Thursday, 12th December 2024

ಮೋದಿ – ಷಾ ಅಲೆ, ಸಂತೋಷ್ ಬಲೆ

ಮೂರ್ತಿಪೂಜೆ

ಮೊನ್ನೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬಂದಾಗ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಯೊಬ್ಬರಿಗೆ ವಿಚಿತ್ರ ಪ್ರಶ್ನೆ ಕೇಳಿದರಂತೆ. ಸಾರ್, ಈಗ ನಿಮ್ಮ ಪಕ್ಷ ಪ್ರಕಟಿಸಿರುವ ಲಿಸ್ಟಿನಲ್ಲಿ ನೂರಿಪ್ಪತ್ತು ಮಂದಿ ಗೆದ್ದರೆ ಶಾಸಕಾಂಗ ಪಕ್ಷದ ನಾಯಕರಾಗಿ ಯಾರು ಆಯ್ಕೆ ಯಾಗಬಹುದು ಎಂಬುದು ಈ ನಾಯಕರ ಪ್ರಶ್ನೆ. ಆ ನಾಯಕರ ಪ್ರಶ್ನೆ ಅರ್ಥವಾಗದೆ ತಬ್ಬಿಬ್ಬಾದ ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು, ನಿಮ್ಮ ಮಾತು ನನಗರ್ಥವಾಗುತ್ತಿಲ್ಲ ಎಂದರಂತೆ. ಈಗ ಮತ್ತಷ್ಟು ಸ್ಪಷ್ಟವಾದ ಧ್ವನಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಸಾರ್ ನಾನು ಸಿಂಪಲ್ಲಾಗಿ ಕೇಳುತ್ತಿದ್ದೇನೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಪಡೆದವರ ಪೈಕಿ ನೂರಿಪ್ಪತ್ತು ಮಂದಿ ಗೆದ್ದರೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಭೆ ಸೇರುತ್ತದೆ. ಈ ಸಭೆಯಲ್ಲಿ ಶಾಸಕರು ವೋಟಿಂಗ್ ಮಾಡಿದರೆ ಯಾರಿಗೆ ಹೆಚ್ಚು ಮತ ಬೀಳುತ್ತದೆ? ಎಂಬುದು ನನ್ನ ಪ್ರಶ್ನೆ ಎಂದರು. ಈಗ ಆ ಮಾತಿನ ಹಿಂದಿದ್ದ ಧ್ವನಿಯನ್ನು ಅರ್ಥ ಮಾಡಿಕೊಂಡ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಅರೆಕ್ಷಣ ಮೌನವಾದರಂತೆ. ತದನಂತರ ಮಾತನಾಡಿ, ಹಾಗೇನಾದರೂ
ಶಾಸಕಾಂಗ ನಾಯಕನ ಆಯ್ಕೆಗೆ ಚುನಾವಣೆ ನಡೆದರೆ ಅರ್ಧಕ್ಕಿಂತ ಹೆಚ್ಚು ಶಾಸಕರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಮತ ಹಾಕುತ್ತಾರೆ ಅಂತ ಹೇಳಿದರಂತೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರ ನಡುವೆ ಇಂತಹ ಮಾತುಕತೆ ನಡೆದ ನಂತರ ರಾಜಕೀಯ ವಲಯಗಳಲ್ಲಿ ಇದೇ ವಿಷಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಅಂದ ಹಾಗೆ ಇಂತಹ ಅನುಮಾನ ಮೊಳೆಯಲು ಬಿಜೆಪಿಯ ಸದ್ಯದ ಪರಿಸ್ಥಿತಿ ಕಾರಣ. ಹೇಗೆಂದರೆ ಅಲ್ಲೀಗ ಸಿಎಂ ಕ್ಯಾಂಡಿಡೇಟುಗಳು ಅಂತ ಯಾರಿದ್ದರೋ? ಅಂತವರನ್ನು ಭೂತೋಚ್ಚಾಟನೆಯ ಮಾದರಿಯಲ್ಲಿ ಸೈಡ್ ಲೈನಿಗೆ ಸರಿಸಲಾಗಿದೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಹಿರಿಯ ನಾಯಕರ ಪೈಕಿ ಹಲವರಿಗೆ ಟಿಕೆಟ್ ನಿರಾಕರಿಸದೆ ಹೋಗಿದ್ದರೆ, ಹಲವರನ್ನು ಹಿಸುಕದೆ ಹೋಗಿದ್ದರೆ ಸಿಎಂ ಹುದ್ದೆಯ ರೇಸಿನಲ್ಲಿ ಕೆ.ಎಸ್. ಈಶ್ವರಪ್ಪ, ಜಗದೀಶ್ ಶೆಟ್ಟರ್, ಅಶೋಕ್, ಸೋಮಣ್ಣ ಅವರಂತಹ ನಾಯಕರು ನಿಶ್ಚಿತವಾಗಿ ಇರುತ್ತಿದ್ದರು. ಆದರೆ ಈಗ ಕೆ.ಎಸ್. ಈಶ್ವರಪ್ಪ ಅವರ ಗಂಟಲು ಹಿಚುಕಿ, ನಂಗೆ ತಿಕೀಟು ಬ್ಯಾಡ ಅಂತ ಹೇಳಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಗಂಟಲು ಹಿಚುಕಲು ಹೋಗಿ ಅವರು ಆ…ಕ್ಷೀ ಎಂದು ಸೀನಿ ರಂಪಾಟವಾಗಿದೆ. ಇನ್ನು ಸಾಮ್ರಾಟ್ ಎಂಬ
ಪದದ ಗುಂಗಿನಲ್ಲಿ ಮೈ ಮರೆತ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಣಕ್ಕಿಳಿಸಲಾಗಿದೆ ಯಲ್ಲದೆ, ನೀವು ಒಕ್ಕಲಿಗ ನಾಯಕ ಅಂತ -ವ್ ಮಾಡಿ ಎಂಬ ಟಾಸ್ಕು ನೀಡಲಾಗಿದೆ. ಇದೇ ರೀತಿ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ವರುಣ ಕ್ಷೇತ್ರದಲ್ಲಿ ಸಿದ್ಧು ವಿರುದ್ದ ಗೆದ್ದು ಲಿಂಗಾಯತರ ನಾಯಕ ಅಂತ -ವ್ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಮಧ್ಯೆ ಸಿಎಂ ಹುದ್ದೆಯ ರೇಸಿನಲ್ಲಿ ಸಿ.ಟಿ. ರವಿ ಹೆಸರು ಆಗಾಗ ಕೇಳಿ ಬರುತ್ತಿತ್ತಾದರೂ ಅವರನ್ನು ಅದಾಗಲೇ ನ್ಯಾಷನಲ್ ಚಾಂಪಿಯನ್ ಗೆಟಪ್ಪಿನಲ್ಲಿ ಅಲೆದಾಡಿಸಲಾಗುತ್ತಿದೆ.

