Sunday, 24th November 2024

ಹಾಲಾಹಲವಾಗುತ್ತಿರುವ ಹಾಲಿನ ವಿವಾದ

ಅಶ್ವತ್ಥಕಟ್ಟೆ

ranjith.hoskere@gmail.com

ಕೆಎಂಎಫ್ ಗೆ ನಿಜವಾಗಿಯೂ ಅಮುಲ್‌ನಿಂದ ದೊಡ್ಡ ಪ್ರಮಾಣದ ಪೈಪೋಟಿ ಎದುರಾಗುವುದೇ ಎನ್ನುವುದನ್ನು ನೋಡುವು ದಾದರೆ, ಅಮುಲ್‌ನ ಗಾತ್ರ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ಕೆಎಂಎಫ್ ಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವದರಲ್ಲಿ ಎರಡನೇ ಮಾತಿಲ್ಲ.

ಚುನಾವಣಾ ಕಾವು ಪಡೆದಿರುವ ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ಬಹುದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವೆಂದರೆ, ಅಮುಲ್ ಹಾಗೂ ಕೆಎಂಎಫ್ ನದ್ದಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಮುಲ್‌ನ ಆನ್‌ಲೈನ್ ಮಾರಾಟವನ್ನೇ ಚುನಾವಣಾ ಸರಕಾಗಿಟ್ಟು ಕೊಂಡಿದ್ದರೆ, ಬಿಜೆಪಿ ನಾಯಕರಿಗೆ ಚುನಾವಣಾ ಸಮಯದಲ್ಲಿ ಇಲ್ಲದ ಈ ವಿವಾದ ದಿಂದ ತಪ್ಪಿಸಿಕೊಳ್ಳುವುದರೊಂದಿಗೆ ಸಮರ್ಥಿಸಿಕೊಳ್ಳುವುದು ಸವಾಲಿನದ್ದಾಗಿದೆ.

ಆದರೆ ನಂದಿನಿ ಹಾಗೂ ಅಮುಲ್ ವಿಷಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ರಾಜಕೀಯ ಮೇಲಾಟದಲ್ಲಿ ಹುರುಳಿದೆಯೇ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಚುನಾವಣಾ ಸಮಯದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ, ಜನರ ಮನಸಿನಲ್ಲಿ ‘ಆಡಳಿತ ವಿರೋಧಿ ಸೃಷ್ಟಿಸುವ’ ನಿಟ್ಟಿನಲ್ಲಿ ಈ ರೀತಿಯ ಪ್ರಯತ್ನಗಳು ಸದಾ ನಡೆಯುತ್ತಾ ಬಂದಿದೆ. ಅಮುಲ್ ವಿಚಾರವೂ ಅದರ ಭಾಗವಾಗಿರಬಹುದು. ಆದರೆ ಅಮುಲ್ ಹಾಲು, ಮೊಸರಿನ ಆನ್‌ಲೈನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು ಭವಿಷ್ಯದಲ್ಲಿ ರಾಜ್ಯದ ರೈತರಿಗೆ ಹಾಗೂ ಕೆಎಂಎಫ್ ಗೆ ತೊಂದರೆಯಾಗಲಿದೆಯೇ ಎನ್ನುವುದು ಅನೇಕರಲ್ಲಿ ರುವ ಗೊಂದಲವಾಗಿದೆ.

