Sunday, 15th December 2024

ನಂದಿನಿ ಉಳಿಯಬೇಕಾದರೆ ನಾನು ಉಳಿಯಬೇಕು !

ಅಭಿಮತ

ಮಹೇಶ ಪುಚ್ಚಪ್ಪಾಡಿ

ಹಾಲಿನ ಬಗ್ಗೆ ಅಲ್ಲ, ಅಮೂಲು-ನಂದಿನಿಯ ಬಗ್ಗೆ ನಡೆದ ಚರ್ಚೆಯೇ ಹಾಲಾಹಲ! ಸುಮಾರು 60 ವರ್ಷಗಳಿಂದ ಹೈನುಗಾರಿಕೆ
ಮಾಡುತ್ತಿದ್ದ ಪುತ್ತೂರಿನ ಕೃಷಿಕ, ಹೈನುಗಾರ ಎಪಿ ಸದಾಶಿವ ಹೇಳಿದರು-ನಂದಿನಿ ಉಳಿಯಬೇಕಾದರೆ ನಾನು ಉಳಿಯಬೇಕು, ಅಂದರೆ ಹೈನುಗಾರ ಉಳಿಯಬೇಕು! ಈ ಮಾತಿನ ಹಿಂದೆ ಎಲ್ಲಾ ಅರ್ಥವೂ ವ್ಯಕ್ತವಾಗಿದೆ.

ರಾಜ್ಯದಲ್ಲಿ ಗುಜರಾತ್ ಮೂಲದ ಅಮೂಲ್‌ನ ಉತ್ಪನ್ನಗಳು ಮಾರಾಟ ಮಾಡುವುದಕ್ಕೆ ವಿರೋಧ ಅಲ್ಲ, ನಮ್ಮದೇ ಕೆಎಂಎಫ್ ನಂದಿನಿ ಉತ್ಪನ್ನದ ಗುಣಮಟ್ಟ ಏರಿಕೆ ಹಾಗೂ ಹಲವು ಉತ್ಪನ್ನಗಳ ತಯಾರಿಕೆ ಬಗ್ಗೆ ಇನ್ನೊಂದು ಹೆಜ್ಜೆ ಮುಂದಿಡಲು ಸಿದ್ಧತೆ ಮಾಡಬೇಕು ಎನ್ನುವ ಮನಸ್ಥಿತಿ ನಮ್ಮಲ್ಲಿ ಬೆಳೆಯಬೇಕಿದೆ ಎಂದು ರೈತ ಸಂಘಟನೆಯ ಗುಂಪು ಚರ್ಚೆ ಮಾಡುತ್ತಿತ್ತು.

ಇದಕ್ಕೆ ಕಾರಣ ಇದೆ. ಅಷ್ಟೂ ವರ್ಷಗಳಿಂದ ಇಲ್ಲಿ ಹೈನುಗಾರಿಕೆಗೆ ನೀಡಿದ ಪ್ರೋತ್ಸಾಹ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಕ್ಕೆ ನೀಡಿದ ಪ್ರೋತ್ಸಾಹ ಗುಜರಾತಿನಲ್ಲಿ ಅಮೂಲ್‌ಗೆ ನೀಡಿದಷ್ಟು ಇಲ್ಲ. ಒಂದು ಉತ್ಪನ್ನವಾಗಿ ದೇಶ, ವಿದೇಶದಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಬೇಕು ನಿಜ. ಆದರೆ ನಮ್ಮದೇ ರೈತರ, ನಮ್ಮದೇ ಹೈನುಗಾರರ ಕಡೆಗಣಿಸಿ ಅಲ್ಲ. ಈಗಾಗಲೇ ೭೩ ಲಕ್ಷ ಲೀಟರ್‌ಗೂ ಹೆಚ್ಚು ಹಾಲನ್ನು ಸಹಕಾರಿ ಸಂಘದ ಮೂಲಕ ಕೆಎಂಎಫ್ ಡೈರಿಗೆ ನೀಡುವ ರೈತರು ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೆಲ್ಲಾ ಹಾಲು ಮಾರಾಟ ಆಗುವುದಿಲ್ಲ. ಈಗ ನಂದಿನಿ ಸಂಸ್ಥೆ ಈ ಉಳಿಕೆಯಾಗುವ ಹೆಚ್ಚುವರಿ ಹಾಲು ಮಾರಲು ಎಲ್ಲಿಗೆ ಹೋಗಬೇಕು? ಎನ್ನುವುದು ಇರುವ ಪ್ರಶ್ನೆ.

