Sunday, 24th November 2024

ಸಿನಿಮಾ ಮಾಡಿದವರು ಪಬ್ಲಿಸಿಟಿ ಮಾಡೋದು ತಪ್ಪಾ ?

ಸಿನಿಗನ್ನಡ

ತುಂಟರಗಾಳಿ

ಗುರು ದೇಶಪಾಂಡೆ ಅವರ ನಿರ್ಮಾಣದ ಪೆಂಟಗನ್ ಸಿನಿಮಾ ಈ ವಾರ ಬಿಡುಗಡೆ ಆಗಿದೆ. ಇದರಲ್ಲಿ ೫ ಸಣ್ಣ ಕಥೆಗಳು ಇರೋದಕ್ಕೆ ಇದಕ್ಕೆ ಪೆಂಟಗನ್ ಅಂತ ಹೆಸರಿಟ್ಟಿದ್ದಾರೆ ಅಂತ ನೀವು ಗೆಸ್ ಮಾಡಿದ್ರೆ ಅದಕ್ಕೆ ಯಾವ ಬಹು ಮಾನವೂ ಸಿಗೋದಿಲ್ಲ. ಆದರೆ ಈ ಐದು ಸಣ್ಣ ಕಥೆಗಳಲ್ಲಿ ಬಿಡುಗಡೆಗೂ ಮುನ್ನ ಹೆಚ್ಚು ಸದ್ದು ಮಾಡಿದ್ದು ಅಂದ್ರೆ ಕಾಮಾತುರಾಣಂ ನ ಲಜ್ಜ, ನ ಭಯಂ ಅನ್ನೋ ಹಸಿಬಿಸಿ ಕಂಟೆಂಟ್ ಇರೋ ಎಪಸೋಡ್.

ಆದರೆ ಇದು ಬರೀ ಕಥೆಯಾಗಿ ಉಳಿಯದೆ, ಅಯ್ಯೋ ಅದೊಂದು ದೊಡ್ಡ ಕಥೆ ಅನ್ನೋ ಲೆವೆಲ್ಲಿಗೆ ಸದ್ದು ಮಾಡಿತ್ತು. ಅದಕ್ಕೆ ಕಾರಣ ಈ ಚಿತ್ರದ ನಟಿ ತನಿಷಾ ಅವರೊಂದಿಗೆ ಯೂಟ್ಯೂಬರ್ ಒಬ್ಬ ನಡೆಸಿಕೊಟ್ಟ ಸಂದರ್ಶನ. ಈ ಸಿನಿಮಾದ ಹಾಡು ಮತ್ತು ಟ್ರೈಲರ್ ನಲ್ಲಿ ಕೆಲವು ಹಾಟ್ ಎನಿಸುವ ದೃಶ್ಯಗಳು ಇದ್ದವು. ಆದರೆ ಇದನ್ನು ಮೀರಿಸುವಂಥ ಅನೇಕ ರೊಮ್ಯಾಂಟಿಕ್ ಮತ್ತು ಅಶ್ಲೀಲ ಎನಿಸುವಂಥ ದೃಶ್ಯಗಳಿರೋ ಅದೆಷ್ಟೋ ಸಿನಿಮಾಗಳು ಬಂದು ಹೋಗಿವೆ.

