Thursday, 12th December 2024

ಸಿನಿಮಾ ನಟರ ಹಾಗೆ ಹಿರಿಯ ಸಾಹಿತಿಗಳಿಗೆ ಏಕಿಲ್ಲ ಸ್ಮಾರಕ ?

ಕಾಳಜಿ 

ಕಗ್ಗೆರೆ ಪ್ರಕಾಶ್

ಮುಖ್ಯವಾಗಿ ನಾನು ಹೇಳಲು ಹೊರಟ್ಟಿದ್ದು ಇಷ್ಟೇ; ಇಷ್ಟೆಲ್ಲ ವಿರೋಧಗಳನ್ನು ಮಾಡುವ ಕೆಲ ಸಾಹಿತಿಗಳು, ರಂಗಕರ್ಮಿಗಳು, ಹೋರಾಟ ಗಾರರು ಇಲ್ಲಿ ಮೂವರು ಸಾಹಿತಿಗಳ ಅಂತ್ಯಕ್ರಿಯೆ ಮಾಡುವುದನ್ನು ಏಕೆ ನಿಲ್ಲಿಸಲಿಲ್ಲ. ಬೇಕಿದ್ದರೆ ಇನ್ನು ಮುಂದೆ ಇಲ್ಲಿ ಬೇರೆ ಯಾವ ಸಾಹಿತಿಗಳ ಅಂತ್ಯಕ್ರಿಯೆ ಮಾಡುವುದು ಬೇಡ. ಅದಕ್ಕಾಗಿ ನಾವೆಲ್ಲ ಹೋರಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡೋಣ.

ಕನ್ನಡ ಸಿನಿಮಾ ನಟರಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಡಾ. ಅಂಬರೀಶ್, ಡಾ. ಪುನೀತ್ ರಾಜ್‌ ಕುಮಾರ್, ಡಾ. ಪಾರ್ವತಮ್ಮ ರಾಜ್‌ಕುಮಾರ್-ಇಂಥ ನಟರ ಹೆಸರಿನಲ್ಲಿ ಕೋಟ್ಯಂತರ ರುಪಾಯಿಗಳ ವೆಚ್ಚ ದಲ್ಲಿ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಇತ್ತೀಚಿಗಷ್ಟೇ ಡಾ. ವಿಷ್ಣುವರ್ಧನ್ ಹೆಸರಿನಲ್ಲಿ ಮೈಸೂರಲ್ಲಿ ಸ್ಮಾರಕವಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿ ಯೋದಲ್ಲಿ ಡಾ. ರಾಜ್, ಡಾ. ಪಾರ್ವತ್ಮಮ್ಮ, ಡಾ. ಪುನೀತ್, ಡಾ. ಅಂಬರೀಶ್ ಸಮಾಧಿ ಜಾಗವೆಲ್ಲ ಸ್ಮಾರಕವಾಗಿ ಸಾವಿರಾರು ಅಭಿಮಾನಿಗಳ ವೀಕ್ಷಕರ ತಾಣಗಳಾಗಿ ಪರಿವರ್ತನೆ ಯಾಗಿವೆ.

ಇಂಥ ನಟರೆಲ್ಲ ಕಲಾ ಜಗತ್ತಿಗೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ, ಇಂಥವರ ಹೆಸರು ಜನಮಾನಸದಲ್ಲಿ ಶಾಶ್ವತ ವಾಗಿ ಉಳಿಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಶಸ್ತಿ ಕೊಡೋದು, ಸ್ಮಾರಕ ನಿರ್ಮಾಣ ಮಾಡೋದು ಸರಿಯಷ್ಟೇ. ಆದರೆ ಇವರಿಗಿಂತಲೂ ಮಿಗಿಲಾದ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿಗೆ ಗಣನೀಯ ಸೇವೆ ಸಲ್ಲಿಸಿ ನಮ್ಮನ್ನಗಲಿರುವ ಸಾಹಿತಿಗಳ ಬಗ್ಗೆ ಈ ತಾರತಮ್ಯ ಏಕೆ? ನಟರಿಗೆ ಇರುವ ಮನ್ನಣೆ ಸಾಹಿತಿಗಳಿಗೆ ಏಕಿಲ್ಲ? ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಜ್ಞಾನಪೀಠ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ, ನಾಡೋಜ ಡಾ. ಸಿದ್ಧಲಿಂಗಯ್ಯ-ಇಂಥ ಸಾಹಿತಿಗಳ ಕೊಡುಗೆ ಸಾಮಾನ್ಯವೇ? ಇವರೆಲ್ಲ ಕನ್ನಡ ಸಾರಸ್ವತ ಲೋಕದ ದಿಗ್ಗಜರಲ್ಲವೆ? ಇವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ರಾಜ್ಯ ಸರ್ಕಾರವೇ ಮುಂದೆ ನಿಂತು ಮಾಡಿರುವುದು ಸರಿಯಷ್ಟೇ.