ಅಮೂಲ್ ಕೂಡ ಇಲ್ಲಿನ ಹೈನುಗಾರರ ಹಾಲು ಖರೀದಿ ಮಾಡಲು, ಗುಜರಾತ್ ಮಾದರಿಯಲ್ಲಿಯೇ ಇಲ್ಲೂ ಹೈನುಗಾರರನ್ನು
ಬೆಂಬಲಿಸಿ ಮತ್ತೊಂದು ಮಾರುಕಟ್ಟೆಯನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದಾ? ಇದಕ್ಕೆ ಕಾರಣ ಇದೆ. ಸುಮಾರು 15 ವರ್ಷಗಳ ಹಿಂದೆಯೇ ಕೃಷಿಕ ಎಪಿ ಸದಾಶಿವ ಹೈನುಗಾರಿಕೆ, ಪಶುಪಾಲನೆಯ ಬಗ್ಗೆ ಲೆಕ್ಕ ಹಾಕಿದ್ದರು. ಒಂದು ರುಪಾಯಿ ಹಾಲಿನ ದರ ಏರಿಕೆ ಆದಾಗಲೂ ಮಾರುಕಟ್ಟೆ ವಲಯದಿಂದ ಬೊಬ್ಬೆ ಕೇಳುತ್ತಿತ್ತು.

ಯಾವಾಗಲೂ ಮಾರುಕಟ್ಟೆ ವ್ಯವಸ್ಥೆಗಳು ಗ್ರಾಹಕ ಪರವಾಗಿಯೇ ಇರುತ್ತದೆ. ಉತ್ಪಾದಕರ ಪರವಾಗಿ ಮಾರುಕಟ್ಟೆ ವ್ಯವಸ್ಥೆ ಇರುವುದು ಕಡಿಮೆಯೇ. ಒಂದು ಸಾಮಾನ್ಯ ಹಸು ಕರು ಹಾಕಿ ಸರಾಸರಿ ಒಂದು ಅವಽಗೆ 1440 ಲೀಟರ್ ಹಾಲು ನೀಡುತ್ತದೆ. ಅದರ ಖರ್ಚು ವೆಚ್ಚ ಗಮನಿಸಿದರೆ ಲೀಟರು ಹಾಲಿಗೆ 15 ವರ್ಷಗಳ ಹಿಂದೆ ಕನಿಷ್ಠ 30 ರುಪಾಯಿ ಉತ್ಪಾದನಾ ವೆಚ್ಚ ಇತ್ತು. ಈಗ ಇದೇ ವೆಚ್ಚ 52 ರುಪಾಯಿಗೆ ತಲುಪಿದೆ. ಹಾಗಿದ್ದರೂ ಈಗ ಹೈನುಗಾರರಿಗೆ ಸಿಗುವ ದರ 40 ರುಪಾಯಿ ತಲುಪುತ್ತಿಲ್ಲ. ಮಾರುಕಟ್ಟೆಯಲ್ಲಿ 50 ರುಪಾಯಿಗಿಂತ ಹೆಚ್ಚಿನ ದರವನ್ನು ನೀಡಿ ಗ್ರಾಹಕರು ಪಡೆಯುತ್ತಾರೆಯೇ? ಇದು ಇನ್ನೊಂದು ದೊಡ್ಡ ಪ್ರಶ್ನೆ. ಈ ಸವಾಲು ಇರುವುದು ಕೆಎಂಎಫ್ಗೆ. ನಂದಿನಿ ಬ್ರಾಂಡ್‌ಗೆ.