ಈ ರೀತಿ ಯಾವುದೇ ಗೊಂದಲಗಳಿಲ್ಲ ಎನ್ನುವ ವಾದವನ್ನು ಬಿಜೆಪಿ ನಾಯಕರು ಸತತವಾಗಿ ಮಂಡಿಸುವುದರೊಂದಿಗೆ, ಅಮುಲ್ ಮಾರುಕಟ್ಟೆಗೆ ಬಂದಿರುವುದನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರು ಅಮುಲ್‌ನ ಈ ನಡೆ, ‘ಹೈನು ಉದ್ಯಮವನ್ನು ನಂಬಿಕೊಂಡಿರುವ ರೈತರಿಗೆ ಮರಣಶಾಸನ’ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಬಹುತೇಕ ಸಹಕಾರಿಗಳ ಪ್ರಕಾರ ಅಮುಲ್ ಸಂಸ್ಥೆ ಕರ್ನಾಟಕಕ್ಕೆ ಬರುವುದರಿಂದ, ಕೆಎಂಎಫ್ ಗೆ ಯಾವುದೇ ಸಮಸ್ಯೆ
ಯಾಗುವುದಿಲ್ಲ. ಏಕೆಂದರೆ, ಕೆಎಂಎಫ್ ಕಳೆದ ನಾಲ್ಕು ದಶಕಗಳಿಂದ, ರಾಜ್ಯದಲ್ಲಿ ಮಾತ್ರವಲ್ಲದೇ ದೇಶ-ವಿದೇಶದಲ್ಲಿ
ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ.

ಅಮುಲ್ ಗುಜರಾತ್ ಮೂಲದ್ದು ಎನ್ನುವ ಏಕೈಕ ಕಾರಣವನ್ನು ಮುಂದಿಟ್ಟುಕೊಂಡು, ಒಕ್ಕೂಟ ವ್ಯವಸ್ಥೆಯಲ್ಲಿರುವ ಪರಸ್ಪರ
ಕೊಡು-ಕೊಳ್ಳುವಿಕೆಯನ್ನೇ ವಿರೋಧಿಸುವುದರಿಂದ ಮುಂದಿನ ದಿನದಲ್ಲಿ ಕೆಎಂಎಫ್ ನ ಉತ್ಪನ್ನಗಳಿಗೂ ಹೊರರಾಜ್ಯದಲ್ಲಿ ಇದೇ ಪರಿಸ್ಥಿತಿ ಎದುರಾದರೆ ಗತಿಯೇನು ಎನ್ನುವ ಪ್ರಶ್ನೆಗೆ ಬಹುತೇಕ ಬಳಿ ಉತ್ತರವಿಲ್ಲ. ಹಾಗೇ ನೋಡಿದರೆ, ಕರ್ನಾಟಕದ ಹೈನು ಮಾರುಕಟ್ಟೆಗೆ ಇತರೆ ರಾಜ್ಯದ ಸಂಸ್ಥೆಗಳು ಕಾಲಿಟ್ಟಿರುವುದು ಇದೇ ಮೊದಲಲ್ಲ.

ಈಗಾಗಲೇ ತೆಲಂಗಾಣದ ಮೂಲದ ದೊಡ್ಲ, ಆಂಧ್ರಪ್ರದೇಶ ಮೂಲದ ಹೆರಿಟೇಜ್, ತಮಿಳುನಾಡು ಮೂಲದ ಮಿಲ್ಕಿ ಮಿಸ್ಟ್, ಆರೋಗ್ಯ, ತಿರುಮಲ, ಹಟ್ಸನ್ ಈಗಾಗಲೇ ಹೈನು ಮಾರುಕಟ್ಟೆಯಲ್ಲಿವೆ. ಅದಕ್ಕೂ ಮುಖ್ಯವಾಗಿ ಕರ್ನಾಟಕದಲ್ಲಿ ಹಾಲು, ಮೊಸರನ್ನು ಹೊರತುಪಡಿಸಿ, ಅಮುಲ್‌ನ ಇತರೆ ಉತ್ಪನ್ನಗಳು ದಶಕಗಳಿಂದ ಮಾರುಕಟ್ಟೆ ಚಾಲ್ತಿಯಲ್ಲಿದೆ. ಇಷ್ಟಾದರೂ,
ಕೆಎಂಎ- ವ್ಯಾಪಾರದಲ್ಲಿ ಕುಂಠಿತವಾಗಿಲ್ಲ. ಬದಲಿಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅವರು ಹೇಳುವಂತೆ, ಕಳೆದ ಐದು ವರ್ಷದಲ್ಲಿ ಶೇ.೨೫ರಷ್ಟು ಮಾರಾಟ ವಿಸ್ತೀರ್ಣ ಹೆಚ್ಚಾಗಿದೆ.