ಅಂಥ ಸಮಯದಲ್ಲಿ ಸಂದರ್ಶನ ಮಾಡಿದ ಮಾಧ್ಯಮದವರು ಅದನ್ನು ಹೇಳಬೇಕಾದ, ಕೇಳಬೇಕಾದ ಸಭ್ಯ ರೀತಿಯಲ್ಲಿ ಹೇಳಿ, ಕೇಳಿ ಮುಗಿಸಿದ್ದಾರೆ. ಆದರೆ ಏನ್ ಮಾಡೋದು, ಇತ್ತೀಚಿಗೆ ಮೊಬೈಲ್ ಇರೋರೆ ಯೂಟ್ಯೂಬರ್‌ಗಳಾಗಿ, ನಮ್ಮ ಚಿತ್ರರಂಗ ದವರು ಅವರನ್ನೂ ಮಾಧ್ಯಮ ಎಂದೇ ಪರಿಗಣಿಸಿರೋದ್ರಿಂದ ಈಗಷ್ಟೇ ಕಾಲೇಜು ಮುಗಿಸಿದ ಅಥವಾ ಮುಗಿಸದ ಪಡ್ಡೆಗಳೂ
ಸಹಿತ ಸಿನಿಮಾದವರ ಮುಂದೆ ಮಾಧ್ಯಮದವರ ಥರ ಪೋಸು ಕೊಡುತ್ತಿದ್ದಾರೆ.

ಇದರ ಫಲವಾಗಿಯೇ ಮೊನ್ನೆ ಎಡಬಿಡಂಗಿ ಯೂಟ್ಯೂಬರ್ ಒಬ್ಬ ಚಿತ್ರದ ನಾಯಕಿ ತನಿಷಾ ಅವರನ್ನು ನೀವು ಮುಂದೆ
ನ್ಯೂಡ್ ಸಿನಿಮಾ ಮಾಡ್ತೀರಾ ಎಂದು ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಸ್ವಲ್ಪ ಎಕ್ಸ್ ಪೋಸ್ ಮಾಡಿದ ಕೂಡಲೇ ಏ, ಬುಲ್
ಬುಲ್ ಬ್ಲೂ ಫಿಲ್ಮ ಮಾಡಾಕಿಲ್ವಾ ಅನ್ನೋ ಥರ ನಟಿಯರನ್ನು ಏನು ಬೇಕಾದ್ರೂ ಕೇಳಬಹುದು, ಅಧಿಕ ಪ್ರಸಂಗ ತೋರಿಸಬಹುದು ಅನ್ನೋ ಧೈರ್ಯ ಈ ಯೂಟ್ಯೂಬರ್‌ಗಳಿಗೆ ಹೆಂಗೆ ಬಂತು ಅನ್ನೋದನ್ನು ಇವರನ್ನು ಎಂಟರ್‌ಟೈನ್ ಮಾಡೋ ಎಂಟರ್ ಟೈನ್‌ಮೆಂಟ್ ಫೀಲ್ಡ ನಲ್ಲಿರೋ ಸಿನಿಮಾ ಮಂದಿಯೇ ಹೇಳಬೇಕು.

ಲೂಸ್ ಟಾಕ್
ಕಿಚ್ಚ ಸುದೀಪ್ (ಕಾಲ್ಪನಿಕ ಸಂದರ್ಶನ)
ಸುದೀಪ್ ಅವ್ರೇ, ಕರೆಕ್ಟಾಗಿ ಹೇಳಿ, ನೀವ್ ಸಪೋರ್ಟ್ ಮಾಡ್ತಾ ಇರೋದು ಬಿಜೆಪಿಗಾ, ಇಲ್ಲಾ ಬೊಮ್ಮಾಯಿ ಅವರಿಗಾ?
-ನಾನ್ ಸಪೋರ್ಟ್ ಮಾಡ್ತಿರೋದು ಬೊಮ್ಮಾಯಿ ಅವರಿಗೆ ಮಾತ್ರ. ‘ಎಲ್ಲೋ ಒಂದ್ ಕಡೆ’…..ಸಾರಿ, ಅವ್ರ್ ಹೇಳಿದ್ ಎಲ್ಲಾ ಕಡೆ ಪ್ರಚಾರ ಮಾಡ್ತೀನಿ ಅಷ್ಟೇ.

