Sunday, 24th November 2024

ಬಿಜೆಪಿ ಇಂಥದ್ದೊಂದು ಪ್ರಯೋಗಕ್ಕೆ ಮುಂದಾಗಲಿ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ನಿರಂತರ ಕಾಡುವ, ಒಂದು ಕುಟುಂಬದ ಗುಲಾಮಗಿರಿ, ವಂಶಪ್ರತಿಷ್ಠೆಗಾಗಿ ಅಧಿಕಾರಕ್ಕಾಗಿ ಹಸಿದ ನರಿಗಳಂತಾಗಿರುವ ದೇಶಗೇಡಿಗಳನ್ನು ಅಧಿಕಾರದಿಂದ ದೂರವಿಡಲು ಕೆಲ ಕ್ಷೇತ್ರಗಳಲ್ಲಿ ಶ್ರೀಕೃಷ್ಣನ ತಂತ್ರವನ್ನು ಅಳವಡಿಸುವ ಅನಿವಾರ್ಯತೆಯಲ್ಲಿದೆ ಕೇಂದ್ರ ಬಿಜೆಪಿ.

ರಾಜಕಾರಣದಲ್ಲಿರುವಂತಹ ವೈಚಿತ್ರ್ಯ ಬಹುಶಃ ಯಾವ ಕ್ಷೇತ್ರದಲ್ಲೂ ಇರಲು ಸಾಧ್ಯವಿಲ್ಲ. ಮನುಷ್ಯ ಸಂಬಂಧಗಳಲ್ಲಿ ಯಾರೂ ಏಕಾಏಕಿ ಶತ್ರುಗಳಾಗು ವುದಿಲ್ಲ. ಒಡಹುಟ್ಟಿದವರಿಬ್ಬರು ವೈರಿಗಳಾದರೂ ಮೊದಲಿಗೆ ಕೂಡಿ ಬಾಳಿ ಪರಸ್ಪರ ಭಿನ್ನಾಭಿಪ್ರಾಯ ಗಳು ಮೂಡಿ ಸಹನೆ ಅಸಹನೆ ತ್ಯಾಗ ಸೋಲು ಇವುಗಳನ್ನೆಲ್ಲ ದಾಟಿ ಒಂದು ದಿನ ಇಬ್ಬರೂ ಬೇರೆಯಾಗಿ ಯುದ್ಧವಿಲ್ಲದ ಶತ್ರುಗಳಾಗಿ ಬಾಳಬಹುದಷ್ಟೇ.

ಇದು ಹೆತ್ತವರು-ಮಕ್ಕಳು, ಗಂಡ-ಹೆಂಡತಿ, ಗೆಳೆತನದ ನಡುವಿನ ಸಂಬಂಧ ಗಳ ಮಧ್ಯೆಯೂ ಆಗಬಹುದು. ಆದರೆ ರಾಜಕಾರಣದಲ್ಲಿ ತನ್ನಿಚ್ಛೆಯಂತೆ ಅಧಿಕಾರ ಪದವಿ ದೊರಕದಿದ್ದರೆ ರಾತ್ರಿ ಒಂದೇ ತಟ್ಟೆಯಲ್ಲಿ ಉಂಡವರು ಬೆಳಗ್ಗೆ ಎದ್ದು ಹೊಡೆದಾಡಿಕೊಳ್ಳುವಷ್ಟು ವೈರಿಗಳಾಗಿ ಬಿಡುತ್ತಾರೆ. ಇಲ್ಲಿ ನಿಯತ್ತು ಕೃತಜ್ಞತೆ ವಿಶ್ವಾಸ ಗೌರವವೆಲ್ಲವೂ ಕೇವಲ ಅಧಿಕಾರ ವೆಂಬ ಒಂದೇ ಮಾನದಂಡದ ಮೇಲೆ ನಿಂತಿರುತ್ತದೆ. ಈ ರಾಜಕಾರಣಿಗಳು ಪ್ರಾಣಿಗಳ ಸಂಬಂಧಗಳಿಗಿಂತ ಹೀನಾಯವಾಗಿ ನಡೆದುಕೊಳ್ಳುತ್ತಾರೆ.