ಅರ್ಥಾತ್, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದರೆ ಪಕ್ಷದ ಶಾಸಕಾಂಗ ನಾಯಕನ ಸ್ಥಾನಕ್ಕೆ ಸಂತೋಷ್ ಬರಲಿ
ಅಂತ ಹೇಳುವ ಅರವತ್ತಕ್ಕೂ ಹೆಚ್ಚು ಮಂದಿ ಇರಲಿದ್ದಾರೆ. ಅಂದ ಹಾಗೆ ಸಿಎಂ ಹುದ್ದೆಯ ರೇಸಿನಲ್ಲಿದ್ದ ಬಹುತೇಕ ಕ್ಯಾಂಡಿಡೇಟುಗಳನ್ನು ಸೈಡ್ ಲೈನಿಗೆ ಸರಿಸುವುದರಲ್ಲಿ ಸಂತೋಷ್ ಪಾತ್ರ ಹೆಚ್ಚಿದೆಯಾದರೂ, ಇದರಲ್ಲಿ ಯಡಿಯೂರಪ್ಪ ಅವರ ಕೆಲ ಇಚ್ಛೆಗಳೂ ಈಡೇರಿವೆ. ಉದಾಹರಣೆಗೆ ಸೋಮಣ್ಣ ಎಪಿಸೋಡು ಇರಬಹುದು, ಒಂದಲ್ಲ ಒಂದು ದಿನ ಸಿಎಂ ಆಗಲು ನನಗೂ ಅರ್ಹತೆಯಿದೆ ಅಂತ ಹೇಳುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಪಿಸೋಡೇ ಇರಬಹುದು. ಈ ಕೇಸುಗಳಲ್ಲಿ ಯಡಿಯೂರಪ್ಪ ಅವರ ಇಚ್ಛೆ ಪೂರೈಕೆಯಾಗಿದ್ದರೂ ಆಳದಲ್ಲಿ ಅದರ ಲಾಭ ಪಡೆಯುವವರು ಸಂತೋಷ್.