ಗುಣಮಟ್ಟ ಉಳಿಸಿಕೊಳ್ಳಬೇಕು ಹಾಗೂ ಹೈನುಗಾರರನ್ನೂ ಸಮಾಧಾನ ಪಡಿಸಬೇಕು. ಗ್ರಾಹಕರನ್ನೂ ನೆಮ್ಮದಿಯಾಗಿರಿಸ ಬೇಕು. ಈ ಸವಾಲು ದಾಟಿಕೊಂಡೇ ಕೆಎಂಎಫ್ ಇದುವರೆಗೆ ಬಂದಿದೆ. ಇಲ್ಲಿ ಮುಖ್ಯವಾಗಿರುವುದು ಆಯಾ ರಾಜ್ಯದ ರೈತರ ಅಥವಾ ಹೈನುಗಾರರ ಹಿತಾಸಕ್ತಿ. ಹಾಗಿದ್ದರೆ ನಂದಿನಿ ಹಾಲನ್ನು ಎಲ್ಲಿ ಮಾರುವುದು? ನಮ್ಮ ರಾಜ್ಯದ ರೈತರ ಹಿತಾಸಕ್ತಿ ಹೇಗೆ? ಸುಲಭದಲ್ಲಿ ಹೇಳಿಬಿಡಬಹುದು, ಬೇರೆ ರಾಜ್ಯದಲ್ಲಿ ನಂದಿನಿ ಮಾರಾಟ ಅಂತ. ಆದರೆ ಈಗಿನ ವ್ಯವಸ್ಥೆಯಲ್ಲಿ ಅದು ಸುಲಭ ಅಲ್ಲ. ಅದಕ್ಕೂ ಕಾರಣ ಇದೆ.

ಅಮೂಲ್ ಗುಜರಾತಿನಲ್ಲಿ ಹೈನುಗಾರರಿಗೆ ಉತ್ತಮ ದರ ನೀಡುತ್ತದೆ. ಅಲ್ಲಿ ಹೈನುಗಾರರಿಗೆ ನೀಡುವ ದರ ಉತ್ತಮವಾಗಿದೆ. ಗುಜರಾತಿನ ರೈತ ಸದಸ್ಯರಿಗೆ ಪ್ರತಿ ಕಿಲೋ ಕೊಬ್ಬಿಗೆ 760 ರು. ಇತ್ತು. ಅದನ್ನು 2022 ರಲ್ಲಿ ಏರಿಕೆ ಮಾಡಿ ಪ್ರತಿ ಕಿಲೋ ಕೊಬ್ಬಿಗೆ 20 ರು.ಗಳಷ್ಟು ಹೆಚ್ಚಿಸಿ ಪ್ರತಿ ಕಿಲೋ ಕೊಬ್ಬಿಗೆ 780 ರು. ಖರೀದಿ ಮಾಡುತ್ತಿತ್ತು. ಗುಣಮಟ್ಟದ ಹಾಲಿನ ಉತ್ಪಾದನೆಗೆ ಬೇಕಾದ ವ್ಯವಸ್ಥೆ ಅಮೂಲ್ ಮಾಡಿತು. ಕೇವಲ ದನ ಮಾತ್ರ ಅಲ್ಲ ಎಮ್ಮೆ ಸಾಕಾಣಿಕೆಗೂ ನೆರವು ನೀಡಿತು. ಪರಿಣಾಮವಾಗಿ ಅಮೂಲ್ ಹಾಲು ಗುಣಮಟ್ಟಕ್ಕೆ ಏರಿತು. ಕೊಬ್ಬಿನ ಅಂಶ ಹೆಚ್ಚಾಗಿರುವ ಕಾರಣದಿಂದ ಹಲವು ಉತ್ಪನ್ನ ಗಳನ್ನು ಗುಣಮಟ್ಟ ಉಳಿಸಿಕೊಂಡು ತಯಾರು ಮಾಡಲು ಸಾಧ್ಯವಾಯಿತು.