ನಿನ್ನೆಯವರೆಗೂ ತನ್ನ ಪಕ್ಷ ನನ್ನ ತಾಯಿ ಇದ್ದಂತೆ ಎನ್ನುತ್ತಿದ್ದವನು ಇಂದು ಮತ್ತೊಂದು ಪಕ್ಷ ಸೇರಿ ಅದೇ ತಾಯಿ ಪಕ್ಷವನ್ನು
ಜರಿಯುತ್ತಾನೆ. ಹೀಗೆ ರಾಜಕಾರಣವೆಂಬುದು ನಿಯತ್ತಿಲ್ಲದ ಕ್ಷೇತ್ರ ಎಂಬುದಕ್ಕೆ ಇಂದು ಹಸಿಹಸಿ ಪುರಾವೆಗಳನ್ನು ನೋಡು ತ್ತಿದ್ದೇವೆ. ಕಂಠಮಟ್ಟ ಕುಡಿದು ರಸ್ತೆಯಲ್ಲಿ ಸತ್ತವನಂತೆ ಬಿದ್ದಿರುವ ಕುಡುಕನನ್ನು ಮಾರನೇ ದಿನ ಬೆಳಗ್ಗೆ ಯಾಕೆ ನೀನು
ಇಷ್ಟೊಂದು ಕುಡೀತೀಯಾ? ಎಂದು ಕೇಳಿ ನೋಡಿ. ಆತನಲ್ಲಿ ಸ್ಪಷ್ಟ ಉತ್ತರವಿರುವುದಿಲ್ಲ. ಆತನಿಗೆ ಒಳ್ಳೆಯ ಹೆಂಡತಿ
ಮಕ್ಕಳು ಸಂಸಾರ, ಸಂಪಾದನೆಗಳಿದ್ದರೂ ಹೀಗೆ ಕುಡಿಯಲೇ ಬೇಕು ಎಂಬ ವಾಂಛೆಗಳಿರುತ್ತದಲ್ಲವೇ ಅಂಥದ್ದೇ ರೋಗ ಈ ರಾಜಕಾರಣಿ ಗಳಿಗೆ ಪದವಿ ಅಽಕಾರದ ಮೇಲಿರುತ್ತದೆ.

ಲಕ್ಷ್ಮಣ ಸವದಿ, ಜಗದೀಶ್‌ಶೆಟ್ಟರ್, ಎಂಟಿಬಿ ನಾಗರಾಜ್, ಶಾಮನೂರ ಶಿವಶಂಕರಪ್ಪ, ಸಿದ್ದರಾಮಯ್ಯ, ಜಿ.ಪರಮೇಶ್ವರ್, ಡಿ.ಕೆ. ಶಿವಕುಮಾರ್, ವಿ. ಸೋಮಣ್ಣ, ಎಚ್.ಡಿ. ಕುಮಾರಸ್ವಾಮಿ, ಭವಾನಿ ರೇವಣ್ಣ, ಜನಾರ್ದನರೆಡ್ಡಿ ಅಂಥವರನ್ನು ನಿಮಗೆ ಅಧಿಕಾರ ಪದವಿಗಳ ಮೇಲೆ ಯಾಕಿಷ್ಟೊಂದು ಆಸೆ ವ್ಯಾಮೋಹ? ಎಂದು ಕೇಳಿನೋಡಿ. ಇಂಥ ರಾಜಕಾರಣಿಗಳಿಗೆ ಐಷರಾಮಿ ವೈಭೋಗವಿರುತ್ತದೆ, ಮನೆಮಠಗಳೆಲ್ಲದರ ಯೋಗವಿರುತ್ತದೆ.

