Thursday, 12th December 2024

ಉಮೇದುವಾರಿಕೆ ಸಲ್ಲಿಸಿದ ವೆಂಕಟೇಶ ಹೆಗಡೆ ಹೊಸಬಾಳೆ

ಶಿರಸಿ : ಕಾಂಗ್ರೆಸ್ ಮುಖಂಡ, ಬ್ರಾಹ್ಮಣ ಸಮುದಾಯದ ಪ್ರಬಲ ನಾಯಕ ಶಿರಸಿ – ಸಿದ್ದಾಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶನಿವಾರ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಇದೇ ವೇಳೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ವ್ಯಕ್ತಪಡಿಸಿದರು.

ನಗರದ ಯಲ್ಲಾಪುರ ನಾಕಾದಲ್ಲಿರುವ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಚುನಾವಣಾಧಿಕಾರಿ ದೇವರಾಜ್ ಆರ್. ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಕುಟುಂಬಸ್ಥರು, ಅಭಿಮಾನಿಗಳು ಸಾಥ್ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಬಾಳೆ, ರಾಮಕೃಷ್ಣ ಹೆಗಡೆ ಅವರಿಂದ ಬೆಳೆದು ಬಂದ ನೆಮ್ಮದಿಯಿದೆ. ಇದೊಂದು ಅಭಿವೃದ್ಧಿಯ ಚುನಾವಣೆ. ಪಕ್ಷೇತರವಾಗಿ ನಿಲ್ಲಬೇಕು ಎಂಬ ಅಭಿಪ್ರಾಯ ಇರಲಿಲ್ಲ. ಆದರೆ ಅಭಿವೃದ್ಧಿ ಆಗಬೇಕು ಎಂಬ ವಿಚಾರ ಇಟ್ಟುಕೊಂಡು ನಾಮಪತ್ರ ಸಲ್ಲಿಸಿದ್ದೇನೆ.

ಎರಡು ರಾಜಕೀಯ ಪಕ್ಷಗಳ ನಡುವೆ ಇದೊಂದು ಸಂಘರ್ಷ ಎಂದು ಕಾಣಬಹುದು. ಆದರೆ ಈಗಾಗಲೇ ಹಲವರು ಸಂಪರ್ಕ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ನನ್ನ ಆತ್ಮೀಯರು ಇದ್ದಾರೆ. ಎಲ್ಲರೂ ವಾಪಾಸ್ ತೆಗೆದು ಕೊಳ್ಳದೇ ಸ್ಪರ್ಧೆ ಮಾಡಬೇಕು ಎಂದು ವಿನಂತಿಸಿದ್ದಾರೆ. ಕಾರಣ ಯಾವುದೇ ಕಾರಣಕ್ಕೂ ನಾನು ನಾಮಪತ್ರ ಹಿಂಪಡೆಯಲ್ಲ. ಚುನಾವಣೆಯಲ್ಲಿ ಕ್ಷೇತ್ರದ ಜನರ ಪ್ರೀತಿ ಗಳಿಸುತ್ತೇನೆ ಎಂದರು.

ಇಲ್ಲಿನ ಶಾಸಕರು ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾಗಿ ಹೇಳಿದ್ದಾರೆ. ಹಾಗಾದರೇ ಬೇರೆ ಕಡೆ ಗುಂಡಾಗಿರಿ ಇದೆಯೇ ? ಪರೇಶ್ ಮೇಸ್ತ ಮೃತ ಪಟ್ಟಾಗ ಬೆಂಕಿ ಹಚ್ಚಿದವರು ಯಾರು ? ಎಂದು ಪ್ರಶ್ನಿಸಿದ ಅವರು, ಇಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಆದಲ್ಲಿ ಸ್ಥಳೀಯ ರಿಗೆ ಅನುಕೂಲ ಆಗಬೇಕು. ರೇಲ್ವೆ ಸ್ಥಾಪನೆ ಆಗಬೇಕು. ಶಿರಸಿ ಜಿಲ್ಲೆ ಆಗಬೇಕು. ಇದೆಲ್ಲಾ ಸಾಧ್ಯ ಆಗಬೇಕು, ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು

ಫಾರ್ಮ ನಂ.೩ ರ ಸಮಸ್ಯೆಯಿಂದ ಸಾಮಾನ್ಯ ಜನ ಜೀವ ತೆಗೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.‌ ಇದರ ಬದಲಾವಣೆ ಆಗಬೇಕು. ಸಾಮಾನ್ಯ ಜನರ ಸಮಸ್ಯೆ ಪರಿಹಾರ ಆಗಬೇಕು. ಅದೇ ಕಾರಣದಿಂದ ಅಭಿವೃದ್ಧಿ ಪರ ಹೋರಾಟಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಜನರೂ ಸಹ ಅಭಿವೃದ್ಧಿಗಾಗಿ ಇರಬೇಕು ಎಂದಾದರೆ ನನ್ನ ಪರವಾಗಿ ನಿಲ್ಲುತ್ತಾರೆ ಎಂದ ಹೊಸಬಾಳೆ, ಒಂದು ರಾಷ್ಟ್ರೀಯ ಪಕ್ಷದವರಿಗೆ ಗೆಲ್ಲುವುದೇ ಅಭಿವೃದ್ಧಿ, ಇನ್ನೊಂದು ರಾಷ್ಟ್ರೀಯ ಪಕ್ಷದವರಿಗೆ ನಾಲ್ಕೈದು ಬಾರಿ ಟಿಕೇಟ್ ತೆಗೆದಿಕೊಳ್ಳುವುದೇ ಅಭಿವೃದ್ಧಿ ಆಗಿದ್ದು, ಸೋಲುವುದೇ ಅಭಿವೃದ್ಧಿ ಆಗಿದೆ ಎಂದು ವ್ಯಂಗ್ಯ ವಾಡಿದರು.

ಈ ವೇಳೆ ಎಮ್.ಆರ್.ಹೆಗಡೆ ಕಾನಗೋಡ, ಸೀತಾರಾಮ ಹೆಗಡೆ ಕಿಬ್ಬಳ್ಳಿ, ಪ್ರಕಾಶ ಹೆಗಡೆ ಹಲಗೆ, ಶ್ರೀಪಾದ ರಾಯ್ಸದ್, ಮಂಜು ನಾಯ್ಕ, ಗೋಪು ಗೌಡ ಮುಂತಾದವರು ಇದ್ದರು.

*
ಕ್ಷೇತ್ರದ ಜನ ತುಂಬಾ ಬುದ್ದಿವಂತರಿದ್ದಾರೆ. ಕಾರಣ ಇಲ್ಲಿ ಅತಿ ಹೆಚ್ಚಿನ ಮತಗಳಿಕೆ ಮಾಡಿ, ಗೆಲ್ಲುತ್ತೇನೆ ಎಂಬ ಭರವಸೆಯಿದೆ. ಇಲ್ಲಿ ಜಾತಿ ಧರ್ಮ ಯಾವುದೂ ಇಲ್ಲ. ನಮಗೆ ಸ್ವಚ್ಚತೆ ಬೇಕಾಗಿದೆ. ಎಲ್ಲರ ಸಹಕಾರದೊಂದಿಗೆ, ಒಗ್ಗೂಡಿ ಚುನಾವಣೆ ಗೆಲ್ಲುತ್ತೇನೆ. ಈಗಲೂ ಕಾಂಗ್ರೆಸ್ ನಲ್ಲಿದ್ದೇನೆ. ಮುಂದೂ ಕಾಂಗ್ರೆಸ್ ನಲ್ಲಿ ಇರುತ್ತೇನೆ.
ವೆಂಕಟೇಶ ಹೆಗಡೆ ಹೊಸಬಾಳೆ, ಪಕ್ಷೇತರ ಅಭ್ಯರ್ಥಿ.