ಅಂದ ಹಾಗೆ ಮುಂದಿನ ಬಿಜೆಪಿ ಶಾಸಕಾಂಗ ಪಕ್ಷವನ್ನು ಈಗಾಗಲೇ ಹಿಡಿತಕ್ಕೆ ತೆಗೆದುಕೊಂಡಿರುವ ಸಂತೋಷ್ ಅವರಿಗೆ ಸಿಎಂ ಹುದ್ದೆಯ ರೇಸಿನಲ್ಲಿ ಪೈಪೋಟಿ ಅಂತ ಕೊಡುವವರು ಯಾರಿದ್ದಾರೆ? ಅಬ್ಬಬ್ಬ ಎಂದರೆ ಆರೆಸ್ಸೆಸ್ ವರಿಷ್ಠರ ಬಯಕೆಯಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ರೇಸಿಗೆ ಬರಬಹುದು. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಬಹುದು. ಉಳಿದಂತೆ ಯಾರೂ ಸಿಎಂ ಹುದ್ದೆಗೆ ಟವೆಲ್ ಹಾಕುವ ಸ್ಥಿತಿಯಲ್ಲಿಲ್ಲ. ಹಾಗೊಂದು ವೇಳೆ ಟಿಕೆಟ್ ನಿರಾಕರಣೆಯಾದವರ ಪೈಕಿ ಯಾರಾದರೂ ಹಠ ಮಾಡಿ ಟಿಕೆಟ್ ಗಿಟ್ಟಿಸಿದರೂ ಸಿಎಂ ಹುದ್ದೆಯ ರೇಸಿಗೆ ಬಂದು ನಿಲ್ಲಲು ಅವರಲ್ಲಿ ಖದರು ಉಳಿದಿರುವುದಿಲ್ಲ.

ಅರ್ಥಾತ್,ಈ ಸಲದ ಬಿಜೆಪಿ ಪಟ್ಟಿಯ ಮೇಲೆ ಸಂತೋಷ್ ಅವರಿಗೆ ಬಲವಾದ ಹಿಡಿತವಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮತ್ತು ಸಿಎಂ ಬೊಮ್ಮಾಯಿ ಅವರ ಹಿಂದೆ ಕಾಣುತ್ತಿದ್ದಾರೆ.

ಬೊಮ್ಮಾಯಿಗೆ ಇಯರ್ ಗಿಫ್ಟ್

ಈ ಮಧ್ಯೆ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತ್ರಿಮೂರ್ತಿ ನಾಯಕರ ಇಚ್ಛೆಗೆ ತಕ್ಕಂತೆ ಆಡುತ್ತಾ, ತಮಗೇನು ಬೇಕೋ ಅದನ್ನು ಮಾಡಿಕೊಂಡಿದ್ದಾರೆ. ಶೆಟ್ಟರ್, ಸವದಿ ಸೇರಿದಂತೆ ಹಲವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಆಸಕ್ತಿ ಇರಲಿಲ್ಲ.