ಸುಮಾರು ೧೫ಕ್ಕೂ ಹೆಚ್ಚು ರಾಜ್ಯಗಳಿಗೆ ಕೆಎಂಎಫ್ ತನ್ನ ವ್ಯಾಪಾರದ ಕಬಂದ ಬಾಹುಗಳನ್ನು ಕಳೆದೊಂದು ದಶಕದಲ್ಲಿ ವಿಸ್ತರಿಸಿಕೊಂಡಿದೆ. ನಂದಿನಿ ಉತ್ಪನ್ನ ಗೋವಾದಲ್ಲಿ ಎರಡನೇ ಸ್ಥಾನದಲ್ಲಿ, ಮೂರನೇ ಸ್ಥಾನದಲ್ಲಿ ಮುಂಬೈ ಹಾಗೂ ಹೈದರಾಬಾದ್ ನಲ್ಲಿ ಅತಿಹೆಚ್ಚು ಹಾಲು ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ದೆಹಲಿ, ಚೆನ್ನೈ ಹಾಗೂ ನಾಗಪುರದಲ್ಲಿ ಮುಂದಿನ ಕೆಲ ವರ್ಷದಲ್ಲಿ ‘ಕಿಂಗ್’ ಆಗುವ ಲೆಕ್ಕಾಚಾರದಲ್ಲಿ ಕೆಎಂಎಫ್ ಯಿದೆ. ಹೀಗಿರುವಾಗ, ಕರ್ನಾಟಕದಲ್ಲಿ ಕೆಎಂಎಫ್
ಮಾತ್ರವಿರಬೇಕು ಎನ್ನುವ ವಾದವನ್ನು ನಾವು ಮುಂದಿಟ್ಟರೆ, ಇನ್ನುಳಿದ ರಾಜ್ಯದವರು ಇದೇ ವಾದವನ್ನು ಇಟ್ಟರೆ ಕೆಎಂಎಫ್ ಬಹುದೊಡ್ಡ ಪ್ರಮಾಣದ ಹೊಡೆತ ಬೀಳುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ಒಂದು ಮಜಾ ಎಂದರೆ, ಅಮುಲ್ ಐಸ್ ಕ್ರೀಂ ಉತ್ಪಾದನೆಯಾಗುವುದು, ಹಾಸನದ ಹಮುಲ್‌ನಲ್ಲಿ ಎನ್ನುವುದನ್ನು ಅನೇಕರಿಗೆ ಗೊತ್ತಿಲ್ಲ. ಇದರೊಂದಿಗೆ ಬೆಂಗಳೂರಿನ ಮದರ್ ಡೈರಿ ಘಟಕದಲ್ಲಿ ಅಮುಲ್ ಐಸ್ ಕ್ರೀಮ್ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಇದಿಷ್ಟೇ ಅಲ್ಲದೇ, ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರಗಳು ಅಧಿಕಾರದಲ್ಲಿದ್ದಾಗ, ಅಮುಲ್ ಮಾರುಕಟ್ಟೆ ಪ್ರವೇಶಿಸಲು ಅಗತ್ಯವಿರುವ ನೆರವನ್ನು ನೀಡಿರುವುದಕ್ಕೆ ಹಲವು ದಾಖಲೆಗಳಿವೆ. ಅವರ ಸಮಯದಲ್ಲಿ ಅಮುಲ್
ಹಾಗೂ ಇನ್ನಿತ್ತರೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡಿ, ಇದೀಗ ವಿರೋಧಿಸುತ್ತಿರುವುದು ‘ರಾಜಕೀಯ ಲಾಭ’ಕ್ಕೆ
ಎನ್ನುವುದು ಸ್ಪಷ್ಟವಾಗುತ್ತಿದೆ.