ಸರಿ, ನೀವ್ ಪ್ರಚಾರ ಮಾಡಿದ ಅಭ್ಯರ್ಥಿಗಳು ಸೋತ್ರೆ ಏನ್ ಮಾಡ್ತೀರಾ?
-ಅಯ್ಯೋ, ನಾನು ಸಿನಿಮಾ ಮಾಡಿ ಸೋತಾಗಲೇ ತಲೆಕೆಡಿಸಿಕೊಂಡಿಲ್ಲ, ಇನ್ನು ಬರೀ ಪಬ್ಲಿಸಿಟಿ ಮಾಡಿ ಸೋತ್ರೆ  ತಲೆಕೆಡಿಸಿಕೊಳ್ತೀನಾ?

ಈ ಹಿಂದೆ ನೀವೇ ಬಿಜೆಪಿ ಸರಕಾರದ ಆಡಳಿತ ಸರಿ ಇಲ್ಲ, ಜಿಎಸ್ಟಿ, ಟ್ಯಾಕ್ಸು, ಪೆಟ್ರೋಲ್ ರೇಟು ಜಾಸ್ತಿ ಅಂತೆ ಟೀಕೆ ಮಾಡಿದ್ರಿ. ಈಗ ಹೆಂಗೆ ಸಪೋರ್ಟ್ ಮಾಡ್ತೀರಾ? 
-ಏನೂ ಮಾಡೋಕಾಗಲ್ಲ. ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಅದು ಆಗ, ಇದು ‘ಈಗ’. ‘ಸಾಲಾ ಏಕ್ ಮಕ್ಕೀ’ ಆದ್ಮೀ ಕೋ…

ನಾವು ಬಿಜೆಪಿಗೆ ಸಪೋರ್ಟ್ ಮಾಡ್ತಾ ಇರೋದಕ್ಕೆ, ಪ್ರಕಾಶ್ ರೈ ಅವರು ಸುದೀಪ್ ಮೇಲೆ ಇಟ್ಟಿದ್ದ ನಂಬಿಕೆ ಹಾಳಾಯ್ತು ಅಂತ ಶ್ಯಾನೆ ಬೇಜಾರ್ ಮಾಡ್ಕೊಂಡವ್ರಲ್ಲ?

-ಅಯ್ಯೋ, ಹಂಗೇನಿಲ್ಲ, ಬಿಜೆಪಿಗೆ ಓಟಾಕಿ ಅಂತ ಕೇಳ್ತೀನಿ. ಜೊತೆಗೆ, ರಮ್ಮಿ ಜಾಹೀರಾತಿನಲ್ಲಿನ ಹೇಳ್ತೀನಲ್ಲ, ಆ ಥರ ಡಿಸ್ಕ್ಲೈಮರ್ ಕೂಡಾ ಕೊಡ್ತೀನಿ, ಬಿಜೆಪಿಗೆ ವೋಟು ಹಾಕೋ ಆಟದಲ್ಲಿ ಆರ್ಥಿಕ, ಸಾಮಾಜಿಕ ನೆಮ್ಮದಿ ಕಳೆದುಕೊಳ್ಳುವ ರಿಸ್ಕ್
ಇರುತ್ತದೆ. ‘ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ವೋಟು ಹಾಕಿ’ ಅಂತ

ಅದ್ಸರಿ, ಬೇರೆ ನಟರೂ ಅವರವರ ಸ್ನೇಹಿತರಿಗೆ ಈ ಸಲ ಚುನಾವಣೆಯಲ್ಲಿ ಪ್ರಚಾರ ಮಾಡ್ತಾ ಇದ್ದಾರೆ. ಆದ್ರೆ ನೀವ್ ಮಾತ್ರ ಈ ವಿಷ್ಯಕ್ಕೆ ಪ್ರೆಸ್ ಮೀಟ್ ಕರೆದು ಮಾತಾಡಿದ್ರಲ್ಲ. ಅದ್ಯಾಕೆ?
-ಅಯ್ಯೋ ನಾನ್ ಪ್ರೆಸ್ ಮೀಟ್ ಕರೆದರೆ ತಪ್ಪೇನು? ಪ್ರೆಸ್ ನವರು ನನ್ನನ್ನೇನು ಬ್ಯಾನ್ ಮಾಡಿಲ್ಲವಲ್ಲ.