ಬಹುತೇಕ ಕೇಸುಗಳಲ್ಲಿ ತಮ್ಮ ಆಸಕ್ತಿಗೆ ಪೂರಕವಾಗಿ ಸಂತೋಷ್, ಯಡಿಯೂರಪ್ಪ ಅವರ ಇಚ್ಛೆ ತಾಳೆಯಾಗುತ್ತಿದ್ದುದು ಬೊಮ್ಮಾಯಿಗೆ ವರವಾಗಿದೆ.
ಇಂತಹ ಬೊಮ್ಮಾಯಿ ಅವರಿಗೆ ಪಕ್ಷ ಮರಳಿ ಅಧಿಕಾರ ಹಿಡಿದರೆ ಒನ್ ಇಯರ್ ಗಿಫ್ಟ್ ಕೊಡುವ ಭರವಸೆ ನೀಡಲಾಗಿದೆಯಂತೆ. ಅಧಿಕಾರದಲ್ಲಿದ್ದ ಪಕ್ಷ ಕರ್ನಾಟಕದಲ್ಲಿ ಮರಳಿ ಅಧಿಕಾರ ಹಿಡಿಯದೆ ಮೂವತ್ತೆಂಟು ವರ್ಷಗಳಾಗಿವೆ. ಹೀಗಾಗಿ ಈ ಸಲ ಬಿಜೆಪಿ ಮರಳಿ ಅಽಕಾರ ಹಿಡಿದರೆ ಹಾಲಿ ಮುಖ್ಯಮಂತ್ರಿಯಾದ ನಿಮಗೆ ಗಿಫ್ಟ್ ಸಿಗುವುದು ನ್ಯಾಯ.

ಹೀಗಾಗಿ ಮೊದಲ ವರ್ಷ ನೀವೇ ಸಿಎಂ ಆಗಿರುತ್ತೀರಿ ಎಂಬ ಭರವಸೆ ಸಿಕ್ಕಿದೆಯಂತೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಭರವಸೆ ಈಡೇರುತ್ತದೆ ಅಂತೇನೂ ಅಲ್ಲ. ಆದರೆ ಸಿಕ್ಕ ಭರವಸೆಯ ನಂಬದವನು ಜಾಣನೂ ಅಲ್ಲ, ವಿವೇಕಿಯೂ ಅಲ್ಲ ಎಂಬಂತೆ ಬೊಮ್ಮಾಯಿ ಆಟದಲ್ಲಿ ಉಳಿದುಕೊಂಡಿದ್ದಾರೆ.
ಹೀಗೆ ಈಗಿನ ಆಟದಲ್ಲಿ ಸಂತೋಷ್, ಪ್ರಹ್ಲಾದ ಜೋಷಿ ಮತ್ತು ಬೊಮ್ಮಾಯಿ ಮುಂದಿದ್ದರೂ ಈ ವಾರದ ಆಟ ಬಿಜೆಪಿಯ ಚಿತ್ರವನ್ನು ಬದಲಿಸುತ್ತದಾ ಅಂತ ನೋಡಬೇಕು.

ಮೋದಿ-ಶಾ ಗುಮ್ಮ
ಅಂದ ಹಾಗೆ ಈ ಬಾರಿಯ ಟಿಕೆಟ್ ಹಂಚಿಕೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಹೆಸರಿನ ಗುಮ್ಮ ತೋರಿಸಿ ಸಂತೋಷ್ ಗ್ಯಾಂಗು ತನಗೆ ಬೇಕಾದಂತೆ ಆಟವಾಡಿದೆ ಎಂಬ ಮಾತು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ. ಮೊದಲೇ ಮೋದಿ, ಷಾ ಗೊತ್ತಲ್ಲ? ಅವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡರೆ ಮುಲಾಜಿಲ್ಲದೆ ಬಾಲ ಕಟ್ ಮಾಡುತ್ತಾರೆ, ನಾಳೆ ಐಟಿ, ಇಡಿ ರೈಡು ಅಂತ ಶುರುವಿಟ್ಟುಕೊಂಡರೆ ಅಷ್ಟೇ ಮತ್ತೆ ಎಂಬ ಶೈಲಿಯಲ್ಲಿ
ಅದು ಬಿತ್ತಿದ ಬೀಜ ಮೊನ್ನೆ ಮೊನ್ನೆಯವರೆಗೆ ವರ್ಕ್ ಔಟ್ ಆಗಿದೆ.