ಸಾವಿರಾರು ಬಡವರನ್ನು ತಮ್ಮ ಸ್ವಂತ ಹಣ ವ್ಯಯಿಸಿ ಉದ್ಧಾರ ಮಾಡಬಹುದಾದ ಶ್ರೀಮಂತಿಕೆ ಇರುತ್ತದೆ. ಆದರೆ ರಸ್ತೆ ಬದಿಯ ಜೋಪಡಿಯಲ್ಲಿ ವಾಸಿಸುವ ಭಿಕ್ಷುಕನಿಗಿರುವ ತೃಪ್ತಿ ನೆಮ್ಮದಿ ನಿದ್ರೆ ಇಂಥ ರಾಜಕಾರಣಿಗಳಿಗಿರುವುದಿಲ್ಲ. ಇಂಥವರು ಅದ್ಯಾವ ಮಟ್ಟಕ್ಕೆ ಮತಿಹೀನರಾಗುತ್ತಾರೆಂದರೆ ಪ್ರಧಾನಿ ನರೇಂದ್ರಮೋದಿಯವರ ನೆರಳಿಗೂ ತಾಕುವಷ್ಟು ಯೋಗ್ಯತೆ ಗಳಿಲ್ಲದಿದ್ದರೂ ನೂರು ಏಣಿಗಳನ್ನು ಏರಿ ಮೋದಿಯವರನ್ನು ಹೀಯಾಳಿಸಿ ತಾನೊಬ್ಬ ದೊಡ್ಡ ಮುತ್ಸದ್ದಿ ಎಂದು ಬಿಂಬಿಸಿ ಕೊಳ್ಳುತ್ತಾರೆ. ಇಂಥವರೆಲ್ಲಾ ಕೇವಲ ಒಂದು ಜಾತಿಗೆ ಹೀರೋಗಳಷ್ಟೇ!

ಈಗ ನೋಡಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ಒಂದು ತಲೆಬೇನೆ ಕೆಲಸವಾಗಿದೆ. ಅಭ್ಯರ್ಥಿಯೊಬ್ಬನನ್ನು ಅಂತಿಮಗೊಳಿಸುವುದಕ್ಕೇ ಈ ಪಾಟಿ ಸವಾಲಾದರೆ ಇನ್ನು ಚುನಾವಣೆಯನ್ನು ಎದುರಿಸುವುದು ಗೆಲ್ಲುವುದು, ಪಕ್ಷವನ್ನು ಅಧಿಕಾರಕ್ಕೆ ತರುವುದು, ಸಚಿವ ಸಂಪುಟ ರಚಿಸುವುದು, ಪ್ರಮಾಣವಚನ ಸ್ವೀಕರಿಸುವುದು, ಸರಕಾರ ನಡೆಸುವುದು ಅಷ್ಟು
ಸುಲಭವಾಗಿ ಉಳಿದಿಲ್ಲ. ಮೊನ್ನೆ ಬಿಜೆಪಿ ಚುನಾವಣಾ ಅಭ್ಯರ್ಥಿಗಳಲ್ಲಿ ಕೆಲ ಹಿರಿಯರನ್ನು ಕೈಬಿಡಲಾಯಿತು. ಇದಕ್ಕಾಗಿ ವಯಸ್ಸಿನ ಮಾನದಂಡವನ್ನು ಬಳಸಿರುವುದು ಒಳ್ಳೆಯ ಬೆಳವಣಿಗೆ. ಬಿಜೆಪಿಯ ಇಂಥ ನಿಯಮ ಆರೋಗ್ಯಕರ ರಾಜಕಾರಣದ ಭವಿಷ್ಯಕ್ಕೆ ಅದ್ಭುತ ಔಷಧಿಯಾಗಿದೆ.