ನೆಟ್ ಪಿಕ್ಸ್
ಇಂಡಿಯಾ ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ
ಆಗುತ್ತಿರಲಿಲ್ಲವಾದರೂ ಆಗಾಗ ಸಮಯ ಸಿಕ್ಕರೆ ಕದನದ ನಡುವೆ ಛಾ ಸಿಕ್ಕಾಗಲೆಲ್ಲ, ಸೈಕಲ್ ಗ್ಯಾಪ್‌ನಲ್ಲಿ ಕರಾಮತ್ತು ತೋರಿಸಲು ಎರಡೂ ಕಡೆಯವರು ಸಿದ್ಧವಾಗಿದ್ದರು.

ಭಾರತೀಯ ಸೇನೆಯ ಮುಖ್ಯಸ್ಥ ಖೇಮು ತನ್ನ ಸೈನಿಕರೊಂದಿಗೆ ಗಡಿಭಾಗದಲ್ಲಿ ಸಣ್ಣ ಅಡಗುದಾಣದ ಹಿಂದೆ ಕೂತಿದ್ದ. ಆ ಕಡೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಫ್ಜಲ್ ಖಾನ್ ಕೂಡ ಅದೇ ರೀತಿ ಭಾರತೀಯ ಸೇನೆಗೆ ಕಾಣದಂತೆ ತನ್ನ ಸಂಗಡಿಗರೊಂದಿಗೆ ಕೂತಿದ್ದ. ಬಹಳ ಹೊತ್ತು ಎರಡೂ ಕಡೆ ಸದ್ದೇ ಇರಲಿಲ್ಲ. ಎರಡೂ ತಂಡಗಳಿಗೂ ಆ ಕಡೆ ಇರುವವರ
ಬಗ್ಗೆ ಮಾಹಿತಿ ಇತ್ತು. ಮಧ್ಯರಾತ್ರಿಯ ಹೊತ್ತಲ್ಲಿ ಖೇಮು ಇದ್ದಕ್ಕಿದ್ದಂತೆ ಮನ್ಸೂರ್ ಖಾನ್ ಅಂತ ಕೂಗಿದ. ಈ ದನಿ ಕೇಳಿ ಆ ಕಡೆಯಿಂದ ಮನ್ಸೂರ್ ಖಾನ್ ಏನು ಅಂತ ಎದ್ದು ನಿಂತ.

ಖೇಮು ಅವನ ತಲೆಗೆ ಗುರಿ ಇಟ್ಟು ಗುಂಡು ಹಾರಿಸಿ ಕೊಂದ. ಸ್ವಲ್ಪ ಹೊತ್ತು ನಿಶ್ಯಬ್ಧ. ನಂತರ ಖೇಮು ಅಬ್ದುಲ್ ರಜಾಕ್ ಅಂತ ಕೂಗಿದ. ಆ ಕಡೆಯಿಂದ ರಜಾಕ್ ಏನು ಅಂತ ಎದ್ದು ನಿಂತ. ಖೇಮು ಮತ್ತೆ ಗುಂಡು ಹಾರಿಸಿ ಕೊಂದ. ಆ ಕಡೆ ಸೇನಾ ಮುಖ್ಯಸ್ಥ, ನನ್ಮಕ್ಳ ನಿಮಗೇನ್ ತಲೆ ಕೆಟ್ಟಿದೆಯಾ, ಅವ್ನು ಅಟೆಂಡೆ ಹಾಕೋನ್ ಥರಾ ಹೆಸರು ಕೂಗಿದ್ರೆ, ಸ್ಟೂಡೆಂಟ್ಸ ಥರ ಎದ್ದು ನಿಲ್ತೀರಲ್ಲ ಅಂತ ಬೈದ. ಆಗ ಅವರಬ್ಬ ಸೈನಿಕ, ಸಾರ್, ನಾವೂ ಅದೇ ಟೆಕ್ನಿಕ್ ಯೂಸ್ ಮಾಡೋಣ ಅಂತ ಸಲಹೆ ಕೊಟ್ಟ. ಸರಿ ಅಂತ ಆ ಕಡೆ ಸೇನಾ ಮುಖ್ಯಸ್ಥ ಅ-ಲ್ ಖಾನ್ , ಖೇಮು ಎಂದು ಜೋರಾಗಿ ಕೂಗಿದ.