ಮಾರುಕಟ್ಟೆಯನ್ನೂ ಚೆನ್ನಾಗಿ ಹಿಡಿಯಿತು. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ವಿಷ್ಣುದೇವ ಪೂಜಿತ್ತಾಯ ಹೈನುಗಾರನೂ ಹೌದು, ಕೃಷಿಕನೂ ಹೌದು. ಅವರು ಹೇಳುತ್ತಾರೆ-ಹೈನುಗಾರಿಕೆ ನನಗೆ ಲಾಭದಾಯಕವೇ ಆಗಿದೆ. ಇಂದಿಗೂ ೨೦ ಲೀಟರ್‌ಗೆ ಅಧಿಕ ಹಾಲು ಸೊಸೈಟಿಗೆ ಹಾಕುತ್ತೇನೆ ಎನ್ನುತ್ತಾರೆ. ಕೇರಳದಲ್ಲಿ ಮಿಲ್ಮ ಹಾಲು ಮಾರಾಟದಲ್ಲಿದೆ. 1980 ರ ಆಸುಪಾಸಿನಲ್ಲಿ ಕೇರಳದಲ್ಲಿ ಕೆಸಿಎಂಎಂಎಫ್ ಮೂಲಕ ಆರಂಭವಾದ ಹಾಲು ಮಾರುಕಟ್ಟೆ ವ್ಯವಸ್ಥೆ ಬಲಗೊಳ್ಳುತ್ತಾ ಸಾಗಿದೆ. ಅಲ್ಲೂ ಹೈನುಗಾರರ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿದೆ.

ಕನಿಷ್ಠ ೩೨ ರುಪಾಯಿಯಿಂದ ಹಾಲು ಖರೀದಿ ಆರಂಭವಾಗುತ್ತದೆ. ಮಿಲ್ಮ ಹಲವು ಉತ್ಪನ್ನ ತಯಾರು ಮಾಡಿತು ಕೂಡ. ಈಚೆಗೆ ಹಲಸು ಪೇಡಾ ಕೂಡ ಮಾರುಕಟ್ಟೆ ಹಿಡಿಯಿತು. ಇಷ್ಟೇ ಅಲ್ಲ, ಈಚೆಗೆ ಹಾಲಿನ ದರ ಏರಿಕೆ ಮಾಡಿತು. ಅದರ ಜೊತೆಗೇ ಹಿಂಡಿ ಹಾಲೂ ಇತರ ದರವೂ ಏರಿಕೆಯಾದಾಗ ರೈತರಿಗೆ ಈ ಹೊರೆಯನ್ನು ಸರ್ಕಾರ ಬಿಡಲಿಲ್ಲ, ಸರ್ಕಾರವೇ ಈ ದರವನ್ನು ಭರಿಸಿತು. ಹೀಗಾಗಿ ಹೈನುಗಾರ ಗುಣಮಟ್ಟದ ಕಡೆಗೆ ಮಾತ್ರವೇ ಗಮನಹರಿಸಿದ.

ಇನ್ನೂ ಒಂದು ಹೆಜ್ಜೆ ಮುಂದೆ ಯೋಚಿಸಿದ ಕೇರಳ ಸರ್ಕಾರ, ಕನಿಷ್ಠ ೫ ವರ್ಷ ನಿರಂತರ ಹಾಲನ್ನು ಸಹಕಾರಿ ಸಂಘದ
ಮೂಲಕ ನೀಡಿದರೆ ೨೫ ಸಾವಿರ ಪಿಂಚಣಿ ನೀಡುವ ವ್ಯವಸ್ಥೆಯನ್ನೂ ಅಲ್ಲಿ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹೈನುಗಾರರಿಗೆ ಲೀಟರ್‌ಗೆ ೨೬ ರುಪಾಯಿ ಆಸುಪಾಸಿನಲ್ಲಿ ಪಾವತಿಸುತ್ತಿದೆ. ರಾಜ್ಯ ಸರ್ಕಾರವು ಲೀಟರ್ ಹಾಲಿಗೆ ೫ ರು. ಸಬ್ಸಿಡಿಯನ್ನು ನೀಡುತ್ತಿದೆ. ಇತರ ಸಣ್ಣಪುಟ್ಟ ನೆರವು ನೀಡುತ್ತದೆ. ಆಯಾ ಜಿಲ್ಲಾ ಹಾಲು ಒಕ್ಕೂಟಗಳ ಆಧಾರದ ಮೇಲೆ ೨೭ ರಿಂದ ೩೧ ರು.ಗಳ ನಡುವೆ ಹೈನುಗಾರರಿಗೆ ಸಿಗುತ್ತಿದೆ.