ಡಾ. ಸಿದ್ಧಲಿಂಗಯ್ಯರು ಪ್ರಸಿದ್ಧ ಕವಿ ಅಷ್ಟೇ ಅಲ್ಲ, ಎರಡು ಬಾರಿ ಎಂಎಲ್‌ಸಿಯೂ ಆಗಿದ್ದವರು. ತಮ್ಮ ಹೋರಾಟದ ಕ್ರಾಂತಿಕಾರಿ ಹಾಡುಗಳ ಮೂಲಕ ಒಂದು ಜನಾಂಗದ ಕಣ್ಣನ್ನೇ ತೆರೆಸಿದವರು. ಆ ಜನಾಂಗದಲ್ಲಿ ಜಾಗೃತಿ ಮೂಡಿಸಿದವರು. ಒಟ್ಟಾರೆ ಅವರೊಬ್ಬ ದಲಿತ ಕವಿಗಳಷ್ಟೇ ಅಲ್ಲ; ಎಲ್ಲ ಜನಾಂಗದ ನೋವು, ನುರಿಗಳಿಗೆ ಧ್ವನಿಯಾಗಿ ಕನ್ನಡದ ಪ್ರಮುಖ ಕವಿಗಳಾಗಿ ಉಳಿದವರು.

ಇಂಥ ಡಾ. ಸಿದ್ಧಲಿಂಗಯ್ಯರು ಫೆಬ್ರವರಿ ೩, ೧೯೫೪ ರಲ್ಲಿ ಜನಿಸಿ, ಜೂನ್ ೬, ೨೦೨೧ ರಲ್ಲಿ ನಿಧನರಾದವರು. ಬದುಕಿದ್ದ ೬೭ ವರ್ಷಗಳ ತನಕವೂ ಜನಪರ ಧ್ವನಿಯಾಗಿ ಕಾವ್ಯ ರಚಿಸಿದವರು. ಅಷ್ಟಲ್ಲದೆ, ಸಿನಿಮಾಕ್ಕೂ ಆದಿತ್ಯ ಹೆಸರಿನಲ್ಲಿ ಸಾಹಿತ್ಯ ರಚಿಸಿದವರು. ಇವರ ಶ್ರೀಮತಿ ರಮಾ ಅವರ ಭೇಟಿ ಕೂಡ ಇತ್ತೀಚಿಗೆ ಕಲಾಗ್ರಾಮದಲ್ಲೇ ನನಗಾಯಿತು. ಅವರ ಜೊತೆಗೆ ನಾನು, ಪತ್ರಕರ್ತೆ ಶಾಂತಕುಮಾರಿ, ಕವಿ ಕುವರ ಯಲ್ಲಪ್ಪ ಹೋಗಿ ಮೂವರು ಸಾಹಿತಿಗಳ ಸಮಾಧಿ ಸ್ಥಳಗಳನ್ನು ವೀಕ್ಷಿಸಿ ಸ್ಮರಣೆ ಮಾಡಿದೆವು. ಏಕೆಂದರೆ, ಈ ಮೂರೂ ಸಾಹಿತಿಗಳ ಜೊತೆ ನನಗೆ ಒಂದಿಲ್ಲೊಂದು ರೀತಿಯ ಒಡನಾಟ ಇತ್ತು.