ಈ ಕಡೆ ಖೇಮು ಏನೂ ಉತ್ತರಿಸದೆ ಸುಮ್ಮನೇ ಕುಳಿತಿದ್ದ. ೫ ನಿಮಿಷ ಆಯ್ತು. ನಮ್ಮ ಪ್ಲ್ಯಾನ್ ವರ್ಕ್ ಆಗಲಿಲ್ಲ ಅನ್ನೋ ಸಿಟ್ಟಲ್ಲಿ ಅಪ್ಜಲ್ ಖಾನ್ ಕೂತಿದ್ದ. ಆಗ ಖೇಮು ಎದ್ದು ಯಾರಪ್ಪಾ ಅದು ನನ್ನ ಕರೆದಿದ್ದು ಅಂತ ಕೂಗಿದ. ಆಗ ಅಫ್ಜಲ್ ಖಾನ್, ನಾನೇ ನಾನೇ ಅಂತ ಎದ್ದು ನಿಂತ. ಖೇಮು ನೇರ ಅವನ ತಲೆಗೆ ಗುಂಡು ಹಾರಿಸಿ ಕೂತ್ಕೊಂಡ.

ಲೈನ್ ಮ್ಯಾನ್

ಪ್ರಪಂಚದ ಅತಿ ದೊಡ್ಡ ಕುಡುಕ ಯಾರು?

-ಬಾರಿಗೂ ಕುಡ್ಕೊಂಡೇ ಹೋಗುವವನು

ಸೋಡಾ ಕುಡಿಯೋಕೆ ಕಂಪನಿ ಕೊಡೋ ‘ಗೆಳೆಯ’ -ಸೋಡಾ ‘ಬಡ್ಡಿ’

ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?
-ತೇಲುತ್ತಾ ತೇಲೋಕೆ
ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?
-Uಛಿ ಟ್ಠ್ಝb’ಠಿ ಡಿಜ್ಞಿ bಛಿ ಠಿಟ bಛಿಡಿ

ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ ?
-ನಿಂಗೇನ್ ಎರಡ್ ಕೋಡಿದೆಯಾ?
ಭಾರತದ ನಾವೇ ತಯಾರಿಸಿದ ಆಪ್‌ಗಳನ್ನ ಏನೆನ್ನಬಹುದು?
-ಅಪ್ ನೇ ಆಪ್

ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದು ಹೋಗಿರುವ ಕಾರಿನ ಟೈರ್
-ಟೈರ್ಡ್
ಆರ್‌ಸಿಬಿ ಹೀನಾಯವಾಗಿ ಸೋಲುತ್ತಿರುವ ಕ್ರಿಕೆಟ್ ಮ್ಯಾಚ್ ನಡೆಯುವಾಗ ಸ್ನೇಹಿತರಿಬ್ಬರ ನಡುವೆ ಮಾತುಕತೆ
-ಮಗಾ, ನಾನು ಹೊರಗಡೆ ಇದ್ದೀನಿ, ಮ್ಯಾಚ್ ನೋಡಕಾಗ್ತಿಲ್ಲ
-ಮಗಾ, ನಾನು ಮನೇಲೇ ಇದ್ದೀನಿ, ಆದ್ರೂ ಈ ಮ್ಯಾಚ್ ನೋಡಕಾಗ್ತಿಲ್ಲ

ಮ್ಯಾರಥಾನ್ ಓಟದ ಸ್ಪರ್ಧೆಯ ಕಾಮೆಂಟರಿ
-ರನ್ನಿಂಗ್ ಕಾಮೆಂಟರಿ