ಇದು ಸ್ವಚ್ಛ ರಾಜಕಾರಣ ವಲ್ಲದೇ ಆಡಳಿತಕ್ಕೆ ವೇಗ, ಯೋಗ್ಯತೆಗೆ ತಕ್ಕ ಪದವಿ, ಕಾರ್ಯಕ್ಷಮತೆ, ಹೊಸ ಹುರುಪನ್ನು
ಖಂಡಿತ ಸ್ಥಾಪಿಸಬಹುದಾಗಿದೆ. ಹೇಗೆಂದರೆ ನೋಡಿ. ಇನ್ಸ್‌ಪೆಕ್ಟರ್ ಆಗಿದ್ದು ಮತ್ತೆ ಸಬ್ ಇನ್ಸಪೆಕ್ಟರ್ ಆದವನಂತೆ ವಿಧಾನ ಸಭಾಧ್ಯಕ್ಷ- ಮುಖ್ಯಮಂತ್ರಿಯಾದ ಮೇಲು ಬರಿಯ ಮಂತ್ರಿಯಾಗಿದ್ದು ಈಗ ಶಾಸಕನಾಗಿ ಪೇದೆಯಂತೆಯೂ ಇರುತ್ತೇನೆಂಬ ಮನಸ್ಥಿತಿಯ ಜಗದೀಶ್ ಶೆಟ್ಟರ್ ಕೆ.ಎಸ್. ಈಶ್ವರಪ್ಪ ಗೋವಿಂದ ಕಾರಜೋಳ ಇಂಥ ಹಿರಿಯ ಮುತ್ಸದ್ದಿಗಳು ಪಕ್ಷಕ್ಕಾಗಿ
ದುಡಿದದ್ದನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಕೇವಲ ಹಿರಿಯರೆಂಬ ಕಾರಣಕ್ಕೆ ಟಿಕೆಟ್ ಪಡೆದು ಗೆದ್ದುಬರುತ್ತಾರೆ ಎಂದುಕೊಳ್ಳಿ. ಸರಕಾರಕ್ಕೆ ಬಹುಮತವೂ ಬರುತ್ತದೆ ಎಂದಿಟ್ಟುಕೊಳ್ಳಿ.

ಆಗ ಸಚಿವ ಸಂಪುಟ ರಚನೆಗಿಳಿದಾಗ ಇಂಥವರು ಮನೆಯ ಹಿರಿಯ ಮುತ್ತೈದೆಯರಂತೆ ಕಂಗೊಳಿಸುತ್ತಾರೆ. ಇವರಿಗೆ ಅರಿಷಿಣ ಕುಂಕುಮ ತಾಂಬೂಲ ನೀಡಲೇಬೇಕೆಂಬಂತೆ ಇವರನ್ನೆಲ್ಲಾ ಮಂತ್ರಿಗಳನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ತಲೆದೋರುತ್ತದೆ.

ನಾನು ಎಂಟು ಬಾರಿ ಗೆದ್ದಿದ್ದೇನೆ, ಮೂರುಬಾರಿ ಗೆದ್ದಿದ್ದೇನೆ, ನಾನು ಹಿರಿಯ ಸೀನಿಯರ್ ಎಂದೆಲ್ಲಾ ಹಕ್ಕು ಚಲಾಯಿಸುವ
ಶಾಸಕರ ಸಂಖ್ಯೆ ಹೆಚ್ಚಾದಗೆಲ್ಲಾ ಏನಾಗುತ್ತದೆ? ಸಂಪುಟ ರಚನೆ-ವಿಸ್ತರಣೆ ಎಂಬುದು ಯಮ ಸಾಹಸವಾಗುತ್ತದೆ. ಇರುವ ಮೂವತ್ತಾರು ಮಂತ್ರಿಗಿರಿಗೆ ಹಿರಿಯರ ಕೋಟಾದಲ್ಲಿ ಇಪ್ಪತ್ತೈದು ಮಂದಿ, ವಲಸಿಗರ ಕೋಟಾದಲ್ಲಿ ಹದಿನೈದು ಮಂದಿ ಕುಳಿತರೆ ಇನ್ನುಳಿದವರೇನು ಧ್ಯಾನಕ್ಕೆ ಕೂರುತ್ತಾರೆಯೇ? ಏಂಗೇಜ್‌ಮೆಂಟ್ ಆದ ಕೂಡಲೇ ಹನಿಮೂನ್ ಬೇಕೆನ್ನುವಂತೆ ಮೊದಲಬಾರಿಗೆ ಗೆದ್ದು ಬಂದವನೂ ಇಂದು ತನಗೆ ಮಂತ್ರಿಗಿರಿ ಬೇಕೆನ್ನುವಂಥ ಹಪಾಹಪಿಯಲ್ಲಿ ವಿಧಾನಸೌಧ ಪ್ರವೇಶಿಸು ತ್ತಾನೆ.