ಈ ಎಲ್ಲದರ ನಡುವೆ ಕೆಎಂಎಫ್ ಗೆ ನಿಜವಾಗಿಯೂ ಅಮುಲ್‌ನಿಂದ ದೊಡ್ಡ ಪ್ರಮಾಣದ ಪೈಪೋಟಿ ಎದುರಾಗುವುದೇ ಎನ್ನುವುದನ್ನು ನೋಡುವುದಾದರೆ, ಅಮುಲ್‌ನ ಗಾತ್ರ, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಎಲ್ಲ ವಿಭಾಗದಲ್ಲಿಯೂ ಕೆಎಂಎಫ್ ಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎನ್ನುವದರಲ್ಲಿ ಎರಡನೇ ಮಾತಿಲ್ಲ. ಆ ಕಾರಣಕ್ಕಾಗಿಯೇ, ಕರ್ನಾಟಕದ ನಂದಿನಿಯನ್ನು ಉಳಿಸಬೇಕು ಎನ್ನುವ ಮನೆಯಲ್ಲಿಯೂ ಅಮುಲ್‌ನ ಬೆಣ್ಣೆ, ಐಸ್ ಸ್ಕ್ರೀಂಗಳನ್ನು ಇಟ್ಟುಕೊಂಡಿರುವುದು. ಆದರೆ
ಹಾಲು, ಮೊಸರಿನ ವಿಷಯದಲ್ಲಿ ಈ ರೀತಿಯಾಗುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ಏಕೆಂದರೆ ಹಾಲನ್ನು ರೈತರಿಂದ ಪಡೆದ ಒಂದು ಅಥವಾ ಎರಡು ದಿನದಲ್ಲಿ ಗ್ರಾಹಕರ ಮನೆಗೆ ತಲುಪಿಸಬೇಕು. ಮೊಸರಿ ಗಾದರೆ ಇನ್ನೊಂದೆರೆಡು ದಿನ ಹೆಚ್ಚುವರಿ ಅವಕಾಶವಿರುತ್ತದೆ. ಆದ್ದರಿಂದಲೇ ಕೆಎಂಎಫ್ ರಾಜ್ಯಾದ್ಯಂತ ೧೩ ಘಟಕಗಳನ್ನು ಸ್ಥಾಪಿಸಿ ಅಲ್ಲಿಂದಲೇ ಗ್ರಾಹಕರಿಗೆ ಸೇರುವಂತೆ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಗುಣಮಟ್ಟದ ಹಾಲು ಗ್ರಾಹಕರಿಗೆ ಸಿಗುತ್ತಿದೆ. ಆದರೆ ಅಮುಲ್ ಒಂದು ವೇಳೆ ಹಾಲು, ಮೊಸರನ್ನು ಗುಜರಾತ್ ನಿಂದ ಕರ್ನಾಟಕಕ್ಕೆ ರವಾನಿಸಬೇಕೆಂದರೆ ಕನಿಷ್ಠ ನಾಲ್ಕೈದು ದಿನಗಳ ಅಗತ್ಯವಿದೆ.