ಅಂದರೆ ಉತ್ಪಾದನಾ ವೆಚ್ಚಕ್ಕಿಂತ ಸುಮಾರು ೨೦ ರುಪಾಯಿ ನಷ್ಟದಲ್ಲಿಯೇ ರೈತ ಹಾಲನ್ನು ಡೈರಿಗೆ ಹಾಕುತ್ತಿದ್ದಾನೆ. ಭೌಗೋಳಿಕವಾಗಿ ಹಾಗೂ ವಾತಾವರಣದ ಕಾರಣದಿಂದ ಇಲ್ಲಿ ಹಾಲಿನಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಗುಣಮಟ್ಟ ಕಾಪಾಡಲೂ ಕೆಎಂಎಫ್ ಪರದಾಟ ನಡೆಸುತ್ತಿರುವುದು ಕೂಡ ಅಷ್ಟೇ ಸತ್ಯ. ಸುಮಾರು ೨೫ ವರ್ಷಗಳ ಹಿಂದೆ ದೇಸೀ ತಳಿಯ ದನದ ಬದಲಿಗೆ ಹೋರಾಟದ ಮೂಲಕ ಜರ್ಸಿ, ಎಚ್‌ಎಫ್ ಮೊದಲಾದ ವಿದೇಶಿ ತಳಿಗಳು ಕರುನಾಡಿಗೆ ಬಂದವು.

ಅಂದು ಈ ಹೋರಾಟವು ಬಹುದೊಡ್ಡ ತಿರುವು ನೀಡಿತ್ತು. ಹೈನುಗಾರಿಕೆಯ ಪದ್ಧತಿಯೇ ಬದಲಾಯಿತು ಎಂದೇ ಭಾವಿಸ ಲಾಯಿತು. ಸುಮಾರು ೮೦ ರ ದಶಕದಲ್ಲಿ ಎಲ್ಲೆಡೆಯೂ ಹೈನುಗಾರಿಕೆ ಜಬರ್ದಸ್ತ್ ಕೆಲಸ ಮಾಡಿತ್ತು. ಹೈನುಗಾರರೆಲ್ಲಾ ದೊಡ್ಡ ದನ ಸಾಕಿ ೨೦-೩೦ ಲೀಟರ್ ಹಾಲು ಡೈರಿಗೆ ಹಾಕಿ ಬಹುಮಾನ ಪಡೆಯುವ ದಿನ ಇತ್ತು. ಹೈನುಗಾರಿಕೆ ಒಂದು ಕೃಷಿ ಪೂರಕ ಕೆಲಸ ಎಂಬುದರ ಬದಲಾಗಿ ಅದೊಂದು ಉದ್ಯಮ ಅಂತ ಭಾವಿಸಲಾಗಿತ್ತು. ಆದರೆ ಕಾಲಕ್ರಮೇಣ ಇಲ್ಲಿನ ವಾತಾವರಣದ ಕಾರಣದಿಂದ ಹಾಲಿನ ಗುಣಮಟ್ಟವೂ ಕಡಿಮೆಯಾಯಿತು.

ಎಮ್ಮೆಯಂಥ ತಳಿಗಳು ದೂರವಾದವು. ಸಹಜವಾಗಿಯೇ ಕೆಎಂಎಫ್ಗೆ ಹಾಲಿನ ಜೊತೆಗೆ ಇತರ ಉತ್ಪನ್ನ ತಯಾರು
ಮಾಡುವುದು ಸವಾಲಾಗಿಯೇ ಇಂದಿಗೂ ಉಳಿದಿದೆ. ಈಗ ಹೈನುಗಾರರ ರಕ್ಷಣೆ ಹಾಗೂ ಮಾರುಕಟ್ಟೆ ಹಿಡಿತ, ವಿಸ್ತರಣೆ
ಇದೆಲ್ಲವೂ ಸವಾಲಾಗಿದೆ. ಬೆಳಗ್ಗೆ ಹೈನುಗಾರ ಹಾಲು ಕರೆದು ಡೈರಿಗೆ ಹಾಕಿ, ಶುದ್ಧತೆ ಕಾಪಾಡಿ, ಅದು ಸಾಗಾಟ ಆಗಿ,
ಪ್ಯಾಕಿಂಗ್ ಆಗಿ ಮತ್ತೆ ಮಾರುಕಟ್ಟೆಗೆ ತಲುಪುವಾಗ ಗುಣಮಟ್ಟ, ಶುದ್ಧತೆ, ದರ , ಕಮಿಶನ್ ಇದೆಲ್ಲವೂ ಲೆಕ್ಕ ಹಾಕಿಯೇ ಬರಬೇಕಾಗುತ್ತದೆ. ಈಗ ರಾಜ್ಯದಲ್ಲೂ ಹೈನುಗಾರಿಕೆ ಕಡಿಮೆಯಾಗುತ್ತಿದೆ.