ಕೊಡದಿದ್ದರೆ ಹೋಟೆಲ್ ಮೀಟಿಂಗು, ಬಾಂಬೆ ಡೈಯಿಂಗು, ರೆಸಾರ್ಟ್ ರನ್ನಿಂಗು ಓಪನಿಂಗ್ ಆಗುತ್ತವೆ. ಇನ್ನು ಹಿರಿಯರನ್ನು ಕಡೆಗಣಿಸಿದರೆ ಅವರ ಪರ ಸ್ವಜಾತಿ ಕಾವಿಧಾರಿಗಳು ಬೀದಿಗಿಳಿಯುತ್ತಾರೆ. ಸರಕಾರದ ಉಸಿರುಗಟ್ಟಿಸುತ್ತಾರೆ. ಇಂಥ ಕಾವಿಗಳ ಅಲೌಕಿಕತನವೂ ಹಾಳಾಗಿ ಖಾದಿ-ಕಾವಿ ಎರಡೂ ಮಾನಮರ್ಯಾದೆ ಕಳೆದುಕೊಳ್ಳುತ್ತವೆ. ಸಾಲದೆಂಬಂತೆ ಜಾತಿಗಳ ನಡುವಿನ ಅಸಹನೆ ದ್ವೇಷ ಹೆಚ್ಚಾಗುತ್ತದೆ. ಹೀಗಾಗಿ ನೆಲೆಗೊಳ್ಳಬೇಕಾದ ಸರಕಾರ ಬೀಳುತ್ತದೆ. ನೋಡಿಲ್ಲವೇ
ಪ್ರಸ್ತುತ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿ ನಿಂದ ಸಂಪುಟ ವಿಸ್ತರಣೆಗಾಗಿ ಯಡಿಯೂರಪ್ಪ- ಬೊಮ್ಮಾಯಿ ಇಬ್ಬರೂ ಎಷ್ಟೆಲ್ಲಾ ಪಾಡುಪಟ್ಟರು.

ಕೊನೆಗೆ ಸಂಪುಟ ವಿಸ್ತರಣೆ ಯಾಗದೇ ಸರಕಾರದ ಅವಧಿಯೇ ಮುಗಿದುಹೋಯಿತು. ಅದೆಷ್ಟು ಇಲಾಖೆಗಳು ಮಂತ್ರಿಗಳಿಲ್ಲದೇ ಆಡಳಿತ ಯಂತ್ರಕ್ಕೆಅನಾನುಕುಲವಾಗಿರಬಹುದು ಯೋಚಿಸಿ! ಇನ್ನು ಬಹುಮತದಿಂದ ಸರಕಾರ ರಚಿಸಿದ ಮೇಲೆ ಹೆಂಡತಿ ಯನ್ನು ತವರಿಗೆ ಕಳಿಸಿ ಸುಮ್ಮನಿರಲಾಗದ ಗಂಡನಂತೆ ವಿರೋಧ ಪಕ್ಷಗಳು ಐದು ವರ್ಷ ಸರಕಾರದ ಆಡಳಿತದ ಸರಿತಪ್ಪು ಗಳನ್ನು ಪ್ರಶ್ನಿಸಿ ರಾಜ್ಯದ ಒಳಿತಿಗಾಗಿ ಕೆಲಸ ಮಾಡುತ್ತಾವೆಯೇ? ಆ ಕಾಲ ಎಂದೋ ಹೋಯಿತು. ಈಗೇನಿದ್ದರೂ
ಸರಕಾರ ವನ್ನು ಉರುಳಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿರುತ್ತವಷ್ಟೇ.