ಒಂದು ವೇಲೆ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಘಟಕ ಸ್ಥಾಪಿಸಿ ಜನರಿಗೆ ತಲುಪಿಸಬೇಕೆಂದರೆ ಕನಿಷ್ಠ ಎರಡು ದಿನಗಳು ಬೇಕು. ಅಲ್ಲಿಗೆ ಹಾಲು ಕೆಡದಂತೆ ರಾಸಾಯನಿಕ ಬಳಕೆ ಅನಿವಾರ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ಗುಣಮಟ್ಟದಲ್ಲಿ ಸಮಸ್ಯೆ ಯಾಗುವುದು ಖಚಿತ. ಆ ಸಹಜವಾಗಿಯೇ ಗ್ರಾಹಕರು ಅಮುಲ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ಇದರೊಂದಿಗೆ
ಕರ್ನಾಟಕದಲ್ಲಿ ಕೆಎಂಎಫ್ ಮಾರುಕಟ್ಟೆಗೆ ಅಮುಲ್‌ನಿಂದ ತೊಂದರೆಯಾಗುವುದಿಲ್ಲ ಎನ್ನುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಅರ್ಧ ಲೀಟರ್ ನಂದಿನಿ ಹಾಲನ್ನು ಕೆಎಂಎಫ್ 23 ರು.ಗಳಿಂದ 30 ರು,ಗಳವರೆಗೆ ವಿವಿಧ ಶ್ರೇಣಿಯಲ್ಲಿ ಮಾರಾಟ ಮಾಡುತ್ತಿದೆ. ಆದರೆ ಅಮುಲ್ 40ರಿಂದ 54 ರು. ಅಂತರದಲ್ಲಿ ಮಾರಾಟ ಮಾಡುತ್ತಿದೆ.

ಒಂದು ವೇಳೆ ಕರ್ನಾಟಕದಲ್ಲಿ ಘಟಕ ಆರಂಭಿಸಿದರೆ, ಖರ್ಚು ವೆಚ್ಚವೆಲ್ಲ ಹೋಲಿಸಿ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವುದು ಸ್ಪಷ್ಟ. ಹೀಗಿರುವಾಗ, ಕಡಿಮೆ ಬೆಲೆಗೆ ಗುಣಮಟ್ಟದ ಹಾಲನ್ನು ಕೊಡುತ್ತಿರುವ ಕೆಎಂಎಫ್ ಬದಲಿಗೆ, ಮತ್ತೊಂದು ಸಂಸ್ಥೆಗೆ ಗ್ರಾಹಕರು ‘ಶಿಫ್ಟ್’ ಆಗುವುದಾದರೂ ಏಕೆ ? ಎನ್ನುವ ಮಾತನ್ನು ಅನೇಕರು ಎತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಎಲ್ಲವನ್ನು ಮೀರಿ ‘ರೇ’ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಕೆಎಂಎಫ್ ಅನ್ನು ಮುಚ್ಚಲು ಮುಂದಾಗಿದೆ ಎನ್ನುವ
ಆರೋಪವನ್ನು ಮಾಡುತ್ತಿದ್ದಾರೆ.

ಆರಂಭದಲ್ಲಿ ಆನ್‌ಲೈನ್ ವ್ಯಾಪಾರ ಮಾಡುವ ಅಮುಲ್‌ಗೆ ಬಿಜೆಪಿ ನಾಯಕರು ಮುಂದಿನ ದಿನದಲ್ಲಿ ಜಾಗ ನೀಡಿ, ಘಟಕ ಗಳನ್ನು ಆರಂಭಿಸಿ ಕೆಎಂಎಫ್ ಬದಲಿಗೆ ಅಮುಲ್‌ಗೆ ರೈತರು ಹಾಲು ಮಾರಾಟ ಮಾಡುವಂತೆ ಮಾರುತ್ತಾರೆ. ಅಮಿತ್ ಶಾ, ಮೋದಿ ಅವರ ಕಾರಣಕ್ಕೆ ಈ ಸಂಗತಿಗಳು ಬಿಜೆಪಿಗರಿಗೆ ಗೊತ್ತಿದ್ದರೂ, ಚಕಾರ ಎತ್ತುತ್ತಿಲ್ಲ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಕೆಲ ಕಾಂಗ್ರೆಸಿಗರು ಒಂದು ಹೆಜ್ಜೆ ಮುಂದೆ ಹೋಗಿ, ಅಮುಲ್ ಜತೆ ಕೆಎಂಎಫ್ ಸಂಸ್ಥೆಯನ್ನೇ ವಿಲೀನ ಮಾಡುತ್ತಾರಂತೆ ಎನ್ನುವ ಮಾತನ್ನು ಆಡಿದ್ದಾರೆ.