ಕುತೂಹಲದ ಸಂಗತಿ ಎಂದರೆ ಈ ವರ್ಕ್ ಔಟಿಗೆ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಸೇರಿದಂತೆ ದಿಲ್ಲಿಯ ಕೆಲ ನಾಯಕರು ನೆರವು ನೀಡುತ್ತಿದ್ದಾರೆ.
ಆದರೆ ಯಾವಾಗ ಧರ್ಮೇಂದ್ರ ಪ್ರಧಾನ್ ಅವರು, ಜಗದೀಶ್ ಶೆಟ್ಟರ್ ಅವರಿಗೆ ಫೋನು ಮಾಡಿ: ನೀವು ರಾಜಕೀಯ ನಿವೃತ್ತಿ ಘೋಷಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದರೋ? ಆಗ ಶೆಟ್ಟರ್ ತಿರುಗಿ ಬಿದ್ದಿದ್ದಾರೆಯೇ… ಅವೆಲ್ಲ ಆಗಲ್ಲ, ಯಾವ ಕಾರಣಕ್ಕಾಗಿ ನನಗೆ ಟಿಕೆಟ್ ನಿರಾಕರಣೆಯಾಗುತ್ತಿದೆ ಅಂತ ಹೇಳಿ,ಅಮೇಲೆ ಮುಂದಿನ ಮಾತು. ಇಲ್ಲದಿದ್ದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಗ್ಯಾರಂಟಿ ಎಂದಿದ್ದಾರೆ. ಶೆಟ್ಟರ್ ಅವರ ಈ ಮಾತಿಗೆ ಪ್ರತಿಯುತ್ತರ ನೀಡಲು ಧರ್ಮೇದ್ರ ಪ್ರಧಾನ್ ಅವರಿಗೆ ಆಗಿಲ್ಲ. ಯಾಕೆಂದರೆ ವಯಸ್ಸಿನ ಕಾರಣ ನೀಡುವುದಾದರೆ ಶೆಟ್ಟರ್ ಅವರಿಗಿಂತ ಹಿರಿಯರಾದ ಜಿ.ಹೆಚ್. ತಿಪ್ಪಾರೆಡ್ಡಿ, ಗೋವಿಂದ ಕಾರ್ಜೋಳ. ಅವರಿಗೆ ಟಿಕೆಟ್ ನೀಡಲಾಗಿದೆ.

ಆರು ಸಲ ಗೆದ್ದವರಿಗೆ ಟಿಕೆಟ್ ನೀಡುವುದಿಲ್ಲ ಎಂಬುದೇ ಆದರೆ ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ ಅಂಥವರಿಗೆ ಟಿಕೆಟ್ ನೀಡಲಾಗಿದೆ. ಆರೋಪಗಳ ಲೆಕ್ಕ ಬಂದರೆ ಶೆಟ್ಟರ್ ಮಿಸ್ಟರ್ ಕ್ಲೀನ್. ಹೋಗಲಿ, ಕ್ಷೇತ್ರದಲ್ಲಿ ಅವರಿಗೆ ಸೋಲಾಗುತ್ತದೆ ಅಂತ ರಿಪೋರ್ಟು ಬಂದಿದೆಯಾ ಎಂದರೆ ಅದೂ ಇಲ್ಲ.
ಹೀಗಾಗಿ ವರಿಷ್ಠರು ಹಾಕಿಕೊಟ್ಟ ಮಾನದಂಡದ ಹೆಸರನ್ನು ಮುಂದಿಟ್ಟು ಸಂತೋಷ್ ಆಟ ಹಾಕಿದ್ದಾರೆ ಎಂಬ ಅನುಮಾನ ಬಿಜೆಪಿ ಪಾಳಯದಲ್ಲಿ ಜ್ವಾಲಾಮುಖಿಯಂತೆ ಹರಡಿದೆ. ಅಷ್ಟೇ ಅಲ್ಲ,ಮೋದಿ-ಷಾ ಗುಮ್ಮ ತೋರಿಸಿ ಸಂತೋಷ್ ರೂಪಿಸಿದ ಮಾಸ್ಟರ್ ಪ್ಲಾನಿನ ಬಗ್ಗೆ ಗುಸು ಗುಸು ಶುರುವಾಗಿದೆ.