ಹೈನುಗಾರಿಕೆ ಹಾಗೂ ಕೃಷಿ ಒಂದಕ್ಕೊಂದು ಪೂರಕ. ಇದರಲ್ಲಿ ಸಂಪೂರ್ಣ ತೊಡಗಿಸಿಕೊಂಡರಷ್ಟೇ ಸಂತೃಪ್ತಿ. ಲಾಭದ ಮಾತು ಎರಡನೆಯದು. ಸುಳ್ಯದ ವಳಲಂಬೆಯ ಮಹಾಬಲೇಶ್ವರ ಭಟ್ ಹೇಳುವ ಹಾಗೆ ‘ಹಾಲು ನನಗೆ ಎರಡನೇ ವಸ್ತು,
ಮೊದಲನೆಯದು ಸೆಗಣಿ, ಗೋಮೂತ್ರ, ಗೋಬರ್ ಗ್ಯಾಸ್.’ ಉಳಿದವೆಲ್ಲಾ ಲಾಭ ಎನ್ನುವುದು ಅವರ ಸಿದ್ಧಾಂತ. ಆದರೆ ಹಳ್ಳಿಗಳು ಇಂದು ಮಹಾಬಲೇಶ್ವರ ಭಟ್ ಅವರ ಮಾದರಿಯಲ್ಲಿ ಉಳಿದುಕೊಂಡಿಲ್ಲ. ಕೆಲವು ಸಮಯದವರೆಗೆ ಕರಾವಳಿ ಜಿಲ್ಲೆಗಳಲ್ಲಿ, ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಹೈನುಗಾರಿಕೆ ಎಂಬುದು ಕೃಷಿಗೆ ಪೂರಕವಾಗಿತ್ತು.

ಅಡಿಕೆ ಹೈನುಗಾರಿಕೆಯೊಂದಿಗೆ ವಿಲೀನವಾಗಿತ್ತು. ಅದು ಬೇರೆ ಬೇರೆಯಾದ ಬಳಿಕ ಕರಾವಳಿಯಲ್ಲಿ ಹೈನುಗಾರಿಕೆ ಸಮಸ್ಯೆ ಯಾಯಿತು. ಅದೇ ಮಾದರಿ ಇತರ ಜಿಲ್ಲೆಗಳಲ್ಲೂ  ಹೈನುಗಾರಿಕೆ ಆದಾಯದ ಸ್ವರೂಪ ಪಡೆಯಿತು. ಈಗ ಹೈನುಗಾರಿಕೆಗೆ ಸವಾಲು ಸಾಕಷ್ಟು. ದನದ ಗರ್ಭಧಾರಣೆ ಸಮಸ್ಯೆ, ಹುಟ್ಟಿದ ಗಂಡು ಕರು ಬಿಡಿ ಹೆಣ್ಣು ಯಾರಿಗೂ ಬೇಡವಾದ ಸ್ಥಿತಿ ಇದೆ. ಗಂಟು ರೋಗದಂತಹ ಮಾರಕ ಕಾಯಿಲೆಗಳುಹೈನುಗಾರರನ್ನು ಕಾಡುತ್ತಿವೆ.