ನಮ್ಮ ಯಜಮಾನರದಷ್ಟೇ ಸ್ಮಾರಕವಾಗಬೇಕು ಅಂತ ಸರ್ಕಾರವನ್ನು ನಾನು ಕೇಳೋದು ತಪ್ಪಾಗುತ್ತೆ. ಶಿವರುದ್ರಪ್ಪ, ಅನಂತಮೂರ್ತಿ ಅವರ ಜತೆಗೆ ನಮ್ಮವರ ಸ್ಮಾರಕವೂ ಆಗಲಿ ಎಂದು ಅಪೇಕ್ಷೆ ಪಡುತ್ತೇನೆ. ಈ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಬೇಕು, ಈ ಮೂವರು ಸಾಹಿತಿಗಳ
ಶಿಷ್ಯವರ್ಗ, ಅಭಿಮಾನಿಗಳೂ ಈ ಸ್ಥಳ ವೀಕ್ಷಣೆ ಮಾಡುವಂತೆ ಆಗಬೇಕು, ಮಲ್ಲತ್ತಹಳ್ಳಿ ರಿಂಗ್ ರೋಡ್ ಗೇಟಿನಿಂದ ಸಮಾಧಿ ಸ್ಥಳಗಳು ಬಹು ದೂರ ದಲ್ಲಿವೆ. ಆದ್ದರಿಂದ ಸಮಾಧಿಗಳ ಹಿಂಭಾಗದಲ್ಲೇ ಇರುವ ಇನ್ನೊಂದು ರಸ್ತೆಗೆ ದಾರಿ ಮಾಡಿಕೊಟ್ಟರೆ ತುಂಬಾ ಉಪಯುಕ್ತ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮನಸ್ಸು ಮಾಡಬೇಕು ಅಂತ ಡಾ. ಸಿದ್ಧಲಿಂಗಯ್ಯ ಅವರ ಶ್ರೀಮತಿ ರಮಾ ತುಂಬ ಹೊತ್ತು ಮಾತಾಡಿದರು.

ಇನ್ನು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಂತೂ ಜನಮಾನಸದಲ್ಲಿ ಬೆರತು ಹೋದ ಕವಿ. ಕುವೆಂಪು ಶಿಷ್ಯರಾಗಿ, ಸಮನ್ವಯ ಕವಿಯಾಗಿ
ಚಿರಪರಿಚಿತ. ಕಾಣದ ಕಲಿಗೆ ಹಂಬಲಿಸಿದೆ ಮನ… ನಿನಗೆ ಬೇರೆ ಹೆಸರು ಬೇಕೆ, ಸೀ ಎಂದರೆ ಅಷ್ಟೇ ಸಾಕೆ… ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಇತ್ಯಾದಿ ಕಾವ್ಯ ಗೀತೆಗಳ ಮೂಲಕ ಪ್ರಸಿದ್ಧರು. ಫೆಬ್ರವರಿ ೭, ೧೯೨೬ ರಲ್ಲಿ ಜನಿಸಿದ ಇವರು ಡಿಸೆಂಬರ್ ೨೩, ೨೦೧೩ ರಲ್ಲಿ ನಿಧನರಾದವರು. ಇವರೂ ಅಷ್ಟೇ ೮೭ ವರ್ಷಗಳ ಕಾಲ ಬದುಕಿದ್ದರು. ಇವತ್ತಿಗೂ ಕನ್ನಡ ಸಾರಸ್ವತ ಲೋಕದ ಧ್ರುವತಾರೆಯೇ ಸರಿ.