ಬಹುಸಂಖ್ಯಾತ ಹಿಂದೂಗಳ ಭಾವನೆಗಳನ್ನು ನಿರಂತರ ಕಾಡುವ, ಒಂದು ಕುಟುಂಬದ ಗುಲಾಮಗಿರಿ, ವಂಶಪ್ರತಿಷ್ಠೆಗಾಗಿ ಅಧಿಕಾರಕ್ಕಾಗಿ ಹಸಿದ ನರಿಗಳಂತಾಗಿರುವ ದೇಶಗೇಡಿಗಳನ್ನು ಅಧಿಕಾರದಿಂದ ದೂರವಿಡಲು ಕೆಲ ಕ್ಷೇತ್ರಗಳಲ್ಲಿ ಶ್ರೀಕೃಷ್ಣನ ತಂತ್ರವನ್ನು ಅಳವಡಿಸುವ ಅನಿವಾರ್ಯತೆಯಲ್ಲಿದೆ ಕೇಂದ್ರ ಬಿಜೆಪಿ. ಜತೆಗೆ ವಯಸ್ಸಿನ ಮಿತಿಯನ್ನಿಟ್ಟು ಒಂದಷ್ಟು ಹಿರಿಯರನ್ನು ಕೂರಿಸಿ ಬೆರಳೆಣಿಕೆಯಷ್ಟು ಅನುಭವಿಗಳನ್ನಷ್ಟೇ ಇಟ್ಟುಕೊಂಡು ಸಂಪುಟ ರಚನೆ ಮಾಡಿದರೆ ಹೊಸದಾಗಿ ಗೆದ್ದು ಬಂದ ಶಾಸಕರು ಸಚಿವ ಸ್ಥಾನಕ್ಕೆ ಆಸೆ ಪಡದೆ ಹುರುಪಿನಿಂದ ಕೆಲಸ ಮಾಡುತ್ತಾರೆ.

ಹೀಗಾದಲ್ಲಿ ಒತ್ತಡವಿಲ್ಲದ ಸಂಪುಟ ರಚನೆಯಾಗಿ ಸರಕಾರ ಸುಗಮವಾಗಿ ಪೂರ್ಣಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿ
ಪ್ರಗತಿ ಬೆಳವಣೆಗೆಗಳತ್ತ ಕಾರ್ಯನಿರ್ವಹಿಸುತ್ತದೆ. ಅದನ್ನು ಬಿಟ್ಟು ಹಿರಿಯರನ್ನೆಲ್ಲಾ ಗುಡ್ಡೆ ಹಾಕಿಕೊಂಡು ಅವರಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದು, ಅದರಲ್ಲಿಯೂ ದೊಡ್ಡ, ಒಳ್ಳೆಯ ಖಾತೆಗಳ ಬೇಡಿಕೆಗಳ ರಾದ್ಧಾಂತಗಳಾಗುವುದು. ಇಂಥ ಅನವಶ್ಯಕ ಮುಲಾಜುಗಳಿಗೆ ಒಳಗಾದರೆ ಸರಕಾರ ಇವರ ಪ್ರತಿಷ್ಠೆ ಸಂತೃಪ್ತಿಗಾಗಿ ನಡೆಯ ಬೇಕೋ ಅಥವಾ ಪ್ರಜಾಪ್ರಭುತ್ವ ಸಂವಿಧಾನದ ಆಶಯಗಳಿಗೆ ನಡೆಯಬೇಕೋ? ಇಂಥವರಿಂದಲೇ ದೇಶದಲ್ಲಿ ಇಂದು ಯಾವ ರಾಜ್ಯದಲ್ಲೂ ಸ್ಥಿರ ಸರಕಾರ ನಡೆಸಲು ಸಾಧ್ಯವೇ ಇಲ್ಲದಂತಾಗಿದೆ.