ಕ್ಷಿಪ್ರಕ್ರಾಂತಿಗೆ ಬೀಜ ಬಿತ್ತಿದರು
ಈ ಮಧ್ಯೆ ಬಿಜೆಪಿ ಪಾಳಯದ ವಿದ್ಯಮಾನಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕರು ಕ್ಷಿಪ್ರಕ್ರಾಂತಿಗೆ ಬೀಜ ಬಿತ್ತಿದ್ದಾರೆ. ಯಾವಾಗ ಜಗದೀಶ್ ಶೆಟ್ಟರ್ ಎಪಿಸೋಡು ನಡೆಯಿತೋ? ಇದಾದ ತಕ್ಷಣ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶೆಟ್ಟರ್ ಅವರನ್ನು ಸಂಪರ್ಕಿಸಿ ದ್ದಾರೆ. ಶೆಟ್ಟರ್ ಅವರೇ, ಇಂತಹ ಮುಜುಗರವನ್ನು ತಡೆದುಕೊಂಡು ನೀವೇಕೆ ಅಲ್ಲಿರುತ್ತೀರಿ. ಕಾಂಗ್ರೆಸ್‌ಗೆ ಬಂದು ಬಿಡಿ. ನಿಮ್ಮನ್ನು ಸ್ವಾಗತಿಸಲು ರಾಹುಲ್ ಗಾಂಧಿ
ಕಾತರ ರಾಗಿದ್ದಾರೆ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಮಾತನಾಡಿ, ನೀವು ಬಂದರೆ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬಹುದು ಎಂದಿದ್ದಾರೆ.

ಅಷ್ಟೇ ಅಲ್ಲ, ನೀವು ಸಹಕರಿಸಿದರೆ ಬೊಮ್ಮಾಯಿ ಅವರು ಚುನಾವಣೆಯಲ್ಲಿ ಸೋಲುವಂತೆ ಮಾಡಬಹುದು ಎಂದಿದ್ದಾರೆ. ಈ ಮಧ್ಯೆ ಬಿಜೆಪಿಯ
ಬಹುತೇಕ ಟಿಕೆಟ್ ವಂಚಿತರು, ಸಾರ್, ನೀವು ಲೀಡ್ ಮಾಡಿ. ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಕಾಂಗ್ರೆಸ್ ಕಡೆ ಹೋಗೋಣ ಅಂತ ಹೇಳಿದ್ದರಂತೆ.
ಆದರೆ ಶೆಟ್ಟರ್ ತಕ್ಷಣದ ತೀರ್ಮಾನಕ್ಕೆ ಮುಂದಾಗದ ಪರಿಣಾಮವಾಗಿ ಟಿಕೆಟ್ ವಂಚಿತರ ಪೈಕಿ ಬಹುತೇಕರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಕ್ಯಾಂಪುಗಳಲ್ಲಿ
ಕಾಣಿಸಿಕೊಂಡಿದ್ದಾರೆ. ಮುಂದೇನು ಕತೆಯೋ ಗೊತ್ತಿಲ್ಲ. ಆದರೆ ಕಳೆದ ವಾರ ಮೇಲೇರಿದಂತೆ ಕಾಣುತ್ತಿದ್ದ ಬಿಜೆಪಿ ಗ್ರಾಫ್ ರಪ್ಪಂತ ಕೆಳಗಿಳಿದಿರುವುದು ಮಾತ್ರ ನಿಜ.