ಜ್ಞಾನಪೀಠ ಸಾಹಿತಿ ಡಾ. ಅನಂತಮೂರ್ತಿ ಅವರ ಹೆಸರನ್ನು ಯಾರು ಕೇಳಿಲ್ಲ ಹೇಳಿ? ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ನಮ್ಮ ಘನತೆ, ಗೌರವ ಹೆಚ್ಚಿಸಿದವರು. ಭವ, ಭಾರತೀಪುರ, ಸಂಸ್ಕಾರ, ಮೌನಿ ಇತ್ಯಾದಿ ಕೃತಿಗಳ ಮೂಲಕ ಕನ್ನಡದ ಅಗ್ರ ಸಾಹಿತಿಗಳ ಸಾಲಿನಲ್ಲಿ ನೆಲೆ ನಿಂತವರು. ಡಿಸೆಂಬರ್ ೧೨, ೧೯೩೨ ರಲ್ಲಿ ಜನಿಸಿದ ಇವರು ಆಗಸ್ಟ್ ೨೨, ೨೦೧೪ ರಲ್ಲಿ ನಿಧನರಾದರು. ೮೨ ವರ್ಷಗಳ ಕಾಲ ಬದುಕಿದ್ದ ಅನಂತಮೂರ್ತಿ ಅವರು ಕನ್ನಡಕ್ಕೊಂದು ಹೆಮ್ಮೆ.

ಈ ಮೂರು ಪ್ರಸಿದ್ಧ ಸಾಹಿತಿಗಳು ತಮ್ಮದೇ ಪ್ರಕಾರದಲ್ಲಿ ಸೇವೆ ಸಲ್ಲಿಸಿ ಭಾರತೀಯ ಸಾಹಿತ್ಯದಲ್ಲೇ ಕನ್ನಡಕ್ಕೊಂದು ಅಸ್ಮಿತೆಯನ್ನು ತಂದುಕೊಟ್ಟವರು. ಆ ಮೂಲಕ ಜಗತ್ತಿನ ಸಾಹಿತ್ಯಕ್ಕೂ ಪರಿಚಿತಗೊಂಡವರು. ಕಲಾಗ್ರಾಮದಲ್ಲಿ ಈ ಮೂವರು ಸಾಹಿತಿಗಳ ಅಂತ್ಯಕ್ರಿಯೆಯನ್ನು ಒಂದೆಡೆ ರಾಜ್ಯ
ಸರ್ಕಾರ ಮಾಡುವ ಮೂಲಕ ಗೌರವ ಸಲ್ಲಿಸಿರುವುದು ಸರಿಯಷ್ಟೇ. ಆದರೆ ಈ ಜಾಗ ಶಿವರುದ್ರಪ್ಪ, ಅನಂತಮೂರ್ತಿಗಳ ಸಮಾಧಿಯಿದ್ದಾಗ ಬರೀ ಸುಣ್ಣ
ಹೊಡೆದ ಕಟ್ಟೆಯಾಗಿತ್ತು. ಗಿಡಗೆಂಟೆ ಬೆಳೆದುಕೊಂಡಿತ್ತು.

ಇದು ಯಾರ ಅಂತ್ಯಕ್ರಿಯೆಯ ಕಟ್ಟೆ ಎಂಬುದು ಗೊತ್ತಾಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಇವು ಸರ್ಕಾರದ ಅನಾದಾರಕ್ಕೆ ಒಳಗಾಗಿದ್ದವು. ಇದಕ್ಕೆ ಪೂರಕ ಎಂಬಂತೆ ಕಲಾಗ್ರಾಮ ಸ್ಮಶಾನ ಆಗುವುದು ಒಪ್ಪುವ ಮಾತಲ್ಲ. ಅಲ್ಲಿ ನಡೆಯಬೇಕಿರುವುದು ಕಲಾ ಚಟುವಟಿಕೆ. ಸಮಾಧಿ ಕಟ್ಟಿದರೆ, ಸ್ಮಾರಕ ಮಾಡಿದರೆ ಕಂಠೀರ ಸ್ಟುಡಿಯೋ ತರಹ ಆಗುತ್ತದೆ. ಅದಕ್ಕೆ ಸಾಹಿತಿಗಳು ಬೆಂಬಲಿಸಬಾರದು. ಅದು ಸಾರ್ವಜನಿಕರ ಆಸ್ತಿ ಎಂಬ ವಿರೋಧಗಳೂ ಕೇಳಿ ಬಂದಿವೆ.