ಚುನಾವಣಾ ಆಯೋಗ ಸಾರ್ವಜನಿಕರ ಸಾವಿರಾರು ಕೋಟಿ ತೆರಿಗೆ ಹಣ ವ್ಯಯಿಸಿ ಚುನಾವಣೆ ನಡೆಸಿ ಬಹುಮತ ಬಂದರೂ
ಸಂಪುಟ ರಚನೆ-ಪುನಾರಚನೆ ಎಂಬುದು ಸರಕಾರಕ್ಕೆ ಶಾಪವಾಗಿ-ಗಂಡಾಂತರಕಾರಿಯಾಗಿ ಐದು ವರ್ಷಗಳ ಬಲಿಷ್ಠ ಸರಕಾರ ನಡೆಸುವುದೇ ಒಂದು ದೊಡ್ಡ ತಲೆನೋವಾಗಿಬಿಟ್ಟಿದೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಜಾತಿಗಳ ಬಾಧೆಗಳ ಚಕ್ರವ್ಯೂಹವನ್ನು ಭೇದಿಸಿಯೇ ಸರಕಾರ ನಡೆಯಬೇಕು.

ಬಿಜೆಪಿ ವಯಸ್ಸಿನ ಮಿತಿಯ ನಿಯಮದಂತೆ ಮತ್ತೊಂದು ಪ್ರಯೋಗಕ್ಕೆ ಇಳಿಯಬೇಕಿದೆ. ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಒಂದೊಂದು ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಗುರುತಿಸಿ ಅವರಿಗೆ ಕ್ಷೇತ್ರದಲ್ಲಿರುವ ಸಮಸ್ಯೆಗಳು ಅದಕ್ಕೆ ಪರಿಹಾರಗಳು, ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು, ಜಾರಿಯಾಗಬೇಕಾದ ಯೋಜನೆಗಳು ಹೀಗೆ ತಮ್ಮದೇ
ಆದ ಚಿಂತನೆಗಳಿಂದ ಕ್ಷೇತ್ರವನ್ನು ಹೇಗೆಲ್ಲಾ ಮಾದರಿಯನ್ನಾಗಿ ರೂಪಿಸುತ್ತೇನೆಂದು ಒಂದು ಯೋಜನಾ ವರದಿಯನ್ನು ಸಿದ್ಧಪಡಿಸುವ ಪಾರದರ್ಶಕ ಟಾಸ್ಕ್ ನೀಡಿ ಅದಕ್ಕೆ ಕ್ಷೇತ್ರದಲ್ಲಿರುವ ಶಾಲೆ ವಿದ್ಯಾಸಂಸ್ಥೆಗಳ ಶಿಕ್ಷಕರು, ಪ್ರಜ್ಞಾವಂತ ಹಿರಿಯರು ಮತದಾರರಿಂದ ಪ್ರಾಥಮಿಕ ಅರ್ಹತಾ ಪತ್ರವನ್ನು ಪಕ್ಷಕ್ಕೆ ಸಲ್ಲಿಸುವಂತಾಗಿ ಅದರಲ್ಲಿ ಹೆಚ್ಚು ಸಮಂಜಸವಾದ ಅಭ್ಯರ್ಥಿಗೆ ಟಿಕೆಟ್ ನೀಡುವಂಥ ಒಂದು ಬಹಿರಂಗ ಪ್ರಕ್ರಿಯೆಯ ನಿಯಮವನ್ನು ಸೈದ್ಧಾಂತಿಕವಾಗಿ ಬಿಜೆಪಿ ಜಾರಿ ಮಾಡಲಿ.