ಆದರೆ ಕರ್ನಾಟಕದಲ್ಲಿರುವ ಎಲ್ಲ ಕೆಎಂಎಫ್ ಘಟಕಗಳು ಸ್ವತಂತ್ರ ಘಟಕಗಳಾಗಿದ್ದು, ಅದರ ಉಸ್ತುವಾರಿಗೆ ಚುನಾವಣೆಯಲ್ಲಿ ಗೆದ್ದು ಬಂದಿರುವ ಪ್ರತ್ಯೇಕ ಮಂಡಲಿ ಇರತ್ತದೆ. ಆದ್ದರಿಂದ ಈ ಘಟಕಗಳನ್ನು ವಿಲೀನ ಮಾಡುವುದಕ್ಕೆ ಅವಕಾಶವಿಲ್ಲ ಹಾಗೂ ಘಟಕಗಳು ಲಾಭದಾಯಕವಾಗಿರುವಾಗ ಮಾರಾಟ ಮಾಡುವುದಕ್ಕೆ ಪ್ರತಿನಿಧಿಗಳು ಏಕೆ ಒಪ್ಪುತ್ತಾರೆ? ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ವಿರೋಧಿ ಸಬೇಕು ಎನ್ನುವ ಕಾರಣಕ್ಕೆ ಅವರಿಬ್ಬರ ತವರು ರಾಜ್ಯವಾಗಿರುವ ಗುಜರಾತ್ ಮೂಲದ ಅಮುಲ್ ಅನ್ನು ವಿರೋಧಿಸುವುದು ಸರಿಯಲ್ಲ. ರಾಜಕೀಯ ಕಾರಣಕ್ಕೆ, ಹೈನುಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸಿರುವ ಅಮುಲ್ ಅನ್ನು ವಿರೋಧಿಸುವುದು ಕರ್ನಾಟಕಕ್ಕೆ ಒಳ್ಳೆಯ ಬೆಳವಣಿಗೆಯಲ್ಲ.

ಅಂದ ಮಾತ್ರಕ್ಕೆ ಕಾಂಗ್ರೆಸ್ ನಾಯಕರು ಹೇಳುತ್ತಿರುವಂತೆ, ಅಮುಲ್ ಘಟಕವನ್ನು ಕರ್ನಾಟಕದಲ್ಲಿ ಆರಂಭಿಸಲು
ಅಥವಾ ಕೆಎಂಎ- ಅನ್ನು ಅದರೊಂದಿಗೆ ಯಾವುದೇ ರೀತಿಯಲ್ಲಿ ವಿಲೀನಗೊಳಿಸುವುದು ಕನ್ನಡದ ಅಸ್ಮಿತೆಗೆ ಧಕ್ಕೆಯಾಗುತ್ತದೆ ಎನ್ನುವದರಲ್ಲಿ ಎರಡನೇ ಮಾತಿಲ್ಲ. ಒಂದು ವೇಳೆ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿರುವಂತೆ, ಕೇವಲ ಒಂದು ಉತ್ಪನ್ನವಾಗಿ ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಬಂದಿದ್ದರೆ, ಅದನ್ನು ಸ್ವೀಕರಿಸುವುದು ಬಿಡುವುದು ಗ್ರಾಹಕರ ವಿವೇಚನಗೆ ಬಿಟ್ಟಿರುವ ಸಂಗತಿ. ಈಗಿರುವ ಎಂಟತ್ತು ಹಾಲು ಸಂಸ್ಥೆಗಳ ರೀತಿ ಅಮುಲ್ ಒಂದಾಗಿ ಹೋದರೆ, ಕರ್ನಾಟಕಕ್ಕೆ ಆಗುವ ನಷ್ಟವೇನು ಇಲ್ಲ ಎನ್ನುವುದಂತೂ ಸ್ಪಷ್ಟ.