ಜಾಲದ ಕರಾಮತ್ತು ಕಾರಣವಿರಬಹುದು ಮತ್ತು ಆ ಜಾಲವನ್ನು ಮಟ್ಟಹಾಕಿ ಎಂದು ಕಂಗನಾ ರನೌತ್ ಹೇಳಿದ್ದೂ ಇದೇ ಕಾರಣದಿಂದ ಇರಬಹುದು. ಚಲನಚಿತ್ರ ತಾರೆಯರ ವಲಯದಲ್ಲಿ ಇರಬಹುದಾದ ಡ್ರಗ್ಸ್ ‌ವ್ಯಸನವನ್ನು ತಡೆಗಟ್ಟಿದರೆ, ಅದು ದೇಶದ ಯುವಜನತೆಗೆ ಪರೋಕ್ಷವಾಗಿ ಸಹಾಯ ಮಾಡಿದಂತೆ. ಚಿತ್ರನಟರನ್ನು ಅನುಕರಿಸುವ ಯುವಜನರು ಡ್ರಗ್ಸ್ ದಾಸರಾಗ ದಂತೆ ತಡೆಯಲು ಈ ಮಾತು ಬಂದಿದೆ ಎಂದು ಕಂಗನಾ ರನೌತ್‌ರ ಮಾತುಗಳನ್ನು ಗ್ರಹಿಸಬೇಕಿತ್ತು. ಆದರೆ ಈಗ ಆಗಿರುವು ದೇನೆಂದರೆ, ಕೇಂದ್ರ ಸರಕಾರದಿಂದ ವೈಕೆಟಗರಿ ರಕ್ಷಣೆ ಪಡೆದಿರುವ ಕಂಗನಾ, ಆ ಒಂದು ಪಕ್ಷಕ್ಕೆ ನಿಷ್ಠರೇನೋ ಎಂಬ ಟೀಕೆಯನ್ನು ಎದುರಿಸಬೇಕಾಗಿದೆ. ಜತೆಗೆ ಮಹಾರಾಷ್ಟ್ರದ ಶಿವಸೇನೆ ಪಕ್ಷದ ಕೆಲವರು ಆಕೆಗೆ ಬಹಿರಂಗವಾಗಿ ಬೆದರಿಕೆ ಒಡ್ಡಿ, ದೂರದ ಹಿಮಾಚಲ ಪ್ರದೇಶದಿಂದ ಮುಂಬಯಿಗೆ ಬರುವಂತಿಲ್ಲ ಎಂಬ ಧಮಕಿಯನ್ನೂ ಹಾಕಿದ್ದಾರೆ.

ಮೂಲತಃ, ಮುಂಬಯಿ ನಗರವು ಕೇವಲ ಮಹಾರಾಷ್ಟ್ರದವರದ್ದು ಎಂಬ ತಿಳಿವಳಿಕೆಯೇ ತಪ್ಪು, ಆದ್ದರಿಂದ ಇಂತಹ ಬೆದರಿಕೆ ಗಳು ಅಸಂವಿಧಾನಿಕ. ಅದಿರಲಿ, ಶಿವಸೇನೆಯವರು, ಸಮಾಜವಾದಿ ಪಕ್ಷದವರು ಎಲ್ಲರೂ ಒಮ್ಮೆಗೇ ಕಂಗನಾ ರನೌತ್ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದರೆ, ಅದಕ್ಕೆ ಏನು ಕಾರಣವಿರಬಹುದು? ಮುಂಬಯಿಯ ಡ್ರಗ್ ಮಾಫಿಯಾವನ್ನು ಟೀಕಿಸಿದ್ದೇ ಅವರ ಅಪರಾಧವೆ? ಹಾಗಿದ್ದ ಪಕ್ಷದಲ್ಲಿ, ಡ್ರಗ್ ಮಾಫಿಯಾದ ಕಬಂಧ ಬಾಹುಗಳು ಅಷ್ಟು ದೂರಕ್ಕೆ ಚಾಚಿವೆಯೆ? ಇದು ನಿಜವಾದ ಪಕ್ಷದಲ್ಲಿ, ಅಂತಹ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲೇ ಬೇಕು. ಅಂತಹ ಕಟ್ಟುನಿಟ್ಟಿನ ಕ್ರಮವು ಮುಂಬಯಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಬಾರದು, ದೇಶದ ಎಲ್ಲಾ ಕಡೆಯೂ, ಕರ್ನಾಟಕವೂ ಸೇರಿದಂತೆ, ಡ್ರಗ್ ದಂಧೆಯನ್ನು ಮಟ್ಟಹಾಕಬೇಕು, ಆ ಕಾನೂನು ಬಾಹಿರ ಚಟುವಟಿಕೆಯನ್ನು ತಡೆಯಬೇಕು. ಆಗಲೇ ಇಂದಿನ ಒಂದು ವಲಯದ ಯುವಜನರ ಹಿತಾಸಕ್ತಿಯನ್ನು ರಕ್ಷಿಸಿದಂತಾಗುತ್ತದೆ, ಜತೆಯಲ್ಲೇ ದೇಶದ ಹಿತವನ್ನು ಕಾಪಾಡಿದಂತಾಗುತ್ತದೆ.