ಆಗ ಈ ಬಂಡಾಯ ಅತೃಪ್ತಿ ಪ್ರತಿಭಟನೆ ಜಾತಿವಾದಗಳಿಗೆ ಅವಕಾಶವಿಲ್ಲದಂತಾಗಿ ಕ್ಷೇತ್ರದಲ್ಲಿ ಒಮ್ಮತದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅವಕಾಶವಾಗುತ್ತದೆ. ಇನ್ನು ಸೋತರೂ ಪಕ್ಷ ಉಪಮುಖ್ಯಮಂತ್ರಿ ಮಾಡಿದ್ದರೂ ಸವದಿ ಯಂಥವರು, ಬಂಡಾಯ ಏಳುತ್ತಿರುವವರೇನು ನೇತಾಜಿ, ಗಾಂಧೀಜಿ, ಪಟೇಲ್, ಅಂಬೇಡ್ಕರ್, ಶಾಸ್ತ್ರೀಜಿಯಂಥ ನಾಯಕ ರಲ್ಲ? ತಾವು ಬಯಸಿದ್ದು ಸಿಗದಿದ್ದರೆ ವಿಧಾನಸೌಧಕ್ಕೇ ಬೆಂಕಿ ಹಚ್ಚಲೂ ಹೇಸದ ರಾಜಕಾರಣಿಗಳಿಂದ ಸಮಾಜಕ್ಕೆ ಆಗಬೇಕಾದ್ದು ಏನೂ ಇಲ್ಲ.

ಕುಡುಕನಾದರೂ ಪ್ರಜ್ಞೆ ತಪ್ಪುವಷ್ಟು ಕುಡಿದು ಬೀಳುತ್ತಾನೆ. ಆದರೆ ರಾಜಕಾರಣಿಗಳನ್ನು ನೀವು ಎಲ್ಲಿಯವರೆಗೂ ಶಾಸಕ-ಮಂತ್ರಿ-ಮುಖ್ಯಮಂತ್ರಿಯಾಗಿಯೇ ಆಗಿರಬೇಕೆಂದು ಬಯಸಿದ್ದೀರಿ? ಎಂದು ಕೇಳಿನೋಡಿ. ಅದನ್ನೆಲ್ಲಾ ಇವರು ಅನ್‌ಲಿಮಿಟೆಡ್ ಎಂದುಕೊಂಡಿರುತ್ತಾರೆ. ಪದವಿ ಅಧಿಕಾರವೆಂಬುದು ಸದಾ ಬಾಯಲ್ಲಿ ಟ್ಟುಕೊಂಡು ಚೀಪುತ್ತಿರುವುದಕ್ಕೆ ಅದೇನು ಮಗುವಿನ ಬಾಯಲ್ಲಿರುವ ನಿಪ್ಪಲ್-ಲಾಲಿಪಪ್ಪು ಅಲ್ಲ. ಮಗುವಾದರೂ ಅದನ್ನು ಬಿಸಾಡಿ ಪ್ರಬುದ್ಧತೆ ಪಡೆಯುತ್ತದೆ. ಪ್ರಜಾಪ್ರಭುತ್ವವೇನು
ಇವರ ಪಿತ್ರಾರ್ಜಿತ ಆಸ್ತಿಯಲ್ಲ. ಸಂವಿಧಾನದ ಸತ್ಯವೇನೆಂದರೆ ರಾಜಕಾರಣ-ಅಧಿಕಾರವೆಂಬುದು ಹಕ್ಕು, ಸ್ವಪ್ರತಿಷ್ಠೆ, ಶೋಕಿಗಾಗಲ್ಲ. ಅದು ಪ್ರಜಾಪ್ರಭುತ್ವದ ಸೇವೆಗೆ ಮಾತ್ರ.