ಬಹು ವಿಶಾಲ ಜಾಗದ ಕಲಾಗ್ರಾಮದಲ್ಲಿ ಕುವೆಂಪು ಭಾಷಾ ಪ್ರಾಧಿಕಾರ, ರಾಷ್ಟೀಯ ನಾಟಕ ಶಾಲೆ, ಬಯಲು ರಂಗ ಮಂದಿರಗಳಿವೆ. ಕನ್ನಡಕ್ಕೆ ಸಿಕ್ಕಂತ
ಶಾಸೀಯ ಸ್ಥಾನಮಾನದ ಕಚೇರಿ ಮೈಸೂರಿನಿಂದ ಇಲ್ಲಿಗೇ ವರ್ಗಾವಣೆಯಾಗುವ ನಿರ್ಧಾರ ರಾಜ್ಯ ಸರ್ಕಾರದಿಂದ ಆಗಿದೆ.

ಮುಖ್ಯವಾಗಿ ನಾನು ಹೇಳಲು ಹೊರಟ್ಟಿದ್ದು ಇಷ್ಟೇ; ಇಷ್ಟೆಲ್ಲ ವಿರೋಧಗಳನ್ನು ಮಾಡುವ ಕೆಲ ಸಾಹಿತಿಗಳು, ರಂಗಕರ್ಮಿಗಳು, ಹೋರಾಟಗಾರರು ಇಲ್ಲಿ ಮೂವರು ಸಾಹಿತಿಗಳ ಅಂತ್ಯಕ್ರಿಯೆ ಮಾಡುವುದನ್ನು ಏಕೆ ನಿಲ್ಲಿಸಲಿಲ್ಲ. ಬೇಕಿದ್ದರೆ ಇನ್ನು ಮುಂದೆ ಇಲ್ಲಿ ಬೇರೆ ಯಾವ ಸಾಹಿತಿಗಳ ಅಂತ್ಯಕ್ರಿಯೆ
ಮಾಡುವುದು ಬೇಡ. ಅದಕ್ಕಾಗಿ ನಾವೆಲ್ಲ ಹೋರಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡೋಣ. ಆದರೆ ಈಗ ಮಾಡಿರುವ ಸಮಾಧಿಗಳನ್ನು ಏನು ಮಾಡಲು ಸಾಧ್ಯ? ಆದ್ದರಿಂದ ಈ ಸಾಹಿತಿಗಳ ಸಮಾಧಿ ಸ್ಥಳ ಸ್ಮಾರಕವಾಗುವುದು ಸೂಕ್ತ.

ಈ ಸ್ಥಳವನ್ನು ಈಗ ಹೋಗಿ ನೋಡಿದಾಗ ಸಮಾಧಿ ಕಟ್ಟೆಗೆ ಗ್ರನೈಟ್ ಕಲ್ಲಿನ ಬೋರ್ಡ್ ಬಂದಿದೆ. ಸುತ್ತಮುತ್ತ ಜಾಗವನ್ನು ಸ್ವಚ್ಛ ಮಾಡಲಾಗಿದೆ. ಸಮಾಧಿ ಕಟ್ಟೆಯ ತಲೆ ಮೇಲೆ ಆಯಾ ಸಾಹಿತಿಗಳ ಚಿತ್ರದ ತಾತ್ಕಾಲಿಕ ಫ್ಲೆಕ್ಸ್ ಇದೆ. ನೋಡಿಕೊಳ್ಳಲು ಅಲ್ಲೊಬ್ಬ ಸೆಕ್ಯೂರಿಟಿ ಇದ್ದಾನೆ. ಆದರೆ ಇಷ್ಟು ಸಾಲದು. ಇಲ್ಲಿ ಸ್ಮಾರಕವಾಗಿ ಸಾಕಷ್ಟು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂಬರುವ ಹೊಸ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ ಎಂಬ ಆಶಯ ನಮ್ಮಂಥ ಅನೇಕ ಲೇಖಕರದ್ದು.