ಹುಲ್ಲು, ಹಿಂಡಿ, ಸಾಗಾಟ ಸೇರಿದಂತೆ ಎಲ್ಲಾ ದರ ಏರಿಕೆಯು ಹಾಲು ಉತ್ಪಾದನೆಯ ಮೇಲೂ ಪರಿಣಾವಾಗಿದೆ. ಅದೇ ಮಾದರಿಯಲ್ಲಿ ಹೈನುಗಾರ ನಿಗೆ ಹಾಲಿಗೆ ಸರಿಯಾದ ದರವೂ ಸಿಗಲು ಸಾಧ್ಯ ಆಗಲಿಲ್ಲ. ಹೀಗಾಗಿ ಹೈನುಗಾರಿಕೆ ಉಳಿದು ಕೊಳ್ಳುತ್ತಿಲ್ಲ. ದನ ಮಾರಾಟಕ್ಕೆ ಸಾಲು ಸಾಲು ಉಳಿದುಕೊಂಡಿವೆ, ಯಾರಿಗೂ ಬೇಡದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಡೆಯೂ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದು ಗ್ರಾಮಾಭಿವೃದ್ಧಿಯಂಥ ಸ್ವಯಂಸೇವಾ ಸಂಘಟನೆಗಳು. ಪ್ರತೀ ಕೃಷಿಕನಲ್ಲಿ, ಸಣ್ಣ ಕುಟುಂಬದಲ್ಲಿ ಒಂದು ದನ ಇರಲಿ, ಅದರಿಂದ ಕೃಷಿಗೆ ಪೂರಕವೂ ಆಗುತ್ತದೆ, ಆದಾಯವೂ ಆಗುತ್ತದೆ ಎನ್ನುವುದು ಉದ್ದೇಶ ಆಗಿತ್ತು. ಅದು ಯಶಸ್ಸಾಗಿದೆ ಕೂಡ. ಒಂದು ಪುಟ್ಟ ಕುಟುಂಬ ನಿರ್ವಹಣೆ ಮಾಡಲು ಸಾಧ್ಯ ಆಗುತ್ತಿತ್ತು. ಯಾವಾಗ ದನ ಸಾಗಾಣಿಕೆಗೆ ನಿಯಮಗಳು ಬಂದವೋ, ಹೋರಿ ಕರುಗಳ ಮಾರಾಟ ಕಷ್ಟವಾಯಿತೋ ಅಂದಿನಿಂದ ಎಲ್ಲಾ ಮನೆಗಳಲ್ಲೂ ಹೈನುಗಾರಿಕೆ ಸಮಸ್ಯೆಯಾಯಿತು.

ಒಂದು ದನ ಕಟ್ಟಲು ಸಾಮರ್ಥ್ಯ ಇರುವಲ್ಲಿಯೂ ನಾಲ್ಕಾರು ದನಗಳು ಬಾಕಿಯಾದವು. ಸಂಕಷ್ಟ ಹೆಚ್ಚಾಯಿತು. ಹಾಲಿನ
ಗುಣಮಟ್ಟವನ್ನು ಕಾಪಾಡಲೂ ಹಳ್ಳಿಯ ಸೊಸೈಟಿಗೆ ಸುಲಭ ಆಗಲಿಲ್ಲ. ಈಗ ಹೇಳಿ ಹೈನುಗಾರಿಕೆ ಉಳಿಯುವುದು ಹೇಗೆ?
ನಂದಿನಿ ಗುಣಮಟ್ಟದ ಹಾಲು ಮಾರಾಟ ಮಾಡುವುದು ಹೇಗೆ? ಹತ್ತಾರು ಉತ್ಪನ್ನ ತಯಾರು ಮಾಡುವುದು ಹೇಗೆ?
ನಂದಿನಿ ಉಳಿಯಬೇಕಾದರೆ, ಅಮೂಲ್ ನಮ್ಮಲ್ಲಿ ಹರಡದಂತೆ ಆಗಬೇಕಾದರೆ ಮೊದಲು ಉಳಿಯಬೇಕಾದ್ದು ಇಲ್ಲಿನ ಹೈನುಗಾರ.

1975 ರಿಂದ ಹಳ್ಳಿ ಸುತ್ತಾಡಿ ಬೆವರು ಸುರಿಸಿ ಸಾವಿರಾರು ಹಾಲು ಶೇಖರಣೆ ಸಂಘ ಸ್ಥಾಪಿಸಿ, ಈ ಎಲ್ಲಾ ನಷ್ಟದ ನಡುವೆಯೂ 73 ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಕೊಡುವ ನಮ್ಮ ರೈತರೂ ಉಳಿಯಬೇಕು, ನಮ್ಮ ಸಹಕಾರಿ ಸಂಘ ಉಳಿಯಬೇಕು, ಕೆಎಂಎಫ್ ಉಳಿಯಬೇಕು, ನಂದಿನಿ ಉಳಿಯಬೇಕು.

(ಲೇಖಕರು : ಕೃಷಿಕ ಹಾಗೂ ಪತ್ರಕರ್ತರು)